ಎಡಿಟೋರಿಯಲ್

ಸಂಪಾದಕೀಯ : ಮೇಲ್ವರ್ಗದವರು ಎಂದು ಭಾವಿಸಿರುವವರ ಕೀಳು ಮನಸ್ಥಿತಿಯ ಶುದ್ಧೀಕರಣವಾಗಬೇಕಿದೆ

ಚಾಮರಾಜನಗರ ತಾಲ್ಲೂಕಿನ ಹೆಗ್ಗೋಠಾರ ಗ್ರಾಮದಲ್ಲಿ ಪರಿಶಿಷ್ಟ ಸಮುದಾಯ ಮಹಿಳೆಯೊಬ್ಬರು ತೊಂಬೆಯ ನಲ್ಲಿಯಿಂದ ನೀರು ಕುಡಿದರು ಎಂಬ ಕಾರಣಕ್ಕೆ ತೊಂಬೆಯ ಎಲ್ಲ ನೀರು ಖಾಲಿ ಮಾಡಿಸಿ ಗೋಮೂತ್ರದಿಂದ ಶುದ್ದೀಕರಿಸಿದ ಘಟನೆಯು ನಾಗರೀಕ ಸಮಾಜ ತಲೆ ತಗ್ಗಿಸುವಂತಾಗಿದೆ. ಕೋಲಾರ ಜಿಲ್ಲೆಯಲ್ಲಿ ಪರಿಶಿಷ್ಟ ಬಾಲಕನೊಬ್ಬ ದೇವರ ಗುಜ್ಜು ಮುಟ್ಟಿದನೆಂಬ ಕಾರಣಕ್ಕೆ ಆತನ ಕುಟುಂಬಕ್ಕೆ ಮೇಲ್ವರ್ಗದವರು ಬಹಿಷ್ಕಾರ ಹಾಕಿದ್ದರು. ಈ ಘಟನೆ ಇನ್ನು ಮಾಸಿಲ್ಲದಿರುವಾಗಲೇ ಜಿಲ್ಲೆಯಲ್ಲಿ ದಲಿತ ಮಹಿಳೆ ನೀರು ಮುಟ್ಟಿದ್ದಾರೆ ಎಂಬ ಕಾರಣಕ್ಕೆ ಆಕೆಯನ್ನು ಜಾತಿ ಹೆಸರಿಡಿದು ನಿಂದಿಸಿದ್ದು ಅಕ್ಷಮ್ಯವಾಗಿದೆ. ಈ ಘಟನೆಯು ಮೇಲ್ವರ್ಗದವರು ಎಂದು ಭಾವಿಸಿರುವವರ ಕೀಳು ಮನಸ್ಥಿತಿಯ ಅಭಿವ್ಯಕ್ತಿಯಾಗಿದೆ.

ಜಾಗತಿಕ ಹಳ್ಳಿ ಪರಿಕಲ್ಪನೆಯ ಮತ್ತು ತಂತ್ರಜ್ಞಾನದ ಈ ಆಧುನಿಕ ಕಾಲದಲ್ಲೂ ಇಂತಹ ಸಾಮಾಜಿಕ ಅನಿಷ್ಟ ಪದ್ದತಿಗಳು ಗ್ರಾಮೀಣ ಪ್ರದೇಶಗಳಲ್ಲಿ ಜೀವಂತವಾಗಿವೆ. ಅಸ್ಪೃಶ್ಯತೆ ಆಚರಣೆ ನಿಷೇಧವಿದ್ದರೂ ಮೇಲ್ವರ್ಗವೆಂದು ಭಾವಿಸಿರುವ ಜನರು ಏಕೆ ಜಾತಿ ಭೇದದಂತಹ ಅನಿಷ್ಟ ಪದ್ದತಿಗಳಿಗೆ ಜೋತು ಬಿದ್ದಿದ್ದಾರೆ. ಸಂವಿಧಾನದ ಪ್ರಕಾರ ಎಲ್ಲರೂ ಸಮಾನರು. ಹೀಗಿರುವಾಗ ಇಂತಹ ನಾಚಿಕೆಗೇಡಿನ ನಡವಳಿಕೆ ಸರಿಯಲ್ಲ. ಇಪ್ಪತ್ತೊಂದನೇ ಶತಮಾನದಲ್ಲಿ ಎರಡು ದಶಕ ಪೂರೈಸಿ ಮೂರನೇ ದಶಕದಲ್ಲಿದ್ದೇವೆ. ಆದರೆ, ನಾಗರಿಕತೆ ಮಾತ್ರ ದೂರವಾಗುತ್ತಲೇ ಇದೆ. ಇಂತಹ ಸಮಾಜಿಕ ಪಿಡುಗುಗಳನ್ನು ತಡೆಗಟ್ಟುವುದಕ್ಕೆ ಕಠಿಣ ಕಾನೂನು ಕ್ರಮಗಳು ಅಗತ್ಯ ಜತೆಗೆ ಜನರಲ್ಲಿ ಅರಿವು ಮೂಡಿಸುವ ಅಗತ್ಯವೂ ಇದೆ.

ನ.೧೮ ರಂದು ಗ್ರಾಮದ ಪರಿಶಿಷ್ಟರ ಬೀದಿಯಲ್ಲಿ ಮಹೇಶ್ ಎಂಬ ಯುವಕನ ಮದುವೆ ನಡೆದಿತ್ತು. ಸರಗೂರು ತಾಲ್ಲೂಕಿನ ಯಶವಂತಪುರದಿಂದ ಬಂದಿದ್ದ ಶಿವಮ್ಮ ಎಂಬುವರು ಗ್ರಾಮದ ಕೃಷ್ಣದೇವರಾಯ ದೇವಾಲಯದ ಮುಂಭಾಗವಿದ್ದ ತೊಂಬೆಯ ನಲ್ಲಿಯನ್ನು ತಿರುಗಿಸಿ ನೀರು ಕುಡಿದಿದ್ದಾರೆ. ಸಮೀಪವೇ ಇದ್ದ ಸವರ್ಣೀಯ ವ್ಯಕ್ತಿಯೊಬ್ಬರು ಮಹಿಳೆಯನ್ನು ಯಾವ ಊರು ಮತ್ತು ಯಾವ ಜಾತಿ ಎಂದು ವಿಚಾರಿಸಿದ್ದಾರೆ. ಆಕೆ ಪರಿಶಿಷ್ಟ ಮಹಿಳೆಯೆಂಬ ವಿಚಾರ ತಿಳಿಯುತ್ತಿದ್ದಂತೆ ಆಕೆಯನ್ನು ನಿಂದಿಸಿದ್ದಾರೆ. ಬಳಿಕ ತೊಂಬೆಯ ಎಲ್ಲ ನಲ್ಲಿಗಳನ್ನು ತಿರುಗಿಸಿ ನೀರು ಖಾಲಿ ಮಾಡಿಸಿ ಗೋಮೂತ್ರದಿಂದ ಶುದ್ದೀಕರಣ ಮಾಡಲಾಗಿದೆ.
ಈ ಎಲ್ಲ ಘಟನಾವಳಿಯನ್ನು ಮದುವೆಗೆ ಜನರನ್ನು ಕರೆತಂದಿದ್ದ ಬಸ್ನೊಳಗೆ ಕುಳಿತಿದ್ದ ಯುವಕರು ಮೊಬೈಲ್ ವೀಡಿಯೋ ಮಾಡಿ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಖಂಡನೆ ವ್ಯಕ್ತವಾಗಿದೆ. ಈ ಕುರಿತು ಮಾಧ್ಯಮಗಳಲ್ಲಿ ವರದಿ ಬಿತ್ತರವಾಗುತ್ತಿದ್ದಂತೆ ಚಾ.ನಗರ ತಹಸೀಲ್ದಾರ್ ಬಸವರಾಜು ಅವರು ಕಸಬಾ ರಾಜಸ್ವ ನಿರೀಕ್ಷಕರನ್ನು ಗ್ರಾಮಕ್ಕೆ ಕಳುಹಿಸಿ ವರದಿ ಪಡೆದಿದ್ದಾರೆ.
ಸಾಮಾಜಿಕ ಜಾಲತಾಣ, ಸುದ್ದಿಮಾಧ್ಯಮಗಳಲ್ಲಿ ಈ ಘಟನೆಯ ಬಗ್ಗೆ ಚರ್ಚೆಯಾದ ಬಳಿಕ ಗ್ರಾಮಸ್ಥರಿಗೆ ಇಂತಹದೊಂದು ಅಹಿತಕರ ಘಟನೆ ನಡೆದಿದೆ ಎಂಬುದು ಗೊತ್ತಾಗಿದೆ. ಹೊರ ಜಿಲ್ಲೆಯವರಿಂದ ಈ ಘಟನೆ ಬೆಳಕಿಗೆ ಬಂದಿದೆ. ನಂತರ ಶನಿವಾರ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ, ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ, ಉಪ ವಿಭಾಗಾಧಿಕಾರಿ, ತಹಸೀಲ್ದಾರ್ ಅವರು ಗ್ರಾಮಕ್ಕೆ ದೌಡಾಯಿಸಿ ಪರಿಶೀಲಿಸಿ ಗ್ರಾಮದ ಪರಿಶಿಷ್ಟ ಮುಖಂಡರ ಸಭೆ ನಡೆಸಿದ್ದಾರೆ. ಸವರ್ಣೀಯ ಮುಖಂಡರು ಕಾರ್ಯ ನಿಮಿತ್ತ ಕೈಗೆ ಸಿಗದ ಹಿನ್ನೆಲೆಯಲ್ಲಿ ಅವರ ಸಭೆ ನಡೆಸಲು ಸಾಧ್ಯವಾಗಲಿಲ್ಲ.
ಬಳಿಕ ಅಧಿಕಾರಿಗಳು ಪರಿಶಿಷ್ಟ ಮುಖಂಡರು, ಯುವಕರನ್ನು ಗ್ರಾಮದ ಎಲ್ಲ ತೊಂಬೆಗಳ ಬಳಿ ಕರೆದೊಯ್ದು ನೀರು ಕುಡಿಸಿದ್ದಾರೆ. ಕುಡಿಯುವ ನೀರಿನ ತೊಂಬೆಗಳು ಎಲ್ಲ ಸಾರ್ವಜನಿಕರಿಗೆ ಸೇರಿದ್ದು ಯಾವುದೇ ಒಂದು ಸಮುದಾಯಕ್ಕೆ ಸೀಮಿತವಲ್ಲ ಎಂದು ಜಾಗೃತಿ ಮೂಡಿಸಿದ್ದಾರೆ.

ನಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಗ್ರಾಮಕ್ಕೆ ತೆರಳಿ ಉಭಯ ಸಮುದಾಯಗಳ ಮುಖಂಡರ ಪ್ರತ್ಯೇಕ ಶಾಂತಿ ಸಭೆ ನಡೆಸಿದ್ದಾರೆ. ಯಾವುದೇ ಪ್ರಚೋದನೆಗೆ ಒಳಗಾಗಿ ಗ್ರಾಮದಲ್ಲಿ ಶಾಂತಿ ಕದಡದಂತೆ ಎಚ್ಚರಿಕೆ ನೀಡಿ ಬಂದಿದ್ದಾರೆ. ಘಟನೆಗೆ ಕಾರಣರಾದ ವ್ಯಕ್ತಿಯನ್ನು ಸೋಮವಾರ ರಾತ್ರಿ ಚಾಮರಾಜನಗರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಜಿಲ್ಲಾ ಮತ್ತು ತಾಲ್ಲೂಕು ಆಡಳಿತ ಎಚ್ಚೆತ್ತು ತ್ವರಿತ ಕ್ರಮಗಳನ್ನು ಕೈಗೊಂಡು ಘಟನೆ ಬೃಹದಾಕಾರವಾಗಿ ಬೆಳೆಯದಂತೆ ಕ್ರಮ ವಹಿಸಿದ್ದಾರೆ.
ಗ್ರಾಮದಲ್ಲಿ ೧೧ ಸಮುದಾಯಗಳು ವಾಸವಾಗಿವೆ. ೩ ವರ್ಷಗಳ ಹಿಂದೆ ಮೇಲ್ವರ್ಗದವರೆಂದು ಭಾವಿಸಿರುವವರ ಜಮೀನಿನಲ್ಲಿ ಪರಿಶಿಷ್ಟರ ಹಸು ಮೇಯಿತು ಎಂಬ ಕಾರಣಕ್ಕೆ ಇಂತದ್ದೆ ಘಟನೆ ನಡೆದು ಜಿಲ್ಲಾ ಹಾಗೂ ತಾಲ್ಲೂಕು ಆಡಳಿತವು ಮಧ್ಯ ಪ್ರವೇಶಿಸಿ ಬಗೆಹರಿಸಿತ್ತು. ಪರಿಶಿಷ್ಟರ ಬೀದಿಯಲ್ಲಿ ಚರಂಡಿ ಮಾಡುವಾಗಲೂ ಕೊಳಚೆ ನೀರು ನಮ್ಮ ಬೀದಿಗೆ ಹರಿದು ಬರುತ್ತದೆ ಎಂದು ತಕರಾರು ತೆಗೆದಿದ್ದು ಇದೆ. ಆಗಾಗ್ಗೆ ಇಂತಹ ಕಹಿ ಘಟನೆಗಳು ನಡೆದಿವೆ. ಆದರೆ, ಸ್ಥಳೀಯವಾಗಿಯೇ ಬಗೆಹರಿಸಿಕೊಂಡು ಸಹಬಾಳ್ವೆ ನಡೆಸುತ್ತಿದ್ದಾರೆ. ಕಾನೂನಿನ ಅರಿವು ಮತ್ತು ಲೋಕಜ್ಞಾನ ಇಲ್ಲದ ವ್ಯಕ್ತಿ ಮಾಡುವ ತಪ್ಪಿಗೆ ಇಡೀ ಸಮುದಾಯವೇ ತಲೆ ತಗ್ಗಿಸುವಂತಾಗಿದೆ. ಸಮಾಜ ಕಲ್ಯಾಣ ಇಲಾಖೆಯಿಂದ ಅಸ್ಪೃಶ್ಯತೆ ಆಚರಣೆ ನಿಷೇಧ ಕುರಿತು ಜಾಗೃತಿ ಕಾರ್ಯಕ್ರಮಗಳು ನಡೆದಿವೆ. ಎಲ್ಲಾ ಸಮುದಾಯಗಳಲ್ಲೂ ಪ್ರಜ್ಞಾವಂತರು ಇದ್ದಾರೆ. ಅವರಿಗೆ ಇಂತಹ ಅಮಾನವೀಯ ಘಟನೆಗಳು ನಡೆಯದಂತೆ ಅರಿವು ಮೂಡಿಸುವ ಅವಶ್ಯಕತೆಯಿದೆ. ಶತಮಾನಗಳಿಂದ ಗ್ರಾಮಗಳಲ್ಲಿ ವಾಸಿಸುವ ಸಮುದಾಯಗಳು ಎಲ್ಲರೂ ಒಂದೇ ಎಂಬ ಬೆಳೆಸಿಕೊಳ್ಳಬೇಕಿದೆ, ಅಸಹಿಷ್ಣತೆಗಳಿಂದಲೇ ಅಹಿತಕರ, ಅಮಾನವೀಯ ಘಟನೆಗಳ ಪುನರಾವರ್ತನೆಗೊಳ್ಳುತ್ತಿವೆ. ಇಂತಹ ಘಟನೆಗಳು ಮರುಕಳಿಸಿದಂತೆ ನೋಡಿಕೊಳ್ಳುವುದು ಕಾನೂನು ಪಾಲಕರದಷ್ಟೇ ಅಲ್ಲ, ಊರಿನ ನಾಗರಿಕರ ಕರ್ತವ್ಯವೂ ಹೌದು.

andolanait

Recent Posts

ಬಿಡದಿ ಹೋರಾಟಕ್ಕೆ ಜೆನ್‌-ಝೀ ಗಳು ಬರಲಿ ; ದೇವನೂರು ಮಹದೇವ ಕರೆ

ಮೈಸೂರು: ಫಲವತ್ತಾದ ಕೃಷಿ ಭೂಮಿಯನ್ನು ಉಳಿಸಿಕೊಳ್ಳುವ ಆಕಾಂಕ್ಷೆ ಪ್ರಭುತ್ವಕ್ಕೆ ಇರಬೇಕು. ಭೂಮಿ ನೀಡುವ ರೈತರ ಬದುಕಿನ ಹೊಣೆಗಾರಿಕೆಯನ್ನು ಸರ್ಕಾರ ವಹಿಸಿಕೊಳ್ಳುತ್ತದೆಯೇ…

39 mins ago

ಕನ್ನಡ ಭಾಷ ಶಿಕ್ಷಕರ ಪ್ರತ್ಯೇಕ ನೇಮಕಕ್ಕೆ ಸರ್ಕಾರ ಅಸ್ತು ; ಸ್ವಾಗತಾರ್ಹ

ಮೈಸೂರು : ಶಾಲಾ ಶಿಕ್ಷಣ ಇಲಾಖೆಯ ಜಿಪಿಎಸ್‌ಟಿಆರ್ ಹಾಗೂ ಎಚ್‌ಎಸ್‌ಟಿಆರ್ ಶಿಕ್ಷಕರ ನೇಮಕಾತಿಯಲ್ಲಿ ಕನ್ನಡ ಭಾಷಾ ಶಿಕ್ಷಕರ ಹುದ್ದೆಗಳನ್ನು ಪ್ರತ್ಯೇಕವಾಗಿ…

4 hours ago

ಶೀಘ್ರದಲ್ಲೇ ರಾಜ್ಯದಲ್ಲಿ ಗುಟ್ಕಾ ನಿಷೇಧ ಆದೇಶ ವಾಪಸ್?‌

ಬೆಂಗಳೂರು: ಗುಟ್ಕಾ ನಿಷೇಧ ಆದೇಶವನ್ನು ರಾಜ್ಯ ಸರ್ಕಾರ ಶೀಘ್ರದಲ್ಲೇ ವಾಪಸ್‌ ಪಡೆಯುವ ಸಾಧ್ಯತೆಯಿದೆ. ಆಡಳಿತರೂಢ ಕಾಂಗ್ರೆಸ್‌ ಶಾಸಕರಿಂದಲೇ ಸರ್ಕಾರದ ನಿರ್ಧಾರಕ್ಕೆ…

8 hours ago

6 ದಿನಗಳಾದರೂ ಸಿಗದ ಟೆಕ್ಕಿ ಅದ್ವೈತ್‌ ಸುಳಿವು: ಶಿವಗಂಗೆ ಬೆಟ್ಟದಲ್ಲಿ ಶೋಧ ಕಾರ್ಯಾಚರಣೆ ಸ್ಥಗಿತ

ಬೆಂಗಳೂರು: ಬೆಂಗಳೂರು ಹೊರವಲಯ ನೆಲಮಂಗಲ ತಾಲ್ಲೂಕಿನ ಶಿವಗಂಗೆ ಬೆಟ್ಟದಲಲಿ ಟ್ರೆಕ್ಕಿಂಗ್‌ಗೆ ತೆರಳಿ ನಾಪತ್ತೆಯಾಗಿದ್ದ ಟೆಕ್ಕಿ ಟದ್ವೈತ್‌ಗಾಗಿ ನಡೆಸುತ್ತಿದ್ದ ಶೋಧ ಕಾರ್ಯಾಚರಣೆಗೆ…

10 hours ago

ವಿಧಾನಸಭೆಯ ನೂತನ ಸ್ಪೀಕರ್‌ ಆಗಿ ಜಿ.ಎಸ್.ಪಾಟೀಲ್‌ ಅವಿರೋಧ ಆಯ್ಕೆ

ಬೆಂಗಳೂರು: ವಿಧಾನಸಭೆಯ ನೂತನ ಸ್ಪೀಕರ್‌ ಆಗಿ ಜಿ.ಎಸ್.ಪಾಟೀಲ್‌ ಸರ್ವಾನುಮತದಿಂದ ಆಯ್ಕೆಯಾದರು. ಸಂಪ್ರದಾಯದಂತೆ ವಿಪಕ್ಷ ನಾಯಕ ಆರ್.‌ಅಶೋಕ್‌ ಹಾಗೂ ಸಿಎಂ ಡಿ.ಕೆ.ಶಿವಕುಮಾರ್‌…

11 hours ago

ಉತ್ತರಾಖಂಡದಲ್ಲಿ ನಿರ್ಮಾಣ ಹಂತದ ಸುರಂಗಕ್ಕೆ ನುಗ್ಗಿದ ನೀರು: 7 ಮಂದಿ ಕಾರ್ಮಿಕರು ಸಾವು

ಡೆಹ್ರಾಡೂನ್:‌ ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಜಲವಿದ್ಯುತ್‌ ಯೋಜನೆಗೆ ಸಂಬಂಧಿಸಿದ ಸುರಂಗದೊಳಗೆ ಏಕಾಏಕಿ ನೀರು ಮತ್ತು ಮಣ್ಣಿನ ಅವಶೇಷಗಳು…

12 hours ago