ಎಡಿಟೋರಿಯಲ್

ಸಂಪಾದಕೀಯ : ರೈಲು ಸುರಂಗ ಮಾರ್ಗ ಪ್ರಸ್ತಾಪ ಕೈಬಿಟ್ಟು ಹಳೇಯೋಜನೆಗೆ ಚಾಲನೆ ನೀಡಲಿ

ಕನಕಪುರ- ಮಳವಳ್ಳಿ, ಕೊಳ್ಳೇಗಾಲ- ಯಳಂದೂರು- ಈರೋಡ್ ಮೂಲಕ ಸೇಲಂಗೆ ಸಂಪರ್ಕ ಕಲ್ಪಿಸುವ ಹೊಸ ಯೋಜನೆಗೆ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದೆ. ಈ ಸಂಬಂಧ ಸರ್ವೆ ಕಾರ್ಯ ಆರಂಭವಾಗಿದೆ. ಚಾಮರಾಜನಗರ ಜಿಲ್ಲೆಯ ಯಳಂದೂರು ಮತ್ತು ತಮಿಳುನಾಡಿನ ಈರೋಡ್ ನಡುವೆ ಸಂರಕ್ಷಿತಾರಣ್ಯವಿದೆ. ಈ ಅರಣ್ಯದೊಳಗೆ ನೆಲದಡಿ ೯ ಕಿ.ಮೀ. ಸುರಂಗ ಮಾರ್ಗ ನಿರ್ಮಿಸಿ ರೈಲು ಓಡಿಸಲು ಉದ್ದೇಶಿಸಲಾಗಿದೆ. ಇದರಿಂದ ಅರಣ್ಯಕ್ಕೆ ಯಾವುದೇ ಧಕ್ಕೆ ಆಗುವುದಿಲ್ಲ ಎಂದು ವಸತಿ, ಮೂಲ ಸೌಕರ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಕಳೆದ ವಾರ ಬೆಂಗಳೂರಿನಲ್ಲಿ ಹೇಳಿಕೆ ನೀಡಿ ಸಂಚಲನ ಮೂಡಿಸಿದರು. ಪರಿಸರ ಪ್ರೇಮಿಗಳು, ಅರಣ್ಯಾಧಿಕಾರಿಗಳ ಹುಬ್ಬೇರುವಂತೆ ಮಾಡಿದರು.

ಇದು ಯಾವುದು ಹೊಸ ಯೋಜನೆ ಎಂದು ಜಿಲ್ಲೆಯ ಜನರು ಸಹ ಅಚ್ಚರಿಪಟ್ಟರು. ಹಾಗಾದರೆ ಬೆಂಗಳೂರು- ಸತ್ಯಮಂಗಲ ರೈಲು ಯೋಜನೆ (ಬೆಂಗಳೂರು- ಚಾಮರಾಜನಗರ ರೈಲು ಪರಿಷ್ಕೃತ ಯೋಜನೆ) ಮತ್ತು ಚಾಮರಾಜನಗರ- ಮೆಟ್ಟುಪಾಳ್ಯಂ ರೈಲು ಯೋಜನೆಗಳು ಎಲ್ಲಿ ಹೋದವು ಎಂಬ ಪ್ರಶ್ನೆಗಳು ಕೇಳಿಬಂದವು. ರಾಜ್ಯದ ದಕ್ಷಿಣ ಭಾಗದ ಕೊನೆಯ ರೈಲು ನಿಲ್ದಾಣಗಳಲ್ಲಿ ಚಾಮರಾಜನಗರವೂ ಒಂದು. ಇಲ್ಲಿಂದ ತಮಿಳುನಾಡಿನ ಮೆಟ್ಟುಪಾಳ್ಯಂಗೆ ಮತ್ತು ಸತ್ಯಮಂಗಲಕ್ಕೆ ರೈಲು ಯೋಜನೆ ರೂಪಿಸಬೇಕೆಂಬ ಕೂಗು ಮೂರು ದಶಕಗಳಿಂದಲೂ ಕೇಳಿಬರುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿರ್ಲಕ್ಷ್ಯ ಧೋರಣೆಯಿಂದ ಈ ಎರಡು ಯೋಜನೆಗಳು ಮೂಲೆಗುಂಪಾಗುತ್ತಿವೆ. ಈ ನಡುವೆ ಸೋಮಣ್ಣ ಅವರು ಕನಕಪುರ- ಮಳವಳ್ಳಿ, ಕೊಳ್ಳೇಗಾಲ- ಯಳಂದೂರು- ಈರೋಡ್ ಮೂಲಕ ಸೇಲಂಗೆ ಸಂಪರ್ಕ ಕಲ್ಪಿಸುವ ಹೊಸ ಯೋಜನೆಗೆ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದೆ ಎಂದು ಹೇಳಿಕೆ ನೀಡಿದ್ದಾರೆ. ಇದರ ಬದಲಿಗೆ ನನೆಗುದಿಗೆ ಬಿದ್ದಿರುವ ಯೋಜನೆಗಳಿಗೆ ಮರುಜೀವ ನೀಡಬಹುದಿತ್ತು ಎಂಬ ಮಾತುಗಳೂ ಕೇಳಿಬಂದಿವೆ.
ಚಾಮರಾಜನಗರ- ಮೆಟ್ಟುಪಾಳ್ಯಂ ರೈಲು ಯೋಜನೆ ಏಕೆ ಜಾರಿಯಾಗಲಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಚಾಮರಾಜನಗರದಿಂದ ಮೆಟ್ಟು ಪಾಳ್ಯಂಗೆ ರೈಲು ಸಂಚರಿಸಬೇಕಾದರೆ ಬಿಳಿಗಿರಿರಂಗನಬೆಟ್ಟ, ಸತ್ಯಮಂಗಲ ಹುಲಿ ಸಂರಕ್ಷಿತಾರಣ್ಯದೊಳಗೆ ಹೋಗಬೇಕಿತ್ತು. ಹಾಗಾಗಿ ಪರಿಸರ ಸಚಿವಾಲಯ ಈ ಯೋಜನೆಗೆ ಅನುಮೋದನೆ ನೀಡಲಿಲ್ಲ, ಇದು ಕಸದಬುಟ್ಟಿ ಸೇರಿತು. ಇನ್ನು ಬೆಂಗಳೂರು- ಸತ್ಯಮಂಗಲ ರೈಲು ಯೋಜನೆಯನ್ನು ಕೇಂದ್ರ ಸರ್ಕಾರವು ೧೯೯೬ರಲ್ಲಿ ಘೋಷಿಸಿ ೨೦೦೨ರಲ್ಲಿ ಪೂರ್ಣಗೊಳಿಸಲು ಉದ್ದೇಶಿಸಿತ್ತು. ಈ ರೈಲು ಮಾರ್ಗವು ಸತ್ಯಮಂಗಲ ಹುಲಿ ಸಂರಕ್ಷಿತಾರಣ್ಯ ಮೂಲಕ ಹಾದು ಹೋಗಬೇಕಿದ್ದ ಕಾರಣ ತಮಿಳುನಾಡು ಸರ್ಕಾರ ಒಪ್ಪಿಗೆ ನೀಡಲಿಲ್ಲ. ಬದಲಿಗೆ ಪರಿಷ್ಕೃತ ಬೆಂಗಳೂರು- ಹೆಜ್ಜಾಲೆ- ಕನಕಪುರ- ಮಳವಳ್ಳಿ- ಕೊಳ್ಳೇಗಾಲ- ಚಾಮರಾಜನಗರ ರೈಲು ಯೋಜನೆ ರೂಪಿಸಿ ಅಂದಾಜು ವೆಚ್ಚ ೧೩೮೩ ಕೋಟಿ ರೂ. ಮೀಸಲಿಡಲಾಗಿದೆ. ಈ ಯೋಜನೆಗೆ ಅಗತ್ಯವಿರುವ ಭೂಸ್ವಾಧೀನ ಮಾಡಿ ಯೋಜನಾ ಮೊತ್ತದ ಶೇ.೫೦ರಷ್ಟನ್ನು ಭರಿಸಲು ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರ ಒಪ್ಪಿಕೊಂಡಿತ್ತು. ಯೋಜ ನೆಗಾಗಿ ೧೭೩೩ ಎಕರೆ ಜಾಗವನ್ನು ಭೂ ಸ್ವಾಧೀನ ಮಾಡಬೇಕಿತ್ತು. ಆದರೆ, ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಮನಸ್ಸು ಮಾಡಲಿಲ್ಲ. ನಂತರ ಮುಖ್ಯಮಂತ್ರಿಗಳಾಗಿದ್ದ ಎಚ್.ಡಿ.ಕುಮಾರಸ್ವಾಮಿ, ಯಡಿಯೂರಪ್ಪ ಅವರು ಸಹ ಇಚ್ಛಾಶಕ್ತಿ ತೋರಲಿಲ್ಲ ಹಾಗಾಗಿ ಯೋಜನೆಯು ಒಂದು ಹೆಜ್ಜೆಯೂ ಮುಂದಕ್ಕೆ ಹೋಗಲಿಲ್ಲ ಭೂ ಸ್ವಾಧೀನ ಪ್ರಕ್ರಿಯೆ ನಡೆದಿಲ್ಲ. ನಂತರ ಕೇಂದ್ರದಲ್ಲಿ ಅಧಿಕಾರ ವಹಿಸಿಕೊಂಡ ಬಿಜೆಪಿ ಸರ್ಕಾರ ಸುಮ್ಮನಾಯಿತು.
ರಾಜ್ಯದಲ್ಲಿ ಅಧಿಕಾರ ನಡೆಸಿದ ಜಾ.ದಳ- ಕಾಂಗ್ರೆಸ್ ಮೈತ್ರಿ ಸರ್ಕಾರ, ಬಿಜೆಪಿ ಸರ್ಕಾರ ಈ ರೈಲು ಯೋಜನೆ ಬಗ್ಗೆ ಯಾವುದೇ ಚಕಾರ ಎತ್ತಲಿಲ್ಲ. ಈಗ ಕನಕಪುರ- ಮಳವಳ್ಳಿ, ಕೊಳ್ಳೇಗಾಲ- ಯಳಂದೂರು- ಈರೋಡ್ ಮೂಲಕ ಸೇಲಂಗೆ ಸಂಪರ್ಕ ಕಲ್ಪಿಸುವ ಹೊಸ ಯೋಜನೆಯನ್ನು ತೇಲಿ ಬಿಡಲಾಗಿದೆ. ಬಿಳಿಗಿರಿರಂಗನಬೆಟ್ಟ ಹುಲಿ ಸಂರಕ್ಷಿತ ಪ್ರದೇಶವು ವೈವಿಧ್ಯಮಯ ಕಾಡುಗಳು, ಬುಡಕಟ್ಟು ಗಿರಿಜನರನ್ನು ತನ್ನ ಒಡಲಿನಲ್ಲಿ ಇಟ್ಟುಕೊಂಡಿದೆ. ಇಲ್ಲಿ ೯ ಕಿ.ಮೀ.ಸುರಂಗ ಮಾರ್ಗ ಮಾಡಲು ಸಾಧ್ಯವೇ?
ರಾಷ್ಟ್ರೀಯ ಹೆದ್ದಾರಿ(೭೬೬)ಯು ಮೈಸೂರು- ನಂಜನಗೂಡು- ಗುಂಡ್ಲುಪೇಟೆ- ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಮಾರ್ಗವಾಗಿ ಕೇರಳಕ್ಕೆ ಸಂಪರ್ಕ ಕಲ್ಪಿಸುತ್ತದೆ. ಪ್ರಾಣಿಗಳ ಹಿತದೃಷ್ಟಿಯಿಂದ ಇಲ್ಲಿ ರಾತ್ರಿ ೯ ರಿಂದ ಬೆಳಿಗ್ಗೆ ೬ ಗಂಟೆ ತನಕ ಸಂಚಾರವನ್ನೇ ಬಂದ್ ಮಾಡಲಾಗಿದೆ. ಇದಲ್ಲದೆ ಜಿಲ್ಲೆಯ ಮೂಲಕ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ(೨೦೯) ಯು ಬಿಳಿಗಿರಿರಂಗನಬೆಟ್ಟ ಮತ್ತು ಸತ್ಯಮಂಗಲ ಹುಲಿ ಸಂರಕ್ಷಿತಾರಣ್ಯಗಳಲ್ಲಿ ಹಾದು ಹೋಗುತ್ತಿದ್ದು, ಇಲ್ಲಿಯೂ ರಾತ್ರಿ ಸಂಚಾರ ಬಂದ್ ಮಾಡಲಾಗಿದೆ. ಕೇರಳ ಸರ್ಕಾರ ರಾತ್ರಿ ಸಂಚಾರ ನಿಷೇಧ ತೆರವಿಗೆ ನಿರಂತರ ಪ್ರಯತ್ನ ನಡೆಸುತ್ತಲೇ ಇದೆ. ಅಲ್ಲದೆ ಬಂಡೀಪುರ ಅರಣ್ಯದೊಳಗೆ ಇರುವ ರಾಷ್ಟ್ರೀಯ ಹೆದ್ದಾರಿ (೭೬೬) ಉದ್ದಕ್ಕೂ ಎಲಿವೆಟೆಡ್ ರಸ್ತೆ ನಿರ್ಮಾಣ ಮಾಡಲು ಅವಕಾಶ ನೀಡಬೇಕೆಂಬ ಕೇರಳ ಸರ್ಕಾರದ ಮನವಿಯನ್ನು ತಿರಸ್ಕರಿಸಲಾಗಿದೆ.
ಸಂರಕ್ಷಿತಾರಣ್ಯಗಳಲ್ಲಿ ರಸ್ತೆ ವಿಸ್ತರಣೆ, ರೈಲು ಮಾರ್ಗಗಳಿಗೆ ಅವಕಾಶ ನೀಡದಂತೆ ಪರಿಸರ ಪ್ರೇಮಿಗಳು ಹೋರಾಟ ನಡೆಸುತ್ತ ಬಂದಿದ್ದಾರೆ. ಕಾನೂನು ಹೋರಾಟಕ್ಕೂ ಸಿದ್ದರಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಬಿಳಿಗಿರಿರಂಗನಬೆಟ್ಟ ಹುಲಿ ಸಂರಕ್ಷಿತಾರಣ್ಯದಲ್ಲಿ ಸುರಂಗ ರೈಲು ಮಾರ್ಗ ನಿರ್ಮಾಣ ಸಾಧ್ಯವೇ? ಕಾರ್ಯಸಾಧ್ಯವಲ್ಲದ ಹೊಸ ಯೋಜನೆಗಳನ್ನು ತೇಲಿಬಿಡುವ ಬದಲು ಕಾರ್ಯಸಾಧ್ಯವಾಗುವ ಹಳೇ ಯೋಜನೆಗಳನ್ನೇ ತ್ವರಿತ ಅನುಷ್ಠಾನಗೊಳಿಸಲು ಸರ್ಕಾರ ಆಸಕ್ತಿ ವಹಿಸಬೇಕಿದೆ.

andolanait

Recent Posts

ಇರಾನ್‌ ಯುದ್ಧ: 5 ದಿನಗಳ ಕದನ ವಿರಾಮ ಘೋಷಣೆ ಮಾಡಿದ ಟ್ರಂಪ್‌

ವಾಷಿಂಗ್ಟನ್:‌ ಅಮೇರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಐದು ದಿನಗಳ ಕಾಲ ಕದನ ವಿರಾಮ ಘೋಷಣೆ ಮಾಡಿದ್ದಾರೆ. ಅಮೇರಿಕಾ ಅಧ್ಯಕ್ಷ ಟ್ರಂಪ್‌…

6 mins ago

ಇರಾನ್-ಇಸ್ರೇಲ್‌ ಸಂಘರ್ಷದ ಎಫೆಕ್ಟ್:‌ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಭಾರೀ ಕುಸಿತ

ಬೆಂಗಳೂರು: ಇಸ್ರೇಲ್-ಇರಾನ್ ನಡುವಿನ ಯುದ್ಧ ಪರಿಸ್ಥಿತಿಯಿಂದಾಗಿ ಚಿನ್ನ ಮತ್ತು ಬೆಳ್ಳಿ ದರಗಳ ಸತತ ಕುಸಿತ ಮುಂದುವರೆದಿದೆ. ಇಂದೂ ಕೂಡ ಚಿನ್ನ,…

25 mins ago

ಮುಂದುವರಿದ ಇರಾನ್-ಇಸ್ರೇಲ್‌ ಸಂಘರ್ಷ: ಸಿಲಿಂಡರ್‌ ಪೂರೈಕೆ ವ್ಯತ್ಯಯ ಆಗದಂತೆ ಕ್ರಮ ಎಂದ ಪ್ರಧಾನಿ ಮೋದಿ

ನವದೆಹಲಿ: ಇರಾನ್‌-ಇಸ್ರೇಲ್‌ ಸಂಘರ್ಷದಿಂದಾಗಿ ಪಶ್ಚಿಮ ಏಷ್ಯಾದಲ್ಲಿ ರಾಷ್ಟ್ರಗಳ ಸ್ಥಿತಿ ಚಿಂತಾಜನಕವಾಗಿದೆ. ಯುದ್ಧದಿಂದ ಭಾರತದ ಮೇಲೆ ಪರಿಣಾಮ ಬೀರಿದೆ ಎಂದು ಪ್ರಧಾನಿ…

1 hour ago

ಯುದ್ಧದ ಖರ್ಚು ನಿಭಾಯಿಸಲು ಹೊಸ ದಾರಿ ಹುಡುಕಿದ ಇರಾನ್: ವ್ಯಾಪಾರಿ ಹಡಗುಗಳಿಗೆ ಶುಲ್ಕ

ಟೆಹರಾನ್:‌ ಯುದ್ಧದ ಖರ್ಚು ನಿಭಾಯಿಸಲು ಸಂಚಾರ ಮಾಡುವ ವ್ಯಾಪಾರಿ ಹಡಗುಗಳಿಗೆ ಶುಲ್ಕ ವಿಧಿಸಲು ಇರಾನ್ ನಿರ್ಧರಿಸಿದೆ. ಹಾರ್ಮುಜ್ ಜಲಸಂಧಿ ಮೂಲಕ…

1 hour ago

ಅಕಾಲಿಕ ಮಳೆಯಿಂದ ಬೆಳೆನಷ್ಟ: ಪರಿಹಾರ ನೀಡಲು ರೈತ ಸಂಘಟನೆಗಳ ಒತ್ತಾಯ

ಚಾಮರಾಜನಗರ: ಅಕಾಲಿಕ ಮಳೆಯಿಂದ ಬೆಳೆ ನಷ್ಟವಾಗಿರುವ ಹಿನ್ನೆಲೆಯಲ್ಲಿ ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ…

1 hour ago

ಮಧ್ಯಪ್ರಾಚ್ಯ ಸಂಘರ್ಷ: ರಾಜ್ಯಗಳೊಂದಿಗೆ ಸಮನ್ವಯ ಸಾಧಿಸಲು ಪ್ರಧಾನಿ ಮೋದಿ ಸಲಹೆ

ನವದೆಹಲಿ: ಪಶ್ಚಿಮ ಏಷ್ಯಾ ಸಂಘರ್ಷದ ವೇಳೆ ದೇಶದ ಮೇಲಾಗುವ ಪ್ರತಿಕೂಲ ಪರಿಣಾಮಗಳ ಬಗ್ಗೆ ಕೇಂದ್ರ ಸರ್ಕಾರ ಸತತ ನಿಗಾ ವಹಿಸುತ್ತಿದ್ದು,…

2 hours ago