ಒಂದು ಊಹಾತ್ಮಕ ಕಲ್ಪನೆಯ ಭ್ರಮೆಯನ್ನು ನಿಜವಾಗಿಸಲು ಆ ಮೂಲಕ ಭಾರತೀಯರ ಮನಸ್ಸನ್ನು ಗೆಲ್ಲಬಹುದೆಂದು ರಾಹುಲ್ ಗಾಂಧಿ ಭಾವಿಸಿದ್ದಾರೆ!
ಭಾರತದಲ್ಲಿ ಯಾತ್ರೆಗಳಿಗೆ ಮಹತ್ವದ ಸ್ಥಾನವಿದೆ. ಸಾಂಪ್ರದಾಯಿಕವಾಗಿ ಎರಡು ಯಾತ್ರೆಗಳು ಪ್ರಸಿದ್ಧಿ ಪಡೆದಿವೆ. ಒಂದು: ಆಶ್ರಮ, ಧರ್ಮಗಳಲ್ಲಿ , ಬ್ರಹ್ಮಚರ್ಯ ಗೃಹಸ್ಥ ಧರ್ಮದ ಸಂದರ್ಭದಲ್ಲಿ ತನಗೆ ಅರಿವಿದ್ದು ಅಥವಾ ಅರಿವಿಲ್ಲದೆ ಮಾಡಿರುವ ತಪ್ಪುಗಳಿಗಾಗಿ ಪ್ರಾಯಶ್ಚಿತ್ತಪಟ್ಟು ವ್ಯಕ್ತಿ ಜೀವನದ ಕೊನೆಯಲ್ಲಿ ಅಧಿಕಾರವನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸಿ ವನದಲ್ಲಿ ವಾಸಿಸುವುದು ಅಥವಾ ತೀರ್ಥಯಾತ್ರೆ ಕೈಗೊಳ್ಳುವುದು, ವಾನಪ್ರಸ್ಥ ಧರ್ಮವನ್ನು ಹಾಗೂ ಎಲ್ಲ ಮೋಹವನ್ನೂ ಎಲ್ಲದರ ಮೇಲೂ ಕಳೆದುಕೊಂಡು ಸನ್ಯಾಸ ಧರ್ಮವನ್ನು ಸ್ವೀಕರಿಸುವುದು ಸಾಮಾನ್ಯ ಪದ್ಧತಿ.
ಎರಡು: ನಮ್ಮ ಸಂಪ್ರದಾಯದಲ್ಲಿನ ಮದುವೆ ಸಂದರ್ಭದಲ್ಲಿ ನಡೆಯುವ ಒಂದು ಆಚರಣೆಯಿಂದ. ಅದು ಕಾಶಿಯಾತ್ರೆ. ಕನ್ಯೆಯನ್ನು ವರಿಸುವ ಪೂರ್ವದಲ್ಲಿ ತನಗೆ ಮದುವೆಯಲ್ಲಿ ಆಸಕ್ತಿ ಇಲ್ಲ ಮದುವೆಯೇ ಬೇಡವೆಂದು ಕಾಶಿಗೆ ಹೊರಟ ವರನನ್ನು ಕನ್ಯಾಪಿತೃಗಳು ತಡೆದು ದಯವಿಟ್ಟು ನೀನು ಕಾಶಿಗೆ ತೆರಳದೆ ನಮ್ಮ ಮಗಳನ್ನು ಮದುವೆಯಾಗು, ಬ್ರಹ್ಮಚರ್ಯೆ ತೊರೆದು ಗೃಹಸ್ಥ ಧರ್ಮವನ್ನು ಸ್ವೀಕರಿಸು ಎಂದು ಮನವೊಲಿಸಿ ಮದುವೆ ಮಾಡುವುದು.
ಎರಡರಲ್ಲೂ ಒಂದು ಸೂಕ್ಷ್ಮತೆ ಇದೆ. ಮೊದಲನೆಯದು ತಾನೇ ಮಾಡಿದ ತಪ್ಪಿನ ಪ್ರಾಯಶ್ಚಿತ್ತದ ಯಾತ್ರೆ. ಎರಡನೆಯದು ಹೊಣೆಗಾರಿಕೆಯಿಂದ ನುಣುಚಿಕೊಳ್ಳುವವನಿಗೆ ಅದರ ಅರಿವು ಮೂಡಿಸುವ ಯಾತ್ರೆ. ಈ ಎರಡೂ ನನಗೆ ನೆನಪಿಗೆ ಬಂದದ್ದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ತಾನು ಮಾಡಿದ ತಪ್ಪುಗಳಿಂದ ಇಂದು ಪಶ್ಚಾತ್ತಾಪಪಟ್ಟು ಪ್ರಾಯಶ್ಚಿತ್ತ ಅನುಭವಿಸುತ್ತಿದೆ. ಅದು ಈಗ ವಾನಪ್ರಸ್ಥ ಹಾಗೂ ಸನ್ಯಾಸತ್ವದ ಕಾಲದಲ್ಲಿದೆ. ಸ್ವಾತಂತ್ರ್ಯಾ ನಂತರದ ೭೫ ವರ್ಷಗಳಲ್ಲಿ ಕನಿಷ್ಠ ೬೦ ವರ್ಷಗಳು ಈ ದೇಶವನ್ನು ಆಳಿದ ಕಾಂಗ್ರೆಸ್ ತನ್ನ ದುರಾಡಳಿತ, ಸ್ವಜನ ಪಕ್ಷಪಾತ, ಭ್ರಷ್ಟಾಚಾರದಿಂದ ಪರಿಕಲ್ಪನೆಯಲ್ಲಿ ಜಾತೀಯತೆಯನ್ನು ಪ್ರಜಾಪ್ರಭುತ್ವದ ಪರದೆಯ ಹಿಂದೆ ಅಪ್ರಜಾಸತ್ತಾತ್ಮಕತೆಯನ್ನು ಬೆಳೆಸಿ ಪೋಷಿಸಿಕೊಂಡು ಬಂದಿದೆ.
ಒಂದು ಕಾಲದಲ್ಲಿ ಕಾಂಗ್ರೆಸ್ಸಿನಲ್ಲೇ ಇದ್ದ ಅನೇಕ ಮಹನೀಯರು ಅದರ ದುರಾಡಳಿತವನ್ನು ಕಂಡು ಬೇಸತ್ತು ಸಮಾಜವಾದಿ ಕಾಂಗ್ರೆಸ್ ಪಕ್ಷ ಕಟ್ಟಿದ್ದನ್ನು ನೆನಪಿಡಬೇಕು. ಈಗ ರಾಹುಲ್ ಗಾಂಧಿಯವರು ಯಾವೆಲ್ಲ ವಿಚಾರಗಳನ್ನು ಇಟ್ಟುಕೊಂಡು ಯಾತ್ರೆ ಹೊರಟಿದ್ದಾರೋ ಇದಕ್ಕೂ ಮಿಗಿಲಾದ ಮತ್ತು ಸರಿಯಾದ ವಿಚಾರಗಳನ್ನು ಇಟ್ಟುಕೊಂಡು ಅಂದಿನ ಕಾಂಗ್ರೆಸ್ಸಿನ ಆಡಳಿತದ ವಿರುದ್ಧ ೧೯೮೩ರಲ್ಲಿ ಮಾಜಿ ಪ್ರಧಾನಮಂತ್ರಿಗಳಾದ ಚಂದ್ರಶೇಖರ್ ಅವರು ಪಾದಯಾತ್ರೆಯನ್ನು ಕೈಗೊಂಡಿದ್ದರು. ಅವರು ಕೂಡ ಕನ್ಯಾಕುಮಾರಿಯಿಂದಲೇ ಯಾತ್ರೆ ಆರಂಭಿಸಿದ್ದು ಕಾಕತಾಳೀಯ. ಚಂದ್ರಶೇಖರ್ ಅವರು ಆರು ತಿಂಗಳು ಸುಮಾರು ೪೨೬೦ ಕಿ.ಮೀ. ಪಾದಯಾತ್ರೆ ನಡೆಸಿದ್ದರು. ಈಗ ರಾಹುಲ್ ಗಾಂಧಿ ಕೂಡ ಕನ್ಯಾಕುಮಾರಿಯಿಂದ ಪಾದಯಾತ್ರೆ ಆರಂಭಿಸಿದ್ದಾರೆ. ಈ ಯಾತ್ರೆ ಇದೀಗ ಕರ್ನಾಟಕವನ್ನು ಪ್ರವೇಶಿಸಿದೆ.
ಚಂದ್ರಶೇಖರ್ ಅವರ ಯಾತ್ರೆಯಾಗಿ ಇಲ್ಲಿಗೆ ೪೦ ವರ್ಷಗಳು ಕಳೆದಿವೆ. ಇಷ್ಟು ಅವಧಿಯಲ್ಲಿ ೨೫ ವರ್ಷಗಳು ಕೂಡ ಕಾಂಗ್ರೆಸ್ಸಿಗರೇ ಆಡಳಿತ ಮಾಡಿದ್ದಾರೆ. ಈಗಲೂ ಕೂಡ ಚಂದ್ರಶೇಖರ್ ಅವರ ಯಾತ್ರೆಯ ಆಶಯಗಳು ಇನ್ನೂ ಈಡೇರಿಲ್ಲ. ಅದಕ್ಕೆ ಕಾರಣ ಕಾಂಗ್ರೆಸ್ ಪಕ್ಷ. ಅದರ ಒಂದು ಸಣ್ಣ ಉದಾಹರಣೆಯನ್ನು ನೀಡುವುದಾದರೆ, ಅಲ್ಪಸಂಖ್ಯಾತರ ಅಭಿವೃದ್ಧಿಯ ನೆಪದಲ್ಲಿ ಅವರ ತುಷ್ಟೀಕರಣವನ್ನಷ್ಟೇ ಮಾಡಲಾಯಿತು. ಆ ತುಷ್ಟೀಕರಣ ಕೇವಲ ಅವರ ತುಟಿಗೆ ತುಪ್ಪ ಸವರುವುದಾಗಿತ್ತು. ವಾಸ್ತವವಾಗಿ ಅಲ್ಪಸಂಖ್ಯಾತರ ಜೀವನ ವಿಧಾನ ಹಾಗೂ ಸಾಮಾಜಿಕ ಬದುಕು ಕಳೆದ ೭೫ ವರ್ಷಗಳಲ್ಲಿ ಯಾವುದೇ ಬದಲಾವಣೆಯನ್ನು ಕಂಡಿಲ್ಲ. ಇದೇ ಅಂಶವನ್ನು ನ್ಯಾಯಮೂರ್ತಿ ರಾಜಿಂದರ್ ಸಾಚಾರ್ ಸಮಿತಿ ನೀಡಿದ ವರದಿ ಸ್ಪಷ್ಟವಾಗಿ ಉಲ್ಲೇಖಿಸಿದೆ.
ಇನ್ನು ಸಂವಿಧಾನದ ೩೫೬ನೇ ವಿಧಿಯ ದುರ್ಬಳಕೆಯನ್ನು ವಿವರಿಸಬೇಕಿಲ್ಲ. ೧೯೫೧ರಲ್ಲಿ ಪಂಜಾಬ್ ಸರ್ಕಾರವನ್ನು ವಜಾ ಮಾಡಿ ರಾಷ್ಟ್ರಪತಿ ಆಳ್ವಿಕೆಯನ್ನು ಜಾರಿಗೊಳಿಸಿದಾಗಿನಿಂದ ಮೊದಲುಗೊಂಡು ೧೦೦ಕ್ಕೂ ಹೆಚ್ಚು ಬಾರಿ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸರ್ಕಾರಗಳನ್ನು ವಜಾಗೊಳಿಸಿದ ಕೀರ್ತಿ ಕಾಂಗ್ರೆಸ್‌ನದ್ದು. ಸಂವಿಧಾನದ ಆಶಯಗಳನ್ನು ತಮ್ಮ ಅನುಕೂಲಕ್ಕೆ ಬಳಸಿಕೊಂಡರು. ಸಂವಿಧಾನದ ನಿಯಮ ೩೭೦ ವಿಧಿಯನ್ನು ತೆರವುಗೊಳಿಸಲು ನರೇಂದ್ರ ಮೋದಿಯವರು ಹಾಗೂ ಕೇಂದ್ರ ಗೃಹಸಚಿವರಾದ ಅಮಿತ್ ಶಾ ಅವರು ಬರಬೇಕಾಯಿತು. ಈಶಾನ್ಯ ರಾಜ್ಯಗಳು ನಿಜಕ್ಕೂ ಭಾರತದೊಡನೆ ಒಂದಾಗಿದ್ದು ಮೋದಿಯವರ ಆಗಮನವಾದ ಮೇಲೆಯೇ.
ಆದರೆ, ಬದುಕಿನ ಕೊನೆಯವರೆಗೂ ಈ ದೇಶದ ನಿಜವಾದ ಸರ್ವಾಂಗೀಣ ಪ್ರಗತಿಗೆ ತಮ್ಮನ್ನು ತಾವು ಅರ್ಪಿಸಿಕೊಂಡ ಚಂದ್ರಶೇಖರ್ ಅವರಿಗೂ ರಾಹುಲ್ ಗಾಂಧಿ ಅವರಿಗೂ ವ್ಯತ್ಯಾಸವಿದೆ. ಚಂದ್ರಶೇಖರ್ ಅವರು ಎಂದೂ ಹೊಣೆಗಾರಿಕೆಯಿಂದ ಹಿಂದೆ ಸರಿದವರಲ್ಲ. ಆದರೆ, ರಾಹುಲ್ ಗಾಂಧಿಯವರು ಯಾವ ಹೊಣೆಗಾರಿಕೆಯನ್ನೂ ಹೊರಲು ಸಿದ್ಧರಿಲ್ಲ ಎನ್ನುವುದು ಸ್ವಯಂವೇದ್ಯ. ಪಕ್ಷ ಅಧಿಕಾರದಲ್ಲಿದ್ದಾಗ ಅಥವಾ ಇಲ್ಲದಿರುವಾಗ ಎಂದೂ ಅವರು ಜವಾಬ್ದಾರಿಯನ್ನು ಹೊಣೆಗಾರಿಕೆಯನ್ನು ಸರಿಯಾಗಿ ನಿರ್ವಹಿಸಿದವರಲ್ಲ. ಸಮಸ್ಯೆಗಳಿಗೆ ಬೆನ್ನು ತೋರುವುದು ಯಾವುದೇ ನಾಯಕರಿಗೆ ಸರಿಯಲ್ಲ. ಚಂದ್ರಶೇಖರ್ ಅವರು ಕಾಂಗ್ರೆಸ್ಸಿನ ಆಡಳಿತದಿಂದ ದುರ್ಬಲವಾಗಿದ್ದ ಭಾರತವನ್ನು ಸದೃಢವಾಗಿ ಕಟ್ಟಲು ಪಾದಯಾತ್ರೆ ನಡೆಸಿದ್ದರು. ಅವರೆಂದು ವಿದೇಶದಲ್ಲಿ ಭಾರತದ ಆಂತರಿಕ ವಿಚಾರಗಳನ್ನು ಕುರಿತು ಕೀಳಾಗಿ ಮಾತನಾಡಿದವರಲ್ಲ. ರಾಹುಲ್ ಗಾಂಧಿಯವರು ಒಂದು ಊಹಾತ್ಮಕ ಕಲ್ಪನೆಯ ಭ್ರಮೆಯನ್ನು ನಿಜವಾಗಿಸಲು ಆ ಮೂಲಕ ಭಾರತೀಯರ ಮನಸ್ಸನ್ನು ಗೆಲ್ಲಬಹುದೆಂದು ಭಾವಿಸಿದ್ದಾರೆ. ಅದು ಸಫಲವಾಗಲಾರದು.
ರಾಹುಲ್ ಗಾಂಧಿಯವರ ಪಾದಯಾತ್ರೆ ಅಗತ್ಯ ಖಂಡಿತ ಇದೆ. ಆದರೆ, ಅದು ದೇಶಕ್ಕಲ್ಲ ಬದಲಿಗೆ ಕಾಂಗ್ರೆಸ್ ಪಕ್ಷಕ್ಕೆ. ಇದು ಭಾರತ್ ಜೋಡೊ ಯಾತ್ರೆಯಲ್ಲ. ಕಾಂಗ್ರೆಸ್ ಜೋಡೊ ಯಾತ್ರೆ. ಕನ್ಯಾಕುಮಾರಿಯಿಂದ ಮೊದಲುಗೊಂಡು ಕಾಶ್ಮೀರದವರೆಗೆ ಕಾಂಗ್ರೆಸ್ ಪಕ್ಷವು ತನ್ನ ಆಂತರಿಕ ಬೇಗುದಿಯಿಂದ ಬಳಲುತ್ತಿದೆ. ಕಾಂಗ್ರೆಸ್ಸಿಗರಿಗೆ ಕಾಂಗ್ರೆಸ್ಸಿಗರೇ ವಿರೋಧಿಗಳು. ಕರ್ನಾಟಕದಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್, ರಾಜಾಸ್ಥಾನದಲ್ಲಿ ಅಶೋಕ್ ಗೆಹಲೋಟ್ ಹಾಗೂ ಸಚಿನ್ ಪೈಲಟ್. ಈ ಹಿಂದೆ ಪಂಜಾಬಿನಲ್ಲಿ ಅಮರೇಂದ್ರ ಸಿಂಗ್ ಮತ್ತು ಸಿದ್ದು, ಮಧ್ಯಪ್ರದೇಶದಲ್ಲಿ ಕಮಲನಾಥ್ ಮತ್ತು ಜ್ಯೋತಿರಾದಿತ್ಯ ಸಿಂಧಿಯಾ… ಹೀಗೆ ಪರಸ್ಪರ ಕಚ್ಚಾಟದಿಂದ ಕಾಂಗ್ರೆಸ್ ಪಕ್ಷ ದುರ್ಬಲವಾಗಿದೆ.
ಅನೇಕ ರಾಜ್ಯಗಳಲ್ಲಿ ಕಾಂಗ್ರೆಸ್ ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿದೆ. ಈ ದುರ್ಬಲತೆಯನ್ನು ಅರಿಯುವ ಮತ್ತು ತನ್ನ ಗತಕಾಲದ ತಪ್ಪಿಗೆ ಮರುಗುವ ಪ್ರಾಯಶ್ಚಿತ್ತದ ಯಾತ್ರೆ ಇದಾಗಿದೆ. ಎಲ್ಲರೂ ಇತಿಹಾಸದ ಒಂದು ಸಂಗತಿಯನ್ನು ನೆನಪಿಡಬೇಕು. ಪ್ರತಿ ಸಾಮ್ರಾಜ್ಯವು ತನ್ನ ಪತನವನ್ನು ಕಂಡದ್ದು ಹೊರಗಿನ ದಾಳಿಯಿಂದಲ್ಲ ಬದಲಿಗೆ ತನ್ನ ವಿಸ್ತಾರದಿಂದ ಹಾಗೂ ಒಳಗಿನ ದುರ್ಬಲತೆಯಿಂದ. ಕಾಂಗ್ರೆಸ್ ಪಕ್ಷ ತನ್ನ ಭಾರದಿಂದ ತಾನೆ ಕುಸಿಯುತ್ತಿದೆ; ಕುಸಿಯುತ್ತಿರುತ್ತದೆ. ಸಕಾಲದಲ್ಲಿ ತಮ್ಮ ತಪ್ಪನ್ನು ಅರಿತು ಸರಿಪಡಿಸಿಕೊಳ್ಳದ ಎಲ್ಲರಿಗೂ ಕಾಂಗ್ರೆಸ್ಸಿನ ಈ ಸ್ಥಿತಿ ಒಂದು ರೂಪಕವಾಗಿದೆ.
ಮೈಸೂರು: ಎಸೆನ್ಸ್ ಸೇವನೆಯಿಂದಲೇ ಮೂವರು ಕೈದಿಗಳು ಸಾವು ಎಂದು ಸ್ಪಷ್ಟಪಡಿಸಲು ಸಾಧ್ಯವಿಲ್ಲ ಎಂದು ಕೆ.ಆರ್.ಆಸ್ಪತ್ರೆಯ ವೈದ್ಯ ದಿನೇಶ್ ಹೇಳಿದ್ದಾರೆ. ಈ…
ತಿರುಪತಿ: ತಿರುಪತಿಯಲ್ಲಿ ಭಾರೀ ಪ್ರಮಾಣದ ಕಾಲ್ತುಳಿತ ಸಂಭವಿಸಿದ್ದು, 7 ಮಂದಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 60ಕ್ಕೂ ಹೆಚ್ಚು ಮಂದಿಯ ಸ್ಥಿತಿ ಗಂಭೀರವಾಗಿದ್ದು,…
ಬೆಂಗಳೂರು: ಸಾರಿಗೆ ಸಂಸ್ಥೆಯು ನಾಲ್ಕೂ ನಿಗಮಗಳ ಪ್ರಯಾಣ ಟಿಕೆಟ್ ದರ ಏರಿಕೆ ಬೆನ್ನಲ್ಲೇ ಬಿಎಂಟಿಸಿ ಪಾಸ್ಗಳ ದರದಲ್ಲಿ ಏರಿಕೆಯಾಗಿದೆ. ನಾಳೆಯಿಂದಲೇ…
ಬೆಂಗಳೂರು: ಹಿಂಸಾಮಾರ್ಗವನ್ನು ತ್ಯಜಿಸಿ ಸಮಾಜದ ಮುಖ್ಯವಾಹಿನಿಯಲ್ಲಿ ಸೇರಿಕೊಳ್ಳಲು ನಿರ್ಧರಿಸಿರುವ ನಕ್ಸಲ್ ಚಳುವಳಿಗಾರರನ್ನು ಸ್ವಾಗತಿಸುತ್ತೇನೆ. ಇವರ ಬೇಡಿಕೆಗಳನ್ನು ಸಹಾನುಭೂತಿಯಿಂದ ಪರಿಶೀಲಿಸಿ ಈಡೇರಿಸುವ…
ಬೆಂಗಳೂರು: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನದ ಹಿನ್ನೆಲೆಯಲ್ಲಿ ಮುಂದೂಡಿಕೆಯಾಗಿದ್ದ ಗಾಂಧಿ ಭಾರತ ಕಾರ್ಯಕ್ರಮದ ಅಂಗವಾಗಿ ಬೆಳಗಾವಿ ಸುವರ್ಣ…
ಬೆಂಗಳೂರು: ಡಿ.ಕೆ.ಶಿವಕುಮಾರ್ ಅವರ ಸಹನೆಯ ಕಟ್ಟೆ ಒಡೆಯಲಿದೆ ಎಂಬ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ ತಿರುಗೇಟು…