ಬಲಗೈ ಹೋದರೇನು? ಎಡಗೈ ಇದೆ ಎನ್ನುವ ದಿಟ್ಟೆ ರೇಣು ಖಾಟೂನ್!
ಪಶ್ಚಿಮ ಬಂಗಾಳದ ಪೂರ್ವ ಬುರ್ದ್ವಾನ್‌ನ ೨೪ ವರ್ಷ ಪ್ರಾಯದ ರೇಣು ಖಾಟುನ್ ಬಾಲ್ಯದಿಂದಲೂ ತಾನೊಬ್ಬಳು ನರ್ಸ್ ಆಗಬೇಕು, ಸಾಧ್ಯವಾದರೆ ಸರಕಾರಿ ಆಸ್ಪತ್ರೆಯಲ್ಲಿ ಕೆಲಸ ಪಡೆಯಬೇಕು ಎಂಬ ಗುರಿ ಹಾಕಿಕೊಂಡು ಬಂದ ಸಾಧಾರಣ ಕುಟುಂಬದ ಒಬ್ಬಳು ಹೆಣ್ಣು ಮಗಳು. ತನ್ನ ಗುರಿಯಂತೆ ನರ್ಸಿಂಗ್ ತರಬೇತಿ ಪಡೆದು ದುರ್ಗಾಪುರದ ಖಾಸಗಿ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗುತ್ತಾಳೆ. ಹಾಗೆಯೇ ಸರಕಾರಿ ಆಸ್ಪತ್ರೆಯಲ್ಲಿ ಕೆಲಸ ಪಡೆಯುವ ತನ್ನ ಪ್ರಯತ್ನವನ್ನು ಮುಂದುವರಿಸುತ್ತಾಳೆ. ಅದರಂತೆ ಸರಕಾರಿ ನರ್ಸ್ ಪರೀಕ್ಷೆ ಬರೆದು ಪಾಸಾಗಿ, ಜೂನ್ ತಿಂಗಳ ೫ರಂದು ಸರಕಾರಿ ಆಸ್ಪತ್ರೆಯೊಂದರಲ್ಲಿ ನರ್ಸ್ ಕೆಲಸಕ್ಕೆ ಆಯ್ಕೆಯಾಗುತ್ತಾಳೆ. ಮನೆಗೆ ಬಂದು ಆ ಸಿಹಿ ಸುದ್ದಿಯನ್ನು ತನ್ನ ಗಂಡ ಶೇರ್ ಮಹಮ್ಮದ್ ಶೇಖ್‌ನೊಂದಿಗೆ ಖುಷಿಯಿಂದ ಹೇಳಿಕೊಳ್ಳುತ್ತಾಳೆ.
ಆವತ್ತು ರಾತ್ರಿ, ತನ್ನ ಗುರಿ ಈಡೇರಿದ ಸಂತೋಷದಲ್ಲಿ ಊಟ ಮಾಡಿ ಮಲಗಿದಾಗ ಅವಳು ದುಸ್ವಪ್ನದಲ್ಲೂ ಊಹಿಸಿಕೊಳ್ಳಲಾಗದಂತಹದು ನಡೆಯುತ್ತದೆ. ಶೇರ್ ಮಹಮ್ಮದ್ ಶೇಖ್ ಅವಳು ನಿದ್ದೆಯಲ್ಲಿರುವಾಗ ಅವಳ ಬಲ ಮುಂಗೈಯನ್ನು ಕಡಿದು ಹಾಕುತ್ತಾನೆ!
ಶೇರ್ ಮಹಮ್ಮದ್ ಶೇಖ್ ಮತ್ತು ಅವನ ತಂದೆತಾಯಿಗೆ ರೇಣು ಖಾಟೂನ್ ಉದ್ಯೋಗ ಮಾಡುವುದು ಇಷ್ಟವಿರಲಿಲ್ಲ. ಶೇರ್ ಮಹಮ್ಮದ್ ಶೇಖ್ ನಿರುದ್ಯೋಗಿಯಾಗಿದ್ದು ತಂದೆಯ ಕಿರಾಣಿ ಅಂಗಡಿಯನ್ನು ನಡೆಸುತ್ತಿದ್ದ. ರೇಣು ಖಾಟೂನ್ ಉದ್ಯೋಗಿಯಾಗಿರುವುದು ಅವನಲ್ಲಿ ಕೀಳರಿಮೆ ಹುಟ್ಟಿಸುತ್ತಿತ್ತು. ಇನ್ನು ಆಕೆಗೆ ಸರಕಾರಿ ಉದ್ಯೋಗ ಸಿಕ್ಕರೆ ತಾನು ಅವಳೆದುರು ಇನ್ನಷ್ಟು ನಿಕೃಷ್ಟನಾಗುತ್ತೇನೆ ಎಂದು ಭಾವಿಸಿದ ಅವನು ಅವಳು ಉದ್ಯೋಗ ಮಾಡಲಾಗದಂತೆ ಮಾಡಲು ಅವಳ ಬಲಗೈಯನ್ನು ಕತ್ತರಿಸಿದನು. ನಂತರ, ಅವಳನ್ನು ತಾನೇ ಆಸ್ಪತ್ರೆಗೆ ದಾಖಲಿಸಿ ಪರಾರಿಯಾಗುತ್ತಾನೆ.
ಸರ್ಜರಿ ಮೂಲಕ ಅವಳ ಕೈಯನ್ನು ಮತ್ತೆ ಜೋಡಿಸಲು ಆಗಬಾರದು ಎಂಬ ಉದ್ದೇಶದಿಂದ ಶೇರ್ ಮಹಮ್ಮದ್ ಕತ್ತರಿಸಿದ ಕೈಯನ್ನು ಅಡಗಿಸಿಟ್ಟಿದ್ದು, ಸಕಾಲದಲ್ಲಿ ಅದು ಸಿಗದೆ ಜೋಡಿಸಲಾಗಲಿಲ್ಲ. ಬದಲಿಗೆ, ಕೈ ಕತ್ತರಿಸಿ ಅದಾಗಲೇ ಐದಾರು ಗಂಟೆಗಳಾಗಿ ಸೋಂಕು ತಗುಲಿದ್ದರಿಂದ ಡಾಕ್ಟರು ಕೈಯ ಇನ್ನಷ್ಟು ಭಾಗವನ್ನು ಕತ್ತರಿಸಬೇಕಾಗಿ ಬಂದಿತು.
ಅದಾಗಿ ಎರಡು ದಿನಗಳ ನಂತರ ಅವಳನ್ನು ಉಪಚರಿಸುತ್ತಿದ್ದ ನರ್ಸ್‌ಗೆ ಆಶ್ಚರ್ಯ ಕಾದಿತ್ತು. ಹಿಂದಿನ ಎರಡು ದಿನಗಳಂತೆ ಅಂದು ಬೆಳಿಗ್ಗೆ ಅವಳಿಗೆ ಔಷಧಿ ಕೊಡಲು ಹೋದಾಗ ರೇಣು ತನಗೊಂದು ಪೆನ್ ಮತ್ತು ಕಾಗದ ಕೊಡುವಂತೆ ಆ ನರ್ಸನ್ನು ಕೇಳುತ್ತಾಳೆ! ಆಕೆ ಯಾಕೆ ಎಂದು ಕೇಳಿದಾಗ ರೇಣು, ನನ್ನ ಎಡಗೈಯಿಂದ ಬರೆಯಲು ಪ್ರಾಕ್ಟಿಸ್ ಮಾಡಬೇಕು ಎಂದು ಉತ್ತರಿಸುತ್ತಾಳೆ.
ನರ್ಸ್ ಆಕೆ ಕೇಳಿದಂತೆ ಒಂದು ಪೆನ್ ಮತ್ತು ಕಾಗದವನ್ನು ತಂದು ಕೊಡುತ್ತಾರೆ. ಬಲಗೈ ಇನ್ನೂ ಅಸಾಧ್ಯ ನೋವು ಕೊಡುತ್ತಿದ್ದರೂ ಆಕೆ ತನ್ನ ಎಡಗೈಯಿಂದ ಬರೆಯುವುದನ್ನು ಅಭ್ಯಾಸ ಮಾಡುವುದನ್ನು ನೋಡಲು ಆಸ್ಪತ್ರೆಯ ನರ್ಸ್‌ಗಳೆಲ್ಲ ಬಂದು ಅವಳ ಹಾಸಿಗೆ ಸುತ್ತ ನೆರೆಯುತ್ತಾರೆ. ಬೆಳಿಗ್ಗೆ ಪ್ರಾಕ್ಟಿಸ್ ಶುರು ಮಾಡಿದ ರೇಣು ಮಧ್ಯಾಹ್ನದ ಹೊತ್ತಿಗೆ ಇಂಗ್ಲಿಷ್ ಮತ್ತು ಬಂಗಾಳಿಯಲ್ಲಿ ಪದಗಳನ್ನು ಬರೆಯುವಲ್ಲಿ ಯಶಸ್ವಿಯಾಗುತ್ತಾಳೆ.
‘ನನ್ನ ಗಂಡ ನನ್ನ ಬಲಗೈಯನ್ನು ಕತ್ತರಿಸಿದರೆ ನಾನು ಕೆಲಸ ಮಾಡುವುದನ್ನು ನಿಲ್ಲಿಸುತ್ತೇನೆ ಅಂತ ತಿಳಿದುಕೊಂಡಿದ್ದಾನೆ. ಅವನ ಆಲೋಚನೆ ಫಲಿಸದು. ಬಲಗೈ ಹೋದರೇನಾಯಿತು, ಎಡಗೈಯಲ್ಲಿ ಕೆಲಸ ಮಾಡುತ್ತೇನೆ. ನನ್ನಪ್ಪ ಒಬ್ಬ ಸೆಕ್ಯುರಿಟಿ ಗಾರ್ಡ್ ಕೆಲಸ ಮಾಡಿ ನನ್ನನ್ನು ಬೆಳೆಸಿದರು, ನನಗೆ ವಿದ್ಯಾಭ್ಯಾಸ ಕೊಡಿಸಿದರು. ಅವರಿಗೆ ನಾನು ನಿರಾಸೆ ಮಾಡಲಾರೆ. ಏನಾದರಾಗಲಿ, ನಾನು ಈ ಸರ್ಕಾರಿ ಕೆಲಸವನ್ನು ಉಳಿಸಿಕೊಳ್ಳಲೇಬೇಕು. ನನ್ನ ಜೀವ ಉಳಿಸಿದಕ್ಕೆ ನಿಮಗೆ ಹಾಗೂ ಡಾಕ್ಟರುಗಳಿಗೆ ನಾನು ಅಬಾರಿ’ ಎಂದು ದೃಢ ಸ್ವರದಲ್ಲಿ ಹೇಳಿದಾಗ ನೆರೆದ ನರ್ಸ್‌ಗಳು ಕಣ್ಣರಳಿಸಿ ಅವಳನ್ನೇ ನೋಡುತ್ತಾರೆ.
ರೇಣು ಖಾಟೂನ್ ಕೆಲವೇ ದಿನಗಳಲ್ಲಿ ಎಡಗೈಯಿಂದ ಬರೆಯಲು ಕಲಿಯುತ್ತಾಳೆ. ತನ್ನ ಹೊಸ ಕೆಲಸವನ್ನು ಉಳಿಸಿಕೊಡುವಂತೆ ವಿನಂತಿಸಿ ಪ. ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರಿಗೆ ಒಂದು ಪತ್ರವನ್ನೂ ಬರೆಯುತ್ತಾಳೆ. ಪ. ಬಂಗಾಳ ಮಹಿಳಾ ಆಯೋಗದ ಸದಸ್ಯೆಯರ ಒಂದು ತಂಡ ರೇಣು ಖಾಟೂನ್‌ಳನ್ನು ಭೇಟಿ ಮಾಡಿ, ಅವರೂ ಆಕೆಯ ಕೆಲಸವನ್ನು ಉಳಿಸಿಕೊಡಲು ಮುಖ್ಯಮಂತ್ರಿಯನ್ನು ವಿನಂತಿಸಿದರು.
ಘಟನೆ ನಡೆದು ಇದೀಗ ಮೂರು ತಿಂಗಳು ಕಳೆದಿವೆ. ಶೇರ್ ಮಹಮ್ಮದ್ ಶೇಖ್, ರೇಣು ಕೈ ಕತ್ತರಿಸಲು ಅವನಿಗೆ ಸಹಾಯ ಮಾಡಿದ ಇನ್ನಿಬ್ಬರು ಮತ್ತು ಅವನ ತಂದೆ ತಾಯಿ ಪೊಲೀಸ್ ಲಾಕಪ್ಪಿನಲ್ಲಿದ್ದಾರೆ. ರೇಣು ಖಾಟೂನ್ ಆಸ್ಪತ್ರೆಯಿಂದ ಬಿಡುಗಡೆಯಾಗಿ ತನ್ನ ತವರು ಮನೆಯಲ್ಲಿದ್ದಾಳೆ. ಅಷ್ಟೇ ಅಲ್ಲ, ಮುಂಖ್ಯಮಂತ್ರಿಯ ಮಮತಾ ಬ್ಯಾನರ್ಜಿಯ ಶಿಫಾರಸಿನ ಮೇರೆಗೆ ಆಕೆಯ ಹೊಸ ಕೆಲಸ ಉಳಿದಿದ್ದು, ದಿನಾ ಕೆಲಸಕ್ಕೆ ಹೋಗಿ ಬರುತ್ತಿದ್ದಾಳೆ. ಮಮತಾ ರೇಣುವಿನ ಚಿಕಿತ್ಸೆಯ ಸಂಪೂರ್ಣ ಖರ್ಚನ್ನು ಸರಕಾರವೇ ಭರಿಸುವುದಲ್ಲದೆ ಆಕೆಯ ಕೃತಕ ಕೈಯನ್ನು ಜೋಡಿಸುವ ಭರವಸೆಯನ್ನೂ ನೀಡಿದ್ದಾರೆ.
ಎಡಗೈಯಿಂದ ಬರೆಯುವುದನ್ನು ಕಲಿತ ರೇಣು ಖಾಟುನ್ ಈಗ ಅದೇ ಎಡಗೈಯಿಂದ ಚಿತ್ರ ಬರೆಯುವುದನ್ನು ಕಲಿಯುತ್ತಿದ್ದಾಳೆ! ಅವಳ ಕೆಲಸದ ಶಿಫ್ಟ್ ಕೆಲವೊಮ್ಮೆ ಬೆಳಗ್ಗೆ ಎಂಟರಿಂದ ಮಧ್ಯಾಹ್ನ ಎರಡರ ತನಕ ಇದ್ದರೆ, ಕೆಲವೊಮ್ಮೆ ಮಧ್ಯಾಹ್ನ ಎರಡರಿಂದ ರಾತ್ರಿ ಎಂಟರ ತನಕ ಇರುತ್ತದೆ. ಎಲ್ಲ ದಿನಗಳೂ ಆಕೆಗೆ ಬಿಡುವು ಸಿಕ್ಕುವುದಿಲ್ಲ. ಬಿಡುವ ಸಿಕ್ಕಾಗಲೆಲ್ಲ ಅವಳು ಡೂಡ್ಲಿಂಗ್ (ಗೀಚುವುದು) ಮಾಡಿ ಏನಾದರೊಂದು ಚಿತ್ರ ಬರೆಯುತ್ತಾರೆ. ಬಾಲ್ಯದಿಂದಲೂ ಆಕೆಗೆ ಗಣಪತಿಯೆಂದರೆ ಅಚ್ಚುಮೆಚ್ಚು. ಎಡಗೈಯಿಂದ ಆಕೆ ಮೊದಲು ಬರೆದ ಚಿತ್ರವೇ ಗಣಪತಿಯದ್ದು.
‘ನನ್ನ ಬಲಗೈ ಹೋದುದರಿಂದ ಏನೇನು ಕೆಲಸ ಮಾಡಲಾರೆ ಎಂದು ಚಿಂತಿಸುವ ಬದಲು ನನಗೆ ನಾನೇ ಸ್ಫೂರ್ತಿ ತುಂಬಿಕೊಂಡು, ಎಡಗೈಯಿಂದಲೇ ಎರಡೂ ಕೈಗಳ ಕೆಲಸ ಮಾಡುತ್ತೇನೆ. ನಡೆದ ಘಟನೆ ಬಗ್ಗೆ ಮನಸ್ಸಿನಲ್ಲಿ ಕ್ರೋಧ ತುಂಬಿಕೊಳ್ಳದೆ ನನ್ನ ಮುಂದಿನ ಬದುಕನ್ನು ಕಟ್ಟಿಕೊಳ್ಳುತ್ತೇನೆ’ ಎನ್ನುವ ರೇಣು ಖಾಟೂನ್‌ಗೆ ಸರಕಾರಿ ನರ್ಸ್ ಆಗಿರುವುದಷ್ಟೇ ಗುರಿ ಅಲ್ಲ. ಜೂನ್ ೫ಕ್ಕೆ ಮೊದಲು ತಾನು ಬಲಗೈಯಿಂದ ಎನೇನು ಮಾಡುತ್ತಿದ್ದೆನೋ ಅವೆಲ್ಲವನ್ನು, ಸಾಧ್ಯವಾದರೆ ಅದಕ್ಕಿಂತಲೂ ಹೆಚ್ಚಿನದನ್ನು ಎಡಗೈಯಿಂದ ಮಾಡುವುದು ಆಕೆಯ ಛಲ. ಮುಂದೆ ಕರಾಟೆ ಕಲಿಯುವ ಆಲೋಚನೆ ಹಾಕಿಕೊಂಡಿದ್ದಾಳೆ. ಅಷ್ಟೇ ಅಲ್ಲ. ಮುಂದಿನ ವರ್ಷಗಳಲ್ಲಿ ಎಂಎಸ್ಸಿ ಮಾಡಿ, ನರ್ಸಿಂಗ್ ವಿಷಯದಲ್ಲಿ ರಿಸರ್ಚ್ ಮಾಡುವುದು, ಹೆಣ್ಣುಮಕ್ಕಳಿಗೆ ರೋಗಿಗಳನ್ನು ಉಪಚರಿಸುವುದು ಹೇಗೆಂದು ಕಲಿಸುವುದು ಆಕೆಯ ಗುರಿ.
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…
ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…
ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…
ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟ ಪಡೆದಿದೆ. ಈ ಮೂಲಕ ಈಗ…
ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್ ಶಾಕ್ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…