ರಹಮ್ಮತ್ ತರೀಕೆರೆ
ಎಷ್ಟೊಂದು ಜನರ ದುಡಿಮೆಯಿಂದ ನಮ್ಮ ಬದುಕು! ಈ ಖಬರಿದ್ದರೆ ನಮ್ಮ ಕಾಲು ಸದಾ ನೆಲದ ಮೇಲಿರುತ್ತದೆ!
ಸಿಕ್ಕಲ್ಲಿ ದುಡಿಯಲು ಹೋಗುತ್ತಿದ್ದ ನಾವು ನಮ್ಮ ಕುಲುಮೆಯ ದೆಸೆಯಿಂದ ಸಣ್ಣಮಟ್ಟದ ಮಾಲಕರೂ ಆಗಿದ್ದೆವು. ಕುಲುಮೆಯಲ್ಲಿ ಸದಾ ಐದಾರು ಕೆಲಸಗಾರರು ಇರುತ್ತಿದ್ದರು. ಅಪ್ಪನಿಗೆ ಕೆಲಸಗಾರರು ಸೌಕಾರರೇ ಎನ್ನುವುದು ಬಹಳ ಖುಷಿ ಕೊಡುತ್ತಿತ್ತು. ಕೆಲಸಗಾರರಲ್ಲಿ ಹೆಚ್ಚಿನವರು ಕುಟುಂಬಗಳಿಂದ ತಿರಸ್ಕೃತರಾದವರು ಅಥವಾ ಭಗ್ನಸಂಸಾರಿಗಳು. ಇವರು ನಾಟಕದ ಪಾತ್ರಗಳಂತೆ ಇದ್ದಕ್ಕಿದ್ದಂತೆ ಆಗಮಿಸಿ ಒಂದು ದಿನ ನಾಪತ್ತೆ ಆಗುತ್ತಿದ್ದವರು. ಕೆಲವೊಮ್ಮೆ ಕುಶಲ ಕೆಲಸಗಾರರನ್ನು ಎದುರಾಳಿ ಕುಲುಮೆಯವರು ಆಮಿಷಗೊಟ್ಟು ಎಗರಿಸಿಕೊಂಡು ಹೋಗುತ್ತಿದ್ದುದೂ ಉಂಟು. ಹೀಗಾಗಿ ಅಪ್ಪ, ಆಳುಗಳು ಕಣ್ಮರೆಯಾದರೂ ಮೈಮೇಲೆ ಬಾರದಷ್ಟು ಮಾತ್ರ ಮುಂಗಡ ಕೊಟ್ಟಿರುತ್ತಿದ್ದನು.
ಒಂದು ದಿನ ಒಬ್ಬ ವ್ಯಕ್ತಿ ಕುಲುಮೆ ಬಾಗಿಲಲ್ಲಿ ಕಾಣಿಸಿಕೊಂಡು ‘ ಸೌಕಾರರೇ, ಏನಾದರೂ ದಗದ ಇದ್ದರೆ ಕೊಡ್ರಿ’ ಎಂದನು. ಅಪ್ಪ ಅವನನ್ನು ನಖಶಿಖಾಂತ ನೋಡಿದನು. ಗರಡಿಮನೆಯಿಂದ ತಪ್ಪಿಸಿಕೊಂಡು ಬಂದಂತಿದ್ದ ಅವನ ದೇಹದಾರ್ಢ್ಯ ಅವನಿಗೆ ಹಿಡಿಸಿರಬೇಕು.ಏನಪ್ಪಾ ನಿನ್ನ ಹೆಸರು?’
‘ಹುಸೇನಿ ರಿ’
‘ಯಾವೂರು’
‘ಹಾವೇರಿ ಕಡೆ ಒಂದು ಹಳ್ಳೀರಿ’
‘ಕಬ್ಬಣಾ ಚಚ್ಚುತೀಯಾ?’
‘ಯಾಕ ಆಗವಲ್ಲದರಿ?’ ಎಂದವನೇ ಅಂಗಿ ಕಳೆದು ಗೂಟಕ್ಕೆ ಸಿಕ್ಕಿಸಿ ಕೆಲಸಕ್ಕೆ ಸಿದ್ಧನಾದನು. ಹುಸೇನಿ, ತನ್ನ ಯಾವುದೊ ಸಿಟ್ಟನ್ನು ಆಕ್ರೋಶವನ್ನು ಕಬ್ಬಿಣದ ಮೇಲೆ ತೀರಿಸಿಕೊಳ್ಳುವಂತೆ ಯರ್ರಾಬಿರ್ರಿ ಹೊಡೆಯುತ್ತಿದ್ದನು ಚಮ್ಮಟಿಗೆ ಕೆಲಸಕ್ಕೆ ದೈಹಿಕ ಶಕ್ತಿಯಷ್ಟೇ ಸಾಲದು. ಚಾಣದ ನೆತ್ತಿಯ ಮೇಲೆ ಸರಿಯಾಗಿ ಭಾರಬಿಟ್ಟು ಪೆಟ್ಟು ಹಾಕುವ ಕುಶಲತೆಯೂ ಬೇಕು. ಕೊಂಚ ಪೆಟ್ಟು ಆಚೀಚೆ ಬಿತ್ತೆಂದರೆ, ಇಕ್ಕುಳದಿಂದ ತಪ್ಪಿಸಿಕೊಂಡ ಚಾಣವು ಬುಲೆಟ್ಟಿನಂತೆ ಹಾರಿ, ಅಲ್ಲಿದ್ದವರ ಕೈಕಾಲು ಮುರಿಯಬಲ್ಲದು. ಇವನಿಂದ ಜನ ಜಖಂ ಆಗುವುದು ಖಚಿತವೆಂದು ತಿಳಿದ ಅಪ್ಪ, ಅವನನ್ನು ಕುಲುಮೆ ಬಿಡಿಸಿ ಹಳ್ಳಿಯಲ್ಲಿದ್ದ ತೋಟದ ಕಾವಲಿಗೆ ಹಾಕಿದನು.
ರೈತಾಪಿ ಹಿನ್ನೆಲೆಯಿಂದ ಬಂದ ಹುಸೇನಿ ಅಲ್ಲಿ ಖುಷಿಯಿಂದ ಇದ್ದನು. ಅವನ ಕನ್ನಡ ನಮಗೆ ಹೊಸತು. ಅವನಿಗೆ ಕತೆ ಹೇಳುವ ಕಲೆಯಿತ್ತು. ನಾನು ಅವನಿಂದ ಅನೇಕ ಜನಪದ ಕತೆಗಳನ್ನು ಸಂಗ್ರಹಿಸಿದೆ. ಅವನು ಹೇಳುತ್ತಿದ್ದ ಬಹುತೇಕ ಕತೆಗಳ ವಸ್ತು, ಪ್ರಿಯಕರನ ಜತೆ ಸಂಬಂಧ ಇಟ್ಟುಕೊಂಡು, ಗಂಡನಿಗೆ ಮೋಸ ಮಾಡಿದ ಹೆಂಡತಿಯರಾಗಿದ್ದವು. ಸ್ತ್ರೀಯರನ್ನು ಸೀಳಿ ಹೆಬ್ಬಾಗಿಲಿಗೆ ತೋರಣಕಟ್ಟುವ ಸನ್ನಿವೇಶವನ್ನು ಬಲು ಆವೇಶದಿಂದ ಬಣ್ಣಿಸುತ್ತಿದ್ದನು. ಅವನ ವೈಯಕ್ತಿಕ ಜೀವನದ ಬಗ್ಗೆ ಕೇಳಿದರೆ ಅಡ್ಡಮಾತಾಡಿ ತಪ್ಪಿಸುತ್ತಿದ್ದನು. ಅವನಿಗೆ ತೋಟದ ಕೆಲಸ ಸಾಕಾಯಿತೊ, ಬಿಟ್ಟುಬಂದ ಮನೆ ಊರು ನೆನಪಾಯಿತೊ, ಒಂದು ದಿನ ಕಾಣೆಯಾದನು ಮತ್ತೊಬ್ಬ ಕಾವಲಾಳು ಹನುಮಂತಾ ಬೋವಿ ಕೂಡ ಸ್ತ್ರೀಶಂಕಿತನೇ. ಜಗಳೂರು ಕಡೆಯವನಾದ ಈತ ತನ್ನ ಮೂರನೆಯ ಹೆಂಡತಿ ಪುಟ್ಟಮ್ಮನೊಡನೆ ನಮ್ಮ ತೋಟ ಸೇರಿದವನು. ಸ್ವಾಮೀ, ಇಬ್ಬರು ಹೆಂಡಿರನ್ನ ಕಟ್ಟಿಕೊಂಡು ಕಲ್ಲುಗೆಲಸದಲ್ಲಿ ಕೈತುಂಬಾ ದುಡಿದು ರಾಜನಂಗೆ ಬಾಳ್ದೋನು. ನಾನು ಕಟ್ಟಿದ ದೇವುಸ್ತಾನ ಮಂಟಪ ಈಗಲೂ ಇದಾವೆ. ಕಲ್ಲು ಸುಟ್ಟು ಚಪ್ಪಡಿ ತಗಿಯೋದು, ತಾವರೆಹೂ, ಎಲೆಅಂಬು, ಚಿತ್ರ ಕೆತ್ತೋದು; ಕಲ್ಬೋರ್ಡು, ಕಲ್ಕಂಬ, ರೋಣಗಲ್ಲು, ಒಳಕಲ್ಲು ಎಲ್ಲಾ ಮಾಡ್ತಿದ್ದೆ. ದಿನಾ ಐವತ್ತು ರೂಪಾಯಿ ದುಡಿದು, ತಿಂದು ಕುಡಿದು ಮಜಾ ಮಾಡ್ತಿದ್ದೆ. ಈಗಲೇ ಈ ಗತಿ ಬಂದಿರೋದು ಎಂದು ಸುವರ್ಣಯುಗ ನೆನೆಯುತ್ತಿದ್ದನು. ಗೆಳೆಯನ ಮಡದಿಯನ್ನು ಆಕಸ್ಮಿಕವಾಗಿ ಮೋಹಿಸಿ ಪರಿತಾಪದಿಂದ ಆತ್ಮಹತ್ಯೆ ಮಾಡಿಕೊಂಡ ಸೋಮರಾಯ ಭೀಮರಾಯರ ಕಥನವನ್ನು ಇಂಪಾಗಿ ಹಾಡುತ್ತಿದ್ದನು. ಅವನು ಕತೆ ನಿರೂಪಿಸುತ್ತಿದ್ದರೆ ಸಿನಿಮಾ ನೋಡಿದಂತೆ ಆಗುತ್ತಿತ್ತು. ಅವನಲ್ಲಿದ್ದ ಕತೆಗಳನ್ನು ಸಂಗ್ರಹಿಸಲು ನಾನು, ಎಲೆಯಡಿಕೆ, ಬೀಡಿ, ಸರಾಯಿ, ಮಾಂಸವನ್ನು ಕೊಂಡು ತೋಟಕ್ಕೆ ಹೋಗುತ್ತಿದ್ದೆ. ಅವನ ಕತೆಗಳ ನಾಯಕರು ಕಿಲಾಡಿಗಳು. ವಂಚಕ ಹೆಂಡತಿಯ ಗುಟ್ಟನ್ನು ಕಂಡುಹಿಡಿವವರು. ಒಂದು ಕತೆಯೊಂದರ ನಾಯಕ ಮೈನರೆದ ಹೆಣ್ಣಿನ ಸಂಗವೇ ಬೇಡವೆಂದು, ಚಿಕ್ಕ ಹೆಣ್ಣುಮಗುವನ್ನು ಪಡೆದು ಸಾಕಿ ಬೆಳೆಸಿ ಲಗ್ನವಾಗುತ್ತಾನೆ. ಕತೆಯ ಕೊನೆಯಲ್ಲಿ ಆಕೆಗೆ ಒಬ್ಬ ಪ್ರಿಯಕರನಿದ್ದುದು ತಿಳಿದು, ಸನ್ಯಾಸ ಸ್ವೀಕರಿಸುತ್ತಾನೆ. ಹನುಮಂತಾ ಬೋವಿಯಲ್ಲಿ ಮಹಿಳೆಯರನ್ನು ಶಂಕಿಸುವುದಷ್ಟೆ ಅಲ್ಲದೆ, ಅವರಿಗೆ ಹಿಂಸಿಸುವ ಸ್ವಭಾವವೂ ಇತ್ತು. ಅವನು ಕೂಡಿಕೆ ಮಾಡಿಕೊಂಡ ಮಹಿಳೆಯರು ಎರಡು-ಮೂರು ವರ್ಷಗಳಲ್ಲೆ ಬಿಟ್ಟುಹೋಗಿದ್ದರು. ತನ್ನನ್ನು ಬಿಟ್ಟು ಹೋದ ಒಬ್ಬಳನ್ನು ಆತ ಉಪಾಯವಾಗಿ ಕರೆಸಿಕೊಂಡು ಕಾಲು ತಿರುಚಿದ್ದನಂತೆ. ಆಕೆ ಜೀವಮಾನವೆಲ್ಲ ಕುಂಟಿಕೊಂಡು ಓಡಾಡುತ್ತಿದ್ದಳಂತೆ. ಇದನ್ನು ಸಾಧನೆಯೆಂಬಂತೆ ಆತ ಹೇಳುತ್ತಿದ್ದನು. ಕೊನೆಗಾಲದಲ್ಲಿ ಅವನ ಕೊನೆಯ ಸಂಗಾತಿ ಪುಟ್ಟಮ್ಮನೂ ಬಿಟ್ಟುಹೋದಳು.
ಕೆಲಸಗಾರರಲ್ಲಿ ತನ್ನ ವಿಶಿಷ್ಟ ವ್ಯಕ್ತಿತ್ವದವನೆಂದರೆ ಚನ್ನ. ಚನ್ನನಿಗೆ ಬುದ್ಧಿ ಬೆಳವಣಿಗೆ ಆಗಿರಲಿಲ್ಲ. ಕೊಳಕಾದ ಚಡ್ಡಿ ಅಂಗಿ, ಗೊಣ್ಣೆಸುರುಕ ಮೂಗು, ಅಡ್ಡಾದಿಡ್ಡಿ ಬೆಳೆದ ತಲೆಗೂದಲು. ಅವನ ಅಪ್ಪ ಹುಚ್ಚಪ್ಪನವರೂ ಕುಲುಮೆಯವರೇ. ಚನ್ನ ಅಪ್ಪನ ಜತೆ ಜಗಳ ಮಾಡಿಕೊಂಡ ಮರುಗಳಿಗೆ ನಮ್ಮಲ್ಲಿ ಪ್ರತ್ಯಕ್ಷವಾಗುತ್ತಿದ್ದನು. ಅವನದು ಚಮ್ಮಟಿಗೆ ಬಡಿವ ಮತ್ತು ತಿದಿ ಎಳೆವ ಕೆಲಸ. ಅವನನ್ನು ಕಂಡರೆ ಎಲ್ಲರೂ ಕೆಲಸ ಹೇಳುವವರೇ. ಬಟವಾಟೆ ಆದ ದಿನ ಮನಸಾರೆ ಕುಡಿಯುತ್ತಿದ್ದನು. ಕಮ್ಮಾರಿಕೆಯ ಏಕತಾನತೆ, ಕಾಠಿಣ್ಯ ಮತ್ತು ಅಪಾಯಕರ ವಾತಾವರಣವು ಚನ್ನನಿಂದ ನಾಟಕದ ರಂಗಭೂಮಿಯಾಗಿ ಬದಲಾಗುತ್ತಿತ್ತು. ಅವನನ್ನು ಬಿಟ್ಟು ಹೋದ ಹೆಂಡತಿ ವಿಷಯದಲ್ಲಿ ಎಲ್ಲರೂ ಗೋಳುಹಾಕುತ್ತಿದ್ದರು.
‘ಚನ್ನಾ, ನಿನ್ನ ಹೆಂಡರೆಲ್ಲೊ?’
‘ತತತ….ತವರು ಮನೀಗೆ ಹೋಗಿದಾಳೆ’
‘ಕರಕಂಡು ಬರೋದಲ್ಲವೇನೊ?’
‘ಬರಲ್ಲ ಅಂತಾಳೆ ಕಳ್ಳಮುಂಡೆ’
‘ಎಷ್ಟೊ ನಿನಗೆ ಮಕ್ಕಳು?’
‘ನಾಕೊ ಐದೊ ಅಂತಾರಪ್ಪ? ಯಾವನಿಗ್ಗೊತ್ತು?’
ಶತಮಾನದ ಹಿಂದೆ ಉಜ್ಜಿದ ಹಳದಿ ದಂತಗಳನ್ನು ಪ್ರದರ್ಶಿಸುತ್ತ, ಖಿಚಕ್ಕನೆ ನಗುವನು. ಗೇಲಿ ಹೆಚ್ಚಾದರೆ, ಮೂಡು ಕೆಟ್ಟರೆ ಮಾಡುತ್ತಿದ್ದ ಕೆಲಸ ನಿಲ್ಲಿಸಿ ಮುನಿಸಿಕೊಂಡ ಮಗುವಿನಂತೆ ರಸ್ತೆಯಲ್ಲಿ ನಿಂತು ಧರಣಿ ಮಾಡುವನು. ಅಲ್ಲಿಂದಲೇ ‘ಲೋ ಸೌಕಾರ, ನನ್ನ ಕೂಲಿ ಕೊಡು, ನಾನು ಹೋಗಬೇಕು’ ಎಂದು ಮಾಲಕನಾದ ಅಪ್ಪನಿಗೆ ಏಕವಚನದಲ್ಲಿ ಬೈಯುವನು. ಅವನನ್ನು ಕೆಣಕಿ ಬೈಸಿಕೊಂಡವರೆಲ್ಲ ನಗುತ್ತಿದ್ದರು. ನಾವು ರಂಜಾನ್-ಬಕ್ರೀದ್ ಹಬ್ಬಗಳಂದು ನಮಾಜಿಗೆ ಈದ್ಗಾಕ್ಕೆ ಹೋದಾಗ, ಸಾಲಾಗಿ ಕುಳಿತ ಭಿಕ್ಷುಕರ ಜತೆ ಚನ್ನನ ಸವಾರಿಯೂ ಇರುತ್ತಿತ್ತು. ‘ಏ ಸೌಕಾರರೇ, ಅಹಹಹಾ, ನೋಡದಂಗೆ ಹೋಗ್ತದಿಯಲ್ಲಪ್ಪಾ, ಎಲ್ಲಪ್ಪ ಹಬ್ಬದ ಖುಷಿ?’ ಎಂದು ಅಡ್ಡಗಟ್ಟುವನು. ಇನ್ನೇನಾದರೂ ಅಂದು ಮರ್ಯಾದೆ ಕಳೆದಾನೆಂದು ಅಪ್ಪ ಹೆದರಿ ಹಣ ಕೊಡುವನು. ಚೆನ್ನ, ಹಬ್ಬಗಳ ದಿನ ಮನೆಯ ಮುಂದೆ ಹಾಜರಾಗುತ್ತಿದ್ದನು. ಹಕ್ಕಿನಿಂದ ಊಟ ಮಾಡುತ್ತಿದ್ದನು. ನಮ್ಮ ಮನೆಯ ಕಾರ್ಯಕ್ರಮಗಳಿದ್ದಲ್ಲಿ, ಚಪ್ಪರದ ಗುಂಡಿ ತೆಗೆವ, ಕಸಗುಡಿಸುವ, ಒಲೆಹೂಡುವ, ತರಹೆವಾರಿ ಕೆಲಸದಲ್ಲಿ ಸ್ವತಃ ತೊಡಗಿಸಿಕೊಳ್ಳುತ್ತಿದ್ದನು. ನನ್ನ ತಮ್ಮನ ಶವಸಂಸ್ಕಾರದ ದಿನ ನೋಡಿದೆ. ಖಬರಸ್ಥಾನದ ಗೇಟಿನಲ್ಲಿ ಸುಮ್ಮನೆ ಅಳುತ್ತ ನಿಂತಿದ್ದಾನೆ. ಅವನ ಬಗ್ಗೆ ಎಲ್ಲರಿಗೂ ಮರುಕ, ಪ್ರೀತಿ. ಅವನೊಬ್ಬ ಸರ್ವಾಂತರ್ಯಾಮಿ. ಮೈಸೂರಿನಿಂದ ನಾನು ರಜೆಗೆ ಬಂದರೆ, ಅವನಿಗೆ ಕಾಣಿಕೆ ಸಲ್ಲಬೇಕು. ಈಚೆಗೆ ಊರಿಗೆ ಹೋದಾಗ ಅಣ್ಣನಿಗೆ ಕೇಳಿದೆ:
‘ಚನ್ನ ಇದ್ದಾನಾ?’ ಅವನು ಸತ್ತು ಕಾಲವಾಯಿತಲ್ಲಪ್ಪ’’
ಅವಧೂತನಂತೆ ಬದುಕಿದ ಚೆನ್ನನ ಸಾವು ಲೋಕದ ಸುದ್ದಿಯಾಗಲೇ ಇಲ್ಲ.
ನಮ್ಮ ಕುಲುಮೆಯಲ್ಲಿ ಬಹುಕಾಲ ಇದ್ದವರಲ್ಲಿ ಶಾಂತಣ್ಣನೂ ಒಬ್ಬ. ಒಳ್ಳೆಯ ಕೆಲಸಗಾರ. ಇಂಜಿನಿಯರಿಂಗ್ ಪ್ರತಿಭೆ. ಕಬ್ಬಿಣದ ತುಂಡನ್ನು ಅವನು ಒಮ್ಮೆ ನೋಡಿದನೆಂದರೆ, ಅದರಿಂದ ಹೊಮ್ಮುವ ಉಪಕರಣವು ಕಲ್ಪನೆಯಲ್ಲಿ ಮೈದಳೆಯುತ್ತಿತ್ತು. ಅವನಿಗಾಗಿ ಗಿರಾಕಿಗಳು ಹುಡುಕಿ ಬರುತ್ತಿದ್ದರು. ಹೆಸರು ಶಾಂತಣ್ಣನಾದರೂ ಉಗ್ರಪ್ರತಾಪಿ. ಗಿರಾಕಿಗಳು ಚೌಕಾಸಿ ಮಾಡಿದರೆ, ಒಲೆಯಲ್ಲಿದ್ದ ಸಾಮಗ್ರಿಯನ್ನು ತೆಗೆದು ಅಂಗಳಕ್ಕೆ ಒಗೆದುಬಿಡುತ್ತಿದ್ದನು. ಅಪ್ಪ ಅವನನ್ನು ಮರ್ಯಾದೆಯಿಂದ ನಡೆಸಿಕೊಳ್ಳುತ್ತಿದ್ದನು. ನಮ್ಮ ಕೆಲಸಗಾರರಲ್ಲಿ ನೋಟಿಸು ಕೊಡದೆ ರಜೆ ತೆಗೆದುಕೊಳ್ಳಬಲ್ಲ ಸ್ವಾತಂತ್ರ್ಯ ಪಡೆದಿದ್ದ ಶಾಂತಣ್ಣ, ದಿನಕ್ಕೆ ಐದಾರು ಪ್ಯಾಕು ಸಿಗರೇಟು ಸೇದುತ್ತಿದ್ದನು. ‘ಮಾಲೀಕ ಗಣೇಶ್‌ಬೀಡಿ, ಕೆಲಸಗಾರ ಪಾಸಿಂಗ್‌ಶೋ’ ಎಂದು ಗಿರಾಕಿಗಳು ಆಡಿಕೊಳ್ಳುತ್ತಿದ್ದರು. ನನ್ನನ್ನು ‘ಕ್ಯಾ ಛೋಟೆ ಸೌಕಾರ್’ ಎನ್ನುತ್ತಿದ್ದನು. ಕುಡಿದಾಗ ‘ಕ್ಯಾರೇ? ಕಬ್ ಆಯಾರೆ?’ ಎಂದು ಏಕವಚನಕ್ಕೆ ಇಳಿಸುತ್ತಿದ್ದನು. ಇಂತಹ ಉಗ್ರನನ್ನು ಅವನನ್ನು ಕೂಡಿದ್ದ ಚೌಡಮ್ಮ ಎಂಬ ಜೋಗಮ್ಮನೊಬ್ಬಳು, ಬೆಕ್ಕಿನ ಮರಿಯಂತೆ ಪಳಗಿಸಿದ್ದಳು. ತಂತಮ್ಮ ಅಧಿಕೃತ ಸಂಸಾರ ಬಿಟ್ಟು ಹೊರಬಂದು ನಿರಂಕುಶಮತಿಗಳಾಗಿದ್ದ ಇಬ್ಬರೂ, ಒಂದಾಗಿದ್ದರು. ಚೌಡಮ್ಮ ಅನ್ನ ಬೇಯಿಸಿ ಹೋಟೆಲಿನಿಂದ ಸಾಂಬಾರು ತರುತ್ತಿದ್ದಳು. ಇಬ್ಬರೂ ಚಾಕಣ ನಂಜಿಕೊಂಡು ಸರಾಯಿ ಹೀರಿ ತಮ್ಮ ಅಪೂರ್ವ ಶಬ್ದಕೋಶವನ್ನು ಬಳಸುತ್ತಿದ್ದರು. ಶಾಂತಣ್ಣ ‘ಲೇ ಬೋಸಡಿ, ಊಟಕ್ಕೆ ಹಾಕೇ’ ಎಂದರೆ, ‘ಬೆಂಕ್ಯಾಗೆ ಸುಟ್ಟು ಮುಕುಳಿಯಾಗೆ ಪಾವು ಮಾಂಸಿಲ್ಲ, ಎಗರಾಡಬ್ಯಾಡ ಸ್ವಲ್ಪ ತಡಿಯೊ’ ಎನ್ನುತ್ತಿದ್ದಳು. ಅವರ ಬೈಗುಳ ಸಿಟ್ಟು ಕುಡಿತಗಳು ಹತಾಶೆಯ ಸಂಕೇತವೊ ಪ್ರೇಮವಿನಿಮಯದ ಮಧುರನುಡಿಗಳೊ, ಜೀವನಪ್ರೀತಿಯ ದ್ಯೋತಕವೊ-ನಿಗೂಢವಾಗಿದ್ದವು.
ಕೆಲಸಗಾರರನ್ನು ನಾವು ಅಣ್ಣ ಅಜ್ಜ ಎಂದು ಸಂಬಂಧವಾಚಕಗಳಲ್ಲಿ ಕರೆಯುತ್ತಿದ್ದೆವು. ಅವರು ಕುಟುಂಬದ ಭಾಗವಾಗಿದ್ದರು. ಕೆಲವರು ನಮ್ಮಲ್ಲೇ ಸತ್ತರು. ಇಂದಿಂಗೆ ನಾಳಿಂಗೆ ಎಂದು ಒಂದು ಅಗುಳನ್ನೂ ಒರೆಯನ್ನೂ ನೂಲನ್ನೂ ಇರಿಸಿಕೊಳ್ಳದೆ ಬದುಕಿದ ಇವರೆಲ್ಲ ಕೆಲಸಗಾರರೆಲ್ಲ ಒಬ್ಬೊಬ್ಬರಾಗಿ ಗತಿಸಿದರು. ಬದುಕಿರುವ ಕೆಲವರು ಈಗಲೂ ಸಂಬಂಧ ಇರಿಸಿಕೊಂಡಿದ್ದಾರೆ. ನನ್ನ ಮಕ್ಕಳು ಎಳತಿರುವಾಗ ಎಣ್ಣೆತಿಕ್ಕಿ ಜಳಕ ಮಾಡಿಸಲು ಬರುತ್ತಿದ್ದ ಹುಲಿಗೆಮ್ಮ, ಮನೆಗೆಲಸಕ್ಕೆ ಬಾರದಷ್ಟು ಸ್ಥಿತಿವಂತಳಾದರೂ, ಹಬ್ಬದ ದಿನ ಬಂದು ಶೀರಖುರುಮಾ ಕುಡಿದು, ಖುಷಿಗೆ ಹಣ ಪಡೆಯುತ್ತಾಳೆ. ನಮ್ಮ ಮಕ್ಕಳ ಬಗ್ಗೆ ಕುಶಲ ವಿಚಾರಿಸುತ್ತಾಳೆ. ಹಣ್ಣುವೃದ್ಧೆಯಾದರೂ, ನಮ್ಮ ಮನೆಯನ್ನು ಮಾತ್ರ ಈರಮ್ಮ ಬಿಟ್ಟಿಲ್ಲ. ಆಕೆಗೆ ನಾನು ‘ಅವ್ವಾ! ಬಾನು ಚಾಗೀ ಕೊಟ್ಟಳಾ ಹೆಂಗೆ?’ ಎಂದರೆ ‘ಕುಡದೆ ಕಣಯ್ಯ’ ಎಂದು ಮುಖದ ನೆರಿಗೆ ಅರಳುವಂತೆ ನಗುತ್ತಾಳೆ. ನಾನೊಬ್ಬನೇ ಮನೆಯಲ್ಲಿದ್ದಾಗ ‘ಮೇಡಂ ಇಲ್ಲಂದರೆ ಮನೆ ಬಣಬಣ ಕಣಯ್ಯ’ ಎನ್ನುತ್ತಾಳೆ. ಎಷ್ಟೊಂದು ಜನರ ದುಡಿಮೆಯಿಂದ ನಮ್ಮ ಬದುಕು! ಈ ಖಬರಿದ್ದರೆ ನಮ್ಮ ಕಾಲು ಸದಾ ನೆಲದ ಮೇಲಿರುತ್ತದೆ. ನಾವು ನೆತ್ತಿಯಲ್ಲಿ ನಡೆಯುವುದಿಲ್ಲ.
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…
ಚಾಮರಾಜನಗರ: ಬಿಆರ್ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…
ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…
ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್ಮಹಲನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟ ಪಡೆದಿದೆ. ಈ ಮೂಲಕ ಈಗ…
ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್ ಶಾಕ್ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…