ಎಡಿಟೋರಿಯಲ್

ಸಂಪಾದಕೀಯ : ಮಳೆ ಸಂತ್ರಸ್ತ ರೈತರ ಸಂಕಷ್ಟಕ್ಕೆ ಜಿಲ್ಲಾಡಳಿತದ ತುರ್ತು ಸ್ಪಂದನೆ ಅಗತ್ಯ

ಅಕಾಲಿಕವಾಗಿ ಸುರಿಯುತ್ತಿರುವ ಮಳೆ ರೈತರಲ್ಲಿ ಆತಂಕ ಮೂಡಿಸಿದೆ. ಮತ್ತಷ್ಟು ದಿನಗಳ ಕಾಲ ಮಳೆ ಸುರಿಯುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದು ಆತಂಕವನ್ನು ಇಮ್ಮಡಿಸಿದೆ. ಸಾಲ ಮಾಡಿ ಕೃಷಿ ಮಾಡುವ ರೈತರು ಬೆಳೆದ ಫಸಲು ಕೈಗೆ ಬರುತ್ತದೆಂಬ ನಿರೀಕ್ಷೆಯಲ್ಲಿರುವಾಗಲೇ ಭಾರಿ ಮಳೆ ರೈತರ ನಿರೀಕ್ಷೆಗಳನ್ನು ನುಚ್ಚುನೂರು ಮಾಡಿದೆ.

ರೈತ ಉತ್ತಿ, ಬಿತ್ತಿ ಬೆಳೆದದ್ದೆಲ್ಲ ಕಣ್ಣೆದುರೇ ನೀರು ಪಾಲಾಗುತ್ತಿದೆ. ಮತ್ತೊಂದೆಡೆ ಭಾರಿ ಮಳೆಗೆ ಗುಡಿಸಲು, ಸೀಮೆಹೆಂಚಿನ ಮನೆಗಳಷ್ಟೇ ಅಲ್ಲದೇ ಮಂಗಳೂರು ಹಂಚಿನ ಮನೆಗಳೂ ಕುಸಿದು ಬೀಳುವ ಹಂತಕ್ಕೆ ಬಂದಿದ್ದು ನಿವಾಸಿಗಳು ಕಂಗೆಟ್ಟಿದ್ದಾರೆ. ನೂರಾರು ಮಂದಿ ಸೂರು ಕಳೆದುಕೊಂಡಿದ್ದಾರೆ. ಸಾವಿರಾರು ಮಂದಿ ಸೂರು ಯಾವಾಗ ಕುಸಿದು ಬೀಳುತ್ತದೋ ಎಂಬ ಆತಂಕದಲ್ಲಿದ್ದಾರೆ.
ಮಳೆ ಎಷ್ಟು ತೀವ್ರವಾಗಿದೆ ಎಂದರೆ, ಕೆರೆಗಳು ಕೋಡಿ ಬಿದ್ದಿವೆ, ಕೋಡಿ ಬಿದ್ದ ನೀರಿನಿಂದ ಸಾಕಷ್ಟು ಬೆಳೆಗೆ ಹಾನಿಯಾಗಿದೆ. ಸತತ ಮಳೆಯಿಂದಾಗಿ ಕಚ್ಚಾ ರಸ್ತೆಗಳಷ್ಟೇ ಅಲ್ಲ ಡಾಂಬರು ಹಾಕಿರುವ ರಸ್ತೆಗಳು ಹಾನಿಗೀಡಾಗಿವೆ. ಹಲವು ಕಡೆಗಳಲ್ಲಿ ಸಂಪರ್ಕ ಸೇತುವೆಗಳು ಕುಸಿದಿವೆ, ಇಲ್ಲವೇ ಕುಸಿಯುವ ಹಂತಕ್ಕೆ ಬಂದು ಬಳಕೆಗೆ ಬಾರದಂತಾಗಿವೆ. ಮನೆ ಕುಸಿತ, ಪ್ರವಾಹ ವಿದ್ಯುತ್ ಸ್ಪರ್ಶ ಮತ್ತಿತರ ಕಾರಣಗಳಿಂದಾಗಿ ಅಪಾರ ಪ್ರಮಾಣದಲ್ಲಿ ಜನರ ಜತೆ ಜಾನುವಾರುಗಳ ಪ್ರಾಣ ಹಾನಿಯಾಗಿದೆ. ಮಳೆಯ ತೀವ್ರತೆಯಿಂದಾಗಿ ಕೃಷಿ ಬೆಳೆಗಷ್ಟೇ ಅಲ್ಲದೇ ತೋಟಗಾರಿಕೆ ಬೆಳೆಗಳಿಗೂ ತೀವ್ರ ಹಾನಿಯಾಗಿದೆ.
ಶಿಥಿಲವಾಗಿದ್ದವಷ್ಟೇ ಅಲ್ಲದೇ ಇತ್ತೀಚಿನ ವರ್ಷಗಳಲ್ಲಿ ಕಟ್ಟಿದ್ದ ಶಾಲಾ ಕಟ್ಟಡಗಳು, ಅಂಗನವಾಡಿ ಕಟ್ಟಡಗಳು ಕುಸಿದಿವೆ. ಆಸ್ಪತ್ರೆ ಕಟ್ಟಡಗಳು ಸೇರಿದಂತೆ ಸಾರ್ವಜನಿಕರಿಗಾಗಿರುವ ಸರ್ಕಾರಿ ಕಚೇರಿ, ಕಟ್ಟಡಗಳಿಗೂ ಹಾನಿಯಾಗಿದೆ. ಅಲ್ಲಲ್ಲಿ ವಿದ್ಯುತ್ ಕಂಬಗಳು ಧರೆಗುರುಳಿದ್ದು ವಿದ್ಯುತ್ ಸಂಪರ್ಕ ಕಡಿದುಹೋಗಿದೆ. ನಗರ, ಪಟ್ಟಣ ಪ್ರದೇಶಗಳಲ್ಲಿ ವಿದ್ಯುತ್ ಕಂಬಗಳು ಉರುಳಿಬಿದ್ದಾಗ, ಅಥವಾ ವಿದ್ಯುತ್ ಸಂಪರ್ಕ ಕಡಿತವಾದಾಗ ತ್ವರಿತವಾಗಿ ಸೇವೆ ಲಭ್ಯವಾಗುತ್ತದೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಮರು ಸಂಪರ್ಕನೀಡಲು ವಿಳಂಬ ಮಾಡಲಾಗುತ್ತಿದೆ.
ಪ್ರಕೃತಿ ವಿಕೋಪಗಳನ್ನು ಜಿಲ್ಲಾಡಳಿತ, ಸರ್ಕಾರ ತಡೆಯಲು ಸಾಧ್ಯವಿಲ್ಲ. ಆದರೆ, ಇಂತಹ ವಿಕೋಪಗಳ ಸಂದರ್ಭಗಳಲ್ಲಿ ತುರ್ತು ಪರಿಹಾರ ಕ್ರಮಗಳನ್ನು ಕೈಗೊಳ್ಳುವ ಮೂಲಕ ಸಂತ್ರಸ್ತ ಜನರ ನೆರವಿಗೆ ಬರಬೇಕಿದೆ. ಕಾನೂನುಗಳ ನೆಪ ಹೇಳಿಕೊಂಡು ಪರಿಹಾರ ವಿತರಣೆಯಲ್ಲಿ ವಿಳಂಬವಾಗುವುದನ್ನು ತಪ್ಪಿಸಬೇಕಿದೆ. ಅದಕ್ಕಾಗಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ದಿನದ ಇಪ್ಪತ್ನಾಲ್ಕು ಗಂಟೆಗಳ ಕಾಲ ಕಾರ್ಯನಿರ್ವಹಿಸಲೂ ಸಿದ್ದರಾಗಬೇಕು. ಹಾನಿ ಪ್ರದೇಶಗಳಿಗೆ ತೆರಳಿ, ಮೊಕ್ಕಂ ಹೂಡಿ ಸಮಾರೋಪಾದಿಯಲ್ಲಿ ಕಾರ್ಯ ನಿರ್ವಹಿಸಿ, ಜನಸಾಮಾನ್ಯರ ಕಣ್ಣೀರು ಒರೆಸಬೇಕಿದೆ.
ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಈಗಾಗಲೇ ಅಪಾರ ಪ್ರಮಾಣದಲ್ಲಿ ಹಾನಿಗೀಡಾಗಿರುವ ಪ್ರದೇಶಗಳಿಗೆ ತೆರಳಿ ಪರಿಶೀಲಿಸಿದ್ದಾರೆ. ಪರಿಹಾರ ಕ್ರಮ ತ್ವರಿತವಾಗಿ ಕೈಗೊಳ್ಳುವಂತೆ ಕೆಳಹಂತದ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಕಾಲಕಾಲಕ್ಕೆ ವರದಿ ಪಡೆದು ರಾಜ್ಯ ಸರ್ಕಾರಕ್ಕೆ ರವಾನಿಸುತ್ತಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಧಾನಸೌಧದಿಂದ ಮಳೆಪೀಡಿತ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಸುಧೀರ್ಘ ಸಭೆ ನಡೆಸಿದ್ದಾರೆ. ತುರ್ತು ಪರಿಹಾರ ಕೈಗೊಳ್ಳಲು ಹಣದ ಕೊರತೆ ಇಲ್ಲ, ತುರ್ತು ಪರಿಹಾರಕ್ಕೆ ಎಷ್ಟು ಬೇಕಾದರೂ ಹಣ ಒದಗಿಸುವ ಭರವಸೆಯನ್ನೂ ನೀಡಿ, ಆಡಳಿತದ ಯಂತ್ರಕ್ಕೆ ವೇಗ ಕೊಡುವ ಕೆಲಸ ಮಾಡಿದ್ದಾರೆ. ಆಯಾ ಜಿಲ್ಲೆಗಳ ಉಸ್ತುವಾರಿ ಹೊತ್ತ ಸಚಿವರು ಕೂಡ ತಕ್ಷಣ ಹಾನಿ ಪ್ರದೇಶಗಳಲ್ಲಿ ಪ್ರವಾಸ ಮಾಡಿ ಸಂತ್ರಸ್ತರಲ್ಲಿ ವಿಶ್ವಾಸ ಮೂಡಿಸುವ ಅಗತ್ಯವಿದೆ. ಜಿಲ್ಲಾ ಕೇಂದ್ರಗಳಲ್ಲಿ ಮೊಕ್ಕಾಂ ಮಾಡಿ ನಿತ್ಯವೂ ಪರಿಹಾರ ಕಾರ್ಯಗಳ ಮೇಲ್ವಿಚಾರಣೆ ಮಾಡಬೇಕಿದೆ. ಉಸ್ತುವಾರಿ ಸಚಿವರು ಹಾನಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿ, ಜನರ ನೋವು ಆಲಿಸಿದಾಗ ಮಾತ್ರ ಮಳೆಯಲ್ಲಿ ಕೊಚ್ಚಿಹೋಗಿರುವ ರೈತನ ಬದುಕು ಬವಣೆ ಮನವರಿಕೆಯಾಗಲಿದೆ.
ಪ್ರತಿ ಬಾರಿ ಮಳೆ, ಪ್ರವಾಹದಿಂದ ರೈತರು ನಷ್ಟ ಅನುಭವಿಸಿದಾಗಲೆಲ್ಲ ಅಧಿಕಾರಿಗಳು ಬೆಳೆ ಹಾನಿ ಬಗ್ಗೆ ಸಮೀಕ್ಷೆ ನಡೆಸುತ್ತಾರೆ. ಸಮೀಕ್ಷೆ ನಡೆಸಿ, ನಷ್ಟದ ಅಂದಾಜು ಮಾಡಿ, ಪರಿಹಾರ ಘೋಷಿಸುವಾಗ ಗ್ರಾಮವನ್ನು ಒಂದು ಘಟಕವಾಗಿ ಪರಿಗಣಿಸದೇ, ಇಡೀ ಹೋಬಳಿಯನ್ನು ಒಂದು ಘಟಕವಾಗಿ ಪರಿಗಣಿಸುವುದರಿಂದ ಪರಿಹಾರ ನೀಡಿಕೆಯಲ್ಲಿ ನಿಜವಾದ ಸಂತ್ರಸ್ತರಿಗೆ ಅನ್ಯಾಯವಾಗುತ್ತದೆ. ಬೆಳೆ ವಿಮೆ ಪರಿಹಾರ ನಿರ್ಧರಿಸುವಾಗಲೂ ವಿಮಾ ಕಂಪನಿಗಳೂ ಇದೇ ನಿಯಮವನ್ನು ಅನುಸರಿಸುತ್ತವೆ. ಗ್ರಾಮವನ್ನು ಒಂದು ಘಟಕವಾಗಿ ಪರಿಗಣಿಸಬೇಕೆಂಬ ಬೇಡಿಕೆ ನೆನೆಗುದಿಗೆ ಬಿದ್ದಿದೆ. ತೀವ್ರ ಹಾನಿಯಾಗಿರುವ ಈ ಸಂದರ್ಭದಲ್ಲಾದರೂ ಹಾನಿಯಿಂದಾದ ನಷ್ಟದ ಅಂದಾಜು ಮಾಡುವಾಗ ಮತ್ತು ಪರಿಹಾರ ಘೋಷಣೆ ಮಾಡುವಾಗ ಗ್ರಾಮವನ್ನು ಒಂದು ಘಟಕವಾಗಿ ಪರಿಗಣಿಸಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರ ತುರ್ತಾಗಿ ಕ್ರಮ ಕೈಗೊಳ್ಳುವುದು ಅತ್ಯಗತ್ಯ. ಮುಂದಿನ ದಿನಗಳಲ್ಲಿ ರೈತರು ಬೀದಿಗೆ ಬಂದು ಗೋಳಾಡುವ ಇಲ್ಲವೇ ಹೋರಾಟಕ್ಕಿಳಿಯುವ ಮುನ್ನ ಸರ್ಕಾರ ಎಚ್ಚೆತ್ತುಕೊಂಡು ತುರ್ತಾಗಿ ಸ್ಪಂದಿಸಬೇಕಿದೆ. ಅದು ಸರ್ಕಾರದ ನೈತಿಕ ಕರ್ತವ್ಯ ಕೂಡ.

andolanait

Recent Posts

ರಾಜ್ಯದಲ್ಲಿ ಮಳೆ ಕೊರತೆ: ತಾಪಮಾನ ಏರಿಕೆ: ಹವಾಮಾನ ಇಲಾಖೆ ಮಹತ್ವದ ಮುನ್ಸೂಚನೆ

ಬೆಂಗಳೂರು: ರಾಜ್ಯದ ಬಹುತೇಕ ಕಡೆ ಮಳೆ ಕೊರತೆ ಮುಂದುವರಿದಿದ್ದು, ತಾಪಮಾನ ಏರಿಕೆಯಾಗುವ ಸಾಧ್ಯತೆ ಇದೆ. ಈ ಬಾರಿ ಮುಂಗಾರು ಕೊರತೆ…

4 mins ago

ಕೊಡಗು: ಪತ್ನಿಗೆ ಗುಂಡಿಕ್ಕಿ ಕೊಂದು ತಾನೂ ಗುಂಡು ಹಾರಿಸಿಕೊಂಡು ವೃದ್ಧ ಆತ್ಮಹತ್ಯೆ

ಸೋಮವಾರಪೇಟೆ: ತಾಲೂಕಿನ ಮಾದಾಪುರ ಹೋಬಳಿ ವ್ಯಾಪ್ತಿಯ ಕುಂಬಾರಗಡಿಗೆ ಗ್ರಾಮದಲ್ಲಿ ಕೌಟುಂಬಿಕ ಕಲಹ ಶಂಕೆಯಡಿ ವೃದ್ಧ ದಂಪತಿ ಶವವಾಗಿ ಪತ್ತೆಯಾಗಿದ್ದಾರೆ. ಕನ್ನಿಕಂಡ…

15 mins ago

ಬಿಗ್‌ಬಾಸ್ ಮನೆಯಿಂದ ದಿಢೀರ್ ಹೊರಬಂದ ಓಂ ಪ್ರಕಾಶ್ ರಾವ್: ಆಸ್ಪತ್ರೆಗೆ ದಾಖಲು..!!

ಬೆಂಗಳೂರು: ಬಿಗ್‌ಬಾಸ್ ಮನೆಯಲ್ಲಿ ಇದ್ದ ಓಂ ಪ್ರಕಾಶ್ ರಾವ್ ದಿಢೀರ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಹಿಂದೆ ಅಪಘಾತವೊಂದರಲ್ಲಿ ಓಂ ಪ್ರಕಾಶ್…

20 mins ago

2,000 ರೂ. ವರೆಗಿನ ಯುಪಿಐ ಪಾವತಿಗಳಿಗೆ ಶುಲ್ಕವಿಲ್ಲ: ಕೇಂದ್ರ ಸರ್ಕಾರದಿಂದ ಮಹತ್ವದ ಆದೇಶ

ನವದೆಹಲಿ: 2,000 ರೂ. ವರೆಗೆ ನಡೆಯುವ ಎಲ್ಲಾ UPI ವಹಿವಾಟುಗಳಿಗೆ ಶುಲ್ಕವಿಲ್ಲ. ಅಷ್ಟೇ ಅಲ್ಲ, RuPay ಡೆಬಿಟ್ ಕಾರ್ಡ್ ಮೂಲಕ…

27 mins ago

ಶತಕ ಬಾರಿಸಿದ ಸಿಎಂ ಎದುರು ಸವಾಲುಗಳೂ ಇವೆ

ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ೧೦೦ ದಿನಗಳನ್ನು ಪೂರ್ಣಗೊಳಿಸಿದ್ದಾರೆ. ರಾಜ್ಯದ ಜನತೆಗೆ ಹಲವಾರು ಯೋಜನೆಗಳನ್ನು ಘೋಷಿಸಿದ್ದಾರೆ. ಬಡವರು, ರೈತರು, ಮಹಿಳೆಯರು, ವಿದ್ಯಾರ್ಥಿಗಳ…

22 hours ago

ಎಐ; ಮನುಕುಲದ ವಿನಾಶಕ್ಕೆ ಕಾರಣವಾಗಲಿದೆಯೇ?

ಶುಭಾ ಖಟಾವಕರ ಮ್ಹೆತ್ರಸ್ “ಕೇವಲ ಒಂದು ದಶಕದಲ್ಲಿ ಕೃತ್ರಿಮ ಬುದ್ಧಿಮತ್ತೆಯು (ಎಐ) ಮನುಕುಲವನ್ನು ನಾಶಪಡಿಸಲಿದೆ" ಎಂದು ಎಐನ ದೈತ್ಯ ಸಂಸ್ಥೆಯಾದ…

22 hours ago