ಸರ್ಕಾರಿ ಆಸ್ಪತ್ರೆಗಳು ಬಡವರ ಆರೋಗ್ಯ ಕಾಪಾಡುವ ಧಾಮಗಳು ಎಂದೇ ಬಿಂಬಿತ ವಾಗಿವೆ. ಬಡಜನರು ಕೂಡ ರೋಗರುಜಿನಗಳಿಗೆ ಚಿಕಿತ್ಸೆ ಪಡೆಯಲು, ಹೆರಿಗೆಗಾಗಿ ಪ್ರಥಮವಾಗಿ ಆಶ್ರಯಿಸುವುದು ಇಂತಹ ಸರ್ಕಾರಿ ಆಸ್ಪತ್ರೆಗಳನ್ನೇ. ಅಲ್ಲದೆ, ಬಹುತೇಕ ಜನರು ವೈದ್ಯರು ಎಂದರೆ ಸಕಲ ಕಾಯಿಲೆಗಳನ್ನು ನಿವಾರಿಸಬಲ್ಲ ಸಹೃದಯರು ಎಂದೇ ಪರಿಗಣಿಸಿದ್ದಾರೆ. ಇತ್ತೀಚೆಗೆ ಆಸ್ಪತ್ರೆಗಳು ಅದಕ್ಕೆ ಅಪವಾದವಾಗುವ ಹಾದಿಯಲ್ಲಿ ಇವೆ. ಅಮಾಯಕ ಜನರ ಪಾಲಿಗೆ ಈ ಸಾರ್ವಜನಿಕ ‘ಆರೋಗ್ಯ ಧಾಮ’ಗಳು ಸಾವಿನ ಮನೆಗಳಂತಾಗುತ್ತಿರುವುದು ಆಘಾತಕಾರಿ ಸಂಗತಿ. ಪ್ರಸ್ತುತ ಬಳ್ಳಾರಿ ಜಿಲ್ಲೆ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲವೇ ದಿನಗಳ ಅಂತರದಲ್ಲಿ ಐವರು ಬಾಣಂತಿಯರು ಸಾವಿಗೀಡಾಗಿರುವ ಪ್ರಕರಣ ರಾಜ್ಯದ ಜನರನ್ನು ಆತಂಕಕ್ಕೆ ದೂಡಿದೆ.
ದುರಂತದ ನಂತರ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ಔಷಧ ಪೂರೈಸಿರುವ ಕಂಪೆನಿ ಗಳನ್ನು ಕಪ್ಪುಪಟ್ಟಿಗೆ ಸೇರಿಸುವುದಾಗಿ ಹೇಳಿದೆ. ಅಲ್ಲದೆ, ಮೃತ ಬಾಣಂತಿಯರ ಕುಟುಂಬಗಳಿಗೆ ಪರಿಹಾರವನ್ನೂ ಘೋಷಣೆ ಮಾಡಿದೆ. ಆದರೆ, ಈ ಬಾಣಂತಿಯರ ಸರಣಿ ಸಾವಿಗೆ ಕಾರಣಗಳೇನು ಎಂಬುದನ್ನು ಗಂಭೀರವಾಗಿ ಪರಿಶೀಲಿಸಬೇಕು. ಮುಖ್ಯವಾಗಿ ಆಸ್ಪತ್ರೆಯಲ್ಲಿ ಬಾಣಂತಿಯರಿಗೆ ದೊರೆತಿರುವ ವೈದ್ಯಕೀಯ ಸೇವೆ, ಔಷಧೋಪಚಾರ, ಅವರಿಗೆ ನೀಡಿರುವ ಔಷಧಗಳು ಯಾವ ಕಂಪೆನಿಯ ಉತ್ಪನ್ನಗಳು? ಅವುಗಳನ್ನು ಪೂರೈಕೆ ಮಾಡಲು ರಾಜ್ಯ ಔಷಧ ನಿಯಂತ್ರಣ ಮಂಡಳಿ ಅನುಮತಿ ನೀಡಿದ್ದೇಕೆ? ಇತ್ಯಾದಿ ಪ್ರಮುಖ ಪ್ರಶ್ನೆಗಳಿಗೆ ಉತ್ತರ ಕಂಡುಹಿಡಿಯಬೇಕಿದೆ. ಅದು ಪಾರದರ್ಶಕವಾಗಿ ನಡೆಯಬೇಕು.
ದುರಂತ ನಡೆದ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿರುವ ಲೋಕಾಯುಕ್ತ, ಸ್ವಯಂ ಪ್ರೇರಿತವಾಗಿ ಮೊಕದ್ದಮೆ ದಾಖಲಿಸಿಕೊಂಡಿರುವುದು ಅಪೇಕ್ಷಣೀಯ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕೂಡ ಆಸ್ಪತ್ರೆಗೆ ಭೇಟಿ ನೀಡಿದ್ದಲ್ಲದೆ, ಸಂತ್ರಸ್ತ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ. ಇದು ಕೇವಲ ಕಣ್ಣೊರೆಸುವ ಕೆಲಸವಾಗಬಾರದು. ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಬಾಣಂತಿಯರಿಗೆ ನೀಡಿರುವ ಔಷಧದ ಗುಣಮಟ್ಟ ಪರೀಕ್ಷೆಯಾಗಬೇಕು. ಏಕೆಂದರೆ ಕಳಪೆ ಔಷಽಗಳನ್ನು ಪೂರೈಸಿರುವ ಅನುಮಾನ ಸಾರ್ವಜನಿಕರಿಂದ ವ್ಯಕ್ತವಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಪ್ರಕರಣದಲ್ಲಿ ತಪ್ಪು ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಇವೆಲ್ಲ ತ್ವರಿತವಾಗಿ ಆಗಬೇಕು.
ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಬಾಣಂತಿಯರಿಗೆ ನೀಡಲಾಗಿದ್ದ ಐವಿ ರಿಂಗರ್ ಲ್ಯಾಕ್ವೇಟ್ ದ್ರಾವಣ ಬಳಕೆಗೆ ಯೋಗ್ಯವಲ್ಲ ಎಂದು ಕರ್ನಾಟಕ ರಾಜ್ಯ ಡ್ರಗ್ಸ್ ಲಾಜಿಸ್ಟಿಕ್ಸ್ ಮತ್ತು ವೇರ್ ಹೌಸಿಂಗ್ ಸೊಸೈಟಿ ಹೇಳಿದ್ದರೆ, ಕೇಂದ್ರ ಔಷಧ ಪ್ರಯೋಗಾಲಯವು ಈ ದ್ರಾವಣದ ಬಗ್ಗೆ ಸಕಾರಾತ್ಮಕ ವರದಿಯನ್ನು ನೀಡಿದೆ ಎನ್ನಲಾಗಿದೆ. ಇದನ್ನು ಖಚಿತಪಡಿಸಿಕೊಳ್ಳಲು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ)ಗೆ ಪತ್ರ ಬರೆಯಲಾಗಿದೆ ಎಂಬ ಮಾಹಿತಿ ಇದೆ.
ಬಾಣಂತಿಯರ ಸಾವಿನ ಪ್ರಕರಣವು ರಾಜ್ಯದಲ್ಲಿ ಕಳಪೆ ಔಷಧಗಳ ಪೂರೈಕೆ ಜಾಲದ ಕಾರ್ಯಚಟು ವಟಿಕೆ ಇರಬಹುದಾದ ಬಗ್ಗೆ ಸಂಶಯ ಮೂಡಿಸಿದೆ. ಕಳಪೆ ಔಷಽಗಳ ಪೂರೈಕೆಗೆ ವೈದ್ಯಕೀಯ ಅಽಕಾರಿ ಗಳೇ ಶಾಮೀಲಾಗಿರಬಹುದು ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಈ ದುರಂತಕ್ಕೆ ಸರ್ಕಾರಿ ಆಸ್ಪತ್ರೆಯ ಸ್ಥಿತಿಗತಿ ಒಂದು ಕಾರಣವಾದರೆ, ಡ್ರಗ್ಸ್ ಮಾಫಿಯಾ ಇನ್ನೊಂದು ಕಾರಣ ಇರಬಹುದು ಎನ್ನುವ ಮಾತುಗಳೂ ಇವೆ. ಒಬ್ಬಿಬ್ಬರು ಬಾಣಂತಿಯರು ಸಾವಿಗೀಡಾದಾಗಲೇ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದ್ದರೆ ಬಹುಶಃ ಉಳಿದವರ ಜೀವ ರಕ್ಷಣೆ ಮಾಡಬಹುದಿತ್ತು. ಸರ್ಕಾರವು ಸಾರ್ವಜನಿಕ ಆಸ್ಪತ್ರೆಗಳಿಗಾಗಿ ಔಷಧ ಖರೀದಿಸುವ ವ್ಯವಸ್ಥೆಯನ್ನು ಮೂಲದಲ್ಲೇ ಸರಿಪಡಿಸಲು ಕ್ರಮವಹಿಸಬೇಕು. ಆಸ್ಪತ್ರೆಗಳು ಯಾವ ಔಷಧಿ ಖರೀದಿಸಬೇಕು, ಯಾವುದನ್ನು ಬಿಡಬೇಕು? ಎಂಬುದರ ಬಗ್ಗೆ ಸ್ಪಷ್ಟ ಮಾರ್ಗ ಸೂಚಿಯನ್ನು ಹೊರಡಿಸುವ ಅಗತ್ಯವಿದೆ. ಯಾರೋ ಕೆಲವರು ಮಾಡುವ ಅವಾಂತರಗಳಿಗೆ ಅಮಾಯಕರು ಜೀವ ಕಳೆದುಕೊಳ್ಳುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳುವುದು ಅಗತ್ಯ.
ಈ ಪ್ರಕರಣದ ಹೊರತಾಗಿಯೂ ಸರ್ಕಾರಿ ಆಸ್ಪತ್ರೆಗಳು ಜನಸ್ನೇಹಿಯಾಗಬೇಕು. ಬಡವರು ಸರ್ಕಾರಿ ಆಸ್ಪತ್ರೆಯೆಂದರೆ ಬೆಚ್ಚಿಬೀಳುವಂತಹ ಸನ್ನಿವೇಶ ನಿರ್ಮಾಣವಾಗಿದೆ. ಆರ್ಥಿಕವಾಗಿ ಅಲ್ಪ ಪ್ರಮಾಣದಲ್ಲಿ ಸದೃಢವಾಗಿರುವವರು ಕೂಡ ಕಾಯಿಲೆಗಳ ಚಿಕಿತ್ಸೆಗಾಗಿ ಸಾರ್ವಜನಿಕ ಆಸ್ಪತ್ರೆಗಳಿಗೆ ಬದಲಾಗಿ ಖಾಸಗಿ ಆಸ್ಪತ್ರೆಗಳ ಮೊರೆ ಹೋಗುತ್ತಿದ್ದಾರೆ. ಇಂತಹ ಪರಿಸ್ಥಿತಿಯನ್ನು ಪರಿವರ್ತಿಸಿ ಸರ್ಕಾರಿ ಆಸ್ಪತ್ರೆಗಳು ಎಲ್ಲ ಜನರ ಪಾಲಿಗೆ ‘ಆರೋಗ್ಯ ಧಾಮ’ಗಳಾಗಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಅಧೋಗತಿಯತ್ತ ಹೆಜ್ಜೆ ಇಟ್ಟಿರುವ ವೈದ್ಯಕೀಯ ವ್ಯವಸ್ಥೆಗೇ ಚಿಕಿತ್ಸೆ ನೀಡಬೇಕು. ಬಾಣಂತಿಯರ ಸಾವಿನಂತಹ ದುರಂತಗಳು ಮರುಕಳಿಸದಂತೆ ಬಹು ವಿಧದಲ್ಲಿ ಜಾಗ್ರತೆ ವಹಿಸುವುದು ಸರ್ಕಾರದ ಆದ್ಯತೆಯಾಗಬೇಕು. ಈ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವ ನಿಟ್ಟಿನಲ್ಲಿ ಮೀನಮೇಷ ಎಣಿಸಬಾರದು.
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ1 ಆರೋಪಿಯಾಗಿರುವ ಪವಿತ್ರಾ ಗೌಡಗೆ ಮನೆಯೂಟ ಪೂರೈಕೆ ವಿಚಾರದಲ್ಲಿ ಕೋರ್ಟ್ ತನ್ನ ಆದೇಶ…
ಅಮೇರಿಕಾ: ವೆನಿಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಅಮೆರಿಕಾದ ಪಡೆಗಳು ಬಂಧಿಸಿರುವ ಬೆನ್ನಲ್ಲೇ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು…
ತಮಿಳುನಾಡು: ಕರೂರು ಕಾಲ್ತುಳಿತ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಹಾಗೂ ತಮಿಳಿಗ ವೆಟ್ರಿ ಕಳಗಂ ಮುಖ್ಯಸ್ಥ ವಿಜಯ್ ಇಂದು ನವದೆಹಲಿಯಲ್ಲಿ…
ಶ್ರೀಹರಿಕೋಟಾ: ಇಸ್ರೋ ಮತ್ತೊಂದು ಮೈಲಿಗಲ್ಲು ಸಾಧಿಸಿದ್ದು, ಪಿಎಸ್‌ಎಲ್‌ವಿ-C62 ರಾಕೆಟ್ ಮೂಲಕ EOS-N1 ಅನ್ವೇಷಾ ಸೇರಿದಂತೆ 16 ಉಪಗ್ರಹಗಳನ್ನು ಉಡಾವಣೆ ಮಾಡಿದೆ.…
ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಪರಿಣಾಮ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಮೂರು ದಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ…
ಮೈಸೂರು: ಜಿಲ್ಲೆಯಲ್ಲಿ ಹುಲಿ ದಾಳಿಯ ಆತಂಕ ಮುಂದುವರಿದಿದ್ದು, ಹುಣಸೂರು ತಾಲ್ಲೂಕಿನ ಗುರುಪುರ ಸಮೀಪದ ಹೊಸೂರು ಗೇಟ್ ಬಳಿ ಹುಲಿ ದಾಳಿ…