ವಿದೇಶ ವಿಹಾರ; ಡಿ.ವಿ ರಾಜಶೇಖರ
ಪ್ಯಾಲೆಸ್ಟೇನ್ ಪ್ರದೇಶದ ಮೇಲೆ ಇಸ್ರೇಲ್ ನಡೆಸುತ್ತಿರುವ ಮತ್ತು ಉಕ್ರೇನ್ ಮೇಲೆ ರಷ್ಯಾ ನಡೆಸುತ್ತಿರುವ ಮಿಲಿಟರಿ ಆಕ್ರಮಣವನ್ನು ತಡೆಯುವಲ್ಲಿ ವಿಶ್ವಸಂಸ್ಥೆ ವಿಫಲವಾಗಿದೆ. ವಿಶ್ವಸಂಸ್ಥೆ ಮತ್ತು ಭದ್ರತಾ ಮಂಡಳಿಯ ಯಾವುದೇ ನಿರ್ಣಯಗಳಿಗೆ ಇಸ್ರೇಲ್ ಮತ್ತು ರಷ್ಯಾ ಮಾನ್ಯತೆ ನೀಡುತ್ತಿಲ್ಲ. ಹಾಗೆ ನೋಡಿದರೆ ಈ ಆಕ್ರಮಣಗಳು ತೀವ್ರ ಸ್ವರೂಪ ಪಡೆದಿವೆ. ಪ್ಯಾಲೆಸ್ಟೇನ್ ಜನರಿರುವ ಗಾಜಾಪಟ್ಟಿ ಪ್ರದೇಶದ ಮೇಲಿನ ಇಸ್ರೇಲ್ ಮಿಲಿಟರಿ ದಾಳಿ ಇದೀಗ ವಿಸ್ತರಣೆಗೊಂಡಿದೆ. ನೆರೆಯ ಲೆಬನಾನ್ ಮೇಲೆ ಇಸ್ರೇಲ್ ಮಾರಕ ದಾಳಿ ನಡೆಸಿದ್ದು, ನೂರಾರು ಮಂದಿ ಸತ್ತು ಸಾವಿರಾರು ಜನರು ಗಾಯಗೊಂಡಿದ್ದಾರೆ.
ಲೆಬನಾನ್‌ನಲ್ಲಿನ ಉಗ್ರವಾದಿ ಹೆಜಬುಲ್ಲಾಗಳನ್ನು ಮುಗಿಸುವವರೆಗೆ ಬಾಂಬ್ ದಾಳಿ ಮುಂದುವರಿಯುತ್ತದೆ ಎಂದು ಇಸ್ರೇಲ್ ಪ್ರಧಾನಿ ಬೆಂಜ ಮಿನ್ ನೆತಾನ್ಯಹು ಹೇಳಿದ್ದಾರೆ. ಉಕ್ರೇನ್ ಮತ್ತು ರಷ್ಯಾ ಯುದ್ಧವೂ ತೀವ್ರ ಗೊಂಡಿದ್ದು, ಇದೀಗ ಪರಮಾಣು ಅಸ್ತ್ರ ಬಳಸಬಹುದಾದ ಬೆದರಿಕೆ ರಷ್ಯಾದ ಅಧ್ಯಕ್ಷ ಪುಟಿನ್ ಅವರಿಂದ ಬಂದಿದ್ದು ಪರಿಸ್ಥಿತಿ ಭಯಾನಕ ಸ್ವರೂಪ ತಾಳಿದೆ.
ಇಂಥ ಸಂದರ್ಭದಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ ಸಾಮಾನ್ಯ ಅಽವೇಶದಲ್ಲಿ ಸಹಜವಾಗಿಯೇ ಈ ಬೆಳವಣಿಗೆಗಳು ಪರಿಣಾಮ ಬೀರಿವೆ. ಗಾಜಾಪಟ್ಟಿ ಪ್ರದೇಶದ ಮೇಲಿನ ಮಿಲಿಟರಿ ದಾಳಿಯನ್ನು ಇಸ್ರೇಲ್ ಆರಂಭಿಸಿ ವರ್ಷವೇ ಆಗುತ್ತಿದೆ. ಕಳೆದ ಅಕ್ಟೋಬರ್ ತಿಂಗಳಲ್ಲಿ ಹಮಾಸ್ ಉಗ್ರವಾದಿಗಳು ಇಸ್ರೇಲ್‌ನ ಜನರ ಮೇಲೆ ನಡೆಸಿದ ದಾಳಿಯಲ್ಲಿ ಸಾವಿರಾರು ಜನರು ಸತ್ತರು. ನೂರಾರು ಮಂದಿ ಇಸ್ರೇಲ್ ಜನರನ್ನು ಹಮಾಸ್ ಉಗ್ರರು ಒತ್ತೆಯಾಳುಗಳನ್ನಾಗಿಸಿಕೊಂಡರು. ಈ ಘಟನೆಗೆ ಪ್ರತಿಕ್ರಿಯೆಯಾಗಿ ಇಸ್ರೇಲ್ ಆರಂಭಿಸಿದ ಮಿಲಿಟರಿ ದಾಳಿಯಲ್ಲಿ ಕನಿಷ್ಠ ೫೦ ಸಾವಿರ ಪ್ಯಾಲೆಸ್ಟೇನ್ ಜನರು ಸತ್ತಿದ್ದಾರೆ. ಸತ್ತವರಲ್ಲಿ ಶೇ. ೪೦ ಭಾಗ ಮಕ್ಕಳೇ ಇದ್ದಾರೆ. ಒಂದು ಲಕ್ಷದಷ್ಟು ಜನರು ಗಾಯಗೊಂಡಿದ್ದಾರೆ ಎಂದು ಪ್ಯಾಲೆಸ್ಟೇನ್‌ನ ಆರೋಗ್ಯ ಇಲಾಖೆ ತಿಳಿಸಿದೆ. ಇಪ್ಪತ್ತು ಲಕ್ಷಕ್ಕೂ ಹೆಚ್ಚು ಮಂದಿ ಮನೆಮಠ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಇಸ್ರೇಲ್ ದಾಳಿ ಮುಂದುವರಿದಿದ್ದು, ಸಾಮಾನ್ಯ ಜನರ ಬದುಕು ನರಕಮಯವಾಗಿದೆ. ಈ ಯುದ್ಧವನ್ನು ತಡೆಯುವ ದಿಕ್ಕಿನಲ್ಲಿ ವಿಶ್ವಸಂಸ್ಥೆ ಸತತವಾಗಿ ನಡೆಸುತ್ತ ಬಂದ ಪ್ರಯತ್ನ ಇದುವರೆಗೆ ಸಫಲವಾಗಿಲ್ಲ. ಇಸ್ರೇಲ್‌ನ ಮಿತ್ರ ದೇಶ ಅಮೆರಿಕ ಮತ್ತು ಪ್ಯಾಲೆಸ್ಟೇನ್ ಬೆಂಬಲದ ದೇಶಗಳು ನಡೆಸುತ್ತ ಬಂದ ಯತ್ನಗಳೂ ಸಫಲವಾಗಿಲ್ಲ. ಹೀಗಾಗಿ ಕದನ ವಿರಾಮ ಎನ್ನುವುದು ಕನಸಾಗಿಯೇ ಉಳಿದಿದೆ. ಪ್ಯಾಲೆಸ್ಟೇನ್ ಜನರ ಹೋರಾಟಕ್ಕೆ ಮೊದಲಿನಿಂದಲೂ ಬೆಂಬಲವಾಗಿರುವ ನೆರೆಯ ಲೆಬನಾನ್ ದೇಶದ ಪ್ರಮುಖ ಉಗ್ರವಾದಿ ಸಂಘಟನೆ ಹೆಜಬುಲ್ಲ ಈಗ ಸಮಸ್ಯೆಯ ಭಾಗವಾಗಿದೆ. ಗಾಜಾದ ಮೇಲೆ ಇಸ್ರೇಲ್ ದಾಳಿ ಆರಂಭವಾದಾಗಿನಿಂದಲೂ ಹೆಜಬುಲ್ಲಾ ಉಗ್ರರು ಸಕ್ರಿಯರಾಗಿದ್ದಾರೆ. ಇಸ್ರೇಲ್‌ನ ಉತ್ತರದ ಗಡಿಪ್ರದೇಶಗಳ ಮೇಲೆ ರಾಕೆಟ್ ದಾಳಿ ನಡೆಸುತ್ತ ಬಂದಿದ್ದಾರೆ. ಈ ದಾಳಿಗಳಿಂದಾಗಿ ಇಸ್ರೇಲ್‌ನ ಸುಮಾರು ೭೦ ಸಾವಿರ ಜನರು ಬೇರೆಡೆಗೆ ವಲಸೆ ಹೋಗಿದ್ದಾರೆ. ಮುಜಾಹಿದ್ದೀನ್ ಉಗ್ರರ ಸತತ ರಾಕೆಟ್ ದಾಳಿಯಿಂದ ಕುಪಿತಗೊಂಡ ಇಸ್ರೇಲ್ ನಾಯಕರು ಇದೀಗ ಮುಜಾಹಿದ್ದೀನ್ ಉಗ್ರರನ್ನು ಸದೆಬಡಿಯುವ ದಿಸೆಯಲ್ಲಿ ಲೆಬನಾನ್ ಮೇಲೆ ದಾಳಿ ಆರಂಭಿಸಿದ್ದಾರೆ. ಪೇಜರ್ ಮತ್ತು ವಾಕಿಟಾಕಿಗಳನ್ನು ಸ್ಛೋಟಿಸುವ ಮೂಲಕ ಹೊಸ ರೀತಿಯ ದಾಳಿಯನ್ನು ಇಸ್ರೇಲ್ ಆರಂಭಿಸಿದೆ. ೨೦೦೬ರಲ್ಲಿಯೂ ಇಂಥದ್ದೇ ಸಮಸ್ಯೆ ತಲೆದೋರಿದಾಗ ಲೆಬನಾನ್ ಮತ್ತು ಇಸ್ರೇಲ್ ನಡುವೆ ಕದನ ವಿರಾಮ ಜಾರಿಗೆ ತರುವಲ್ಲಿ ವಿಶ್ವಸಂಸ್ಥೆ ಸಫಲವಾಗಿತ್ತು. ಹಾಗೆ ನೋಡಿದರೆ ವಿಶ್ವಸಂಸ್ಥೆಯ ಶಾಂತಿಪಡೆ ಈಗಲೂ ಗಡಿಯಲ್ಲಿ ಬೀಡುಬಿಟ್ಟಿದೆ.
ಈ ಬಾರಿ ಕದನ ವಿರಾಮಕ್ಕೆ ಅವಕಾಶವೇ ಇಲ್ಲ ಎಂದು ಇಸ್ರೇಲ್ ಪ್ರಧಾನಿ ನೆತಾನ್ಯಹು ಘೋಷಿಸಿ ಮಿಲಿಟರಿ ದಾಳಿ ಮುಂದುವರಿಸಲು ಸೇನೆಗೆ ಸೂಚಿಸಿದ್ದಾರೆ. ಅಮೆರಿಕ, ಫ್ರಾನ್ಸ್, ಬ್ರಿಟನ್ ಸೇರಿದಂತೆ ಪ್ರಬಲ ದೇಶಗಳು ಕದನ ವಿರಾಮ ಸಾಧ್ಯತೆಗಳನ್ನು ಪರಿಶೀಲಿಸುತ್ತಿವೆ. ಈಗಾಗಲೇ ಸಿದ್ಧಗೊಂಡಿದ್ದ ಕದನ ವಿರಾಮ ನಿರ್ಣಯಕ್ಕೆ ಅಮೆರಿಕ ಒಪ್ಪಿಗೆ ಸೂಚಿಸಲು ನಿರಾಕರಿಸಿದ್ದರಿಂದಾಗಿ ನಿರ್ಣಯವನ್ನು ಪುನರ್ ರೂಪಿಸಲಾಗುತ್ತಿದೆ. ವಿಶ್ವಸಂಸ್ಥೆಯಲ್ಲಿ ಭದ್ರತಾ ಮಂಡಳಿಯದ್ದೇ ಸಮಸ್ಯೆ. ಯಾವುದೇ ನಿರ್ಣಯ ಸರ್ವಾನುಮತದಿಂದ ಅನುಮೋದನೆಗೊಳ್ಳಬೇಕೆಂಬುದು ನಿಯಮ. ಯಾವುದೇ ಒಂದು ಸದಸ್ಯ ದೇಶ ನಿರ್ಣಯಕ್ಕೆ ಒಪ್ಪದೆ ವಿಟೋ ಚಲಾಯಿಸಿದರೆ ನಿರ್ಣಯ ಬಿದ್ದುಹೋಗುತ್ತದೆ. ಇಲ್ಲಿಯೇ ಇರುವುದು ಸಮಸ್ಯೆ. ಶಾಂತಿ ಸ್ಥಾಪನೆಯ ತನ್ನ ಗುರಿಯನ್ನು ಸಾಽಸುವಲ್ಲಿ ವಿಶ್ವಸಂಸ್ಥೆಗೆ ಇರುವ ದೊಡ್ಡ ಅಡ್ಡಿ ಶಾಶ್ವತ ಸದಸ್ಯ ದೇಶಗಳ ನಡುವೆ ಒಮ್ಮತ ಮೂಡದೇ ಇರುವುದೇ ಆಗಿದೆ.
ಎರಡನೆಯ ಮಹಾಯುದ್ಧದ ಘೋರ ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು ೧೯೪೫ ಅಕ್ಟೋಬರ್ ೨೪ರಂದು ವಿಶ್ವಸಂಸ್ಥೆ ಸ್ಥಾಪನೆ ಮಾಡಲಾಯಿತು. ವಿಶ್ವದಲ್ಲಿ ಭದ್ರತೆ, ಶಾಂತಿ ಕಾಪಾಡುವುದು, ಹಸಿವೆಯ ನಿವಾರಣೆ, ಸಮಾನತೆ ಸಾಧನೆ ವಿಶ್ವಸಂಸ್ಥೆಯ ಧ್ಯೇಯಗಳು. ವಿಶ್ವಸಂಸ್ಥೆಯಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಭದ್ರತಾ ಮಂಡಳಿ ರಚನೆಯಾಯಿತು. ಈ ಮಂಡಳಿಯಲ್ಲಿ ೧೫ ದೇಶಗಳಿಗೆ ಪ್ರಾತಿನಿಧ್ಯ ನೀಡಲಾಯಿತು. ಈ ಪೈಕಿ ಬ್ರಿಟನ್, ಅಮೆರಿಕ, ಫ್ರಾನ್ಸ್, ರಷ್ಯಾ ಮತ್ತು ಚೀನಾ ಶಾಶ್ವತ ಸದಸ್ಯತ್ವ ಪಡೆದ ದೇಶಗಳಾದವು. ವಿಶ್ವಸಂಸ್ಥೆಯಲ್ಲಿ ಮಂಡಿಸಲಾದ ಯಾವುದೇ ನಿರ್ಣಯದ ಮೇಲೆ ವಿಟೂ (ತಿರಸ್ಕರಿಸುವ) ಹಕ್ಕನ್ನು ನೀಡಲಾಯಿತು. ಆದರೆ ಮುಂದೆ ವಿಶ್ವಸಂಸ್ಥೆ ಧ್ಯೇಯಗಳು ಸಾಽತವಾಗುವಂಥ ಪರಿಸ್ಥಿತಿ ನಿರ್ಮಾಣವಾಗಲಿಲ್ಲ. ಅಮೆರಿಕ ಮತ್ತು ಸೋವಿಯತ್ ಒಕ್ಕೂಟದ ನೇತೃತ್ವದಲ್ಲಿ ಎರಡು ಗುಂಪುಗಳಾದವು. ವಿಟೋ ಅಽಕಾರ ದುರು ಪಯೋಗವಾಗಲು ಆರಂಭವಾಯಿತು. ಯಾವುದೇ ನಿರ್ಣಯ ಅಂಗೀಕಾರ ವಾಗದಂಥ ಪರಿಸ್ಥಿತಿ ನಿರ್ಮಾಣವಾಯಿತು. ಇದರಿಂದಾಗಿ ಯಾವುದೇ ಸಮಸ್ಯೆ ಪರಿಹರಿಸಲು ಸಾಧ್ಯವಾಗದಾಯಿತು. ಈ ವಿಚಾರ ಹಲವು ಬಾರಿ ವಿಶ್ವಸಂಸ್ಥೆಯ ಸಾಮಾನ್ಯ ಅಽವೇಶನದಲ್ಲಿ ಚರ್ಚೆಗೆ ಬರುತ್ತಲೇ ಇದೆ. ಭಾರತವೂ ಸೇರಿದಂತೆ ಹಲವು ದೇಶಗಳು ವಿಶ್ವಸಂಸ್ಥೆ ಮತ್ತು ಭದ್ರತಾ ಮಂಡಳಿಯ ಸ್ವರೂಪದಲ್ಲಿ ಬದಲಾವಣೆ ತರಬೇಕೆಂದು ಒತ್ತಾಯಿಸುತ್ತಲೇ ಇವೆ. ವಿಶ್ವಸಂಸ್ಥೆ ಯಾವುದೋ ಕೆಲವು ದೇಶಗಳ ಸೂತ್ರದ ಗೊಂಬೆ ಯಾಗಬಾರದು. ಅದು ಸ್ವತಂತ್ರವಾಗಿ ನಿರ್ಧಾರವನ್ನು ತೆಗೆದುಕೊಳ್ಳು ವಂತಿರಬೇಕು ಎಂಬುದು ವಿವಿಧ ದೇಶಗಳ ಆಗ್ರಹ. ಇಂಥ ಒತ್ತಾಯ ಈಗ ಮತ್ತೆ ಬಂದಿದೆ. ಗಾಜಾ ಮತ್ತು ಲೆಬನಾನ್ ಯುದ್ಧ ವಿಚಾರದಲ್ಲಿ ಕದನ ವಿರಾಮ ಜಾರಿಗೆ ಬರಬೇಕೆಂಬುದು ಬಹಳ ದೇಶಗಳ ಆಗ್ರಹ.
ಅದೇ ರೀತಿ ಉಕ್ರೇನ್ ವಿಚಾರದಲ್ಲಿಯೂ ಕದನ ವಿರಾಮ ಘೋಷಣೆಯಾಗಬೇಕೆಂದು ವಿವಿಧ ದೇಶಗಳ ಪ್ರತಿನಿಽಗಳು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಆಗ್ರಹಮಾಡಿದ್ದಾರೆ. ಸದ್ಯ ವಿಶ್ವಸಂಸ್ಥೆಯ ಭದ್ರತಾಮಂಡಳಿಯಲ್ಲಿ ನಿರ್ಧಾರ ತೆಗೆದುಕೊಳ್ಳುವ ಅಽಕಾರ ಕೆಲವೇ ದೇಶಗಳ ಪ್ರತಿನಿಧಿಗಳ ಕೈಯಲ್ಲಿದೆ. ಈ ದೇಶಗಳು ಒಂದು ನಿರ್ಧಾರ ತೆಗೆದುಕೊಂಡು ಯುದ್ಧಗಳನ್ನು ನಿಲ್ಲಿಸುವ ಪ್ರಯತ್ನ ನಡೆಸುತ್ತಿಲ್ಲ. ಇಸ್ರೇಲ್‌ಗೆ ಅಮೆರಿಕ ಬೆಂಬಲವಾಗಿ ನಿಂತಿದೆ, ಹಾಗೆಯೇ ರಷ್ಯಾಕ್ಕೆ ಚೀನಾ ಬೆಂಬಲವಾಗಿ ನಿಂತಿದೆ. ಹೀಗಾಗಿ ಒಮ್ಮತದ ನಿರ್ಣಯ ಸಾಧ್ಯವಾಗುತ್ತಿಲ್ಲ. ಗಾಜಾ, ಉಕ್ರೇನ್ ಯುದ್ಧಗಳಷ್ಟೇ ಅಲ್ಲ ವಿಶ್ವದ ಅನೇಕ ಕಡೆ ಯುದ್ಧಗಳು ನಡೆಯುತ್ತಿವೆ. ಈ ಯುದ್ಧಗಳಿಂದಾಗಿ ಸಾವಿರಾರು ಜನರು ಬಲಿಯಾಗುತ್ತಿದ್ದಾರೆ. ಬಲಿಯಾದವರಲ್ಲಿ ಮಕ್ಕಳೇ ಹೆಚ್ಚು. ಲಕ್ಷಾಂತರ ಜನರು ಮನೆಮಠ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಅನ್ನ ನೀರು ಇಲ್ಲದೆ ಅಲೆಯುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಯುದ್ಧ ನಿಲ್ಲಿಸುವಂಥ ಕೆಲಸ ವಿಶ್ವಸಂಸ್ಥೆಯಿಂದ ಆಗುತ್ತಿಲ್ಲ. ಇದೇ ಒಂದು ದುರಂತ.
ವಿಶ್ವಸಂಸ್ಥೆಯನ್ನು ವಿಶ್ವದ ನಿಜವಾದ ಪ್ರಾತಿನಿಽಕ ಸಂಸ್ಥೆಯನ್ನಾಗಿ ಮಾಡುವ ದಿಸೆಯಲ್ಲಿ ಭದ್ರತಾ ಮಂಡಳಿಯ ಸದಸ್ಯ ಬಲವನ್ನು ಹತ್ತಕ್ಕೆ ಏರಿಸಬೇಕೆಂಬ ಸಲಹೆ ಮತ್ತೆ ಇದೀಗ ಕೇಳಿಬಂದಿದೆ. ಈಗಿನ ಐದು ದೇಶಗಳ ಜೊತೆಗೆ ಜರ್ಮನಿ, ಜಪಾನ್‌ಗೆ ತಲಾ ಒಂದೊಂದು ಸ್ಥಾನ ಮತ್ತು ಉಳಿದ ಮೂರು ಸ್ಥಾನಗಳಲ್ಲಿ ಭಾರತಕ್ಕೆ ಒಂದು ಮತ್ತು ಆಫ್ರಿಕಾ ಹಾಗೂ ಲ್ಯಾಟಿನ್ ಅಮೆರಿಕ ದೇಶಗಳಿಗೆ ತಲಾ ಒಂದು ಸ್ಥಾನ ನೀಡಬಹುದೆಂಬ ವಾದ ಕೇಳಿಬಂದಿದೆ. ಇದೀಗ ನಡೆಯುತ್ತಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಸಂದರ್ಭದಲ್ಲಿ ಫ್ರಾನ್ಸ್ ಅಧ್ಯಕ್ಷ ಇಮಾನ್ಯುಯಲ್ ಮೆಕ್ರಾನ್ ಈ ಸಲಹೆಯನ್ನು ಪುನರುಚ್ಚರಿಸಿದ್ದಾರೆ. ಅಮೆರಿಕ ಕೂಡ ಈಗ ವಿಶ್ವಸಂಸ್ಥೆ ಸುಧಾರಣೆಗೆ ಒಲವು ತೋರಿದೆ. ಭಾರತಕ್ಕೆ ಶಾಶ್ವತ ಸದಸ್ಯತ್ವ ನೀಡುವ ವಿಚಾರದಲ್ಲಿ ಅಮೆರಿಕ ಮತ್ತು ಫ್ರಾನ್ಸ್ ಬೆಂಬಲ ವ್ಯಕ್ತಪಡಿಸಿವೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೂ ಈ ಬಗ್ಗೆ ಒತ್ತಾಯ ತರುತ್ತಲೇ ಇದ್ದಾರೆ. ವಿಶ್ವಸಂಸ್ಥೆ ಸುಧಾರಣೆಯ ಆಗ್ರಹ ಬಹಳ ವರ್ಷಗಳಿಂದ ಕೇಳಿಬರುತ್ತಿದೆ. ಆದರೆ ಬದಲಾವಣೆ ಮಾತ್ರ ಆಗುತ್ತಿಲ್ಲ. ಈ ವಿಚಾರದಲ್ಲಿ ವಿಶ್ವಸಂಸ್ಥೆಯ ಸದಸ್ಯ ದೇಶಗಳು ಒಟ್ಟಾಗಿ ಇಚ್ಛಾಶಕ್ತಿ ಪ್ರದರ್ಶಿಸಬೇಕಿದೆ.
ಮೈಸೂರು: ನಗರದ ಅಲ್ ಅನ್ಸಾರ್ ಆಸ್ಪತ್ರೆಯ ವೈದ್ಯರೊಬ್ಬರ ಮೇಲೆ ದುಷ್ಕರ್ಮಿಗಳು ಬುಧವಾರ ತಡರಾತ್ರಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಡಾ.…
' ಗ್ರೇಸ್' ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ…
ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…
ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಮಂಡ್ಯ ನಗರದಲ್ಲಿನ ವಿದ್ಯುತ್ ದೀಪಾಲಂಕಾರಕ್ಕೆ ಕೃಷಿ ಸಚಿವರು ಹಾಗೂ…
ಕೇರಳ ಮೂಲದ ಮಾಸ್ಟರ್ ಮೈಂಡ್ ಸೇರಿದಂತೆ 12 ಆರೋಪಿಗಳ ಬಂಧನ; ಮತ್ತೊಂದು ಮೋಸದ ಜಾಲ ಬಯಲಿಗೆಳೆದ ಕೊಡಗು ಜಿಲ್ಲಾ ಪೊಲೀಸರು…
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಜನವರಿ…