ಎಡಿಟೋರಿಯಲ್

ಸಂಪಾದಕೀಯ : ದಸರಾ ಕಾಮಗಾರಿ; ತರಾತುರಿ ಸಲ್ಲದು

ನಾಡಹಬ್ಬ ಮೈಸೂರು ದಸರಾ ವಿಧ್ಯುಕ್ತವಾಗಿ ಆರಂಭವಾಗಲು ಇನ್ನೊಂದು ತಿಂಗಳು ಮಾತ್ರ ಬಾಕಿ ಇದೆ. ಸೆಪ್ಟೆಂಬರ್ ೨೬ರ ದಸರಾ ಮಹೋತ್ಸವ ಉದ್ಘಾಟನೆಗೂ ಮುನ್ನ ಸಾಂಸ್ಕೃತಿಕ ನಗರಿಯಲ್ಲಿ ಕೈಗೊಳ್ಳಬಹುದಾದ ಅಭಿವೃದ್ಧಿ ಕಾಮಗಾರಿಗಾಗಿ ಮೈಸೂರು ನಗರ ಪಾಲಿಕೆಯು ಟೆಂಡರ್ ಅನ್ನು ಈಗ ತರಾತುರಿಯಲ್ಲಿ ಕರೆದಿದೆ. ಇದರಿಂದ ಕಾಮಗಾರಿಯ ಗುಣಮಟ್ಟ ಎಷ್ಟರ ಮಟ್ಟಿಗೆ ಇರಲಿದೆ ಎನ್ನುವುದು ಊಹೆಗೂ ನಿಲುಕದ ಸಂಗತಿಯೇನಲ್ಲ. ನಾಡಹಬ್ಬ ದಸರೆಯನ್ನು ವರ್ಷ-ವರ್ಷ ಆಚರಣೆ ಮಾಡುವುದು ಎಲ್ಲರಿಗೂ ತಿಳಿದಿರುವ ವಿಚಾರವೇ. ಕೋವಿಡ್ ಹಿನ್ನೆಲೆಯಲ್ಲಿ ಎರಡು ವರ್ಷ ಅದ್ದೂರಿಯಾಗಿ ನಡೆದಿರಲಿಲ್ಲ. ಇದನ್ನು ಬಿಟ್ಟರೆ ಅವ್ಯಾಹತವಾಗಿ ನಡೆದುಕೊಂಡು ಬರುತ್ತಿದೆ. ಆದರೂ ಆಡಳಿತ ಯಂತ್ರ ಹಾಗೂ ಅಧಿಕಾರಿ ವರ್ಗ ‘ಸಂತೆಯ ಹೊತ್ತಿಗೆ ಮೂರು ಮೊಳ ನೇಯುವುದು’ ಎನ್ನುವ ಗಾದೆ ಮಾತುಗೆ ಜೋತು ಬಿದ್ದಂತಿದೆ.

ದಸರಾಗೆ ಮುನ್ನ ನಗರದ ಸೌಂದರ್ಯೀಕರಣ ಸಾಂಗವಾಗಿ ನೆರವೇರಿರಬೇಕು. ಕೆಪಿಟಿಸಿಎಲ್ ಕೈಗೊಳ್ಳುವ ದೀಪಾಲಂಕಾರವೊಂದೇ ಇನ್ನುಳಿದ ಅಭಿವೃದ್ಧಿ ಕೆಲಸಗಳಲ್ಲಿನ ತೊಡಕುಗಳನ್ನು ಮರೆಮಾಚುವುದಿಲ್ಲ. ಅದು ತಾತ್ಕಾಲಿಕ ತೇಪೆಯಾಗಿಯೇ ಕಂಗೊಳಿಸುತ್ತದೆ ಅಷ್ಟೇ. ಹಾಗಾಗಿ ನಗರಪಾಲಿಕೆ ತರಾತುರಿಯಲ್ಲಿ ಕರೆಯುವ ಟೆಂಡರ್ ಪ್ರಕ್ರಿಯೆಗೆ ಸಾಣೆ ಹಿಡಿದು ಶಾಶ್ವತ ಪರಿಹಾರ ನೀಡುವ ಕಡೆಗೆ ಗಮನ ಹರಿಸಬೇಕಾಗಿದೆ. ಕಟ್ಟಡಗಳ ಕಾಂಪೌಂಡ್ ದುರಸ್ತಿ, ರಾಜ ಮಾರ್ಗದ ಫುಟ್‌ಪಾತ್ ದುರಸ್ತಿ, ಗ್ರಿಲ್, ಮಿಡೀಯನ್‌ಗಳಿಗೆ ಮತ್ತು ವೃತ್ತಗಳಿಗೆ ಬಣ್ಣ ಬಳಿಯುವುದು, ಅರಮನೆ ಸುತ್ತಲಿನ ರಸ್ತೆ ಸೇರಿದಂತೆ ನಗರ ಕೇಂದ್ರದ ಮುಖ್ಯ ರಸ್ತೆಗಳ ದುರಸ್ತಿ, ದಸರಾ ವೀಕ್ಷಣೆಗೆ ಆಸನಗಳ ವ್ಯವಸ್ಥೆ, ಕೆಲ ರಸ್ತೆಗಳ ಮರು ಡಾಂಬರೀಕರಣ ಸೇರಿದಂತೆ ಒಟ್ಟು ೨ ಕೋಟಿ ರೂ. ವೆಚ್ಚದಲ್ಲಿ ನಗರವನ್ನು ಸುಂದರವಾಗಿಸಲು ಪಾಲಿಕೆ ಟೆಂಡರ್ ಕರೆದಿದೆ. ಮುಂದಿನ ೧೦ ದಿನಗಳೊಳಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಸೆ.೨೫ರೊಳಗೆ ಸಿದ್ಧಗೊಳಿಸಬೇಕಿದೆ. ಈಗ ಕರೆದಿರುವ ಟೆಂಡರ್‌ನಲ್ಲಿ ಜಂಬೂ ಸವಾರಿ ವೀಕ್ಷಣೆ ಸಿದ್ಧತೆಗಾಗಿ ೧೨ ಲಕ್ಷ ರೂ., ಗೋಡೆಗಳಲ್ಲಿ ಕಲಾಕೃತಿ ರಚಿಸಲು ೧೨ ಲಕ್ಷ ರೂ., ಜಂಬೂ ಸವಾರಿ ಮಾರ್ಗದ ಸಿದ್ಧತೆಗಾಗಿ ೫೪ ಲಕ್ಷ ರೂ., ಗುಂಡಿ ಮುಚ್ಚುವ ಕಾಮಗಾರಿಗೆ ೪೦ ಲಕ್ಷ ರೂ. ವ್ಯಯಿಸಲು ಅಂದಾಜು ಪಟ್ಟಿ ತಯಾರಿಸಲಾಗಿದೆ

. ಮೈಸೂರು ಮಹಾನಗರ ಪಾಲಿಕೆ ಆಯುಕ್ತರು ತಿಳಿಸುವಂತೆ ದಸರಾ ಸಿದ್ಧತೆ ಕಾಮಗಾರಿಗಾಗಿಯೇ ಸರ್ಕಾರಕ್ಕೆ ೧೫ ಕೋಟಿ ರೂ. ಪ್ರಸ್ತಾವನೆ ಸಲ್ಲಿಸಿದ್ದಾರೆ. ಈಗ ಕರೆದಿರುವ ಟೆಂಡರ್ ಕೇವಲ ಸೌಂದರ್ಯೀಕರಣಕ್ಕಾಗಿ ಮಾತ್ರ. ಅದೂ ೨ ಕೋಟಿ ರೂ. ವೆಚ್ಚದ್ದು. ಪಾಲಿಕೆ ಕೋರಿರುವ ೧೫ ಕೋಟಿ ರೂ. ಪ್ರಸ್ತಾವನೆಗೆ ಸರ್ಕಾರದಿಂದ ಇನ್ನಷ್ಟೇ ಸ್ಪಂದನೆ ದೊರೆಯಬೇಕಿದೆ. ಪ್ರತಿ ಬಾರಿ ದಸರಾ ಬರುವ ಹೊತ್ತಿಗಷ್ಟೇ ಅಭಿವೃದ್ಧಿ ಕಾಮಗಾರಿಗಳು ಗರಿಗೆದರುವುದು ಅಭಿವೃದ್ಧಿಯ ಸಂಕೇತವಲ್ಲ. ಬದಲಾಗಿ ತೇಪೆ ಹಚ್ಚುವ ಕೈಂಕರ್ಯವಷ್ಟೇ. ಈ ಬಗ್ಗೆ ಸಾರ್ವಜನಿಕರು ಜನಾಭಿಪ್ರಾಯ ರೂಪಿಸಿ ಸರ್ಕಾರದ ಮೇಲೆ ಒತ್ತಡ ತಂದು ದಸರಾ ಸಿದ್ಧತೆ ಕೇವಲ ೧೦-೧೫ ದಿನಗಳಿರುವಂತೆ ಆರಂಭವಾಗದೆ, ನಿರ್ದಿಷ್ಟ ಅವಧಿಯಲ್ಲಿ ಮುಗಿಸುವಂತೆ ಒಕ್ಕೊರಲಿನಿಂದ ದನಿ ಎತ್ತಬೇಕಾಗಿದೆ. ಅದಕ್ಕಾಗಿ ಪ್ರತ್ಯೇಕವಾಗಿ ದಸರಾ ಪ್ರಾಧಿಕಾರವನ್ನು ರಚಿಸಿ, ಐಎಎಸ್, ಕೆಎಎಸ್ ಅಧಿಕಾರಿಗಳ ಅಡಿಯಲ್ಲಿ ಸಿಬ್ಬಂದಿ ನಿಯೋಜಿಸಿ ವರ್ಷಪೂರ್ತಿ ಒಂದಲ್ಲ ಒಂದು ಚಟುವಟಿಕೆ, ಅಭಿವೃದ್ಧಿ ಕಾಮಗಾರಿ ಹಮ್ಮಿಕೊಳ್ಳುವಂತೆ ನೋಡಿಕೊಳ್ಳಬೇಕಿದೆ.

ದಸರಾಗೆ ಬರುವ ಪ್ರವಾಸಿಗರಿಗೆ ಯಾವುದೇ ತೊಂದರೆಯಾಗದಂತೆ ಜತನದಿಂದ ಕರ್ತವ್ಯ ನಿರ್ವಹಿಸಲು ಜಿಲ್ಲಾಡಳಿತ ಸದಾ ಮುಂದಿರಬೇಕು. ಹೀಗಿದ್ದಾಗ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗಿ ಪ್ರವಾಸೋದ್ಯಮ ಅಭಿವೃದ್ಧಿಗೆ ಇಂಬು ನೀಡಿದಂತಾಗುತ್ತದೆ. ದಸರಾ ಎಂದರೆ ಕೇವಲ ಪ್ರವಾಸೋದ್ಯಮ ಮಾತ್ರವಲ್ಲ, ಟೂರ್ಸ್ ಅಂಡ್ ಟ್ರಾವೆಲ್ಸ್, ಹೋಟೆಲ್ ಉದ್ಯಮ, ಸಣ್ಣ ಪುಟ್ಟ ಅಂಗಡಿ ವ್ಯಾಪಾರಿಗಳಿಗೂ ಅನುಕೂಲವಾಗುವಂತಹದ್ದು. ಈ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ೨೦೨೨ನೇ ಸಾಲಿನ ದಸರಾವನ್ನು ಅತ್ಯಂತ ಮನೋಜ್ಞವಾಗಿ ಆಚರಿಸುವಂತಾಗಬೇಕು. ಕಳೆದೆರಡು ವರ್ಷಗಳಿಂದ ನಿಸ್ತೇಜವಾಗಿದ್ದ ದಸರಾವನ್ನು ಕಂಗೊಳಿಸುವಂತೆ ಮಾಡಬೇಕು. ಆ ಮೂಲಕ ಸಾಂಸ್ಕೃತಿಕ ಪ್ರತಿಫಲನ ಎಲ್ಲೆಡೆ ಪಸರಿಸುವಂತೆ ಕ್ರಮ ಕೈಗೊಳ್ಳಬೇಕಿದೆ. ಮೈಸೂರಿಗೆ ಪ್ರವಾಸಿಗರು ಕಾಲಿಡುವ ಮುಂಚೆಯೇ ಕಾಮಗಾರಿಗಳು ಪೂರ್ಣಗೊಂಡು ಲವಲೇಷವೂ ತೊಂದರೆಯಾಗದಂತೆ ಮುತುವರ್ಜಿ ವಹಿಸಬೇಕಾಗಿದೆ. ಮೈಸೂರಿನ ಸಾಂಸ್ಕೃತಿಕ ಹಿರಿಮೆ ನಾಡಿನುದ್ದಗಲಕ್ಕೂ ಹರಡುವಂತೆ ಮಾಡುವ ಜವಾಬ್ದಾರಿ ಆಳುವ ಸರ್ಕಾರದ ಮೇಲಿದೆ. ಸ್ಥಳೀಯ ಸಂಸ್ಥೆಗಳು ಇದಕ್ಕೆ ಪೂರಕವಾಗಿ ನಡೆದುಕೊಳ್ಳಬೇಕಿದೆ. ದಸರಾಗೂ ಮುನ್ನ ಮೈಸೂರು ಮಹಾನಗರ ಪಾಲಿಕೆಗೆ ಹೊಸ ಮಹಾಪೌರರು ಮತ್ತು ಉಪಮಹಾಪೌರರು ಬರುವುದರಿಂದ ಅಭಿವೃದ್ಧಿಗೆ ಇನ್ನಷ್ಟು ಪೂರಕವಾದ ಕೆಲಸ ಕಾರ್ಯಗಳು, ನಿರ್ಧಾರ ತಳೆಯಲು ಸಹಾಯವಾಗಲಿದೆ. ಅದು ಈಡೇರುವಂತಾಗಲಿ ಎಂಬುದು ಮೈಸೂರಿಗರ ಒಲವೂ ಆಗಿದೆ.

andolanait

Recent Posts

ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣ: ಜೆಡಿಎಸ್‌ ಎಂಎಲ್‌ಸಿ ಸೂರಜ್‌ ರೇವಣ್ಣಗೆ ಬಿಗ್‌ ಶಾಕ್‌

ಬೆಂಗಳೂರು: ತಮ್ಮ ವಿರುದ್ಧ ದಾಖಲಾಗಿರುವ ಅಸಹಜ ಲೈಂಗಿಕ ಪ್ರಕರಣವನ್ನು ಕೈಬಿಡುವಂತೆ ಕೋರಿ, ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಹಾಗೂ ಮಾಜಿ…

1 hour ago

ಟಿ.ನರಸೀಪುರ| ಆನೆ ದಾಳಿಗೆ ರೈತ ಬಲಿ

ಟಿ.ನರಸೀಪುರ: ಕಾಡಾನೆ ದಾಳಿಗೆ ಸಿಲುಕಿ ರೈತರೊಬ್ಬರು ಬಲಿಯಾಗಿರುವ ಘಟನೆ ಮೈಸೂರು ಜಿಲ್ಲೆ ಟಿ.ನರಸೀಪುರ ತಾಲ್ಲೂಕಿನ ತಲಕಾಡು ಪೊಲೀಸ್‌ ಠಾಣೆ ವ್ಯಾಪ್ತಿಯ…

5 hours ago

ಮೈಸೂರು ನಗರ ಸಿಸಿಬಿ ಪೊಲೀಸರ ಕಾರ್ಯಾಚರಣೆ: ಮಾದಕ ವಸ್ತು ಪೂರೈಸುತ್ತಿದ್ದ ಇಬ್ಬರ ಬಂಧನ

ಮೈಸೂರು: ಮೈಸೂರು ನಗರದ ಸಿಸಿಬಿ ಪೊಲೀಸರು ಇಂದು ಮಾದಕ ವಸ್ತುಗಳ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.…

5 hours ago

ಮಕ್ಕಳು ಪಠ್ಯೇತರ ಚಟುವಟಿಕೆಯಲ್ಲೂ ಆಸಕ್ತಿ ಬೆಳೆಸಿಕೊಳ್ಳಿ: ದಿನೇಶ್‌ ಗೂಳಿಗೌಡ

ಮಂಡ್ಯ: ಮಕ್ಕಳು ಪಠ್ಯೇತರ ಚಟುವಟಿಕೆಗಳಾದ ಚಿತ್ರಕಲೆ, ಸಂಗೀತ, ಕ್ರೀಡಾ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ವಿಧಾನಪರಿಷತ್‌ ಸದಸ್ಯ ಹಾಗೂ ಕರ್ನಾಟಕ ರಾಜ್ಯ…

6 hours ago

ಶಾಸಕರ ವಿದೇಶಿ ಪ್ರವಾಸಕ್ಕೂ ರಾಜಕೀಯ ಬೆಳವಣಿಗೆಗಳಿಗೂ ಸಂಬಂಧವಿಲ್ಲ: ಯತೀಂದ್ರ ಸಿದ್ದರಾಮಯ್ಯ

ಮೈಸೂರು: ಶಾಸಕರ ವಿದೇಶಿ ಪ್ರವಾಸಕ್ಕೂ ರಾಜಕೀಯ ಬೆಳವಣಿಗೆಗಳಿಗೂ ಸಂಬಂಧವಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು.…

6 hours ago

ಸಿ.ಜೆ.ರಾಯ್‌ ಆತ್ಮಹತ್ಯೆ ಪ್ರಕರಣ: ಅಂತಿಮ ಹಂತಕ್ಕೆ ತಲುಪಿದ ಎಸ್‌ಐಟಿ ತನಿಖೆ

ಬೆಂಗಳೂರು: ಉದ್ಯಮಿ ಸಿ.ಜೆ.ರಾಯ್‌ ಆತ್ಮಹತ್ಯೆ ಪ್ರಕರಣದ ತನಿಖೆ ಅಂತಿಮ ಹಂತ ತಲುಪಿದ್ದು, ವಿಶೇಷ ತನಿಖಾ ತಂಡ ತನಿಖೆಯನ್ನು ಪೂರ್ಣಗೊಳಿಸಿ ವರದಿ…

6 hours ago