ಸಂಪಾದಕೀಯ

ಇರಾನ್ ಪರಮಾಣು ಸ್ಥಾವರಗಳ ಮೇಲೆ ಇಸ್ರೇಲ್ ದಾಳಿ ಭೀತಿ

ಡಿ.ವಿ.ರಾಜಶೇಖರ
ಯಾವುದೇ ಗಳಿಗೆಯಲ್ಲಿ ಇರಾನ್ ಮೇಲೆ ಇಸ್ರೇಲ್ ಮಿಲಿಟರಿ ದಾಳಿ ನಡೆಸಬಹುದು. ಮೂರು ದಿನಗಳ ಹಿಂದೆ ಇಸ್ರೇಲ್ ಮೇಲೆ ಇರಾನ್ ನಡೆಸಿದ ಕ್ಷಿಪಣಿ ದಾಳಿಗೆ ಪ್ರತೀಕಾರವಾಗಿ ಈ ದಾಳಿ ನಡೆಸುವ ಸಂಭವವಿದೆ. ಈ ದಾಳಿ ಇರಾನ್ ಪರಮಾಣು ಸ್ಥಾವರಗಳ ಮೇಲೆ ನಡೆಯಬಹುದು ಎಂಬ ಭೀತಿ ಎಲ್ಲ ಕಡೆ ಕಾಣುತ್ತಿದೆ. ಪರಮಾಣು ಸ್ಥಾವರಗಳ ಮೇಲೆ ಕ್ಷಿಪಣಿ ದಾಳಿ ಮಾಡಕೂಡದೆಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಇಸ್ರೇಲನ್ನು ಒತ್ತಾಯಿಸಿದ್ದಾರೆ. ಪೆಟ್ರೋಲಿಯಂ ಸಂಸ್ಕರಣ ಸ್ಥಾವರಗಳ ಮೇಲೆ ದಾಳಿ ನಡೆಸಬೇಕೇ ಅಥವಾ ಬೇರೆ ಕಡೆ ದಾಳಿ ನಡೆಸಬೇಕೇ ಎಂಬುದನ್ನು ನಿರ್ಧರಿಸಲು ಇಸ್ರೇಲ್ ಸ್ವತಂತ್ರವಾಗಿದೆ ಎಂದು ಬೈಡನ್ ಹೇಳಿದ್ದಾರೆ.

ಅಂದರೆ ಇರಾನ್ ಮೇಲೆ ಇಸ್ರೇಲ್ ಕಿಪಣಿ ದಾಳಿ ನಡೆಸುವುದು ಖಚಿತ ಎಂದಾಯಿತು. ಯಾವಾಗ ಮತ್ತು ಎಷ್ಟು ಪ್ರಮಾಣದಲ್ಲಿದಾಳಿನಡೆಸಬಹುದು ಎನ್ನುವುದು ಸದ್ಯಕ್ಕೆ ಊಹೆಗೆ ಬಿಟ್ಟ ವಿಚಾರ. ಇರಾನ್ ಮೇಲೆ ದಾಳಿ ನಡೆಸಲು ಇಸ್ರೇಲ್ ಈಗಾಗಲೇ ಸಿದ್ಧತೆ ನಡೆಸಿದೆ. ಆ ಸಂಬಂಧವಾಗಿ ಪ್ರಧಾನಿ ನೆತಾನ್ಯಹು ಮತ್ತು ಮಿಲಿಟರಿ ಕಮಾಂಡರುಗಳ ನಡುವೆ ಮಾತುಕತೆ ನಡೆದಿದೆ. ಯುದ್ಧಾಸ್ತ್ರಗಳ ವಿಚಾರದಲ್ಲಿ ಇಸ್ರೇಲ್ ಬಲಿಷ್ಠವಾಗಿದೆ. ಇಸ್ರೇಲ್ ಬಳಿ ಇರುವಂಥ ಆಧುನಿಕ ಅಸ್ತ್ರಗಳು ಇರಾನ್‌ನಲ್ಲಿ ಇಲ್ಲದಿರಬಹುದು. ಆದರೆ ಸಾಕಷ್ಟು ಹಾನಿ ಮಾಡಬಹುದಾದಂಥ ಯುದ್ಧಾಸ್ತ್ರಗಳು ಇರಾನ್ ಬಳಿ ಇವೆ. ಯುದ್ಧ ಆರಂಭವಾದರೆ ಇರಾನ್‌ನಷ್ಟೇ ಹಾನಿಯನ್ನು ಇಸ್ರೇಲ್ ಎದುರಿಸಬೇಕಾಗಿ ಬರಬಹುದು. ಇಸ್ರೇಲ್‌ಗೆ ಅಮೆರಿಕ ಬೆಂಬಲವಾಗಿ ನಿಂತರೆ ಇರಾನ್‌ಗೆ ನಾಲ್ಕು ದೇಶಗಳಲ್ಲಿನ ಉಗ್ರವಾದಿ ಸಂಘಟನೆಗಳು ಬೆಂಬಲವಾಗಿ ನಿಲ್ಲಲಿವೆ. ಜೊತೆಗೆ ಇಸ್ರೇಲ್ ಮುಂದೆಯೂ ಸತತವಾಗಿ ಹಿಂಸೆಯನ್ನು, ಅಸ್ಥಿರತೆಯನ್ನು ಎದುರಿಸಬೇಕಾಗುತ್ತದೆ. ಇಸ್ರೇಲ್‌ನ ಮುಂದಿನ ಜನಾಂಗ ನೆಮ್ಮದಿಯಿಂದ ಬದುಕಬೇಕಾದರೆ ಯುದ್ದಕ್ಕಿಂತ ಸಂಬಂಧಿಸಿದವರ ಜೊತೆ ಒಂದು ರಾಜಕೀಯ ಒಪ್ಪಂದ ಮಾಡಿಕೊಳ್ಳುವುದು ಸರಿಯಾದ ದಾರಿ. ಆದರೆ ಇಸ್ರೇಲ್ ಪ್ರಧಾನಿ ನೆತಾನ್ಯಹು ಯುದ್ಧದಿಂದ ನೆಮ್ಮದಿ ಪಡೆಯಬಹುದು ಎಂದು ತಿಳಿದಿದ್ದಾರೆ.

ಹಮಾಸ್ ಉಗ್ರವಾದಿಗಳು ದಾಳಿ ನಡೆಸಿ 1,200ಕ್ಕೆ ಹೆಚ್ಚು ಇಸ್ರೇಲ್ ಜನರ ಹತ್ಯೆಗೆ ಕಾರಣವಾದ ಘಟನೆ ಸಂಭವಿಸಿ ಇದೇ ತಿಂಗಳ 7ಕ್ಕೆ ಒಂದು ವರ್ಷ ಆಗಲಿದೆ. ಸಾವಿರಕ್ಕೂ ಹೆಚ್ಚು ಮಂದಿಯನ್ನು ಒತ್ತೆಯಾಳುಗಳನ್ನಾಗಿ ಹಮಾಸ್ ಇಟ್ಟುಕೊಂಡಿದೆ. ಒಂದು ವರ್ಷ ಕಾಲ ಮಿಲಿಟರಿ ಕಾರ್ಯಾಚರಣೆ ನಡೆಸಿದರೂ ಒತ್ತೆಯಾಳುಗಳ ಬಿಡುಗಡೆ ಸಾಧ್ಯವಾಗಿಲ್ಲ. ಹಮಾಸ್ ಉಗ್ರವಾದಿ ಜಾಲವನ್ನು ನಿರ್ಮಾಲ ಮಾಡುವ ಯತ್ನವಾಗಿ ಇಸ್ರೇಲ್ ಸತತವಾಗಿ ದಾಳಿ ನಡೆಸುತ್ತಿದೆ. ಈ ದಾಳಿಗಳಲ್ಲಿ ಸಹಸ್ರಾರು ಮಂದಿ ಸತ್ತು ಲಕ್ಷಾಂತರ ಪ್ಯಾಲೆಸ್ಟೇನ್ ಜನರು ನಿರಾಶ್ರಿತರಾಗಿದ್ದಾರೆ. ಈ ಕಾರ್ಯಾಚರಣೆ ಮುಂದುವರಿಯು ತಿರುವಾಗಲೆ ಇಸ್ರೇಲ್ ಸೇನೆ ನೆರೆಯ ಲೆಬನಾನ್ ಗಡಿಯಲ್ಲಿರುವ ಹಮಾಸ್ ಬೆಂಬಲಿಗ ಹೆಜಬುಲ್ಲಾ ಉಗ್ರರನ್ನು ಸದೆಬಡಿಯಲುಕ್ಷಿಪಣಿ ದಾಳಿ ಆರಂಭಿಸಿದೆ. ಈ ದಾಳಿಯಲ್ಲಿಯೂ ಸಾವಿರಾರು ಜನರು ಸತ್ತಿದ್ದಾರೆ ಮತ್ತು ಲಕ್ಷಾಂತರ ಲೆಬನಾನ್ ಜನರು ನಿರಾಶ್ರಿತರಾಗಿದ್ದಾರೆ. ಇಸ್ರೇಲ್ ಬಾಂಬ್ ದಾಳಿಯಿಂದಾಗಿ ಲೆಬನಾನ್ ಜನರು ನೆರೆಯ ಸಿರಿಯಾಕ್ಕೆ ವಲಸೆ ಹೋಗುತ್ತಿದ್ದಾರೆ. ಸಿರಿಯಾದಲ್ಲಿನ ಹೆಜಬುಲ್ಲಾ ಉಗ್ರರ ನೆಲೆಗಳ ಮೇಲೆ ಇಸ್ರೇಲ್ ಮಿಲಿಟರಿ ದಾಳಿ ನಡೆಸಿದೆ. ಪ್ಯಾಲೆಸ್ಟೇನ್ ಜನರ ಹೋರಾಟಕ್ಕೆ ಬೆಂಬಲವಾಗಿ ಯಮನ್‌ನ ಹೌತಿ ಬಂಡುಕೋರರು ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ ನಡೆಸುತ್ತಿದ್ದಾರೆ. ಇಸ್ರೇಲ್ ಕಡೆ ಹೋಗುವ ಸರಕು ಸಾಗಣೆ ಹಡಗುಗಳ ಮೇಲೆ ಕೂಡ ಹೌತಿ ಬಂಡುಕೋರರು ದಾಳಿ ನಡೆಸುತ್ತಿದ್ದಾರೆ. ಇರಾಕ್ ಕೂಡ ಪ್ಯಾಲೆಸ್ಟೇನ್ ಜನರ ಹೋರಾಟಕ್ಕೆ ಬೆಂಬಲವಾಗಿ ನಿಂತಿದೆ. ಈ ಎಲ್ಲ ದೇಶಗಳು ಮೂಲಭೂತವಾಗಿ ಷಿಯಾ ಮುಸ್ಲಿಮರ ದೇಶಗಳಾಗಿವೆ. ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಸೌದಿ ಅರೇಬಿಯಾ, ಈಜಿಪ್ಟ್, ಕತಾರ್, ಕುವೈತ್, ಯುಎಇ ಮುಂತಾದ ಸುನ್ನಿ ಮುಸ್ಲಿಮರ ಪ್ರಾಬಲ್ಯದ ದೇಶಗಳು ಇರಾನ್ ಬೆಂಬಲಕ್ಕೆ ನಿಲ್ಲುತ್ತವೆಯೇ ಇಲ್ಲವೇ ಎಂಬ ವಿಚಾರದಲ್ಲಿ ಸ್ಪಷ್ಟತೆ ಕಾಣುತ್ತಿಲ್ಲ. ಸುನ್ನಿ ಪ್ರಾಬಲ್ಯದ ದೇಶಗಳು ಇತ್ತೀಚಿನ ವರ್ಷಗಳಲ್ಲಿ ಇಸ್ರೇಲ್ ಪರವಾದ ಧೋರಣೆ ತಳೆದಿರುವುದು ಈಗ ಗುಟ್ಟಾಗಿ ಉಳಿದಿಲ್ಲ. ಇಸ್ರೇಲ್-ಪ್ಯಾಲೆಸ್ಟೇನ್ ವಿವಾದವನ್ನು ಬಗೆಹರಿಸಲು ಈ ದೇಶಗಳು ಸಾಕಷ್ಟು ಪ್ರಯತ್ನಿಸಿವೆಯಾದರೂ ಯುದ್ಧ ಸಂಭವಿಸಿದ ಸಂದರ್ಭದಲ್ಲಿ ಯಾವ ನಿಲುವು ತಳೆಯುತ್ತವೆ ಎನ್ನುವುದು ತೀವ್ರ ಕುತೂಹಲಕಾರಿ.

ಎಲ್ಲೆಲ್ಲಿ ಪರಮಾಣು ಸ್ಥಾವರಗಳಿವೆ, ತೈಲಾಗಾರಗಳಿವೆ, ಮಿಲಿಟರಿ ಸಂಗ್ರಹಾಲಯಗಳಿವೆ ಎಂಬ ಮಾಹಿತಿ ಇಸ್ರೇಲ್ ಬಳಿ ಇದೆ. ಇರಾನ್‌ನಲ್ಲಿರುವ ಕ್ಷಿಪಣಿಗಳಾವುವು, ಇತರ ರಹಸ್ಯ ಅಸ್ತ್ರಗಳಾವುವು ಎಂಬ ಬಗ್ಗೆ ಗೂಢಚಾರ ಸಂಸ್ಥೆ ಮೊಸಾದ್ ಹತ್ತಾರು ವರ್ಷಗಳಿಂದ ಮಾಹಿತಿಗಳನ್ನು ಸಂಗ್ರಹಿಸಿದೆ. ಎಂಥ ದಾಳಿ ಯಾವ ಪ್ರಮಾಣದಲ್ಲಿ ಇರಬೇಕು ಎನ್ನುವುದನ್ನು ಈಗಾಗಲೇ ಇಸ್ರೇಲ್ ನಿರ್ಧರಿಸಿದೆ ಎಂಬ ಮಾಹಿತಿ ಬಹಿರಂಗವಾಗಿದೆ. ಪರಮಾಣು ಸ್ಥಾವರಗಳ ಮೇಲೆ ಅಥವಾ ತೈಲ ಸ್ಥಾವರಗಳ ಮೇಲೆ ದಾಳಿ ನಡೆಯಲಿದ್ದು, ಅದು ವಿಶ್ವದ ಮೇಲೆ ಕೆಟ್ಟ ಪರಿಣಾಮ ಬೀರುವುದು ಖಚಿತ. ಪರಮಾಣು ಸ್ಥಾವರಗಳ ಮೇಲೆ ದಾಳಿ ನಡೆದರೆ ವಿಕಿರಣಗಳಿಂದಾಗಿ ಅಪಾರ ಪ್ರಮಾಣದಲ್ಲಿ ಸಾವು-ನೋವು ಸಂಭವಿಸಿ ಜಗತ್ತಿಗೆ ಸಮಸ್ಯೆ ಎದುರಾಗಬಹುದು. ತೈಲಸ್ಥಾವರಗಳ ಮೇಲೆ ದಾಳಿನಡೆದರೆ ಸಹಜವಾಗಿಯೇ ತೈಲದ ಬೆಲೆಗಳು ಏರಲಿವೆ. ವಿಶ್ವದ ಶೇ.30ರಷ್ಟು ತೈಲ ಬೇಡಿಕೆಯನ್ನು ಇರಾನ್ ಪೂರೈಸುತ್ತಿದೆ. ತೈಲ ಘಟಕಗಳ ಮೇಲೆ ದಾಳಿ ನಡೆದರೆ ಸಹಜವಾಗಿಯೇ ತೈಲಗಳ ಬೆಲೆ ಏರಿಕೆಯಷ್ಟೇ ಅಲ್ಲ ಇತರ ಅಗತ್ಯ ವಸ್ತುಗಳ ಬೆಲೆಗಳೂ ಏರುತ್ತವೆ. ಆರ್ಥಿಕ ತುರ್ತು ಪರಿಸ್ಥಿತಿ ನಿರ್ಮಾಣವಾಗಬಹುದು. ಆದರೆ ಈ ಎಲ್ಲ ಕೆಟ್ಟಪರಿಣಾಮಗಳ ಬಗ್ಗೆ ಯಾವುದೇ ದೇಶ ಅಷ್ಟು ತಲೆಕೆಡಿಸಿಕೊಂಡಿಲ್ಲ. ಏಕೆಂದರೆ ಇಸ್ರೇಲ್-ಇರಾನ್ ವೈಮನಸ್ಯ ಮುಗಿಯದ ಕಥೆಯಾಗಿರುವುದೇ ಆಗಿದೆ. ಮಿತ್ರ ದೇಶವಾಗಿರುವ ಅಮೆರಿಕ ಮಧ್ಯಪ್ರವೇಶ ಮಾಡಬಹುದಾದ ಸಾಮರ್ಥ್ಯ ಪಡೆದಿದೆ. ಆದರೆ ಅಮೆರಿಕದಲ್ಲಿ ಈಗ ಚುನಾವಣೆ ಸಮಯ. ಅಮೆರಿಕದಲ್ಲಿ ಯಹೂದಿಗಳು ಪ್ರಭಾವಶಾಲಿಗಳು, ಚುನಾವಣೆ ಗೆಲ್ಲಲು ಅವರ ಬೆಂಬಲ ಮುಖ್ಯ. ಈ ಸಂದರ್ಭದಲ್ಲಿ ಇಸ್ರೇಲ್ ವಿರುದ್ಧ ಮಾತನಾಡುವುದು ರಾಜಕೀಯವಾಗಿ ಆತ್ಮಹತ್ಯೆ ಮಾಡಿಕೊಂಡಂತೆಯೇ ಹೀಗಾಗಿಯೇ ಡೆಮಾಕ್ರಟಿಕ್ ಪಕ್ಷ ಇಸ್ರೇಲ್ ಪರವಾಗಿ ನಿಂತಿದೆ. ಪಕದ ನಾಯಕರು ಮೇಲ್ನೋಟಕ್ಕೆ ಮಾತ್ರ ಗಾಜಾ, ಲೆಬನಾನ್ ಹಿಂಸಾಚಾರವನ್ನು ಖಂಡಿಸುತ್ತಿದ್ದಾರೆ. ಇಸ್ರೇಲ್ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದ ನಂತರವಂತೂ ಅಮೆರಿಕ ಬಹಿರಂಗವಾಗಿಯೇ ಇರಾನ್ ಕ್ರಮವನ್ನು ಖಂಡಿಸುತ್ತಿದೆ. ಪರೋಕ್ಷವಾಗಿ ಇಸ್ರೇಲನ್ನು ಪ್ರೋತ್ಸಾಹಿಸುತ್ತಿದೆ. ಇರಾನ್ ಮೇಲೆ ಇಸ್ರೇಲ್ ದಾಳಿ ಅನಿವಾರ್ಯ ಎನ್ನುವಂತೆ ಅಧ್ಯಕ್ಷ ಜೋ ಬೈಡನ್ ಮಾತನಾಡುತ್ತಿದ್ದಾರೆ. ಮತ್ತೊಂದು ಬಲಿಷ್ಠ ದೇಶ ರಷ್ಯಾ ಈಗ ಉಕ್ರೇನ್ ಯುದ್ಧದಲ್ಲಿ ಸಿಕ್ಕಿಹಾಕಿಕೊಂಡಿದೆ. ಅದು ಈ ವಿವಾದದಲ್ಲಿ ಮಧ್ಯಪ್ರವೇಶ ಮಾಡುವ ಸ್ಥಿತಿಯಲ್ಲಿಲ್ಲ. ಯೂರೋಪ್‌ನ ಬಲಿಷ್ಠ ದೇಶಗಳಾದ ಜರ್ಮನಿ ಮತ್ತು ಫ್ರಾನ್ಸ್ ಈ ಬಿಕ್ಕಟ್ಟಿನಲ್ಲಿ ತಲೆಹಾಕಲು ಮುಂದೆಬಂದಿಲ್ಲ ಏಕೆಂದರೆ ಅಮೆರಿಕ ಮತ್ತು ಇಸ್ರೇಲ್ ಮಿತ್ರ ದೇಶಗಳು, ಪರಿಸ್ಥಿತಿ ಕೈಮೀರದಂತೆ ಸಂಯಮ ವಹಿಸಿ ಎಂದಷ್ಟೇ ಹೇಳಿ ಕೈ ತೊಳೆದುಕೊಂಡಿವೆ. ಹೀಗಾಗಿ ಇಸ್ರೇಲನ್ನು ತಡೆಯುವವರೇ ಯಾರೂ ಇಲ್ಲದಂಥ ಸ್ಥಿತಿ ನಿರ್ಮಾಣವಾಗಿದೆ.

ಕೆಲವು ದಿನಗಳ ಹಿಂದೆ ತಾನು ನಡೆಸಿದ ಕ್ಷಿಪಣಿ ದಾಳಿಗೆ ಪ್ರತೀಕಾರ ಕ್ರಮವಾಗಿ ಇಸ್ರೇಲ್ ದಾಳಿ ನಡೆಸಿದರೆ ಅದಕ್ಕೆ ಪ್ರತಿಕ್ರಿಯೆಯಾಗಿ ಪ್ರತಿದಾಳಿ ನಡೆಸಬೇಕಾಗುತ್ತದೆ ಎಂಬುದು ಇರಾನ್ ಅಧ್ಯಕ್ಷ ಮಸೂದ್ ಪೆಜಸ್ಥಿಯಾನ್ ನಿಲುವು. ಆಧುನಿಕ ತಂತ್ರಜ್ಞಾನ ಆಧಾರಿತ ಮಿಲಿಟರಿ ಅಸ್ತ್ರಗಳನ್ನು ಬಳಸಲು ಇರಾನ್ ಅಂಜುವುದಿಲ್ಲ. ಯುದ್ಧ ತಮಗೆ ಬೇಕಿಲ್ಲ. ಆದರೆ ಇಸ್ರೇಲ್ ಯುದ್ಧಕ್ಕಿಳಿದರೆ ಇರಾನ್ ಕೂಡ ಯುದ್ಧಕ್ಕಿಳಿಯುತ್ತದೆ ಎಂದು ಮಸೂದ್ ಎಚ್ಚರಿಸಿದ್ದಾರೆ. ಇರಾನ್ ಕ್ಷಿಪಣಿ ದಾಳಿ ನಡೆಸಲು ಮುಖ್ಯಕಾರಣ ಹಮಾಸ್ ನಾಯಕ ಇಸ್ಲಾಯಿಲ್ ಹನಿಯಾ ಮತ್ತು ಹೆಜಬುಲ್ಲ ಮುಖ್ಯಸ್ಥ ಹಸನ್ ನಸರುಲ್ಲಾ ಹಾಗೂ ಈ ಸಂಘಟನೆಗಳ ಕಮಾಂಡರುಗಳನ್ನು ಹತ್ಯೆಮಾಡಿರುವುದೇ ಆಗಿದೆ. ಇಸ್ರೇಲ್‌ನ ಕುಖ್ಯಾತ ಗೂಢಚರ್ಯೆ ಸಂಸ್ಥೆ ಮೊಸಾದ್ ಈ ಹತ್ಯೆಗಳ ಹಿಂದೆ ಇರುವಂತಿದೆ. ಈ ಇಬ್ಬರೂ ನಾಯಕರ ಬೆಂಗಾವಲು ಪಡೆಗಳಿಂದಲೇ ಮಾಹಿತಿ ಪಡೆದು ಅವರನ್ನು ಕೊಲ್ಲಲಾಗಿದೆ ಎನ್ನುವ ಮಾಹಿತಿ ಇದೀಗ ಬಂದಿದೆ. ಇರಾನ್‌ನ ಪರಮಾಣು ತಂತ್ರಜ್ಞಾನ ಅಭಿವೃದ್ಧಿ ಕುರಿತ ಮಾಹಿತಿಯನ್ನು ಸ್ಥಾವರಗಳಲ್ಲಿ ಕೆಲಸ ಮಾಡುತ್ತಿದ್ದವರಿಂದಲೇ ಮೊಸಾದ್ ಗೂಢಚರ್ಯೆ ಸಂಸ್ಥೆ ಪಡೆದಿತ್ತು ಎಂಬ ವಿಚಾರವನ್ನು ಇದೀಗ ಇರಾನ್‌ನ ಮಾಜಿ ಅಧ್ಯಕ್ಷ ಮಹಮ್ಮದ್ ಅಹಮದ್‌ ದಿನೇಜಾದ್‌ ಬಹಿರಂಗ ಮಾಡಿದ್ದಾರೆ.
‘ಅಕ್ಟೋಬರ್ 7ರ ಘಟನೆಗೆ ಇಸ್ರೇಲ್‌ನ ವಿಸ್ತರಣಾ ನೀತಿಯೇ ಕಾರಣ. ಕಳೆದ 75 ವರ್ಷಗಳಿಂದಲೂ ಪ್ಯಾಲೆಸ್ಟೇನ್ ಪ್ರದೇಶವನ್ನು ಇಸ್ರೇಲ್ ಅತಿಕ್ರಮಣ ಮಾಡುತ್ತ ನೆರೆಯ ದೇಶಗಳ ಯುಹೂದಿಗಳಿಗೆ ನೆಲೆ ಕಲ್ಪಿಸುತ್ತಿದೆ. ಸ್ವತಂತ್ರ ಪ್ಯಾಲೆಸ್ಟೇನ್ ದೇಶ ರಚನೆಗೆ ಇಸ್ರೇಲ್ ನಾಯಕರು ಗಂಭೀರ ಯತ್ನ ನಡೆಸಲೇ ಇಲ್ಲ. ಪ್ಯಾಲೆಸ್ಟೇನ್ ಜನರು ಹತಾಶರಾಗಿ ಉಗ್ರರಾಗಿದ್ದಾರೆ’ ಎಂದು ಇರಾನ್ ನಾಯಕರು ಸಮರ್ಥಿಸಿಕೊಂಡಿದ್ದಾರೆ.

ಹಮಾಸ್‌ ಉಗ್ರವಾದಿಗಳು ದಾಳಿ ನಡೆಸಿ 1,200ಕ್ಕೆ ಹೆಚ್ಚು ಇಸ್ರೇಲ್ ಜನರ ಹತ್ಯೆಗೆ ಕಾರಣವಾದ ಘಟನೆ ಸಂಭವಿಸಿ ಇದೇ ತಿಂಗಳ 7ಕ್ಕೆ ಒಂದು ವರ್ಷ ಆಗಲಿದೆ. ಸಾವಿರಕ್ಕೂ ಹೆಚ್ಚು ಮಂದಿಯನ್ನು ಒತ್ತೆಯಾಳುಗಳನ್ನಾಗಿ ಹಮಾಸ್ ಇಟ್ಟುಕೊಂಡಿದೆ. ಒಂದು ವರ್ಷ ಕಾಲ ಮಿಲಿಟರಿ ಕಾರ್ಯಾಚರಣೆ ನಡೆಸಿದರೂ ಒತ್ತೆಯಾಳುಗಳ ಬಿಡುಗಡೆ ಸಾಧ್ಯವಾಗಿಲ್ಲ. ಹಮಾಸ್ ಉಗ್ರವಾದಿ ಜಾಲವನ್ನು ನಿರ್ಮೂಲನೆ ಮಾಡುವ ಯತ್ನವಾಗಿ ಇಸ್ರೇಲ್ ಸತತವಾಗಿ ದಾಳಿ ನಡೆಸುತ್ತಿದೆ. ಈ ದಾಳಿಗಳಲ್ಲಿ ಸಹಸ್ರಾರು ಮಂದಿ ಸತ್ತು ಲಕ್ಷಾಂತರ ಪ್ಯಾಲೆಸ್ಟೇನ್ ಜನರು ನಿರಾಶ್ರಿತರಾಗಿದ್ದಾರೆ. ಈ ಕಾರ್ಯಾಚರಣೆ ಮುಂದುವರಿಯುತ್ತಿರುವಾಗಲೇ ಇಸ್ರೇಲ್ ಸೇನೆ ನೆರೆಯ ಲೆಬನಾನ್ ಗಡಿಯಲ್ಲಿರುವ ಹಮಾಸ್ ಬೆಂಬಲಿಗ ಹೆಜಬುಲ್ಲಾ ಉಗ್ರರನ್ನು ಸದೆಬಡಿಯಲು ಕ್ಷಿಪಣಿ ದಾಳಿ ಆರಂಭಿಸಿದೆ.

 

 

ಆಂದೋಲನ ಡೆಸ್ಕ್

Share
Published by
ಆಂದೋಲನ ಡೆಸ್ಕ್

Recent Posts

ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…

4 hours ago

ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ – ಡಾ. ಪಿ ಶಿವರಾಜ್

ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…

5 hours ago

ನಗರದ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ: ಜಿ ಟಿ ದೇವೇಗೌಡ

ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…

6 hours ago

ಹನೂರು: ಗುಂಡಿಮಯವಾದ ರಸ್ತೆ, ಸಾಮಾಜಿಕ ಜಾಲತಾಣ ಮೂಲಕ ಯುವಕ ವ್ಯಂಗ್ಯ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…

6 hours ago

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

7 hours ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

8 hours ago