ತುಳುನಾಡಿನಲ್ಲಿ ಹುಟ್ಟಿ ಬೆಳೆದ ಎಚ್. ನಾಗವೇಣಿಯವರ ಕತೆಗಳಲ್ಲಿ ಕೂಡ ಈ ತಾಯ್ನೆಲದ ಮಣ್ಣಿನ ತುಡಿತ ಮಿಡಿತಗಳು ನರನಾಡಿಯಂತೆ ವ್ಯಾಪಿಸಿರುತ್ತವೆ. ಆ ಮಣ್ಣಿನ ಸಾರದಲ್ಲಿನ ಜೀವಂತಿಕೆಯನ್ನು ತುಂಬಿಕೊಂಡು ನಳನಳಿಸುತ್ತಿರುವಂತೆ ಭಾಸವಾಗುತ್ತದೆ. ತುಳುನಾಡಿನ ವೈಶಿಷ್ಟ್ಯಗಳಾದ ಕಂಬಳ, ಕೋಲ, ಕೋಳಿಕಟ್ಟ, ಆಟಿ ಕಳೆಂಜ, ಕೆಡ್ಡಸ, ಕಂಗಿಲ ಹಬ್ಬಗಳ ಲೋಕದಲ್ಲಿ ವಿಹಾರ ಕೊಂಡೊಯ್ದು, ತುಳುನಾಡಿನ ಮಣ್ಣಿ-ಮೂಡೆಗಳ ಸವಿಯುಣ್ಣಿಸಿ, ಅಲ್ಲಿನ ಅಳಿಯಕಟ್ಟು ಸಂತಾನದ ಕಟ್ಟು ಕಟ್ಟಳೆ, ರೀತಿ-ರಿವಾಜುಗಳನ್ನು ಬಣ್ಣಿಸಿ ತುಳುನಾಡ ಜಗತ್ತನ್ನು ಕಣ್ಣೆದುರು ತಂದು ನಿಲ್ಲಿಸುತ್ತಾರೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ತುಳು ಭಾಷೆಯು ವೈಶಿಷ್ಟ್ಯಪೂರ್ಣವಾಗಿದೆ. ಇದು ಕೂಡ ಕನ್ನಡದ ಉಪಭಾಷೆಯಾಗಿದ್ದು, ಪ್ರತ್ಯೇಕ ಲಿಪಿ ಇಲ್ಲ. ಎಚ್. ನಾಗವೇಣಿ ಯವರ ‘ಮೀಯುವ ಆಟ’ ಕಥಾಸಂಕಲನದಿಂದ ಆಯ್ದುಕೊಂಡಿರುವ ‘ಧಣಿಗಳ ಬೆಳ್ಳಿಲೋಟ ಕಥೆ’ಯ ಆಯ್ದ ಭಾಗ ಇಲ್ಲಿದೆ.
ಮಾನಗೇಡಿ ಹೊಳೆಗೆ ಒಂದಿಷ್ಟು ಉಗುರೆಡೆಯಲ್ಲಾದರೂ ನಾಚಿಕೆಯೆಂಬುದು ಇದ್ದಿದ್ದರೆ, ಒಂದಾ ಆ ಪರಿಯ ಬೈಗಳಿಗೆ ಅದು ತಟ್ಟನೆ ಇಂಗಿಹೋಗುತ್ತಿತ್ತು ಅಥವಾ ಸರ್ರೆಂದು ನುಗ್ಗಿ ಬಂದು ಆಕೆಯನ್ನು ನುಂಗಿಬಿಡುತ್ತಿತ್ತು. ಅದೆಂತದ್ದೂ ಇಲ್ಲದೆ ಅದು “ಊದು ದಾಸಯ್ಯ ನನ್ನ ಬಾಲಕ್ಕೆ ಇನ್ನಷ್ಟು ಶಂಖ” ಎಂಬಂತೆ ಕಸಕಡ್ಡಿಗಳನ್ನು ಹೊತ್ತು ಹರಿಯುತ್ತಲೇ ಇತ್ತು- ಅತ್ತ ಕಡಲತ್ತ.
ಮುಂಜಾನೆ ಚಿನ್ನಮ್ಮ ಎಂದಿನಂತೆ ಹೊಳೆಯ ಸೆರಗಲ್ಲಿ ಮುಸುರೆ ಪಾತ್ರೆಗಳನ್ನು ರಾಶಿ ಹಾಕಿ ಕೂತು, ಪಕ್ಕದಲ್ಲಿ ಬೂದಿಯ ಗರಟೆಯನ್ನಿರಿಸಿಕೊಂಡು ಹೊಳೆಯ ‘ಗುಣವಾಚನ’ಕ್ಕೆ ತೊಡಗಿದ್ದಳು. ಹೊಳೆಯುವ ಹೊಳೆಯ ಮೈಗೆ ಆ ಪರಿಯ ಬೈಗಳ ಪೆಟ್ಟು ತಗಲುತ್ತಿದ್ದಂತೆ, ಅದರ ದಡದಲ್ಲಿ ನಿಂತು ಮರಿಮೀನುಗಳ ತಪಾಸಣೆಯಲ್ಲಿದ್ದ ಅಸಂಖ್ಯ ಕೊಕ್ಕರೆ – ಕೊಂರ್ಗು- ಮಿಂಚುಳ್ಳಿಗಳೆಲ್ಲ ಆಕೆಯ ಬೈಗಳ ಪಾಲು ತಮಗೆಂದೂ ಬೇಡವೆಂಬಂತೆ ಸರ್ರನೆ ಆಚೆ ದಡಕ್ಕೆ ತಟ್ಟನೆ ಹಾರಿ ಹೋದವು.
ಆ ಹೊಳೆಯೇನು ಬೇಕು ಬೇಕೆಂದೇ ಚಿನ್ನಮ್ಮನ ಕುಟುಂಬಕ್ಕೆ ಅಂತಹ ಅಪವಾದವನ್ನು ಎಳೆದು ತಂದುಹಾಕಿದೆಯೇ? ಅದಕ್ಕೂ ಚಿನ್ನಮ್ಮನ ಪುಟ್ಟ ಸಂಸಾರದ ಬಗ್ಗೆ ಅದೆಷ್ಟು ಪ್ರೀತಿ ವಾತ್ಸಲ್ಯ, ಕಾಳಜಿ, ಅನುಕಂಪವಿಲ್ಲ! ಇಲ್ಲದಿದ್ದಲ್ಲಿ ಆ ಹೊಳೆ ಯಾಕಾಗಿ ಚಿನ್ನಮ್ಮನ ಗಂಡ ಕುದುಪನ ಗಾಳದ ಬಾಯಿಗೆ ಅಂತಹ ಹೊಡೆಯುವ ಮಳೆಗಾಲದಲ್ಲೂ ದಿನವೂ ಒಂದಷ್ಟು ತರುಮೀನುಗಳನ್ನು ಸಿಲುಕಿಸಬೇಕು! ಹಾಗೆ. . . ತಾನು ಹರಿದು ಬರುವಾಗಲೆಲ್ಲಾ ತನ್ನ ಸೆರಗಂಚಿನಲ್ಲಿರುವ ತೋಟಗಳಿಂದ ಆಗ್ಗಾಗ್ಗೆ ಅಷ್ಟಿಷ್ಟು ತೆಂಗಿನಕಾಯಿ – ಸೌದೆ ಕಟ್ಟಿಗೆಗಳನ್ನು ತಂದು ಕುದುಪನ ದಿಟ್ಟಿಗೆ ಅವನ್ನೆಲ್ಲ ಬೀಳಿಸುತ್ತಿಲ್ಲವೆ! ಆಟಿ-ಸೋಣ ಕಾಲದ ಮಳೆಗಾಲದಲ್ಲಂತೂ ಕೇಳುವುದೇ ಬೇಡ. ಅಲ್ಲಿ ಇಲ್ಲಿಂದ ಪಾತ್ರೆ-ಪಗಡಿ, ಸೌದೆ-ಕಟ್ಟಿಗೆ, ಕೋಳಿ-ಕುರಿ, ಏಣಿ-ದೋಣಿ, ರೀಪು-ಪಕ್ಕಾಸುಗಳನ್ನು ಹೊತ್ತು ತಂದು ಚಿನ್ನಮ್ಮ-ಕುದುಪರ ಮಡಲಿಗೆ ಸುರಿಯುವುದು ಮಾಮೂಲು. ಚಿನ್ನಮ್ಮನ ಕುಟುಂಬದ ಜತೆ ಈ ಹೊಳೆಗೆ ಇಷ್ಟೊಂದು ಒಡನಾಟವಿದ್ದರೂ, ಮೊನ್ನೆಯ ಶ್ರಾವಣ ಮಾಸದ ನಾಕರಂದು ಇದೇ ಹೊಳೆ ಆಕೆಯ ಕುಟುಂಬದ ಮೇಲೆ ದೊಡ್ಡ ಅಪವಾದವೊಂದನ್ನು ಹೊರಿಸಿ ಇಡಿಯ ಕುಟುಂಬದ ಉಗ್ರಕೋಪ- ಸಹನೆಗೆ ಬಲಿಯಾಗಬೇಕಾಯಿತು.
ಆದದ್ದಿಷ್ಟೆ, ಕಳೆದ ಶ್ರಾವಣ ಮಾಸದ ನಾಕನೇ ದಿನ ಚಿನ್ನಮ್ಮನ ಏಕೈಕ ಮಗ ಗುಡ್ಡ, ಆ ಪರಿಯಲ್ಲಿ ತುಂಬಿ ಹರಿಯುತ್ತಿದ್ದ ಶಾಂಭವಿ ಹೊಳೆಯ ದಡದಲ್ಲಿ ಕೂತು, ಧಣಿ ಮನೆಯ ಮುಸುರೆ ಪಾತ್ರೆಗಳನ್ನು ತಿಕ್ಕುತ್ತಿದ್ದ. ಆಷಾಢ-ಶ್ರಾವಣ-ಭಾದ್ರಪದ ಮಾಸದಲ್ಲಿ ನದಿಯ ಒಡಲೆಂದರೆ ಎಂಥದ್ದು! ಕಾವಿಗೆ ಕೂತ ಹೇಂಟೆಯಂತೆ- ಒಡಲು ಯಾವತ್ತೂ ವ್ಯಗ್ರ-ಪ್ರಕ್ಷುಬ್ಧ.
ಹತ್ತಿರ ಬಂದವರನ್ನು ಕುಕ್ಕಿ ಮುಕ್ಕುವ ಸಿಡುಕು. ಹುಟ್ಟುವ ಘಟ್ಟದಲ್ಲಿ ಆ ಹೊಳೆಯ ದೇಹದೊಡಲು ಮನಸ್ಸು ಪ್ರಫುಲ್ಲ, ಶಾಂತ ನಿರ್ಮಲವಾಗಿದ್ದರೂ ಅದು ಸಾಗಿ ಬರುವ ದಾರಿಯೇನು ಸುಲಭದ್ದೇ. ಕಡಲ ಸಂಗಮಕ್ಕಾಗಿ ರಭಸದಿಂದ ಹಾತೊರೆದು ಬರುವಾಗ ದಾರಿಯಲ್ಲಿ ತುಂಬಿ ಹರಿವ ಅನೇಕ ಕೆರೆ ತೋಡು ಹಳ್ಳ, ಕೊಳ್ಳಗಳನ್ನು ತನ್ನೊಡಲೊಳಗೆ ಬಾಚಿಕೊಂಡು ಸಾಗಿ ಬರಬೇಕಲ್ಲವೆ! ಇಂತಹ ವಿಕ್ಷಿಪ್ತ ಮನಃಸ್ಥಿತಿ, ಪರಿಸ್ಥಿತಿಯಲ್ಲಿ ಆ ಶಾಂಭವಿ ಹೊಳೆ ಇರಬೇಕಾದರೆ, ಚಿನ್ನಮ್ಮನ ಮಗ ಎಂಟು ವರ್ಷದ ಗುಡ್ಡ, ಧಣಿಗಳ ಮುಸುರೆ ಪಾತ್ರೆಯಲ್ಲಿ ಮರಿಮೀನುಗಳನ್ನು ಹಿಡಿಯುವ ಆಟವನ್ನಾಡುತ್ತಾ. . . ತನ್ನದೇ ಲೋಕದಲ್ಲಿ ವಿಹರಿಸುತ್ತಾ ಪಾತ್ರೆ ಉಜ್ಜುತ್ತಿದ್ದ.
ನಿಜಕ್ಕೂ ಧಣಿ ವೆಂಕಪ್ಪಯ್ಯನವರ ಮಾತಿನಂತೆ ಹೇಳುವುದಾದರೆ ಗುಡ್ಡ ಪಾತ್ರೆ ಉಜ್ಜುತ್ತಿದ್ದುದು ಹೊಳೆಯ ಸೆರಗಲ್ಲಿ ಅಲ್ಲವೇ ಅಲ್ಲ, ಆತ ಉಜ್ಜುತ್ತಿದ್ದುದು ವೆಂಕಪ್ಪಯ್ಯನವರ ತೆಂಗಿನ ತೋಟದ ಅಂಚಿನಲ್ಲಿ. ಮಳೆಗಾಲದಲ್ಲಿ ಆ ಹೊಳೆ ಆಡಿದ್ದೇ ಆಟ, ಹೂಡಿದ್ದೇ ಹೂಟ. “ಮಳೆಗಾಲ ಬಂದರೆ ಸಾಕು ಈ ಬಿಕನಾಸಿ ಹೊಳೆ ಊರಿಡೀ ತನ್ನ ಸೆರಗನ್ನೇ ಹಾಸಿಬಿಡುತ್ತದೆ. . . , ಎಷ್ಟಗಲ ಸೆರಗು ಹಾಸಿದರೂ ಇನ್ನಷ್ಟು ದೂರಕ್ಕೆ ಹಾಸಬೇಕೆಂಬ ಚಟ ಇದಕ್ಕೆ. . . ” ಎಂದು ಧಣಿಗಳು ಯಾವತ್ತೂ ಹೊಳೆಯನ್ನು ಮೂದಲಿಸುವುದು ಇದ್ದೇ ಇದೆ.
ಹೊಳೆಗೂ ಬಾಯಿಯೇನಾದರೂ ಬರುತ್ತಿದ್ದರೆ, “ಎಲವೋ ಹುಲು ಮಾನವ ವೆಂಕಪ್ಪಯ್ಯ, ಸುತ್ತಲ ನಾಕೂರಲ್ಲಿರುವ ಯಾವನೇ ಶ್ಯಾನುಭೋಗ ಉಗ್ರಾಣಿಯನ್ನಾದರೂ ಕರೆತಂದು ನನ್ನೆದರು ಸರಪಳಿ ಎಳಸು. ಅವೆಲ್ಲವೂ ನನ್ನದಲ್ಲದಿದ್ದರೆ ಕೇಳು ಮತ್ತೆ. . . ” ಎಂದು ಮರು ಉತ್ತರ ಕೊಡುತ್ತಿತ್ತೇನೋ! ಬಾಯಿ ಇಲ್ಲದಿದ್ದರೇನಂತೆ. . . ಮಳೆಗಾಲ ಬಂದೊಡನೆ ಬರಿ ಕ್ರಿಯೆಯಲ್ಲೇ ತನ್ನ ವ್ಯಾಪ್ತಿ, ತನ್ನ ಪರಿಹಾರ, ತನ್ನ ಬಲ ಎಷ್ಟೆಂಬುದನ್ನು ಧಣಿಗಳಿಗೆ ಮನವರಿಕೆ ಮಾಡಿ ಅವರಿಗೆ ಕಿರಿಕಿರಿ ಎಬ್ಬಿಸುವುದರಲ್ಲಿ ಹೊಳೆಯೇನೂ ಹಿಂದೆ ಬಿದ್ದಿಲ್ಲ.
ಹೊಳೆಯ ಈ ಉಪಟಳ ತಾಳಲಾರದೆ ಧಣಿಯವರು ಪ್ರತಿವರ್ಷವೂ ಹೊಳೆ ಸೊರಗುವ ಕಾಲಕ್ಕೆ ತನ್ನ ಮೇಲುಸ್ತುವಾರಿಯಲ್ಲಿ ನದಿ ಸೆರಗನ್ನು ಒಂದಷ್ಟು ಅತ್ಲಾಗೆ ದೂಡುವಂತೆ ಪಾದೆಕಲ್ಲು – ಮುರಕಲ್ಲಿನ ಗಟ್ಟಿ ಅಡಿಪಂಚಾಗ ಹಾಕಿಸಿ ನದಿಯ ಸೆರಗಿಗೂ ತೋಟಕ್ಕೂ ನಡುವೆ ದರೆ ಎಬ್ಬಿಸಿ ಎತ್ತರಿಸುವುದಿದೆ. ಈ ವರ್ಷ ಹೊಳೆಯ ಮೈಯಿಂದ ತೋಟವನ್ನು ನಾಕಡಿ ಎತ್ತರಿಸಿದ್ದರೆ, ಮುಂದಿನ ವರ್ಷ ಐದಡಿ ಎತ್ತರಿಕೆ. ಆದರೆ ಆ ಬಿರುಬೇಸಗೆಯಲ್ಲಿ ನಿತ್ರಾಣ ಸ್ಥಿತಿಯಲ್ಲಿರುವ ಹೊಳೆಯಂತೂ ತನ್ನ ನಿಶ್ಶಕ್ತ ಸ್ಥಿತಿಯಲ್ಲಿ ಧಣಿಗಳ ಆ ಕೃತ್ಯವನ್ನು ಕಂಡೂ ಕಾಣದಂತಿದ್ದು “ಗದ್ದೆಯಲ್ಲಿ ಬಿತ್ತುವುದನ್ನು ಮರಳದಿನ್ನೆ ಮೇಲೆ ಬಿತ್ತಿದೆಯಲ್ಲವ ಮಾರಾಯ? ” ಎಂದು ಧಣಿಯವರ ಪೆದ್ದುತನದ ಬಗ್ಗೆ ಮನಸ್ಸಲ್ಲೇ ನಗುತ್ತಾ ಆ ದರೆಯನ್ನು ಕೆಡವಲು ಹೊಂಚು ಹಾಕುತ್ತಿರುತ್ತದೆ.
ಅನಾದಿ ಕಾಲದಿಂದಲೂ ಅಲ್ಲೇ ಇರುವ ಹೊಳೆಗೇನು ತಿಳಿದಿಲ್ಲವೆ, ಇವ ಧನಿಕ ಮಹಾಶಯ ತನ್ನ ಸೆರಗನ್ನೇ ಒತ್ತರಿಸಿಕೊಂಡು ತೋಟ ಮಾಡಿದ್ದಾನೆ ಎನ್ನುವ ಸತ್ಯ. ಅಂತು ಮಳೆಗಾಲ ಕಾಲಿಟ್ಟು ಆಟಿ ತಿಂಗಳ ನಾಲ್ಕು ಜಡಿಮಳೆ ಹೊಡೆದರೆ ಸಾಕು ಧಣಿಗಳು ಕಟ್ಟಿದ ದರೆ ಬುಡದಿಂದಲೇ ಲಯ. ಹೊಳೆ ತಟ್ಟನೆ ಧಣಿಯವರ ತೋಟದೊಳಗೆ ನುಗ್ಗಿ ಅದನ್ನಿಡೀ ಕಡಲು ಮಾಡಿ ಸೇಡು ತೀರಿಸಿಕೊಳ್ಳುತ್ತದೆ.
ಮೈಸೂರು: ರಾಜ್ಯದಲ್ಲಿ ಮೈಸೂರು ಮುಡಾ ಪ್ರಕರಣ ಭಾರೀ ಸದ್ದು ಮಾಡುತ್ತಿದ್ದು, ಇಂದು ತನಿಖೆಯ ಭಾಗವಾಗಿ ನಿವೃತ್ತ ನ್ಯಾಯಮೂರ್ತಿ ದೇಸಾಯಿ ಅವರು…
ಪುಣೆ: ಪ್ರಧಾನಿ ನರೇಂದ್ರ ಮೋದಿ ಅವರು ಸಂವಿಧಾನವನ್ನೇ ಓದಿಲ್ಲ. ಈ ಬಗ್ಗೆ ನನಗೆ ಗ್ಯಾರಂಟಿಯಿದೆ ಎಂದು ಲೋಕಸಭೆ ವಿರೋಧ ಪಕ್ಷದ…
ಮೈಸೂರು: ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲ್ಲೂಕಿನಲ್ಲಿರುವ ಉದ್ಬೂರು ಹಾಡಿ ಹಾಗೂ ಕೆರೆಹಾಡಿಗೆ ಸಿಎಂ ಸಿದ್ದರಾಮಯ್ಯ ಅವರಿಂದು ಭೇಟಿ ನೀಡಿ, ಆದಿವಾಸಿಗಳ…
ಬೆಂಗಳೂರು: ರಾಜ್ಯದಲ್ಲಿ ಈ ಬಾರಿ ಮಳೆ ನಿಲ್ಲುವ ಮುನ್ಸೂಚನೆ ಕಾಣುತ್ತಿಲ್ಲ. ಕಳೆದ ಕೆಲ ದಿನಗಳಿಂದ ಕೊಂಚ ಬಿಡುವು ಕೊಟ್ಟಿದ್ದ ವರುಣ…
ಬೆಂಗಳೂರು: ಕರ್ನಾಟಕದಿಂದ ಶಬರಿಮಲೆ ಯಾತ್ರೆಗೆ ತೆರಳುವವರಿಗೆ ಕೆಎಸ್‌ಆರ್‌ಟಿಸಿ ಸಿಹಿ ಸುದ್ದಿ ನೀಡಿದ್ದು, ಇದೇ ಮೊದಲ ಬಾರಿಗೆ ಬೆಂಗಳೂರಿನಿಂದ ವೋಲ್ವೋ ಬಸ್…
ಮುಂಬೈ: ರಾಜ್ಯದ ಅಭಿವೃದ್ಧಿಯನ್ನು ಕುಂಠಿತಗೊಳಿಸುವಲ್ಲಿ ಕಾಂಗ್ರೆಸ್ ಮುಂದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ. ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯಲ್ಲಿ…