ಸಂಪಾದಕೀಯ

ನಯನ ಮನೋಹರ ಭೂ ಶಿರ – ಕೇಪ್‌ಟೌನ್

ಕೇಪ್ ಭೂಶಿರದ ಎರಡೂ ಕೆನ್ನೆಗಳನ್ನು ಒಂದೆಡೆ ಅಟ್ಲಾಂಟಿಕ್ ಸಾಗರ, ಮತ್ತೊಂದೆಡೆ ಹಿಂದೂ ಮಹಾಸಾಗರ ಚುಂಬಿಸುತ್ತಿದ್ದಾಗ ನಮ್ಮ ವಿಮಾನ ಮದರ್ ಸಿಟಿ, ಅಂದರೆ ಪ್ರಪಂಚದ ಎಲ್ಲ ನಗರಗಳಿಗೂ ತಾಯಿ ಎಂದು ಬಿಂಬಿಸಿಕೊಳ್ಳುವ ಕೇಪ್‌ಟೌನ್‌ನಲ್ಲಿ ಇಳಿಯಿತು. ಅತ್ಯಂತ ಹೆಚ್ಚು ವೇಗವಾಗಿ ಗಾಳಿ ಬೀಸುವ ಪ್ರದೇಶವಾಗಿದ್ದರಿಂದ ಅಟ್ಲಾಂಟಿಕ್ ಖಂಡದಿಂದ ಬೀಸುತ್ತಿದ್ದ ಶೀತಗಾಳಿ ಅಟ್ಲಾಂಟಿಕ್ ಸಾಗರವನ್ನು ಹಾದು ಆಗ ತಾನೆ ವಿಮಾನದಿಂದ ಇಳಿದಿದ್ದ ನಮ್ಮ ಎದೆಗೂಡನ್ನು ಹೊಕ್ಕು ದೇಹವನ್ನೊಮ್ಮೆ ನಡುಗಿಸಿ ಕೊಡವಿತು.

ಕೇಪ್‌ಟೌನ್‌ನ ಚರಿತ್ರೆಯನ್ನು ಹೊಕ್ಕು ವೀಕ್ಷಿಸಿದರೆ, ಡಚ್ ಈಸ್ಟ್ ಇಂಡಿಯಾ ಕಂಪೆನಿಯ ಕಮ್ಯಾಂಡರ್ ಜಾನ್‌ವ್ಯಾನ್ ರೀಬೀಕ್ ೧೬೫೨ರಲ್ಲಿ ಕೇಪ್ ಪರ್ಯಾಯ ದ್ವೀಪದ ಅತ್ಯಂತ ಹಳೆಯ ನಗರ ಕೇಪ್‌ಟೌನ್‌ನ ಟೇಬಲ್ ಮೌಂಟೇನ್ ಕೊಲ್ಲಿಯಲ್ಲಿ ಕಾಲಿರಿಸಿದ್ದು ದಾಖಲಾಗಿದೆ. ಅಂದಿನ ದಿನಗಳಲ್ಲಿ ಭಾರತವನ್ನರಸಿ ಯಾನ ಮಾಡುತ್ತಿದ್ದ ಪೋರ್ಚುಗೀಸರು, ಡಚ್ಚರು, ಬ್ರಿಟಿಷರು ಕೇಪ್ ಆಫ್ ಗುಡ್ ಹೋಪ್‌ನ್ನು ಬಳಸಿ ಸಾಗುತ್ತಿದ್ದರು. ಆಗೆಲ್ಲಾ ಅವರ ಗುರಿ ಮಸಾಲೆ ಪದಾರ್ಥಗಳ ಆಗರವಾಗಿದ್ದ ಇಂಡಿಯಾ ಅಥವಾ ಭಾರತ. ಅವರ‍್ಯಾರಿಗೂ ಆಫ್ರಿಕಾದಲ್ಲಿ ಕೇಪ್‌ಟೌನ್ ಎಂಬ ಸುಂದರ ಭೂ ಭಾಗವಿದೆ ಎಂದು ೧೬೫೨ರವರೆವಿಗೂ ತಿಳಿದಿರಲಿಲ್ಲ. ಒಂದು ಶತಮಾನದ ನಂತರ ಸುಮಾರು ೫,೫೦೦ ಯುರೋಪಿಯನ್ನರು ಈ ಕೇಪ್ ಭೂ ಶಿರದಲ್ಲಿ ನೆಲೆ ನಿಂತರು ಮತ್ತು ಸುಮಾರು ೭,೦೦೦ ದಷ್ಟು ಸ್ಥಳೀಯರು ಮತ್ತು ಬಂದರುಗಳಲ್ಲಿ ದುಡಿಮೆಗೆಂದು ಬಂದ ಭಾರತೀಯ ಮೂಲದವರು ಗುಲಾಮಗಿರಿಗೆ ಒಳಗಾಗಿ ನೆಲೆಸಿರುತ್ತಾರೆ. ೧೮೧೪ರಲ್ಲಿ ಡಚ್ಚರ ಆಡಳಿತದಿಂದ ಕೇಪ್ ಟೌನ್‌ನ್ನು ಬಿಡಿಸಿಕೊಂಡ ಬ್ರಿಟಿಷರು ೧೮೩೪ರಲ್ಲಿ ಎಲ್ಲರನ್ನೂ ಗುಲಾಮಗಿರಿಯಿಂದ ಬಿಡುಗಡೆಗೊಳಿಸುತ್ತಾರೆ. ಯುರೋಪಿಯನ್ ವಸಾಹತುಗಾರರು, ಮಿಶ್ರ ಜನಾಂಗದ ನಿವಾಸಿಗಳು, ಸ್ಥಳೀಯರನ್ನೊಳಗೊಂಡ ಐತಿಹಾಸಿಕ ನೆಲೆಯಾದ ಅಂದಿನ ಕೇಪ್‌ಟೌನ್ ಆಫ್ರಿಕಾದ ಇತರೆ ನಗರಗಳಿಗಿಂತ ಹೆಚ್ಚು ಉದಾರ ನೀತಿ ಅನುಸರಿಸುತ್ತಿತ್ತು.

ಇದನ್ನು ಓದಿ: ವಿರಾಜಪೇಟೆ-ಮಾಕುಟ್ಟ ರಸ್ತೆ ಕಾಮಗಾರಿ ಆರಂಭ

ನಂತರ ನಡೆದ ಬೆಳವಣಿಗೆಗಳಲ್ಲಿ ವರ್ಣಭೇದ ನೀತಿ ಅನುಸರಿಸಲು ತೊಡಗಿ ಮಿಶ್ರಜನಾಂಗವು ನಾಗರಿಕ ಹಕ್ಕು ಅಡಿಯಲ್ಲಿ ಆನಂದಿಸುವುದನ್ನು ಹಿಂತೆಗೆದುಕೊಳ್ಳಲಾಯಿತು ಮತ್ತು ಅವರನ್ನು ದಮನಿಸಲಾಯಿತು. ಕೇಪ್‌ಟೌನ್‌ನ ಮುಖ್ಯ ಭೂ ಭಾಗದಿಂದ ಮಿಶ್ರವರ್ಣದ ಜನರನ್ನು ಬಲವಂತವಾಗಿ ಎಬ್ಬಿಸಿ ಹೊರವಲಯಗಳಲ್ಲಿ ನೆಲೆಸುವಂತೆ ಮಾಡಿ, ಮುಖ್ಯ ಭೂ ಭಾಗ ಬಿಳಿಯರಿಗೆ ಮಾತ್ರ ಮೀಸಲು ಎನ್ನುವ ಕಾಯಿದೆಯಿಂದ ನರಳುತ್ತಿರುವ ದಕ್ಷಿಣ ಆಫ್ರಿಕಾವನ್ನು ಇಂದಿಗೂ ನೋಡಬಹುದಾಗಿದೆ. ವಿಮಾನ ನಿಲ್ದಾಣದಿಂದ ಕೇಪ್‌ಟೌನ್‌ಗೆ ಬಸ್ಸಿನಲ್ಲಿ ಪ್ರಯಾಣಿಸುತ್ತಿರುವಾಗ ಮಾರ್ಗದರ್ಶಿ, ರಸ್ತೆ ಬದಿಗಳಲ್ಲಿದ್ದ ಕೊಳಚೆ ಪ್ರದೇಶಗಳ ಮಹತ್ವವನ್ನು ವಿವರಿಸುವಾಗ ಕೆಲವರ ಮುಖಗಳಲ್ಲಿ ಅಸಹ್ಯದ ಭಾವ ಬಂದಿರಬಹುದು. ಈತ ಏಕಾಗಿ ಕೊಳಚೆ ಪ್ರದೇಶಗಳನ್ನು ವಿವರಿಸುತ್ತಿದ್ದಾನೆಂದು ಅವರಿಗೆ ತಿಳಿದಿರಲಿಲ್ಲ. ಅವೆಲ್ಲಾ ಅಂದಿನ ಸ್ವಾತಂತ್ರ್ಯ ಸಂಗ್ರಾಮದ ತವರು ಮನೆಗಳೆಂದು. ದಕ್ಷಿಣ ಆಫ್ರಿಕಾದ ಸ್ವಾತಂತ್ರ್ಯಕ್ಕೋಸ್ಕರ ಹೋರಾಡಿ ಜೀವನವನ್ನೇ ಮುಡಿಪಾಗಿಟ್ಟು ಪ್ರಾಣತೆತ್ತ ಸಾವಿರಾರು ಹೋರಾಟಗಾರರ ಕರ್ಮ ಭೂಮಿ ಈ ಕೊಳಚೆ ಪ್ರದೇಶಗಳೇ. ಎಲ್ಲ ವರ್ಣದವರು ನೆಲೆಸಿರುವ ದೇಶವಾಗಿರುವುದರಿಂದ ದಕ್ಷಿಣ ಆಫ್ರಿಕಾವನ್ನು ರೈನ್‌ಬೋ ನೇಷನ್ (ಕಾಮನಬಿಲ್ಲಿನ ದೇಶ) ಎಂದೂ ಕರೆಯುತ್ತಾರೆ.

ನಗರದ ಮಧ್ಯ ಮುಖ್ಯ ಭಾಗಗಳಲ್ಲಿ ಬಿಳಿಯರು ನೆಲೆಸಿದ್ದರೆ, ಬಹುವರ್ಣೀಯರು ಮತ್ತು ಭಾರತೀಯರು ನಗರದಿಂದ ಕೆಲವು ಕಿ.ಮೀ. ದೂರದಲ್ಲಿ ವಾಸ್ತವ್ಯ. ಕರಿಯರು ಇನ್ನೂ ದೂರದಲ್ಲಿ ವಾಸ್ತವ್ಯ. ನನ್ನಮಾರ್ಗದರ್ಶಿ ಬಿಲ್ಲಿ, ನಾವು ನಮ್ಮ ದೇಶದಲ್ಲೇ ಪರಕೀಯರಾಗಿದ್ದೇವೆ. ಮೂರನೇ ದರ್ಜೆ ನಾಗರಿಕರೆಂದು ಪರಿಗಣಿಸಲ್ಪಟ್ಟಿದ್ದೇವೆ. ದೇಶದ ಶೇ.೮೦ರಷ್ಟು ಭೂ ಭಾಗ ಬಿಳಿಯರ ವಶದಲ್ಲೇ ಇದೆ. ಬಿಳಿಯರ ಜನಸಂಖ್ಯೆ ದಕ್ಷಿಣ ಆಫ್ರಿಕಾದ ಶೇ.೨೦. ಸರ್ಕಾರವೇನಾದರೂ ನಾಗರಿಕರಿಗೆ ಮೂಲಸೌಕರ್ಯಗಳನ್ನು ನಿರ್ಮಿಸಬೇಕಾದರೆ ಬಿಳಿಯರಿಂದ ನೆಲವನ್ನು ಕೊಂಡುಕೊಳ್ಳಬೇಕಾದ ಪರಿಸ್ಥಿತಿ ಇದೆ ಎಂದು ವಿವರಿಸುತ್ತಿದ್ದ. ಕೇಪ್‌ಟೌನ್ ಬಹಳ ಸುಂದರನಗರ. ನಗರವನ್ನು ಬಹಳ ಸುಂದರವಾಗಿ ನಿರ್ಮಿಸಿದ್ದಾರೆ ಈ ಬಿಳಿಯರು. ಅಚ್ಚುಕಟ್ಟುತನ, ಸ್ವಚ್ಛತೆ ಎಲ್ಲೆಲ್ಲೂ ಕಾಣುತ್ತದೆ. ಕೇಪ್‌ಟೌನ್ ದಕ್ಷಿಣಕ್ಕೆ ಕೇಪ್ ಭೂಶಿರಕ್ಕೆ ಹೋಗುವ ದಾರಿ ಟೇಬಲ್ ಮೌಂಟೇನ್ ನ್ಯಾಷನಲ್ ಪಾರ್ಕ್‌ನ ಮೂಲಕ ಹಾದು ಹೋಗುತ್ತದೆ. ಪ್ರೊಟಿಯಾಸ್ ಎಂದೇ ಕರೆಸಿಕೊಳ್ಳುವ ಅತ್ಯಂತ ಸುಂದರ ಹೂಗಳ ಪೊದೆಗಳ ಜೊತೆ ಎರಿಕಾಸ್, ರೆಸ್ಟಿಯಾಸ್ ಹಾಗೂ ದಿಸಾಸ್ (ಆರ್ಕಿಡ್ಸ್) ನಂತಹ ೨,೨೦೦ ಬೇರೆ ಬೇರೆ ಜಾತಿ ಗಿಡಗಳು, ಕಿಲೋಮೀಟರ್‌ಗಟ್ಟಲೆ ಕಣ್ಣುಗಳ ಕಾಣುವಷ್ಟು ದೂರ ದೂರಕ್ಕೆ ಹರಡಿದ್ದವು.

ಇದನ್ನು ಓದಿ: ಹೆಚ್ಚಿದ ಚಳಿ; ಬೆಳೆಗಳಿಗೆ ರೋಗಬಾಧೆ!

ಇಡೀ ಭೂಪ್ರದೇಶದಲ್ಲಿ ಬರಿ ಹೂಗಳೆ. ಅರಳಿ ಬೇರೆ ಲೋಕವನ್ನೇ ಸೃಷ್ಟಿಸಿದ್ದವು. ೨೫೦ಕ್ಕೂ ಹೆಚ್ಚು ವಿವಿಧ ಜಾತಿಯ ಹಕ್ಕಿಗಳು, ೨೨ಕ್ಕೂ ಹೆಚ್ಚು ಮೃಗಗಳು ಈ ಯುನೆಸ್ಕೋವಿನ ವಲ್ಡ್  ಹೆರಿಟೇಜ್ ಸ್ಪಾಟ್‌ನಲ್ಲಿರುವನಾವು ಚಿಕ್ಕಂದಿನಲ್ಲಿ ಓದಿದ್ದ ಕೇಪ್ ಆಫ್ ಗುಡ್ ಹೋಪ್ ಆಫ್ರಿಕಾ ಖಂಡದ ತುತ್ತ ತುದಿಯಲ್ಲಿದೆ. ಅಟ್ಲಾಂಟಿಕ್ ಸಾಗರದಲ್ಲಿ ಚಾಚಿಕೊಂಡಿದೆ. ೧೫ನೇ ಶತಮಾನದಲ್ಲಿ ಯುರೋಪಿಯನ್ನರು ಸಾಂಬಾರ ಅಥವಾ ಮಸಾಲೆ ಪದಾರ್ಥಗಳು, ಭಾರತ ದೇಶದ ಸಂಪತ್ತು, ಏಷ್ಯಾ ಖಂಡದ ರೇಷ್ಮೆಯ ಹುಡುಕಾಟದಲ್ಲಿ ಪ್ರಪಂಚದ ಪೂರ್ವಭಾಗವನ್ನು ಸಮುದ್ರ ಮಾರ್ಗವಾಗಿ ಶೋಧಿಸುತ್ತಿದ್ದರು. ಕಾರಣವೆಂದರೆ ನೆಲ ಮಾರ್ಗವಾದ ರೇಷ್ಮೆ ರಸ್ತೆ ಅಥವಾ ಸಿಲ್ಕ್‌ರೂಟ್ ಓಟ್ಟೂಮನ್ ಸಾಮ್ರಾಜ್ಯ ಮತ್ತು ಅರಬ್ ವ್ಯಾಪಾರಿಗಳ ನಿಯಂತ್ರಣದಲ್ಲಿದ್ದು ಬಹಳ ಅಪಾಯಕಾರಿಯಾಗಿದ್ದವು. ಪೋರ್ಚುಗಲ್ ದೇಶದ ರಾಜ ಆಫ್ರಿಕಾ ಖಂಡವನ್ನು ಸುತ್ತುವರಿದು ಏಷ್ಯಾ ಖಂಡವನ್ನು ಶೋಧಿಸಲು ಬಾರ್ಥೆಲೋಮಿಯಾ ಡೆಯಾಸ್ ಎಂಬ ನಾವಿಕ ಸಂಶೋಧಕನನ್ನು ೧೪೮೭ರಲ್ಲಿ ಕಳಿಸುತ್ತಾನೆ. ಆತ ಕೇಪ್ ಭೂಶಿರವನ್ನು ಬಳಸುತ್ತಿದ್ದಾಗ ಎದ್ದ ಬಿರುಗಾಳಿಗಳು ಮತ್ತು ಅಸಾಮಾನ್ಯ ಅಲೆಗಳ ಹೊಡೆತದಲ್ಲಿ ಭೂಶಿರವನ್ನು ಮುಟ್ಟಲಾಗದೆ, ಉತ್ತರದೆಡೆ ಹಡಗುಗಳು ಮುನ್ನಡೆದಾಗ ಆತನಿಗೆ ಆಫ್ರಿಕಾದ ತುತ್ತ ತುದಿಯ ಭೂಶಿರವನ್ನು ಬಳಸಿದ್ದೇವೆ ಎಂದು ಅರಿವಾಗುತ್ತದೆ. ಅಷ್ಟರಲ್ಲಿ ಅವನ ನಾವಿಕರು ದಂಗೆಯೆದ್ದು ತಮ್ಮ ದೇಶಕ್ಕೆ ವಾಪಸಾಗಲು ಹಠ ಮಾಡುತ್ತಾರೆ. ಹಾಗಾಗಿ ಆತ ಆ ಭೂಶಿರವನ್ನು ಕೇಪ್ ಆಫ್ ಸ್ಟಾರ್ಮ್ಸ್ ಎಂದು ಕರೆದು ಪೋರ್ಚುಗಲ್‌ಗೆ ಹಿಂದಿರುಗುತ್ತಾನೆ. ಕಥೆ ಕೇಳಿದ ಪೋರ್ಚುಗಲ್‌ನ ರಾಜ ಕಿಂಗ್ ಜಾನ್‌ಗೆ ಆಫ್ರಿಕಾವನ್ನು ಬಳಸಿ ಭಾರತವನ್ನು ಸಂಶೋಧಿಸುವ ಅವಕಾಶಗಳ ಅರಿವಾಗಿ ಆತ ಆಫ್ರಿಕಾದ ಭೂಶಿರವನ್ನು ಕೇಪ್ ಆಫ್ ಗುಡ್ ಹೋಪ್ ಎಂದು ನಾಮಕರಣ ಮಾಡುತ್ತಾನೆ.

ಹತ್ತು ವರ್ಷಗಳ ನಂತರ ೧೪೯೭ರಲ್ಲಿ ಪೋರ್ಚುಗಲ್ ದೊರೆ ವಾಸ್ಕೋಡಗಾಮ ಎಂಬ ನಾವಿಕನನ್ನು ಇನ್ನೂ ಬಲವಾದ ಹಡಗು ಪಡೆಯೊಂದಿಗೆ ಭಾರತವನ್ನು ಶೋಽಸಲು ಕಳುಹಿಸಿದಾಗ ಆತ ಕೇಪ್ ಆಫ್ ಗುಡ್ ಹೋಪ್‌ನ್ನು ಬಳಸಿ ಹಿಂದೂ ಮಹಾಸಾಗರದಲ್ಲಿ ಮಾನ್ಸೂನ್ ಮಾರುತಗಳ ಬೆನ್ನೇರಿ ಮೇ ತಿಂಗಳ ೨೦ನೇ ತಾರೀಖು ೧೪೯೮ರಲ್ಲಿ ಅಂದಿನ ಕೋಜ಼ಿಕೋಡ್ ಅಥವಾ ಇಂದಿನ ಕ್ಯಾಲಿಕಟ್‌ನ್ನು ಸಂಶೋಧಿಸುತ್ತಾನೆ.

ಭಾರತಕ್ಕೆ ಸಮುದ್ರ ಮಾರ್ಗ ಕಂಡುಹಿಡಿದ ನಂತರ ಕೇಪ್ ಆಫ್ ಗುಡ್ ಹೋಪ್ ಭೂ ಭಾಗ ಅತ್ಯಂತ ಮಹತ್ವದ ಪ್ರದೇಶವಾಗುತ್ತದೆ. ೧೬೫೨ರಲ್ಲಿ ಡಚ್ ಈಸ್ಟ್ ಇಂಡಿಯಾ ಕಂಪೆನಿ ಕೇಪ್‌ಟೌನ್‌ನ್ನು ಬಹು ಮುಖ್ಯವಾದ ಬಂದರಾಗಿ ಮಾರ್ಪಡಿಸಿ ಭೂಶಿರವನ್ನು ಬಳಸುವ ಎಲ್ಲ ಹಡಗುಗಳಿಗೂ ತಂಗುದಾಣವಾಗುವ ಅವಕಾಶದಿಂದಾಗಿ ನಗರ ಬೆಳೆಯುತ್ತದೆ.

ಇದನ್ನು ಓದಿ: ಹೆಚ್ಚಿದ ಚಳಿ; ಬೆಳೆಗಳಿಗೆ ರೋಗಬಾಧೆ!

ಕೇಪ್‌ಟೌನ್‌ನ ಯಾವುದೇ ದಿಕ್ಕಿನಿಂದ ನೋಡಿದರೂ ಕಾಣಸಿಗುವ ಟೇಬಲ್ ಮೌಂಟೇನ್ ಒಂದು ಭೂಗೋಳಿಕ ಕೌತುಕ. ಮಟ್ಟಸವಾದ ಟೇಬಲ್ ಮೇಲೆ ಶುಭ್ರ ಶ್ವೇತವಸ್ತ್ರವನ್ನು ಹೊದಿಸಿದಂತೆ ಕಾಣುವ ಟೇಬಲ್ ಮೌಂಟೇನ್ ಅತ್ಯಂತ ಆಕರ್ಷಕ ಬೆಟ್ಟಗಳ ಸಾಲು. ೨೫೦ ರಿಂದ ೩೦೦ ಮಿಲಿಯನ್ ವರ್ಷಗಳ ಹಿಂದೆ ರೂಪಗೊಂಡಿರಬಹುದಾದ ಸಮುದ್ರ ಮಟ್ಟದಿಂದ ೫೮೨ ಮೀಟರ್ ಎತ್ತರವಿರುವ ಟೇಬಲ್ ಮೌಂಟೇನ್ ಎಂಬ ಒಂದು ವಿಶಿಷ್ಟ ನೈಸರ್ಗಿಕ ಲೋಕಕ್ಕೆ ೧೯೨೯ರಲ್ಲಿ ಅಳವಡಿಸಿದ ಹಾಗೂ ೧೯೫೮, ೧೯೭೪ ಮತ್ತು ೧೯೯೭ರಲ್ಲಿ ನವೀಕರಣಗೊಂಡ ಕೇಬಲ್ ಕಾರ್ ೩೬೦ ಡಿಗ್ರಿ ಸುತ್ತುತ್ತಾ ೬೫ ಜನರನ್ನು ಹೊತ್ತೊಯ್ಯುತ್ತದೆ. ೧,೫೦೦ಕ್ಕೂ ಹೆಚ್ಚು ಸಸ್ಯ ಪ್ರಭೇದಗಳು ಗಗನದಲ್ಲಿ ಹೂಗಳ ತೋಟವನ್ನು ನಿರ್ಮಿಸಿವೆ. ಅತ್ಯಂತ ಸುಂದರ ಬಣ್ಣದ ದಿಸಾ ಯುನಿಪ್ಲೋರಾ, ರೀಗಲ್ ಪೂಟಿಯಾದಿಂದ, ಹೂಗಳು ಸಣ್ಣ ಸಣ್ಣ ಝರಿಗಳು ಸಣ್ಣ ಜಲಪಾತಗಳು ಸೇರಿ ಅತ್ಯಂತ ವಿಭಿನ್ನ ವನ್ಯಜೀವಿಯ ಲೋಕವನ್ನು ಸೃಷ್ಟಿಸಿವೆ. ಮೋಡಗಳಿರದ ಸುಂದರ ಬೆಳಗಿನ ಸೂರ್ಯ ರಶ್ಮಿಯಡಿ ಇದೊಂದು ಅಪರೂಪದ ಪ್ರದೇಶವಾಗಿ ಬೆಳಗುತ್ತದೆ.

ಕೇಪ್‌ಟೌನ್‌ನಿಂದ ೯.೭ ಕಿ.ಮೀ. ದೂರವಿರುವ ರಾಬೆನ್ ದ್ವೀಪ ಈಗ ಪ್ರವಾಸಿ ತಾಣಗಳಲ್ಲೊಂದು. ಶಾರ್ಕ್ ಮೀನುಗಳಿಂದ ಸುತ್ತುವರಿದ ಅಟ್ಲಾಂಟಿಕ್ ಸಾಗರದ ನಡುವಿನ, ನೀರಿಲ್ಲದ ಈ ದ್ವೀಪ ಖ್ಯಾತಿಗೊಳಗಾಗಿರುವುದು ಅಲ್ಲಿರುವ ಸೆರಮನೆಗಳಿಂದ. ದಕ್ಷಿಣ ಆಫ್ರಿಕಾದ ಕುಪ್ರಸಿದ್ಧ ವರ್ಣಭೇದ ನೀತಿಯ ಯುಗದಲ್ಲಿ ೧೯೬೦ರಿಂದ ೧೯೯೦ರವರೆವಿಗೂ ಅತ್ಯಂತ ಅಮಾನವೀಯ ರೀತಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರರನ್ನು ಬಂಧಿಸಿದ್ದ ಪ್ರದೇಶ. ಅವರಲ್ಲಿ ಅತ್ಯಂತ ಪ್ರಸಿದ್ಧರಾದ ನೆಲ್ಸನ್ ಮಂಡೇಲಾರವರು ರಾಜಕೀಯ ಕೈದಿಯಾಗಿ ಜೈಲಿಗೆ ಆಗಮಿಸಿದಾಗ ಅವರಿಗೆ ೪೬ ವರ್ಷ, ಅದು ೧೩ ಜೂನ್ ೧೯೬೪ರಲ್ಲಿ, ಅವರು ಅಲ್ಲಿಗೆ ೪೬೬ನೇ ಕೈದಿ. ಹಾಗಾಗಿ ಅವರ ಜೈಲು ಸಂಖ್ಯೆ ೪೬೬/೬೪. ಅವರನ್ನು ಬಂಧಿಸಿದ್ದ ೬ ಅಡಿ  ೭ ಅಡಿ ಅಳತೆಯ ಜೈಲು ಕೋಣೆಯಲ್ಲಿ ಯಾವುದೇ ಪೀಠೋಪಕರಣಗಳಿರಲಿಲ್ಲ. ಶೌಚಕ್ಕೆ ಒಂದು ಬಕೆಟ್ ನೀರು ಮಾತ್ರ, ಮಲಗುತ್ತಿದ್ದದ್ದು ಬರಿಯ ನೆಲದ ಮೇಲೆ. ಆರು ತಿಂಗಳಿಗೊಮ್ಮೆ ಒಬ್ಬರು ಮಾತ್ರ ಅವರನ್ನು ಭೇಟಿ ಮಾಡಬಹುದಿತ್ತು. ಅದೂ ಅರ್ಧ ತಾಸು ಮಾತ್ರ ಹಾಗೂ ಆರು ತಿಂಗಳಿಗೊಮ್ಮೆ ಒಂದು ಪತ್ರವನ್ನು ಬರೆಯಬಹುದಿತ್ತು. ೧೧ ಫೆಬ್ರವರಿ ೧೯೯೦ರಲ್ಲಿ ಅವರಿಗೆ ಬಿಡುಗಡೆಯಾದಾಗ ಅವರಿಗೆ ೭೨ ವರ್ಷ. ಒಟ್ಟು ೨೭ ವರ್ಷ ಜೈಲಿನಲ್ಲಿ ಕಳೆದಿದ್ದರು. ವಿಪರ್ಯಾಸವೆಂದರೆ, ಅಂದಿನ ಯುವ ರಾಜಕೀಯ ಕೈದಿಗಳಿಗೆ ಇಂದು ವಯಸ್ಸಾಗಿದ್ದರೂ ರಾಬೆನ್ ದ್ವೀಪದ ಜೈಲು ಕಥೆಗಳನ್ನು ಹೇಳುವ ಮಾರ್ಗದರ್ಶಿಗಳಾಗಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ನೋಡುವ ಸ್ಥಳಗಳು ಅನೇಕವಿವೆ.

ಭೂಗೋಳಿಕವಾಗಿ ಸುಂದರವಾಗಿರುವ ಕ್ಯಾಂಪ್ಸ್ ಬೇ, ಹೌಟ್ ಬೇ. ಕ್ಲಿಪ್ಟ್‌ನ್ ಬೀಚ್ ಬೋಲ್ಡರ್ ಬೀಚ್‌ನಲ್ಲಿರುವ ಜಾಕ್ ಆಸ್ ಪೆಂಗ್ವಿನ್‌ಗಳು ಫಾಯಿಂಗ್ ಡಚ್ ಮನ್‌ನ ಪ್ಯೂನಿಕ್ಯುಲಾರ್‌ನ ಕೇಬಲ್ ಕಾರ್ ರೈಡ್. ನಂತರ ಮೋಸೆಲ್ ಬೇಗೆ ತೆರಳುವ ದಾರಿಯಲ್ಲಿ ಅರ‍್ಮಾನುಸ್ ಎಂಬ ಜಾಗ, ಆಸ್ಟ್ರಿಚ್‌ಗಳ ಫಾರಂ, ಅನೇಕ ಖಾಸಗಿ ಪ್ರಾಣಿಸಂಗ್ರಹಾಲಯಗಳು, ಡಯಾಸ್ ಮ್ಯೂಸಿಯಂನಲ್ಲಿ ಬಾರ್ಥಲೋಮಿಯಾ ಡಯಾಸ್‌ನ ಹಡಗಿನ ಚಿಕ್ಕ ಪ್ರತಿರೂಪವನ್ನು ಇಟ್ಟಿದ್ದಾರೆ. ನಿಸ್ನಾ ಲಗೂನಿನಲ್ಲಿ ಅದ್ಭುತ ಸೂರ್ಯಾಸ್ತವನ್ನು ನೋಡಬಹುದು.

ಮೋಸೆಲ್ ಬೇಯಿಂದ ಔಟ್ ಶೋರ್ನ್ ಹತ್ತಿರದಲ್ಲಿರುವ ಕಾಂಗೊ ಕೇವ್ಸ್ ಒಂದು ನೈಸರ್ಗಿಕ ಕೌತುಕ. ೨೦ ಮಿಲಿಯನ್ ವರ್ಷಗಳ ಹಿಂದೆ ರೂಪುಗೊಂಡಿದ್ದಿರಬಹುದಾದ ಕಾಂಗೊ ಕೇವ್ಸ್ ನೈಸರ್ಗಿಕವಾಗಿ ಮಳೆ ನೀರಿನಲ್ಲಿ ಭೂಮಿಯ ಒಳಗಿರುವ ಸುಣ್ಣದ ಕಲ್ಲು ಕರಗಿ ೫ ಕಿ.ಮೀ. ಉದ್ದದ ಗುಹೆಯನ್ನು ನಿರ್ಮಿಸಿದೆ. ಒಳಗೆ ಸ್ಟೆಲಗ್ಮೈಟ್‌ನಿಂದ ಅತಿ ಸುಂದರವಾಗಿ ರೂಪುಗೊಂಡಿರುವ ಕ್ಲಿಯೋಪಾತ್ರ ನೀಡಲ್, ಬ್ರೈಡಲ್ ಕಪಲ್ ಹಾಗೂ ಹ್ಯಾಂಗಿಗ್ ಶಾಲ್ ಎಂಬ ಕೃತಿಗಳು ಕೃತಕ ತಿಳಿಬೆಳಕಿನಲ್ಲಿ, ಅತ್ಯಂತ ಆಕರ್ಷಕವಾಗಿವೆ. ದಕ್ಷಿಣ ಆಫ್ರಿಕಾ ನೈಸರ್ಗಿಕವಾಗಿ ಎಷ್ಟು ಆಕರ್ಷಕವೋ ಹಾಗೆಯೇ ಅಲ್ಲಿಯ ಖನಿಜ ಸಂಪತ್ತು ಕೂಡ ವಾಣಿಜ್ಯವಾಗಿ ಇಡೀ ಪ್ರಪಂಚವನ್ನು ಸೂಜಿಗಲ್ಲಿನಂತೆ ಸೆಳೆಯುತ್ತದೆ. ಚಿನ್ನ, ಬೆಳ್ಳಿ, ವಜ್ರ, ಪ್ಲಾಟಿನಂ, ಕಬ್ಬಿಣ, ಮ್ಯಾಂಗನೀಸ್, ಕ್ರೋಮಿಯಂ ಮತ್ತು ಕಲ್ಲಿದ್ದಲು ಮುಂತಾದ ಅನೇಕ ಖನಿಜ ಸಂಪತ್ತಿನ ಇಂದಿನ ಬೆಲೆ ೨.೫ಟ್ರಿಲಿಯನ್ ಡಾಲರ್. ಅಲ್ಲಿನ ಗಣಿಗಾರಿಕೆ ಕೋಟ್ಯಂತರ ಜನರಿಗೆ ಉದ್ಯೋಗ ಸೃಷ್ಟಿಸಬಹುದಾದರೂ ಕೆಲವೇ ಕೆಲವು ಅಂತಾರಾಷ್ಟ್ರೀಯ ಕಂಪೆನಿಗಳ ಕೈಯಲ್ಲಿ ಸಿಲುಕಿ ನಿರುದ್ಯೋಗ ಸಮಸ್ಯೆಯಿಂದ ಬಳಲುತ್ತಿವೆ.

ಇದನ್ನು ಓದಿ: ಭತ್ತ ಖರೀದಿಗೆ ಮುಂದಾಗದ ರಾಜ್ಯ ಸರ್ಕಾರ

ಜೊಹಾನ್ಸ್‌ಬರ್ಗ್ ನಗರ ಒಂದು ವಾಣಿಜ್ಯನಗರ, ಪ್ರವಾಸೋದ್ಯಮಕ್ಕೆ ಅವಕಾಶವಿದೆ. ಅಲ್ಲಿಂದ ೪೧೨ ಕಿ.ಮೀ. ದೂರದಲ್ಲಿದೆ ವಿಶ್ವವಿಖ್ಯಾತ ಕ್ರೂಗರ್ ನ್ಯಾಷನಲ್ ಪಾರ್ಕ್. ಬಹಳ ಹತ್ತಿರದಿಂದಲೇ ವನ್ಯಜೀವಿಗಳನ್ನು ನೋಡಲು, ಅವುಗಳ ಒಡನಾಟ ಅನುಭವಿಸಲು ಅದೃಷ್ಟವಿದ್ದರೆ, ಬೇಟೆಯಾಡುವುದನ್ನು ವೀಕ್ಷಿಸಲು ಲಕ್ಷಾಂತರ ಮಂದಿ ಪ್ರವಾಸಿಗರು ಪ್ರಪಂಚದ ಎಲ್ಲೆಡೆಯಿಂದ ಆಗಮಿಸುತ್ತಾರೆ. ಇಷ್ಟೆಲ್ಲ ಸಿರಿವಂತ ದೇಶವಾಗಿದ್ದರೂ, ಬಿಳಿಯರ ಮುಷ್ಟಿಯಲ್ಲಿ ೫೦೦ ವರ್ಷಗಳಿಂದ ನಲುಗಿ ಸಂಪತ್ತೆನ್ನೆಲ್ಲಾ ಸೂರೆ ಹೊಡೆದ ಅವರಿಂದ ಮತ್ತು ಅವರ ಅತ್ಯಂತ ದಾರುಣ ವರ್ಣಭೇದ ನೀತಿಯಿಂದ ಬಿಡುಗಡೆ ಹೊಂದಿ ಚುನಾವಣೆಯ ಮೂಲಕ ಪ್ರಜಾಪ್ರಭುತ್ವ ಸರ್ಕಾರ ನಿರ್ಮಿಸಿದ್ದು ಏಪ್ರಿಲ್ ೨೭, ೧೯೯೪ರಲ್ಲಿ. ಇಷ್ಟೆಲ್ಲ ದುರಂತವಾಗಿದ್ದರೂ, ನಾವೆಲ್ಲರೂ ಗಾಂಧಿ ನಾಡಿನಿಂದ ಬಂದವರೆಂದು ಬಹಳ ಗೌರವ ನೀಡುತ್ತಿದ್ದ ಮಾರ್ಗದರ್ಶಿ ಬಿಲ್ಲಿಯ ವ್ಯಾಖ್ಯಾನವೇ ಬೇರೆ ಇತ್ತು. ನಮ್ಮದು ಇನ್ನೂ ೩೨ ವರ್ಷಗಳಎಳೆಯ ಪ್ರಜಾಪ್ರಭುತ್ವ. ನಮ್ಮಲ್ಲಿ ಇನ್ನೂ ಸಾವಿರಾರು ವರ್ಷ ಅನುಭವಿ ಸುವ ಖನಿಜ ಸಂಪತ್ತು ಇದೆ, ಎಲ್ಲ ಕಷ್ಟಗಳಿಂದ ಹೊರಬಂದು ನಾವಲ್ಲದಿದ್ದರೂ ನಮ್ಮ ಮಕ್ಕಳು ಅಥವಾ ಮೊಮ್ಮಕ್ಕಳು ಸಂಪೂರ್ಣ ಸ್ವಾತಂತ್ರ್ಯವನ್ನು ಅನುಭವಿಸುತ್ತಾರೆ ಎಂಬ ಆಶಾವಾದ ಅವನ ಮಾತಿನಲ್ಲಿತ್ತು. ಮಾತನಾಡುವಾಗ ಉದುರಿಹೋಗಿದ್ದ ಒಂದು ಹಲ್ಲಿನ ಬದಲು ಬಾಯಲ್ಲಿ ಕುಳಿತ ಚಿನ್ನದ ಹಲ್ಲೊಂದು ಅವನ ಆಶಾಭಾವನೆಯನ್ನು ಪುಷ್ಟೀಕರಿಸುವಂತೆ ಹೊಳೆಯುತ್ತಿತ್ತು.

” ಮೋಸೆಲ್ ಬೇಯಿಂದ ಔಟ್ ಶೋರ್ನ್ ಹತ್ತಿರದಲ್ಲಿರುವ ಕಾಂಗೊ ಕೇವ್ಸ್ ಒಂದು ನೈಸರ್ಗಿಕ ಕೌತುಕ. ೨೦ ಮಿಲಿಯನ್ ವರ್ಷಗಳ ಹಿಂದೆ ರೂಪುಗೊಂಡಿದ್ದಿರಬಹುದಾದ ಕಾಂಗೊ ಕೇವ್ಸ್ ನೈಸರ್ಗಿಕವಾಗಿ ಮಳೆ ನೀರಿನಲ್ಲಿ ಭೂಮಿಯ ಒಳಗಿರುವ ಸುಣ್ಣದ ಕಲ್ಲು ಕರಗಿ ೫ ಕಿ.ಮೀ. ಉದ್ದದ ಗುಹೆಯನ್ನು ನಿರ್ಮಿಸಿದೆ. ಒಳಗೆ ಸ್ಟೆಲಗ್ಮೈಟ್‌ನಿಂದ ಅತಿ ಸುಂದರವಾಗಿ ರೂಪುಗೊಂಡಿರುವ ಕ್ಲಿಯೋಪಾತ್ರ ನೀಡಲ್, ಬ್ರೈಡಲ್ ಕಪಲ್ ಹಾಗೂ ಹ್ಯಾಂಗಿಗ್ ಶಾಲ್ ಎಂಬ ಕೃತಿಗಳು ಕೃತಕ ತಿಳಿಬೆಳಕಿನಲ್ಲಿ, ಅತ್ಯಂತ ಆಕರ್ಷಕವಾಗಿವೆ.”

ದಿನೇಶ್ ಬಸವಾಪಟ್ಟಣ

ಆಂದೋಲನ ಡೆಸ್ಕ್

Share
Published by
ಆಂದೋಲನ ಡೆಸ್ಕ್

Recent Posts

ಮಂಡ್ಯದಲ್ಲಿ ಕೃಷಿ ಮೇಳ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ

ಮಂಡ್ಯ: ಮೂರು ದಿನಗಳ ಕಾಲ ಸಕ್ಕರೆ ನಾಡು ಮಂಡ್ಯದಲ್ಲಿ ನಡೆಯಲಿರುವ ಕೃಷಿ ಮೇಳಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು. ಕೃಷಿ…

3 mins ago

ಚಳಿಗಾಲದ ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ: ಆರ್.‌ಅಶೋಕ್‌

ಬೆಂಗಳೂರು: ಸೋಮವಾರದಿಂದ ಬೆಳಗಾವಿಯ ಸುವರ್ಣ ಸೌಧದಲ್ಲಿ ಆರಂಭವಾಗುವ ಚಳಿಗಾಲದ ಅಧಿವೇಶನದ ವೇಳೆ ಆಡಳಿತರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ…

34 mins ago

ಸಿಎಂ ಬದಲಾವಣೆ ಚರ್ಚೆಗೆ ಸಚಿವ ದಿನೇಶ್‌ ಗುಂಡೂರಾವ್‌ ಪ್ರತಿಕ್ರಿಯೆ

ಮೈಸೂರು: ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಸಚಿವ ದಿನೇಶ್‌ ಗುಂಡೂರಾವ್‌ ಸ್ಪಷ್ಟಪಡಿಸಿದ್ದಾರೆ. ಸಿಎಂ ಬದಲಾವಣೆ ಕುರಿತ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ…

1 hour ago

ಮಂಡ್ಯ| ಬೋನಿಗೆ ಬಿದ್ದ ಚಿರತೆ: ಗ್ರಾಮಸ್ಥರು ನಿರಾಳ

ಮಂಡ್ಯ: ಉಪಟಳ ನೀಡುತ್ತಿದ್ದ ಚಿರತೆ ಬೋನಿಗೆ ಬಿದ್ದಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರಿನ ದೊಡ್ಡಹೊಸಗಾವಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಚೆನ್ನಮ್ಮ…

2 hours ago

ರಾಜ್‌ಘಾಟ್‌ಗೆ ಭೇಟಿ ನೀಡಿ ರಾಷ್ಟ್ರಪತಿ ಮಹಾತ್ಮ ಗಾಂಧೀಜಿ ಸಮಾಧಿಗೆ ನಮನ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್‌

ರಾಜ್‌ಘಾಟ್‌ಗೆ ಭೇಟಿ ನೀಡಿದ ವ್ಲಾಡಿಮಿರ್‌ ಪುಟಿನ್‌, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಸಮಾಧಿಗೆ ಗೌರವ ನಮನ ಸಲ್ಲಿಸಿದರು. ದೆಹಲಿಯಲ್ಲಿ ರಾಷ್ಟ್ರಪತಿ…

2 hours ago

ರಾಜ್ಯದ ಹಲವು ಜಿಲ್ಲೆಗಳಲ್ಲಿ ಒಣಹವೆ: ಕೆಲವೆಡೆ ಮಂಜು ಕವಿದ ವಾತಾವರಣ

ಬೆಂಗಳೂರು: ರಾಜ್ಯದ ಹಲವೆಡೆ ಒಣಹವೆ ಇದ್ದರೆ ಮತ್ತೆ ಕೆಲವೆಡೆ ಮಂಜು, ಮೋಡ ಕವಿದ ವಾತಾವರಣ ಮುಂದುವರೆದಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ…

3 hours ago