ಎಡಿಟೋರಿಯಲ್

ಸಂಬಂಜ ಅನ್ನೋದು ನಿಜಕ್ಕೂ ದೊಡ್ಡದು ಕನಾ…

ದೇವನೂರರ ಕಥೆಗಳ ಪರಿಣಾಮಕಾರಿ ರಂಗಾಭಿವ್ಯಕ್ತಿ ಜನಮನ ತಂಡದ ಹೆಗ್ಗಳಿಕೆ

ನಾ ದಿವಾಕರ
ಓದು, ಅಧ್ಯಯನ, ಚರ್ಚೆ, ವಿಚಾರ ಮಂಥನ ಮತ್ತು ವಾದ- ವಾಗ್ವಾದಗಳ ಒಂದು ಪರಂಪರೆಯನ್ನೇ ದಾಟಿ ಬಂದಿರುವ ಆಧುನಿಕ ಭಾರತೀಯ ಸಮಾಜದಲ್ಲಿ ಪುರಾಣ ಮತ್ತು ಮಿಥ್ಯೆಗಳು ಇತಿಹಾಸವಾಗುತ್ತಿದ್ದು, ಚರಿತ್ರೆಯ ಹೆಜ್ಜೆಗಳೆಲ್ಲವೂ ಭ್ರಮಾತ್ಮಕವಾಗುತ್ತಿವೆ. ಅಕ್ಷರ ಪ್ರಪಂಚದಿಂದ ವಿಮುಖವಾದ ಒಂದು ಸಮಾಜ ನಮ್ಮ ನಡುವಿನ ಕಲ್ಪಿತ ಚರಿತ್ರೆ ಮತ್ತು ಊಹಾತ್ಮಕ ವಾಸ್ತವಗಳ ಲೋಕದಲ್ಲಿ ಬಂದಿಯಾಗಿದ್ದರೆ ಮತ್ತೊಂದು ಲೋಕ ತನ್ನ ಬೇರುಗಳನ್ನು ಶೋಧಿಸುವ ಸಲುವಾಗಿಯೇ ಡಾ.ಬಿ.ಆರ್. ಅಂಬೇಡ್ಕರ್, ಜ್ಯೋತಿಬಾಫುಲೆ, ಸಾವಿತ್ರಿಬಾಯಿ ಫುಲೆ ಮುಂತಾದವರ ಚಿಂತನೆಗಳತ್ತ ಮುಖ ಮಾಡಿದೆ. ಈ ಸಂದಿಗ್ಧತೆಯ ನಡುವೆಯೇ ಲಿಂಗತ್ವ ಸೂಕ್ಷ್ಮತೆ, ಸ್ತ್ರೀ ಸಂವೇದನೆ ಮತ್ತು ಮನುಜ ಸಂಬಂಧಗಳ ಸೂಕ್ಷ್ಮ ತಂತುಗಳನ್ನು ಮರುಶೋಧಿಸುವ ಪ್ರಯತ್ನದಲ್ಲಿ ಈ ದೇಶದ ಬಹುಸಂಖ್ಯಾತ ಸಮುದಾಯ ತೊಡಗಿದೆ. ಮನುಜ ಸಂಬಂಧಗಳು ಸಾಪೇಕ್ಷವಾಗುತ್ತಾ ಹೋಗುತ್ತಿರುವಂತೆ ನಮ್ಮ ಸಾಂಪ್ರದಾಯಿಕ ಸಮಾಜ ನಿರ್ಮಿಸಿ ಬಿಟ್ಟಿರುವ ಮತ್ತು ನಾವೇ ನಿರ್ಮಿಸಿಕೊಂಡಿರುವ ಅಸ್ಮಿತೆಯ ಗೋಡೆಗಳನ್ನು ಕೆಡವುದರ ಬದಲಾಗಿ ಎತ್ತರಿಸುತ್ತಲೇ ಹೋಗುತ್ತಿರುವ ಈ ಸನ್ನಿವೇಶದಲ್ಲಿ ದೇವನೂರರ ಐದು ಕಥೆಗಳನ್ನಾಧರಿಸಿದ ಸಂಬಂಜ ಅನ್ನೋದು ದೊಡ್ಡದು ಕನಾ ಎಂಬ ನಾಟಕ ನಮ್ಮ ಅಂತಃಸಾಕ್ಷಿಯನ್ನು ಕದಡಿಬಿಡುತ್ತದೆ.
ದೇವನೂರು ಅವರ ‘ಮಾರಿಕೊಂಡವರು ’; ‘ಮೂಡಲ ಸೀಮೆಲಿ ಕೊಲೆ ಗಿಲೆ ಇತ್ಯಾದಿ’ ; ‘ಡಾಂಬರು ಬಂದುದು’; ‘ಅಮಾಸ ’; ಮತ್ತು ‘ಒಡಲಾಳ’ ಕತೆಗಳನ್ನು ಆಧರಿಸಿ ಪ್ರೊ ರಾಜಪ್ಪ ದಳವಾಯಿ ಅವರು ನಿರೂಪಿಸಿರುವ ‘ ಸಂಬಂಜ ಅನ್ನೋದು ದೊಡ್ಡದು ಕನಾ’ ನಾಟಕ ಶುಕ್ರವಾರ (೨೬-೮-೨೦೨೨) ಮೈಸೂರಿನ ಕಿರುರಂಗ ಮಂದಿರದಲ್ಲಿ ಪ್ರದರ್ಶನವಾಯಿತು. ಖ್ಯಾತ ರಂಗಭೂಮಿ ಮತ್ತು ಚಲನಚಿತ್ರ ನಟ ಪ್ರಕಾಶ್ ರೈ ಅವರ ಸಹಯೋಗದೊಂದಿಗೆ ಜನಮನ ಸಾಂಸ್ಕೃತಿಕ ಸಂಘಟನೆ ಪ್ರಸ್ತುತ ಪಡಿಸಿದ ಈ ರಂಗಪ್ರಯೋಗ ಹಲವು ಕಾರಣಗಳಿಗಾಗಿ ವಿಶೇಷ ಅನಿಸುತ್ತದೆ. ದಲಿತ ಸಮುದಾಯಗಳಲ್ಲೂ ಇಂದಿನ ಶತಮಾನದ ಪೀಳಿಗೆ ಎನ್ನಲಾಗುವ ಯುವ ಮನಸುಗಳು ಎಷ್ಟರ ಮಟ್ಟಿಗೆ ದೇವನೂರು ಅವರನ್ನು ಓದಿರುತ್ತಾರೆ ಅಥವಾ ಓದಿ ಅರ್ಥಮಾಡಿಕೊಂಡಿರುತ್ತಾರೆ ಎಂಬ ಪ್ರಶ್ನೆ ಸಹಜವಾಗಿಯೇ ನಮ್ಮನ್ನು ಕಾಡುತ್ತದೆ. ಅಂತಹ ಯುವ ಮನಸುಗಳಿಗೆ ಮತ್ತು ವರ್ತಮಾನದ ಬೌದ್ಧಿಕ ಚಿಂತನಾ ವಲಯಕ್ಕೆ ಈ ಐದು ಕತೆಗಳನ್ನು ಒಂದೇ ಎಳೆಯಲ್ಲಿ ಬೆಸೆದು, ದಲಿತ ಸಮುದಾಯದ ಬದುಕು ಮತ್ತು ಸಾಮಾಜಿಕ- ಸಾಂಸ್ಕೃತಿಕ ನೆಲೆಗಳು ಇಂದಿಗೂ ಎದುರಿಸುತ್ತಿರುವ ಜಟಿಲ ಸಮಸ್ಯೆಗಳನ್ನು, ಕ್ಲಿಷ್ಟ ಸವಾಲುಗಳನ್ನು ರಂಗಭೂಮಿಗೆ ಅರ್ಪಿಸಿರುವುದು ಪ್ರೊ.ರಾಜಪ್ಪ ದಳವಾಯಿ ಅವರ ಹೆಗ್ಗಳಿಕೆ.
ಈ ನಾಟಕ ರೂಪದ ಐದು ಕತೆಗಳನ್ನು ಎರಡು ಗಂಟೆಗಳ ಅವಧಿಯಲ್ಲಿ ಪರಿಣಾಮಕಾರಿಯಾಗಿ ಪ್ರೇಕ್ಷಕರ ಮುಂದಿರಿಸುವ ದುಸ್ಸಾಹಸವನ್ನೇ ಜನಮನ ಸಾಂಸ್ಕೃತಿಕ ಸಂಘಟನೆ ಮತ್ತು ಅದರ ರೂವಾರಿಗಳಾದ ಜನಾರ್ಧನ್ ಜನ್ನಿ, ಸುಮತಿ ಜನ್ನಿ ಮಾಡಿದ್ದಾರೆ. ತಮ್ಮ ಈ ವಿನೂತನ ಪ್ರಯೋಗದಲ್ಲಿ ಯಶಸ್ವಿಯಾಗಿದ್ದಾರೆ ಎಂದೂ ಹೇಳಬಹುದು. ದೇವನೂರರ ಐದೂ ಕತೆಗಳು ವಿಭಿನ್ನ ಸನ್ನಿವೇಶಗಳನ್ನು ಸಾಮಾಜಿಕ-ಸಾಂಸ್ಕೃತಿಕ ನೆಲೆಗಳಲ್ಲಿ ಬಿಂಬಿಸುವ ಕಥಾವಸ್ತುಗಳನ್ನು ಹೊಂದಿದ್ದರೂ ಅಮಾಸನಿಂದ ಒಡಲಾಳದ ಹಿರಿಯಜ್ಜಿಯವರೆಗೆ ಮನುಜ ಸಂಬಂಧಗಳು ಹೇಗೆ ನಮ್ಮ ಶ್ರೇಣೀಕೃತ ಸಮಾಜದ ಕ್ರೌರ್ಯ ಮತ್ತು ಅಸಹನೆಯ ನಡುವೆ ಬೆಸೆದುಕೊಳ್ಳುತ್ತವೆ ಎನ್ನುವುದನ್ನು ಈ ರಂಗಪ್ರಯೋಗ ಸ್ಫಟಿಕ ಸ್ಪಷ್ಟತೆಯಿಂದ ನಿರೂಪಿಸುತ್ತದೆ.
ಆಧುನಿಕ ಭಾರತದ ಸವರ್ಣೀಯ ಸಮಾಜವೊಂದು ತುಳಿತಕ್ಕೊಳಗಾದ ತಳ ಸಮುದಾಯದ ಯುವ ಮನಸುಗಳನ್ನೂ ತನ್ನೊಳಗೆ ಆವಾಹಿಸಿಕೊಂಡು, ಅಧಿಕಾರ ರಾಜಕಾರಣ ಮತ್ತು ಸಾಂಸ್ಕೃತಿಕ ರಾಜಕಾರಣದ ನೆಲೆಗಳಲ್ಲಿ ಶೋಷಣೆಗೊಳಗಾದವರ ಕಣ್ಣುಗಳಿಗೂ ಪೊರೆ ಬರುವಂತೆ ಮಾಡಿರುವ ವರ್ತಮಾನದ ಬದುಕಿನ ನಡುವೆ, ಶೋಷಣೆ ವಿಭಿನ್ನ ಆಯಾಮಗಳನ್ನು ಪಡೆದುಕೊಂಡಿರುವಂತೆಯೇ ಶೋಷಣೆ ಯನ್ನು ಗ್ರಹಿಸುವ ಮನಸ್ಥಿತಿಯೂ ಭಿನ್ನವಾಗಿಯೇ ಕಾಣುತ್ತಿವೆ.
ಈ ಸಂದಿಗ್ಧ ಪರಿಸ್ಥಿತಿಯಲ್ಲಿ ದಲಿತ ಸಂವೇದನೆ, ಸ್ತ್ರೀ ಸಂವೇದನೆ ಮತ್ತು ಶೋಷಿತರ ‘ಒಡಲಾಳ’ದ ವೇದನೆಯನ್ನು ಹೇಗೆ ಹೊರಗೆಡಹುವುದು ? ವರ್ತಮಾನದ ಸಮಾಜ ‘ಮಾರಿಕೊಂಡವರ’ ನಡುವೆಯೇ ಬದುಕುತ್ತಿದೆ. ಆಳುವ ವರ್ಗಗಳು, ಶೋಷಕ ವರ್ಗಗಳು ಮತ್ತು ಈ ವರ್ಗಗಳಿಗೆ ಒತ್ತಾಸೆಯಾಗಿ ನಿಲ್ಲುವ ಒಂದು ಮೇಲ್ಜಾತಿ-ಮೇಲ್ವರ್ಗದ ಹಿತವಲಯ ಮತ್ತು ಶೋಷಿತ ಸಮುದಾಯದಿಂದಲೇ ಉಗಮಿಸಿರುವ ಒಂದು ಹಿತವಲಯ ಇವತ್ತಿನ ಸಮಾಜದಲ್ಲೂ ‘ಅಮಾಸ’ನನ್ನು ಸೃಷ್ಟಿಸುತ್ತಲೇ ಇದ್ದಾರೆ.
ಒಂದು ಕಾಲದಲ್ಲಿ ‘ಡಾಂಬರು ಬಂದುದು’ ಎಂದು ಸಂಭ್ರಮಿಸುವ ಒಂದು ಗ್ರಾಮೀಣ ಪರಿಸರ ಇಂದು ಅಂತರ್ಜಾಲ ಮಾಧ್ಯಮಗಳ ಆಗಮನದೊಂದಿಗೆ ಬದಲಾಗುತ್ತಾ ಬಂದಿದೆ. ಅಧಿಕಾರ ರಾಜಕಾರಣದ ಲಾಲಸೆಗಳಿಗೆ, ಮಾರುಕಟ್ಟೆ ಆರ್ಥಿಕತೆಯ ಧನಕೂಪಗಳಿಗೆ ತಮ್ಮನ್ನು ತಾವೇ ‘ಮಾರಿಕೊಂಡವರು’ ವರ್ತಮಾನದ ಸಾಮಾಜಿಕ-ಸಾಂಸ್ಕೃತಿಕ ಬದುಕನ್ನು ಪುನರ್ನಿರ್ಮಿಸಲು ಮುಂದಾಗುತ್ತಿದ್ದಾರೆ. ಈ ಸವಾಲುಗಳ ನಡುವೆ ದೇವನೂರರ ‘ಮೂಡಲ ಸೀಮೇಲಿ ಕೊಲೆ ಗಿಲೆ ಇತ್ಯಾದಿ’ ಇಂದು ನಡೆಯುತ್ತಿರುವ ದ್ವೇಷ ರಾಜಕಾರಣ ಮತ್ತು ಮತಾಂಧತೆಯ ಭೀಕರ ಸನ್ನಿವೇಶಕ್ಕೆ ಕನ್ನಡಿ ಹಿಡಿಯುತ್ತದೆ.
ಸಾಹಿತ್ಯ, ಕಲೆ, ಸಂಗೀತ, ನಾಟಕ ಮತ್ತು ಇತರ ಯಾವುದೇ ಸಂವೇದನಾಶೀಲ ಬೌದ್ಧಿಕ ನೆಲೆಗಳಲ್ಲಿ ಅವಶ್ಯವಾಗಿ ಇರಲೇಬೇಕಾದ ‘ಸೃಜನಶೀಲತೆ’ಯ ಎಲ್ಲ ಅವಯವಗಳನ್ನೂ ಹಂತಹಂತವಾಗಿ ಶಿಥಿಲಗೊಳಿಸುತ್ತಿರುವ ಇವತ್ತಿನ ಸಂದರ್ಭದಲ್ಲಿ ‘ಮನುಜ ಸಂಬಂಧ’ ಎನ್ನುವುದೇ ಮಾರುಕಟ್ಟೆಯ ವಸ್ತುವಾಗಿ ಪರಿಣಮಿಸುತ್ತಿದೆ. ಶೋಷಿತ ಸಮುದಾಯಗಳ ನಡುವೆಯೇ ಮನುಜ ಸಂಬಂಧದ ತಂತುಗಳು ಹಲವು ಕಾರಣಗಳಿಗಾಗಿ ಶಿಥಿಲವಾಗುತ್ತಿರುವ ವಿಷಮ ಸನ್ನಿವೇಶವನ್ನು ಎದುರಿಸುತ್ತಿದ್ದೇವೆ. ಪಂಪ ಮಹಾಕವಿಯ ‘ಮನುಷ್ಯ ಜಾತಿ ತಾನೊಂದೇ ವಲಂ’ ಎಂಬ ಮಾತಿಗೂ , ರಾಷ್ಟ್ರಕವಿ ಕುವೆಂಪು ಅವರ ‘ವಿಶ್ವಮಾನವನಾಗುವ’ ಸಂದೇಶಕ್ಕೂ ದೇವನೂರರ ‘ಸಂಬಂಜ ಅನ್ನೋದು ದೊಡ್ಡದು ಕನಾ’ ಎಂಬ ಸಂದೇಶಕ್ಕೂ ಇರುವ ಸೂಕ್ಷ್ಮ ಸಂಬಂಧದ ಎಳೆಗಳನ್ನು ಗುರುತಿಸುವುದು ಇವತ್ತಿನ ಆದ್ಯತೆಯಾಗಬೇಕಿದೆ.
ಈ ಆದ್ಯತೆಗೆ ಒಂದು ಭೂಮಿಕೆಯನ್ನು ನೀಡುವುದರಲ್ಲಿ ಗೆಳೆಯರಾದ ಜನ್ನಿ , ಸುಮತಿ ಜನ್ನಿ ಮತ್ತು ಅವರ ತಂಡ ಯಶಸ್ವಿಯಾಗಿದೆ. ರಾಜಪ್ಪ ದಳವಾಯಿ ಅವರ ಪರಿಶ್ರಮಮ ಸಾರ್ಥಕವೂ ಆಗಿದೆ. ಐದು ಕತೆಗಳು, ಐದು ವಿಭಿನ್ನ ಸನ್ನಿವೇಶಗಳು, ಐದು ಸಾಮಾಜಿಕ ಪರಿಸರ ಮತ್ತು ಐದು ಸಾಂಸ್ಕೃತಿಕ ನೆಲೆಗಳಲ್ಲಿ ರಚಿತವಾಗಿರುವ ದೇವನೂರರ ಐದೂ ಕತೆಗಳಲ್ಲಿನ ಸಮಾನ ಎಳೆಯನ್ನು ಈ ದೇಶದ ತಳಸಮುದಾಯಗಳ ಬದುಕಿನ ನಡುವೆ ಇಂದಿಗೂ ಕಾಣಬಹುದಾಗಿದೆ. ಭೌತಿಕ ಜಗತ್ತಿನ ವಾಸ್ತವಗಳು ಮತ್ತು ಸಾಂಸ್ಕೃತಿಕ ಜಗತ್ತಿನ ಭ್ರಮೆಗಳನ್ನು ಒಂದೇ ತಕ್ಕಡಿಯಲ್ಲಿಟ್ಟು ನೋಡಿದಾಗ, ಈ ಐದೂ ಕತೆಗಳಲ್ಲಿನ ಪಾತ್ರಗಳು ಮತ್ತು ಸನ್ನಿವೇಶಗಳು ವರ್ತಮಾನ ಭಾರತದಲ್ಲೂ ಜೀವಂತಿಕೆಯಿಂದಿರುವ ಜಾತಿ ಸೂಕ್ಷ್ಮಗಳನ್ನು ಬಿಡಿಸಿಡುತ್ತವೆ. ಇದನ್ನು ಒಂದೇ ಎಳೆಯಲ್ಲಿ ಹೆಣೆಯುವ ರಾಜಪ್ಪ ದಳವಾಯಿ ಅವರ ಬೌದ್ಧಿಕ ಪರಿಶ್ರಮಕ್ಕೆ ಪೂರಕವಾಗಿ ಜನಮನ ತಂಡ, ನಿರ್ದೇಶಕಿ ಸುಮತಿ ಜನ್ನಿ ಮತ್ತು ಜನಾರ್ಧನ್ ಜನ್ನಿ ರಂಗಭೂಮಿಯನ್ನು ಮತ್ತಷ್ಟು
ಶ್ರೀಮಂತಗೊಳಿಸುವ ರೀತಿಯಲ್ಲಿ ‘ಸಂಬಂಜ ಅನ್ನೋದು ದೊಡ್ಡದು ಕನಾ’ ನಾಟಕವನ್ನು ಜನರ ಮುಂದಿಟ್ಟಿದ್ದಾರೆ. ‘

andolanait

Recent Posts

59 ಸಾವಿರ ಶಿಕ್ಷಕರ ಹುದ್ದೆ ಖಾಲಿ: ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾಹಿತಿ

ಬೆಳಗಾವಿ: ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಶಾಲಾ ಶಿಕ್ಷಣ ಮತ್ತು…

1 hour ago

ಮೈಸೂರಿಗೆ ತೆರಳಲು ಅನುಮತಿ ಕೋರಿ ಕೋರ್ಟ್‌ ಮೋರಿ ಹೋದ ದರ್ಶನ್‌

ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್‌ ಮೈಸೂರಿಗೆ ನಾಲ್ಕು ವಾರಗಳ ಕಾಲ ತೆರಳಲು ಅನುಮತಿ…

2 hours ago

ನಾನು ಅಶ್ಲೀಲ ಪದ ಬಳಸಿಲ್ಲ : ಪೊಲೀಸರ ಬಳಿ ಸಿ.ಟಿ ರವಿ ಹೇಳಿಕೆ

ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳಕರ್‌ ಅವರಿಗೆ ಅಶ್ಲೀಲ ಪದ ಬಳಸಿ ನಿಂದಿಸಿರುವ ಆರೋಪದ ಮೇಲೆ ಬಂಧಿತಾರಾಗಿರುವ ಬಿಜೆಪಿ ಎಂಎಲ್‌ಸಿ ಸಿ.ಟಿ…

2 hours ago

ವೈದ್ಯ ಮೇಲೆ ಹಲ್ಲೆ: ದೂರು ದಾಖಲು

ಮೈಸೂರು: ನಗರದ ಅಲ್‌ ಅನ್ಸಾರ್‌ ಆಸ್ಪತ್ರೆಯ ವೈದ್ಯರೊಬ್ಬರ ಮೇಲೆ ದುಷ್ಕರ್ಮಿಗಳು ಬುಧವಾರ  ತಡರಾತ್ರಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಡಾ.…

2 hours ago

ವಿಶೇಷ ಚೇತನ ಮಕ್ಕಳು ಸಮಾಜಕ್ಕೆ ಶಾಪವಲ್ಲ, ವರ; ದೀಪಕ್‌ ಅಭಿಮತ

' ಗ್ರೇಸ್' ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ…

4 hours ago

ಸಕ್ಕರೆ ನಗರಿ ಅಂದ ಹೆಚ್ಚಿಸಿದ ದೀಪಾಲಂಕಾರ

ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್‌ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…

4 hours ago