ಸಂಪಾದಕೀಯ

‘ಸುಪ್ರೀಂ’ ಆಜ್ಞೆ ಪಾಲನೆಗೆ ನಡೆಯಬೇಕಿದೆ ಕಸರತ್ತು

ದೆಹಲಿ ಕಣೋಟ 

ಶಿವಾಜಿ ಗಣೇಶನ್

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಒಳಮೀಸಲಾತಿ ವರ್ಗೀ ಶಿಕರಣಕ್ಕೆ ಸಂವಿಧಾನದಲ್ಲಿದ್ದ ಅಡಚಣೆಯನ್ನು ನಿವಾರಿಸಿರುವ ಸುಪ್ರೀಂ ಕೋರ್ಟ್ ತೀರ್ಪು ಈಗ ದೇಶದಾದ್ಯಂತ ಚರ್ಚೆಯಾಗುತ್ತಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಲ್ಲಿ ಈ ತೀರ್ಪಿಗೆ ಎಲ್ಲಿಯೂ ವಿರೋಧ ವ್ಯಕ್ತವಾಗಿಲ್ಲ. ಎಲ್ಲೆಡೆಯೂ ತೀರ್ಪಿಗೆ ಸ್ವಾಗತ ಮತ್ತು ಸಂಭ್ರಮ ಕಾಣುತ್ತಿರುವ ಅಪರೂಪದ ಸಂಗತಿ, ಒಳ ಮೀಸಲಾತಿಗೇನೋ ಸುಗಮವಾಯಿತು. ಆದರೆ ಮೀಸಲಾತಿಯ ಹಂಚಿಕೆಯ ಕಸರತ್ತು ಮಾತ್ರ ಸರ್ಕಾರಕ್ಕೆ ತಲೆ ಬಿಸಿ ಉಂಟು ಮಾಡುವುದು ಗ್ಯಾರಂಟಿ. ಹಾಗಂತ ಸಮಸ್ಯೆಯನ್ನು ಇನ್ನು ಮುಂದೆ ಹತ್ತಾರು ಸಬೂಬು ನೀಡಿ ಮುಂದುವರಿಸಲಾಗದು, ಸುಪ್ರೀಂ ಕೋರ್ಟ್ ನೀಡಿರುವ ಈ ತೀರ್ಪನ್ನು ಸಂವಿಧಾನದಲ್ಲಿ ಇರುವ ಮೀಸಲಾತಿಗೆ ಸಂಬಂಧಿಸಿದ ಹಲವಾರು ವಿಧಿಗಳು, ಸಂಸತ್ ಮತ್ತು ವಿಧಾನಸಭೆಗಳಲ್ಲಿ ಮಾಡಿದ ಕಾಯ್ದೆಗಳನ್ನು ಮತ್ತು ದೇಶದ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಯನ್ನು ಮಾನದಂಡವನ್ನಾಗಿಟ್ಟು ಕೊಂಡು ಹಲವು ಕ್ಷೇತ್ರಗಳ ತಜ್ಞರು ವ್ಯಾಖ್ಯಾನಿಸುತ್ತಿದ್ದಾರೆ.

ಸಂವಿಧಾನದ ಕಲಂ 341ನೇ ವಿಧಿಯ ಅನ್ವಯ ಮೀಸಲಾತಿ ಬಗೆಗೆ ಯಾವುದೇ ನಿರ್ಧಾರ ಕೈಗೊಳ್ಳಲು ಸಂಸತ್ತಿಗೆ ಮಾತ್ರ ಅಧಿಕಾರವಿದೆ. ಈ ವಿಷಯದಲ್ಲಿ ರಾಜ್ಯ ಸರ್ಕಾರಗಳ ಮತ್ತು ರಾಜ್ಯ ವಿಧಾನಸಭೆಗಳ ಪಾತ್ರವೇನೂ ಇಲ್ಲ ಎಂದು ಇದೇ ಸುಪ್ರೀಂ ಕೋರ್ಟ್‌ ಐವರು ನ್ಯಾಯಾಧೀಶರ ಪೀಠ 2004ರಲ್ಲಿ ನೀಡಿದ್ದ ತೀರ್ಪನ್ನು ಈಗ ರದ್ದು ಮಾಡಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ವರ್ಗೀಕರಣವನ್ನು ರಾಜ್ಯ ಸರ್ಕಾರಗಳೇ ಮಾಡಬಹುದು. ಆದರೆ ಹಾಗೆ ಮಾಡುವಾಗ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದಲ್ಲಿರುವ ಉಪಜಾತಿಗಳ ಆರ್ಥಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಪರಿಸ್ಥಿತಿಯನ್ನು ಅಧ್ಯಯನ ಮಾಡಿ ಅದರಿಂದ ದೊರೆಯುವ ದತ್ತಾಂಶದ ಮೇಲೆ ಹಿಂದುಳಿದಿರುವಿಕೆಯನ್ನು ನಿರ್ಧರಿಸಬೇಕಾಗುತ್ತದೆ. ಈ ದತ್ತಾಂಶದ ಮೇಲೆ ಯಾವ ಜಾತಿಯ ಪರಿಸ್ಥಿತಿ ಏನಿದೆ ಎಂದು ಮೀಸಲಾತಿ ಪ್ರಮಾಣವನ್ನು ನಿರ್ಧರಿಸಬೇಕಾಗುತ್ತದೆ ಎನ್ನುವ ಅಂಶ ತೀರ್ಪಿನ ಒಳನೋಟದಲ್ಲಿ ಕಾಣುತ್ತದೆ.

ಸುಮಾರು ಐವತ್ತು ವರ್ಷಗಳಿಂದ ನಡೆದ ಬೀದಿ ಹೋರಾಟ ಮತ್ತು ಕಾನೂನು ಹೋರಾಟಕ್ಕೆ ಈಗ ದೇಶದ ಅತ್ಯುನ್ನತ ನ್ಯಾಯಾಲಯ ತೆರೆ ಎಳೆದಿದೆ. ಈ ತೀರ್ಪನ್ನು ನ್ಯಾಯಾಲಯದ ಮೆಟ್ಟಿಲು ಹತ್ತಿದ್ದ ರಾಜ್ಯಗಳು ಮತ್ತು ಒಳ ಮೀಸಲಾತಿ ಹೋರಾಟದ ಸಮಸ್ಯೆಯನ್ನು ಎದುರಿಸುತ್ತಿದ್ದ ಕರ್ನಾಟಕ ಸ್ವಾಗತಿಸಿವೆ. ಈ ತೀರ್ಪನ್ನು ಚಾಚೂ ತಪ್ಪದೆ ಜಾರಿಗೆ ತರುವುದಾಗಿ ತೆಲಂಗಾಣ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ರೇವಂತ ರೆಡ್ಡಿ ಸರ್ಕಾರದ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಇತ್ತ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಸುಪ್ರೀಂ ಕೋರ್ಟಿನ ತೀರ್ಪನ್ನು ಸ್ವಾಗತಿಸಿ ಈ ಸಂಬಂಧ ಕಾನೂನು ತಜ್ಞರು ಮತ್ತು ಒಳಮೀಸಲಾತಿಗಾಗಿ ಹೋರಾಟ ಮಾಡಿದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಹಾಗೂ ಇತರೆ ನಾಯಕರ ಸಭೆ ಕರೆದು ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದ್ದಾರೆ.

ಸುಪ್ರೀಂ ಕೋರ್ಟಿನ ಈಗಿನ ತೀರ್ಪಿನ ಪ್ರಕಾರ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೆಲವು ಕಾನೂನುಗಳನ್ನು ಮತ್ತು ಅವುಗಳ ಆಧಾರದ ಮೇಲೆ ಕೆಲವು ನಿಯಮಾವಳಿಗಳನ್ನು ರಚಿಸಬೇಕಾಗುತ್ತದೆ. ಹೀಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ವರ್ಗೀಕರಣ ಪ್ರಕ್ರಿಯೆಯನ್ನು ಆರಂಭಿಸಬಹುದು. ಆದರೆ ಪ್ರಶ್ನೆ ಇರುವುದು ಎಲ್ಲಿಂದ ಮತ್ತು ಹೇಗೆ ಎನ್ನುವುದು. ಉದಾಹರಣೆಗೆ ಈ ಹಿಂದೆ ಕರ್ನಾಟಕದ ಬಿಜೆಪಿ ಸರ್ಕಾರವು ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಅಪ್ರಸ್ತುತ ಎಂದು ಅದನ್ನು ತಿರಸ್ಕರಿಸಿ ತನ್ನದೇ ಆದ ಹೊಸ ಸೂತ್ರವೊಂದನ್ನು ತರಾತುರಿಯಲ್ಲಿ ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿ ತನ್ನ ಕೆಲಸ ಮುಗಿಯಿತೆಂದು ಕೈತೊಳೆದುಕೊಂಡಿತ್ತು. ಆದರೆ, ನ್ಯಾ.ಸದಾಶಿವ ಆಯೋಗದವರದಿಯನ್ನು ಈಗ ಮತ್ತೆ ಪರಿಶೀಲನೆಗೆ ತೆಗೆದುಕೊಳ್ಳುವುದರ ಜೊತೆಗೆ ಎಲ್ಲ ಜಾತಿಗಳ ಆರ್ಥಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಸ್ಥಿತಿಗತಿಯ ಗಣತಿ ನಡೆಸಿದ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಜಯಪ್ರಕಾಶ್ ಹೆಗ್ಡೆ ಅವರು ಸಲ್ಲಿಸಿರುವ ಕಾಂತರಾಜು ಆಯೋಗದ ವರದಿಯನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ ಎಂದು ಹೈಕೋರ್ಟಿನ ಹಿರಿಯ ವಕೀಲ ಸಂವಿಧಾನ ವ್ಯಾಖ್ಯಾನದಲ್ಲಿ ಪರಿಣತಿ
ಹೊಂದಿರುವ ಎಚ್.ಡಿ.ಅಮರನಾಥನ್ ಅಭಿಪ್ರಾಯಪಡುತ್ತಾರೆ. ಆದರೆ ರಾಜ್ಯ ಸರ್ಕಾರ ಯಾವ ಮಾನದಂಡವನ್ನು ಅನುಸರಿಸುತ್ತದೆ ಎನ್ನುವುದನ್ನು ಈಗಲೇ ಹೇಳಲು ಕಷ್ಟವಾಗಬಹುದು. ಈ ಪ್ರಕರಣಕ್ಕೆ ಸಂಬಂಧಿಸಿದ ಪಂಜಾಬ್, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಕೂಡ ಹೊಸದಾಗಿ ಮಾಹಿತಿ ಸಂಗ್ರಹಿಸಿ ತೀರ್ಮಾನ ಕೈಗೊಳ್ಳಬೇಕಾಗುತ್ತದೆ.

ಪರಿಶಿಷ್ಟ ಜಾತಿಯ ಒಳಮೀಸಲಾತಿಗೆಂದೇ ನೇಮಕವಾಗಿದ್ದ ನ್ಯಾ.ಎ.ಜೆ.ಸದಾಶಿವ ಆಯೋಗವು ಎಡಗೈ ಸಮುದಾಯಕ್ಕೆ ಶೇ.6, ಬಲಗೈ ಸಮುದಾಯಕ್ಕೆ ಶೇ.5, ಬೋವಿ, ಲಂಬಾಣಿ ಜಾತಿಗಳಿಗೆ ಶೇ.3 ಮತ್ತು ಇತರೆ ಜಾತಿಗಳಿಗೆ ಶೇ.1 ಎಂದು ಶಿಫಾರಸ್ಸು ಮಾಡಿತ್ತು. ಆದರೆ ಈ ಆಯೋಗವು ಮನೆ ಮನೆ ಸಮೀಕ್ಷೆ ನಡೆಸದಿದ್ದರೂ, ಪರಿಶಿಷ್ಟ ಜಾತಿಗಳ ಆರ್ಥಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಪರಿಸ್ಥಿತಿ ಮತ್ತು ಈ ಅಧ್ಯಯನ ಮಾಡುವ ಹೊತ್ತಿಗೆ ಯಾವ ಜಾತಿಗಳಿಗೆ ಮೀಸಲಾತಿಯ ಫಲ ದೊರೆತಿದೆ ಎನ್ನುವ ಪ್ರಮುಖ ಅಂಶವನ್ನು ವಿವಿಧ ಮೂಲಗಳಿಂದ ಸಂಗ್ರಹಿಸಿದ್ದ ಮಾಹಿತಿಯನ್ನು ಪರಿಗಣಿಸಬೇಕಾಗುತ್ತದೆ.

ಒಳ ಮೀಸಲಾತಿಗಾಗಿ ಆಂಧ್ರಪ್ರದೇಶ ಮತ್ತು ಕರ್ನಾಟಕದಲ್ಲಿ ಸುಮಾರು 30 ವರ್ಷಗಳ ಕಾಲ ನಡೆದ ಹೋರಾಟ ಮತ್ತು ವಿರೋಧ ಈಗ ಇತಿಹಾಸ, ವರದಿಯನ್ನು ಜಾರಿಗೆ ತರುವುದಾಗಿ ಎಲ್ಲ ರಾಜಕೀಯ ಪಕ್ಷಗಳ ಸರ್ಕಾರಗಳೂ ಆಶ್ವಾಸನೆ ನೀಡಿದವು. ಆದರೆ ಅದನ್ನು ಜಾರಿಗೆ ತರಲು ಆಗಲಿಲ್ಲ. ಈ ಒಳ ಮೀಸಲಾತಿ ಜಾರಿಯ ಅಧಿಕಾರ ಕೇಂದ್ರ ಮತ್ತು ಸಂಸತ್ತಿಗೆ ಮಾತ್ರ ಇದ್ದ ಕಾರಣ ರಾಜ್ಯ ಸರ್ಕಾರಗಳು ಅಸಹಾಯಕವಾಗಿದ್ದವು. ವರದಿಯನ್ನು ವಿರೋಧಿಸುವ ಜಾತಿಗಳ ವಿರೋಧ ಕಟ್ಟಿಕೊಳ್ಳಲು ಯಾವ ಸರ್ಕಾರವೂ ಮುಂದಾಗಲಿಲ್ಲ ಎನ್ನುವುದು ವಾಸ್ತವ ಸಂಗತಿ.

ಇದೇನೇ ಇದ್ದರೂ ವರ್ಗೀಕರಣ ಮತ್ತು ಒಳಮೀಸಲಾತಿ ಹಂಚಿಕೆಯ ಹೊಣೆಗಾರಿಕೆ ಈಗ ರಾಜ್ಯ ಸರ್ಕಾರಗಳ ಮೇಲೆ ಬಿದ್ದಿದೆ. ಹಿಂದಿನಂತೆ ಈ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಆಗುವುದಿಲ್ಲ. ಈ ಕಾರ್ಯದಲ್ಲಿ ಎಲ್ಲ ಜಾತಿಗಳನ್ನು ತೃಪ್ತಿಪಡಿಸುವ ಕೆಲಸವೂ ಸುಲಭವಲ್ಲ. ಕೇವಲ ಮತಗಳ ಮೇಲೆ ಕಣ್ಣಿಟ್ಟು ತೀರ್ಮಾನ ಕೈಗೊಳ್ಳಬಾರದು. ವಸ್ತುಸ್ಥಿತಿಯನ್ನು ಆಧರಿಸಿ ನಿಜವಾದ ಬಡವರಿಗೆ ಸಿಗಬೇಕಾದ ಮೀಸಲಾತಿಯಂತಹ ಸೌಲಭ್ಯದಿಂದವಂಚನೆ ಆಗದಂತೆ ತೀರ್ಮಾನ ಕೈಗೊಳ್ಳಬೇಕು ಎನ್ನುವುದು ಸುಪ್ರೀಂ ಕೋರ್ಟಿನ ಸ್ಪಷ್ಟ ಆದೇಶ. ಹೀಗೆ ಮಾಡುವಲ್ಲಿ ಸಹಜವಾಗಿ ರಾಜ್ಯ ಸರ್ಕಾರಕ್ಕೆ ತಲೆ ಬಿಸಿ ಆಗುವ ಸಾಧ್ಯತೆಯನ್ನು ತಳ್ಳಿಹಾಕಲಾಗದು.

ವಿವಾದಿತ ಕೆನೆಪದರ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ನೀಡುವ ಮೀಸಲಾತಿಗೆ ಅದು ಜಾರಿಗೆ ಬಂದಾಗಿನಿಂದಲೂ ಹಿಂದುಳಿದ ಜಾತಿಗಳೂ ಸೇರಿದಂತೆ ಪ್ರಬಲ ಜಾತಿಗಳ ವಿರೋಧ ಇರುವುದು ಸತ್ಯ ಸಂಗತಿ. ಈಗ ಬ್ರಾಹ್ಮಣರಿಗೂ ಮೀಸಲಾತಿ ಸೌಲಭ್ಯ ಇರುವುದರಿಂದ ಈ ಮೀಸಲಾತಿ ವಿರೋಧಿ ಮನಸ್ಥಿತಿ ಸ್ವಲ್ಪಮಟ್ಟಿಗೆ ಕಡಿಮೆ ಆಗಿರುವುದು ನಿಜ. ಆದರೂ ಪರಿಶಿಷ್ಟರ ಮೀಸಲಾತಿಗೆ ಕೆಲವು ಹಿಂದುಳಿದ ಜಾತಿಗಳೂ ಸೇರಿದಂತೆ ಬಲಿಷ್ಠ ಜಾತಿಗಳ ವಿರೋಧ ಇರುವುದು ಬೆಳಕಿನಷ್ಟು ನಿಚ್ಚಳ ಹಾಗಾಗಿ ಮೀಸಲಾತಿಯ ವಿರೋಧ ಪರೋಕ್ಷವಾಗಿ ‘ಕೆನೆ ಪದರ’ (ಕ್ರೀಮಿ ಲೇಯರ್) ನೀತಿಯನ್ನು ಪರಿಶಿಷ್ಟ ಜಾತಿಗೂ ಅನ್ವಯಿಸಬೇಕು ಎನ್ನುವ ಮಾತು ಎಲ್ಲೆಡೆ ಕೇಳಿ ಬರುತ್ತಲೇ ಇದೆ. ಇದೀಗ ಈಗ ಸುಪ್ರೀಂ ಕೋರ್ಟಿನ ಅಭಿಪ್ರಾಯವೂ ಅದೇ ಆಗಿದೆ.

ಸುಪ್ರೀಂ ಕೋರ್ಟಿನ ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಏಳು ಮಂದಿ ನ್ಯಾಯಮೂರ್ತಿಗಳ ಪೀಠದ ಮುಂದೆ ಇದ್ದ ಪ್ರಶ್ನೆ ಎಂದರೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಲ್ಲಿ ಬರುವ ಜಾತಿಗಳ ಆರ್ಥಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಪರಿಸ್ಥಿತಿಗೆ ಅನುಗುಣವಾಗಿ ಮೀಸಲಾತಿಯ ಹಂಚಿಕೆ ಆಗಬೇಕು ಎನ್ನುವುದು. ಈ ಬಗೆಗೆ ನ್ಯಾಯಪೀಠವು ಅರ್ಜಿದಾರ ರಾಜ್ಯಗಳ ಮತ್ತು ಒಳ ಮೀಸಲಾತಿಯನ್ನು ವಿರೋಧಿಸುತ್ತಿರುವ ಜಾತಿಗಳ ವಾದವನ್ನು ಗಮನಿಸಿ ಒಂದು ಸ್ಪಷ್ಟ ತೀರ್ಮಾನಕ್ಕೆ ಬಂದಿರುವುದು ಸಮಸ್ಯೆಗೆ ತೆರೆ ಎಳೆದಂತಾಗಿದೆ. ಆದರೆ ಈ ಒಳ ಮೀಸಲಾತಿ ನಿರ್ಧರಿಸುವಾಗ ‘ಕೆನೆ ಪದರ’ ನೀತಿಯನ್ನು ಜಾರಿಗೆ ತರುವ ಬಗೆಗೆ ಪರಿಶೀಲಿಸಬೇಕು ಎಂದು ನೀಡಿರುವ ಸಲಹೆ ಈಗ ಪರಿಶಿಷ್ಟರಲ್ಲಿ ವಿರೋಧಕ್ಕೆ ಎಡೆಮಾಡಿಕೊಟ್ಟಿದೆ.

ಈ ಕೀಮಿ ಲೇಯರ್ ಪದ್ಧತಿ ಈಗಾಗಲೇ ಹಿಂದುಳಿದ ವರ್ಗಗಳಿಗೆ ನೀಡುತ್ತಿರುವ ಮೀಸಲಾತಿಯಲ್ಲಿ ಜಾರಿಯಲ್ಲಿದೆ. ಕುಟುಂಬದ ವಾರ್ಷಿಕ ಆದಾಯ 8 ಲಕ್ಷ ರೂ. ಮೀರಿರುವವರಿಗೆ ಮೀಸಲಾತಿ ಸೌಲಭ್ಯ ಇರುವುದಿಲ್ಲ. ವಾಸ್ತವವಾಗಿ ಪರಿಶಿಷ್ಟ ಜಾತಿಯ ಅಧಿಕಾರಿಗಳ ಮಕ್ಕಳಿಗೂ ಮೀಸಲಾತಿಯ ಸೌಲಭ್ಯದಲ್ಲಿ ಹಲವು ಷರತ್ತುಗಳಿವೆ. ಈ ವರ್ಗದ ವಿದ್ಯಾರ್ಥಿಗಳಿಗೂ ಕುಟುಂಬದ ವಾರ್ಷಿಕ ಆದಾಯ 6 ಲಕ್ಷ ರೂ. ಮೀರುವಂತಿಲ್ಲ, ಮೀಸಲಾತಿ ಸೌಲಭ್ಯವನ್ನು ಈಗಾಗಲೇ ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಮುಂದುವರಿದಿರುವ ಕುಟುಂಬಗಳೇ ಮತ್ತೆ ಮತ್ತೆ ಪಡೆಯುತ್ತಿವೆ. ಇದರ ನಿಜವಾದ ಫಲ ಕಡು ಬಡವರಿಗೆ ತಲುಪುತ್ತಿಲ್ಲ ಎನ್ನುವ ವಾದ ಈ ಸಲಹೆಯ ಮುಖ್ಯ ಉದ್ದೇಶ. ಏಳು ಮಂದಿ ನ್ಯಾಯಮೂರ್ತಿಗಳಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ನ್ಯಾಯಮೂರ್ತಿ ಗವಾಯಿ ಅವರೇ ಈ ಕ್ರೀಮಿ ಲೇಯರ್ ಪದ್ಧತಿ ಜಾರಿಗೆ ಹೆಚ್ಚು ಆಸ್ಥೆ ವಹಿಸಿದಂತಿದೆ. ಒಬ್ಬ ಐಎಎಸ್ ಅಧಿಕಾರಿ ಮಗನಿಗೂ ಮತ್ತು ಒಬ್ಬ ಕೂಲಿ ಕಾರ್ಮಿಕನ ಮಗನನ್ನೂ ಒಂದೇ ರೀತಿಯಲ್ಲಿ ನೋಡಲಾಗದು ಎನ್ನುವುದು ಇವರ ವಾದ. ನಿಜ. ಆದರೆ ಈ ಕ್ರೀಮಿ ಲೇಯರ್‌ನಿಂದ ಆಗಬಹುದಾದ ಅನಾಹುತವನ್ನು ಕೂಡ ಗಮನಿಸಬೇಕಿದೆ.

ಈ ಸಲಹೆ ಜೊತೆಗೆ ಮೀಸಲಾತಿಯು ಒಂದು ತಲೆಮಾರಿಗೆ ಸಾಕು ಎನ್ನುವ ಅಭಿಪ್ರಾಯವೂ ವ್ಯಕ್ತವಾಗಿದೆ. ಇದು ಕೇವಲ ಸಲಹೆ ಆಗಿರುವುದರಿಂದ ಸದ್ಯಕ್ಕೆ ಪರಿಶಿಷ್ಟ ಜಾತಿಯ ಮೇಲೆ ಯಾವುದೇ ಗಂಭೀರ ಪರಿಣಾಮವನ್ನು ಉಂಟು ಮಾಡುವುದಿಲ್ಲ. ಪರಿಶಿಷ್ಟ ಜಾತಿಯ ಜನರ ವಿಮೋಚನೆಗೆ ಸಂವಿಧಾನದಲ್ಲಿ ಮೀಸಲಾತಿ ಪರಿಕಲ್ಪನೆಯನ್ನು ಅಳವಡಿಸಿದ ಡಾ.ಬಾಬಾ ಸಾಹೇಬ್ ಅಂಬೇಡ್ಕ‌ ಅವರ ಪ್ರಕಾರ ‘ಮೀಸಲಾತಿ ಕೇವಲ ಬಡತನ ನಿವಾರಣೆ ಕಾರ್ಯಕ್ರಮ ಮಾತ್ರವಲ್ಲ. ಅದರ ಮೂಲ ಉದ್ದೇಶ ನಮ್ಮ ಪ್ರಜಾಪ್ರಭುತ್ವದ ಆಡಳಿತ ವ್ಯವಸ್ಥೆಯ ಎಲ್ಲ ಹಂತಗಳಲ್ಲಿಯೂ ಪರಿಶಿಷ್ಟ ಜಾತಿಯ ಜನರ ಪ್ರಾತಿನಿಧ್ಯ ಇರಬೇಕು’ ಪರಿಶಿಷ್ಟರ ದನಿ ಎಲ್ಲ ಕಡೆ ಇದ್ದರೆ ಮಾತ್ರ ಅದು ಜನತಂತ್ರ ಆಡಳಿತ ವ್ಯವಸ್ಥೆಯು ನ್ಯಾಯಯುತವಾಗಿ ನಡೆಯಲು ಸಾಧ್ಯ ಎನ್ನುವುದರಲ್ಲಿ ಎರಡು ಮಾತಿಲ್ಲ. ಈ ಮೂಲ ಪರಿಕಲ್ಪನೆಯ ಅರಿವು ಹೆಚ್ಚು ಮಂದಿಗೆ ಇಲ್ಲದಿರುವುದೇ ಮೀಸಲಾತಿಯನ್ನು ವಿರೋಧಿಸುವ ಮನಃಸ್ಥಿತಿಗೆ ಮುಖ್ಯ ಕಾರಣ.

ಆಂದೋಲನ ಡೆಸ್ಕ್

Share
Published by
ಆಂದೋಲನ ಡೆಸ್ಕ್

Recent Posts

ತಿ.‌ ನರಸೀಪುರ: ಬೈಕ್ ಡಿಕ್ಕಿ ಚಿರತೆ ಸಾವು

ತಿ. ನರಸೀಪುರ: ತಾಲೂಕಿನ ಬನ್ನೂರು ಹೋಬಳಿಯ ಬಸವನಹಳ್ಳಿ ಗ್ರಾಮದ ಸಮೀಪದ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನ ಚಿರತೆಗೆ ಡಿಕ್ಕಿ ಹೊಡೆದ ಪರಿಣಾಮ…

6 hours ago

ತಿರುಪತಿ ಲಡ್ಡು: ತುಪ್ಪದಲ್ಲಿ ಪ್ರಾಣಿ ಕೊಬ್ಬು ಬಳಕೆ

ಅಮರಾವತಿ: ಜಗತ್‌ ಪ್ರಸಿದ್ಧ ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಕಳಪೆ ಗುಣಮಟ್ಟದ ಪದಾರ್ಥಗಳು ಪತ್ತೆಯಾಗಿದೆ ಎಂದು ತೆಲುಗು…

8 hours ago

ಬುರ್ಖಾಧಾರಿ ಮಹಿಳೆಯಿಂದ ಸಲ್ಮಾನ್‌ ಖಾನ್‌ ತಂದೆಗೆ ಜೀವ ಬೆದರಿಕೆ: ಮಹಿಳೆ ಸೇರಿ ಇಬ್ಬರ ಬಂಧನ

ಮುಂಬೈ:‌ ಬಾಲಿವುಡ್‌ನ ಭಾಯಿಜಾನ್ ಸಲ್ಮಾನ್‌ ಖಾನ್‌ ಅವರ ತಂದೆಗೆ ಬುರ್ಖಾ ಧರಿಸಿದ್ದ ಮಹಿಳೆ ಹಾಗೂ ಇನ್ನೊರ್ವ ವ್ಯಕ್ತಿ ಜೀವ ಬೆದರಿಕೆ…

8 hours ago

ಶಾಸಕ ಮುನಿರತ್ನಗೆ ಜಾಮೀನು: ಅತ್ಯಾಚಾರ ಪ್ರಕರಣದಲ್ಲಿ ಮತ್ತೆ ಬಂಧನ ಸಾಧ್ಯತೆ

ಬೆಂಗಳೂರು: ಗುತ್ತಿಗೆದಾರರೊಬ್ಬರಿಗೆ ಜಾತಿನಿಂದನೆ ಹಾಗೂ ಪ್ರಾಣ ಬೆದರಿಕೆ ಹಾಕಿದ ಪ್ರಕರಣದಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನಗೆ…

9 hours ago

ನುಡಿ ಹಬ್ಬಕ್ಕೆ ಆಹ್ವಾನಿಸಲು ಸಿದ್ಧವಾಗಿದೆ ಕನ್ನಡ ರಥ

ಮಂಡ್ಯ: ಜಿಲ್ಲೆಯಲ್ಲಿ ಡಿಸೆಂಬರ್ 20, 21, 22 ರಂದು ನಡೆಯಲಿರುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ…

10 hours ago

ಬಸ್‌ನಲ್ಲಿ ಪ್ರಯಾಣ: ಮಹಿಳೆಯರಿಂದ ಶಕ್ತಿಯೋಜನೆಯ ಅಭಿಪ್ರಾಯ ಪಡೆದ ಪುಷ್ಪ ಅಮರನಾಥ್‌

ಮೈಸೂರು: ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಶಕ್ತಿಯೋಜನೆ ಫಲಾನುಭವಿಗಳ ಅಭಿಪ್ರಾಯ ಸಂಗ್ರಹಿಸಲು ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆಯಾದ ಡಾ…

10 hours ago