ಎಡಿಟೋರಿಯಲ್

ಸಂಪಾದಕೀಯ : ಪ್ರಕೃತಿ ಪ್ರಕೋಪಗಳಿಂದ ನಷ್ಟಕ್ಕೀಡಾಗಿ ನೊಂದ ರೈತರಿಗೀಗ ಕಳ್ಳರ ಕಾಟ

ಚಾಮರಾಜನಗರ ತಾಲ್ಲೂಕಿನ ವಿವಿಧೆಡೆ ಬಾಳೆಕಾಯಿ ಮತ್ತು ಪಂಪ್‍ಸೆಟ್ ಮೋಟಾರ್, ಕೇಬಲ್ ಕಳವು ಪ್ರಕರಣಗಳು ಹೆಚ್ಚುತ್ತಿದ್ದು, ರೈತರು ಕಂಗಾಲಾಗಿದ್ದಾರೆ. ಬೇಡರಪುರ ಬಳಿ ಮೂರ್ತಿ ಎಂಬುವರಿಗೆ ಸೇರಿದ ಜಮೀನಿನಲ್ಲಿ ಇತ್ತೀಚೆಗೆ 3 ಟನ್ (250 ಗೊನೆ) ನೇಂದ್ರ ಬಾಳೆ ಕಾಯಿಯನ್ನು ಕತ್ತರಿಸಿ ಟಾಟಾ ಎಸ್ ವಾಹನದಲ್ಲಿ ತುಂಬಿಕೊಂಡು ಪರಾರಿಯಾಗಿದ್ದಾರೆ. ಮಾಲಗೆರೆಯ ಸಮೀಪದ ಕೋಮಲ್‍ಕುಮಾರ್ ಮತ್ತು ಮಹದೇವನಾಯಕ ಅವರಿಗೆ ಸೇರಿದ ಜಮೀನುಗಳಿಂದಲೂ ನೇಂದ್ರ ಬಾಳೆಕಾಯಿಯನ್ನು ಕಳವು ಮಾಡಲಾಗಿತ್ತು. ಮೂರ್ತಿ ಅವರಿಗೆ ಸೇರಿದ ನೇಂದ್ರ ಬಾಳೆಕಾಯಿಗಳ ಕಳವಾದ್ದರಿಂದ ಸುಮಾರು 70 ಸಾವಿರ ರೂ.ನಷ್ಟ ಸಂಭವಿಸಿದೆ.

ಮಕ್ಕಡಹಳ್ಳಿ ಬಳಿ ಪಂಪ್‍ಸೆಟ್ ಜಮೀನಿನಲ್ಲಿ ಕೇಬಲ್ ಕಳ್ಳತನ ಮಾಡಲು ಯತ್ನಿಸುವಾಗ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದ ಇಬ್ಬರನ್ನು ಚಾ.ನಗರ ಗ್ರಾಮಾಂತರ ಪೊಲೀಸ್ ಠಾಣೆಗೆ ಒಪ್ಪಿಸಲಾಗಿತ್ತು. ಆಗಾಗ ಕಳ್ಳತನ ನಡೆಯಲು ಪೊಲೀಸ್ ಇಲಾಖೆಯ ಕಾರ್ಯ ವೈಫಲ್ಯವೇ ಕಾರಣ ಎಂದು ರೈತರು ಹಾಗೂ ರೈತ ಮುಖಂಡರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಪೊಲೀಸರು ಸರಿಯಾಗಿ ಗಸ್ತು ಮಾಡುತ್ತಿಲ್ಲ ಮತ್ತು ರಾತ್ರಿವೇಳೆ ಚೆಕ್‍ಪೋಸ್ಟ್‍ಗಳಲ್ಲಿ ತಪಾಸಣೆ ಸರಿಯಾಗಿ ನಡೆಸುತ್ತಿಲ್ಲ. ಆದ್ದರಿಂದಲೇ ಇಂತಹ ಕಳ್ಳತನ ಮುಂದುವರಿದಿದೆ ಎಂಬ ಆರೋಪ ಕೇಳಿಬಂದಿದೆ.
ಚಾಮರಾಜನಗರ ತಾಲ್ಲೂಕು ಸೇರಿದಂತೆ ಜಿಲ್ಲೆಯಲ್ಲಿ ಏಲಕ್ಕಿ, ಪಚ್ಚಬಾಳೆ ಮತ್ತು ನೇಂದ್ರ ಬಾಳೆಯನ್ನು ಹೆಚ್ಚಾಗಿ ಬೆಳೆಯಲಾಗುತ್ತಿದೆ. ನೇಂದ್ರ ಬಾಳೆಗೆ, ಬೆಂಗಳೂರು ಮತ್ತು ಕೇರಳದಲ್ಲಿ ಮಾತ್ರ ಮಾರುಕಟ್ಟೆ ಹೊರತುಪಡಿಸಿದರೆ ಸ್ಥಳೀಯವಾಗಿ ಮಾರುಕಟ್ಟೆಯಿಲ್ಲ. ಕೇರಳದಲ್ಲಿ ನೇಂದ್ರ ಬಾಳೆಯನ್ನು ಚಿಪ್ಸ್ ಮತ್ತು ಒಣಹಣ್ಣುಗಳ ಮಿಶ್ರಣಕ್ಕೆ ಬಳಸಲಾಗುತ್ತಿದೆ. ಜಿಲ್ಲೆಯ ನೇಂದ್ರ ಬಾಳೆಗೆ ಕೇರಳವೇ ದೊಡ್ಡ ಮಾರುಕಟ್ಟೆ. ಕಳೆದ 3 ತಿಂಗಳು ಸುರಿದ ಧಾರಾಕಾರ ಮಳೆಗೆ ಬಾಳೆ ಕಾಯಿಯ ಬೆಲೆ ಏರಿಕೆಯಾಗಿದೆ. ಈಗಲೂ ಕೆ.ಜಿ.ಗೆ 24 ರೂ. ಬೆಲೆಯಿದೆ.
ಬಾಳೆಕಾಯಿಗೆ ಸ್ವಲ್ಪ ಬೆಲೆ ಇರುವುದರಿಂದ ಖದೀಮರು ಕದ್ದು ಸಾಗಿಸುವ ಕೆಲಸ ನಡೆಯುತ್ತಿದೆ. ಮಾರುಕಟ್ಟೆ ಗೊತ್ತಿರುವ ಗುಂಪೊಂದು ಈ ಕಳ್ಳತನ ನಡೆಸುತ್ತಿರುವ ಸಂಶಯವನ್ನು ಪೊಲೀಸರು ವ್ಯಕ್ತಪಡಿಸುತ್ತಿದ್ದಾರೆ. ರಾತ್ರಿ ವೇಳೆ ಗಸ್ತು ಇದ್ದರೆ ಇಂತಹ ಕಳವು ತಡೆಯಬಹುದು ಆದರೆ, ಸಾಗಣೆ ಮಾಡುವಾಗ ಕಷ್ಟ ಎಂಬುದು ಪೊಲೀಸರ ಹೇಳಿಕೆಯಾಗಿದೆ.
ಕಳವು ಪ್ರಕರಣಗಳು ದಾಖಲಾದಾಗ ಪೊಲೀಸರು ಆಯಾಯ ವ್ಯಾಪ್ತಿಯ ಗ್ರಾಮಗಳ ಭಾಗದಲ್ಲಿ ರಾತ್ರಿ ಗಸ್ತು ಹೆಚ್ಚಿಸಬೇಕು. ಇಂತಹ ಕಳ್ಳತನ ಮಾಡಿ ಸಿಕ್ಕಿಬಿದ್ದು ಜಾಮೀನಿನಲ್ಲಿರುವ ಮಾಜಿ ಕಳವು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಕಳವು ಜಾಲವನ್ನು ಪತ್ತೆ ಮಾಡಬೇಕು. ಅದನ್ನು ಬಿಟ್ಟು ಸುಮ್ಮನಾದರೆ ಕಳವು ನಿಲ್ಲುವುದಾದರೂ ಹೇಗೆ. ಬೆಲೆ ಇರುವುದರಿಂದ ಖದೀಮರು ಇಂತಹ ಅಕ್ರಮ ಕೆಲಸಕ್ಕೆ ಮುಂದಾಗಿದ್ದಾರೆ. ಕಳವು ಹೆಚ್ಚಾಗಲು ಪೊಲೀಸರ ಅದಕ್ಷತೆಯೇ ಕಾರಣ ಎಂದು ರೈತರು ಕಿಡಿಕಾರುತ್ತಿದ್ದಾರೆ.
ರೈತರು ವರ್ಷಗಟ್ಟಲೆ ನೀರು, ಗೊಬ್ಬರ ಹಾಕಿ ಬೆಳೆಸಿದ ಬಾಳೆಕಾಯಿಯನ್ನು ಖದೀಮರು ಕಳವು ಮಾಡಿದರೆ ಅವರ ಗತಿಯೇನು ? ಆಗೊಮ್ಮೆ ಹೀಗೊಮ್ಮೆ ಬೆಲೆ ಸಿಗುವ ಸಂದರ್ಭದಲ್ಲಿ ರೈತರ ಫಸಲು ಖದೀಮರ ಪಾಲಾದರೆ ಸಂಕಷ್ಟಕ್ಕೆ ಸಿಲುಕಿ ಸಾಲಗಾರ ಆಗುವುದರಲ್ಲಿ ಅನುಮಾನವಿಲ್ಲ. ಪ್ರತಿ ತಿಂಗಳು ಸರ್ಕಾರಿ ಸಂಬಳ ಪಡೆಯುವ ಪೊಲೀಸರು ಸರಿಯಾಗಿ ಕರ್ತವ್ಯ ನಿರ್ವಹಿಸದಿದ್ದರೆ ಯಾರಿಗೆ ಹೇಳುವುದು ಎಂಬುದು ರೈತರ ಪ್ರಶ್ನೆಯಾಗಿದೆ.
ಪೊಲೀಸರು ನಗರ ಪ್ರದೇಶದಲ್ಲಿ ರಾತ್ರಿ ಗಸ್ತನ್ನು ಹೆಚ್ಚು ಆದ್ಯತೆ ನೀಡುವಂತೆ ಗ್ರಾಮಗಳತ್ತಲೂ ಗಸ್ತನ್ನು ಹೆಚ್ಚಿಸಬೇಕು. ಜಮೀನುಗಳಲ್ಲಿ ಕಳ್ಳತನ ನಡೆಯದಂತೆ ಕ್ರಮ ವಹಿಸಬೇಕು. ಪೊಲೀಸರು ಗ್ರಾಮಗಳಿಗೆ ಗಸ್ತು ಪುಸ್ತಕಕ್ಕೆ ಸಹಿ ಹಾಕಲು ಮಾತ್ರ ಬರುತ್ತಾರೆ. ಉಳಿದಂತೆ ತಿರುಗಿಯೂ ನೋಡುವುದಿಲ್ಲ ಎಂಬ ಆರೋಪವಿದೆ. ಪೊಲೀಸರು ಓಡಾಡಿದರೆ ಸಾಕು ಎಷ್ಟೋ ಅಕ್ರಮ ಚಟುವಟಕೆಗಳು ನಿಂತು ಹೋಗುತ್ತವೆ.
ಈಗಲೂ ಗ್ರಾಮೀಣ ಪ್ರದೇಶಗಳ ಜಮೀನುಗಳಲ್ಲಿ ಇಸ್ಪೀಟ್ ಆಟ ನಡೆಯುತ್ತಲೇ ಇದೆ. ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ. ಪೊಲೀಸರು ಮಾತ್ರ ದೂರು ಬರಲಿ ಎಂದು ಕುಳಿತಿದ್ದಾರೆ. ಒಮ್ಮೊಮ್ಮೆ ದಾಳಿ ಮಾಡಿ ನಾಲ್ಕಾರು ಜನರಿಂದ ದಂಡ ಕಟ್ಟಿಸಿಕೊಂಡು ಸುಮ್ಮನಾಗುತ್ತಾರೆ. ನಂತರ ಮುಂದುವರಿದಿದೆಯೇ ಎಂದು ಬೆನ್ನತ್ತಿ ಅಕ್ರಮ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಯಂತ್ರಣ ಮಾಡಿದ ಉದಾಹರಣೆಗಳಿಲ್ಲ.
ಪೊಲೀಸರ ನಿಷ್ಕ್ರಿಯತೆ ಖದೀಮರು, ಕಿಡಿಗೇಡಿಗಳಿಗೆ ಅನುಕೂಲ ಮಾಡಿಕೊಟ್ಟಂತೆ ಆಗಿದೆ. ಇನ್ನಾದರೂ ಪೊಲೀಸರು ಎಚ್ಚೆತ್ತು ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಮುಂದಾಗಬೇಕು. ಇಲ್ಲದಿದ್ದರೆ ಕಳವು, ಜೂಜು, ಪರವಾನಗಿ ಇಲ್ಲದೆ ಗ್ರಾಮಗಳಲ್ಲಿ ಮದ್ಯ ಮಾರಾಟ ನಡೆಯುತ್ತಲೇ ಇರುತ್ತದೆ.

andolanait

Recent Posts

ಪದ್ಮಶ್ರೀ ಪುರಸ್ಕೃತ ಅಂಕೇಗೌಡರಿಗೆ ಮಂಡ್ಯ ಜಿಲ್ಲಾಡಳಿತದಿಂದ ಸನ್ಮಾನ

ಮಂಡ್ಯ: 2026ನೇ ಸಾಲಿನ ಪದ್ಮಶ್ರೀ ಪುರಸ್ಕೃತ ಅಂಕೇಗೌಡರಿಗೆ ಮಂಡ್ಯ ಜಿಲ್ಲಾಡಳಿತದ ಪರವಾಗಿ ಜಿಲ್ಲಾಧಿಕಾರಿ ಡಾ.ಕುಮಾರ ಅವರು ಅಂಕೇಗೌಡ ಅವರನ್ನು ಸನ್ಮಾನಿಸಿ…

1 min ago

ಅಜಿತ್‌ ಪವಾರ್‌ ಸಾವು: ತನಿಖೆಗೆ ಆಗ್ರಹಿಸಿದ ಮಮತಾ ಬ್ಯಾನರ್ಜಿ

ನವದೆಹಲಿ: ಮಹಾರಾಷ್ಟ್ರ ಡಿಸಿಎಂ ಅಜಿತ್‌ ಪವಾರ್‌ ಅವರ ಸಾವಿಗೆ ಕಾರಣವಾದ ಬಾರಾಮತಿಯ ಭೀಕರ ವಿಮಾನ ಅಪಘಾತದ ಕುರಿತು ಸುಪ್ರೀಂಕೋರ್ಟ್‌ ಮೇಲ್ವಿಚಾರಣೆಯಲ್ಲಿ…

26 mins ago

ಹಿರಿಯ ಸಹೋದರನನ್ನು ಕಳೆದುಕೊಂಡಂತಾಗಿದೆ: ಡಿಸಿಎಂ ಏಕನಾಥ್‌ ಶಿಂಧೆ

ಮಹಾರಾಷ್ಟ್ರ: ಡಿಸಿಎಂ ಅಜಿತ್‌ ಪವಾದ ಅವರ ಸಾವು ದುರದೃಷ್ಟಕರ. ಅವರ ನಿಧನಕ್ಕೆ ಕಾರಣವಾದ ವಿಮಾನ ದುರಂತದ ಬಗ್ಗೆ ತನಿಖೆ ನಡೆಸಲಾಗುವುದು…

51 mins ago

ಪ್ರತಿಯೊಂದು ಸಮುದಾಯದ ಕಲ್ಯಾಣಕ್ಕೆ ಸರ್ಕಾರ ಬದ್ಧ: ರಾಷ್ಟ್ರಪತಿ ದ್ರೌಪದಿ ಮುರ್ಮು

ನವದೆಹಲಿ: ದಲಿತರು, ಹಿಂದುಳಿದವರು, ಆದಿವಾಸಿಗಳು ಸೇರಿದಂತೆ ಪ್ರತಿಯೊಂದು ಸಮುದಾಯದ ಕಲ್ಯಾಣಕ್ಕೆ ಸರ್ಕಾರ ಬದ್ಧವಾಗಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು…

1 hour ago

ಎಲ್ಲಾ ಪೌರ ಕಾರ್ಮಿಕರನ್ನು ಖಾಯಂಗೊಳಿಸಿ: ಎಂಎಲ್‌ಸಿ ಶಿವಕುಮಾರ್‌ ಒತ್ತಾಯ

ಬೆಂಗಳೂರು: ರಾಜ್ಯದಲ್ಲಿನ ನಗರಪಾಲಿಕೆ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಗುತ್ತಿಗೆ ಹಾಗೂ ನೇರ ಪಾವತಿಯಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ಪೌರಕಾರ್ಮಿಕರನ್ನು ಖಾಯಂ…

2 hours ago

ವಿಮಾನ ಪತನಕ್ಕೂ ಮುನ್ನ ಅಜಿತ್‌ ಪವಾರ್‌ ಕೊನೆಯ ಪೋಸ್ಟ್‌ ವೈರಲ್‌

ಬಾರಾಮತಿ: ಮಹಾರಾಷ್ಟ್ರ ಡಿಸಿಎಂ ಅಜಿತ್‌ ಪವಾರ್‌ ಅವರಿಂದು ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ದುರಂತ ಸಂಭವಿಸುವ ಕೇವಲ 23 ನಿಮಿಷಗಳ ಮೊದಲು…

3 hours ago