ಎಡಿಟೋರಿಯಲ್

ಸಂಪಾದಕೀಯ: ದಸರಾ ವೇಳೆಯಾದರೂ ಮಹಾರಾಜರ ಕೊಡುಗೆಗಳ ಸ್ಮರಣೆಯಾಗಲಿಲ್ಲ

ದಸರಾ ವೇಳೆಯಾದರೂ ಮಹಾರಾಜರ ಕೊಡುಗೆಗಳ ಸ್ಮರಣೆಯಾಗಲಿಲ್ಲ

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಆರಂಭಗೊಂಡಿದೆ. ಮೈಸೂರು ಜಿಲ್ಲೆಯ ಜೊತೆ ಅವಿನಾಭಾವ ಸಂಬಂಧ ಹೊಂದಿರುವ ಚಾಮರಾಜನಗರ ಜಿಲ್ಲೆಯಲ್ಲೂ ೪ ದಿನಗಳ ದಸರಾ ಮಹೋತ್ಸವ ಶುರುವಾಗಿದೆ. ವೇದಿಕೆ ಕಾರ್ಯಕ್ರಮಗಳು, ಫಲಪುಷ್ಪ ಪ್ರದರ್ಶನ, ಮಹಿಳಾ ಹಾಗೂ ರೈತ ದಸರಾ, ಕಲಾತಂಡಗಳ ಮೆರವಣಿಗೆ ನಡೆಯುತ್ತಿವೆ. ಮೈಸೂರು ಅರಸರಾಗಿದ್ದ ಚಾಮರಾಜ ಒಡೆಯರ್ ಹೆಸರಿನ ಜಿಲ್ಲೆಯಿದೆ. ಅವರು ಹುಟ್ಟಿದ ಸ್ಥಳವಾದ ಜನನ ಚಾ.ನಗರದ ಮಂಟಪದ ಚಾಮರಾಜೇಶ್ವರ ದೇವಾಲಯದ ಹಿಂಭಾಗವಿದೆ. ದಸರಾ ಹಿನ್ನೆಲೆಯಲ್ಲಿ ಅದನ್ನು ಶುಚಿಗೊಳಿಸಿ ಸುಣ್ಣ ಬಣ್ಣ ಬಳಿದು ಅಲಂಕರಿಸುವ ಕೆಲಸವನ್ನು ಜಿಲ್ಲಾಡಳಿತ ಮಾಡಲಿಲ್ಲ.
ದಸರಾದಲ್ಲಿ ಮೈಸೂರು ಒಡೆಯರ್ ಅರಸರ ಕೊಡುಗೆಗಳ ಬಗ್ಗೆಯೂ ಯಾವುದೇ ಕಾರ್ಯಕ್ರಮವಿಲ್ಲ. ಆ ಬಗ್ಗೆ ವಿದ್ವಾಂಸರ ಮೂಲಕ ಒಂದು ವಿಚಾರ ಸಂಕಿರಣವನ್ನಾದರೂ ಏರ್ಪಡಿಸಿ ಅವರನ್ನು ಸ್ಮರಿಸುವ ಕೆಲಸ ಆಗಲಿಲ್ಲ. ಸರ್ಕಾರಿ ಉತ್ಸವವಾಗಿ ನಡೆಸಲಾಗುತ್ತಿದೆ.
ಎರಡೂವರೆ ದಶಕಗಳ ಹಿಂದೆ ಚಾಮರಾಜನಗರ ಜಿಲ್ಲೆಯು ಮೈಸೂರು ಜಿಲ್ಲೆಗೆ ಸೇರಿತ್ತು. ಮೈಸೂರಿನ ಯದುವಂಶಸ್ಥರ (ಒಡೆಯರ) ಆಳ್ವಿಕೆಗೆ ಒಳಪಟ್ಟಿತ್ತು. ತೆರಕಣಾಂಬಿ, ಉಮ್ಮತ್ತೂರು ಅಮಚ್ವಾಡಿ, ಯಳಂದೂರು, ಬೆಟ್ಟದ ಕೋಟೆ ಮುಂತಾದ ಪಾಳೆಯಪಟ್ಟುಗಳ ಸಾಮಂತರು ಮೈಸೂರು ಅರಸರ ರಕ್ತ ಸಂಬಂಧಿಗಳೇ ಆಗಿದ್ದು ಈ ಮನೆತನದ ಜೊತೆ ವೈವಾಹಿಕ ಸಂಬಂಧಗಳನ್ನು ಹೊಂದಿದ್ದರು. ಈ ಮನೆತನಗಳ ಹಲವರು ಮೈಸೂರು ಒಡೆಯರಿಗೆ ದತ್ತಕರಾಗಿ ರಾಜ್ಯವಾಳಿರುವ ನಿದರ್ಶನಗಳಿವೆ.
ಕ್ರಿಸ್ತಶಕ ೧೭೯೯ ರಿಂದ ೧೮೬೮ ರವರೆಗೆ ಎರಡು ಬೇರೆ ಬೇರೆ ಅವಧಿಗಳಲ್ಲಿ ಮೈಸೂರು ಸಿಂಹಾಸನವನ್ನು ಅಲಂಕರಿಸಿದ್ದ ಮುಮ್ಮಡಿ ಕೃಷ್ಣರಾಜ ಒಡೆಯರ್ ಅಪಾರ ದೈವಭಕ್ತ ಹಾಗೂ ದಾನಶೀಲ ದೊರೆ. ಈ ದೊರೆಯ ತಂದೆ ಚಾಮರಾಜ ಒಡೆಯರ ಜನ್ಮಸ್ಥಳ ಇಂದಿನ ಚಾಮರಾಜನಗರ. ಅದರ ಆಗಿನ ಹೆಸರು ಅರೆ ಕೊಟ್ಟಾರ. ತಂದೆಯ ನೆನಪಿನಲ್ಲಿ ಅರೆಕೊಟ್ಟಾರದಲ್ಲಿ ಚಾಮರಾಜೇಶ್ವರ ದೇವಾಲಯವನ್ನು ಕಟ್ಟಿಸಿದ ಕೃಷ್ಣರಾಜ ಒಡೆಯರು ಆ ಊರಿಗೆ ಚಾಮರಾಜನಗರ ಎಂದು ಹೆಸರು ಬದಲಾಯಿಸಿದರು. ಇಲ್ಲಿ ಸಂಸ್ಕೃತ ಪಾಠಶಾಲೆ ಅನ್ನು ಸ್ಥಾಪಿಸಿ, ನೂರಾರು ವಿದ್ವಾಂಸರನ್ನು ಕರೆತಂದ ನಂತರ ಈ ಊರು ಮಹತ್ವ ಪಡೆಯಿತು.
ಇದಲ್ಲದೆ ಮೈಸೂರಿನ ಒಡೆಯರಲ್ಲಿ ಒಬ್ಬರಾದ ರಣಧೀರ ಕಂಠೀರವ ನರಸಿಂಹರಾಜ ಒಡೆಯರ್ ಸ್ವತಃ ಕುಸ್ತಿ ಪಟುವಾಗಿದ್ದರು. ತಮಿಳುನಾಡಿನ ತಿರುಚನಾಪಳ್ಳಿಯ ಜಗಜಟ್ಟಿಯನ್ನು ಸೋಲಿಸಿ ಪ್ರಖ್ಯಾತರಾಗಿದ್ದರು ಎಂದು ಇತಿಹಾಸದಲ್ಲಿ ದಾಖಲಾಗಿದೆ. ಇವರು ತೆರಕಣಾಂಬಿಯ ಜೊತೆ ಹೆಚ್ಚು ಒಡನಾಟ ಇಟ್ಟುಕೊಂಡಿದ್ದರು.
ಜಿಲ್ಲೆಯು ಈಗಲೂ ಶೇ.೫೨ ರಷ್ಟು ಅರಣ್ಯ ಹೊಂದಿದೆ. ಮೈಸೂರಿನ ಒಡೆಯರ್‌ಗಳು ಆಳ್ವಿಕೆ ಮಾಡುವಾಗ ಜಿಲ್ಲೆಯಲ್ಲಿ ದಟ್ಟ ಅರಣ್ಯವಿತ್ತು. ಕಾಡು ಪ್ರಾಣಿಗಳಾದ ಹುಲಿ, ಚಿರತೆ, ಆನೆ, ಕರಡಿ ಸೇರಿದಂತೆ ಇನ್ನು ಅನೇಕ ಕ್ರೂರ ಮೃಗಗಳ ಉಪಟಳವಿತ್ತು. ಈ ಬಗ್ಗೆ ಸ್ಥಳೀಯರಿಂದ ದೂರು ಹೋದಾಗಲೆಲ್ಲ ಮೈಸೂರಿನ ಮಹಾರಾಜರು ಸೈನ್ಯ ಸಮೇತ ಕಾಡಿನತ್ತ ತೆರಳಿ ಶಿಕಾರಿ ಮಾಡುತ್ತಿದ್ದರು. ಅವರು ಇಲ್ಲಿಗೆ ಬಂದಾಗಲೆಲ್ಲ ವಿಶ್ರಾಂತಿ ಪಡೆಯಲು ಬಂಡೀಪುರ ಅರಣ್ಯ ಮತ್ತು ಬಿಳಿಗಿರಿರಂಗನಬೆಟ್ಟ ಅರಣ್ಯ ಪ್ರದೇಶಗಳಲ್ಲಿ ವಿಶ್ರಾಂತಿ ಧಾಮಗಳನ್ನು ತೆರೆದಿದ್ದರು. ಅವುಗಳೇ ಇಂದಿನ ಜಂಗಲ್ ರೆಸಾರ್ಟ್‌ಗಳು.
ಇದಷ್ಟೇ ಅಲ್ಲದೆ ಮೈಸೂರಿನಿಂದ ಚಾಮರಾಜನಗರಕ್ಕೆ ಹೊಸ ರೈಲು ಮಾರ್ಗ ನಿರ್ಮಿಸಿದವರೇ ನಾಲ್ವಡಿ ಕೃಷ್ಣರಾಜ ಒಡೆಯರ್.
ಮೊದಲನೇ ರೈಲು ನಗರಕ್ಕೆ ಬಂದಾಗ ನಾಲ್ವಡಿಯವರು ಅದರಲ್ಲಿ ಪ್ರಯಾಣಿಸಿ ಚಾಮರಾಜನಗರಕ್ಕೆ ಬಂದರು. ಇಲ್ಲಿಗೆ ಬಂದಾಗಲೆಲ್ಲ ನಗರದ ಸತ್ಯಮಂಗಲ ರಸ್ತೆಯಲ್ಲಿರುವ ಪ್ರವಾಸಿ ಮಂದಿರದಲ್ಲಿ ನಾಲ್ವಡಿಯವರು ವಾಸ್ತವ್ಯ ಮಾಡುತ್ತಿದ್ದರು. ನಗರದ ಪೂರ್ವ ಭಾಗದಲ್ಲಿರುವ ಬಿಳಿಗಿರಿರಂಗನಬೆಟ್ಟ ಅರಣ್ಯದ ಅಂಚಿನ ಸಿದ್ದಯ್ಯನಪುರ, ಹೊಂಗಲವಾಡಿ, ದೊಳ್ಳಿಪುರ, ಹೊಂಡರಬಾಳು ಸೇರಿದಂತೆ ಇನ್ನು ಕೆಲವು ಗ್ರಾಮಗಳು ಅಮೃತಕಾವಲ್ ಹುಲ್ಲುಗಾವಲು ಪ್ರದೇಶವಾಗಿದ್ದವು. ಮೈಸೂರಿನ ಅರಸರು ಅವುಗಳನ್ನು ಬಿಟ್ಟುಕೊಟ್ಟಿದ್ದರು ಎಂದು ಹಿರಿಯರು ನೆನಪಿಸಿಕೊಳ್ಳುತ್ತಾರೆ.
ಮೈಸೂರಿನ ಶ್ರೇಯೋಭಿವೃದ್ಧಿಗೆ ಹೆಚ್ಚು ಕೊಡುಗೆ ನೀಡಿದ್ದ ಮೈಸೂರು ಮಹಾರಾಜರು ಚಾಮರಾಜನಗರ ಜಿಲ್ಲೆಗೂ ಒಂದಷ್ಟು ಕೊಡುಗೆ ಕೊಟ್ಟಿದ್ದಾರೆ. ಅಂತಹ ಕಾರ್ಯಗಳನ್ನು ಸ್ಮರಿಸುವ ಕೆಲಸ ಮಾಡಿದ್ದರೆ ಜಿಲ್ಲೆಯ ದಸರಾಗೆ ಮತ್ತೆ ಮೆರುಗು ಬರುತ್ತಿತ್ತು. ಜೊತೆಗೆ ಯದುಕುಲಕ್ಕೆ ಸಲ್ಲಿಸಿದ ಗೌರವವಾಗುತ್ತಿತ್ತು. ಈ ಸಂಬಂಧ ದಸರಾ ಪೂರ್ವಭಾವಿ ಸಭೆಗಳಲ್ಲಿ ನಗರದ ಹಿರಿಯ ಚಿಂತಕರು, ಹೋರಾಟಗಾರರು ಈ ವಿಷಯವನ್ನು ಪ್ರಸ್ತಾಪಿಸಿ ಕಾರ್ಯಕ್ರಮ ಆಯೋಜನೆಗೆ ಮುಂದಾಗಬೇಕಿತ್ತು. ದಸರಾ ಮಹೋತ್ಸವ ಎಂದರೆ ಮೈಸೂರು ಒಡೆಯರ್ ಮಹಾರಾಜರ ಉತ್ಸವ ಎಂದೇ ಖ್ಯಾತಿ. ದಸರಾ ಎಂದರೆ ಸಾಂಸ್ಕೃತಿಕ ಕಲಾತಂಡಗಳ ಮೆರವಣಿಗೆ, ಕವಿಗೋಷ್ಠಿ, ಪೂಜೆ ಪುನಸ್ಕಾರ, ಎಲ್ಲ ಬಗೆಯ ಗಾಯನಗಳು ಹೂರಣ ಇರುವುದು ಸೂಕ್ತ. ಜೊತೆಗೆ ಮಹಾರಾಜರನ್ನು ಸ್ಮರಿಸುವ ಕೆಲಸವಾಗಬೇಕಿತ್ತು. ಈ ಕಾರ್ಯಕ್ರಮವು ಮುಂದಿನ ವರ್ಷವಾದರೂ ನಡೆಯಲಿ.

andolanait

Recent Posts

ಕಾರು ಅಪಘಾತ : ಕಾರಿನಲ್ಲಿ‌10ಕ್ಕೂ ಹೆಚ್ಚು ಕರುಗಳು ಪತ್ತೆ

ಮಂಡ್ಯ: ನಾಗಮಂಗಲ ತಾಲೂಕು ಯರಗಟ್ಟಿ ಗೇಟ್ ಬಳಿ ಶುಕ್ರವಾರ ರಾತ್ರಿ ಅಪಘಾತಕ್ಕೊಳಗಾದ ಸ್ಕಾರ್ಪಿಯೋ ಕಾರಿನಲ್ಲಿ ಮೃತಪಟ್ಟಿರುವ ಹತ್ತಕ್ಕೂ ಹೆಚ್ಚು ಕರುಗಳು…

6 hours ago

ಮದ್ದೂರು |‌ ದೇವಾಲಯಗಳಲ್ಲಿ ಸರಣಿ ಕಳ್ಳತನ

ಮದ್ದೂರು: ದುಷ್ಕರ್ಮಿಗಳು ದೇವಾಲಯಗಳ ಬಾಗಿಲು ಮುರಿದು ಸರಣಿ ಕಳ್ಳತನ ಮಾಡಿರುವ ಘಟನೆ ತಾಲ್ಲೂಕಿನ ಕೆಸ್ತೂರು ಪೊಲೀಸ್ ಠಾಣೆ ವ್ಯಾಪ್ತಿಯ ಅಡಗನಹಳ್ಳಿ…

9 hours ago

ಎಚ್ಚೆತ್ತ ಪೊಲೀಸರು : ರಾಸಾಯನಿಕ ತಯಾರಿಕಾ ಘಟಕದ ಮೇಲೆ ದಾಳಿ,ಪರಿಶೀಲನೆ

ಮೈಸೂರು : ಎನ್‌ಸಿಬಿ ಪೊಲೀಸರು ನಗರದ ಹೆಬ್ಬಾಳು ಕೈಗಾರಿಕಾ ಪ್ರದೇಶದ ರಾಸಾಯನಿಕ ತಯಾರಿಕಾ ಘಟಕದ ಮೇಲೆ ದಾಳಿ ನಡೆಸಿದ ನಂತರ…

10 hours ago

ರಾಜೀವ್‌ಗೌಡಗೆ ಜಾಮೀನು : ಪಟಾಕಿ ಸಿಡಿಸಿ ಸಂಭ್ರಮಿಸದಂತೆ ಕೋರ್ಟ್‌ ತಾಕೀತು

ಚಿಕ್ಕಬಳ್ಳಾಪುರ : ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾ ಗೌಡ ಅವರಿಗೆ ಬೆದರಿಕೆ ಹಾಕಿದ್ದ ಪ್ರಕರಣದಲ್ಲಿ ಆರೋಪಿ ರಾಜೀವ್ ಗೌಡಗೆ ಜಾಮೀನು…

10 hours ago

ಉದ್ಯಮಿ ಸಿ.ಜೆ.ರಾಯ್‌ ಆತ್ಮಹತ್ಯೆ

ಬೆಂಗಳೂರು : ದಕ್ಷಿಣ ಭಾರತದ ಪ್ರಮುಖ ರಿಯಲ್ ಎಸ್ಟೇಟ್ ಕಂಪನಿ ಕಾನ್ಫಿಡೆಂಟ್ ಗ್ರೂಪ್‌ನ ಸ್ಥಾಪಕ ಮತ್ತು ಚೇರ್ಮನ್ ಡಾ.ಸಿ.ಜೆ. ರಾಯ್…

10 hours ago

ಸಿಎಂ,ಡಿಸಿಎಂ ವಿರುದ್ಧ ಮಾನಹಾನಿಕ ಪೋಸ್ಟ್‌ : ಬಿಜೆಪಿ ವಿರುದ್ಧ ದೂರು

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು ‘ಮಾನಹಾನಿಕರ’ ಪೋಸ್ಟ್‌ನ್ನು ಬಿಜೆಪಿಯ ‘ಎಕ್ಸ್’ ಖಾತೆಯಲ್ಲಿ…

11 hours ago