ಹಾಲು, ಮೊಸರು, ದವಸ ಧಾನ್ಯಗಳ ದರಗಳ ಏರಿಕೆಯಿಂದ ತತ್ತರಿಸಿರುವ ಜನರ ಮೇಲೆ ಈಗ ವಿದ್ಯುತ್ ದರ ಏರಿಕೆಯ ಹೊರೆಯೂ ಬಿದ್ದಿದೆ. ರಾಜ್ಯದ ವಿವಿಧ ವಿದ್ಯುತ್ ವಿತರಣಾ ಕಂಪೆನಿಗಳು ಅಕ್ಟೋಬರ್ 1ರಿಂದ ವಿದ್ಯುತ್ ದರವನ್ನು ಏರಿಕೆ ಮಾಡಿವೆ. ಪ್ರತಿ ಯೂನಿಟ್ ವಿದ್ಯುತ್ ದರ 32 ಪೈಸೆಗಳಿಂದ 40 ಪೈಸೆಯಷ್ಟು ದುಬಾರಿಯಾಗಿದೆ. ಯೂನಿಟ್ ದರದ ಜತೆಗೆ ವಿಧಿಸುವ ಸೇವಾಶುಲ್ಕ ಮತ್ತಿತರ ದರಗಳೂ ಏರಿಕೆಯಾಗಿವೆ. ಅಂದರೆ ವಾಸ್ತವಿಕ ಏರಿಕೆಯು ಪ್ರತಿ ಯೂನಿಟ್‌ಗೆ 45 ರಿಂದ 60 ಪೈಸೆಗಳಷ್ಟಾಗುತ್ತದೆ.
ಜುಲೈ 1ರಂದಷ್ಟೇ ವಿದ್ಯುತ್ ದರವನ್ನು ಪ್ರತಿ ಯೂನಿಟ್ಟಿಗೆ 20ರಿಂದ 40 ಪೈಸೆವರೆಗೆ ಏರಿಸಲಾಗಿತ್ತು. ಆ ಹೊರೆಯನ್ನು ಗ್ರಾಹಕರು ಅರಗಿಸಿಕೊಳ್ಳುವ ಮುನ್ನವೇ ಮತ್ತೆ ವಿದ್ಯುತ್ ದರ ಏರಿಸಲಾಗಿದೆ.
ವಿದ್ಯುತ್ ಉತ್ಪಾದನೆ, ವಿತರಣೆ ಮತ್ತಿತರ ವೆಚ್ಚಗಳನ್ನಾಧರಿಸಿ ವಿದ್ಯುತ್ ದರದ ತ್ರೈಮಾಸಿಕ ಪರಿಷ್ಕರಣೆ (ದರ ಹೊಂದಾಣಿಕೆ) ಮಾಡಲಾಗುತ್ತಿದೆ. ವಿದ್ಯುತ್ ಉತ್ಪಾದನಾ ವೆಚ್ಚ ತಗ್ಗಿದರೆ ಗ್ರಾಹಕರಿಗೆ ವಿಧಿಸುವ ದರವೂ ತಗ್ಗುತ್ತದೆ ಎಂಬ ವಾದವನ್ನು ಇಂಧನ ಇಲಾಖೆ ಮಾಡುತ್ತಿದೆ. ವಾಸ್ತವವಾಗಿ ಪ್ರಸ್ತುತ ಪರಿಸ್ಥಿತಿಯಲ್ಲಿ ವಿದ್ಯುತ್ ಉತ್ಪಾದನಾ ವೆಚ್ಚ ತಗ್ಗುವ ಸಾಧ್ಯತೆಯೇ ಇಲ್ಲ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಲ್ಲಿದ್ದಲು ದರ ತೀವ್ರಗತಿಯಲ್ಲಿ ಏರುತ್ತಿದೆ. ರಷ್ಯಾ-ಉಕ್ರೇನ್ ಸಂಘರ್ಷದಿಂದಾಗಿ ಕಚ್ಚಾ ವಸ್ತುಗಳ ಸರಬರಾಜಿನಲ್ಲಿ ತೀವ್ರ ವ್ಯತ್ಯಯವಾಗಿದೆ. ಹೀಗಾಗಿ ಬರುವ ದಿನಗಳಲ್ಲಿ ಕಲ್ಲಿದ್ದಲು, ವೆಚ್ಚ ತಗ್ಗುತ್ತದೆಂದು ನಿರೀಕ್ಷಿಸಲಾಗದು. ಇದರರ್ಥ ವಿದ್ಯುತ್ ದರ ಪ್ರತಿ ಮೂರು ತಿಂಗಳಿಗೊಮ್ಮೆ ಏರುತ್ತಲೇ ಹೋಗುತ್ತದೆಯೇ ಹೊರತು ಇಳಿಯುವುದಿಲ್ಲ.
ರಾಜ್ಯದಲ್ಲಿ ಎಸ್ಕಾಂಗಳು ಪ್ರತಿ ಯೂನಿಟ್ ವಿದ್ಯುತ್ ದರಕ್ಕೆ 19 ರಿಂದ 31 ಪೈಸೆವರೆಗೆ ಹೆಚ್ಚುವರಿ ದರವನ್ನು ಇಂಧನ ಹೊಂದಾಣಿಕೆ ವೆಚ್ಚ (ಎಫ್‌ಎಸಿ) ಶುಲ್ಕ ರೂಪದಲ್ಲಿ ಸಂಗ್ರಹಿಸಲು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್‌ಸಿ ) ಅವಕಾಶ ಕಲ್ಪಿಸಿದೆ.
2021ರ ಅಕ್ಟೊಬರ್‌ನಿಂದ 2022ರ ಮಾರ್ಚ್‌ವರೆಗೆ ಕಲ್ಲಿದ್ದಲು ಖರೀದಿ ದರ ಏರಿಕೆಯಿಂದಾಗಿ ಎಸ್ಕಾಂಗಳಿಗೆ ಆರ್ಥಿಕ ಹೊರೆ ಬಿದ್ದಿತ್ತು. ಇದನ್ನು ಸರಿದೂಗಿಸಲು ಎಫ್‌ಎಸಿ ಶುಲ್ಕವಾಗಿ ಆರು ತಿಂಗಳ ಅವಧಿಗೆ ಪ್ರತಿ ಯೂನಿಟ್ ವಿದ್ಯುತ್ ದರದ ಮೇಲೆ ಹೆಚ್ಚುವರಿ ದರ ವಿಧಿಸಿ ಸಂಗ್ರಹಿಸಲು ಕೆಇಆರ್‌ಸಿ ಅವಕಾಶ ನೀಡಿದೆ. ಆ ನಂತರದಲ್ಲೂ ಕಲ್ಲಿದ್ದಲು ದರದಲ್ಲೇನೂ ಇಳಿಕೆಯಾಗಿಲ್ಲ. ಹೀಗಾಗಿ ಕೆಇಆರ್‌ಸಿ ಆದೇಶವು ಕೇವಲ ಆರು ತಿಂಗಳಿಗೆ ಮಾತ್ರ ಸೀಮಿತವಾಗಿಲ್ಲ. ಎಲ್ಲಿಯವರೆಗೆ ಎಸ್ಕಾಂಗಳು ತಾವು ಗ್ರಾಹಕರಿಗೆ ವಿಧಿಸುವ ಶುಲ್ಕ ಮತ್ತು ವಿದ್ಯುತ್ ಉತ್ಪಾದನಾ ವೆಚ್ಚದ ನಡುವೆ ಸಮತೋಲನ ಕಂಡುಬರುವುದಿಲ್ಲವೋ ಅಲ್ಲಿಯವರೆಗೂ ಇಂಧನ ಹೊಂದಾಣಿಕೆ ವೆಚ್ಚದ ರೂಪದಲ್ಲಿ ಮೂರು ತಿಂಗಳಿಗೊಮ್ಮೆ ವಿದ್ಯುತ್ ದರ ಪರಿಷ್ಕರಣೆ ಮಾಡುತ್ತಲೇ ಹೋಗುತ್ತವೆ.
ಕನಿಷ್ಠ ವಿದ್ಯುತ್ ದರವೇ ಪ್ರತಿ ಯೂನಿಟ್ಟಿಗೆ 4.15ರೂಪಾಯಿಗಳಷ್ಟಿದೆ. ಇದು ಮೊದಲ 50 ಯೂನಿಟ್‌ಗಳಿಗೆ ವಿಧಿಸುವ ದರ. 50ರಿಂದ 100 ಯೂನಿಟ್‌ಗಳವರೆಗಿನ ದರ 5.60 ರೂಪಾಯಿಗಳಾದರೆ 100 ಯೂನಿಟ್ ದಾಟಿದ ನಂತರ ಪ್ರತಿಯೂನಿಟ್‌ಗೆ 7.15 ರೂಪಾಯಿಗಳಾಗುತ್ತವೆ. ನೂರು ಯೂನಿಟ್‌ಗಿಂತ ಹೆಚ್ಚು ವಿದ್ಯುತ್ ಬಳಸುವ ಗ್ರಾಹಕರಿಗೆ ಮತ್ತಷ್ಟು ಹೊರೆಯಾಗುತ್ತದೆ.
ವಿದ್ಯುತ್ ವಿತರಣಾ ಕಂಪೆನಿಗಳ (ಎಸ್ಕಾಂ) ಸಾಲದ ಹೊರೆ ಮಿತಿ ಮೀರಿದೆ. ಅವುಗಳು ಸಾಲಮುಕ್ತವಾಗಬೇಕು ಎಂಬುದು ಕೇಂದ್ರ ಸರ್ಕಾರದ ತಾಕೀತು. ಈ ಹಿನ್ನೆಲೆಯಲ್ಲಿ ಎಸ್ಕಾಂಗಳು ಇನ್ನು ಮುಂದೆ ವಿದ್ಯುತ್ ಉತ್ಪಾದನೆ, ವಿತರಣೆ ಸೇರಿದಂತೆ ಎಲ್ಲಾ ವೆಚ್ಚಗಳನ್ನು ಗ್ರಾಹಕರ ಹೆಗಲಿಗೆ ಹಾಕಲು ಮುಂದಾಗಿವೆ. ಮುಂದಿನ ಐದು ವರ್ಷಗಳಲ್ಲಿ ಈ ಕಂಪೆನಿಗಳು ಹಳೆಯ ಸಾಲದಿಂದ ಮುಕ್ತವಾಗಬೇಕಿದೆ. ಅಂದರೆ, ಈ ಐದು ವರ್ಷಗಳಲ್ಲಿ ಈ ಕಂಪೆನಿಗಳು ತಮ್ಮ ಹಿಂದಿನ ನಷ್ಟಗಳನ್ನು ಸರಿದೂಗಿಸಿಕೊಳ್ಳಲು ಲಾಭವನ್ನೂ ಗಳಿಸಬೇಕಿದೆ. ಲಾಭ ಗಳಿಸಲು ಗ್ರಾಹಕರ ಮೇಲೆ ಹೊರೆ ಹೇರುತ್ತಿವೆ.
ಈ ಹಿಂದೆ ಗ್ರಾಹಕರ ಮೇಲೆ ಹೆಚ್ಚಿನ ಹೊರೆ ಬೀಳಬಾರದೆಂದು ದರ ಏರಿಕೆಗೆ ರಾಜ್ಯ ಸರ್ಕಾರ ಅನುಮತಿ ನೀಡುತ್ತಿರಲಿಲ್ಲ. ಕೆಇಆರ್‌ಸಿ ದರ ಪರಿಷ್ಕರಣೆ ನಿರ್ಧಾರ ಕೈಗೊಳ್ಳುವ ಅಧಿಕಾರವಿದ್ದರೂ ರಾಜ್ಯ ಸರ್ಕಾರದ ಅನೌಪಚಾರಿಕ ಸಮ್ಮತಿಯನ್ನು ಪಡೆಯುತ್ತಿತ್ತು. ರಾಜ್ಯ ಸರ್ಕಾರವು ವಿದ್ಯುತ್ ಕಂಪೆನಿಗಳಿಗಾಗುತ್ತಿದ್ದ ನಷ್ಟ ಭರಿಸುತ್ತಿತ್ತು. ಈಗ ರಾಜ್ಯ ಸರ್ಕಾರವೇ ಆರ್ಥಿಕ ಸಂಕಷ್ಟದಲ್ಲಿರುವುದರಿಂದ ವಿದ್ಯುತ್ ದರ ಏರಿಕೆ ಕುರಿತಂತೆ ಜಾಣ ಮೌನಕ್ಕೆ ಶರಣಾಗಿದೆ.
ಮಂಡ್ಯ : ಜಲ ಶಕ್ತಿ ಜನ ಭಾಗೀದಾರಿ, ಮಹಾತ್ಮ ಗಾಂಧಿ ನರೇಗಾ, ತೆರಿಗೆ ವಸೂಲಾತಿ ಸೇರಿದಂತೆ ಇತರೆ ಯೋಜನೆ ಮತ್ತು…
ಸೋಮವಾರಪೇಟೆ : ಮರದ ನಾಟಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವಾಹನವನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಹೊಸಳ್ಳಿ ಗ್ರಾಮದಲ್ಲಿ ವಶಪಡಿಸಿಕೊಂಡಿದ್ದಾರೆ. ಹುದುಗೂರು…
ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೈಲಿನಲ್ಲಿ ಇದ್ರೂ ಗುರುವಾರ ಬಿಡುಗಡೆಯಾದ ಅವರ ಅಭಿನಯದ ಡೆವಿಲ್…
ಮಳವಳ್ಳಿ : ವಿದ್ಯುತ್ ಸ್ಪರ್ಶಿಸಿ ಕಾರ್ಮಿಕನೋರ್ವ ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ತಾಲ್ಲೂಕಿನ ಕಲ್ಕುಣಿ ಗ್ರಾಮದ ಬಳಿ ನಡೆದಿದ್ದು, ಸೆಸ್ಕ್ ಅಧಿಕಾರಿಗಳ…
ಹೊಸದಿಲ್ಲಿ : ದೇಶದಾದ್ಯಂತ ನಡೆಸಲು ಉದ್ದೇಶಿಸಿರುವ ೨೦೨೭ರ ಜನಗಣತಿಗೆ ರೂ. ೧೧,೭೧೮ ಕೋಟಿ ಅನುದಾನ ನೀಡಲು ಕೇಂದ್ರ ಸಚಿವ ಸಂಪುಟವು…
ಮುಂಬೈ : ಇಂಡಿಗೊ ವಿಮಾನ ಕಾರ್ಯಾಚರಣೆ ವ್ಯತ್ಯಯ ಪ್ರಕರಣ ಸಂಬಂಧ ನಾಲ್ವರು ವಿಮಾನ ನಿರ್ವಹಣಾ ಇನ್ಸ್ಪೆಕ್ಟರ್ಗಳನ್ನು (ಎಫ್.ಒ.ಐ) ನಾಗರಿಕ ವಿಮಾನಯಾನ…