ಸಂಪಾದಕೀಯ

ನಿರ್ಗತಿಕ ಮಕ್ಕಳ ಕನಸಿಗೆ ತನ್ನ ಇಡೀ ಸಂಬಳ ವ್ಯಯಿಸುವ ಕಾನ್‌ಸ್ಟೇಬಲ್‌

ಪ್ರತಿದಿನ ಹರಿಯಾಣದ ಸೋನಿಪತ್‌ನ ಸೆಕ್ಟರ್ ೨೩ರಲ್ಲಿ ಸುಮಾರು ೩೦ ಮಕ್ಕಳು ಬೆಳಗಾಗುತ್ತಲೇ ದೊಡ್ಡ ದೊಡ್ಡ ಕನಸುಗಳೊಂದಿಗೆ ಏಳುತ್ತಾರೆ. ಇವರ ಕನಸು ಏನೆಂದರೆ ಯಾವುದಾದರೂ ಸರ್ಕಾರಿ ಇಲಾಖೆ ಗಳಲ್ಲಿ ನೌಕರಿ ಪಡೆಯುವುದು. ಇದರಲ್ಲೇನೂ ವಿಶೇಷವಿಲ್ಲ. ಏಕೆಂದರೆ, ದೇಶದಲ್ಲಿ ಇಂತಹ ಕನಸು ಕಾಣುವವರು ಕೋಟಿ ಸಂಖ್ಯೆಗಳಲ್ಲಿ ಕಾಣಸಿಗುತ್ತಾರೆ. ಆದರೆ, ಈ ಮಕ್ಕಳೆಲ್ಲ ರಿಕ್ಷಾ ಎಳೆಯುವವರು, ದಿನಗೂಲಿ ಮಾಡುವವರು ಮೊದಲಾದ ಅತ್ಯಂತ ದುರ್ಬಲ ಆರ್ಥಿಕ ಹಿನ್ನೆಲೆಯ ಕುಟುಂಬಗಳಿಂದ ಬಂದ ಮಕ್ಕಳು ಎನ್ನುವುದು ವಿಶೇಷ. ಇಂತಹ ಬಡತನದ ಹಿನ್ನೆಲೆಯಿಂದ ಬಂದ ಈ ಮಕ್ಕಳು ಇಂತಹ ಕನಸು ಕಾಣುವುದೇ ಅವರ ಬದುಕಿನ ಅತ್ಯಂತ ದೊಡ್ಡ ಚಮತ್ಕಾರ. ಈ ಚಮತ್ಕಾರ ಮಾಡಿದವರು ಅಮಿತ್ ಲಾತಿಯಾ ಎಂಬ ಒಬ್ಬ ಸಾಮಾನ್ಯ ಪೊಲೀಸ್ ಕಾನ್‌ಸ್ಟೇಬಲ್!

ಅಮಿತ್ ಲಾತಿಯಾ ದೆಹಲಿಯ ರೋಹಿಣಿ ಜಿಲ್ಲೆಯಲ್ಲಿ ಮೊಬೈಲ್ ಕ್ರೈಮ್ ಡ್ಯೂಟಿ ವಿಭಾಗದಲ್ಲಿದ್ದಾರೆ. ಹನ್ನೆರಡು ವರ್ಷಗಳ ಹಿಂದೆ ಅವರು ಕರ್ತವ್ಯ ನಿರ್ವಹಿಸುವಾಗ ಹಲವಾರು ಮಕ್ಕಳು ರಸ್ತೆ ಬದಿಗಳಲ್ಲಿ ಏನೇನೋ ಚಿಕ್ಕ ಪುಟ್ಟ ಕೆಲಸಗಳನ್ನು ಮಾಡುವುದನ್ನು ನೋಡುತ್ತಿದ್ದರು. ಆ ಮಕ್ಕಳ ಆ ಪರಿಸ್ಥಿತಿ ಅಮಿತ್‌ರಿಗೆ ತಮ್ಮ ಬಾಲ್ಯದ ಕಷ್ಟದ ದಿನಗಳನ್ನು ನೆನಪಿಸುತ್ತಿತ್ತು. ‘ನನ್ನದೂ ಒಂದು ಕಾಲದಲ್ಲಿ ಇದೇ ಪರಿಸ್ಥಿತಿಯಾಗಿತ್ತು. ನಾನು ಸರ್ಕಾರಿ ಉದ್ಯೋಗ ಪಡೆಯಲು ಸಾಧ್ಯವಾಗುವುದಾದರೆ ಈ ಮಕ್ಕಳಿಗೇಕೆ ಸಾಧ್ಯವಾಗದು? ’ ಎಂದು ಆಲೋಚಿಸಿ, ಆ ಮಕ್ಕಳಿಗೆ ತನ್ನಿಂದಾದ ಏನಾದರೂ ಮಾಡಿ ಅವರನ್ನು ಆ ಪರಿಸ್ಥಿತಿಯಿಂದ ಮೇಲೆತ್ತಿ, ಅವರಿಗೊಂದು ಉತ್ತಮ ಭವಿಷ್ಯವನ್ನು ರೂಪಿಸಲು ನಿರ್ಧರಿಸಿದರು. ಅದಕ್ಕಾಗಿ ಅವರು ತನ್ನ ತಿಂಗಳ ಖರ್ಚಿಗೆ ಬೇಕಾಗುವಷ್ಟನ್ನು ಉಳಿಸಿಕೊಂಡು, ಉಳಿದ ತನ್ನ ಇಡೀ ಸಂಬಳದ ಹಣವನ್ನು ಆ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಮೀಸಲಾಗಿಟ್ಟಿದ್ದಾರೆ.

ನಾಲ್ಕು ಫ್ಲಾಟುಗಳನ್ನು ಬಾಡಿಗೆಗೆ ಪಡೆದು, ಪ್ರತಿಯೊಂದಕ್ಕೆ ೧,೪೦೦ ರೂಪಾಯಿ ಬಾಡಿಗೆ ಕೊಡುತ್ತಾರೆ. ಪ್ರತಿಯೊಂದು ಫ್ಲಾಟಿನಲ್ಲಿ ಕುರ್ಚಿ, ಮೇಜು, ಬೆಡ್ ಮತ್ತು ಗ್ರಂಥಾಲಯಗಳ ವ್ಯವಸ್ಥೆ ಮಾಡಿದ್ದಾರೆ. ಮಕ್ಕಳು ಆ ಫ್ಲಾಟುಗಳಲ್ಲೇ ವಾಸ ಮಾಡುತ್ತಾರೆ.

ವಾಸ್ತವದಲ್ಲಿ, ಅಮಿತ್ ಲಾತಿಯಾ ಶ್ರೀಮಂತರೇನಲ್ಲ. ಅವರ ತಂದೆ ಒಬ್ಬ ಸಾಧಾರಣ ರೈತ. ಅಮಿತ್‌ರ ಅಣ್ಣ ಒಬ್ಬ ಚಿಂದಿ ವ್ಯಾಪಾರಿ. ಅಮಿತ್ ಕ್ರೀಡೆಯಲ್ಲಿ ಬಹಳ ಸಾಧನೆ ಮಾಡಿದ್ದರು. ಆದರೆ, ಆ ಸಮಯದಲ್ಲಿ ತಂದೆಗೆ ಹೃದಯ ಕಾಯಿಲೆ ಕಾಣಿಸಿಕೊಂಡು ಅಮಿತ್ ತನ್ನ ಹಳ್ಳಿಗೆ ವಾಪಸ್ ಆಗಬೇಕಾಯಿತು. ಹಳ್ಳಿಗೆ ವಾಪಸ್ ಆದ ನಂತರ ಅಮಿತ್ ಪೊಲೀಸ್ ಉದ್ಯೋಗಕ್ಕೆ ಸೇರಲು ತಯಾರಿ ಪ್ರಾರಂಭಿಸಿದರು. ಪೊಲೀಸ್ ಉದ್ಯೋಗ ಪಡೆಯಲು ಸ್ಪರ್ಧಾತ್ಮಕ ಪರೀಕ್ಷೆಗಾಗಿ ಕೋಚಿಂಗ್ ಕ್ಲಾಸ್ ಸೇರುವುದು ಅನಿವಾರ್ಯವಾಗಿತ್ತು. ಆದರೆ, ಕೋಚಿಂಗ್ ಕ್ಲಾಸಿಗೆ ಕೊಡಬೇಕಾದ ೩,೦೦೦ ರೂಪಾಯಿ ಶುಲ್ಕ ಪಾವತಿಸಲು ಅವರ ಬಳಿ ಹಣವಿರಲಿಲ್ಲ. ಆಗ ಅಮಿತ್ ಒಂದು ಚಿಕ್ಕ ಚಹದಂಗಡಿಯಲ್ಲಿ ಕೆಲಸಕ್ಕೆ ಸೇರಿದರು. ಅಲ್ಲಿ ಮೂರು ತಿಂಗಳು ಕೆಲಸ ಮಾಡಿ ಫೀಸಿಗೆ ಬೇಕಾದ ೩,೦೦೦ ರೂಪಾಯಿ ಒಟ್ಟು ಮಾಡಿದರು. ಆದರೆ, ಕೋಚಿಂಗ್ ತರಗತಿಯ ಶಿಕ್ಷಕರಿಗೆ ಅಮಿತ್ ಲಾತಿಯಾರ ಪರಿಸ್ಥಿತಿ ತಿಳಿದು, ಅವರು ಅಮಿತ್‌ರ ಫೀಸನ್ನು ಮನ್ನಾ ಮಾಡಿದರು. ಅಮಿತ್ ಲಾತಿಯಾ ೨೦೧೦ರಲ್ಲಿ ದೆಹಲಿ ಪೊಲೀಸ್ ಇಲಾಖೆಯಲ್ಲಿ ಕಾನ್‌ಸ್ಟೇಬಲ್ ನೌಕರಿ ಪಡೆದರು.

ಅಮಿತ್ ಆ ಬೀದಿ ಮಕ್ಕಳ ಭವಿಷ್ಯಕ್ಕಾಗಿ ತನ್ನ ಬದುಕನ್ನು ಮೀಸಲಾಗಿಡುವ ನಿರ್ಧಾರವನ್ನು ಹೇಳಿದಾಗ ಮನೆಯಲ್ಲಿ ಅದಕ್ಕೆ ವಿರೋಧ ವ್ಯಕ್ತವಾಯಿತು. ಅದೇ ವಿಷಯದಲ್ಲಿ ಜಗಳವೂ ಆಗಿ, ಅಮಿತ್ ಮನೆಯಿಂದ ಹೊರ ಹಾಕಲ್ಪಟ್ಟರು. ಅಮಿತ್ ೨೦೧೨ರಲ್ಲಿ ಪ್ರಥಮ ಬಾರಿಗೆ ಹತ್ತು ಮಕ್ಕಳ ಒಂದು ಬ್ಯಾಚನ್ನು ಪ್ರಾರಂಭಿಸಿ, ತಾವೇ ಸ್ವತಃ ಆ ಮಕ್ಕಳಿಗೆ ಕಲಿಸಿದರು. ಆ ಹತ್ತು ಮಕ್ಕಳಲ್ಲಿ ಆರು ಮಕ್ಕಳು ಸರ್ಕಾರಿ ಉದ್ಯೋಗ ಪಡೆಯುವಲ್ಲಿ ಯಶಸ್ವಿಯಾದರು. ಅದು ಒಬ್ಬ ಶಿಕ್ಷಕನಾಗಿ ಅಮಿತ್ ಲಾತಿಯಾರ ಆತ್ಮವಿಶ್ವಾಸವನ್ನು ಹೆಚ್ಚಿಸಿತು. ಪೊಲೀಸ್ ನೌಕರಿ ಮಾಡುವುದು ಮತ್ತು ಮಕ್ಕಳಿಗೆ ಕಲಿಸುವುದು ಎರಡನ್ನೂ ಮಾಡ ತೊಡಗಿದರು. ಮುಂದೆ ಮಕ್ಕಳ ಸಂಖ್ಯೆ ಹೆಚ್ಚಾದಾಗ ನಾಲ್ಕು ಫ್ಲಾಟುಗಳನ್ನು ಬಾಡಿಗೆಗೆ ಪಡೆದರು. ಅಮಿತ್ ಈವರೆಗೆ ೩೫೦ ಮಕ್ಕಳಿಗೆ ಸೇನೆ, ಪೊಲೀಸ್ ಮತ್ತು ಹಲವು ಸರ್ಕಾರಿ ಇಲಾಖೆಗಳಲ್ಲಿ ಬಿ ಮತ್ತು ಸಿ ಗ್ರೂಪ್ ನೌಕರಿ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅಮಿತ್ ಲಾತಿಯಾರ ಹೆಂಡತಿ ಮಂಜೂ ಸೋನಿಪಾತ್‌ನ ಒಂದು ಸರ್ಕಾರಿ ಕಾಲೇಜಿನಲ್ಲಿ ಗಣಿತ ಪ್ರಾಧ್ಯಾಪಕರಾಗಿದ್ದಾರೆ. ಮದುವೆ ನಿಶ್ಚಿತಾರ್ಥದ ಸಮಯದಲ್ಲಿ ಅಮಿತ್, ಮಂಜೂಗೆ ತನ್ನ ಬದುಕಿನ ಮುಖ್ಯ ಉದ್ದೇಶ ಏನೆಂಬುದನ್ನು ಹೇಳಿ, ಅದಕ್ಕೆ ಅವರ ಒಪ್ಪಿಗೆಯಿದ್ದರೆ ಮಾತ್ರವೇ ಮದುವೆ ಸಾಧ್ಯ ಅಂದಿದ್ದರು. ಮಂಜೂ ಕೂಡ ಗಂಡನ ಕೆಲಸದಲ್ಲಿ ಸಂಪೂರ್ಣ ಬೆಂಬಲ ನೀಡುತ್ತಿದ್ದು, ಮನೆ ಖರ್ಚನ್ನೆಲ್ಲ ಅವರೇ ನಿಭಾಯಿಸುತ್ತಾರೆ. ಆಗಾಗ್ಗೆ ಸಮಯ ಮಾಡಿಕೊಂಡು ತಾನೂ ಆ ಮಕ್ಕಳಿಗೆ ಗಣಿತ ಪಾಠ ಹೇಳಿಕೊಡುತ್ತಾರೆ. ಅಮಿತ್ ಸಹೋದ್ಯೋಗಿಗಳಾದ ಐದು ಜನ ಪೊಲೀಸ್ ಅಽಕಾರಿಗಳು ಅಮಿತ್‌ರ ಸಹಾಯಕ್ಕೆ ನಿಂತು, ವಾರದಲ್ಲಿ ಕೆಲವು ದಿನ ಆ ಮಕ್ಕಳಿಗೆ ಇಂಗ್ಲಿಷ್, ಸಾಮಾನ್ಯ ಜ್ಞಾನ ಮೊದಲಾದ ವಿಷಯಗಳನ್ನು ಬೋಽಸುತ್ತಾರೆ.

ಅಮಿತ್ ಲಾತಿಯಾ ಬೆಳೆಸುತ್ತಿರುವ ೩೫೦ ಮಕ್ಕಳಲ್ಲಿ ಸುಮಾರು ೧೮೫ ಮಕ್ಕಳು ಸ್ಟಾಫ್ ಸೆಲೆಕ್ಷನ್ ಕಮಿಷನ್-ಕಂಬೈನ್ಡ್ ಗ್ರ್ಯಾಜುಎಟ್ ಲೆವೆಲ್ ಎಕ್ಷಾಮಿನೇಷನ್, ಹರಿಯಾಣ ಸ್ಟಾಫ್ ಸೆಲೆಕ್ಷನ್ ಕಮಿಷನ್ ಮತ್ತು ಚಂಡಿಗಢ್ ಪೊಲೀಸ್ ಐಟಿ ಕಾನ್‌ಸ್ಟೇಬಲ್ ರಿಕ್ರ್ಯೂಟ್ಮೆಂಟ್ ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಪಾಸು ಮಾಡಿ ಭಾರತೀಯ ಸೇನೆ, ಪೊಲೀಸ್ ಮತ್ತು ಇತರ ಸರ್ಕಾರಿ ಇಲಾಖೆಗಳಲ್ಲಿ ನೌಕರಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ‘ಈ ಮಕ್ಕಳು ತಮ್ಮ ಕಾಲ ಮೇಲೆ ನಿಲ್ಲುವ ತನಕ ನಾನು ಅವರಿಗೆ ಆಸರೆಯಾಗಿರುತ್ತೇನೆ. ಈ ಮಕ್ಕಳಲ್ಲಿ ನನ್ನನ್ನು ನಾನು ಕಾಣುವುದರಿಂದ ಇವರ ಭವಿಷ್ಯಕ್ಕಾಗಿ ನನ್ನ ಬದುಕನ್ನು ಮುಡುಪಾಗಿರಿಸಿದ್ದೇನೆ’ ಎನ್ನುವ ಅಮಿತ್ ಲಾತಿಯಾ ಯಾರಿಂದಲೂ ಆರ್ಥಿಕ ದೇಣಿಗೆಯನ್ನು ಸ್ವೀಕರಿಸುವುದಿಲ್ಲ. ಆದರೆ, ಯಾರಾದರೂ ಮಕ್ಕಳಿಗೆ ನೋಟ್ ಪುಸ್ತಕ, ಪಠ್ಯ ಪುಸ್ತಕ, ಇತರ ಸ್ಟೇಷನರಿ ಸಾಮಗ್ರಿ ಹಾಗೂ ಆಹಾರ ಪದಾರ್ಥಗಳನ್ನು ದಾನ ನೀಡಿದರೆ ತೆಗೆದುಕೊಳ್ಳುತ್ತಾರೆ.

ಅಮಿತ್ ಲಾತಿಯಾ ತನ್ನೊಬ್ಬನ ಸಂಬಳದ ಹಣದಲ್ಲಿ ಮಕ್ಕಳನ್ನು ದತ್ತು ಪಡೆಯುವುದರಿಂದ ಒಂದು ವರ್ಷದಲ್ಲಿ ಕೇವಲ ೩೦ ಮಕ್ಕಳನ್ನು ಮಾತ್ರ ದತ್ತು ಪಡೆಯುತ್ತಾರೆ. ಅಂತಹ ಇನ್ನೂ ಸಾವಿರಾರು ಮಕ್ಕಳು ಸಹಾಯ ಯಾಚಿಸುತ್ತಿದ್ದಾರೆ ಎಂಬುದು ಅವರಿಗೆ ತಿಳಿದಿದೆ. ತನ್ನನ್ನು ನೋಡಿ ಬೇರೆ ಯಾರಾದರೂ ಆ ಮಕ್ಕಳಿಗೆ ಸಹಾಯ ಮಾಡಲಿ ಎಂದು ಅವರು ಆಶಿಸುತ್ತಾರೆ.

ಅಮಿತ್ ಲಾತಿಯಾ ದತ್ತು ಪಡೆದ ಎಲ್ಲ ಮಕ್ಕಳೂ ಸರ್ಕಾರಿ ಉದ್ಯೋಗ ಪಡೆಯುವಲ್ಲಿ ಯಶಸ್ವಿಯಾಗುವುದಿಲ್ಲ. ಆದರೆ, ಅಮಿತ್‌ರಿಂದ ಶಿಕ್ಷಣ ಪಡೆದು ಆತ್ಮವಿಶ್ವಾಸ ಬೆಳೆಸಿಕೊಂಡ ಅಂತಹ ಮಕ್ಕಳು ತಮ್ಮ ಊರುಗಳಿಗೆ ವಾಪಸ್ ಆಗಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡು ಬದುಕು ಸಾಗಿಸುತ್ತಾರೆ. ಹಾಗಾದರೂ ತಾನು ಆ ಮಕ್ಕಳು ನಗರಗಳಲ್ಲಿ ದಿಕ್ಕು ದೆಸೆ, ಸೂಕ್ತ ಮಾರ್ಗದರ್ಶನವಿಲ್ಲದೆ ಅಪರಾಧ ಚಟುವಟಿಕೆಗಳಲ್ಲಿ ತೊಡಗಿ ತಮ್ಮ ಬದುಕನ್ನು ಹಾಳುಗೆಡಹುದರಿಂದ ಪಾರು ಮಾಡುತ್ತಿದ್ದೇನೆ ಎಂದು ಅಮಿತ್ ಲಾತಿಯಾ ಸಮಾಧಾನಪಡುತ್ತಾರೆ.

ಆಂದೋಲನ ಡೆಸ್ಕ್

Share
Published by
ಆಂದೋಲನ ಡೆಸ್ಕ್

Recent Posts

ಬಂಡೀಪುರ ಅರಣ್ಯದಲ್ಲಿ ನೀರಿನ ಸಮಸ್ಯೆಗೆ ಬ್ರೇಕ್: ಸೋಲಾರ್‌ ಬೋರ್‌ವೆಲ್‌ ಮೂಲಕ ನೀರು ತುಂಬಿಸಲು ಪ್ಲಾನ್‌

ಗುಂಡ್ಲುಪೇಟೆ: ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರಾಣಿಗಳಿಗೆ ಕುಡಿಯುವ ನೀರಿನ ಸಮಸ್ಯೆಗೆ ಈಗ ಬ್ರೇಕ್‌ ಹಾಕಲಾಗಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಅರಣ್ಯಾಧಿಕಾರಿಗಳು…

5 mins ago

ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಜೀವ ರಕ್ಷಕ ಔಷಧಿಗಳ ಕೊರತೆಯಿದೆ: ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌

ಬೆಂಗಳೂರು: ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಜೀವ ರಕ್ಷಕ ಔಷಧಿಗಳ ಕೊರತೆಯಿರುವುದು ನಿಜ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ.…

30 mins ago

ನಟಿ ರನ್ಯಾ ರಾವ್‌ ಪ್ರಕರಣಕ್ಕೆ ರೋಚಕ ಟ್ವಿಸ್ಟ್‌

ಬೆಂಗಳೂರು: ಚಿನ್ನ ಕಳ್ಳಸಾಗಾಣಿಕೆ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ನಟಿ ರನ್ಯಾರಾವ್‌ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದು, ಡಿಐಆರ್‌ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದೇಗೆ ಎಂಬ…

49 mins ago

ಕೌಟುಂಬಿಕ ಕಲಹ: ಕೆರೆಗೆ ಹಾರಿ ತಾಯಿ-ಮಗ ಆತ್ಮಹತ್ಯೆ

ಹಾಸನ: ಕೌಟುಂಬಿಕ ಕಲಹದಿಂದ ಬೇಸತ್ತು ತಾಯಿ-ಮಗ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಕಬ್ಬಳ್ಳಿ…

1 hour ago

ಗ್ರೇಟರ್‌ ಬೆಂಗಳೂರು ವಿಧೇಯಕಕ್ಕೆ ಎಚ್.ಡಿ.ಕುಮಾರಸ್ವಾಮಿ ವಿರೋಧ

ಬೆಂಗಳೂರು: ಗ್ರೇಟರ್‌ ಬೆಂಗಳೂರು ವಿಧೇಯಕಕ್ಕೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸಂಪೂರ್ಣ ವಿರೋಧ ವ್ಯಕ್ತಪಡಿಸಿದ್ದು, ಕಾಂಗ್ರೆಸ್‌ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಈ…

1 hour ago

ಓದುಗರ ಪತ್ರ: ಸಮತೋಲನದ ಬಜೆಟ್!…

ಸಮತೋಲನದ ಬಜೆಟ್!... ಮೂಡಿ ಬಂದಿದೆ ಸರ್ವರ ಹಿತ ಏಳ್ಗೆಯ ಕರ್ನಾಟಕದ ಮಾದರಿ ಜನಪರ ಬಜೆಟ್! ಮುಖ್ಯಮಂತ್ರಿಗಳ ಅನುಭವದ ಮೂಸೆಯಲಿ ಸುಸ್ಥಿರ…

5 hours ago