ಪ್ರಜಾಪ್ರಭುತ್ವ ವ್ಯವಸ್ಥೆಗೆ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ಆಧಾರಸ್ತಂಭಗಳು ಎಂಬುದನ್ನು ಸಂವಿಧಾನ ಅತ್ಯಂತ ಸ್ಪಷ್ಟವಾಗಿ ಹೇಳಿದೆ. ವಕ್ಛ್ ಮಂಡಳಿಯ ವಶದಲ್ಲಿ ಹಲವು ಮಠ- ಮಾನ್ಯಗಳ ಭೂಮಿ ಇದೆ, ರೈತರ ಜಮೀನುಗಳೂ ಇವೆ ಎಂಬ ವಿಚಾರದಲ್ಲಿ ಸಂವಿಧಾನದ ವಿರುದ್ಧವೂ ಕೆಲವರಿಂದ ಅಸಹನೆ ವ್ಯಕ್ತವಾಗಿರುವುದು ಪ್ರಜಾಸತ್ತಾತ್ಮಕ ನಡೆಯಲ್ಲ. ಇದರ ನಡುವೆ ಮುಸ್ಲಿಮ್ ಸಮುದಾಯಕ್ಕೆ ಪ್ರಜಾತಂತ್ರದ ಮೂಲಭೂತ ಅಂಶವಾದ ಮತದಾನದ ಹಕ್ಕನ್ನು ನಿರಾಕರಿಸಬೇಕು. ಅಲ್ಲದೆ, ಹಿಂದೂ ಧರ್ಮಕ್ಕೆ ಅನುಕೂಲವಾದ ಸಂವಿಧಾನಬೇಕು ಎಂಬಂತಹ ಮಾತುಗಳನ್ನು ಕೆಲ ಮಠಾಧೀಶರು ಆಡಿರುವುದು ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾಗಿದೆ ಎಂಬುದನ್ನು ಹೇಳಲೇ ಬೇಕಾಗುತ್ತದೆ.
ವಕ್ಛ್ ಮಂಡಳಿಯು ಅನೇಕ ರೈತರಿಗೆ ನೋಟಿಸ್ ಜಾರಿ ಮಾಡಿ, ಅವರ ಅನುಭೋಗದಲ್ಲಿ ರುವ ಜಮೀನು ತನ್ನದೆಂದು ಹೇಳಿದೆ. ಇದರ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ವಿಪಕ್ಷಗಳಂತೂ ವಕ್ಛ್ ಮಂಡಳಿ ವಿರುದ್ಧ ಕೆಂಡಕಾರುತ್ತಿವೆ. ಆದರೆ, ಹಿಂದಿನ ಸರ್ಕಾರದ ಅವಧಿಯಲ್ಲಿ ಕೂಡ ವಕ್ಛ್ ಮಂಡಳಿಯಿಂದ ಕೆಲ ರೈತರಿಗೆ ನೋಟಿಸ್ ನೀಡಲಾಗಿತ್ತು ಎಂಬುದು ಸುಳ್ಳಲ್ಲ. ರಾಜ್ಯ ಅಥವಾ ದೇಶವನ್ನು ಸರ್ವ ಜನಾಂಗದ ಶಾಂತಿಯ ತೋಟವಾಗಿಸುವ ನಿಟ್ಟಿನಲ್ಲಿ ಎಲ್ಲರನ್ನೂ ಒಗ್ಗೂಡಿಸಿ ಕರೆದೊಯ್ಯಬೇಕಾದ ಕೆಲ ಮಠಾಧೀಶರಿಂದಲೇ ಸಂವಿಧಾನ ವಿರೋಧ ಮತ್ತು ಒಂದು ಸಮುದಾಯದ ವಿರುದ್ಧವಾಗಿ ಆಕ್ರೋಶ ವ್ಯಕ್ತವಾದರೆ ಧಾರ್ಮಿಕತೆಯನ್ನು ಜೀವನದ ಪ್ರಮುಖ ಭಾಗವಾಗಿ ಮಾಡಿಕೊಂಡಿರುವ ಸಾಮಾನ್ಯ ಜನರು ಹೇಗೆ ಪ್ರತಿಕ್ರಿಯಿಸಬಹುದು ಎಂಬುದು ರಹಸ್ಯವೇನು ಅಲ್ಲ.
ಉಡುಪಿ ಮಠದ ಶ್ರೀ ವಿಶ್ವ ಪ್ರಸನ್ನತೀರ್ಥ ಸ್ವಾಮೀಜಿ ಅವರು, ಸಮಾವೇಶವೊಂದರಲ್ಲಿ ‘ನಮಗೆ ಅನುಕೂಲವಾದ ಸಂವಿಧಾನ ಬೇಕು’ ಎಂದು ಬಹಿರಂಗವಾಗಿ ಹೇಳುವ ಮೂಲಕ ಎಲ್ಲ ಜನರೊಂದಿಗೆ ಸಾಮರಸ್ಯ ಜೀವನ ಸಾಧ್ಯವಿಲ್ಲ ಎಂಬುದನ್ನು ಪರೋಕ್ಷವಾಗಿ ಒಪ್ಪಿಕೊಂಡಂತಾಗಿದೆ.
ಅಂದರೆ, ಬಸವಣ್ಣ ಅವರ ‘ಇವ ನಮ್ಮವ ಇವ ನಮ್ಮವ’ ಎಂಬ ಆಶಯ ಅರ್ಥ ಕಳೆದುಕೊಂಡಿದೆ. ಸಂವಿಧಾನವು ಪ್ರತಿಯೊಬ್ಬ ವ್ಯಕ್ತಿಗೂ ಜೀವಿಸುವ ಹಕ್ಕು, ಧಾರ್ಮಿಕ ಹಕ್ಕು ನೀಡಿದೆ. ಅಲ್ಲದೆ, ಮತ್ತೊಬ್ಬರ ಧಾರ್ಮಿಕ ನಂಬಿಕೆ, ಆಚರಣೆಗೆ ಧಕ್ಕೆಯಾಗದಂತೆ ನಡವಳಿಕೆ ಇರಬೇಕು ಎಂಬುದನ್ನು ಎತ್ತಿಹಿಡಿದಿದೆ. ಈ ವಿಚಾರ ಸ್ವಾಮೀಜಿ ಅವರಿಗೆ ತಿಳಿಯದ್ದೇನಲ್ಲ. ಆದರೂ ಪ್ರತ್ಯೇಕವಾದ ಸಂವಿಧಾನದ ಬೇಡಿಕೆ ಮಂಡಿಸಿರುವುದು ಅವರ ಧಾರ್ಮಿಕ ಜ್ಞಾನಕ್ಕೆ ಕುಂದು ತರುತ್ತದೆ ಅಲ್ಲವೇ? ಇನ್ನು ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದಶ್ರೀ ಕುಮಾರ ಚಂದ್ರಶೇಖರ ಸ್ವಾಮೀಜಿ ಅವರು ನೇರವಾಗಿಯೇ ಮುಸ್ಲಿಮ್ ಸಮುದಾಯದವರ ವಿರುದ್ಧ ಕೆಂಡಕಾರುವ ಮೂಲಕ ಸಮಾಜವನ್ನೇ ಬೆಚ್ಚಿಬೀಳಿಸಿದ್ದಾರೆ. ಮುಸ್ಲಿಮ್ ಸಮುದಾಯಕ್ಕೆ ಮತದಾನದ ಹಕ್ಕನ್ನು ನಿರಾಕರಿಸಬೇಕು ಎಂದು ಜಗಜ್ಜಾಹೀರಾಗಿ ಹೇಳುವ ಮೂಲಕ ಮಠದ ಘನತೆಯನ್ನು ಒರೆಗೆ ಹಚ್ಚುವಂತೆ ಮಾಡಿದ್ದಾರೆ.
ಅವರೇಕೆ ಹಾಗೆ ಮಾತನಾಡಿದರು ಎಂಬುದರ ಬಗ್ಗೆ ವಿಸ್ತೃತ ಚರ್ಚೆಗಳು ಆರಂಭವಾಗಿವೆ. ಅವರ ವಿರುದ್ಧ ದೂರು ದಾಖಲಾಗಿದ್ದು, ಬೆಂಗಳೂರಿನ ಉಪ್ಪಾರ ಪೇಟೆ ಪೊಲೀಸರು ನೋಟಿಸ್ ನೀಡಿದ್ದಾರೆ. ಅವರು ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಆದರೆ, ಆಡಿದ ಮಾತು; ಒಡೆದ ಮುತ್ತು ವಾಪಸ್ ಬಾರದು’ ಎಂಬ ಗಾದೆಯ ಅರಿವು ಸ್ವಾಮೀಜಿ ಅವರಿಗೂ ಇದೆ. ಎಲ್ಲ ಸಮುದಾಯಗಳ ಜನರ ಸ್ವಾವಲಂಬನೆ, ಸ್ವಾಭಿಮಾನದ ಬದುಕಿಗೆ ದಾರಿದೀಪವಾಗಿರುವ ಸಂವಿಧಾನದ ಬಗ್ಗೆ ಈ ಪರಿಯ ಆಕ್ರೋಶ ಅಚ್ಚರಿ ಮೂಡಿಸುತ್ತದೆ. ಸಂವಿಧಾನಕ್ಕೆ ಸಾಕಷ್ಟು ಬಾರಿ ತಿದ್ದುಪಡಿ ತರಲಾಗಿದೆ. ಅದನ್ನು ಮರೆತು ಮಾತನಾಡಬಾರದು. ಅಗತ್ಯವಿದ್ದರೆ ತಿದ್ದುಪಡಿಗೆ ಮನವಿ ಮಾಡಬಹುದು. ಅದರ ಹೊರತಾಗಿ ಪ್ರತ್ಯೇಕ ಸಂವಿಧಾನವನ್ನು ಬಯಸುವುದಾಗಲಿ, ಒಂದು ಸಮುದಾಯಕ್ಕೆ ಸಂವಿಧಾನ ಬದ್ಧವಾದ ಹಕ್ಕನ್ನು ನಿರಾಕರಿಸುವಂತೆ ಮನವಿ ಮಾಡುವುದಾಗಲಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗುತ್ತದೆ, ದೇಶದ ಅಸ್ಮಿತೆಗೆ ಧಕ್ಕೆಯಾಗುತ್ತದೆ.
ಒಂದು ಸುಳ್ಳನ್ನು ೯೯ ಬಾರಿ ಹೇಳಿದ ನಂತರ ೧೦೦ನೇ ಸಾರಿ ಹೇಳುವಾಗ ಅದು ನಿಜ ಎಂಬಂತೆ ಬಿಂಬಿಸುವ ಗೊಬೆಲ್ಸ್ ತಂತ್ರದಂತೆ ಈ ಬೆಳವಣಿಗೆಗಳು ಭಾಸವಾಗುತ್ತಿವೆ. ಇದರ ಬಗ್ಗೆ ಗಂಭೀರವಾಗಿ ಚಿಂತಿಸುವ ಕೆಲಸ ಸರ್ಕಾರಗಳಿಂದಾಗಬೇಕಿದೆ. ಇಡೀ ಪ್ರಪಂಚವೇ ಭಾರತದ ಸಂವಿಧಾನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿವೆ. ಆದರೆ, ‘ಹಿತ್ತಲಗಿಡ ಮದ್ದಲ್ಲ’ ಎಂಬ ಮಾತಿನಂತೆ ಈ ಮಣ್ಣಿನ ಬಹುತೇಕ ಧಾರ್ಮಿಕ, ಆಧ್ಯಾತ್ಮಿಕ, ರಾಜಕೀಯ ನಾಯಕರಿಗೆ ಸಂವಿಧಾನ ಸಾಧಾರಣ ಪಠ್ಯ ಪುಸ್ತಕದಂತೆ ಅನಿಸುತ್ತಿರಬಹುದು. ಅಲ್ಲದೆ, ಜಾತಿ, ಮತ, ಪಂಥ, ಧರ್ಮಗಳ ಬೇಲಿಯನ್ನೂ ಮೀರಿ ಸಮ ಸಮಾಜ ಕಟ್ಟುವ ಸಂವಿಧಾನದ ಮಹತ್ವದ ಆಶಯ ಅವರೆಲ್ಲರಿಗೂ ಜ್ವಾಲಾಮುಖಿಯಂತೆ ಕಾಣುತ್ತಿದೆ ಅನಿಸುತ್ತಿದೆ. ಗಾಂಧೀಜಿ, ಸರ್ದಾರ್ ವಲ್ಲಭಭಾಯ್ ಪಟೇಲ್, ಜವಾಹರಲಾಲ್ ನೆಹರೂ, ಲಾಲ್ ಬಹದ್ದೂರ್ ಶಾಸ್ತ್ರಿ ಅಂತಹ ಮಹಾನ್ ನಾಯಕರು, ಡಾ.ಬಿ.ಆರ್. ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ಸ್ವೀಕರಿಸಿ, ನಾಡಿನ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಹಾಗಾದರೆ ಅವರುಗಳಿಗೆ ಈ ಸಂವಿಧಾನದ ಮೂಲ ಆಶಯ ಅರ್ಥವೇ ಆಗಿರಲಿಲ್ಲ ಎನ್ನಬಹುದೆ?
ಕುವೆಂಪು ಮಲೆನಾಡಿನಲಿ ಹುಟ್ಟಿದರು ಮೈಸೂರಿಗೆ ಕಾಲಿಟ್ಟರು ಕವಿಯಾಗಿ ಕನ್ನಡದ ಮೊದಲ ಜ್ಞಾನಪೀಠ ಗಳಿಸಿದರು ಮೂಢನಂಬಿಕೆಯನು ಬದಿಗೊತ್ತಿ ವಿಜ್ಞಾನದ ಬೀಜ ಬಿತ್ತಿ…
ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿವಿ (ಕೆಎಸ್‌ಒಯು) ರಸ್ತೆ ಸಂಪೂರ್ಣ ಹಾಳಾಗಿದ್ದು, ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಮಳೆಗಾಲದಲ್ಲಿ ಈ…
ಹೆಗ್ಗಡದೇವನಕೋಟೆ ತಾಲ್ಲೂಕಿನ ಹಂಪಾಪುರ ಗ್ರಾಮದಿಂದ ಜಿನ್ನಹಳ್ಳಿ -ಮಲಾರದಹುಂಡಿಗೆ ತೆರಳುವ ಮುಖ್ಯ ರಸ್ತೆ ಹಾಳಾಗಿದ್ದು, ವಿಪರೀತ ಹಳ್ಳ-ಕೊಳ್ಳಗಳಿಂದ ಕೂಡಿದೆ. ಹಲವಾರು ಬಾರಿ…
ಹೊಸ ವರ್ಷದ ಆಚರಣೆ ಡಿ.೩೧ರ ರಾತ್ರಿ ಮತ್ತು ಜನವರಿ ೧ ರಂದು ನಡೆಯುತ್ತದೆ. ಯುವ ಜನತೆಗೆ ಹೊಸ ವರ್ಷದ ಆಚರಣೆ…
ಡಾ.ಪಿ.ಮಂಜುನಾಥ ನಕಾರಾತ್ಮಕ ಭಾವನೆ ಮಕ್ಕಳಲ್ಲಿ ಮೂಡದಂತೆ ಎಚ್ಚರ ಅಗತ್ಯ ಪರೀಕ್ಷೆಗಳು ಕೆಲವೇ ತಿಂಗಳುಗಳಲ್ಲಿ ಸಾಲು ಸಾಲಾಗಿ ಪ್ರಾರಂಭವಾಗಲಿವೆ. ಪರೀಕ್ಷೆ ಹತ್ತಿರವಾಗುತ್ತಿದ್ದಂತೆ…
೨೦೨೫ ನೇ ಸಾಲಿನಲ್ಲಿ ಹಲವಾರು ಸಾಧಕರು ಹೊರಹೊಮ್ಮಿದ್ದು, ಸಾಹಿತ್ಯ, ಕಲೆ, ವಿಜ್ಞಾನ, ಸಂಶೋಧನೆ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ತಮ್ಮ ಪ್ರತಿಭೆ,…