ಅಭಿವೃದ್ಧಿ ಹೊಂದಿದ ದೇಶಗಳಿಗೆ ಹೊಲಿಸಿದರೂ ಭಾರತದ ಆರ್ಥಿಕತೆ ಹೆಚ್ಚು ಸುರಕ್ಷಿತವಾಗಿದೆ ಎಂಬ ಸರ್ಕಾರದ ಸಮರ್ಥನೆಯ ಮಾತುಗಳ ನಡುವೆಯೇ ಸೆಪ್ಟೆಂಬರ್ ತಿಂಗಳ ಚಿಲ್ಲರೆ ದರ ಹಣದುಬ್ಬರವು ಶೇ.7.41ಕ್ಕೆ ಜಿಗಿದಿದೆ. ಕಾರ್ಖಾನೆಗಳ ಉತ್ಪಾದನೆಯು ಹದಿನೇಳು ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ರೂಪಾಯಿ ಮೌಲ್ಯವು ನಿತ್ಯವೂ ಸಾರ್ವಕಾಲಿಕ ಕನಿಷ್ಠಮಟ್ಟಕ್ಕಿಳಿದು ದಾಖಲೆ ಮಾಡುತ್ತಿದೆ.
ಈ ಎಲ್ಲಾ ಬೆಳವಣಿಗೆಗಳು ದೇಶದ ಒಟ್ಟಾರೆ ಆರ್ಥಿಕತೆಯ ದೃಷ್ಟಿಯಿಂದ ಮಾತ್ರವಲ್ಲ, ಜನಸಾಮಾನ್ಯರ ದೃಷ್ಟಿಯಿಂದಲೂ ಆತಂಕಕಾರಿ. ನಾವೀಗ ಹಣದುಬ್ಬರದದ ವಿಷವೃತ್ತದಲ್ಲಿ ಸಿಲುಕಿದ್ದೇವೆ. ಹಣದುಬ್ಬರದಿಂದಾಗಿ ಬೆಲೆ ಏರಿಕೆ ಹೆಚ್ಚುತ್ತಿದೆ. ಹಣದುಬ್ಬರ ನಿಯಂತ್ರಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಸಾಲಗಳ ಮೇಲಿನ ಬಡ್ಡಿದರ ಏರಿಸುತ್ತಿದೆ. ಬಡ್ಡಿದರ ಏರಿಕೆಯಿಂದಾಗಿ ಗ್ರಾಹಕರು ಪಡೆಯುವ ಸಾಲಗಳ ಮೇಲಿನ ಬಡ್ಡಿದರಗಳೂ ಹೆಚ್ಚುತ್ತಿವೆ. ಬಡ್ಡಿದರ ಏರಿಕೆಗೆ ಪೂರಕವಾಗಿ ಹಲವು ಸರಕು ಮತ್ತು ಸೇವೆಗಳ ದರಗಳೂ ಹೆಚ್ಚುತ್ತಿವೆ.
ಸೆಪ್ಟೆಂಬರ್ ತಿಂಗಳ ಚಿಲ್ಲರೆದರ ಹಣದುಬ್ಬರವು ಶೇ.7.41ಕ್ಕೆ ಏರಿರುವುದನ್ನು ಎರಡು ಕಾರಣಗಳಿಗೆ ಗಂಭೀರವಾಗಿ ಪರಿಗಣಿಸಬೇಕಿದೆ. ಕಳೆದ ಮೂರು ತ್ರೈಮಾಸಿಕಗಳಿಂದಲೂ ಹಣದುಬ್ಬರವು ಶೇ.6ಕ್ಕಿಂತ ಹೆಚ್ಚಿನ ಮಟ್ಟದಲ್ಲೇ ಇದೆ. ಭಾರತೀಯ ರಿಸರ್ವ್ ಬ್ಯಾಂಕ್ ಹಣದುಬ್ಬರವನ್ನು ಕಾಯ್ದುಕೊಳ್ಳುವ ಹೊಣೆ ಹೊತ್ತಿದೆ. ಶೇ.4ರಷ್ಟು ಹಣದುಬ್ಬರವನ್ನು ಶೇ.2ರಷ್ಟು ಹೆಚ್ಚು ಅಥವಾ ಕಡಿಮೆಯೊಂದಿಗೆ ಕಾಯ್ದುಕೊಳ್ಳಬೇಕು. ಅಂದರೆ, ಕನಿಷ್ಠ ಶೇ.2 ಮತ್ತು ಗರಿಷ್ಠ ಶೇ.6ರಷ್ಟು ಹಣದುಬ್ಬರ ಇದ್ದರೆ ಅದನ್ನು ನಿಭಾಯಿಸಬಹುದು. ಆದರೆ, ಸತತ ಮೂರು ತ್ರೈಮಾಸಿಕಗಳಿಂದ ಶೇ.6ರ ಗಡಿದಾಟಿರುವುದರಿಂದ ಭಾರತೀಯ ರಿಸರ್ವ್ ಬ್ಯಾಂಕ್ ಹಣದುಬ್ಬರ ನಿಯಂತ್ರಣ ಮಾಡುವಲ್ಲಿ ವಿಫಲವಾಗಿದೆ ಎಂದೇ ಅರ್ಥ.
2016ರಲ್ಲಿ ಜಾರಿಗೆ ಬಂದಿರುವ ಹಣಕಾಸು ನೀತಿ ಮಾರ್ಗಸೂಚಿಗಳ ಪ್ರಕಾರ, ಸತತ ಮೂರು ತ್ರೈಮಾಸಿಕಗಳಿಗಿಂತಲೂ ಹೆಚ್ಚು ಅವಧಿಗೆ ಹಣದುಬ್ಬರವು ನಿಗದಿತ ಮಿತಿಯಲ್ಲಿ ಇಲ್ಲದಿದ್ದರೆ, ಅದು ರಿಸರ್ವ್ ಬ್ಯಾಂಕಿನ ವೈಫಲ್ಯ ಎಂದೇ ಪರಿಗಣಿಸಲಾಗುತ್ತದೆ. ಮತ್ತು ವೈಫಲ್ಯತೆ ಬಗ್ಗೆ ರಿಸರ್ವ್ ಬ್ಯಾಂಕ್ ಕೇಂದ್ರ ಸರ್ಕಾರಕ್ಕೆ ಲಿಖಿತ ಸಮಜಾಯಿಷಿ ನೀಡಬೇಕಿದೆ. ನೂತನ ಮಾರ್ಗಸೂಚಿಗಳು ಜಾರಿಗೆ ಬಂದ ನಂತರ ಇದೇ ಮೊದಲ ಬಾರಿಗೆ ರಿಸರ್ವ್ ಬ್ಯಾಂಕ್ ಈ ಸಂಕಷ್ಟ ಎದುರಿಸುತ್ತಿದೆ.
ಇವು ಆಡಳಿತಾತ್ಮಕ ಪ್ರಕ್ರಿಯೆಗಳು. ರಿಸರ್ವ್ ಬ್ಯಾಂಕ್ ತನ್ನ ವೈಫಲ್ಯತೆ ಬಗ್ಗೆ ಸಮಜಾಯಿಷಿ ನೀಡುತ್ತದೆ. ಮುಂದಿನ ಅವಧಿಯೊಳಗೆ ಹಣದುಬ್ಬರ ನಿಯಂತ್ರಣಕ್ಕೆ ತರುವುದಾಗಿ ಹೇಳಬಹುದು.
ವಾಸ್ತವಿಕ ಸಮಸ್ಯೆ ಏನೆಂದರೆ ಹಣದುಬ್ಬರ ನಿಯಂತ್ರಣಕ್ಕಾಗಿ ರಿಸರ್ವ್ ಬ್ಯಾಂಕ್ ಈಗಾಗಲೇ ಶೇ.1.90ರಷ್ಟು ರೆಪೊದರ (ರಿಸರ್ವ್ ಬ್ಯಾಂಕ್ ವಾಣಿಜ್ಯ ಬ್ಯಾಂಕುಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿದರ) ಏರಿಸಿದೆ. ಇಷ್ಟಾದರೂ ಹಣದುಬ್ಬರ ನಿಯಂತ್ರಣಕ್ಕೆ ಬಂದಿಲ್ಲವಾದ್ದರಿಂದ ಬರುವ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆ ವೇಳೆಗೆ ಮತ್ತೆ ಶೇ.0.50ರಿಂದ 0.75ರಷ್ಟು ಬಡ್ಡಿದರ ಏರಿಸುವ ನಿರೀಕ್ಷೆ ಇದೆ.
ಇದು ನೇರವಾಗಿ ಜನಸಾಮಾನ್ಯರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಈಗಾಗಲೇ ಬೆಲೆ ಏರಿಕೆಯಿಂದ ಬಸವಳಿದಿರುವ ಜನರು ಮತ್ತಷ್ಟು ಬಡ್ಡಿ ಪಾವತಿಸಲು, ಬೆಲೆ ಏರಿಕೆಯನ್ನು ಅರಗಿಸಿಕೊಳ್ಳಲು ಸಿದ್ದರಾಗಬೇಕಾಗುತ್ತದೆ. ಜನರೇನೋ ಬೆಲೆ ಏರಿಕೆಯನ್ನು ಪ್ರತಿಭಟಿಸದೇ ಮೌನವಾಗಿ ಸಹಿಸಿಕೊಳ್ಳುತ್ತಾರೆ. ಆದರೆ, ಬೆಲೆ ಏರಿಕೆಯ ಬಿಸಿ ಜನರ ಖರೀದಿ ಶಕ್ತಿಯನ್ನು ಗಣನೀಯವಾಗಿ ಕುಗ್ಗಿಸಿದೆ, ಮತ್ತಷ್ಟು ಕುಗ್ಗಿಸಲಿದೆ. ಜನರ ಖರೀದಿ ಶಕ್ತಿ ಕುಗ್ಗಿದಾಗ ಆರ್ಥಿಕ ಚಟುವಟಿಕೆಗಳ ವೇಗ ತಗ್ಗುತ್ತದೆ. ಇದು ನೇರವಾಗಿ ಒಟ್ಟಾರೆ ಆರ್ಥಿಕತೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಅಂದರೆ ಜಿಡಿಪಿ ಬೆಳವಣಿಗೆ ಕುಸಿಯಲು ಕಾರಣವಾಗುತ್ತದೆ.
ಈ ಹಂತದಲ್ಲಿ ಬಡ್ಡಿದರ ಏರಿಸುವುದನ್ನು ಬಿಟ್ಟು ಬೇರಾವ ಮಾರ್ಗಗಳೂ ರಿಸರ್ವ್ ಬ್ಯಾಂಕ್ ಮುಂದೆ ಇಲ್ಲ. ಸಂಕಷ್ಟ ಪರಿಸ್ಥಿತಿಯಿಂದ ದೇಶವು ಪಾರಾಗಬೇಕಾದರೆ ಕೇಂದ್ರ ಸರ್ಕಾರ ಉದಾರ ಮನಸ್ಸು ಮಾಡಬೇಕು. ಈಗ ಜಿಗಿದಿರುವ ಹಣದುಬ್ಬರವನ್ನು ಏಕಾಏಕಿ ತಗ್ಗಿಸುವ ಯಾವ ಮಂತ್ರದಂಡವೂ ಕೇಂದ್ರ ಸರ್ಕಾರದ ಬಳಿ ಇಲ್ಲ. ಆದರೆ, ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ದವಸ ಧಾನ್ಯ ಸೇರಿದಂತೆ ಕೇಂದ್ರ ಸರ್ಕಾರವು ಹೇರಿರುವ ವಿವಿಧ ತೆರಿಗೆಗಳು ಮತ್ತು ಸುಂಕಗಳನ್ನು ಕಡಿತ ಮಾಡಬೇಕು. ಇದರಿಂದ ಹಣದುಬ್ಬರ ಏರಿಕೆಯನ್ನು ನಿಯಂತ್ರಿಸಬಹುದು. ಮಧ್ಯಮಾವಧಿಯಲ್ಲಿ ಹಣದುಬ್ಬರವನ್ನು ತಗ್ಗಿಸಲು ಸಾಧ್ಯವಾಗುತ್ತದೆ.
ಮಾಸಿಕ 1.45 ಲಕ್ಷ ಕೋಟಿ ರೂಪಾಯಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಸಂಗ್ರಹಿಸುವ ಕೇಂದ್ರ ಸರ್ಕಾರಕ್ಕೆ ತೆರಿಗೆ ತಗ್ಗಿಸುವುದರಿಂದೇನೂ ಭಾರಿ ಹೊರೆಯಾಗುವುದಿಲ್ಲ. ಒಂದು ವೇಳೆ ಹೊರೆಯಾಗುತ್ತದೆ ಎಂದಾದರೆ, ತಗ್ಗಿಸಿರುವ ಕಾರ್ಪೊರೆಟ್ ತೆರಿಗೆಯನ್ನು ಮುಂದಿನ ಮೂರು ವರ್ಷಗಳವರೆಗೆ ಏರಿಸಿ ಸರಿದೂಗಿಸಿಕೊಳ್ಳಬಹುದು. ಹಣದುಬ್ಬರ ನಿಯಂತ್ರಣದ ವೈಫಲ್ಯದ ಹೊಣೆಯನ್ನು ಕೇಂದ್ರ ಸರ್ಕಾರ ಹೊರಬೇಕಿಲ್ಲ. ಆದರೆ, ಹಣದುಬ್ಬರ ನಿಯಂತ್ರಣಕ್ಕಾಗಿ ಏಗುತ್ತಿರುವ ರಿಸರ್ವ್ ಬ್ಯಾಂಕ್ ಗೆ ಒತ್ತಾಸೆಯಾಗಿ ನಿಲ್ಲುವುದು ಕೇಂದ್ರ ಸರ್ಕಾರದ ನೈತಿಕ ಹೊಣೆ.
ಮೈಸೂರು: ಸಕ್ಕರೆ ನಾಡು ಮಂಡ್ಯದಲ್ಲಿ ಇಂದಿನಿಂದ (ಡಿ.20) 87ನೇ ಕನ್ನಡ ಸಾಹಿತ್ಯ ಸಮ್ಮೇಳನ ಶುರುವಾಗಿದೆ. ಆದರೆ ಈ ಸಮ್ಮೇಳನವನ್ನು ಯಾವ…
ಮಂಡ್ಯ: ಹಾಸ್ಯ ಸಾಹಿತ್ಯ ಆಧುನಿಕ ಬದುಕಿನಗೆ ಔಷಧಿಯಾಗಿದೆ ಎಂದು ಪ್ರಾಧ್ಯಾಪಕ ಡಾ.ಜೆ.ಕರಿಯಪ್ಪ ಮಾಳಿಗೆ ಹೇಳಿದರು. 87ಅಖಿಲ ಭಾರತ ಕನ್ನಡ ಸಾಹಿತ್ಯ…
ಮಡಿಕೇರಿ: ಸಿ ಮತ್ತು ಡಿ ಭೂಮಿಗೆ ಸಂಬಂಧಿಸಿದಂತೆ ಕಂದಾಯ ಸಚಿವರು ಉನ್ನತ ಮಟ್ಟದ ಸಮಿತಿ ರಚನೆಗೆ ಮುಂದಾಗಿದ್ದು, ಸಮಸ್ಯೆ ಪರಿಹಾರವಾಗಲಿ…
ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಕ್ಷೇಪಾರ್ಹ ಪದ ಬಳಸಿದ್ದಾರೆ ಎಂಬ ಆರೋಪದ ಮೇಲೆ ಎಂಎಲ್‌ಸಿ ಸಿ.ಟಿ.ರವಿಯವರನ್ನು ಪೊಲೀಸರೇ ಕೊಲೆ…
ವಿರಾಜಪೇಟೆ: ಗೋಣಿಕೊಪ್ಪ-ಕೇರಳ ಹೆದ್ದಾರಿಯ ಬಿಟ್ಟಂಗಾಲ ಆಟೋ ನಿಲ್ದಾಣದ ಬಳಿ ಚಿರತೆ ಬೆಕ್ಕೊಂದು ಅಪಘಾತಕೀಡಾಗಿ ಸಾವನಪ್ಪಿದ ಘಟನೆ ಶುಕ್ರವಾರ ರಾತ್ರಿ 9…
ಮೈಸೂರು: ನಟ ದರ್ಶನ್ ಅವರು ಮೈಸೂರಿನ ತಿ.ನರಸೀಪುರ ಮುಖ್ಯರಸ್ತೆಯಲ್ಲಿರುವ ಕೆಂಪಯ್ಯನಹುಂಡಿ ಬಳಿಯ ತಮ್ಮ ಫಾರ್ಮ್‌ಹೌಸ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಶುಕ್ರವಾರ ಇಲ್ಲಿಗ…