ಎಡಿಟೋರಿಯಲ್

ಸಂಪಾದಕೀಯ : ಆದಿವಾಸಿ ಗಿರಿಜನರ ದನಿ ಹತ್ತಿಕ್ಕುವ ಅರಣ್ಯ ಇಲಾಖೆಯ ದಮನಕಾರಿ ನೀತಿ ಅಕ್ಷಮ್ಯ

ಮಾನವ ಮತ್ತು ವನ್ಯಜೀವಿಗಳ ನಡುವಿನ ಸಂಘರ್ಷ ದಿನೇ ದಿನೇ ಹೆಚ್ಚುತ್ತಿರುವಂತೆಯೇ, ಆದಿವಾಸಿ ಗಿರಿಜನರು ಮತ್ತು ಅರಣ್ಯ ಇಲಾಖೆ ನಡುವಿನ ಸಂಘರ್ಷ ಕೂಡ ಅತಿರೇಕಕ್ಕೆ ಹೋಗುತ್ತಿದೆ. ಅರಣ್ಯ ಮತ್ತು ವನ್ಯಜೀವಿಗಳನ್ನು ಕಾಯಬೇಕಾದ ಅರಣ್ಯ ಇಲಾಖೆ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆಯ ಸಂಭ್ರಮದ ಹೊತ್ತಿನಲ್ಲೂ ಬ್ರಿಟೀಷರ ಕಾಲದ ಕಾಯ್ದೆಗಳನ್ನು ಮುಂದಿಟ್ಟು ಕೊಂಡು ಅರಣ್ಯವನ್ನೇ ಅವಲಂಬಿಸಿ ಬದುಕುತ್ತಿರುವ ಆದಿವಾಸಿ ಗಿರಿಜನರ ಮೇಲೆ ದೌರ್ಜನ್ಯ ಎಸಗುತ್ತಿರುವುದು ಖಂಡನೀಯ.

೧೯೭೨ರ ವನ್ಯಜೀವಿ ಸಂರಕ್ಷಣಾ ಕಾಯ್ದೆ ಜಾರಿಯಿಂದ ಅರಣ್ಯ ಇಲಾಖೆ ಈಗಾಗಲೇ ಬಂಡೀಪುರ-ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಿಂದ ಪುನರ್ವಸತಿ ಹೆಸರಲ್ಲಿ ನೂರಾರು ಗಿರಿಜನ ಕುಟುಂಬಗಳನ್ನು ಅರಣ್ಯದಿಂದ ಹೊರಹಾಕಿ ಮೂಲಭೂತ ಸೌಕರ್ಯ ಕಲ್ಪಿಸಿರುವುದಾಗಿ ಹೇಳುವ ಅರಣ್ಯ ಇಲಾಖೆ, ಅದೇ ಹೊತ್ತಿನಲ್ಲಿ ಗಿರಿಜನರ ಸಂವಿಧಾನ ಬದ್ಧ ಹಕ್ಕುಗಳ ದಮನಕಾರಿ ನೀತಿ ಅನುಸರಿಸುತ್ತಿದೆ. ಕಾಡಿನಿಂದ ಹೊರಹಾಕಿ ಪುನರ್ವಸತಿ ಕಲ್ಪಿಸುವುದು ಗಿರಿಜನರಿಗೆ ಮರು ಜೀವ ಕೊಟ್ಟಂತೆ. ಇದು ಅರಣ್ಯ ಇಲಾಖೆಗೂ ಸವಾಲಿನ ಕೆಲಸವೇ. ಹಾಗೆಂದು ಅದು ಬೇರೆ ಇಲಾಖೆಗಳ ಕಡೆಗೆ ಬೆರಳು ತೋರಿ ಕೈತೊಳೆದು ಕೊಳ್ಳುವಂತಿಲ್ಲ.

ಸರ್ಕಾರದ ಮೂಲಭೂತ ಸೌಲಭ್ಯಗಳನ್ನು ಪಡೆಯಲು ಆದಿವಾಸಿಗಳು ಇಂದಿಗೂ ಕಾನೂನು ಮತ್ತು ಸಂವಿಧಾನ ಬದ್ಧ ಹೋರಾಟಗಳನ್ನು ಅಹಿಂಸಾತ್ಮಕವಾಗಿ ಮಾಡುತ್ತಲೇ ಬರುತ್ತಿದ್ದಾರೆ. ಅರಣ್ಯ ಹಕ್ಕು, ಭೂಮಿ ಹಕ್ಕು, ಶೀಕ್ಷಣ, ಆರೋಗ್ಯ, ಸಾಮಾಜಿಕ ಹಾಗೂ ರಾಜಕೀಯ ಹಕ್ಕುಗಳಿಗಾಗಿ ಇಂದಿಗೂ ಅವರ ಹೋರಾಟ ಮುಂದುವರೆದಿದೆ. ಆದಿವಾಸಿಗಳ ಅರಣ್ಯ ಭೂಮಿ ಹಕ್ಕು, ಗಿರಿಜನ ಹಾಡಿಗಳನ್ನು ಅನುಸೂಚಿತ ಪ್ರದೇಶಗಳೆಂದು ಘೋಷಣೆ ಮಾಡಿ, ಆದಿವಾಸಿ ಪಂಚಾಯತ್ ಕಾಯ್ದೆ ಜಾರಿ ಮತ್ತು ಕರ್ನಾಟಕ ಹೈಕೋರ್ಟ್‌ನ ಪುನರ್ವಸತಿ ಕುರಿತ ತೀರ್ಪು ಅನುಷ್ಠಾನಗೊಳಿಸಬೇಕಿದೆ.

ಬುಡಕಟ್ಟು ಅರಣ್ಯ ಹಕ್ಕಿನ ಮಾನ್ಯತಾ ಕಾಯ್ದೆ ೨೦೦೬ರ ಅನುಷ್ಠಾನ, ಹೈಕೋರ್ಟ್ ತೀರ್ಪಿನಂತೆ ಪುನರ್ವಸತಿ ನೀಡದೆ ಕಾಡಿನಿಂದ ಮೊದಲೇ ಹೊರಹಾಕಿರುವ ಗಿರಿಜನರಿಗೆ ಸಮಪರ್ಕ ಪುನರ್ವಸತಿ ಕಲ್ಪಿಸಬೇಕಿದೆ. ಗಿರಿಜನ ಹಾಡಿಗಳನ್ನು ಅನುಸೂಚಿತ ಪ್ರದೇಶಗಳೆಂದು ಘೋಷಣೆ ಮಾಡಿ ಬುಡಕಟ್ಟು ಪಂಚಾಯತ್ ಕಾಯ್ದೆ ಅನುಷ್ಠಾನವೂ ಆಗಬೇಕಿದೆ. ಗಿರಿಜನರಿಗೆ ರಾಜಕೀಯ ಅಧಿಕಾರ ಸಿಗಬೇಕಾದರೆ ಪರಿಶಿಷ್ಟ ವರ್ಗಗಳ ಮೀಸಲಾತಿಯಲ್ಲಿ ಆದಿವಾಸಿಗಳಿಗೆ ಒಳ ಮೀಸಲಾತಿ ಜಾರಿಯಾಗಬೇಕು. ಪರಿಶಿಷ್ಟ ಪಂಗಡದ ಮಿಸಲಾತಿಯಲ್ಲಿ ಬರುವ ಎಲ್ಲಾ ೧೫ ವಿಧಾನಸಭಾ ಸದಸ್ಯ ಸ್ಥಾನಗಳೂ ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿರುವ ಒಂದೇ ಸಮುದಾಯಕ್ಕೆ ಲಭ್ಯವಾಗುತ್ತಿವೆ. ಪರಿಶಿಷ್ಟ ಪಂಗಡ ಮೀಸಲಾತಿ ನಿಗದಿಪಡಿಸಿರುವ ವಿಧಾನಸಭಾ ಕ್ಷೇತ್ರಗಳೂ ಕೂಡ ಹೆಚ್.ಡಿ.ಕೋಟೆ ಹೊರತುಪಡಿಸಿದರೆ ಮಿಕ್ಕೆಲ್ಲ ಕ್ಷೇತ್ರಗಳೂ ಆದಿವಾಸಿಗಳು ವಾಸಿಸುವ ಸ್ಥಳಗಳಿಂದ ದೂರವಿದ್ದು, ಬಯಲುಸೀಮೆ ಜಿಲ್ಲೆಗಳಿಗೆ ಸೇರಿವೆ. ಇದರಿಂದಾಗಿ ಮೂಲ ಬುಡಕಟ್ಟುಗಳಿಗೆ ವಿಧಾನಸಭೆಯಲ್ಲಿ ತಮ್ಮನ್ನು ಪ್ರತಿನಿಧಿಸಿಕೊಳ್ಳಲು ಅವಕಾಶವಿಲ್ಲ. ಜೊತೆಗೆ ಸಂವಿಧಾನ ನೀಡಿರುವ ಅನುಸೂಚಿತ ಪ್ರದೇಶಗಳ ರಕ್ಷಕವಚವು ಇಲ್ಲವಾಗಿದೆ.

ಗ್ರಾಮಸಭೆ ಅಧಿಕಾರವನ್ನೇ ಮೊಟಕುಗೊಳಿಸುತ್ತಿರುವ ಅರಣ್ಯ ಇಲಾಖೆ ಪಿರಿಯಾಪಟ್ಟಣ ತಾಲೂಕಿನ ಸಾಮಾಜಿಕ ಅರಣ್ಯದ ಕೆಲ ಭಾಗಗಳಲ್ಲಿ ಬಿಟ್ಟರೆ, ನಾಗರಹೊಳೆ-ಬಂಡೀಪುರ ಹುಲಿ ಸಂರಕ್ಷಿತ ಅರಣ್ಯದೊಳಗೆ ಆದಿವಾಸಿಗಳು ಕಿರು ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸಲೂ ಅವಕಾಶ ನೀಡುತ್ತಿಲ್ಲ. ಅರಣ್ಯ ಇಲಾಖೆಯ ಈ ನಡೆಯ ಬಗ್ಗೆ ಕಂದಾಯ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳು ಮೌನವಹಿಸಿರುವುದು ದೌರ್ಜನ್ಯ ಹೆಚ್ಚಳಕ್ಕೆ ಕಾರಣವಾಗಿದೆ.

ಅರಣ್ಯ ಇಲಾಖೆ ದೌರ್ಜನ್ಯದಿಂದ ಹೆಚ್.ಡಿ.ಕೋಟೆ ತಾಲೂಕಿನಲ್ಲಿ ಕರಿಯಪ್ಪ ಎಂಬ ಗಿರಿಜನ ವ್ಯಕ್ತಿ ಮೃತಪಟ್ಟ ಪ್ರಕರಣ ಸಂಬಂಧ ಆರ್‌ಎಫ್‌ಒ ಸೇರಿದಂತೆ ೧೭ ಮಂದಿಯ ವಿರುದ್ಧ ಮೊಕದ್ದಮೆ ದಾಖಲಾಗಿದ್ದರೂ ಈವರೆಗೆ ಒಬ್ಬರನ್ನೂ ಬಂಧಿಸಿಲ್ಲ. ಜತೆಗೆ ಅರಣ್ಯ ಇಲಾಖೆಯೂ ಅವರ ವಿರುದ್ಧ ಯಾವುದೇ ಕ್ರಮಕೈಗೊಂಡಿಲ್ಲ.

ಕಾನೂನು ರಿತ್ಯ ಮತ್ತು ಸಂವಿಧಾನ ಬದ್ಧವಾಗಿ ತಮಗೆ ದೊರೆಯಬೇಕಾದ ಹಕ್ಕುಗಳನ್ನು ಪಡೆಯಲು ಅಲ್ಲಲ್ಲಿ ಹೋರಾಟ ನಡೆಯುತ್ತಿದ್ದರೂ ಸಂಘಟಿತ ಹೋರಾಟ ಕಂಡುಬರುತ್ತಿಲ್ಲ. ಇದಕ್ಕೆ ಗಿರಿಜನರಲ್ಲಿನ ಶಿಕ್ಷಣದ ಕೊರತೆಯೂ ಮುಖ್ಯ ಕಾರಣವಾಗಿದೆ. ತಲೆ ತಲಾಂತರಗಳಿಂದ ಅರಣ್ಯವಾಸಿಗಳಾಗಿ ತಮ್ಮದೇ ಆದ ರೀತಿಯಲ್ಲಿ ಬದುಕುಕಟ್ಟಿಕೊಂಡು ಸಮಾಜದ ಮುಖ್ಯವಾಹಿನಿಯಿಂದ ದೂರವೇ ಉಳಿದಿದ್ದ ಆದಿವಾಸಿ ಸಮುದಾಯಗಳ ಮಧ್ಯೆ ಅನೇಕ ಸರ್ಕಾರೇತರ ಸಂಸ್ಥೆಗಳು ಇಂದಿನ ತಲೆಮಾರಿನ ಗಿರಿಜನರಿಗೆ ಶಿಕ್ಷಣ ನೀಡುವ ಮೂಲಕ ಅವರನ್ನು ಜಾಗೃತಗೊಳಿಸುತ್ತಿವೆ. ಇದರಿಂದಾಗಿ ಸಂವಿಧಾನ ಬದ್ಧ ಮೂಲಭೂತ ಹಕ್ಕುಗಳನ್ನು ತಮಗೂ ಕೊಡುವಂತೆ ಗಿರಿಜನರು ಎತ್ತುತ್ತಿರುವ ಧ್ವನಿಯನ್ನು ಹತ್ತಿಕ್ಕಲು ಅರಣ್ಯ ಇಲಾಖೆ ಇನ್ನಿಲ್ಲದ ಪ್ರಯತ್ನ ಮಾಡುತ್ತಿರುವುದು ಅಕ್ಷಮ್ಯ. ಇಂದಿನ ತಲೆಮಾರಿನ ಗಿರಿಜನರು ಶಿಕ್ಷಣ ಪಡೆಯಲು ಮುಂದೆ ಬರುತ್ತಿದ್ದಾರಾದರೂ ಹೈಸ್ಕೂಲ್ ನಂತರದ ಶಿಕ್ಷಣ ಪಡೆಯುತ್ತಿರುವವರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ. ಹೀಗಾಗಿ ಆದಿವಾಸಿ ಯುವ ಜನರು ಉನ್ನತ ಶಿಕ್ಷಣ ಪಡೆಯುವತ್ತ ಹೆಚ್ಚಿನ ಗಮನಹರಿಸಬೇಕಿದೆ. ಆಗ ಮಾತ್ರ ತಮ್ಮ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ನಿರೀಕ್ಷಿತ ಮಟ್ಟದಲ್ಲಿ ಪ್ರತಿರೋಧ ತೋರಿ, ಕಾನೂನು ಬದ್ಧ ಹೋರಾಟದ ಮೂಲಕ ಸಂವಿಧಾನ ಬದ್ಧ ಹಕ್ಕುಗಳನ್ನು ಪಡೆದುಕೊಳ್ಳಲು ಸಾಧ್ಯ.

andolanait

Share
Published by
andolanait

Recent Posts

ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…

7 hours ago

ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ – ಡಾ. ಪಿ ಶಿವರಾಜ್

ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…

7 hours ago

ನಗರದ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ: ಜಿ ಟಿ ದೇವೇಗೌಡ

ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…

8 hours ago

ಹನೂರು: ಗುಂಡಿಮಯವಾದ ರಸ್ತೆ, ಸಾಮಾಜಿಕ ಜಾಲತಾಣ ಮೂಲಕ ಯುವಕ ವ್ಯಂಗ್ಯ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…

8 hours ago

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

10 hours ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

10 hours ago