ಸಂಪಾದಕೀಯ

ರಾಜ್‌ ಬಿಡುಗಡೆಗೆ ಕೃಷ್ಣ ಸಂಧಾನ; ಬರದಿಂದ ಬರದ ಚಿತ್ರೋತ್ಸವ

ಹೊಸ ಸಹಸ್ರಮಾನದ ಹೊಸ್ತಿಲು. ವರ್ಷ ೨೦೦೧. ಭಾರತದ ಅಂತಾರಾಷ್ಟ್ರೀಯ ಚಿತ್ರೋತ್ಸವ ಗೋವಾದಲ್ಲಿ ಶಾಶ್ವತ ನೆಲೆ ಕಾಣುವ ಮುನ್ನಾ ವರ್ಷಗಳು. ಆಗ ಚಿತ್ರೊತ್ಸವ ಒಂದು ವರ್ಷ ದೆಹಲಿಯಲ್ಲಿ ನಡೆದರೆ, ಇನ್ನೊಂದು ವರ್ಷ ದೇಶದ ಇತರ ನಗರದಲ್ಲಿ. ಕೊಲ್ಕತ್ತಾ, ಮುಂಬಯಿ, ತಿರುವನಂತಪುರ, ಬೆಂಗಳೂರು ಹೀಗೆ.

೧೯೮೦ ಮತ್ತು ೧೯೯೨ರಲ್ಲಿ ಬೆಂಗಳೂರಲ್ಲಿ ಈ ಚಿತ್ರೋತ್ಸವ ನಡೆದಿತ್ತು. ೧೯೮೦ರಲ್ಲಿ ಚಿತ್ರೋತ್ಸವಕ್ಕೆ ಸಿದ್ಧತೆ ನಡೆಯುವ ವೇಳೆ ದೇವರಾಜ ಅರಸು ಅವರು ಮುಖ್ಯಮಂತ್ರಿಗಳಾಗಿದ್ದರು. ಆದರೆ ಚಿತ್ರೋತ್ಸವ ಉದ್ಘಾಟನೆಯ ವೇಳೆ ರಾಜಕೀಯ ಬೆಳವಣಿಗೆಯಲ್ಲಿ ಅವರು ರಾಜೀನಾಮೆ ನೀಡಿ ಹೊರಬಂದ ಕಾರಣ ಉದ್ಘಾಟನೆಯ ವೇಳೆ ರಾಷ್ಟ್ರಪತಿ ಆಡಳಿತವಿತ್ತು. ರಾಜ್ಯಪಾಲರ ಸಮ್ಮುಖದಲ್ಲಿ ದೇವಿಕಾರಾಣಿ ಚಿತ್ರೋತ್ಸವವನ್ನು ಉದ್ಘಾಟಿಸಿದ್ದರು.

೧೯೯೨ರ ಚಿತ್ರೋತ್ಸವದ ಪೂರ್ವದಲ್ಲಿ ಕರ್ನಾಟಕದಲ್ಲಿ ನಡೆದ ಬೆಳವಣಿಗೆಗಳು ಅದು ನಡೆಯುತ್ತದೋ ಇಲ್ಲವೋ ಎನ್ನುವ ಅನುಮಾನ ಮೂಡಿಸಿತ್ತು. ೧೯೯೧ರ ಡಿಸೆಂಬರ್ ತಿಂಗಳಲ್ಲಿ ಬೆಂಗಳೂರು ಬಂದ್ ನಡೆ ಯಿತು. ಕಾವೇರಿ ನೀರಿನ ಹಂಚಿಕೆಯ ವಿಷಯದಲ್ಲಿ ನೀಡಿದ ಮಧ್ಯಂತರ ತೀರ್ಪಿನ ವಿರುದ್ಧ ನಡೆದ ಪ್ರತಿಭಟನೆಯಾಗಿತ್ತು ಅದು. ಆದರೆ ಅದು ಕನ್ನಡಿಗರ ಮತ್ತು ತಮಿಳರ ನಡುವೆ ನಡೆದ ಘರ್ಷಣೆಯಾಗಿ ಬದಲಾದಂತಾಗಿತ್ತು. ಆಗ ಮುಖ್ಯಮಂತ್ರಿಗಳಾಗಿದ್ದ ಬಂಗಾರಪ್ಪನವರು ಎಲ್ಲ ವಿರೋಧದ ನಡುವೆ ಚಿತ್ರೋತ್ಸವ ನಡೆಯುವಂತೆ ಮಾಡುವಲ್ಲಿ ಯಶಸ್ವಿಯಾದರು. ಡಾ. ರಾಜಕುಮಾರ್ ಅವರು ಈ ಉತ್ಸವ ಉದ್ಘಾಟಿಸಬೇಕಾಗಿತ್ತು. ಆದರೆ ಕಾರಣಾಂತರಗಳಿಂದ ಅವರು ಉದ್ಘಾಟಿಸಲಿಲ್ಲ. ಕಲಾವಿದರ ಸಂಘವೂ ಚಿತ್ರೋತ್ಸವದಿಂದ ದೂರ ಉಳಿಯಿತು.

ಮುಂದೆ ೨೦೦೧ರಲ್ಲಿ ಬೆಂಗಳೂರಿನಲ್ಲಿ ಚಿತ್ರೋತ್ಸವ ನಡೆಯಬೇಕಾಗಿತ್ತು. ಅದಕ್ಕೆ ಪೂರ್ವ ಸಿದ್ಧತೆ ನಡೆದಿತ್ತು. ಎಸ್. ಎಂ. ಕೃಷ್ಣ ಅವರು ಆಗ ರಾಜ್ಯದ ಮುಖ್ಯಮಂತ್ರಿಗಳು. ಕೇಂದ್ರದಲ್ಲಿ ವಾರ್ತಾ ಮತ್ತು ಪ್ರಸಾರ ಖಾತೆಯ ಸಚಿವರಾಗಿದ್ದವರು ಸುಷ್ಮಾ ಸ್ವರಾಜ್. ಚಿತ್ರೋತ್ಸವದ ಕುರಿತಂತೆ ಒಂದು ಪತ್ರಿಕಾಗೋಷ್ಠಿಯೂ ನಡೆದಿತ್ತು. ಆದರೆ ಅದಾಗಲೇ ರಾಜ್ಯದಲ್ಲಿ ಬರದ ಕಾರಣ ಈ ಉತ್ಸವ ನಡೆಸಲು ಸಾಧ್ಯ ಆಗಲಿಲ್ಲ. ಭಾರತದ ಅಂತಾರಾಷ್ಟ್ರೀಯ ಚಿತ್ರೋತ್ಸವದ ಇತಿಹಾಸದಲ್ಲೇ ಮೊದಲ ಬಾರಿಗೆ ರದ್ದಾದ ಉತ್ಸವ ಇದು. ೩೨ನೇ ಚಿತ್ರೋತ್ಸವ ರದ್ಧಾಯಿತು. ಕೃಷ್ಣ ಅವರ ಆಡಳಿತಾವಧಿಯಲ್ಲಿ ಚಿತ್ರೋತ್ಸವ ರದ್ಧಾಯಿತು. ಹಿಂದಿನ ವರ್ಷ ಅವರಿಗೆ ರಾಜಕೀಯ ಜೀವನದ ಅತ್ಯಂತ ಕಠಿಣ ಪರಿಸ್ಥಿತಿ ಎದು ರಾಗಿತ್ತು. ಅದು ದಂತಚೋರ, ನರಹಂತಕ ವೀರಪ್ಪನ್ ಅಪಹರಿಸಿದ್ದ ವರನಟ ರಾಜಕುಮಾರ್ ಅವರನ್ನು ಸುರಕ್ಷಿತವಾಗಿ ಮರಳಿ ಕರೆತರುವ ಸವಾಲು.

ಮೊನ್ನೆ ಅವರು ನಿಧನರಾದ ವೇಳೆ ಅವರ ಕುರಿತಂತೆ ಮಾತನಾಡಿದ ರಾಜ್ ಪುತ್ರ ಶಿವರಾಜಕುಮಾರ್ ಮತ್ತು ಪಾರ್ವತಮ್ಮ ಅವರ ಸೋದರ ಚಿನ್ನೇಗೌಡರು ಇದನ್ನು ಸ್ಮರಿಸಿಕೊಂಡಿದ್ದಾರೆ. ‘ನಮ್ಮ ತಂದೆಗೆ ಎಸ್. ಎಂ. ಕೃಷ್ಣ ಅವರ ಮೇಲೆ ವಿಶೇಷವಾದ ಗೌರವವಿತ್ತು. ಒಬ್ಬ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಅವರ ತರಹ ಇರಬೇಕು ಎಂದು ಹೇಳುತ್ತಿದ್ದರು. ಅವರು ಶಿಸ್ತು ಮತ್ತು ಕೆಲಸ ಸದಾ ನಮಗೆ ಮಾದರಿ. ನಮ್ಮ ತಂದೆಯವರು ಕಿಡ್ನಾಪ್ ಆದ ಸಂದರ್ಭದಲ್ಲಿ ನಮ್ಮ ಜೊತೆಗೆ ಅವರು ನಿಂತಿದ್ದನ್ನು ಯಾವತ್ತೂ ಮರೆ ಯುವುದಕ್ಕೆ ಸಾಧ್ಯವಿಲ್ಲ. ಅವರಷ್ಟೇ ಅಲ್ಲ, ಅವರ ಕುಟುಂಬದ ಜೊತೆಗೆ ನಮ್ಮ ಕುಟುಂಬಕ್ಕೆ ಒಳ್ಳೆಯ ಒಡನಾಟವಿತ್ತು ಎಂದು ಶಿವರಾಜಕುಮಾರ್ ಸ್ಮರಿಸಿಕೊಂಡಿದ್ದಾರೆ. ಎಸ್. ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಎದುರಿಸಿದ ಬಹುದೊಡ್ಡ ಸವಾಲು ನರಹಂತಕ ವೀರಪ್ಪನ್ ಸೆರೆಯಿಂದ ರಾಜಕುಮಾರ್ ಅವರನ್ನು ಬಿಡಿಸುವುದಾಗಿತ್ತು. ೨೦೦೦ ಜುಲೈ ೩೦, ಭೀಮನ ಅಮಾವಾಸ್ಯೆ ದಿನ ರಾತ್ರಿ ಗಾಜನೂರಿನಲ್ಲಿ ತಂಗಿದ್ದ ರಾಜಕುಮಾರ್ ಅವರನ್ನು ವೀರಪ್ಪನ್ ಅಪಹರಿಸಿದ್ದ. ಮುಖ್ಯಮಂತ್ರಿಗಳಾಗಿದ್ದ ಎಸ್. ಎಂ. ಕೃಷ್ಣ ಅವರಿಗೆ ನೀಡಲು ತನ್ನ ಬೇಡಿಕೆಗಳ ಕ್ಯಾಸೆಟ್ ಒಂದನ್ನು ಪಾರ್ವತಮ್ಮ ರಾಜಕುಮಾರ್ ಅವರ ಕೈಯಲ್ಲಿ ಕೊಟ್ಟಿದ್ದ. ರಾತ್ರೋರಾತ್ರಿ ಅಲ್ಲಿಂದ ಹೊರಟು ಬಂದ ಪಾರ್ವತಮ್ಮ ರಾಜಕುಮಾರ್ ಅವರು ನೇರವಾಗಿ ಕೃಷ್ಣ ಅವರ ಮನೆಗೆ ತೆರಳುತ್ತಾರೆ. ಅಲ್ಲಿ ನಡೆದ ಘಟನೆಯನ್ನು ವಿವರಿಸಿ, ವೀರಪ್ಪನ್ ಕೊಟ್ಟ ಕ್ಯಾಸೆಟನ್ನು ಅವರ ಕೈಗಿಡುತ್ತಾರೆ.

‘ಅವತ್ತು ಎಸ್. ಎಂ. ಕೃಷ್ಣ ಅವರಲ್ಲದೆ ಬೇರೆ ಯಾರೇ ಮುಖ್ಯಮಂತ್ರಿ ಆಗಿದ್ದರೂ ಏನಾಗುತ್ತಿತ್ತೋ ಏನೋ. ಅವರ ತಾಳ್ಮೆ, ಸಹನೆ, ಎಲ್ಲಕ್ಕಿಂತ ಹೆಚ್ಚಾಗಿ ವಿವೇಕ ರಾಜಕುಮಾರ್ ಅವರು ಮರಳುವಂತೆ ಮಾಡಿತ್ತು ಎಂದರೆ ತಪ್ಪಿಲ್ಲ. ಅಕ್ಕನನ್ನು ಆ ವೇಳೆಗೆ ಸಮಾಧಾನಪಡಿಸಿದ್ದೇ ಅಲ್ಲದೆ, ನಾನಿದ್ದೇನೆ; ಎದೆಗುಂದಬೇಡಿ. ರಾಜಕುಮಾರ್ ಅವರನ್ನು ಮರಳಿ ಕರೆತರುವ ಜವಾಬ್ದಾರಿ ನಮ್ಮದು, ಎಂದದ್ದೇ ಅಲ್ಲದೆ, ಎಲ್ಲ ರೀತಿಯಲ್ಲೂ ಸಹಕಾರ ನೀಡಿ, ನೆರೆಯ ತಮಿಳುನಾಡಿನ ಮುಖ್ಯಮಂತ್ರಿಗಳ ಜೊತೆ ಇತರ ಜೊತೆ ಮಾತನಾಡಿ, ರಾಜಕುಮಾರ್ ಅವರನ್ನು ವೀರಪ್ಪನ್ ಕಪಿಮುಷ್ಟಿಯಿಂದ ಬಿಡಿಸಿ ತರುವಲ್ಲಿ ಯಶಸ್ವಿಯಾದರು ಎನ್ನುವುದು ಚಿನ್ನೇಗೌಡರ ನೆನಪು.

ವೀರಪ್ಪನ್ ವಶದಲ್ಲಿ ೧೦೭ ದಿನಗಳ ಕಾಲ ಇದ್ದ ರಾಜಕುಮಾರ್ ಅವರನ್ನು ಅಂತಿಮವಾಗಿ ೧೦೮ನೇ ದಿನ ಪಿ. ನೆಡುಮಾರನ್ ತಂಡ ಬಿಡಿಸಿಕೊಂಡು ಬರುವವರೆಗೆ ಸರ್ಕಾರದ ಚುಕ್ಕಾಣಿ ಹಿಡಿದಿದ್ದ ಕೃಷ್ಣ ಅವರಿಗೆ ಪ್ರತಿಕ್ಷಣವೂ ಸವಾಲಿನದಾಗಿತ್ತು. ಈ ಕುರಿತಂತೆ ಅವರೇ ತಮ್ಮ ಆತ್ಮಕತೆಯಲ್ಲಿ, ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ.

ರಾಜಕುಮಾರ್ ಅವರ ಅಪಹರಣ ಆದದ್ದು ಗಾಜನೂರಿನಿಂದ. ಸಾಮಾನ್ಯವಾಗಿ ಅಲ್ಲಿಗೆ ಹೋಗುವಾಗ ಸರ್ಕಾರಕ್ಕೆ ತಿಳಿಸಿ ಹೋಗಬೇಕು ಎಂದು ರಾಜಕುಮಾರ್ ಅವರ ಕುಟುಂಬಕ್ಕೆ ತಿಳಿಸಲಾಗಿತ್ತು; ಅಂತೆಯೇ ಪ್ರತಿಬಾರಿ ಅಲ್ಲಿಗೆ ಹೋಗುವಾಗ ಸರ್ಕಾರಕ್ಕೆ ತಿಳಿಸಿಹೋಗುವುದು ಕೂಡ ರೂಢಿಯಾಗಿತ್ತು. ಸಾಮಾನ್ಯವಾಗಿ ಇಂತಹ ಮಾಹಿತಿ ಸಿಕ್ಕಾಗ, ಅವರಿಗೆ ಪೊಲೀಸ್ ಬಂದೋಬಸ್ತ್ ನೀಡುತ್ತಿತ್ತು ಸರ್ಕಾರ. ಆದರೆ ಆ ಸಲ ಹೋಗುವಾಗ ಅದೇನೋ ತಿಳಿಸಿರಲಿಲ್ಲ. ರಾಜಕುಮಾರ್ ಅವರ ಅಪಹರಣಕ್ಕೆ ಹೊಂಚು ಹಾಕುತ್ತಿದ್ದ ವೀರಪ್ಪನ್‌ಗೂ ಇದು ಅನುಕೂಲವೇ ಆಯಿತು.

ಈ ವಿಷಯವನ್ನು ಕೃಷ್ಣ ಅವರು ತಾವೇ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಮಾತ್ರವಲ್ಲ, ತಮ್ಮ ಆತ್ಮಕತೆ ಸ್ಮೃತಿ ವಾಹಿನಿಯಲ್ಲಿ ಪ್ರಸ್ತಾಪಿಸಿದ್ದಾರೆ. ರಾಜ್ ಕುಮಾರ್ ಅಪಹರಣವಾಗಿ ಅವರನ್ನು ಸುರಕ್ಷಿತವಾಗಿ ಕರೆತರುವವರೆಗೆ ತಮ್ಮ ಅನುಭವ, ನೆನಪು, ಸವಾಲುಗಳ ಕುರಿತು ವಿವರವಾಗಿಯೇ ಹೇಳಿದ್ದಾರೆ. ತಮಿಳುನಾಡಿನ ಮುಖ್ಯಮಂತ್ರಿ ಕರುಣಾನಿಽಯವರನ್ನು ಭೇಟಿಯಾಗಲು ಐದು ಬಾರಿ ಚೆನ್ನೈಗೆ ಹೋದದ್ದು, ಒಂದು ಬಾರಿ ಅವರನ್ನು ಇಲ್ಲಿಗೆ ಕರೆಸಿದ್ದು, ನಕ್ಕೀರನ್ ಗೋಪಾಲ್ ವಿಫಲ ಸಂಧಾನ, ಕೊನೆಗೆ ನೆಡುಮಾರನ್ ಮೂಲಕ ಸಂಧಾನ ಯಶಸ್ವಿಯಾಗಿ, ೧೦೮ ದಿನಗಳ ನಂತರ ಸುರಕ್ಷಿತವಾಗಿ ರಾಜಕುಮಾರ್ ಅವರನ್ನು ಕರೆತರುವಲ್ಲಿ ಯಶಸ್ವಿಯಾದ ವಿವರಗಳನ್ನು ಅಲ್ಲಿ ಹೇಳಿದ್ದಾರೆ.

ಈ ನಡುವೆ ಮಾಧ್ಯಮಗಳಲ್ಲಿ ಸರ್ಕಾರದ ವಿರುದ್ಧ ಬರುತ್ತಿದ್ದ ಟೀಕೆಗಳು, ಪತ್ರಿಕೆಯೊಂದರಲ್ಲಿ ಬಂದ ‘ವೀರಪ್ಪನ್ ಕಾಡಲ್ಲಿಲ್ಲ; ವಿಧಾನಸೌಧದಲ್ಲಿದ್ದಾರೆ’ ಎನ್ನುವಂತಹ ಸಾಲುಗಳು, ಚಿತ್ರೋದ್ಯಮ ಬಂದ್, ಬೆಂಗಳೂರು ಬಂದ್‌ಗೆ ನೀಡಿದ ಕರೆ ಈ ಎಲ್ಲವೂ ಕೃಷ್ಣ ಅವರಿಗೆ ಪ್ರತಿಕ್ಷಣ ಸವಾಲಾಗಿದ್ದವು. ಎಲ್ಲಕ್ಕೂ ಹೆಚ್ಚಾಗಿ, ೧೯೯೧ರಲ್ಲಿ ಬೆಂಗಳೂರು ಬಂದ್ ಆದಾಗ ಹೆಚ್ಚು ತೊಂದರೆ ತಮಿಳರಿಗಾಗಿತ್ತು. ಈ ಬಾರಿ ಬೆಂಗಳೂರು ಬಂದ್ ಆದಾಗ ಮತ್ತೆ ಅದು ಪುನರಾವರ್ತನೆ ಆಗಬಹುದು ಎನ್ನುವ ಆತಂಕ ಅವರಿಗೆ ಕಾಡಿತ್ತು. ಯಾವುದೇ ಕಾರಣಕ್ಕೂ ಹಾಗಾಗಬಾರದು. ಆದರೆ ಮತ್ತೆ ಪರಿಸ್ಥಿತಿ ವಿಕೋಪಕ್ಕೆ ಹೋಗ ಬಹುದು, ಕಾಡಿನಲ್ಲಿ ಸೆರೆಯಲ್ಲಿರುವ ರಾಜಕುಮಾರ್ ಅವರಿಗೆ ಇದರಿಂದ ತೊಂದರೆ ಆಗಬಾರದು ಎನ್ನುವುದಾಗಿತ್ತು ಅವರ ಹಂಬಲ.

ಬೆಂಗಳೂರು ಬಂದ್ ನಡೆಯಿತು. ಆದರೆ ಅದು ಶಾಂತರೀತಿಯಲ್ಲೇ ನಡೆಯಿತು. ಚಿತ್ರೋದ್ಯಮವೂ ರಾಜಕುಮಾರ್ ಹಿಂತಿರುಗುವವರೆಗೆ ಚಿತ್ರೀಕರಣ ನಿಲ್ಲಿಸುವ ನಿರ್ಧಾರ ಮಾಡಿತ್ತು. ಈ ನಡುವೆ ತನ್ನ ಬೇಡಿಕೆಗಳನ್ನು ಈಡೇರಿಸುವಂತೆ ವೀರಪ್ಪನ್ ನೇರವಾಗಿ ಕೃಷ್ಣ ಅವರ ಜೊತೆ ಮಾತನಾಡಿದ ಪ್ರಸಂಗ, ‘ಸಂಧಾನ’ ಕುರಿತಂತೆ ಬರುತ್ತಿದ್ದ ಟೀಕೆಗಳು ಎಲ್ಲವೂ ಈಗ ಅವರ ಸ್ಮೃತಿವಾಹಿನಿಯಲ್ಲಿ ದಾಖಲಾಗಿದೆ.

ರಾಜಕುಮಾರ್ ಅವರು ಸುರಕ್ಷಿತವಾಗಿ ಹಿಂತಿರುಗಿದ ನಂತರ ನಡೆದ ಪತ್ರಿಕಾಗೋಷ್ಠಿ, ನಂತರ ನಡೆದ ಧನ್ಯಮಿಲನ ಎಲ್ಲದರ ಸಾರಥ್ಯ ಕೃಷ್ಣ ಅವರದ್ದಾಗಿತ್ತು.

ಸಿನಿಮಾ ಜೊತೆ, ಸಿನಿಮಾ ಮಂದಿಯ ಜೊತೆ ಕೃಷ್ಣ ಅವರ ಸ್ನೇಹ, ಸಂಬಂಧಗಳ ಕುರಿತಂತೆ ಸಾಕಷ್ಟು ಸುದ್ದಿ, ಗಾಳಿಸುದ್ದಿಗಳು ರೆಕ್ಕೆಪುಕ್ಕ ಕಟ್ಟಿಕೊಂಡು ಹಾರಾಡಿದ್ದಿದೆ. ಅವರೋ, ಆ ಬಗ್ಗೆ ತಲೆಕೆಡಿಸಿಕೊಳ್ಳದ ಸ್ಥಿತಪ್ರಜ್ಞ. ನಾಡು ಕಂಡ ಅಪರೂಪದ ರಾಜಕೀಯ ಮುತ್ಸದ್ದಿ.

 

 

ಆಂದೋಲನ ಡೆಸ್ಕ್

Share
Published by
ಆಂದೋಲನ ಡೆಸ್ಕ್

Recent Posts

ಹನೂರು: ಕಾಡಾನೆ ದಾಳಿಗೆ ಸಿಲುಕಿ ರೈತನ ಕಾಲು ಮುರಿತ

ಮಹಾದೇಶ್‌ ಎಂ ಗೌಡ ಹನೂರು: ತನ್ನ ಜಮೀನಿನಲ್ಲಿ ಬೆಳೆಯಲಾಗಿದ್ದ ಜೋಳದ ಫಸಲು ಕಾಯುತ್ತಿದ್ದ ರೈತನ ಮೇಲೆ ಕಾಡಾನೆ ದಾಳಿ ನಡೆಸಿದ…

5 mins ago

ಮೊದಲು ನಮ್ಮ ಕನ್ನಡಿಗರಿಗೆ ನಿವೇಶನ ಸಿಗಬೇಕು: ಬಿ.ವೈ.ವಿಜಯೇಂದ್ರ

ಬೆಂಗಳೂರು: ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ನೆಲೆಸಿರುವ ಅಕ್ರಮ ವಲಸಿಗರಿಗೆ ಸರ್ಕಾರದ ವತಿಯಿಂದ ಮನೆ ನಿರ್ಮಾಣ ಮಾಡಿಕೊಡಲು ಅವಕಾಶ ಕೊಡುವುದಿಲ್ಲ. ಎಲ್ಲಾ…

20 mins ago

ಅನಧಿಕೃತವಾಗಿ ಮನೆ ನಿರ್ಮಾಣ ಆಗಿದ್ದು ನಿಜ: ಸಚಿವ ಕೃಷ್ಣಭೈರೇಗೌಡ

ಬೆಂಗಳೂರು: ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ವಾಕ್ಸಮರಕ್ಕೆ ಕಾರಣವಾಗಿರುವ ನಗರದ ಕೋಗಿಲು ಲೇಔಟ್‍ನಲ್ಲಿ ವಲಸಿಗರು ಅನಧಿಕೃತವಾಗಿ ಮನೆ ನಿರ್ಮಾಣ…

24 mins ago

ಅರಣ್ಯ ಪ್ರದೇಶದ ಹೊರಗಡೆ ವನ್ಯಜೀವಿಗಳು ಕಂಡರೆ ಕೂಡಲೇ ಈ ಸಂಖ್ಯೆಗೆ ಕರೆ ಮಾಡಿ

ಬೆಂಗಳೂರು: ಅರಣ್ಯ ಪ್ರದೇಶದ ಹೊರಗೆ ವನ್ಯಜೀವಿಗಳು ಕಂಡ ಕೂಡಲೇ ಈ ಸಂಖ್ಯೆಗೆ ಕರೆ ಮಾಡಿ ಎಂದು ರಾಜ್ಯ ಸರ್ಕಾರ ಸಾರ್ವಜನಿಕರಿಗೆ…

26 mins ago

ಮೈಸೂರು ವಿವಿ 106ನೇ ಘಟಿಕೋತ್ಸವ ಸಂಭ್ರಮ: 30,966 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ 106ನೇ ವಾರ್ಷಿಕ ಘಟಿಕೋತ್ಸವವು ಕ್ರಾಪರ್ಡ್‌ ಹಾಲ್‌ನಲ್ಲಿ ನೆರವೇರಿತು. ಈ ಬಾರಿಯ ಘಟಿಕೋತ್ಸವದಲ್ಲಿ 30,966 ಅಭ್ಯರ್ಥಿಗಳಿಗೆ ವಿವಿಧ…

45 mins ago

ಬಳ್ಳಾರಿ ಗಲಾಟೆ ಪ್ರಕರಣ: ಮೃತ ರಾಜಶೇಖರ್‌ಗೆ 2 ಬಾರಿ ಮರಣೋತ್ತರ ಪರೀಕ್ಷೆ ಯಾಕೆ?: ಎಚ್‌ಡಿಕೆ ಪ್ರಶ್ನೆ

ಬೆಂಗಳೂರು: ಬಳ್ಳಾರಿ ಗಲಾಟೆ ಪ್ರಕರಣದಲ್ಲಿ ಕೊಲೆಯಾದ ಕಾಂಗ್ರೆಸ್‌ ಕಾರ್ಯಕರ್ತನ ಶವ ಪರೀಕ್ಷೆಯನ್ನು ಸರ್ಕಾರ ಎರಡು ಬಾರಿ ಮಾಡಿದ್ದು ಯಾಕೆ ಎಂದು…

1 hour ago