ಎಡಿಟೋರಿಯಲ್

ಸಂಪಾದಕೀಯ : ಅವೈಜ್ಞಾನಿಕ ಹೋಂ ಮೇಡ್ ವೈನ್‌ಗಳ ವಿರುದ್ಧ ಕ್ರಮ ಅಗತ್ಯ

ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುವ ಕೊಡಗು, ಹೋಂ ಮೇಡ್ ವೈನ್‌ಗೂ ಅಷ್ಟೇ ಹೆಸರುವಾಸಿ. ಆದರೆ ಅದೇ ವೈನ್ ಕೊಡಗಿನ ಹೆಸರಿಗೆ ಕಳಂಕ ತರುವ ದಿನಗಳು ದೂರವಿಲ್ಲ. ಕೊಡಗಿನ ಮನೆಯಲ್ಲಿ ವೈನ್ ತಯಾರಿಸುವುದು ಇಂದು ನೆನ್ನೆಯದಲ್ಲ. ಹಲವು ವರ್ಷಗಳಿಂದ ಮನೆಗಳಲ್ಲಿ ವೈನ್ ತಯಾರಿಸಲಾಗುತ್ತಿದೆ. ಹಿಂದೆ ಕೊಡಗಿನಲ್ಲಿ ಮದುವೆ, ನಾಮಕರಣದಂತಹ ಕಾರ್ಯಕ್ರಮಗಳಲ್ಲಿ ವೈನ್‌ಗಳನ್ನು ಬಳಸುತ್ತಿದ್ದರು. ಇಂದಿಗೂ ಇಂತಹ ಸಮಾರಂಭದಲ್ಲಿ ವೈನ್ ಇದ್ದರೂ ಮದ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಹಿಂದೆ ಮಹಿಳೆಯರು ತಯಾರಿಸುವ ವೈನ್‌ನಲ್ಲಿ ಆಲ್ಕೋಹಾಲ್ ಇರುತ್ತಿರಲಿಲ್ಲ. ತಮ್ಮ ಹವ್ಯಾಸಕ್ಕೆ ಮತ್ತು ತಮ್ಮ ಮನೆಯ ಸಮಾರಂಭಕ್ಕೆ ಮಾತ್ರ ತಯಾರಿಸುತ್ತಿದ್ದರು.
ಕೊಡಗಿನಲ್ಲಿ ಬದಲಾವಣೆ ತಂದ ಪ್ರವಾಸೋದ್ಯಮ ವೈನ್ ತಯಾರಿಕೆಯ ಮೇಲೆ ಭಾರಿ ಪರಿಣಾಮವಾಗುವಂತೆ ಮಾಡಿತು. ಜಿಲ್ಲೆಗೆ ಆಗಮಿಸುತ್ತಿದ್ದ ಪ್ರವಾಸಿಗರು ಕೊಡಗಿನಲ್ಲಿ ಸಿಗುವ ವೈನ್‌ಅನ್ನು ವಿಶೇಷ ಪಾನೀಯವೆಂದು ಸೇವಿಸಲಾರಂಭಿಸಿದರು. ಒಂದು ಕಾಲದಲ್ಲಿ ಕೇವಲ ಹವ್ಯಾಸಕ್ಕೆ ತಯಾರಾಗುತ್ತಿದ್ದ ವೈನ್ ನಂತರ ಪ್ರವಾಸಿಗರಿಗೆ ಮಾರಾಟವಾಗುವ ಅತ್ಯಂತ ಬೇಡಿಕೆಯ ವಸ್ತುವಾಯಿತು. ಇದರಿಂದಾಗಿ ಕೆಲವು ಮಹಿಳೆಯರ ಹವ್ಯಾಸವಾಗಿದ್ದ ವೈನ್ ತಯಾರಿಕೆ ವೃತ್ತಿಯಾಯಿತು. ಉತ್ತಮ ಗುಣಮಟ್ಟದ ವೈನ್ ಪ್ರವಾಸಿಗರನ್ನು ಆಕರ್ಷಿಸಿತು. ಜಿಲ್ಲೆಯಿಂದ ತೆರಳುವಾಗ ಕೊಡಗಿನ ನೆನಪಿಗಾಗಿ ವೈನ್ ಕೊಂಡೊಯ್ಯುತ್ತಿದ್ದ ಪ್ರವಾಸಿಗರು, ಮತ್ತೆ ಜಿಲ್ಲೆಯತ್ತ ಆಗಮಿಸುವಾಗ ವೈನ್ ಕೊಳ್ಳುವುದನ್ನು ಮರೆಯುತ್ತಿರಲಿಲ್ಲ.
ಆದರೆ ಈಗ ಕೊಡಗಿನ ವೈನ್‌ಗೆ ಉತ್ತಮ ಬೇಡಿಕೆ ಇರುವ ಹಿನ್ನೆಲೆಯಲ್ಲಿ ಹೊರ ಜಿಲ್ಲೆಯ ವೈನ್‌ಗಳನ್ನು ತಂದು ಕೊಡಗಿನಲ್ಲಿ ಮಾರಾಟ ಮಾಡಲಾಗುತ್ತಿದೆ. ಅದರಲ್ಲೂ ಹೊರ ರಾಜ್ಯದ ವ್ಯಾಪಾರಿಗಳು ಕಳಪೆ ಗುಣಮಟ್ಟದ ವೈನ್‌ಗಳನ್ನು ತಂದು ಮಾರಾಟ ಮಾಡುವುದಲ್ಲದೆ, ಕಡಿಮೆ ಮೊತ್ತಕ್ಕೆ ಮಾರಾಟ ಮಾಡುವ ಮೂಲಕ ಪ್ರವಾಸಿಗರು ಹಾಗೂ ಸ್ಥಳೀಯರನ್ನು ವಂಚಿಸುವ ಕೆಲಸ ಮಾಡುತ್ತಿದ್ದಾರೆ. ಪೈಪೋಟಿ ವ್ಯಾಪಾರದಿಂದಾಗಿ ಒಂದು ಬಾಟಲ್ ವೈನ್‌ಗೆ ೩-೪ ಬಾಟಲ್‌ಗಳನ್ನು ಉಚಿತವಾಗಿ ನೀಡುವುದೂ ಕಂಡುಬರುತ್ತಿದೆ. ೫೦ ರೂ., ೬೦ ರೂ.ಗೆ ಮಾರಾಟ ಮಾಡಿರುವ ಪ್ರಕರಣಗಳೂ ನಡೆಯುತ್ತಿವೆ. ಇದು ಕೊಡಗಿನ ವೈನ್ ಮಾರಾಟಗಾರರಿಗೆ ಸಂಕಷ್ಟ ತಂದೊಡ್ಡಿರುವುದಲ್ಲದೆ, ಕೆಳಪೆ ಗುಣಮಟ್ಟದ ವೈನ್‌ಗಳ ಮಾರಾಟದಿಂದ ಕೊಡಗಿನ ನೈಜ ಹೋಂ ಮೇಡ್ ವೈನ್ ಹೆಸರಿಗೆ ಕಳಂಕ ತಂದೊಡ್ಡುತ್ತಿದೆ.
ಈ ಹಿಂದೆಯೂ ವೈನ್‌ಗೆ ಬೇಡಿಕೆ ಹೆಚ್ಚುತ್ತಿದ್ದಂತೆ ಅವೈಜ್ಞಾನಿಕವಾಗಿ ವೈನ್ ತಯಾರಿಸಲಾಗುತ್ತಿತ್ತು. ಬಾಟಲಿಗಳಲ್ಲಿ ತಯಾರಿಸಿದವರ ವಿವರವಾಗಲಿ, ತಯಾರಿಕೆಯ ದಿನವಾಗಲಿ ಮುದ್ರಿತವಾಗುತ್ತಿರಲಿಲ್ಲ. ರಾಸಾಯನಿಕ ಬಳಸಿ ಮಾಡುವ ವೈನ್ ಹೆಚ್ಚು ದಿನ ಇಟ್ಟಲ್ಲಿ ಆಲ್ಕೋಹಾಲ್ ಅಂಶ ಹೆಚ್ಚುತ್ತಾ ಮದ್ಯದ ರೀತಿ ಪರಿವರ್ತನೆಯಾಗುತ್ತದೆ. ಅಲ್ಲದೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಬೆಲೆ ನಮೂದಿಸದ ಕಾರಣ ಮಾರಾಟಗಾರರು ಮನಸ್ಸಿಗೆ ಬಂದ ದರವನ್ನು ಪ್ರವಾಸಿಗರಿಗೆ ವಿಧಿಸುತ್ತಿದ್ದ ಕಾರಣಕ್ಕಾಗಿ ವೈನ್ ಮಾರಾಟದ ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಲು ಮುಂದಾದರು. ಹೋಂ ಮೇಡ್ ಎಂಬ ಹೆಸರಿನಲ್ಲಿ ಗುಣಮಟ್ಟ ಕಳೆದುಕೊಂಡ ವೈನ್‌ಗಳು ಪೂರೈಕೆಯಾಗುತ್ತಿದ್ದಾಗ ಅಬಕಾರಿ ಇಲಾಖೆ ಕ್ರಮ ತೆಗೆದುಕೊಂಡಿತು. ಇಂತಹ ವೈನ್‌ಗಳನ್ನು ನಿಷೇಧಿಸಿತು. ಆದರೂ ಗುಣಮಟ್ಟದ ವೈನ್ ತಯಾರಿಸುತ್ತಿದ್ದ, ಸ್ವಾವಲಂಬಿ ಬದುಕು ಕಟ್ಟಿಕೊಳ್ಳುತ್ತಿದ್ದ ಮಹಿಳೆಯರಿಗೆ ಕಾಳಸಂತೆಕೋರರಿಂದ ಅನ್ಯಾಯವಾಯಿತು.
ಸದ್ಯ ಈಗ ಮಾರಾಟ ಮಾಡಲಾಗುವ ವೈನ್ ಬಾಟಲಿಗಳಲ್ಲಿ ಎಲ್ಲಿ ತಯಾರಿಸಲಾಗುತ್ತದೆ? ಯಾವ ದಿನಾಂಕದಲ್ಲಿ ತಯಾರಿಸಲಾಗಿದೆ? ಯಾವ ದಿನಾಂಕದಲ್ಲಿ ಉಪಯೋಗಿಸಿದರೆ ಸೂಕ್ತ ಎನ್ನುವ ಮಾಹಿತಿ ಹಾಕುವುದನ್ನು ಕಡ್ಡಾಯ ಮಾಡಲಾಗಿದೆ. ಆದರೂ ಕೆಲವು ಕಡೆಗಳಲ್ಲಿ ಲೇಬಲ್ ಇಲ್ಲದೆಯೂ ವೈನ್ ಮಾರಾಟ ಮಾಡಲಾಗುತ್ತಿದೆ.
ಇನ್ನು ಈಸ್ಟ್ ಬಳಸದೆ ವೈನ್ ತಯಾರಿಸುವುದು ಕೊಡಗಿನ ವೈನ್‌ಗಳ ವಿಶೇಷತೆ. ಅದರ ಬದಲಿಗೆ ರಾಗಿ, ಗೋದಿ ಮತ್ತಿತರ ಪದಾರ್ಥ ಬಳಸಲಾಗುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ವ್ಯಾಪರೀಕರಣದಿಂದಾಗಿ ಈಸ್ಟ್ ಬಳಸುವ ಪದ್ಧತಿ ಬೆಳೆದಿದೆ.
೩೦ ದಿನಗಳ ಕಾಲ ಶೇಖರಣೆ, ಫಿಲ್ಟರಿಂಗ್ ಇದ್ಯಾವುದನ್ನೂ ಮಾಡದೆ ವಾರದೊಳಗಾಗಿ ವೈನ್ ತಯಾರಿಸಿಕೊಡುವ ಉದಾಹರಣೆಗಳೂ ಇವೆ. ಇದರಿಂದಾಗಿ ಕೊಡಗಿನ ವೈನ್ ಸಂಸ್ಕೃತಿ ಹಾಳಾಗುತ್ತಿದೆ. ಇದೇ ರೀತಿ ಮುಂದುವರಿದಲ್ಲಿ ಮುಂದಿನ ದಿನಗಳಲ್ಲಿ ವೈನ್ ತಯಾರಿಕೆಗೆ ಸಂಪೂರ್ಣ ನಿಷೇಧ ಮಾಡುವ ಸಾಧ್ಯತೆಯನ್ನು ಕೂಡ ತಳ್ಳಿಹಾಕುವಂತಿಲ್ಲ.
ವ್ಯಾಪಾರೀಕರಣದಿಂದ ಇತ್ತೀಚಿನ ದಿನಗಳಲ್ಲಿ ವೈನ್ ಗುಣಮಟ್ಟ ಹಾಳಾಗುತ್ತಿದೆ. ಹೀಗಾಗಿ ಅಬಕಾರಿ ಇಲಾಖೆ ಮತ್ತೊಮ್ಮೆ ಈ ಬಗ್ಗೆ ಗಮನಹರಿಸಬೇಕಾದ ಅವಶ್ಯಕತೆ ಇದೆ. ಮಾರಾಟಕ್ಕಿಡಲಾಗಿರುವ ವೈನ್‌ಗಳ ಪರಿಶೀಲನೆ ನಡೆಸಿ ಸ್ಥಳೀಯ ವೈನ್ ಮಾರಾಟಗಾರರಿಗೆ ನ್ಯಾಯ ಒದಗಿಸುವ ಕೆಲಸ ಮಾಡಬೇಕಿದೆ.

andolanait

Share
Published by
andolanait

Recent Posts

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

1 hour ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

2 hours ago

ಮುಡಾ: ಇಡಿ ದಾಳಿಗೆ ರಾಜಕೀಯ ಕಾರಣವಲ್ಲ; ಅಶೋಕ್

ಜಾರಿ ನಿರ್ದೇಶನಾಲಯದ ದಾಳಿಗೆ ರಾಜಕೀಯ ಕಾರಣವಲ್ಲ, 3-4 ಸಾವಿರ ಕೋಟಿ ರೂ. ಅಕ್ರಮ ನಡೆದಿದೆ ಎಂದು ಹೇಳಿದ್ದೇ ಕಾಂಗ್ರೆಸ್‌ನವರು: ಪ್ರತಿಪಕ್ಷ…

2 hours ago

BJP ಟಿಕೆಟ್‌ ವಂಚನೆ: ಆರೋಪ ತಳ್ಳಿ ಹಾಕಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ನವದೆಹಲಿ: ನನಗೆ ಸಹೋದರಿಯೇ ಇಲ್ಲ ಮತ್ತು ಗೋಪಾಲ್ ಜೋಶಿ ಮೇಲಿನ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಕೇಂದ್ರ ಸಚಿವ…

2 hours ago

ಮಂಡ್ಯ ಟೂ ಇಂಡಿಯಾ: ಬೃಹತ್‌ ಉದ್ಯೋಗ ಮೇಳಕ್ಕೆ ಮೊದಲ ದಿನ ಅಭೂತಪೂರ್ವ ಸ್ಪಂದನೆ

ಮಂಡ್ಯ ಟೂ ಇಂಡಿಯಾ; ಸಕ್ಕರೆ ನಾಡಿನಲ್ಲಿ 2 ದಿನಗಳ ಬೃಹತ್ ಉದ್ಯೋಗ ಮೇಳ 150ಕ್ಕೂ ಹೆಚ್ಚು ಕಂಪನಿಗಳ ಭಾಗಿ, ಸಾವಿರಾರು…

3 hours ago

ಮುಡಾ ಮೇಲೆ ಇಡಿ ದಾಳಿ: ಸಿಬಿಐ ತನಿಖೆ ನಡೆಸುವರೆಗೂ ಹೋರಾಟ ಮುಂದುವರಿಕೆ: ಸ್ನೇಹಮಯಿ ಕೃಷ್ಣ

ಮೈಸೂರು: ಮುಡಾ ಮೇಲಿನ ಇಡಿ ಕಾರ್ಯಾಚರಣೆ ಕೇವಲ ಸಿಎಂ ಸಿದ್ದರಾಮಯ್ಯ ಅವರ ಕುಟುಂಬದವರ ಪ್ರಕರಣವಲ್ಲ. ಸಂಪೂರ್ಣ ಮುಡಾ ಅಕ್ರಮದ ಬಗ್ಗೆ…

3 hours ago