ಸಂಪಾದಕೀಯ

ರಾಜಕೀಯ ಪಕ್ಷಗಳಿಗೆ ಎಚ್ಚರಿಕೆಯ ಸಂದೇಶ

  • ಬೆಂಗಳೂರು ಡೈರಿ
    ಆರ್.ಟಿ.ವಿಠಲಮೂರ್ತಿ

ಕೆಲ ದಿನಗಳ ಹಿಂದೆ ಕೇಂದ್ರದ ಬಿಜೆಪಿ ವರಿಷ್ಠರು ರಾಜ್ಯದ ನಾಯಕರಿಗೆ ಸ್ಪಷ್ಟ ಸಂದೇಶವೊಂದನ್ನು ರವಾನಿಸಿದ್ದಾರೆ. ಕರ್ನಾಟಕದಲ್ಲಿ ಆಳುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಔಪಚಾರಿಕ ಹೋರಾಟ ನಡೆಸುವುದು ಬೇಡ, ಅದು ಪೇಚಿಗೆ ಸಿಲುಕುವಂತಹ ಹಲವು ವಿಷಯಗಳಿರುವಾಗ ಸರಳ ವಿಷಯಗಳನ್ನು ಹಿಡಿದುಕೊಂಡು ಹೋರಾಡಿದರೆ ಹೆಚ್ಚಿನ ಲಾಭವಾಗುವುದಿಲ್ಲ ಎಂಬುದು ಈ ಸಂದೇಶ. ಅರ್ಥಾತ್, ಪೆಟ್ರೋಲ್ -ಡೀಸೆಲ್ ದರ ಏರಿಕೆ, ಹಾಲಿನ ದರ ಏರಿಕೆಯಂತಹ ವಿಷಯಗಳನ್ನು ಹಿಡಿದುಕೊಂಡು ಸರ್ಕಾರದ ವಿರುದ್ಧ ಹೋರಾಡಿದರೆ ಸಾಲದು, ಬದಲಿಗೆ ಕರ್ನಾಟಕದಲ್ಲಿರುವ ಕಾಂಗ್ರೆಸ್ ಸರ್ಕಾರವನ್ನು ಪೇಚಿಗೆ ಸಿಲುಕಿಸುವಂತಹ ಭ್ರಷ್ಟಾಚಾರದ ಹಗರಣಗಳನ್ನು ಬಯಲು ಮಾಡಬೇಕು ಎಂಬುದು ವರಿಷ್ಠರ ಸಂದೇಶ.

ಅಂದ ಹಾಗೆ ಜನಸಾಮಾನ್ಯರ ಬಳಕೆ ವಸ್ತುಗಳ ಬೆಲೆ ಏರಿದಾಗ ಹೋರಾಟ ನಡೆಸುವುದು ಸಹಜ. ಬೆಲೆ ಏರಿಕೆಯಂತಹ ವಿಷಯಗಳಲ್ಲಿ ಜನ ಹೊಂದಿರುವ ಆಕ್ರೋಶಕ್ಕೆ ಧ್ವನಿ ಕೊಡುವುದು ಪ್ರತಿಪಕ್ಷಗಳ ಕೆಲಸ ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಇಂತಹ ಹೋರಾಟಗಳನ್ನು ಕೈಗೆತ್ತಿಕೊಂಡಾಗ ಜನರ ಬೆಂಬಲ ಸಿಗುತ್ತದೆ ಎಂಬುದು ನಿಜ. ವಸ್ತುಸ್ಥಿತಿಯೆಂದರೆ ಕೆಲ ಕಾಲದ ಹಿಂದೆ ಪ್ರತಿಪಕ್ಷಗಳು ತಮ್ಮ ವರ್ಚಸ್ಸನ್ನು ಬೆಳೆಸಿಕೊಳ್ಳಲು, ಆಳುವ ಸರ್ಕಾರದ ವರ್ಚಸ್ಸನ್ನು ಕಡಿಮೆ ಮಾಡಲು ಇಂತಹ ಹೋರಾಟಗಳನ್ನೇ ಹೆಚ್ಚಾಗಿ ಅವಲಂಬಿತವಾಗುತ್ತಿದ್ದವು. ಹೀಗಾಗಿ ಪೆಟ್ರೋಲ್, ಡೀಸೆಲ್‌ ಬೆಲೆ ಒಂದು ರೂಪಾಯಿ ಹೆಚ್ಚಾದರೂ ಬೀದಿಗಿಳಿದು ಹೋರಾಡುವ ಪ್ರವೃತ್ತಿ ಪ್ರತಿಪಕ್ಷಗಳಲ್ಲಿತ್ತು. ಆದರೆ ಕಾಲ ಹೇಗೆ ಬದಲಾಗಿದೆ ಎಂದರೆ ಇವತ್ತು ಪೆಟ್ರೋಲ್, ಡೀಸೆಲ್ ಬೆಲೆಯನ್ನು ಕೇಂದ್ರ ಸರ್ಕಾರವೇ ಏರಿಸಲಿ, ರಾಜ್ಯ ಸರ್ಕಾರ ಅದರ ಮೇಲೆ ಹೇರುವ ಸುಂಕದ ಪ್ರಮಾಣ ಹೆಚ್ಚಿರಲಿ, ಜನ ಹೋರಾಟಕ್ಕಿಳಿಯುವಷ್ಟು ಬಿಡುವಾಗಿಲ್ಲ.

ಎಲ್ಲಕ್ಕಿಂತ ಮುಖ್ಯವಾಗಿ ಇಂತಹ ಟೀಕೆಗಳು ಕೇಳಿ ಬಂದಾಗ ಕೇಂದ್ರ ಸರ್ಕಾರವಾಗಲಿ, ರಾಜ್ಯ ಸರ್ಕಾರವಾಗಲಿ, ತುಂಬ ಮುಜುಗರಕ್ಕೆ ಒಳಗಾಗುವುದಿಲ್ಲ. ಉದಾಹರಣೆಗೆ ತೆಗೆದುಕೊಳ್ಳಿ. ಮೊನ್ನೆ ಕರ್ನಾಟಕ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಹೆಚ್ಚು ತೆರಿಗೆ ಹೇರಿದಾಗ ಪ್ರತಿಪಕ್ಷಗಳು ಟೀಕೆಗಿಳಿದವು. ಆದರೆ ಇಂತಹ ಟೀಕೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಎಷ್ಟು ನಿರಾಯಾಸವಾಗಿ ಎದುರಿಸಿದರು ಎಂದರೆ, ಕರ್ನಾಟಕದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಎಷ್ಟಿದೆ? ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಎಷ್ಟಿದೆ? ಅಂತ ಸೋದಾಹರಣವಾಗಿ ವಿವರಿಸಿದರು.

ಯಾವಾಗ ಅವರು ಪ್ರತಿಪಕ್ಷಗಳ ದಾಳಿಗೆ ತಿರುಗೇಟು ಕೊಟ್ಟರೋ ಆನಂತರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಂತಹ ವಿಷಯದಲ್ಲಿ ಕೇಳಿ ಬಂದ ಆರೋಪಗಳು ತಣ್ಣಗಾದವು. ಇದೇ ರೀತಿ ಹಾಲಿನ ದರ ಏರಿಕೆಯ ವಿಷಯದಲ್ಲೂ ಅಷ್ಟೇ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಹಾಲಿನ ಉತ್ಪಾದನೆಯ ಪ್ರಮಾಣ ಹೆಚ್ಚಾಗಿದೆ. ಹೀಗಾಗಿ ಪ್ರತಿ ಲೀಟರ್ ಹಾಲಿನ ಬೆಲೆ ಏರಿಕೆ ಮಾಡಲಾಗಿದೆ. ಅದಕ್ಕಿಂತ ಮುಖ್ಯವಾಗಿ ಜನರಿಗೆ ಹೆಚ್ಚುವರಿ ಹಾಲನ್ನು ನೀಡಿ ಅದಕ್ಕೆ ಪ್ರತಿಯಾಗಿ ದರ ವಿಧಿಸಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದಾಗಲೂ ಈ ವಿಷಯ ತಣ್ಣಗಾಯಿತು.

ಹೀಗೆ ತಣ್ಣಗಾಗುವ ಅಂದರೆ, ಪ್ರತಿಪಕ್ಷಳ ಆರೋಪ ತಣ್ಣಗಾಗುವ ವಿಷಯಗಳೇನಿವೆ ಇದರ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸುವುದಕ್ಕಿಂತ ಸರ್ಕಾರದ ಮುಖ್ಯಸ್ಥರು ಪೇಚಿಗೆ ಸಿಲುಕುವಂತಹ ವಿಷಯಗಳನ್ನು ಕೈಗೆತ್ತಿಕೊಂಡು ಹೋರಾಡಿ ಎಂದು ರಾಜ್ಯದ ಬಿಜೆಪಿ ನಾಯಕರಿಗೆ ಪಕ್ಷದ ವರಿಷ್ಠರು ಸೂಚನೆ ನೀಡಿದ್ದಾರೆ.

ಯಾವಾಗ ಅವರು ಇಂತಹ ಸೂಚನೆ ನೀಡಿದರೋ ಆಗ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಹಗರಣದಿಂದ ಹಿಡಿದು, ಮುಡಾ ಹಗರಣದವರೆಗೆ ಹಲವು ವಿಷಯಗಳನ್ನು ಕೈಗೆತ್ತಿಕೊಂಡು ಬಿಜೆಪಿ ಹೋರಾಟ ಆರಂಭಿಸಿದೆ. ಇದು ಎಷ್ಟರ ಮಟ್ಟಿಗೆ ಪರಿಣಾಮಕಾರಿ ಎಂಬುದನ್ನು ಕಾದು ನೋಡಬೇಕು.

ಲೋಕನೀತಿ ವರದಿ ಏನು?

ಈ ಮಧ್ಯೆ ಕರ್ನಾಟಕದ ಲೋಕಸಭಾ ಚುನಾವಣೆಯ ಬಗ್ಗೆ ಲೋಕನೀತಿ-ಸಿಎಸ್‌ ಡಿಎಸ್ ಸಂಸ್ಥೆ ಕುತೂಹಲಕಾರಿ ವರದಿಯೊಂದನ್ನು ನೀಡಿದೆ. ಅದರ ಪ್ರಕಾರ, ಕರ್ನಾಟಕದಲ್ಲಿ ಬಿಜೆಪಿ-ಜಾ.ದಳ ಮೈತ್ರಿಕೂಟ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಒಕ್ಕಲಿಗ, ಲಿಂಗಾಯತ ಮತಗಳು ಬೆರೆತಿದ್ದಷ್ಟೇ ಕಾರಣವಲ್ಲ, ಬದಲಿಗೆ ಹಿಂದುಳಿದ ವರ್ಗಗಳ ಮತಗಳು ಗಣನೀಯ ಸಂಖ್ಯೆಯಲ್ಲಿ ಸಿಕ್ಕಿರುವುದೇ ಮುಖ್ಯ ಕಾರಣ. ಅಂದ ಹಾಗೆ ಜಾ.ದಳ ಜತೆಗಿನ ಮೈತ್ರಿಯಿಂದ ಬಿಜೆಪಿಗೆ ಲಾಭವಾಗಿದೆಯಾದರೂ ಹಳೇ ಮೈಸೂರು ಭಾಗದ ಒಕ್ಕಲಿಗ ಮತ ಬ್ಯಾಂಕಿನ ಮೇಜರ್ ಷೇರು ಕಾಂಗ್ರೆಸ್ ಪಕ್ಷಕ್ಕೇ ಸಿಕ್ಕಿದೆ. ವರದಿಯ ಪ್ರಕಾರ ಶೇ.50ರಷ್ಟು ಒಕ್ಕಲಿಗ ಮತಗಳು ಕಾಂಗ್ರೆಸ್ ಪಕ್ಷಕ್ಕೆ ದಕ್ಕಿವೆ.

ಆದರೆ ಇತರ ಹಿಂದುಳಿದ ವರ್ಗಗಳ ಗಣನೀಯ ಪ್ರಮಾಣದ ಮತಗಳು ಬಿಜೆಪಿ ಮೈತ್ರಿಕೂಟಕ್ಕೆ ದಕ್ಕಿದ ಪರಿಣಾಮವಾಗಿ ಅದು ದೊಡ್ಡ ಮಟ್ಟದ ಲಾಭ ಪಡೆಯುವಂತಾಯಿತು ಎಂಬುದು ಈ ವರದಿಯ ಸಾರಾಂಶ. ಅಂದ ಹಾಗೆ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಮುಂಚಿತವಾಗಿ ಪ್ರಕಟವಾಗಿದ್ದ ಲೋಕನೀತಿ-ಸಿಎಸ್‌ಡಿಎಸ್ ಸರ್ವೇ ವರದಿ, ಸಂಸತ್ತಿನಲ್ಲಿ ಬಿಜೆಪಿ ಸರಳ ಬಹುಮತ ಪಡೆಯುವುದು ಕಷ್ಟ ಎಂದು ವರದಿ ನೀಡಿತ್ತು. ಆ ದೃಷ್ಟಿಯಿಂದ ಲೋಕಸಭಾ ಚುನಾವಣೆಯ ನಂತರ ಕರ್ನಾಟಕದ ಬಗ್ಗೆ ಅದು ನೀಡಿರುವ ವರದಿಯೂ ಕುತೂಹಲಕಾರಿಯಾದುದು. ಗಮನಿಸಬೇಕಾದ ಸಂಗತಿ ಎಂದರೆ ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಪಕ್ಷದ ಸಾಧನೆ ಕುಸಿದು ಹೋಗಿರುವುದನ್ನು ಕಂಡ ಹಲ ರಾಜಕೀಯ ವಿಶ್ಲೇಷಕರು, ಒಕ್ಕಲಿಗ ಮತ ಬ್ಯಾಂಕ್‌ ಈಗ ಬಿಜೆಪಿ ಮೈತ್ರಿಕೂಟದ ಜತೆ ನಿಂತಿದೆ ಎಂದಿದ್ದರು.

ಆದರೆ ಲೋಕನೀತಿ-ಸಿಎಸ್‌ಡಿಎಸ್ ಪ್ರಕಾರ, ಒಕ್ಕಲಿಗರು ಕಾಂಗ್ರೆಸ್ ಪಕ್ಷದ ಕೈ ಬಿಟ್ಟಿಲ್ಲ. ಬದಲಿಗೆ ಹಿಂದುಳಿದ ವರ್ಗ ಮತ್ತು ದಲಿತ ಸಮುದಾಯಗಳ ದೊಡ್ಡ ಪ್ರಮಾಣದ ಮತಗಳು ಕೈ ಹಿಡಿದಿರುವುದರಿಂದ ಬಿಜೆಪಿಗೆ ಲಾಭವಾಗಿದೆ. ಅರ್ಥಾತ್, ಈ ವರದಿಯ ಪ್ರಕಾರ ಕಾಂಗ್ರೆಸ್ ಪಕ್ಷವೂ ಎಚ್ಚರಿಕೆ ವಹಿಸಬೇಕಿದೆ ಮತ್ತು ಬಿಜೆಪಿ ಮೈತ್ರಿಕೂಟವೂ ಎಚ್ಚರಿಕೆ ವಹಿಸಬೇಕಿದೆ. ಉದಾಹರಣೆಗೆ ಕಾಂಗ್ರೆಸ್ ಪಕ್ಷವನ್ನೇ ತೆಗೆದುಕೊಳ್ಳಿ. ತಾನು ಸಾಮಾಜಿಕ ನ್ಯಾಯದ ಪರವಾಗಿರುವುದರಿಂದ ಅಹಿಂದ ವರ್ಗಗಳು ತಮ್ಮ ಜತೆಗಿವೆ ಎಂದು ಕಾಂಗ್ರೆಸ್ ನಂಬಿತ್ತು. ಆದರೆ ಈ ಸಲ ಅಲ್ಪಸಂಖ್ಯಾತರು ಸಾಲಿಡ್ಡಾಗಿ ಕಾಂಗ್ರೆಸ್ ಜತೆ ನಿಂತರು ಎಂಬುದನ್ನು ಹೊರತುಪಡಿಸಿದರೆ ಹಿಂದೂ ಸಮುದಾಯಗಳ ಗಣನೀಯ ಪ್ರಮಾಣದ ಮತಗಳು ಬಿಜೆಪಿಗೆ ದಕ್ಕಿವೆ. ಇದು ಕಾಂಗ್ರೆಸ್‌ನ ಪಾರಂಪರಿಕ ಮತ ಬ್ಯಾಂಕ್‌ ದುರ್ಬಲವಾಗುತ್ತಿದೆ ಎಂಬುದರ ಸಂಕೇತ.

ಹೀಗಾಗಿ ಕಾಂಗ್ರೆಸ್ ಪಕ್ಷ ತನ್ನ ಮೂಲ ಮತ ಬ್ಯಾಂಕ್‌ನಲ್ಲಾದ ಪಲ್ಲಟಗಳನ್ನು ಗಮನಿಸಬೇಕು ಮತ್ತು ಯಾವ ಕಾರಣಕ್ಕಾಗಿ ಹಿಂದುಳಿದ ವರ್ಗ ಮತ್ತು ದಲಿತ ಸಮುದಾಯದ ಗಣನೀಯ ಪ್ರಮಾಣದ ಮತಗಳು ಬಿಜೆಪಿ ಮೈತ್ರಿಕೂಟದ ಕಡೆ ಹೋದವು ಎಂಬುದರ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕು.

ಇದೇ ರೀತಿ ಬಿಜೆಪಿ-ಜಾ.ದಳ ಪರಸ್ಪರ ಕೈಗೂಡಿಸಿದ ನಂತರವೂ ಗಣನೀಯ ಪ್ರಮಾಣದ ಒಕ್ಕಲಿಗರು ಏಕೆ ಕಾಂಗ್ರೆಸ್ ಪಕ್ಷದ ಜತೆಗೇ ನಿಂತರು ಎಂಬುದು ಮೈತ್ರಿಕೂಟದ ಆತ್ಮಾವಲೋಕನಕ್ಕೆ ದಾರಿ ಮಾಡಿಕೊಟ್ಟಿದೆ. ಇದು ನಿಜಕ್ಕೂ ಕುತೂಹಲಕಾರಿ.

ಆಂದೋಲನ ಡೆಸ್ಕ್

Share
Published by
ಆಂದೋಲನ ಡೆಸ್ಕ್

Recent Posts

ಎಂಇಎಸ್‌ ನಿಷೇಧಿಸುವಂತೆ ಆಗ್ರಹಿಸಿ ವಾಟಾಳ್‌ ನಾಗರಾಜ್‌ ಪ್ರತಿಭಟನೆ

ಮೈಸೂರು : ಎಂಇಎಸ್ (ಮಹಾರಾಷ್ಟ್ರ ಏಕೀಕರಣ ಸಮಿತಿ) ನಿಷೇಧಿಸಬೇಕೆಂದು ಆಗ್ರಹಿಸಿ ಮೈಸೂರಿನಲ್ಲಿ ಕನ್ನಡಪರ ಹೋರಾಟಗಾರ ವಾಟಾಳ್‌ ನಾಗರಾಜ್ ಪ್ರತಿಭಟನೆ ನಡೆಸಿದರು.…

11 mins ago

ಅನಾಥ ಅಸ್ವಸ್ಥರ ನೆರವಿಗೆ ಧಾವಿಸುವ ಮಾನವೀಯ ತಂಡ: ನಿವೃತ್ತ ಶಿಕ್ಷಕ ಸುಂದ್ರಪ್ಪ ತಂಡದ ಕಾರ್ಯ ಪ್ರೇರಣದಾಯಕ

ಮಂಡ್ಯ: ಆಧುನಿಕ ಜೀವನದ ಒತ್ತಡದ ಬದುಕಿನಲ್ಲಿ ಎಲ್ಲರಿಗೂ ಅವರದ್ದೇ ಆದ ಅವಸರಗಳು. ತನ್ನ ಸುತ್ತಮುತ್ತಲಿನ ನೊಂದವರು, ಸಂಕಷ್ಟದಲ್ಲಿರುವವರ ಕಡೆ ಕಣ್ಣೆತ್ತಿಯೂ…

13 mins ago

ಹೊಸ ವರ್ಷ ಆಚರಣೆಗೆ ಜನರ ಪ್ರವಾಸ: ಕರ್ನಾಟಕದ ಪ್ರವಾಸಿ ತಾಣಗಳಲ್ಲಿ ಜನಜಂಗುಳಿ

ಬೆಂಗಳೂರು: ಹೊಸ ವರ್ಷದ ಆಚರಣೆಗೆ ಜನ ಪ್ರವಾಸಿ ತಾಣಗಳತ್ತ ಮುಖ ಮಾಡಿದ್ದಾರೆ. ಕರ್ನಾಟಕದ ಪ್ರವಾಸಿ ತಾಣಗಳು ಜನ ಜಂಗುಳಿಯಿಂದ ತುಂಬಿ…

42 mins ago

ಅರಮನೆ ಬಳಿ ಹೀಲಿಯಂ ಸ್ಫೋಟ ಪ್ರಕರಣ: ಎನ್‌ಐಎ ತನಿಖೆಗೆ ಪ್ರಮೋದ್‌ ಮುತಾಲಿಕ್‌ ಆಗ್ರಹ

ಮೈಸೂರು: ಅರಮನೆ ಬಳಿ ಹೀಲಿಯಂ ಸಿಲಿಂಡರ್‌ ಸ್ಫೋಟ ಸಂಭವಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್‌ ಪ್ರತಿಕ್ರಿಯೆ ನೀಡಿದ್ದು,…

2 hours ago

ಚಿತ್ರದುರ್ಗ ಮುರುಘಾ ಶರಣರ ವಿರುದ್ಧ ಮತ್ತೊಂದು ಗಂಭೀರ ಆರೋಪ

ಚಿತ್ರದುರ್ಗ: ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿ ಬಂದಿದೆ. ನ್ಯಾಯಾಲಯದ ಆದೇಶವನ್ನು ಮೀರಿ…

2 hours ago

ಹೊಗೇನಕಲ್ ಜಲಪಾತ ವೀಕ್ಷಣೆಗೆ ಪ್ರವಾಸಿಗರ ಲಗ್ಗೆ: ಪ್ರಕೃತಿ ಸೌಂದರ್ಯಕ್ಕೆ ಮನಸೋತ ಜನತೆ

ಹನೂರು: ಕರ್ನಾಟಕದ ನಯಾಗಾರ ಎಂದೇ ಪ್ರಖ್ಯಾತಿ ಪಡೆದಿರುವ ಹೊಗೇನಕಲ್ ಜಲಪಾತ ನೋಡಲು ತಮಿಳುನಾಡಿನ ಭಾಗದಿಂದ ಪ್ರವಾಸಿಗರ ದಂಡೇ ಬರುತ್ತಿದ್ದು, ಇಂದು…

2 hours ago