ಸಂಪಾದಕೀಯ

ಬಾಂಗ್ಲಾದೇಶ: ವಿದ್ಯಾರ್ಥಿ ಕ್ರಾಂತಿ, ಹಸೀನಾ ಪರಾರಿ, ಯೂನಸ್ ತಾತ್ಕಾಲಿಕ ಪ್ರಧಾನಿ

  ಡಿ.ವಿ.ರಾಜಶೇಖರ

ರಕ್ತಸಿಕ್ತ ಬಾಂಗ್ಲಾದೇಶದಲ್ಲಿ ಕ್ರಮೇಣ ಶಾಂತಿ ಮರಳುವ ಸೂಚನೆ ‘ಕಾಣುತ್ತಿದೆ. ವಿದ್ಯಾರ್ಥಿ ಚಳವಳಿಗಾರರ ಸಲಹೆಯಂತೆ ಬಾಂಗ್ಲಾ ದೇಶದ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ (2006) ಮಹಮದ್ ಯೂನಸ್ ಹೊಸ ಸರ್ಕಾರದ ನೇತೃತ್ವ ವಹಿಸಿಕೊಂಡಿದ್ದಾರೆ. ಮುಖ್ಯ ಸಲಹೆಗಾರರಾದ ಅವರು ತಾತ್ಕಾಲಿಕ ಪ್ರಧಾನಿಯಾಗಿ ಮೂರು ತಿಂಗಳ ಕಾಲ ಅಂದರೆ ಚುನಾವಣೆ ನಡೆದು ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುವವರೆಗೆ ಕೆಲಸ ಮಾಡಲಿದ್ದಾರೆ.

ಸರ್ಕಾರಿ ಹುದ್ದೆಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಮಕ್ಕಳಿಗೆ ಶೇ.30 ಭಾಗ ಮೀಸಲಿಟ್ಟಿರುವ ಸರ್ಕಾರದ ನೀತಿಯನ್ನು ವಿರೋಧಿಸಿ ಆರಂಭವಾದ ವಿದ್ಯಾರ್ಥಿ ಚಳವಳಿ ಹಿಂಸಾ ಸ್ವರೂಪ ಪಡೆದು ಅಂತಿಮವಾಗಿ ಪ್ರಧಾನಿ ಶೇಖ್ ಹಸೀನಾ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಭಾರತಕ್ಕೆ ಪರಾರಿಯಾಗುವುದರಲ್ಲಿ ಅಂತ್ಯಕಂಡಿದೆ. ಪೊಲೀಸರ ಗುಂಡಿಗೆ ಮುನ್ನೂರಕ್ಕೂ ಹೆಚ್ಚು ಜನರು ಸತ್ತಿದ್ದರೆ ಅಷ್ಟೇ ಸಂಖ್ಯೆಯ ಜನರು ಹಿಂಸಾಚಾರಕ್ಕೆ ಬಲಿಯಾಗಿದ್ದಾರೆ. ಹಸೀನಾ ರಾಜೀನಾಮೆಯ ನಂತರ ಗಲಭೆಕೋರರು ಹಿಂದೂಗಳ ಮನೆಗಳಿಗೆ ಬೆಂಕಿ ಹಚ್ಚಿ ಅವರನ್ನು ಕೊಂದದ್ದು, ದೇವಾಲಯಗಳನ್ನು ನಾಶ ಮಾಡಿರುವುದು ವರದಿಯಾಗಿದೆ. ಈ ಹಿಂಸಾಚಾರದಲ್ಲಿ ಹತ್ತಾರು ಹಿಂದೂಗಳು ಸತ್ತಿದ್ದಾರೆಂದು ವರದಿಯಾಗಿದೆ. ಈ ಸಂದರ್ಭವನ್ನು ಬಳಸಿಕೊಂಡು ಭಾರತ ಮತ್ತು ಹಿಂದೂ ವಿರೋಧಿ ಮುಸ್ಲಿಮ್ ಸಂಘಟನೆಗಳ ಕಾರ್ಯಕರ್ತರು ಈ ದುಷ್ಕೃತ್ಯ ಮಾಡಿದ್ದಾರೆಂದು ಹೇಳಲಾಗಿದೆ. ಈ ದಾಳಿಯ ವಿರುದ್ಧ ಭಾರತ ದನಿ ಎತ್ತಿದೆ. ಹೊಸ ಸರ್ಕಾರ ಹಿಂದೂಗಳಿಗೆ ರಕ್ಷಣೆ ನೀಡಬೇಕೆಂದು ಪ್ರಧಾನಿ ನರೇಂದ್ರ ಮೋದಿ ಒತ್ತಾಯಿಸಿದ್ದಾರೆ.

ಮೈಕ್ರೋ ಫೈನಾನ್ಸ್ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗರಿಮೆಗಾಗಿ ನೊಬೆಲ್ ಪ್ರಶಸ್ತಿ ಪಡೆದಿರುವ ಮಹಮದ್‌ ಯೂನಸ್ ದೇಶದ ಆಡಳಿತದಲ್ಲಿ ಅನುಭವ ಪಡೆದವರೇನಲ್ಲ. ಸ್ವಯಂಸೇವಾ ಸಂಸ್ಥೆಗಳ ಹಣ ದುರುಪಯೋಗದ ಹತ್ತಾರು ಪ್ರಕರಣಗಳು ಅವರ ಮೇಲೆ ಇವೆ. ಆದರೆ ವಿದ್ಯಾರ್ಥಿಗಳು ಅವರನ್ನು ಪ್ರಧಾನಿಯಾಗಿ ನೋಡಲು ಬಯಸಿದರು. ಹೀಗಾಗಿ ಅವರು ಹಂಗಾಮಿ ಪ್ರಧಾನಿಯಾಗಿದ್ದು, ಸಲಹೆಗಾರರನ್ನು ನೇಮಿಸಿಕೊಂಡು ನಡೆಸಲಿದ್ದಾರೆ. ಮಿಲಿಟರಿ ನೇತೃತ್ವದಲ್ಲಿ ಸರ್ಕಾರ ರಚನೆಯಾಗುವುದನ್ನು ವಿದ್ಯಾರ್ಥಿಗಳು ವಿರೋಧಿಸಿದ ಪರಿಣಾಮ ಯೂನಸ್ ಅಧಿಕಾರ ವಹಿಸಿಕೊಂಡಿದ್ದಾರೆ.

ಹಾಗೆ ನೋಡಿದರೆ ಬಾಂಗ್ಲಾದೇಶಕ್ಕೆ ಮಿಲಿಟರಿ ಆಡಳಿತ ಹೊಸದಲ್ಲ. ಹತ್ತಾರು ವರ್ಷಗಳ ಕಾಲ ಮಿಲಿಟರಿ ಅಧಿಕಾರಿಗಳು ಸರ್ಕಾರ ನಡೆಸಿದ್ದಾರೆ. ಹಸೀನಾ ಅಧಿಕಾರಕ್ಕೆ ಬಂದ ನಂತರ ಮಿಲಿಟರಿಗೆ ಅಂಥ ಅವಕಾಶ ಸಿಕ್ಕಿರಲಿಲ್ಲ. ಇದೀಗ ವಿದ್ಯಾರ್ಥಿ ಚಳವಳಿ ತೀವ್ರಗೊಂಡು ಪರಿಸ್ಥಿತಿ ನಿಭಾಯಿಸಲು ಪೊಲೀಸರು ನೂರಾರು ಜನರನ್ನು ಗುಂಡಿಟ್ಟು ಕೊಂದರು. ಈ ದುರಂತದಿಂದಾಗಿ ಚಳವಳಿ ಮತ್ತಷ್ಟು ತೀವ್ರಗೊಂಡು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಚಳವಳಿಗಾರರು ಪ್ರಧಾನಿ ಹಸೀನಾ ಅವರ ನಿವಾಸದತ್ತ ತೆರಳುತ್ತಿದ್ದ ಸಂದರ್ಭದಲ್ಲಿ ಸೇನೆ ಮಧ್ಯಪ್ರವೇಶಿಸಿತು. ಶಾಂತಿ ಸ್ಥಾಪನೆಗೆ ಮುಂದಾಗಬೇಕೆಂದು ಹಸೀನಾ ಅವರು ಸೇನೆಯನ್ನು ಕೋರಿದರು. ಆದರೆ ಜನರ ಮೇಲೆ ಗುಂಡುಹಾರಿಸುವುದಿಲ್ಲ ಎಂದು ಮಿಲಿಟರಿ ಅಧಿಕಾರಿಗಳು ಹಸೀನಾ ಆದೇಶವನ್ನು ಧಿಕ್ಕರಿಸಿದರು. ರಾಜೀನಾಮೆ ಕೊಟ್ಟು ದೇಶದಿಂದ ಹೊರಹೋಗುವುದೊಂದೇ ದಾರಿ ಎಂದು ಹಸೀನಾ ಅವರಿಗೆ ಸೂಚನೆ ನೀಡಿದರು. ಅನಿವಾರ್ಯವಾಗಿ ಹಸೀನಾ ರಾಜೀನಾಮೆ ನೀಡಿ ದೇಶದಿಂದ ಪರಾರಿಯಾಗಬೇಕಾಯಿತು. ಈ ಸಂದರ್ಭದಲ್ಲಿ ಮಿಲಿಟರಿ ಅಧಿಕಾರಿಗಳು ಅಧಿಕಾರವನ್ನು ಕಬಳಿಸಬಹುದಾಗಿತ್ತು. ಆದರೆ ವಿದ್ಯಾರ್ಥಿ ಚಳವಳಿಗಾರರು ಮಿಲಿಟರಿ ಆಡಳಿತಕ್ಕೆ ವಿರೋಧ ವ್ಯಕ್ತ ಮಾಡಿದ್ದರಿಂದ ಪರಿಸ್ಥಿತಿ ಬದಲಾಯಿತು. ದೇಶದಲ್ಲಿ ಶಾಂತಿ ಸುರಕ್ಷತೆ ಸ್ಥಾಪನೆ ಹೊಣೆ ಈಗ ಸೇನೆಯದಾಗಿದೆ.

ಮುಖ್ಯ ಸಲಹೆಗಾರ (ಹಂಗಾಮಿ ಪ್ರಧಾನಿ) ಯೂನಸ್ ಅವರು 16 ಸಲಹೆಗಾರರನ್ನು ನೇಮಿಸಿಕೊಂಡಿದ್ದಾರೆ. ಅವರೆಲ್ಲರೂ ಮಂತ್ರಿಗಳಂತೆ ಕೆಲಸ ಮಾಡುತ್ತಾರೆ. ಸೈಯದ್ ರಿಜ್ವಾನ್ ಹಸನ್ (ಸುಪ್ರೀಮ್ ಕೋರ್ಟ್ ವಕೀಲ), ಫರೀದಾ ಅಕ್ತರ್ (ಮಹಿಳಾ ಹಕ್ಕುಗಳ ಹೋರಾಟಗಾರ್ತಿ), ಖಲೀದ್ ಹುಸೇನ್ (ಬಲಪಂಥೀಯ ಹೆಜ್ಜೆಜ್ ಎ ಇಸ್ಲಾಮಿ ಪಕ್ಷದ ಉಪನಾಯಕ), ನೂರ್ ಜಹಾನ್ ಬೇಗಂ (ಗ್ರಾಮೀಟ್ ಟೆಲಿಕಾಂ ಟ್ರಸ್ಟಿ ಮತ್ತು ಯೂನಸ್ ಅವರ ಸಹೋದ್ಯೋಗಿ, ಶಮೀಮ್ ಮಿರ್ಸಿದ್ (ಬಾಂಗ್ಲಾ ವಿಮೋಚನಾ ಹೋರಾಟಗಾರ), ನಹೀದ್ ಇಸ್ಲಾಮ್ (ವಿದ್ಯಾರ್ಥಿ ಚಳವಳಿ ನಾಯಕ), ಸಲೆಹುದ್ದೀನ್ ಅಹಮದ್ (ವಿದ್ಯಾರ್ಥಿ ಚಳವಳಿ ನಾಯಕ) ಮುಂತಾದವರು ತಾತ್ಕಾಲಿಕ ಸರ್ಕಾರದ ನಾಯಕರು. ಈ ಸಲಹೆಗಾರರ ಹಿನ್ನೆಲೆ ಮತ್ತು ಅವರ ವಿಶ್ವಾಸಾರ್ಹತೆ ಗಮನಾರ್ಹವಾದುದಾದರೂ ಅವರೆಲ್ಲ ರಾಜಕೀಯವೆಂಬ ಆಡಳಿತಕ್ಕೆ ಹೊಸಬರು. ದೇಶದ ಆಡಳಿತವನ್ನು ಅವರು ಹೇಗೆ ನಿಭಾಯಿಸುತ್ತಾರೆ ಎನ್ನುವುದು ಕುತೂಹಲಕಾರಿ. ಸದ್ಯಕ್ಕೆ ದೇಶದಲ್ಲಿ ಶಾಂತಿ ಸುವ್ಯವಸ್ಥೆ ಸ್ಥಾಪಿತವಾದ ನಂತರ ಚುನಾವಣೆ ಘೋಷಿಸಲಾಗುವುದು. ಯಾವುದೇ ಸಮಸ್ಯೆಗಳಿಲ್ಲದೆ ಪಾರದರ್ಶಕವಾಗಿ ಚುನಾವಣೆ ನಡೆಸುವುದು ಯೂನಸ್ ಮತ್ತು ಅವರ ಸಲಹೆಗಾರರ ಜವಾಬ್ದಾರಿ.

ಬಾಂಗ್ಲಾ ದೇಶದ ರಾಜಕೀಯ ಇಬ್ಬರು ನಾಯಕಿಯರ ಸುತ್ತ ನಡೆಯುತ್ತ ಬಂದಿದೆ. ಒಬ್ಬರು ಬಾಂಗ್ಲಾದೇಶ ಸಂಸ್ಥಾಪಕ ಮುಜಿಬುರ್ ರಹಮಾನ್ ಅವರ ಪುತ್ರಿ ಹಸೀನಾ, ಮತ್ತೊಬ್ಬರು ದೇಶದ ಅಧ್ಯಕ್ಷರಾಗಿದ್ದ ಜಿಯಾ ಉರ್ ರಹಮಾನ್ ಅವರ ಪತ್ನಿ ಖಲೀದಾ ಜಿಯಾ, ದೇಶ ಸ್ವಾತಂತ್ರ್ಯ ಪಡೆದ ಕೆಲವೇ ವರ್ಷಗಳಲ್ಲಿ ನಡೆದ ಸೇನಾ ಕ್ರಾಂತಿಯಲ್ಲಿ ಮುಜಿಬುರ್ ರಹಮಾನ್ ಹತ್ಯೆಯಾಗುತ್ತದೆ. ಅವರ ಇಡೀ ಕುಟುಂಬವನ್ನು ನಿರ್ನಾಮ ಮಾಡಲಾಗುತ್ತದೆ. ಹಸೀನಾ ಮತ್ತು ಅವರ ತಂಗಿ ಆ ಸಂದರ್ಭದಲ್ಲಿ ಹೊರದೇಶದಲ್ಲಿ ಇದ್ದಿದ್ದರಿಂದ ಬದುಕುಳಿಯುತ್ತಾರೆ. ಮುಜಿಬುರ್‌ ಹತ್ಯೆಯ ನಂತರ ಹಸೀನಾ ಅನಾಮಿ ಲೀಗ್ ಪಕ್ಷದ ನಾಯಕಿಯಾಗುತ್ತಾರೆ. ನಂತರದ ಕೆಲವು ವರ್ಷಗಳಲ್ಲಿ ಖಲೀದಾ ಜಿಯಾ ಅವರ ಪತಿ ಜಿಯಾ ರಹಮಾನ್ ಅವರನ್ನೂ ಹತ್ಯೆಮಾಡಲಾಗುತ್ತದೆ. ಆ ನಂತರ ಅವರ ಪತ್ನಿ ಖಲೀದಾ ಜಿಯಾ ಬಾಂಗ್ಲಾದೇಶ್ ನ್ಯಾಷನಲ್ ಪಾರ್ಟಿಯ ನಾಯಕಿಯಾಗುತ್ತಾರೆ. ಮೊದಲ ಪ್ರಧಾನಿಯಾಗಿದ್ದವರು ಇವರೇ. ಆದರೆ ಮುಂದೆ ಅವಾಮಿ ಲೀಗ್ ಗೆಲುವು ಸಾಧಿಸಿದ್ದರಿಂದ ಹಸೀನಾ ಪ್ರಧಾನಿಯಾಗುತ್ತಾರೆ.

ಹಿಂಸೆಯ ಒಡಲಲ್ಲೇ ಹುಟ್ಟಿದ (1971) ಬಾಂಗ್ಲಾದೇಶದಲ್ಲಿ ಅವಿರತವಾಗಿ ಹಿಂಸೆ ಮುಂದುವರಿದಿದೆ. ರಾಜಕೀಯ ಹಿಂಸೆ ಒಂದು ಕಡೆಯಾದರೆ, ಹಿಂದೂ-ಮುಸ್ಲಿಮ್ ವೈಮನಸ್ಯ, ಬಿಹಾರಿಗಳು ಮತ್ತು ಬಾಂಗ್ಲಾ ಮುಸ್ಲಿಮರ ನಡುವಣ ದ್ವೇಷ, ಮೈನ್ಮಾರ್‌ನ ರೊಹಿಂಗ್ಯಾ ಮುಸ್ಲಿಮರ ಸಮಸ್ಯೆ, ಮುಸ್ಲಿಮ್ ಉಗ್ರವಾದಕ್ಕೆ ನೆಲೆ ಒದಗಿಸಿರುವ ಜಮಾತ್ ಎ ಇಸ್ಲಾಮ್ ಚಟುವಟಿಕೆ, ಪಾಕಿಸ್ತಾನದ ಗೂಢಚರ್ಯೆ ಸಂಸ್ಥೆ ಐಎಸ್‌ಐನ ಕಿತಾಪತಿ ಹೀಗೆ ಹತ್ತು ಹಲವು ಸಮಸ್ಯೆಗಳು ಬಾಂಗ್ಲಾದೇಶವನ್ನು ಸದಾ ಹಿಂಸೆಯಲ್ಲಿ ಸಿಕ್ಕಿಸಿವೆ. ಆರ್ಥಿಕವಾಗಿ ಹಿಂದುಳಿದ ದೇಶವಾಗಿದ್ದ ದೇಶ ಈ ಸಮಸ್ಯೆಗಳ ಮಧ್ಯೆ ಪ್ರಗತಿ ಸಾಧಿಸುವುದು ದುಸ್ತರ ಎನ್ನುವಂತಿತ್ತು. ಅದನ್ನು ಸಾಧಿಸಿದವರು ಹಸೀನಾ ಅವರು‍ ಕಳೆದ 15 ವರ್ಷಗಳ ಅವರ ಆಡಳಿತ ಒಂದು ರೀತಿಯಲ್ಲಿ ಪವಾಡವನ್ನೇ ಮಾಡಿದೆ. ಅತಿ ವೇಗದ ಪ್ರಗತಿ ಸಾಧಿಸಿದ ದೇಶಗಳಲ್ಲಿ ಒಂದಾಗಿ ಬೆಳೆಯುವಂತೆ ಮಾಡಿದವರು ಹಸೀನಾ, ಆದರೆ ಈ ಬೆಳವಣಿಗೆಯ ಹಿಂದೆ ಕರಿ ನೆರಳೂ ಇದೆ. ಹಸೀನಾ ಅವರು ತಮ್ಮ ಅಧಿಕಾರದ ಅವಧಿಯಲ್ಲಿ ಖಲೀದಾ ಸೇರಿದಂತೆ ಬಹುಪಾಲು ವಿರೋಧಿ ನಾಯಕರನ್ನು ಜೈಲಿಗೆ ಅಟ್ಟಿದ್ದಾರೆ. ಒಂದು ರೀತಿಯಲ್ಲಿ ಬಾಂಗ್ಲಾ ಪೊಲೀಸ್ ದೇಶವಾಗಿ ಪರಿವರ್ತಿತವಾಗಿತ್ತು. ಜನರ ಸ್ವಾತಂತ್ರ್ಯ ಮೊಟಕುಗೊಳಿಸಲಾಗಿತ್ತು. ಪ್ರತಿಭಟಿಸಿದವರೆಲ್ಲರನ್ನೂ ಜೈಲಿಗೆ ಅಟ್ಟಲಾಗುತ್ತಿತ್ತು. ಖಲೀದಾ ಜಿಯಾ ಅವರ ಆರೋಗ್ಯ ಕೆಟ್ಟಿದ್ದರೂ ಅವರಿಗೆ ಜೈಲಿನಿಂದ ಮುಕ್ತಿ ಸಿಗಲಿಲ್ಲ. ಒಂದು ರೀತಿಯಲ್ಲಿ ಸರ್ವಾಧಿಕಾರಿ ಆಡಳಿತ ಸ್ಥಾಪಿತವಾಗಿತ್ತು. ಜನರು ಹಸೀನಾ ಆಡಳಿತದ ಬಗ್ಗೆ ರೋಸಿಹೋಗಿದ್ದರು. ಇಂಥ ಸಂದರ್ಭದಲ್ಲಿ ಸರ್ಕಾರಿ ಹುದ್ದೆಗಳಲ್ಲಿ ಮೀಸಲಾತಿ ಕುರಿತಂತೆ ಢಾಕಾ ವಿಶ್ವವಿದ್ಯಾನಿಲಯದಲ್ಲಿ ಹುಟ್ಟಿಕೊಂಡ ಪ್ರತಿಭಟನೆ ಕ್ರಮೇಣ ದೊಡ್ಡ ಜ್ವಾಲೆಯಂತಾಯಿತು. ಸ್ವಾತಂತ್ರ್ಯ ಹೋರಾಟಗಾರರ ಮಕ್ಕಳಿಗೆ ಸರ್ಕಾರ ಹುದ್ದೆಗಳಲ್ಲಿ ಶೇ.30 ಮೀಸಲಾತಿ ಸ್ವತಂತ್ರ್ಯ ಗಳಿಸಿದ ಮೊದಲ ವರ್ಷಗಳಲ್ಲಿಯೇ ಜಾರಿಗೆ ಬಂತು. ಇದರ ಜೊತೆಗೆ ಹಲವು ರೀತಿಯ ಮೀಸಲಾತಿಗಳೂ ಸೇರಿಕೊಂಡು ಶೇ.80ರಷ್ಟು ಉದ್ಯೋಗಗಳು ಮೀಸಲು ಗುಂಪಿನವರಿಗೆ ಹೋಗುತ್ತಿದ್ದವು. ಉಳಿದ ಶೇ.20ರಷ್ಟು ಉದ್ಯೋಗಗಳಿಗೆ ಪ್ರತಿಭಾವಂತರು ಸೆಣಸಬೇಕಿತ್ತು. ಸ್ವಾತಂತ್ರ್ಯ ಹೋರಾಟದ ಮೀಸಲಾತಿ ವಿಭಾಗದಲ್ಲಿ ಬಹುಪಾಲು ಅವಾಮಿ ಲೀಗ್ ನಾಯಕರ ಮಕ್ಕಳಿಗೇ ಸೌಲಭ್ಯ ಸಿಗುತ್ತಿತ್ತು. ವಿದ್ಯಾರ್ಥಿಗಳ ಆಕ್ರೋಶಕ್ಕೆ ಇದೇ ಮೊದಲ ಕಾರಣ. ಮೀಸಲಾತಿ ವಿರುದ್ಧ ಮೊದಲು ಚಳವಳಿ ಆರಂಭವಾದಾಗಲೇ ಅಪಾಯ ಅರಿತ ಹಸೀನಾ ಮೀಸಲಾತಿಯನ್ನು ರದ್ದು ಮಾಡಿದ್ದರು. ಆದರೆ ಕಳೆದ ವರ್ಷ ಹೈಕೋರ್ಟ್ ಹಿಂದೆ ಜಾರಿಯಲ್ಲಿದ್ದ ಮೀಸಲಾತಿಪರ ತೀರ್ಪು ನೀಡಿತು. ಅಲ್ಲಿಂದ ವಿದ್ಯಾರ್ಥಿ ಹೋರಾಟ ತೀವ್ರಗೊಂಡಿತು. ಈ ಮಧ್ಯೆ ಸುಪ್ರೀಂ ಕೋರ್ಟ್ ಹೈಕೋರ್ಟ್ ತೀರ್ಪನ್ನು ರದ್ದು ಮಾಡಿತು. ಆದರೆ ಅಷ್ಟರಲ್ಲಿ ವಿದ್ಯಾರ್ಥಿ ಚಳವಳಿ ತೀವ್ರಗೊಂಡಿತ್ತು. ಹಸೀನಾ ವಿರೋಧಿ ಶಕ್ತಿಗಳು ಮುಖ್ಯವಾಗಿ ಖಲೀದಾ ಜಿಯಾ ಬೆಂಬಲಿಗರು ಮತ್ತು ಮುಸ್ಲಿಮ್ ಮೂಲಭೂತವಾದದ ಶಕ್ತಿಗಳಾದ ಜಮಾತೆ ಇಸ್ಲಾಂ ಸಂಘಟನೆಯ ನಾಯಕರು ವಿದ್ಯಾರ್ಥಿ ಚಳವಳಿಯನ್ನು ಹಸೀನಾ ವಿರೋಧಿ ಚಳವಳಿಯಾಗಿ ಪರಿವರ್ತಿಸಿದರು. ಹಸೀನಾ ರಾಜೀನಾಮೆಗೆ ಒತ್ತಾಯಿಸಿ ಚಳವಳಿ ಮುಂದುವರಿಯಿತು. ಇದರ ಪರಿಣಾಮವಾಗಿ ಹಸೀನಾ ಪರಾರಿಯಾಗ ಬೇಕಾಗಿ ಬಂತು.

ಹಸೀನಾ ಸದ್ಯ ಭಾರತದಲ್ಲಿ ಅಂದರೆ ದೆಹಲಿ ಬಳಿಯ ಹಿಂಡಾನ್ ಏರ್ ಫೋರ್ಸ್ ನೆಲೆಯಲ್ಲಿರುವ ಅತಿಥಿಗೃಹದಲ್ಲಿ ಆಶ್ರಯ ಪಡೆದಿದ್ದಾರೆ. ಈಗ ಲಭ್ಯವಿರುವ ಮಾಹಿತಿ ಪ್ರಕಾರ ಅವರು ಆಶ್ರಯಕ್ಕಾಗಿ ಬ್ರಿಟನ್ ಮತ್ತು ಅಮೆರಿಕದ ಜೊತೆ ಮಾತುಕತೆ ನಡೆಸಿದ್ದಾರೆ. ಭಾರತವು ಬಾಂಗ್ಲಾದ ನೆರೆಯ ದೇಶವಾಗಿರುವುದರಿಂದ ಆಶ್ರಯ ನೀಡುವುದು ಕಷ್ಟ. ಆಶ್ರಯ ನೀಡಿದರೆ ಅದರಿಂದ ಆಗಬಹುದಾದ ಕೆಟ್ಟ ಪರಿಣಾಮಗಳು ಉಭಯ ದೇಶಗಳ ಬಾಂಧವ್ಯವನ್ನು ಹಾಳುಮಾಡುತ್ತವೆ. ಹೀಗಾಗಿ ಹಸೀನಾ ಅವರು ಸದ್ಯ ಗೊಂದಲಕ್ಕೆ ಒಳಗಾಗಿದ್ದಂತೆ ಕಾಣುತ್ತದೆ. ಬಾಂಗ್ಲಾ ದೇಶದಲ್ಲಿ ಚುನಾವಣೆ ನಡೆದು ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಸ್ವದೇಶಕ್ಕೆ ವಾಪಸಾಗಲು ಹಸೀನಾ ಯೋಚಿಸುತ್ತಿದ್ದಾರೆ ಎಂದು ಅಮೆರಿಕದಲ್ಲಿ ನೆಲೆಸಿರುವ ಅವರ ಪುತ್ರ ಸಜೀಬ್ ವಾಜಿದ್ ಜಾಯ್ ತಿಳಿಸಿದ್ದಾರೆ. ಮುಂದೆ ಏನಾಗುತ್ತದೆ ಎನ್ನುವುದನ್ನು ಈಗಲೇ ಊಹಿಸುವುದು ಕಷ್ಟ.

ಬಾಂಗ್ಲಾದೇಶಕ್ಕೆ ಮಿಲಿಟರಿ ಆಡಳಿತ ಹೊಸದಲ್ಲ. ಹತ್ತಾರು ವರ್ಷಗಳ ಕಾಲ ಮಿಲಿಟರಿ ಅಧಿಕಾರಿಗಳು ಸರ್ಕಾರ ನಡೆಸಿದ್ದಾರೆ. ಹಸೀನಾ ಅಧಿಕಾರಕ್ಕೆ ಬಂದ ನಂತರ ಮಿಲಿಟರಿಗೆ ಅಂಥ ಅವಕಾಶ ಸಿಕ್ಕಿರಲಿಲ್ಲ. ಇದೀಗ ವಿದ್ಯಾರ್ಥಿ ಚಳವಳಿ ತೀವ್ರಗೊಂಡು ಪರಿಸ್ಥಿತಿ ನಿಭಾಯಿಸಲು ಪೊಲೀಸರು ನೂರಾರು ಜನರನ್ನು ಗುಂಡಿಟ್ಟು ಕೊಂದರು. ಈ ದುರಂತದಿಂದಾಗಿ ಚಳವಳಿ ಮತ್ತಷ್ಟು ತೀವ್ರಗೊಂಡು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಚಳವಳಿಗಾರರು ಪ್ರಧಾನಿ ಹಸೀನಾ ಅವರ ನಿವಾಸದತ್ತ ತೆರಳುತ್ತಿದ್ದ ಸಂದರ್ಭದಲ್ಲಿ ಸೇನೆ ಮಧ್ಯಪ್ರವೇಶಿಸಿತು. ಶಾಂತಿ ಸ್ಥಾಪನೆಗೆ ಮುಂದಾಗಬೇಕೆಂದು ಹಸೀನಾ ಅವರು ಸೇನೆಯನ್ನು ಕೋರಿದರು. ಆದರೆ ಜನರ ಮೇಲೆ ಗುಂಡುಹಾರಿಸುವುದಿಲ್ಲ ಎಂದು ಮಿಲಿಟರಿ ಅಧಿಕಾರಿಗಳು ಹಸೀನಾ ಆದೇಶವನ್ನು ಧಿಕ್ಕರಿಸಿದರು.

 

 

ಆಂದೋಲನ ಡೆಸ್ಕ್

Share
Published by
ಆಂದೋಲನ ಡೆಸ್ಕ್

Recent Posts

ಮುಡಾ ಕಚೇರಿಯ ಮೇಲೆ ಇಡಿ ದಾಳಿ ದುರುದ್ದೇಶಪೂರ್ವಕ: ಮಾಜಿ ಸಂಸದ ಡಿ.ಕೆ.ಸುರೇಶ್‌

ಬೆಂಗಳೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಇಂದು (ಅಕ್ಟೋಬರ್‌.18) ಮೂರು ಕಡೆಗಳಲ್ಲಿ ದಾಳಿ ನಡೆಸಿದ್ದು, ಈ ದಾಳಿಯು ಸಂಪೂರ್ಣವಾಗಿ…

3 mins ago

ಮುಡಾ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು: ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು: ಮುಡಾ ಕೇಸ್‌ ಮುಚ್ಚಿ ಹಾಕುವಲ್ಲಿ ಸರ್ಕಾರಕ್ಕೆ ಲೋಕಾಯುಕ್ತ ಸಹಾಯ ಮಾಡುತ್ತದೆ ಎಂಬ ಶಂಕೆ ಇದೆ. ಹೀಗಾಗಿ ಮುಡಾ ಪ್ರಕರಣವನ್ನು…

14 mins ago

ಭವಾನಿ ರೇವಣ್ಣಗೆ ಬಿಗ್‌ ರಿಲೀಫ್:‌ ಹೈಕೋರ್ಟ್‌ ಆದೇಶ ಎತ್ತಿ ಹಿಡಿದ ಸುಪ್ರೀಂ ಕೋರ್ಟ್‌

ಹೊಸದಿಲ್ಲಿ: ಆತ್ಯಾಚಾರ ಸಂತ್ರಸ್ತೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಭವಾನಿ ರೇವಣ್ಣಗೆ ಹೈಕೋರ್ಟ್‌ನಿಂದ ಜಾಮೀನು ಮಂಜೂರು ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಎಸ್‌ಐಟಿ…

32 mins ago

ಮುಡಾ ಪ್ರಕರಣ: ಮುಡಾ ಕಚೇರಿಯ ಮೇಲೆ ಇ.ಡಿ ದಾಳಿ

ಮೈಸೂರು: ಮುಡಾದಲ್ಲಿ ಹಗರಣ ನಡೆದಿದೆ ಎಂದು ಆರ್‌ಐಟಿ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಇ.ಡಿ.ಗೆ ದೂರು ನೀಡಿದ್ದರು. ಈ ದೂರಿನ ಆಧಾರದ…

55 mins ago

ನಟ ದರ್ಶನ್‌ಗೆ ಮತ್ತೊಂದು ಸಂಕಷ್ಟ: ಹಳೆ ಪ್ರಕರಣಕ್ಕೆ ಹೊಸ ಎನ್‌ಸಿಆರ್‌

ಬೆಂಗಳೂರು: ನಟ ದರ್ಶನ್‌ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ಮಧ್ಯೆ ಹಳೆ…

2 hours ago

ಓದುಗರ ಪತ್ರ: ಮಹಿಳಾ ಅಧಿಕಾರಿಗಳಿಗೆ ಅಭಿನಂದನೆಗಳು

ಚಾಮರಾಜನಗರದಲ್ಲಿ ಅಕ್ಟೋಬರ್ ೭ರಿಂದ ಅ. ೯ರವರೆಗೆ ಆಯೋಜಿಸಿದ್ದ ‘ಚೆಲುವ ಚಾಮರಾಜನಗರ ದಸರಾ’ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ ಆಯೋಜಿಸಿದ್ದರಿಂದ…

3 hours ago