ಸಂಪಾದಕೀಯ

ರಾಜ್ಯ ಕಾಂಗ್ರೆಸಿಗರ ಪರ್ಯಾಯ ನಾಯಕತ್ವದ ಕನಸಿಗೆ ಬ್ರೇಕ್

ಬೆಂಗಳೂರು ಡೈರಿ, ಆರ್.ಟಿ ವಿಠ್ಠಲ ಮೂರ್ತಿ

ಈ ಬಾರಿ ಕಾಂಗ್ರೆಸ್ ಹೈಕಮಾಂಡ್ ಎಚ್ಚರಿಕೆಯ ಹೆಜ್ಜೆಯನ್ನಿಟ್ಟಿದೆ. ಮುಡಾ ಪ್ರಕರಣದ ಹಿನ್ನೆಲೆಯಲ್ಲಿ ಹೈಕೋರ್ಟ್ ಹಾಗೂ ಜನಪ್ರತಿನಿಧಿಗಳ ನ್ಯಾಯಾಲಯ ನೀಡಿದ ತೀರ್ಪು ರಾಜ್ಯ ಕಾಂಗ್ರೆಸ್ ಪಾಳೆಯದಲ್ಲಿ ತಲ್ಲಣ ಎಬ್ಬಿಸುವ ಮುನ್ನವೇ ಅದು ಇಟ್ಟ ಈ ಹೆಜ್ಜೆ ಕುತೂಹಲಕಾರಿಯಾಗಿದೆ. ‌

ಅದೆಂದರೆ ನ್ಯಾಯಾಲಯಗಳ ತೀರ್ಪು ಬಂದ ತಕ್ಷಣ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಮಾತನಾಡಿದ್ದು. ಹೀಗೆ ಸಿದ್ದರಾಮಯ್ಯ ಅವರ ಜತೆ ಮಾತನಾಡಿದ ರಾಹುಲ್ ಗಾಂಧಿ ಕೇವಲ ಸಾಂತ್ವನವನ್ನಷ್ಟೇ ನೀಡಲಿಲ್ಲ. ಬದಲಿಗೆ ರಾಜ್ಯ ಕಾಂಗ್ರೆಸ್ ಪಾಳೆಯಕ್ಕೆ ಎಚ್ಚರಿಕೆಯ ಸಂದೇಶವನ್ನೂ ರವಾನಿಸಿದರು.

ಅಂದ ಹಾಗೆ ನ್ಯಾಯಾಲಯಗಳ ತೀರ್ಪು ಬಂದ ಹಿನ್ನೆಲೆಯಲ್ಲಿ ಕುಗ್ಗಬೇಡಿ, ಜಗ್ಗಬೇಡಿ. ಬದಲಿಗೆ ರಾಜ್ಯ ಪ್ರವಾಸ ಮಾಡಿ. ಬಿಜೆಪಿ ಮಿತ್ರಕೂಟ ನಿಮ್ಮನ್ನು ಇಳಿಸಲು, ಆ ಮೂಲಕ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಲು ನಡೆಸುತ್ತಿರುವ ಸಂಚನ್ನು ವಿವರಿಸಿ ಎಂಬುದು ಸಿದ್ದರಾಮಯ್ಯ ಅವರಿಗೆ ರಾಹುಲ್ ಗಾಂಧಿ ನೀಡಿದ ಸಲಹೆ. ಗಮನಿಸಬೇಕಾದ ಸಂಗತಿ ಎಂದರೆ, ಈ ಹಿಂದೆ ರಾಜ್ಯಪಾಲರು ಮುಡಾ ಪ್ರಕರಣದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ವಿರುದ್ಧ ವಿಚಾರಣೆಗೆ ಅನುಮತಿ ನೀಡಿದಾಗ ಕಾಂಗ್ರೆಸ್ ವರಿಷ್ಠರು, ನಾವು ನಿಮ್ಮೊಂದಿಗಿದ್ದೇವೆ ಎಂದು ಅಭಯ ನೀಡಿದ್ದರು. ಆದರೆ ಅವತ್ತು ಕಾಂಗ್ರೆಸ್ ಹೈಕಮಾಂಡ್ ನೀಡಿದ ಅಭಯ ಕೈ ಪಾಳೆಯದ ಗೊಂದಲವನ್ನು ಕಡಿಮೆ ಮಾಡಲಿಲ್ಲ. ಬದಲಿಗೆ ರಾಜ್ಯಪಾಲರು ವಿಚಾರಣೆಗೆ ಅನುಮತಿ ನೀಡಿದ ತಕ್ಷಣವೇ ರಾಜ್ಯ ಕಾಂಗ್ರೆಸ್‌ನಲ್ಲಿ ಗೊಂದಲ ಮೂಡಿಸಿತು.

ಇದಕ್ಕೆ ಪರ್ಯಾಯ ನಾಯಕತ್ವದ ಬಗ್ಗೆ ಶುರುವಾದ ಚರ್ಚೆಯೇ ಮುಖ್ಯ ಕಾರಣ. ರಾಜ್ಯಪಾಲರು ವಿಚಾರಣೆಗೆ ಅನುಮತಿ ನೀಡಿದ್ದಾರೆ ಎಂದ ಕೂಡಲೇ ರಾಜ್ಯ ಕಾಂಗ್ರೆಸ್ ಪಾಳೆಯದಲ್ಲಿ ಸಿಎಂ ಬದಲಾವಣೆಯ ವದಂತಿ ಶುರುವಾಯಿತು. ಒಂದು ವೇಳೆ ಸಿದ್ದರಾಮಯ್ಯ ಅವರು ಕೆಳಗಿಳಿದರೆ ಹಾಲಿ ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರೇ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂಬುದರಿಂದ ಶುರುವಾದ ಚರ್ಚೆ ನಾನಾ ಮಗ್ಗುಲುಗಳಿಗೆ ಹೊರಳಿಕೊಂಡು ಸ್ವತಃ ಪಕ್ಷದ ಹೈಕಮಾಂಡ್ ನಾಯಕರೇ ಕಕ್ಕಾಬಿಕ್ಕಿಯಾಗುವಂತಾಯಿತು. ಈ ಚರ್ಚೆಯ ಪ್ರಕಾರ, ಪಕ್ಷ ಅಽಕಾರಕ್ಕೆ ಬರುವ ಸಂದರ್ಭದಲ್ಲಿ ಮುಖ್ಯಮಂತ್ರಿ ಹುದ್ದೆಗಾಗಿ ಸಿದ್ದರಾಮಯ್ಯ ಮತ್ತು ಡಿ. ಕೆ. ಶಿವಕುಮಾರ್ ಅವರ ನಡುವೆ ಪೈಪೋಟಿ ಶುರುವಾಯಿತಲ್ಲ ಈ ಪೈಪೋಟಿಯನ್ನು ನಿಯಂತ್ರಿಸಲು ಮುಖ್ಯಮಂತ್ರಿ ಹುದ್ದೆಯ ಅವಽಯನ್ನು ಎರಡು ಅವಽಗೆ ವಿಂಗಡಿಸಲು ಹೈಕಮಾಂಡ್ ವರಿಷ್ಠರು ನಿರ್ಧರಿಸಿದ್ದಾರೆ.

ಅದರ ಪ್ರಕಾರ, ಮೊದಲ ಕಂತಿನಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದು, ಎರಡನೇ ಕಂತಿನಲ್ಲಿ ಡಿ. ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ವಾದ ಶುರುವಾಯಿತು. ಈ ವಾದ ಕೇಳಿ ಬಂದ ಒಂದೆರಡು ದಿನಗಳಲ್ಲಿ ಮತ್ತೊಂದು ವಾದ ಶುರುವಾಯಿತು. ಇವತ್ತು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದರೆ ಅವರ ಬೆಂಬಲಿಗರು ಡಿ. ಕೆ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಹುದ್ದೆಯಲ್ಲಿ ನೋಡಲು ಇಚ್ಛಿಸುವುದಿಲ್ಲ. ಒಂದು ವೇಳೆ ತಮ್ಮಿಚ್ಛೆಗೆ ವಿರುದ್ಧವಾಗಿ ಪಕ್ಷದ ವರಿಷ್ಠರು ಡಿ. ಕೆ. ಶಿವಕುಮಾರ್ ಅವರಿಗೇ ಮಣೆ ಹಾಕಿದರೆ ಪಕ್ಷ ತೊರೆಯಲೂ ಅವರು ಸಜ್ಜಾಗಿದ್ದಾರೆ.

ಇದು ಸ್ವತಃ ಹೈಕಮಾಂಡ್ ವರಿಷ್ಠರಿಗೂ ಗೊತ್ತು. ಹೀಗಾಗಿ ವರಿಷ್ಠರು ಸಿದ್ದರಾಮಯ್ಯ ಜಾಗಕ್ಕೆ ಮತ್ತೊಬ್ಬರು ಬರುವುದು ಅನಿವಾರ್ಯವಾದರೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕರೆತಂದು ಕೂರಿಸಲಿದ್ದಾರೆ ಎಂದು ಮತ್ತೊಂದು ಗುಂಪು ವಾದಿಸತೊಡಗಿತು. ಈ ವಾದ ಚಾಲ್ತಿಯಲ್ಲಿರುವಾಗಲೇ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ಹೆಸರು ರೇಸಿಗೆ ಬಂದಿದ್ದಲ್ಲದೆ, ಸಿದ್ದರಾಮಯ್ಯ ಕೆಳಗಿಳಿಯುವುದೇ ಆದರೆ ಶಾಸಕಾಂಗ ಪಕ್ಷದಲ್ಲಿ ನಾಯಕನ ಆಯ್ಕೆಯಾಗಬೇಕು ಎಂಬ ಕೂಗು ಶುರುವಾಗುತ್ತದೆ. ಈ ಸಂದರ್ಭದಲ್ಲಿ ಶಾಸಕಾಂಗ ಪಕ್ಷದಲ್ಲಿ ನಾಯಕನ ಆಯ್ಕೆ ಅನಿವಾರ್ಯವಾದರೆ ಪರಮೇಶ್ವರ್ ಕಣಕ್ಕಿಳಿಯುತ್ತಾರೆ ಎಂಬ ಮಾತು ಶುರುವಾಯಿತು.

ಇದು ಮುಂದುವರಿದು, ನಾಯಕನ ಆಯ್ಕೆಗಾಗಿ ಶಾಸಕಾಂಗ ಸಭೆ ಸೇರಿದರೆ ಡಿಕೆಶಿ ಮತ್ತು ಪರಮೇಶ್ವರ್ ಮಧ್ಯೆ ಸಂಘರ್ಷ ಶುರುವಾಗುತ್ತದೆ. ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರ ಬೆಂಬಲಿಗರು ಪರಮೇಶ್ವರ್ ಅವರ ಬೆನ್ನಿಗೆ ನಿಲ್ಲಲಿದ್ದು, ಇದರ ಪರಿಣಾಮವಾಗಿ ಪರಮೇಶ್ವರ್ ಮುಖ್ಯಮಂತ್ರಿ ಹುದ್ದೆಯ ಮೇಲೆ ಬಂದು ಕೂರುತ್ತಾರೆ ಎಂಬಲ್ಲಿಗೆ ತಲುಪಿತು. ಈ ಮಧ್ಯೆ ಲೊಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರೂ ಮುಂದಿನ ಮುಖ್ಯಮಂತ್ರಿಯಾಗಲು ಹವಣಿಸುತ್ತಿದ್ದು, ಅವರ ಹಿಂದೆ ನಲವತ್ತು ಶಾಸಕರ ಬೆಂಬಲ ಹೊಂದಿದ್ದಾರೆ. ಹೀಗಾಗಿ ಅವರಿಗೂ ಮುಖ್ಯಮಂತ್ರಿಯಾಗುವ ಅವಕಾಶವಿದೆ ಎಂಬ ಮಾತು ಕೇಳಿ ಬಂತು.

ಹೀಗೆ ಮುಖ್ಯಮಂತ್ರಿ ಹುದ್ದೆಯ ರೇಸಿಗೆ ಬಣ್ಣ ಬಂದಾಗ ಹಿರಿಯ ನಾಯಕ ಆರ್. ವಿ. ದೇಶಪಾಂಡೆ ಕೂಡ ಸುಮ್ಮನಿರಲಿಲ್ಲ. ಬದಲಿಗೆ ಸಿದ್ದರಾಮಯ್ಯ ಅವರು ಬಯಸಿದರೆ ನಾನು ಸಿಎಂ ಆಗುತ್ತೇನೆ. ನನಗೂ ಮಂತ್ರಿಯಾಗಿ ಸಾಕಾಗಿದೆ. ಈಗ ಸಿಎಂ ಆಗುವ ಇಚ್ಛೆ ಇದೆ. ಸ್ವತಃ ಸಿದ್ದರಾಮಯ್ಯ ಅವರು ಬಯಸಿದರೆ ನಾನು ಸಿಎಂ ಆಗುತ್ತೇನೆ ಎಂಬುದು ದೇಶಪಾಂಡೆ ಮಾತು. ಯಾವಾಗ ಭವಿಷ್ಯದ ಸಿಎಂ ಹುದ್ದೆಗೆ ಹಲವರ ಸರ್ಕಸ್ಸು ಆರಂಭವಾಯಿತೋ ಅದು ಸಿದ್ದರಾಮಯ್ಯ ಅವರೇ ಆಡಿದ ಒಂದು ಮಾತಿನಿಂದ ಕ್ಷೀಣವಾಯಿತು. ಅದೆಂದರೆ ನನ್ನನ್ನು ಇಳಿಸುವುದು ಸುಲಭವಲ್ಲ ಎಂಬ ಮಾತು. ಯಾವಾಗ ಸಿದ್ದರಾಮಯ್ಯ ಈ ಮಾತುಗಳನ್ನು ಹೇಳಿದರೋ ಅದು ಏಕಕಾಲಕ್ಕೆ ತಮ್ಮನ್ನು ಇಳಿಸಲು ಪ್ರಯತ್ನಿಸುತ್ತಿರುವ ಬಿಜೆಪಿ ಮಿತ್ರಕೂಟಕ್ಕೆ ಮಾತ್ರವಲ್ಲ, ಭವಿಷ್ಯದ ನಾಯಕತ್ವಕ್ಕಾಗಿ ಪೈಪೋಟಿ ಆರಂಭಿಸಿದ ರಾಜ್ಯ ಕಾಂಗ್ರೆಸ್ಸಿಗರಿಗೂ ಎಚ್ಚರಿಕೆಯ ಸಂದೇಶವಾಗಿತ್ತು.

ಹೀಗಾಗಿ ಈ ಸಲ ಹೈಕೋರ್ಟ್ ಮತ್ತು ಜನಪ್ರತಿನಿಽಗಳ ನ್ಯಾಯಾಲಯದ ತೀರ್ಪು ಹೊರಬಿದ್ದ ನಂತರ ಕಾಂಗ್ರೆಸ್ ಹೈಕಮಾಂಡ್ ಎಚ್ಚೆತ್ತಿದೆ. ಸ್ವತಃ ರಾಹುಲ್ ಗಾಂಽ ಅವರು, ನಿಮ್ಮ ಜತೆ ನಾವಿದ್ದೇವೆ. ಹೀಗಾಗಿ ಮಿತ್ರಕೂಟದ ಸಂಚನ್ನು ನಾಡಿನ ಜನರಿಗೆ ವಿವರಿಸಲು ರಾಜ್ಯ ಪ್ರವಾಸ ಮಾಡಿ ಎಂದು ಸೂಚಿಸಿದರು. ಅರ್ಥಾತ್, ಈ ಸಲ ಸಿದ್ದರಾಮಯ್ಯ ಕೆಳಗಿಳಿಯುತ್ತಾರೆ, ಅವರ ಜಾಗಕ್ಕೆ ನಾವು ಬರುತ್ತೇವೆ ಅಂತ ರಾಜ್ಯದ ನಾಯಕರು ಕನಸು ಕಾಣಲು ಹೈಕಮಾಂಡ್ ಅವಕಾಶ ನೀಡಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಸಿದ್ದರಾಮಯ್ಯ ಕೆಳಗಿಳಿದರೆ ಅದು ರಾಜ್ಯ ಸರ್ಕಾರದ ಪದಚ್ಯುತಿಗೆ ದಾರಿಯಾಗಲಿದೆ ಎಂಬುದು ಹೈಕಮಾಂಡ್ ವರಿಷ್ಠರಿಗೆ ಚೆನ್ನಾಗಿ ಗೊತ್ತು. ಹೀಗಾಗಿ ಪರ್ಯಾಯ ನಾಯಕತ್ವದ ಕನಸು ಬೇರೆಯವರಿಗೆ ಬೀಳದೆ ಇರಲೆಂದು ಹೈಕಮಾಂಡ್ ವರಿಷ್ಠರೇ ಅದಕ್ಕೆ ಬ್ರೇಕ್ ಹಾಕಿದ್ದಾರೆ. ಯಾವ ದೃಷ್ಟಿಯಿಂದ ಗಮನಿಸಿದರೂ ಇದು ಕುತೂಹಲಕಾರಿ.

 

ಆಂದೋಲನ ಡೆಸ್ಕ್

Share
Published by
ಆಂದೋಲನ ಡೆಸ್ಕ್

Recent Posts

ಮೈಸೂರು ಸೇರಿದಂತೆ 4ಜಿಲ್ಲೆಗಳಲ್ಲಿ ಮೂರು ದಿನ ಮಳೆ ಸಾಧ್ಯತೆ : ಹವಾಮಾನ ಇಲಾಖೆ ಮೂನ್ಸೂಚನೆ

ಮೈಸೂರು : ಮೈಸೂರು ಸೇರಿದಂತೆ ದಕ್ಷಿಣ ಒಳನಾಡಿನ ನಾಲ್ಕು ಜಿಲ್ಲೆಗಳಲ್ಲಿ ಡಿ.31ರಿಂದ ಎರಡು ದಿನ ಹಗುರವಾಗಿ ಮಳೆಯಾಗುವ ಸಾಧ್ಯತೆ ಇದೆ…

1 hour ago

ಕೇಂದ್ರ ಬಜೆಟ್‌ | ನಾಳೆ ಆರ್ಥಿಕ ತಜ್ಞರ ಭೇಟಿ ಮಾಡಲಿರುವ ಮೋದಿ

ಹೊಸದಿಲ್ಲಿ : ಮುಂಬರುವ ಕೇಂದ್ರ ಬಜೆಟ್ ಕುರಿತು ಸಂವಾದ ನಡೆಸಲು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಆರ್ಥಿಕ ತಜ್ಞರು…

2 hours ago

ಗಗನಚುಕ್ಕಿ | ಕಾಡಾನೆ ದಾಳಿಗೆ ಸ್ಟೀಲ್‌ ಕಂಬಿಗಳು ನಾಶ

ಮಳವಳ್ಳಿ : ತಾಲ್ಲೂಕಿನ ಗಗನಚುಕ್ಕಿ ಜಲಪಾತದ ಆವರಣಕ್ಕೆ ನುಗ್ಗಿದ್ದ ಕಾಡಾನೆಗಳು ಪ್ರವಾಸಿಗರು ಜಲಪಾತ ವೀಕ್ಷಣೆಗೆ ಇಳಿಯುವ ಎರಡು ಕಡೆಗಳಲ್ಲೂ ಹಾಕಲಾಗಿದ್ದ…

2 hours ago

ಮೈಸೂರು | ಹೊಸ ವರ್ಷಾಚರಣೆಗೆ ಮಾರ್ಗಸೂಚಿ ಪ್ರಕಟ ; ಬೆಟ್ಟಕ್ಕಿಲ್ಲ ಪ್ರವೇಶ?

ಮೈಸೂರು : ಇನ್ನೇನು ಹೊಸ ವರ್ಷಾಚರಣೆಗೆ ಕೆಲವೇ ದಿನಗಳು ಬಾಕಿ ಇದೆ. ಆದ್ದರಿಂದ ಸಾರ್ವಜನಿಕ ಹಿತದೃಷ್ಟಿಯಿಂದ ಮೈಸೂರು ನಗರ ಪೊಲೀಸ್‌…

2 hours ago

ಕೋಗಿಲು ಕಲಹ | ಅರ್ಹರಿಗೆ ಪರ್ಯಾಯ ಮನೆ ಹಂಚಿಕೆ ; ಸಿಎಂ ಘೋಷಣೆ

ಬೆಂಗಳೂರು : ಬೆಂಗಳೂರಿನ ಕೋಗಿಲು ಬಡಾವಣೆಯಲ್ಲಿ ಸೂರು ಕಳೆದುಕೊಂಡವರಿಗೆ ಬೈಯ್ಯಪ್ಪನಹಳ್ಳಿಯಲ್ಲಿ ಪರ್ಯಾಯ ಮನೆ ಹಂಚಿಕೆ ಮಾಡಲು ಸಿಎಂ ಸಿದ್ದರಾಮಯ್ಯ ತೀರ್ಮಾನಿಸಿದ್ದಾರೆ.…

2 hours ago

ಚಾಮರಾಜನಗರ ಹೇಮಂತ್‌ಗೆ ಮಿಸ್ಟರ್‌ ಇಂಡಿಯಾ ಕಿರೀಟ!

ಚಾಮರಾಜನಗರ : ರಾಷ್ಟ್ರ ಮಟ್ಟದ ಪುರುಷರ ಮೈಕಟ್ಟು ಸ್ಪರ್ಧೆಯಲ್ಲಿ ವಿಜೇತರಾಗುವ ಮೂಲಕ ತಾಲ್ಲೂಕಿನ ಕೋಡಿಮೋಳೆ ಬಸವನಪುರ ಬಿ.ಆರ್.ಹೇಮಂತ್ ಅವರು ಮಿಸ್ಟರ್…

3 hours ago