ಸಂಪಾದಕೀಯ

೫ ಹುಲಿಗಳ ಸಾವು; ಎಚ್ಚೆತ್ತುಕೊಳ್ಳಬೇಕಿದೆ ಅರಣ್ಯ ಇಲಾಖೆ

ಚಾಮರಾಜನಗರ ಜಿಲ್ಲೆ ಮಲೈ ಮಹದೇಶ್ವರ ವನ್ಯಧಾಮ ವ್ಯಾಪ್ತಿಯ ಮೀಣ್ಯಂ ಅರಣ್ಯ ವಲಯದಲ್ಲಿ ವಿಷಪ್ರಾಶನದಿಂದ ತಾಯಿ ಹುಲಿ ಹಾಗೂ ನಾಲ್ಕು ಮರಿಗಳು ದಾರುಣವಾಗಿ ಸಾವಿಗೀಡಾಗಿರುವ ಪ್ರಕರಣ ಜನರಲ್ಲಿ ದಿಗ್ಭ್ರಮೆ ಮೂಡಿಸಿದೆ. ಸತ್ತ ಹಸುವಿನ ಕಳೇಬರಕ್ಕೆ ವಿಷ ಸಿಂಪಡಿಸಿದ್ದು, ಅದನ್ನು ಸೇವಿಸಿದ ಹುಲಿ ಸಂಸಾರ ನಿರ್ನಾಮವಾಗಿದೆ ಎನ್ನಲಾಗಿದೆ. ಮೃತಪಟ್ಟ ಹಸುವಿನ ಮಾಲೀಕ ಸೇರಿ ಮೂವರು ಆರೋಪಿಗಳನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.

ಹುಲಿ ಹಸುವನ್ನು ಹತ್ಯೆಗೈದು ಕಬಳಿಸಿ, ಸುಮಾರು ಅರ್ಧದಷ್ಟು ಭಾಗವನ್ನು ಉಳಿಸಿತ್ತು. ಅದನ್ನು ಮರಿಗಳ ಸಹಿತ ಬಂದು ಇನ್ನೊಮ್ಮೆ ತಿಂದಿದೆ. ಆದರೆ ಹಸುವಿನ ಕಳೇಬರಕ್ಕೆ ವಿಷ ಬೆರೆತಿದ್ದರಿಂದ ಐದೂ ಹುಲಿಗಳು ಮೃತಪಟ್ಟಿವೆ ಎಂದು ಹೇಳಲಾಗಿದೆ. ಪ್ರೀತಿಯ ಹಸುವನ್ನು ಹುಲಿ ಕೊಂದು ಹಾಕಿದ್ದರಿಂದ ಕೋಪಗೊಂಡಿದ್ದ ಮಾಲೀಕ, ಹುಲಿಯು ಹಸುವಿನ ಕಳೇಬರವನ್ನು ತಿನ್ನುವುದಕ್ಕೆ ಬರುತ್ತದೆ ಎಂದು ಊಹಿಸಿದ್ದು, ತನ್ನ ಸಹಚರರ ಸಹಕಾರದಿಂದ ಹಸುವಿನ ಕಳೇಬರಕ್ಕೆ ಕೀಟನಾಶಕ ಸಿಂಪಡಿಸಿದ್ದ ಎಂದು ಹೇಳಲಾಗಿದೆ. ಈ ಪ್ರಕರಣವನ್ನು ವನ್ಯಜೀವಿ ಸಂರಕ್ಷಣಾ ಕಾಯ್ದೆ ೧೯೭೨ರ ಅನ್ವಯ ಹಾಗೂ ಕರ್ನಾಟಕ ಅರಣ್ಯ ಕಾಯ್ದೆ ೧೯೬೯ರ ಪ್ರಕಾರ ಗಂಭೀರವಾದ ವನ್ಯಜೀವಿ ಅಪರಾಧ ಪ್ರಕರಣವೆಂದು ಪರಿಗಣಿಸಲಾಗಿದೆ.

ಅತ್ತ ರಾಜ್ಯ ಸರ್ಕಾರ ಕೂಡ ಹುಲಿಗಳ ಸಾವಿನ ಪ್ರಕರಣದ ತನಿಖೆಗೆ ತಂಡವನ್ನು ರಚಿಸಿದೆ. ವನ್ಯಜೀವಿಗಳ ಸಂರಕ್ಷಣೆ ಅರಣ್ಯ ಇಲಾಖೆಯ ಕರ್ತವ್ಯ ನಿಜ. ಆದರೆ ಸಾರ್ವಜನಿಕರ ಸಹಕಾರವೂ ಅಗತ್ಯ. ಮಾನವ – ವನ್ಯಜೀವಿ ಸಂಘರ್ಷ ತಪ್ಪಿಸಲು ಸರ್ಕಾರ ಅರಣ್ಯ ಇಲಾಖೆ ಮೂಲಕ ಅನೇಕ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಅವುಗಳ ಬಗ್ಗೆ ಸಾರ್ವಜನಿಕರಿಗೆ ಎಷ್ಟರ ಮಟ್ಟಿಗೆ ಅರಿವು ಇದೆ ಎಂಬುದು ಮುಖ್ಯ. ಅದರಲ್ಲಿಯೂ ಕಾಡಂಚಿನ ಗ್ರಾಮಗಳ ಜನರು, ಆದಿವಾಸಿ, ಬುಡಕಟ್ಟು ಸಮುದಾಯಗಳಿಗೆ ವನ್ಯಜೀವಿಗಳ ಹತ್ಯೆ ಸಂಬಂಧ ಅತ್ಯಂತ ಪ್ರಬಲವಾದ ಕಾನೂನುಗಳು ಇವೆ ಎಂಬುದರ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ನಡೆಯುತ್ತಿವೆಯೇ ಎಂಬ ಅನುಮಾನವನ್ನು ಇಂತಹ ಪ್ರಕರಣಗಳು ಹುಟ್ಟುಹಾಕುತ್ತವೆ.

ಅರಣ್ಯಪಾಲಕ ನೌಕರರಿಗೆ ಕೆಲವು ತಿಂಗಳುಗಳಿಂದ ವೇತನ ಬಿಡುಗಡೆ ಆಗಿಲ್ಲ. ಹಕ್ಕೊತ್ತಾಯ ಮಂಡಿಸಲು ಅವರು ಪ್ರತಿಭಟನೆ ಹಮ್ಮಿಕೊಂಡಿದ್ದ ದಿನವೇ ಇತ್ತ ಹುಲಿಗಳಿಗೆ ವಿಷಪ್ರಾಶನವಾಗಿದೆ ಎಂಬುದು ಕಾಕತಾಳೀಯ ಇರಬಹುದು. ಆದರೆ, ಅರಣ್ಯ ವ್ಯಾಪ್ತಿಯಲ್ಲಿ ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸುತ್ತಿರುವವರ ಕೈವಾಡ ಇದೆ ಎಂಬುದಾಗಿ ಕೆಲ ಮಾಧ್ಯಮಗಳಲ್ಲಿ ಬಿತ್ತರವಾಗಿದೆ. ಇದನ್ನು ಅರಣ್ಯಾಧಿಕಾರಿಗಳು, ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸುವ ಅಗತ್ಯ ಇದೆ.

ಮಲೈ ಮಹದೇಶ್ವರ ವನ್ಯಧಾಮ, ಬಿಳಿಗಿರಿರಂಗನಾಥಸ್ವಾಮಿ ದೇವಸ್ಥಾನ ಹುಲಿ ಸಂರಕ್ಷಿತಾರಣ್ಯ, ಬಂಡೀಪುರ, ನಾಗರಹೊಳೆ ಅಭಯಾರಣ್ಯ ಪ್ರದೇಶಗಳಲ್ಲಿ ಆನೆ, ಹುಲಿಯಂತಹ ಪ್ರಮುಖ ಕಾಡುಪ್ರಾಣಿಗಳು ದೊಡ್ಡ ಸಂಖ್ಯೆಯಲ್ಲಿವೆ. ಅವುಗಳ ಸಂರಕ್ಷಣೆಗೆ ಅರಣ್ಯ ಇಲಾಖೆ ಹೆಚ್ಚು ಒತ್ತು ನೀಡಬೇಕಿದೆ. ಪರಿಸರವಾದಿಗಳು, ವನ್ಯಜೀವಿ ಪ್ರಿಯರು ಈ ಬಗ್ಗೆ ಧ್ವನಿ ಎತ್ತುತ್ತಲೇ ಇರುತ್ತಾರೆ.

ಅರಣ್ಯ ಪ್ರದೇಶದಲ್ಲಿ ಪರಿಸರ ಸಂರಕ್ಷಣೆ ಜೊತೆಗೆ ಕಾಡುಪ್ರಾಣಿಗಳಿಗೆ ನೀರು, ಆಹಾರ ಲಭಿಸುವಂತೆ ಕ್ರಮಗಳನ್ನು ಕೈಗೊಳ್ಳುವುದು ಎಷ್ಟು ಮುಖ್ಯವೋ, ಕಾಡುಪ್ರಾಣಿಗಳನ್ನು ಬೇಟೆಯಾಡುವುದು, ಹತ್ಯೆ ಮಾಡುವುದು ಕಾನೂನು ಕಣ್ಣಿನಲ್ಲಿ ಅಪರಾಧ ಎಂಬುದರ ಬಗ್ಗೆ ಸಾರ್ವಜನಿಕರು, ಅದರಲ್ಲಿಯೂ ವಿಶೇಷವಾಗಿ ಆದಿವಾಸಿ ಜನರಲ್ಲಿ ಅರಿವು ಮೂಡಿಸವುದೂ ಅಷ್ಟೇ ಮುಖ್ಯವಾಗಿದೆ. ಬಹುಶಃ ಈಗ ನಡೆದಿರುವ ೫ ಹುಲಿಗಳ ಹತ್ಯೆ ಪ್ರಕರಣದ ಆರೋಪಿಗಳಿಗೆ, ಕಾಡು ಪ್ರಾಣಿಗಳ ಸಂರಕ್ಷಣೆಯ ನಿಯಮಗಳ ಬಗ್ಗೆ ಅರಿವು ಇದ್ದಿದ್ದರೆ ಈ ಪ್ರಮಾದ ಜರುಗುತ್ತಿರಲಿಲ್ಲ ಅನಿಸುತ್ತದೆ.

ಹುಲಿಗಳಿಗೆ ವಿಷ ಹಾಕಿದ ಪ್ರಮುಖ ಆರೋಪಿಯ ತಂದೆ, ತಾನೇ ಅಪರಾಧಿ ಎಂದು ಹೇಳಿಕೊಂಡಿದ್ದರು. ಆದರೆ ಅವರ ಪುತ್ರ ನಿಜವಾದ ಆರೋಪಿ ಎಂಬುದು ಬಹಿರಂಗವಾಗಿದೆ. ಹುಲಿಗಳ ಸಾವಿಗೆ ಕಾರಣವಾದ ಆರೋಪಿ, ಕಷ್ಟಕ್ಕೆ ಸಿಲುಕುವುದನ್ನು ಸಹಿಸಿಕೊಳ್ಳಲು ಆತನ ತಂದೆಗೆ ಆಗಲಿಲ್ಲ. ಅಂತಹದೇ ಭಾವನೆ ಇತರ ಜನರು ಹಾಗೂ ಕಾಡುಪ್ರಾಣಿಗಳ ಮೇಲೆಯೂ ಇರಬೇಕು. ಇಂತಹ ಅರಿವನ್ನು ಮೂಡಿಸಬೇಕಿರುವುದು ಅರಣ್ಯ ಇಲಾಖೆ ಅಧಿಕಾರಿಗಳ ಜವಾಬ್ದಾರಿ. ಹಾಗೆಯೇ ಕಾಡುಪ್ರಾಣಿಗಳು ಜನವಸತಿ ಪ್ರದೇಶಗಳು, ಫಸಲು ಇರುವ ಜಮೀನುಗಳ ಮೇಲೆ ದಾಳಿ ಮಾಡುವಂತಹ ಪ್ರಕರಣಗಳನ್ನು ನಿಯಂತ್ರಿಸಲು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಿದೆ. ೫ ಹುಲಿಗಳ ಸಾವಿಗೆ ಕಾರಣರಾದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಹಾಗೆಯೇ ಅರಣ್ಯ ಇಲಾಖೆ ಕೂಡ ಎಚ್ಚೆತ್ತುಕೊಳ್ಳುವುದು ಅಗತ್ಯ.

” ಪರಿಸರವಾದಿಗಳು, ವನ್ಯಜೀವಿ ಪ್ರಿಯರು ಈ ಬಗ್ಗೆ ಧ್ವನಿ ಎತ್ತುತ್ತಲೇ ಇರುತ್ತಾರೆ. ಅರಣ್ಯ ಪ್ರದೇಶದಲ್ಲಿ ಪರಿಸರ ಸಂರಕ್ಷಣೆ ಜೊತೆಗೆ ಕಾಡುಪ್ರಾಣಿಗಳಿಗೆ ನೀರು, ಆಹಾರ ಲಭಿಸುವಂತೆಕ್ರಮಗಳನ್ನು ಕೈಗೊಳ್ಳುವುದುಎಷ್ಟು ಮುಖ್ಯವೋ, ಕಾಡುಪ್ರಾಣಿಗಳನ್ನು ಬೇಟೆಯಾಡುವುದು, ಹತ್ಯೆ ಮಾಡುವುದು ಕಾನೂನು ಕಣ್ಣಿನಲ್ಲಿ ಅಪರಾಧ ಎಂಬುದರ ಬಗ್ಗೆ ಸಾರ್ವಜನಿಕರು, ಅದರಲ್ಲಿಯೂ ವಿಶೇಷವಾಗಿ ಆದಿವಾಸಿ ಜನರಲ್ಲಿ ಅರಿವು ಮೂಡಿಸುವುದೂ ಅಷ್ಟೇ ಮುಖ್ಯವಾಗಿದೆ.”

ಆಂದೋಲನ ಡೆಸ್ಕ್

Recent Posts

ಎಲ್ ನಿನೊ ಬಿಸಿ ಅಡುಗೆ ಮನೆಗೂ ತಟ್ಟುತ್ತಾ? ಅಕ್ಕಿ, ಬೇಳೆ, ಎಣ್ಣೆ ಬೆಲೆ ಮತ್ತಷ್ಟು ಏರಿಕೆ ಸಾಧ್ಯತೆ

ಬೆಂಗಳೂರು: ಮುಂಗಾರು ಮಳೆ ಕೈಕೊಟ್ಟರೆ, ಅದರ ಪರಿಣಾಮ ನಮ್ಮ ಅಡುಗೆ ಮನೆಯ ಬಜೆಟ್‌ ಮೇಲೂ ಬೀಳುತ್ತಾ? ಎಲ್ ನಿನೊ ಪ್ರಭಾವದಿಂದ…

5 hours ago

ತಮಿಳುನಾಡಿನಲ್ಲಿ ದೀಪಾವಳಿಗೆ ‘ವೆಟ್ರಿ’ ತರಕಾರಿ ಕಿಟ್ | ₹100ಕ್ಕೆ 10 ಬಗೆಯ ತರಕಾರಿ

ಚೆನ್ನೈ: ದೀಪಾವಳಿ ಹಬ್ಬಕ್ಕೆ ತಮಿಳುನಾಡು ಸರ್ಕಾರ ವಿಶೇಷ ತರಕಾರಿ ಕಿಟ್ ಪರಿಚಯಿಸಿದೆ. ಮುಖ್ಯಮಂತ್ರಿ ವಿಜಯ್ ನೇತೃತ್ವದ ಸರ್ಕಾರದ ‘ವೆಟ್ರಿ’ ಯೋಜನೆಯಡಿ,…

6 hours ago

ಬೆಂಗಳೂರು ಏರ್‌ಪೋರ್ಟ್‌ ರಸ್ತೆ | ಇಂದಿನಿಂದ 18 ತಿಂಗಳು ಬಸ್‌, ಸರಕು ವಾಹನ ಸಂಚಾರಕ್ಕೆ ನಿರ್ಬಂಧ

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಬಳ್ಳಾರಿ ರಸ್ತೆಯಲ್ಲಿ ನವೆಂಬರ್ 6ರಿಂದ 18 ತಿಂಗಳ ಕಾಲ ಕೆಎಸ್‌ಆರ್‌ಟಿಸಿ…

6 hours ago

ಕಾವೇರಿ ನೀರು ಬಿಡುಗಡೆ ಮಾಡಿಲ್ಲ ಎಂಬ ಆರೋಪ | ಮತ್ತೆ ಸುಪ್ರೀಂ ಕೋರ್ಟ್‌ ಮೊರೆ ಹೋದ ತಮಿಳುನಾಡು

ನವದೆಹಲಿ: ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ತಮಿಳುನಾಡು ಸರ್ಕಾರ ಮತ್ತೊಮ್ಮೆ ಸುಪ್ರೀಂ ಕೋರ್ಟ್‌ ಮೊರೆ ಹೋಗಿದೆ. ಅಕ್ಟೋಬರ್ 23ರಿಂದ ಕರ್ನಾಟಕ…

6 hours ago

ಉತ್ತರಾಖಂಡ ಹೆಲಿಕಾಪ್ಟರ್ ದುರಂತದಲ್ಲಿ ಪ್ರತಾಪ್ ಗೌಡ ಸಾವು | ಬೆನ್ನಲ್ಲೇ ತಂದೆ ನಿಂಗರಾಜು ನಿಧನ

ಹಾಸನ: ಉತ್ತರಾಖಂಡದ ಹೆಲಿಕಾಪ್ಟರ್ ದುರಂತದಲ್ಲಿ ಉದ್ಯಮಿ ಪ್ರತಾಪ್ ಗೌಡ ಮೃತಪಟ್ಟ ಬೆನ್ನಲ್ಲೇ, ಅವರ ತಂದೆ ನಿಂಗರಾಜು ನಿಧನರಾಗಿದ್ದಾರೆ. ತೀವ್ರ ಅನಾರೋಗ್ಯದಿಂದ…

6 hours ago

ಬೆಂಗಳೂರಿನಲ್ಲಿ ಒಂದೇ ಕುಟುಂಬದ ಏಳು ಮಂದಿಯ ಹತ್ಯೆ ಆರೋಪ: ಪತಿ ಬಂಧನ

ಬೆಂಗಳೂರು: ಬೆಂಗಳೂರಿನಲ್ಲಿ ಒಂದೇ ಕುಟುಂಬದ ಏಳು ಮಂದಿಯನ್ನು ಹತ್ಯೆ ಮಾಡಿರುವ ಆರೋಪದಡಿ ಕ್ಯಾಬ್ ಚಾಲಕ ಇಂದುಶೇಖರ್‌ನನ್ನು ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ.…

6 hours ago