ಎಡಿಟೋರಿಯಲ್

ಮಿತಿ ಮೀರಿ ಸುರಿದ ವರುಣ, ಅಂಕೆ ಮೀರಿದ ರಾಜಕಾರಣ

ಪ್ರಾಕೃತಿಕವಾಗಿ ಸುರಿವ ಮಳೆ ಪ್ರಮಾಣ ತಗ್ಗಿಸುವುದು ನಮ್ಮಿಂದಾಗುವುದಿಲ್ಲ ಎಂಬ ಕನಿಷ್ಠ ವಿನಯವಂತಿಕೆ ನಮಗಿರಬೇಕು!

ಶಿವಪ್ರಸಾದ್ ಜಿ

ಹುಯ್ಯೋ, ಹುಯ್ಯೋ ಮಳೆರಾಯ ಹೂವಿನ ತೋಟಕ್ಕೆ ನೀರಿಲ್ಲ, ಬಾರೋ ಬಾರೋ ಮಳೆರಾಯ ಬಾಳೆಯ ತೋಟಕ್ಕೆ ನೀರಿಲ್ಲ… ಎಂಬ ಸಾಲುಗಳನ್ನು ಮಕ್ಕಳು ಹಾಡುವಾಗ ಕೇಳುವುದಕ್ಕೆ ಇಂಪಾಗಿತ್ತು. ಆದರೆ, ಇತ್ತೀಚೆಗೆ ಮಳೆಯ ಉಗ್ರಾವತಾರ ನೋಡುತ್ತಿರುವಾಗ ಆ ಸಾಲುಗಳನ್ನು ಕೇಳಿದರೆ ಬೆಚ್ಚಿಬೀಳುವಂತಾಗಿದೆ. ಹಾಗಾಗಿ ಈಗ ಇಂಗ್ಲಿಷ್‌ನ ರೈಮಿಂಗ್ ಸಾಲುಗಳಂತೆ ‘ರೈನ್ ರೈನ್ ಗೋ ಅವೆ, ಕಮ್ ಎಗೈನ್ ಅನದರ್ ಡೆ’ ಎಂದು ಅಂಗಲಾಚುವ ಸ್ಥಿತಿ ಎದುರಾಗಿದೆ.
ಪ್ರತಿ ವರ್ಷವೂ ಮಳೆಯ ಕೋಪ- ತಾಪ ರಾಜ್ಯದ ಒಂದಲ್ಲ ಒಂದು ಕಡೆ ಭಯ ಹುಟ್ಟಿಸುವ ರೀತಿಯಲ್ಲಿ ಪ್ರದರ್ಶನಗೊಳ್ಳುತ್ತಿದೆ. ಈ ಬಾರಿಯಂತೂ ಮಳೆ ಬಿಟ್ಟೂ ಬಿಡದಂತೆ ಕಾಡುತ್ತಿದೆ. ಅಷ್ಟೇ ಬೃಹತ್ ಪ್ರಮಾಣದಲ್ಲಿ ಸಾವು, ನೋವು, ನಷ್ಟವನ್ನೂ ಉಂಟು ಮಾಡಿದೆ.
ಕೆಲ ತಿಂಗಳುಗಳಿಂದ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಭಾಗ ಅಕ್ಷರಶಃ ಮಳೆಯ ಅಬ್ಬರಕ್ಕೆ ತತ್ತರಿಸಿ ಹೋಗಿದೆ. ವಿಶೇಷವಾಗಿ ಬೆಂಗಳೂ ರಿನಲ್ಲಿ ನಿರಂತರ ಮಳೆ ಸುರಿದರೆ, ರಸ್ತೆಗಳು, ಹಳ್ಳ-ಕೊಳ್ಳಗಳು ಉಕ್ಕಿ ಹರಿಯುತ್ತಿದ್ದವು. ಗುಡಿಸಲುಗಳು, ಕೊಳೆಗೇರಿ ಮನೆಗಳಿಗೆ ಮಳೆ ನೀರು ನುಗ್ಗುತ್ತಿತ್ತು. ಈ ಬಾರಿ ಹಲವೆಡೆ ಐಷಾರಾಮಿ ವಿಲ್ಲಾಗಳೂ ಕೂಡ ವರುಣನ ಆಕ್ರೋಶಕ್ಕೆ ತುತ್ತಾಗಿವೆ. ಅತ್ಯಂತ ಸುರಕ್ಷಿತವಾಗಿವೆ ಎಂಬಂತಹ ಮನೆಗಳಿಗೂ ನೀರು ನುಗ್ಗಿದೆ. ಕೆಲ ಶ್ರೀಮಂತ ಬಡಾವಣೆಗಳಿಗೂ ಕೆಸರು, ಕೊಳಚೆಯ ದರ್ಶನವಾಗಿದೆ. ಅಂದರೆ ಆಧುನಿಕ ಬೆಂಗಳೂರು ಅಭಿವೃದ್ಧಿಯು ಸಮರ್ಪಕವಾಗಿಲ್ಲ ಅಥವಾ ಸುದೀರ್ಘ ಕಾಲದ ಮುನ್ನೋಟ ಇಲ್ಲದೆ ಪ್ರಗತಿದಾಯಕ ಯೋಜನೆಗಳನ್ನು ಅನುಷ್ಠಾನಗೊಳಿಸಿರುವುದರ ದ್ಯೋತಕ ಆಗಿದೆ.
ಪೂರ್ವ ಬೆಂಗಳೂರು ಪೂರ್ತಿ ಜಲಾವೃತವಾಗಿತ್ತು. ರಸ್ತೆಗಳು ಕೆರೆ, ಕಟ್ಟೆಗಳಂತಾಗಿ ನಾಗರಿಕರು ಕಾರು, ಸ್ಕೂಟರ್ ಬಿಟ್ಟು ದೋಣಿಗಳನ್ನು ಆಶ್ರಯಿಸುವಂತಾಗಿತ್ತು. ಈ ಮಳೆ ಕೂಡ ನಾಲ್ಕೈದು ದಿನಗಳು ಸತತವಾಗಿ ಸುರಿಯುವುದು, ಕೆಲ ದಿನಗಳು ಬಿಡುವು ನೀಡುವುದು, ಮತ್ತೆ ಶುರುವಾಗುವ ಮೂಲಕ ಮನುಷ್ಯರ ಜೀವನದ ಜೊತೆ ಚೆಲ್ಲಾಟ ಆಡುತ್ತಿದೆ.
ಇದು ಕೇವಲ ಬೆಂಗಳೂರಿನ ಮಾತಾದರೆ, ಇನ್ನು ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಮಳೆಯು ರೌದ್ರಾವತಾರ ಮೆರೆದಿದೆ. ೧೦೦ಕ್ಕೂ ಹೆಚ್ಚು ಸಾವು ಸಂಭವಿಸಿದ್ದು, ೭೦೦ಕ್ಕೂ ಹೆಚ್ಚು ಜಾನುವಾರುಗಳು ಸಾವಿಗೀಡಾಗಿವೆ ಎನ್ನಲಾಗಿದೆ. ೩,೦೦೦ ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ಆಸ್ತಿ-ಪಾಸ್ತಿ ನಷ್ಟವಾಗಿದೆ ಎಂಬುದಾಗಿ ರಾಜ್ಯ ಸರ್ಕಾರ ಕೇಂದ್ರ ಅಧ್ಯಯನ ಸಮಿತಿ ಮುಂದೆ ಲೆಕ್ಕ ಇಟ್ಟಿದೆ. ಈ ವರ್ಷ ವಾಡಿಕೆಗಿಂತ ಶೇ.೪೦ರಷ್ಟು ಅಧಿಕ ಮಳೆಯಾಗಿದೆ. ಇದು ೫೦ ವರ್ಷಗಳ ಅವಧಿಯಲ್ಲಿ ಸುರಿದಿರುವ ಅತ್ಯಧಿಕ ಮಳೆಯಾಗಿದೆ. ಇಷ್ಟರ ಮೇಲೆಯೂ ಮುಖ್ಯಮಂತ್ರಿಗಳು ಬೆಂಗಳೂರಿನ ೮ ವಲಯಗಳಲ್ಲಿ ಕೇವಲ ಎರಡರಲ್ಲಿ ಮಾತ್ರ ಮಳೆಯಿಂದ ಸಮಸ್ಯೆ ಉಂಟಾಗಿದೆ ಎಂದು ಸಮರ್ಥನೆ ನೀಡಿದ್ದಾರೆ! ಕೇಂದ್ರ ಅಧ್ಯಯನ ಸಮಿತಿ ಕೇವಲ ಉತ್ತರ ಕರ್ನಾಟಕದ ಭಾಗಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿತ್ತು. ಆದರೆ, ಮುಖ್ಯಮಂತ್ರಿಗಳು ಮನವಿ ಮಾಡಿದ ಮೇಲೆ ಕೊಡಗು ಜಿಲ್ಲೆಗೂ ಪಾದ ಬೆಳೆಸಿತ್ತು. ಆದರೆ, ಮಳೆಯ ಆಘಾತಕ್ಕೆ ತುತ್ತಾಗಿ, ಮನೆ, ಬೆಳೆ ಕಳೆದುಕೊಂಡ ಪ್ರಕರಣಗಳು ಸಾಕಷ್ಟಿರುವ ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳತ್ತ ಕೇಂದ್ರ ತಂಡದ ಚಿತ್ತ ಹರಿಯಲಿಲ್ಲ.
ಸೆಪ್ಟೆಂಬರ್ ತಿಂಗಳಲ್ಲಿ ೧೭ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದ್ದು, ಸೆ.೭ರವರೆಗೆ ೧೪,೭೧೭ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ೪೩೦ ಮನೆಗಳು ಮಳೆಯಿಂದ ಪೂರ್ಣವಾಗಿ ನಾಶವಾಗಿದ್ದರೆ, ೨೧೮೮ ಮನೆಗಳು ಭಾಗಶಃ ಹಾನಿಗೀಡಾಗಿವೆ ಎಂಬುದಾಗಿ ರಾಜ್ಯ ಸರ್ಕಾರವೇ ಕೇಂದ್ರ ತಂಡದ ಮುಂದೆ ಪಟ್ಟಿ ನೀಡಿದೆ.
ಆದರೆ, ಕಾಳಜಿ ಕೇಂದ್ರಗಳಲ್ಲಿರುವ ಸಂತ್ರಸ್ತರಿಗೆ ಪೂರೈಸುತ್ತಿರುವ ಆಹಾರವೇನು? ಪ್ರತಿದಿನ ಎಷ್ಟು ಹೊತ್ತು ಊಟ ಅಥವಾ ತಿಂಡಿ ವ್ಯವಸ್ಥೆ ಮಾಡಲಾಗಿದೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ.
ಇದು ರಾಜ್ಯದಲ್ಲಿ ವರುಣನ ಆರ್ಭಟದಿಂದ ಉಂಟಾದ ತಲ್ಲಣ. ಅದನ್ನು ಬಗೆಹರಿಸಲು ರಾಜ್ಯ ಸರ್ಕಾರ ನಡೆಸುತ್ತಿರುವ ಹರಸಾಹಸದ ಚಿತ್ರಣ. ಪ್ರತಿಪಕ್ಷಗಳು ಕೂಡ ಅತಿವೃಷ್ಟಿ, ಪ್ರವಾಹಗಳ ಸಂತ್ರಸ್ತರ ಬಗ್ಗೆ ನಿರೀಕ್ಷೆಯಷ್ಟು ಕಾಳಜಿ ತೋರಿಸಿಲ್ಲ ಅನಿಸುತ್ತದೆ. ಸರ್ಕಾರದಿಂದ ಸಮರ್ಪಕವಾಗಿ ಸಹಾಯ ಅಥವಾ ಸೌಲಭ್ಯ ದೊರೆಯದೆ ಸಂತ್ರಸ್ತರು ಪರದಾಡುತ್ತಿರುವ ಸಂದರ್ಭದಲ್ಲಿ ಅವರಿಗೆ ಪ್ರತಿಪಕ್ಷಗಳು ಆತ್ಮವಿಶ್ವಾಸ ತುಂಬಬೇಕಾಗಿತ್ತು. ಆದರೆ, ಕೇವಲ ಸರ್ಕಾರದ ಬಗ್ಗೆ ಟೀಕೆ ಮಾಡುವುದಕ್ಕೇ ಹೆಚ್ಚು ಒತ್ತು ನೀಡಿದವು. ನಂತರ ಕೆಲವೆಡೆ ವಿಪಕ್ಷಗಳ ಕೆಲ ನಾಯಕರು ಮಳೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಸಂತ್ರಸ್ತರಿಗೆ ಅಭಯ ನೀಡುವ ಕೆಲಸವನ್ನೂ ಮಾಡಿದರು.
ಆದರೆ, ಕೊಡಗು ಜಿಲ್ಲೆಯಲ್ಲಿ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಶೀಲನೆಗಾಗಿ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಭೇಟಿ ನೀಡಿದ ಸಂದರ್ಭದಲ್ಲಿ ನಡೆದ ಘಟನೆ ಸಾರ್ವಜನಿಕರು ಒಪ್ಪುವಂತಹದ್ದಲ್ಲ. ವರುಣನ ವ್ಯಗ್ರ ನೋಟಕ್ಕೆ ಸಿಲುಕು ಜೀವ, ಬೆಳೆ, ಮನೆ ಕಳೆದುಕೊಂಡಂತಹ ಕುಟುಂಬಗಳಿಗೆ ಸಾಂತ್ವನ ಹೇಳಲು ಹೋದವರ ಮೇಲೆ ಮೊಟ್ಟೆ ಎಸೆದು ರಾಜಕೀಕರಣ ಮಾಡುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ಅಣಕ. ಮೊಟ್ಟೆ ಎಸೆದರು ಯಾವುದೇ ಪಕ್ಷದವರಾಗಿರಲಿ, ಬಿಜೆಪಿಯವರು ಹೇಳುವಂತೆ ಕಾಂಗ್ರೆಸ್ಸಿಗರೇ ಆಗಿರಲಿ, ಅದು ಪ್ರಜಾಸತ್ತೆಗೆ ಮಾಡಿದ ಅಪಮಾನ. ಮುಂಬರುವ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಯಾವುದೇ ರಾಜಕೀಯ ಪಕ್ಷವು ಇಂತಹ ಸನ್ನಿವೇಶವನ್ನು ಮತಬ್ಯಾಂಕ್‌ಗೆ ಬಳಸಿಕೊಳ್ಳುವ ಹುನ್ನಾರ ನಡೆಸಬಾರದು.
ರಾಜ್ಯ ಸರ್ಕಾರ ಅತಿವೃಷ್ಟಿಯಿಂದ ಸಂಭವಿಸುವ ಇಂತಹ ದುರಂತ ಅನಾಹುತಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಶಾಶ್ವತ ಪರಿಹಾರಗಳನ್ನು ಕಂಡುಹಿಡಿಯಬೇಕು. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜಕಾಲುವೆಗಳ ಅತಿಕ್ರಮಣವನ್ನು ತೆರವುಗೊಳಿಸುವ ಭರವಸೆ ನೀಡಿದ್ದಾರೆ. ಆದರೆ, ಅದೊಂದೇ ಕಾರ್ಯದಿಂದ ಈ ಸಮಸ್ಯೆ ಮುಗಿಯದು. ಹೊಸ ಬಡಾವಣೆಗಳನ್ನು ರಚಿಸುವ ವೇಳೆ ಮಳೆ ನೀರು ಸಂರಕ್ಷಣೆ, ಮಳೆ ನೀರು ಕೊಯ್ಲು, ಮಳೆ ನೀರಿನ ಸರಾಗ ಹರಿವು ಇತ್ಯಾದಿ ಯೋಜನೆಗಳ ಸಮರ್ಪಕ ಅನುಷ್ಠಾನದ ಬಗ್ಗೆಯೂ ರಾಜ್ಯ ಸರ್ಕಾರ ಗಮನಹರಿಸುವುದು ಅತ್ಯಗತ್ಯ. ಈಗಾಗಲೇ ನಿಯಮಗಳು ಇದ್ದರೂ, ಅವು ಸರಿಯಾಗಿ ಅಳವಡಿಕೆಯಾಗಿವೆಯೇ ಎಂಬುದರತ್ತ ಹೆಚ್ಚು ಗಮನ ನೀಡಬೇಕಾಗುತ್ತದೆ.
ಈ ಮಳೆಯ ಹೊಡೆತದಿಂದ ಜನರು, ಮನೆಗಳು, ಬೆಳೆಗಳನ್ನು ಆ ಮೂಲಕ ರೈತರನ್ನು ಪಾರುಮಾಡುವ ನಿಟ್ಟಿನಲ್ಲಿ ಲೋಕೋಪಯೋಗಿ, ಅರಣ್ಯ, ಆರೋಗ್ಯ ಮತ್ತಿತರ ಇಲಾಖೆಗಳು ಕೂಡ ಆದ್ಯತೆ ಮೇರೆಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಗುಂಡಿಬಿದ್ದ ರಸ್ತೆಗಳನ್ನು ಸಕಾಲದಲ್ಲಿ ಮುಚ್ಚುವುದು. ಗುಣಮಟ್ಟದ ರಸ್ತೆಗಳ ನಿರ್ಮಾಣ, ಸಾಂಕ್ರಾಮಿಕ ರೋಗಗಳ ನಿಯಂತ್ರಣ, ಹಳೆಯ ಮರಗಳನ್ನು ತೆರವುಗೊಳಿಸುವುದು ಇಂತಹ ಕಾರ್ಯಗಳನ್ನು ಪ್ರತಿ ವರ್ಷ ಮಳೆಗಾಲ ಆರಂಭಕ್ಕೂ ಮುನ್ನವೇ ಸಂಬಂಧಪಟ್ಟ ಇಲಾಖೆಗಳು ಕೈಗೊಂಡರೆ ಬಹುತೇಕ ದೊಡ್ಡ ಪ್ರಮಾಣದ ಅಪಾಯಗಳನ್ನು ತಪ್ಪಿಸಬಹುದು. ಇದರ ನಡುವೆಯೂ ರಾಜ್ಯದ ೧೦ ಜಿಲ್ಲೆಗಳಲ್ಲಿ ಅಂತರ್ಜಲದ ಮಟ್ಟ ಶೇ.೧೦೦ ರಷ್ಟು ಹೆಚ್ಚಳವಾಗಿದೆ ಎಂಬುದು ಸಮಾಧಾನಕರ ಸಂಗತಿ. ರಾಜ್ಯದ ಎಲ್ಲ ರಾಜಕಾಲುವೆಗಳನ್ನೂ ತೆರವುಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ. ಇದು ಮಳೆಗಾಲ ಬಂದು ಜನರ ಬದುಕು ಅಸ್ತವ್ಯಸ್ತ ಗೊಂಡ ಸಂದರ್ಭದಲ್ಲಿ ಯಾವುದೇ ಆಡಳಿತ ಪಕ್ಷಗಳ ಮಾಮೂಲು ರಾಗ. ಈ ಹಿಂದೆ ಕೆಲ ಬಾರಿ ರಾಜಕಾಲುವೆಗಳನ್ನು ತೆರವುಗೊಳಿಸುವ ಸಾಹಸ’ಕ್ಕಿಳಿದಾಗ ಶ್ರಮ ವ್ಯರ್ಥವಾಯಿತು, ಕಾರ್ಯ ಯಶಸ್ವಿಯಾಗಲಿಲ್ಲ. ಅದಕ್ಕೆ ಕಾರಣ ಪ್ರಭಾವಿ ವ್ಯಕ್ತಿಗಳು ಎಂಬುದು ಸರ್ವವೇದ್ಯ ಸಂಗತಿ.
ಮಳೆಗೆ ಹಲವೆಡೆ ಸೇತುವೆಗಳು ಕೊಚ್ಚಿ ಹೋಗಿವೆ. ಕೆಲವೆಡೆ ವಯಸ್ಸಾದವರು, ಮಕ್ಕಳು, ಯುವಕರೂ ಕೂಡ ನೀರಿನ ರಭಸದಲ್ಲಿ ಕೊಚ್ಚಿ ಹೋಗಿದ್ದಾರೆ. ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಹಳೆಯ ಮರವೊಂದು ಕಾರಿನ ಮೇಲೆ ಬಿದ್ದಿದ್ದರಿಂದ ಮೂವರು ಅಸುನೀಗಿದಂತಹ ದಾರುಣ ಘಟನೆಗಳೂ ಆಡಳಿತ ಪಕ್ಷಕ್ಕೆ ಎಚ್ಚರಿಕೆಯ ಗಂಟೆಯಾಗಬೇಕು. ಪ್ರತಿಪಕ್ಷಗಳು ಕೂಡ ಇಂತಹ ಸೂಕ್ಷ್ಮತೆಯ ಬಗ್ಗೆ ಸರ್ಕಾರವನ್ನು ಪ್ರಶ್ನಿಸುವ ಇಚ್ಛಾಶಕ್ತಿ ಪ್ರದರ್ಶಿಸಬೇಕು. ಪ್ರಾಕೃತಿಕವಾಗಿ ಸುರಿವ ಮಳೆಯನ್ನು ತಗ್ಗಿಸುವುದು ಮಾನವನಿಂದಾಗುವುದಿಲ್ಲ ಎಂಬ ಕನಿಷ್ಠ ವಿನಯವಂತಿಕೆ ನಮಗಿರಬೇಕು. ಆದರೆ, ಮಳೆಯಿಂದಾಗುವ ಹಾನಿಯನ್ನು ತಗ್ಗಿಸುವ ನಿಟ್ಟಿನಲ್ಲಿ ದೂರದೃಷ್ಟಿಯ ಕಾರ್ಯಯೋಜನೆಗಳನ್ನು ಸರ್ಕಾರ ರೂಪಿಸಿ ಅನುಷ್ಠಾನಗೊಳಿಸಬೇಕು. ಸರ್ಕಾರದೊಂದಿಗೆ ವಿಪಕ್ಷಗಳು, ಪರಿಸರವಾದಿಗಳು, ವಿಜ್ಞಾನಿಗಳು, ಹವಾಮಾನ ತಜ್ಞರು ಕೈಜೋಡಿಸಬೇಕು. ಅದಕ್ಕೆ ಪೂರಕವಾಗಿ ಸರ್ಕಾರ ಕೂಡ ಇವರನ್ನೆಲ್ಲ ರಾಜಕೀಯ ಬಿಟ್ಟು ವಿಶ್ವಾಸದಿಂದ ನಡೆಸಿಕೊಳ್ಳುವುದು ಅಗತ್ಯ.

andolanait

Recent Posts

ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…

7 hours ago

ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ – ಡಾ. ಪಿ ಶಿವರಾಜ್

ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…

7 hours ago

ನಗರದ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ: ಜಿ ಟಿ ದೇವೇಗೌಡ

ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…

8 hours ago

ಹನೂರು: ಗುಂಡಿಮಯವಾದ ರಸ್ತೆ, ಸಾಮಾಜಿಕ ಜಾಲತಾಣ ಮೂಲಕ ಯುವಕ ವ್ಯಂಗ್ಯ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…

8 hours ago

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

10 hours ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

10 hours ago