ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿ ಇತ್ತೀಚೆಗೆ ನಡೆದ ಮೈಸೂರು ವಿಭಾಗೀಯ ಮಟ್ಟದ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರ ಮೈಸೂರು ವಿಭಾಗದ ಎಲ್ಲ ಏಳು ಜಿಲ್ಲೆಗಳ ಅಭಿವೃದ್ಧಿಯ ಕನಸಿಗೆ ನೀರೆರೆದಿದೆ. ಅದರಲ್ಲಿಯೂ ವಿಶೇಷವಾಗಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಪ್ರಗತಿಗಾಗಿ ೩,೬೪೭.೨೪ ಕೋಟಿ ರೂ. ಮೊತ್ತದ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ.
ಚಾಮರಾಜನಗರ ಜಿಲ್ಲೆಯಲ್ಲಿ ಮೊದಲ ಬಾರಿಗೆ ನಡೆದ ಈ ಸಂಪುಟ ಸಭೆಯಲ್ಲಿ ಮೈಸೂರು, ಮಂಡ್ಯ, ಕೊಡಗು, ಚಾಮರಾಜನಗರ, ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಅಭಿವೃದ್ಧಿ ಕುರಿತು ಸುದೀರ್ಘ ಚರ್ಚೆ ನಡೆದಿದೆ. ಮಾನವ – ವನ್ಯಜೀವಿ ಸಂಘರ್ಷ ತಡೆಗೆ ೨೧೦ ಕೋಟಿ ರೂ. ವೆಚ್ಚದಲ್ಲಿ ಬ್ಯಾರಿಕೇಡ್ ನಿರ್ಮಾಣ, ಕುಡಿಯುವ ನೀರಿಗಾಗಿ ೩೧೫ ಕೋಟಿ ರೂ., ಆರೋಗ್ಯ ಸುಧಾರಣೆಗೆ ೨೨೮ ಕೋಟಿ ರೂ., ಮೈಸೂರು ವಿಭಾಗದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ೩೦೦ ಕೋಟಿ ರೂ. … ಹೀಗೆ ಅನೇಕ ಅಭಿವೃದ್ಧಿ ಯೋಜನೆಗಳನ್ನು ಘೋಷಿಸಲಾಗಿದೆ.
ಸಂಪುಟ ಸಭೆಯಲ್ಲಿ ಘೋಷಿಸಿರುವ ಯೋಜನೆಗಳು, ಕಾರ್ಯಕ್ರಮಗಳು ಈ ವಿಭಾಗೀಯ ಮಟ್ಟದ ಅಭಿವೃದ್ಧಿಗೆ ಪೂರಕವಾಗಿವೆ. ಆದರೆ, ಈ ಎಲ್ಲ ಯೋಜನೆಗಳೂ ನಿಗದಿತ ಕಾಲಮಿತಿಯೊಳಗೆ ಮುಗಿಯುವಂತೆ ಕ್ರಮವಹಿಸುವುದು ರಾಜ್ಯ ಸರ್ಕಾರದ ಮುಂದಿರುವ ಸವಾಲು. ಸಚಿವ ಸಂಪುಟಸಭೆಯಲ್ಲಿ ಕೈಗೊಳ್ಳುವ ಎಲ್ಲ ನಿರ್ಧಾರಗಳೂ ಅನುಷ್ಠಾನಗೊಳ್ಳುವುದಿಲ್ಲ. ಅದಕ್ಕೆ ಅನುದಾನದ ಕೊರತೆ, ತಾಂತ್ರಿಕ ಅಡಚಣೆ ಇತ್ಯಾದಿ ಕಾರಣಗಳು ಇರುತ್ತವೆ. ಇನ್ನು ಹಲವು ಕಡೆ ಜನಪ್ರತಿನಿಧಿಗಳು, ಸ್ಥಳೀಯ ರಾಜಕಾರಣಿಗಳು ಅಡ್ಡಗಾಲು ಹಾಕುವುದು ಸಹಜ. ಮುಖ್ಯವಾಗಿ ಕಾಮಗಾರಿಗಳನ್ನು ಯಾರಿಗೆ ಅಥವಾ ಯಾವ ಸಂಸ್ಥೆಗೆ ಗುತ್ತಿಗೆ ನೀಡಲಾಗುತ್ತದೆ ಎಂಬುದು ಅಸಮಾಧಾನಕ್ಕೆ ಕಾರಣವಾಗುತ್ತದೆ.
ಒಬ್ಬರಿಗೆ ಗುತ್ತಿಗೆ ನೀಡಿದರೆ ಇನ್ನೊಬ್ಬರಿಗೆ ಅಸಹನೆ ಎನ್ನುವಂತಾಗಿದೆ. ಆಡಳಿತ ಪಕ್ಷದವರೇ ಆಗಿದ್ದರೂ ಗುಂಪುಗಾರಿಕೆ ಶುರುವಾಗುತ್ತದೆ. ಗುತ್ತಿಗೆ ಪಡೆಯಲು ಆನ್‌ಲೈನ್ನಲ್ಲಿ ಮುಕ್ತವಾಗಿ ಟೆಂಡರ್ ಕರೆಯಬಹುದು. ಆದರೆ, ಆತ ಅಥವಾ ಆ ಸಂಸ್ಥೆ ಉಪ ಗುತ್ತಿಗೆ ನೀಡುವಾಗ ಗೊಂದಲ, ಅಡ್ಡಿ ಎದುರಾಗುತ್ತವೆ. ಬೃಹತ್ ಯೋಜನೆಗಳ ಕಾಮಗಾರಿಗಳ ಗುತ್ತಿಗೆಯಲ್ಲಿ ಬಹುಶಃ ಈ ತರಹದ ಆತಂಕ ಇರುವುದಿಲ್ಲ. ಆದರೆ, ತುಂಡು ಗುತ್ತಿಗೆಗಳಲ್ಲಿ ಸ್ವಪಕ್ಷೀಯರು, ಬಂಧುಗಳು ಎಂಬ ವಾಂಛೆಯಿಂದ ನಿಯಮ ಮೀರಿ ಗುತ್ತಿಗೆ ನೀಡಲಾಗುತ್ತದೆ ಎಂಬ ಆರೋಪಗಳು ಇವೆ. ಅಲ್ಲದೆ, ‘ಪರ್ಸೆಂಟೇಜ್ ನಡೆಯುತ್ತದೆ’ ಎಂಬ ಆಪಾದನೆಗಳೂ ಜೋರಾಗಿಯೇ ಸದ್ದು ಮಾಡುತ್ತವೆ.
ಇಂತಹ ಸಂದಿಗ್ಧ ಸ್ಥಿತಿಯಿಂದ ಪಾರಾಗಲು ಕಾಮಗಾರಿಗಳನ್ನೇ ಸ್ಥಗಿತಗೊಳಿಸುವುದೂ ಉಂಟು. ಆದರೆ, ಈಗ ಸಚಿವ ಸಂಪುಟ ಸಭೆ ಪ್ರಕಟಿಸಿರುವ ಯೋಜನೆಗಳಿಗೆ ಅಂತಹ ದುಸ್ಥಿತಿ ಎದುರಾಗಬಾರದು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಸಂಪುಟ ಸಹೋದ್ಯೋಗಿಗಳು ಈ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಕಟಿಬದ್ಧರಾಗಬೇಕಿದೆ. ಎಲ್ಲೋ ಗಲಾಟೆಯಾಯಿತು, ಬರಗಾಲ ಎದುರಾಯಿತು ಎಂಬ ಕಾರಣಕ್ಕೆ ಯೋಜನೆಗಳ ಜಾರಿ ಕುಂಠಿತಗೊಳ್ಳಬಾರದು. ಅದಕ್ಕೆ ನಿಗದಿತ ಗಡುವಿನೊಳಗೆ ಕಾಮಗಾರಿಗಳ ಎಲ್ಲ ಪ್ರಕ್ರಿಯೆಗಳನ್ನೂ ವೇಗವಾಗಿ ಸಂಪೂರ್ಣಗೊಳಿಸಿದರೆ, ಸಾರ್ವಜನಿಕರಿಗೆ ಅವುಗಳ ಅನುಕೂಲ ಸುಲಭವಾಗಿ ತಲುಪುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಚುನಾವಣೆಗಳು ಈ ಅಭಿವೃದ್ಧಿ ಕಾಮಗಾರಿಗಳಿಗೆ ದೊಡ್ಡ ತಡೆಯೊಡ್ಡಿಬಿಡುತ್ತವೆ. ಲೋಕಸಭೆಯಿಂದ ಗ್ರಾಮ ಪಂಚಾಯಿತಿವರೆಗೆ ಯಾವುದೇ ಚುನಾವಣೆ ಎದುರಾದರೂ ಚುನಾವಣಾ ನೀತಿ ಸಂಹಿತೆಯಿಂದ ಎಲ್ಲ ಕಾಮಗಾರಿಗಳೂ ನನೆಗುದಿಗೆ ಬೀಳುತ್ತವೆ. ಒಂದು ರೀತಿಯಲ್ಲಿ ಬಹುತೇಕ ಆಡಳಿತ ಪಕ್ಷಗಳಿಗೂ ಇದೊಂದು ರೀತಿಯಲ್ಲಿ ಅನುಕೂಲಕರವಾಗುತ್ತದೆ. ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ, ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡಿರುವ ನಿರ್ಧಾರಗಳ ಅನುಷ್ಠಾನಕ್ಕೆ ಮುಂದಾಗಬೇಕು. ಆ ಮೂಲಕ ಮಹದೇಶ್ವರಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆ ಮಾದರಿಯಾಗಬೇಕು. ಈ ಬಗ್ಗೆ ರಾಜ್ಯ ಸರ್ಕಾರ, ಅಧಿಕಾರಿಗಳು ಹೆಚ್ಚು ಒತ್ತು ನೀಡುವುದು ಕೂಡ ಅತ್ಯಗತ್ಯ.
” ಬೃಹತ್ ಯೋಜನೆಗಳ ಕಾಮಗಾರಿಗಳ ಗುತ್ತಿಗೆಯಲ್ಲಿ ಬಹುಶಃ ಈ ತರಹದ ಆತಂಕ ಇರುವುದಿಲ್ಲ. ಆದರೆ, ತುಂಡು ಗುತ್ತಿಗೆಗಳಲ್ಲಿ ಸ್ವಪಕ್ಷೀಯರು, ಬಂಧುಗಳು ಎಂಬ ವಾಂಛೆಯಿಂದ ನಿಯಮ ಮೀರಿ ಗುತ್ತಿಗೆ ನೀಡಲಾಗುತ್ತದೆ ಎಂಬ ಆರೋಪಗಳು ಇವೆ. ಅಲ್ಲದೆ, ‘ಪರ್ಸೆಂಟೇಜ್ ನಡೆಯುತ್ತದೆ’ ಎಂಬ ಆಪಾದನೆಗಳೂ ಜೋರಾಗಿಯೇ ಸದ್ದು ಮಾಡುತ್ತವೆ. ಇಂತಹ ಸಂದಿಗ್ಧ ಸ್ಥಿತಿಯಿಂದ ಪಾರಾಗಲು ಕಾಮಗಾರಿಗಳನ್ನೇ ಸ್ಥಗಿತಗೊಳಿಸುವುದೂ ಉಂಟು. ಆದರೆ, ಈಗ ಸಚಿವ ಸಂಪುಟ ಸಭೆ ಪ್ರಕಟಿಸಿರುವ ಯೋಜನೆಗಳಿಗೆ ಅಂತಹ ದುಸ್ಥಿತಿ ಎದುರಾಗಬಾರದು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಸಂಪುಟ ಸಹೋದ್ಯೋಗಿಗಳು ಈ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಕಟಿಬದ್ಧರಾಗಬೇಕಿದೆ.”
ಬೆಂಗಳೂರು : ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುರಿತಂತೆ ಪ್ರಶ್ನೆಗಳು ಉದ್ಭವಿಸಿರುವ ಸಂದರ್ಭದಲ್ಲಿ, ಹೊಸ ವರ್ಷಾಚರಣೆಯ ವೇಳೆ ಯಾವುದೇ ಅವಘಡ ನಡೆಯದಂತೆ…
ಮೈಸೂರು : ಮೈಸೂರಿನ ವಿಶ್ವ ವಿಖ್ಯಾತ ಅರಮನೆ ಸಮೀಪ ಸಂಭವಿಸಿದ್ದ ಹೀಲಿಯಂ ಗ್ಯಾಸ್ ಸಿಲೆಂಡರ್ ಸ್ಫೋಟ ದುರಂತದಲ್ಲಿ ಸಾವಿನ ಸಂಖ್ಯೆ…
ತಿರುವನಂತಪುರಂ : ಬಿಜೆಪಿಯಿಂದ ಮೊದಲ ಬಾರಿಗೆ ತಿರುವನಂತಪುರಂ ನಗರ ಮೇಯರ್ ಆಗಿ ಆಯ್ಕೆಯಾಗುವ ಮೂಲಕ ವಿ.ವಿ.ರಾಜೇಶ್ ಇತಿಹಾಸ ನಿರ್ಮಿಸಿದ್ದಾರೆ. 49…
ಚಿಕ್ಕೋಡಿ : ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿರುವ ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಯತೀಂದ್ರ ಯಾವುದೇ…
ಹುಣಸೂರು : ತಾಲ್ಲೂಕಿನ ಗುರುಪುರದ ಟಿಬೆಟ್ ನಿರಾಶ್ರಿತರ ಕೇಂದ್ರದಲ್ಲಿ ಮತ್ತೆ ಹುಲಿ ಕಾಣಿಸಿಕೊಂಡಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ನಾಗರಹೊಳೆ ರಾಷ್ಟ್ರೀಯ…
ಬೆಂಗಳೂರು : ಭಾರತವು ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಜಗತ್ತಿನ ಮೂರನೇ ಆರ್ಥಿಕ ಶಕ್ತಿ ಆಗುವತ್ತ ದಾಪುಗಾಲಿಡುತ್ತಿದೆ. ಆದರೆ, ಉತ್ತಮ…