ಶಭಾನ ಮೈಸೂರು
ಕನ್ನಡದ ಮಹತ್ತನ್ನು ವಿಸ್ತರಿಸಿದವರಲ್ಲಿ ಒಬ್ಬರಾದ ಹಿರಿಯ ಲೇಖಕಿ ಸಾರಾ ಅಬೂಬಕ್ಕರ್ ಈಗ ನಮ್ಮೊಂದಿಗೆ ಭೌತಿಕವಾಗಿ ಇಲ್ಲವಾಗಿದ್ದಾರೆ. ಆದರೆ ಕನ್ನಡ ಪರಂಪರೆಯೊಳಗೆ ಸಾರಾ ತಂದ ಪ್ರಪಂಚ ಅನವರತ ಮಿಡು ಕಾಡುತ್ತಲೇ ಇರುತ್ತದೆ.
ಕನ್ನಡ ಸಾಹಿತ್ಯ ಲೋಕ ಕಾಣದ ಹೊಸ ಪ್ರಪಂಚವೊಂದನ್ನು ಕಾಣಿಸಿದ ಸಾರಾ ಅವರು ಇಸ್ಲಾಂ ಧರ್ಮದ ಅನೇಕ ಮಹಿಳೆಯರ ಬದುಕಿಗೆ ಕನ್ನಡಿ ಹಿಡಿದ ತನ್ನದೇ ಧರ್ಮದ ಆಂತರಿಕ ವಿಮರ್ಶಕಿ. ಎದುರಿಗಿನ ಸಂಗತಿಗಳನ್ನು ವಿಮರ್ಶಿಸುವ ಕಾರ್ಯವು ಎಷ್ಟು ಘನವಾದದ್ದೋ ತನ್ನನ್ನೂ, ತಾನಿರುವ ನೆಲೆಯನ್ನೂ ಪೂರ್ವಗ್ರಹಗಳಿಂದ ಮುಕ್ತಗೊಳಿಸಿ ವಿಮರ್ಶೆಗೆ ಒಳಪಡಿಸುವುದೂ ಅಷ್ಟೇ ಕಠಿಣ ಕಾರ್ಯವಾಗಿದೆ. ಇಂತಹ ಆಂತರಿಕ ವಿಮರ್ಶಾ ಸಂಘರ್ಷವನ್ನು ತನ್ನ ಬದುಕಿನ ಉದ್ದಕ್ಕೂ ಕಾಯ್ದುಕೊಂಡು ಬಂದವರು ಸಾರಾ ಅಬೂಬಕ್ಕರ್.
ಜೀವಪರ ನಿಲುವು, ಸಾಮುದಾಯಿಕ ಪ್ರಜ್ಞೆ, ದಮನ ಮಾಡುವ ಶಕ್ತಿಗಳ ವಿರುದ್ಧ ಸದಾ ಬುಸುಗುಟ್ಟುವ ಮತ್ತು ಸಾರಾಸಗಟಾಗಿ ಇದ್ದದ್ದನ್ನು ಕಣ್ಣಿಗೆ ರಾಚುವಂತೆ ಹೇಳಿ ನಿರುಮ್ಮಳ ಕೂರಬಲ್ಲ ಸಾರಾ ಬರೆಯಲು ಪ್ರಾರಂಭಿಸಿದ್ದು ಲಂಕೇಶ್ ಪತ್ರಿಕೆಯ ಮೂಲಕ. ಪುರುಷ ಪ್ರಧಾನ್ಯತೆ, ಧಾರ್ಮಿಕ ಕಟ್ಟಳೆ, ಶಿಕ್ಷಣ-ಸ್ವಾತಂತ್ರ್ಯದ ಸೀಮಿತ ಪ್ರಪಂಚದೊಳಗೆ ಸಿಲುಕಿದ ಬಡ ಮತ್ತು ಮಧ್ಯಮ ವರ್ಗದ ಮುಸ್ಲಿಂ ಮಹಿಳೆಯರ ಬದುಕನ್ನು ತನ್ನ ಬರಹದ ಕೇಂದ್ರವಾಗಿರಿಸಿಕೊಂಡಿದ್ದ ಸಾರಾ ಹಂಬಲಿಸಿದ್ದು ‘ಬಂಧಿಸುವ ಎಲ್ಲ ವ್ಯವಸ್ಥೆಗಳಿಂದ ಬಿಡುಗಡೆಗಾಗಿ. ನಾನು ಈ ದೇಶದ ಪ್ರಜೆ, ತನ್ನ ನಾಗರಿಕರಿಗೆ ಈ ದೇಶದ ಸಂವಿಧಾನ ಯಾವ್ಯಾವ ಹಕ್ಕುಗಳನ್ನು ನೀಡಿದೆಯೋ ಆ ಹಕ್ಕುಗಳಿಗೆ ನಾನು ಸಂಪೂರ್ಣವಾಗಿ ಬಾಧ್ಯಸ್ಥಳಾಗಿದ್ದೇನೆ’ ಎನ್ನುವ ಮಾತುಗಳನ್ನು ಸಾರಾ ಅವರ ಸಮಗ್ರ ಬರೆಹದ ದರ್ಶನವೆನ್ನಬಹುದು.
ಇಸ್ಲಾಂ ಮೂಲಭೂತವಾದವನ್ನು ನಿರ್ದಾಕ್ಷಿಣ್ಯವಾಗಿ ವಿರೋಧಿಸುತ್ತಾ ಹೆಣ್ಣು ಮಕ್ಕಳು ಶಿಕ್ಷಿತರು, ಸ್ವಾವಲಂಬಿಗಳು, ಆರ್ಥಿಕವಾಗಿ ಸ್ವತಂತ್ರರಾಗಬೇಕು ಎನ್ನುವ ಸಾರಾ, ಧಾರ್ಮಿಕ ನಿಯಮಗಳನ್ನು ತಮಗಿಷ್ಟ ಬಂದಂತೆ ರೂಪಿಸಿಕೊಂಡು ಹೆಣ್ಣನ್ನು ಮತ್ತೂ ಬಂಧಿಯಾಗಿಸುವಂತೆ ಬೋಧಿಸುವ ಮದರಸಾ ಶಿಕ್ಷಣದ ಬದಲಿಗೆ ಆಧುನಿಕ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡುತ್ತಾರೆ. ಇದರ ಹಿಂದಿನ ಮುಖ್ಯ ಕಾಳಜಿ ಧರ್ಮದ ಹೆಸರಿನಲ್ಲಿ ನಡೆಯುವ ಶೋಷಣೆ, ಅನ್ಯಾಯಗಳನ್ನು ಹೆಣ್ಣು ಗುರುತಿಸಬೇಕು ಮತ್ತು ಅವುಗಳ ಕುರಿತ ಜಾಗೃತ ಪ್ರಜ್ಞೆಯೊಂದು ಉಂಟಾಗಬೇಕು ಹಾಗೂ ಕೋಮುಸೌಹಾರ್ದ ವಾತಾವರಣ ರೂಪುಗೊಳ್ಳಬೇಕು ಇತ್ಯಾದಿ ಅಂಶಗಳು. ಇವು ಸಾರಾ ಅವರ ಒಟ್ಟು ಸಾಹಿತ್ಯದ ವಸ್ತುವಾಗಿದ್ದವು.
ಮುಸ್ಲಿಂ ಮಹಿಳೆಯರಿಗೆ ಇಂದಿಗೂ ಪಿಡುಗಾಗಿ ಕಾಡುತ್ತಿರುವ ಬಹುಪತ್ನಿತ್ವ, ತಲಾಕ್, ಪರ್ದಾ ಪದ್ಧತಿ, ಬಡತನ ಇವುಗಳನ್ನು ವಿರೋಧಿಸುತ್ತಾ ಒಂದು ತೀವ್ರ ಹೋರಾಟವನ್ನೇ ಸಾರಾ ಬರೆಹದ ಮೂಲಕ ಪ್ರಾರಂಭಿಸಿದ್ದರು. ಬರೆಹವೇ ಅವರ ಪ್ರತಿಭಟನೆ. ಇಸ್ಲಾಂನ ಕೆಲವು ಧಾರ್ಮಿಕ ಸಂಘಟನೆಗಳು ಮತ್ತು ಇತರ ಮೂಲಭೂತವಾದಿ ಸಂಘಟನೆಗಳು, ಸಾಮಾನ್ಯ ಜನರ ತಲೆಯೊಳಗೆ ಹೇಗೆ ಮೂಲಭೂತವಾದಿ ಚಿಂತನೆಗಳನ್ನು ಬಿತ್ತುತ್ತಿದ್ದಾರೆಂದು ನಿರ್ಭಿಡೆಯಿಂದ ಹೇಳುತ್ತಿದ್ದರು. ಧಾರ್ಮಿಕ ಗ್ರಂಥ ಕುರಾನ್ ಮಹಿಳೆಯರಿಗೆ ನೀಡಿರುವ ಸ್ವಾತಂತ್ರ್ಯವನ್ನು ಆಧಾರ ಸಮೇತ ಮೂಲಭೂತವಾದಿಗಳ ಮುಂದಿಡುತ್ತಿದ್ದರು. ಹಾಗೂ ಅವರೆದುರಿಗೆ ಇಂತಹ ಸೂಕ್ಷ್ಮ ಪ್ರಶ್ನೆಗಳನ್ನು ಇಟ್ಟು ವಿಚಲಿತರನ್ನಾಗಿಸುತ್ತಿದ್ದರು. ಅದಕ್ಕೊಂದು ಉತ್ತಮ ಉದಾಹರಣೆ ‘ಚಂದ್ರಗಿರಿಯ ತೀರದಲ್ಲಿ’ ಕಾದಂಬರಿ. ಗಂಡು ತಲಾಕ್ ನೀಡಲ್ಪಟ್ಟ ಹೆಣ್ಣಿನೊಂದಿಗೆ ಪುನರ್ ಬಾಳಲು ಬಯಸಿದಾಗ ಆಕೆ ಧಾರ್ಮಿಕ ನಿಯಮಾವಳಿಯ ಪ್ರಕಾರ ಮತ್ತೊಬ್ಬ ಪುರುಷನೊಂದಿಗೆ ಒಂದು ದಿನದ ಮದುವೆಯಾಗಿ ಅವನಿಂದ ತಲಾಕ್ ಪಡೆದು ನಂತರ ತನ್ನ ಗಂಡನೊಂದಿಗೆ ಮರು ಮದುವೆಯಾಗಬೇಕು ಎಂಬುದರ ಔಚಿತ್ಯವೇನು? ಎಂಬ ಪ್ರಶ್ನೆಯನ್ನು ಈ ಕಾದಂಬರಿ ಕೇಳುತ್ತದೆ.
‘ವಜ್ರಗಳು’ ‘ತಳ ಒಡೆದ ದೋಣಿಯಲಿ’, ‘ಕದನ ವಿರಾಮ,’ ‘ಸಹನಾ,’ ‘ಸುಳಿಯಲ್ಲಿ ಸಿಕ್ಕವರು,’ ‘ಚಪ್ಪಲಿಗಳು,’ ‘ಅರ್ಧರಾತ್ರಿಯಲಿ ಹುಟ್ಟಿದ ಕೂಸು’ ಮುಂತಾದ ಕೃತಿಗಳ ಮೂಲಕ ಸಾರಾ ಅವರು, ಧರ್ಮದ ಹೆಸರಿನಲ್ಲಿ ನಡೆಯುವ ಅಧರ್ಮವನ್ನು ಎತ್ತಿ ತೋರಿಸಲು ಪ್ರಯತ್ನಿಸಿದ್ದಾರೆ. ಬೋಳುವಾರು ಮುಹಮ್ಮದ್ ಕುಂಞಿ, ಫಕೀರ್ ಮುಹಮ್ಮದ್ ಕಟ್ಪಾಡಿ ಇವರೀರ್ವರು ಮುಸ್ಲಿಂ ಸಮುದಾಯದ ಒಳಗಿನ ಸಂಘರ್ಷ ಹಾಗೂ ಮುಸ್ಲಿಮೇತರರಿಂದ ಅಲ್ಪಸಂಖ್ಯಾತರು ಎದುರಿಸುತ್ತಿರುವ ಸಮಸ್ಯೆಗಳೆರೆ ಡನ್ನೂ ಚರ್ಚೆಗೆ ತೆಗೆದುಕೊಂಡರು. ಆದರೆ ಸಾರಾ ಅವರಿಗೆ ಆಕ್ರೋಶವಿದ್ದದ್ದು ಸಮುದಾಯದ ಒಳಗಿನ ಮೂಲಭೂತವಾದಿತನ ಮತ್ತು ಜನರಲ್ಲಿನ ಮತಾಂಧತೆಯ ಬಗೆಗೆ. ಅದಕ್ಕಾಗಿ ಅವರು ಕುರಾನ್ ಗ್ರಂಥವನ್ನು ಆಧಾರವಾಗಿಟ್ಟು, ಮುಸ್ಲಿಂ ಮಹಿಳೆಯರ ಬದುಕಿಗೆ ಸಂಬಂಧಿಸಿದಂತೆ ಧಾರ್ಮಿಕ ನಿಯಮಗಳನ್ನು ಹೊಸ ಮಗ್ಗುಲುಗಳ ಮೂಲಕ ವ್ಯಾಖ್ಯಾನಿಸುತ್ತಾರೆ. ಇಂತಹ ಕಾರಣಗಳಿಂದಾಗಿ ಅನೇಕ ದಾಳಿಗಳನ್ನು ಎದುರಿಸಬೇಕಾಗಿ ಬಂದರೂ ಮೂಲಭೂತವಾದಿ ಸಂಘಟನೆಗಳಿಗೆ ಸವಾಲಾಗಿಯೇ ನಿಂತ ಸಾರಾ ಅಬೂಬಕ್ಕರ್ ಕನ್ನಡದ ಅಪರೂಪದ ಛಲಗಾತಿ ಮತ್ತು ನಿಜದ ನಾಡೋಜ.
ವಾಷಿಂಗ್ಟನ್ : ದೀರ್ಘಕಾಲದಿಂದ ಬಾಕಿ ಉಳಿದಿರುವ ರಕ್ಷಣಾ ಖರೀದಿ ಮಾತುಕತೆ ಹಾಗೂ ವಾಣಿಜ್ಯ ವ್ಯವಹಾರಗಳನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಭಾರತದ ಪ್ರಧಾನಿ…
ಕೊಡಗು : ಕರುನಾಡಿನ ಕೊಡಗಿನ ಸುಂದರಿ ಸಿನಿ ತಾರೆ ರಶ್ಮಿಕಾ ಮಂದಣ್ಣ ದೇಶ-ವಿದೇಶಗಳಲ್ಲೂ ಖ್ಯಾತಿ ಪಡೆದಿದ್ದಾರೆ. ಹೀಗಾಗಿ ಅವರು ಆಗಾಗ್ಗೆ…
ನಂಜನಗೂಡು : ಅಪ್ರಾಪ್ತೆಯ ಹಿಂದೆ ಬಿದ್ದು ಪ್ರೀತಿಗೆ ಒತ್ತಾಯಿಸಿ ಮದುವೆ ಆಗುವಂತೆ ಪೀಡಿಸಿ ಮಾನಸಿಕ ಕಿರುಕುಳ ನೀಡಿದ ಹಿನ್ನಲೆ ವಿಧ್ಯಾರ್ಥಿನಿ…
ಮೈಸೂರು : ನಾನು ಚಾಮರಾಜ ಕ್ಷೇತ್ರದ ಟಿಕೆಟ್ ಆಕಾಂಕ್ಷಿ. ರಾಷ್ಟ್ರ ಮಟ್ಟಕ್ಕೆ ಹೋಗಲಿಲ್ಲ ಅಂದ್ರೆ ಅಂತಾರಾಷ್ಟ್ರೀಯ ಮಟ್ಟಕ್ಕೆ ಹೋಗಲು ಆಗುತ್ತಾ?…
ಮೈಸೂರು : ರಾಜ್ಯದಲ್ಲಿ ಸರಿಯಾದ ಯೋಜನೆಗಳನ್ನು ಜಾರಿಗೆ ತರುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಫಲರಾಗಿದ್ದು, ಸರ್ಕಾರದ ಗ್ಯಾರಂಟಿ ಯೋಜನೆಗಳು ಹೇಗೆಲ್ಲಾ ಅನುಷ್ಠಾನ…
ಮೈಸೂರು : ರಂಗಾಯಣದ ಮಹತ್ವಾಕಾಂಕ್ಷೆಯ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವಕ್ಕೆ ವೇದಿಕೆ ಸಜ್ಜಾಗುತ್ತಿದ್ದು, ‘ಬಾಬಾ ಸಾಹೇಬ್-ಸಮತೆಯೆಡೆಗೆ ನಡಿಗೆ’ ಆಶಯದಡಿ ಜ.11 ರಿಂದ…