ಚಾಮರಾಜನಗರ ತಾಲ್ಲೂಕಿನ ಚನ್ನಪ್ಪನಪುರ ಬಳಿ ಕನ್ನಡ ರಾಜ್ಯೋತ್ಸವದಂದು (ಮಂಗಳವಾರ) ಗುಡ್ಡದ ವೀರಭದ್ರೇಶ್ವರ ರಥೋತ್ಸವ ನಡೆಯುವ ಸಂದರ್ಭ ರಥ ಮುರಿದು ಬಿತ್ತು. ಅದೃಷ್ಟವಶಾತ್ ಭಕ್ತರೆಲ್ಲ ಓಡಿಹೋಗಿ ಅಪಾಯದಿಂದ ಪಾರಾದರೆ, ಅರ್ಚಕರಿಬ್ಬರಿಗೆ ಸಣ್ಣ ಪುಟ್ಟ ಗಾಯಗಳಾದವು. ಸದ್ಯ ದೊಡ್ಡದೊಂದು ದುರಂತ ತಪ್ಪಿತ್ತು. ಕಳೆದ 7 ತಿಂಗಳ ಹಿಂದೆ ಗುಂಡ್ಲುಪೇಟೆ ತಾಲ್ಲೂಕಿನ ಕಂದೇಗಾಲ ಗ್ರಾಮದ ಬಳಿಯ ಪಾರ್ವತಾಂಬ ಬೆಟ್ಟದಲ್ಲಿ ರಥೋತ್ಸವ ನಡೆದ ಸಂದರ್ಭದಲ್ಲಿ ಮುಂಭಾಗದಲ್ಲಿದ್ದವರು ವೇಗವಾಗಿ ರಥ ಎಳೆದಿದ್ದರಿಂದ ನೂಕುನುಗ್ಗಲು ಉಂಟಾಗಿ ನೆಲಕ್ಕೆ ಬಿದ್ದ ನಾಲ್ವರ ಮೇಲೆ ಚಕ್ರ ಹರಿದು ಇಬ್ಬರು ಮೃತಪಟ್ಟಿದ್ದರು. ಮತ್ತಿಬ್ಬರು ಗಾಯಗೊಂಡಿದ್ದರು. ಈ ದುರಂತ ಇನ್ನು ಮಾಸದಿರುವಾಗಲೇ ಚನ್ನಪ್ಪನಪುರದಲ್ಲಿ ರಥ ಮುರಿದು ಬಿದಿದ್ದೆ. ಇಂತಹ ದುರ್ಘಟನೆಗಳಿಂದ ಜಾತ್ರೆ ಮತ್ತು ಉತ್ಸವ ಎಂದರೆ ಭಕ್ತರು ಬೆಚ್ಚಿ ಬೀಳುವ ಪರಿಸ್ಥಿತಿ ಉಂಟಾಗಿದೆ.
ಕೊರೊನಾ ಕಾಡಿದ್ದರಿಂದ 3 ವರ್ಷಗಳ ಕಾಲ ವೀರಭದ್ರೇಶ್ವರ ರಥೋತ್ಸವ ನಡೆದಿರಲಿಲ್ಲ. ಅಮಚವಾಡಿ ಮತ್ತು ಚನ್ನಪ್ಪನಪುರದ ಗ್ರಾಮಸ್ಥರು ಸೇರಿ ರಥೋತ್ಸವ ನಡೆಸುವುದು ಮಾಮೂಲಿ. ಅದರಂತೆ ಈ ವರ್ಷ 2 ಗ್ರಾಮಗಳ ಕೋಮುವಾರು ಮುಖಂಡರು ಸೇರಿ ರಥೋತ್ಸವ ನಡೆಸಲು ಮುಂದಾದರು. ವೀರಭದ್ರೇಶ್ವರ ರಥ ಅಂತಹ ದೊಡ್ಡದೇನಲ್ಲ ಸಣ್ಣದು. ಆದರೆ, ರಥದ ಚಕ್ರಗಳು ಮತ್ತು ಅವುಗಳ ಮಧ್ಯದ ಮರದ ಪಟ್ಟಿ (ದೂರಿ) ನಿರ್ವಹಣೆಯಿಲ್ಲದೆ ಶಿಥಿಲಗೊಂಡಿತ್ತು. ಇದನ್ನು ದೇವಾಲಯದ ಕೋಮುವಾರು ಮುಖಂಡರು ಗಮನಿಸಲಿಲ್ಲ. ಏನೂ ಆಗದು ವೀರಭದ್ರೇಶ್ವರ ದಯೆ ಇದೆ ಎಂಬ ನಂಬಿಕೆಯಿಂದ ರಥವನ್ನು ಕಟ್ಟಿ ಎಳೆದರು ರಥ ದೇವಾಲಯವನ್ನು ಪ್ರದಕ್ಷಿಣೆ ಹಾಕಬೇಕಿತ್ತು. ಸ್ವಲ್ಪ ದೂರ ಸಾಗಿದ ರಥದ ದೂರಿ ಮುರಿದ ಶಬ್ದ ಕೇಳಿ ಬಂದಿದೆ. ನಿಧಾನಕ್ಕೆ ರಥದ ಮೇಲ್ಭಾಗ ಬೀಳುತ್ತಿದ್ದಂತೆ ಭಕ್ತರು ಓಡಿ ಹೋಗಿದ್ದಾರೆ. ರಥ ನೆಲಕ್ಕೆ ಉರುಳುತ್ತಿದ್ದಂತೆ ಅರ್ಚಕರಿಬ್ಬರಿಗೆ ಸಣ್ಣ ಗಾಯಗಳಾದವು. ರಥದ ಮೇಲ್ಭಾಗದಲ್ಲಿದ್ದವೆಲ್ಲಾ ಬಿದಿರ ಅಚ್ಚೆಗಳಾದ್ದರಿಂದ ಅರ್ಚಕರಿಗೂ ಹೆಚ್ಚು ಗಾಯಗಳಾಗಲಿಲ್ಲ. ಅವೆಲ್ಲ ಭಾರವಾದ ಮರದ ಪಟ್ಟಿಗಳಾಗಿದ್ದರೆ ಅರ್ಚಕರ ಸ್ಥಿತಿ ಅಯೋಮಯ ಆಗುತ್ತಿತ್ತು. ಪಾರ್ವತಾಂಬ ಬೆಟ್ಟದಲ್ಲಿ ನಡೆದ ದುರಂತವನ್ನು ನೆನಪಿಸಿಕೊಂಡಾದರೂ ಕೋಮುವಾರು ಮುಖಂಡರು ಎಚ್ಚೆತ್ತುಕೊಳ್ಳಬೇಕು. ಬೆಟ್ಟದ ಮೇಲಿರುವ ದೇವಾಲಯದ ಆವರಣ ಕಿರಿದಾಗಿದೆ. ಸುತ್ತಲಿನ ಹತ್ತಾರು ಗ್ರಾಮಗಳ ಜನರು ಜಾತ್ರೆಗೆ ಬರುತ್ತಾರೆ ಎಂಬುದರ ಅರಿವಿರಬೇಕಿತ್ತು. 3 ವರ್ಷಗಳ ಕಾಲ ಜಾತ್ರೆ ನಡೆದಿಲ್ಲ. ರಥದ ಚಕ್ರಗಳು ಸುಸ್ಥಿತಿಯಲ್ಲಿವೆಯೇ ಎಂಬುದನ್ನು ಗ್ರಾಮಸ್ಥರಾಗಲಿ, ಮುಜರಾಯಿ ಇಲಾಖೆ ಅಧಿಕಾರಿಗಳಾಗಲಿ ಪರಿಶೀಲಿಸಲಿಲ್ಲ ಪರಿಣಾಮ ಅವಘಡವೊಂದು ಸಂಭವಿಸಿದೆ.
ಮುಜರಾಯಿ ಇಲಾಖೆಗೆ ಸೇರಿದ ಸಿ.ದರ್ಜೆಯ ಈ ದೇವಾಲಯವನ್ನು ಮೈಸೂರಿನ ಅರಸರಾಗಿದ್ದ ಮುಮ್ಮಡಿ ಕೃಷ್ಣರಾಜ ಒಡೆಯರ್ ದೊಡ್ಡದಾಗಿ ನಿರ್ಮಿಸಿದ್ದರು. ಹಿಂದೆಲ್ಲ ಈ ಪ್ರಾಂತ್ಯ ತಮಿಳುನಾಡಿನ ದೊರೆಗಳಾದ ಚೋಳರ ಆಳ್ವಿಕೆಗೆ ಒಳಪಟ್ಟಿತ್ತು. ಆಗ ಈ ವೀರಭದ್ರೇಶ್ವರ, ಹರದನಹಳ್ಳಿಯಲ್ಲಿ ದಿವ್ಯಲಿಂಗೇಶ್ವರ, ನರಸಮಂಗಲದಲ್ಲಿ ರಾಮಲಿಂಗೇಶ್ವರ ದೇವಾಲಯಗಳು ನಿರ್ಮಾಣವಾಗಿವೆ ಎಂಬುದು ಇತಿಹಾಸದಲ್ಲಿ ದಾಖಲಾಗಿದೆ.
ಐತಿಹಾಸಿಕವಾದ ಈ ವೀರಭದ್ರೇಶ್ವರ ದೇವಾಲಯದ ಗೋಪುರ ಮತ್ತು ಛತ್ರಗಳು ಶಿಥಿಲಗೊಂಡಿದೆ. ಆವರಣ ಸಮತಟ್ಟಾಗಿಲ್ಲ. ಉತ್ತಮ ರಸ್ತೆಯಿಲ್ಲ. ಸಮೀಪವೇ ನಿರ್ಮಿಸಿರುವ ಯಾತ್ರಿ ನಿವಾಸ್ ಉದ್ಘಾಟನೆಯಾಗದೆ ನಿರುಪಯುಕ್ತವಾಗಿದೆ. ಇಷ್ಟೆಲ್ಲ ಸಮಸ್ಯೆಗಳಿದ್ದರೂ ಸಂಬಂಧಪಟ್ಟ ಶಾಸಕರಾಗಲಿ, ಸಂಸದರಾಗಲಿ ಇತ್ತ ಗಮನಹರಿಸಿಲ್ಲ. ಇತ್ತೀಚೆಗೆ ಬಿಳಿಗಿರಿರಂಗನ ಬೆಟ್ಟದಲ್ಲಿರುವ ರಂಗನಾಥಸ್ವಾಮಿ, ಚಾಮರಾಜನಗರದಲ್ಲಿರುವ ಚಾಮರಾಜೇಶ್ವರ ದೇವಾಲಯಗಳನ್ನು ಕೋಟ್ಯಂತರ ರೂ.ವೆಚ್ಚದಲ್ಲಿ ನವೀಕರಣ ಮಾಡಿಸಿ ಹೊಸ ರಥಗಳನ್ನು ನಿರ್ಮಿಸಲಾಯಿತು. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಇಂತಹ ದೊಡ್ಡ ದೇವಾಲಯಗಳತ್ತ ಗಮನಹರಿಸುತ್ತಾರೆ. ಆದರೆ, ವೀರಭದ್ರೇಶ್ವರ ದೇವಾಲಯಗಳತ್ತ ಮಾತ್ರ ತಿರುಗಿಯೂ ನೋಡುವುದಿಲ್ಲ ಎಂಬುದು ಭಕ್ತರ ಬೇಸರ.
ಕೇವಲ ಪಾರ್ವತಾಂಬ ರಥದ ದುರಂತವಲ್ಲ. ಕೆಲವು ವರ್ಷಗಳ ಹಿಂದೆ ನಂಜನಗೂಡಿನಲ್ಲಿ ಶ್ರೀಕಂಠೇಶ್ವರ ರಥೋತ್ಸವದ ವೇಳೆ ಚಕ್ರಕ್ಕೆ ಸಿಲುಕಿ ಭಕ್ತರೊಬ್ಬರ ಕಾಲುಗಳು ತುಂಡಾಗಿದ್ದವು. ದೇಶದ ಹಲವು ಕಡೆ ಜಾತ್ರೆ, ಕುಂಭಮೇಳಗಳ ಸಂದರ್ಭಗಳಲ್ಲಿ ಕಾಲ್ತುಳಿತಕ್ಕೆ ಸಿಲುಕಿ ಹಲವರು ಮೃತಪಟ್ಟ ಪ್ರಕರಣಗಳು ಆಗಾಗ ವರದಿಯಾಗುತ್ತಲೇ ಇರುತ್ತವೆ. ಸಹಸ್ರಾರು ಜನರು ಸೇರುವ ಸ್ಥಳದಲ್ಲಿ ಸಂಚಾರ ದಟ್ಟಣೆ, ತಳ್ಳಾಟ ನೂಕಾಟ, ಸಣ್ಣ ಪುಟ್ಟ ಗುಂಪು ಘರ್ಷಣೆ ನಡೆಯುತ್ತಿರುತ್ತವೆ. ದೇವರ ದರ್ಶನ, ಪೂಜೆ ಪುರಸ್ಕಾರ, ಹರಕೆ ತೀರಿಸುವುದು, ಮನಶಾಂತಿ ಬಯಸಿ ಬರುವ ಭಕ್ತರಿಗೆ ಸುರಕ್ಷತೆ ಮುಖ್ಯ. ಇದೆಲ್ಲದರ ಅರಿವು ಜಾತ್ರೆಯ ಜವಾಬ್ದಾರಿ ಹೊತ್ತವರಲ್ಲಿ ಇರಬೇಕು. ಪಾರ್ವತಾಂಬ ರಥೋತ್ಸವದಲ್ಲಿ ಮೃತಪಟ್ಟವರು ಸಾಮಾನ್ಯ ವರ್ಗದ ಕುಟುಂಬಗಳು ಇವುಗಳ ಆಧಾರ ಸ್ತಂಭವಾಗಿದ್ದವರೇ ಯಾರದೋ ನಿರ್ಲಕ್ಷ್ಯದಿಂದ ಮೃತಪಟ್ಟಾಗ ಅವರ ಮನೆಗಳು ಬೀದಿ ಪಾಲಾಗುತ್ತವೆ. ಸರ್ಕಾರ ಒಂದಷ್ಟು ಪರಿಹಾರ ನೀಡಿ ಸುಮ್ಮನಾಗಬಹುದು. ಆದರೆ, ಮನೆಯ ಒಡೆಯ ಮರಳಿ ಬರುವುದಿಲ್ಲ. ನೆಮ್ಮದಿ ಸಿಗುವುದಿಲ್ಲ. ಇದೆಲ್ಲವನ್ನು ಜಾತ್ರೆ ನಡೆಸುವ ಮಂದಿ ಆಲೋಚಿಸಬೇಕು. ಮುನ್ನೆಚ್ಚರಿಕೆ ಕ್ರಮ ವಹಿಸಿ ರಥೋತ್ಸವಗಳನ್ನು ಯಶಸ್ವಿಯಾಗಿ ನಡೆಸಬೇಕಿದೆ.
ಮಹಾದೇಶ್ ಎಂ ಗೌಡ ಹನೂರು: ಕೆಎಸ್‌ಆರ್‌ಟಿಸಿ ಬಸ್ ಹಾಗೂ ದ್ವಿಚಕ್ರ ವಾಹನ ನಡುವೆ ಅಪಘಾತ ಸಂಭವಿಸಿ ದ್ವಿಚಕ್ರ ವಾಹನ ಸವಾರರಿಬ್ಬರೂ…
ಮಹಾದೇಶ್ ಎಂ ಗೌಡ ಹನೂರು: ದ್ವಿಚಕ್ರ ವಾಹನ ಸವಾರ ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ತೀವ್ರ ಗಾಯಗೊಂಡು ಮೃತಪಟ್ಟಿರುವ ಘಟನೆ…
ಮೈಸೂರು: ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್…
ಮಹಾದೇಶ್ ಎಂ ಗೌಡ ಹನೂರು: ಅಂತರ ರಾಜ್ಯ ನೆರೆಯ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಾಮಾಪುರ ರಸ್ತೆಯಲ್ಲಿ ನಿತ್ಯ ಗಜರಾಜ ಎಂಟ್ರಿ…
ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಚಿತಾವಣೆಯಿಂದ ಬಳ್ಳಾರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಹೆಣ ಬಿದ್ದಿದೆ ಎಂದು ಹೇಳಿಕೆ…
ಬೆಂಗಳೂರು: ನಾಯಕತ್ವ ಬದಲಾವಣೆ ಚರ್ಚೆಗೆ ಹೈಕಮಾಂಡ್ ಸ್ಪಷ್ಟನೆ ಕೊಡಬೇಕು ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ಒತ್ತಾಯಿಸಿದ್ದಾರೆ. ಜನವರಿ.16ಕ್ಕೆ ಸಿಹಿಸುದ್ದಿ ಬರಲಿದೆ…