ಅದು 1987ರ ಒಂದು ದಿನ ಬೆಳಿಗ್ಗೆ ಸರಸ್ವತಿಪುರಂ ಠಾಣೆಯಲ್ಲಿದ್ದೆ. ಹತ್ತು ಗಂಟೆ ಸುಮಾರಿಗೆ ಠಾಣೆಯ ಮುಂದೆ ಜೀಪೊಂದು ನಿಂತಿತು. ಮೇಲಾಧಿಕಾರಿ ಬಂದರೆಂದರೆ ಮುಗಿಯಿತು ಅವರೇ ಒಳಬರಲಿ ಎಂದು ಕಾಯುವಂತಿರಲಿಲ್ಲ. ನಾನು ಹ್ಯಾಟ್ ಸಿಕ್ಕಿಸಿಕೊಂಡು ದಡಬಡ ಓಡಿದೆ. ಅಲ್ಲಿ ನೋಡಿದರೆ ಸರ್ಕಲ್ ಇನ್ಸ್ ಪೆಕ್ಟರ್ ಎಂ.ರಂಗಪ್ಪ ಸರ್. ಈ ಹಿಂದೆ ನಾನು ಲಕ್ಷ್ಮೀಪುರಂ ಠಾಣೆಯಲ್ಲಿದ್ದಾಗ ಇನ್ಸ್‌ಪೆಕ್ಟರ್ ಆಗಿದ್ದವರು.
ಸೆಲ್ಯೂಟ್ ಹೊಡೆದು, ‘ಒಳಗೆ ಬನ್ನಿ ಸರ್ ಕಾಫೀಗೆ ಹೇಳ್ತೀನಿ’ ಅಂದೆ.
ಅವರು ‘ನಿಮಗೆ ಆರ್.ಕೆ.ನಾರಾಯಣ್ ಮನೆ ಗೊತ್ತಾ?’ ಎಂದರು.
ನಾನು ‘ಹೂಂ ಗೊತ್ತು ಸಾರ್, ದಾಸ್ ಪ್ರಕಾಶ್ ಪ್ಯಾರಡೈಸ್ ಪಕ್ಕ ಇದೆ’ ಎಂದೆ.
ಅವರು ಜೀಪಿನಿಂದ ಇಳಿದವರೇ, ‘ಹಾಗಿದ್ರೆ ಕೂತ್ಕಳಿ, ಒಂದೈದು ನಿಮಿಷ ಹೋಗಿ ಬರೋಣ’ ಎಂದರು. ಜೀಪು ಹತ್ತಿ ಡ್ರೈವರ್ ಪಕ್ಕ ಕುಳಿತೆ. ಅವರೇ ಭಾರಿ ಸೈಜು. ಅವರ ಡ್ರೈವರ್ ಸಹ ಅದೇ ಗಾತ್ರದ ಠೊಣಪ. ಹಳೇ ಕಾಲದ ಚಿಕ್ಕ ವಿಲ್ಲೀಸ್ ಜೀಪುನ ನಡುವೆ ನಾನು!.
‘ಉಪ ರಾಷ್ಟ್ರಪತಿ ಆರ್.ವೆಂಕಟರಾಮನ್ ರವರು ಸರ್ಕಾರಿ ಭವನದಲ್ಲಿದ್ದಾರೆ. ಅವರು ನಾವೆಲಿಸ್ಟ್ ನಾರಾಯಣ್ ಅವರನ್ನು ನೋಡಬೇಕಂತೆ. ಮಧ್ಯಾಹ್ನ ಎರಡರಿಂದ ಏಳು ಗಂಟೆ ತನಕ ಬಿಡುವು. ಆಗ ಆರ್.ಕೆ ಯವರಿಗೆ ‘ತಾವು ಬಿಡುವಾಗಿದ್ದರೆ ಸರ್ಕಾರಿ ಭವನಕ್ಕೆ ಬನ್ನಿ, ವೈಸ್ ಪ್ರೆಸಿಡೆಂಟ್ ಹೇಳಿಕಳಿಸಿದ್ದಾರೆ’ ಅಂತ ಹೇಳಬೇಕಿತ್ತಂತೆ. ನಮ್ಮ ಇನ್ಸ್‌ಪೆಕ್ಟರಿಗೆ ಮ್ಯಾನೇಜ್ ಮಾಡುವಷ್ಟು ಇಂಗ್ಲಿಷ್ ಚೆನ್ನಾಗೆ ಬರುತ್ತೆ. ಆದರೆ ಇಂಗ್ಲಿಷ್ ನಾವೆಲಿಸ್ಟ್ ಆರ್.ಕೆ.ನಾರಾಯಣ್ ರವರು ಅಂತಾರಾಷ್ಟ್ರೀಯ ಪ್ರಸಿದ್ಧಿಯ ಕಾದಂಬರಿಕಾರ. ಅವರೆದುರು ಇಷ್ಟೆಲ್ಲವನ್ನು ಇಂಗ್ಲಿಷಿನಲ್ಲಿ ಹೇಳಲಾಗುತ್ತದೆಯೇ? ಅದೇನೋ ಅಳುಕು. ಹಿಂಜರಿಕೆ. ಹೇಗೂ ಸಾಹಿತಿಗಳ ಜೊತೆ ಬಳಕೆ ಇದೆಯಲ್ಲಾ ಎಂದು ನನ್ನಲ್ಲಿಗೆ ಬಂದಿದ್ದರು.
ಆದರೆ ಆರ್.ಕೆ.ನಾರಾಯಣರಿಗೆ ಇಷ್ಟೆಲ್ಲ ವಿಷಯಗಳನ್ನು ವಿವರಿಸಿ ಹೇಳುವಷ್ಟು ಇಂಗ್ಲಿಷ್ ನನಗೂ ಬಾರದು. ಹಿಂದೊಮ್ಮೆ ಅದೇತಕ್ಕೋ ಅವರ ಮನೆಗೆ ಹೋದಾಗ ಅದೇನನ್ನೋ ಇಂಗ್ಲಿಷಿನಲ್ಲಿ ಬಡಬಡ ಮಾತಾಡಿದ್ದರು. ಆಗಂತೂ ಕಿಂಚಿತ್ತೂ ಅರ್ಥವಾಗಿರಲಿಲ್ಲ. ಅವರೋ ವಿಪರೀತ ಮೂಡಿ.
ಉಪರಾಷ್ಟ್ರಪತಿಗಳು ಹೇಳಿ ಕಳಿಸಿರುವುದನ್ನು ಹೇಗೆ ಹೇಳುವುದು? ಒಮ್ಮೆ ಮನದಲ್ಲೇ ರಿಹರ್ಸಲ್ ಮಾಡಿಕೊಂಡು ಹೇಳಿದೆ, ‘ಸರ್, ಉಪ ರಾಷ್ಟ್ರಪತಿ ಶ್ರೀ ಆರ್.ವೆಂಕಟರಾಮನ್ ಅವರು ತಮಗೊಂದು ಆಹ್ವಾನ ಕಳಿಸಿದ್ದಾರೆ. ತಮ್ಮನ್ನು ಅವರು ಭೇಟಿಯಾಗಿ ಮಾತಾಡಬೇಕಂತೆ. ಅವರು ಈವತ್ತು ಮಧ್ಯಾಹ್ನ ಎರಡು ಗಂಟೆಯಿಂದ ರಾತ್ರಿ ಏಳು ಗಂಟೆಯವರೆಗೆ ಬಿಡುವಿರುತ್ತಾರಂತೆ. ತಮಗೆ ಎಷ್ಟೋತ್ತಿಗೆ ಅನುಕೂಲ ಎಂದರೆ ನಾವು ಬಂದು ಕರೆದುಕೊಂಡು ಹೋಗ್ತೇವೆ, ಅಂದ್ರೆ ಸರಿಯಾಗುತ್ತಾ ಸರ್?’ ಎಂದು ಒಪ್ಪಿಸಿದೆ.
‘ಭೇಷಾಗಿದೆ ಉಪ ರಾಷ್ಟ್ರಪತಿಗಳು ತಮಗೆ ‘ರಿಕ್ವೆಸ್ಟ್ ಮಾಡಿದ್ದಾರೆ? ಎಂಬ ಪದದನ್ನು ನೀವು ಒತ್ತಿ ಹೇಳಲೇಬೇಕು’ ಎಂದರು ರಂಗಪ್ಪ.
ಆರ್.ಕೆ ಯುವರ ಮನೆಗೆ ಹೋಗಿ ಕಾಲಿಂಗ್ ಬೆಲ್ ಒತ್ತಿದೋ. ಬಾಗಿಲು ತೆರೆದವರಿಗೆ ಕಾರಣ ಹೇಳಿದೆವು. ಅವರೋ ಒಳ ಹೋದವರು ಕಾಲುಗಂಟೆಯಾದರೂ ಬರಲಿಲ್ಲ. ನಾವು ಮನೆ ಹೊರಗಡೆ ವರಾಂಡದಲ್ಲಿ ನಿಶ್ಶಬ್ಧವಾಗಿ ಕಾದು ನಿಂತಿದ್ದೆವು.
ಅರ್ಧ ಗಂಟೆ ಕಳೆದಿತ್ತು. ಎಂಭತ್ತು ವರ್ಷದ ಮುದುಕರೊಬ್ಬರು ಪಂಚೆ ಬನಿಯನ್ನಿನಲ್ಲಿ ಹೊರಬಂದರು. ದಪ್ಪ ಕನ್ನಡಕವೇ ಹೇಳಿತು. ಅವರೇ ಆರ್.ಕೆ.ನಾರಾಯಣ್!. ಪೊಲೀಸರು ಮನೆಗೆ ಬಂದರೆಂಬ ಅಸಮಧಾನ ಕಾಣುತ್ತಿತ್ತು. ಸೆಲ್ಯೂಟ್ ಹೊಡೆದು ವಿಷಯ ಅರುಹಿದೆ. ವಿಪರೀತ ಗೌರವದಿಂದ ಬಿನ್ನವಿಸಲು ಹೋಗಿ ನನ್ನ ಧ್ವನಿಯೇ ಅವರಿಗೆ ಸರಿಯಾಗಿ ಕೇಳಿಸಲಿಲ್ಲ!. ನಂತರ ನಿಧಾನಕ್ಕೆ ತುಂಡು ತುಂಡು ಇಂಗ್ಲಿಷಿನಲ್ಲಿ ಹೇಳಿದೆ. ನಿರರ್ಗಳ ಇಂಗ್ಲಿಷಿನಲ್ಲಿ ಅವರು ಅದೇನೋ ಸ್ಪೀಡಾಗಿ ಹೇಳಿದರು. 82 ವರ್ಷದ ಧ್ವನಿ. ಏನೂ ಗೊತ್ತಾಗಲಿಲ್ಲ.
‘ನೋ ನೋ ! ಇಲ್ಲ, ನಾನೆಲ್ಲಿಗೂ ಹೋಗೋದಿಲ್ಲ. ಬೇಕಿದ್ದರೆ ಅವರೇ ಇಲ್ಲಿಗೆ ಬರಲಿ. ನಾನಿಲ್ಲೇ ಮನೆಯಲ್ಲೇ ಇರ್ತೀನಿ. ‘ಖಡಾಖಂಡಿತವಾಗಿ ಹೇಳಿಬಿಟ್ಟರು’. ಏನು ಹೇಳಬೇಕೋ ನಮಗೆ ತೋಚಲಿಲ್ಲ. ಭಾರತದ ಉಪರಾಷ್ಟ್ರಪತಿಗಳ ಆಹ್ವಾನಕ್ಕೆ ಅಷ್ಟು ಕಟುವಾಗಿ ಪ್ರತಿಕ್ರಿಯಿಸುವ ಅಗತ್ಯವಿಲ್ಲವೆಂದು ಮಾತ್ರ ತೋರಿತು! ಯಾರಿಗೆ ಗೊತ್ತು? ಒಣರೋಫಿನಲ್ಲಿ ಮಾತಾಡುವುದೇ ಆರ್.ಕೆ ಅವರ ನಿತ್ಯಾಭ್ಯಾಸವೋ ಏನೋ? ಅವರ ಮಾಮೂಲಿ ಮಾತಿನ ಶೈಲಿಯೇ ಹಾಗೆ ಗಡುಸಾಗಿದ್ದರೆ?
ಸರ್ಕಾರಿ ಭವನದ ಫೋನ್ ನಂಬರನ್ನು ಬರೆದು ಅವರಿಗೆ ಕೊಟ್ಟೆ. ಅವರ ನಂಬರನ್ನು ಪಡೆದುಕೊಂಡೆ. ‘ಏನಾದರೂ ಹೇಳೋದಿದ್ರೆ ಈ ನಂಬರಿಗೆ ತಾವು ಫೋನ್ ಮಾಡಬಹುದು ಸರ್. ವಿವಿಐಪಿ ಸಾಹೇಬರು ಕಾಯ್ತಾ ಇರ್ತಾರೆ. ತಮ್ಮನ್ನು ಭೆಟ್ಟಿಯಾಗಬೇಕಂತೆ’ ವಿನಂತಿಸಿದೆ.
‘ನಾನು ಯಾರಿಗೂ ಫೋನ್ ಮಾಡೋದಿಲ್ಲ. ಅವರು ಬರೋದಾದ್ರೆ ಯಾವ ಟೈಮಿಗಾದರೂ ಬರಲಿ. ಇಲ್ಲೇ ಇರ್ತೀನಿ’ ಎಂದರು. ತೆಗೆದು ಬಿಸಾಡುವ ನಿಷ್ಠುರತೆ!.
ಸೆಲ್ಯೂಟ್ ಹೊಡೆದು ದುರ್ದಾನ ಪಡೆದವರಂತೆ ಇಬ್ಬರೂ ಹೊರಬಂದೆವು. ಖ್ಯಾತನಾಮರ ಬಳಿ ಹೋದಾಗಲೆಲ್ಲ ಈ ಬಗೆಯ ಕಿರಿಕ್ ಆಗುತ್ತಲೇ ಇತ್ತು. ನಾವೋ ಕನಿಷ್ಠ ದರ್ಜೆಯ ಅಧಿಕಾರಿಗಳು. ಅದರಲ್ಲೂ ಖಾಕಿ! ನಮ್ಮನ್ನು ಕಂಡರೇ ಅನೇಕ ಗಣ್ಯರಿಗೆ ಒಂಥರಾ ಹೇವರಿಕೆ. ಅವರು ಹೇಳಿದ ಶೈಲಿಯಲ್ಲೇ, ಅದೇ ಕಟುತ್ವದಲ್ಲೇ ಹೀಗೀಗೆ ಅಂದುಬಿಟ್ಟರು ಎಂದು ಹೇಳಲಾಗದು. ಹಿಂದಿನ ಸಂದರ್ಭಗಳಲ್ಲಿ ಅವರ ಘನತೆಯನ್ನು ನಾವೇ ಎತ್ತಿ ಹಿಡಿದು ಹೀಗಂತ ತಿಳಿಸಿದರು ಎಂದು ನಯಸ್ಸು ಮಾಡಿ ಹೇಳುತ್ತಿದ್ದೆವು. ಆರ್.ಕೆ. ಯವರು ರಾಚಿದಂತೆ ಮಾತಾಡಿದರು ಎಂದು ಹಾಗೆ ಹಾಗೆಯೇ ಉಪರಾಷ್ಟ್ರಪತಿಗಳಿಗೆ ಹೇಳುವುದುಂಟೇ? ಪೀಕಲಾಟ ಶುರುವಾಯಿತು.
‘ಇದೇನ್ರೀ ಇದು? ಈ ವಯ್ಯ ಮುಧೋಳದ ರೀತಿ ಮೈಮೇಲೇ ಬೀಳ್ತಾನೆ? ಆಯ್ತು. ನಾನಿಷ್ಟೋತ್ತಿಗೆ ರೆಡಿ ಇರ್ತೇನೆ. ನೀವು ಬಂದು ಕರೆದುಕೊಂಡು ಹೋಗಿ ಅನ್ನಬಹುದಿತ್ತು. ಇಲ್ಲವೇ ನಾನೇ ಅವರನ್ನು invite ಮಾಡ್ತೀನಿ ನಂಬರ್ ಕೊಡಿ ಎಂದು ಕೇಳಬಹುದಿತ್ತು. ಹೀಗೆ ಎಗರಿ ಬೀಳೋ ಅಗತ್ಯವಿರಲಿಲ್ಲ. ಈಗ ನೋಡಿ ಅವರು ಹೇಳಿದ ರೀತಿಯಲ್ಲೇ ವಿವಿಐಪಿ ಯವರಿಗೆ ವಿಷಯ ಹೇಳೋದಿಕ್ಕೆ ಆಗುತ್ತದೆಯಾ? ರಂಗಪ್ಪ ಅಂದರು ಬೇಸರದಿಂದ.
‘ಈ ಸಾಹಿತಿಗಳ ಮೂಡೇ ಗೊತ್ತಾಗೋದಿಲ್ಲ ಸಾರ್. ಮನೆ ಬಾಗಿಲಿಗೆ ಹೋಗಿ ಆಹ್ವಾನಿಸಿದರೆ ಬರೋದಿಲ್ರೀ ಎಂದು ತಿಗಲಾಸು ಮಾಡ್ತಾರೆ. ಕರೆಯದೆ ಹೋದರೆ ಕಡೆಗಣಿಸಿದರು ಅಂತ ಕುಣಿದಾಡುತ್ತಾರೆ. ಆದರೆ, ಇವರು ಬರೆದಿರೋ ಮಾಲ್ಗುಡಿ ಡೇಸ್, ದಿ ಗೈಡ್ ಅದ್ಭುತವಾಗಿವೆ ಸರ್’ ಎಂದೆ.
‘ಮಾಲ್ಗುಡಿ ಡೇಸ್’ ಈಗ ಟೀವೀಲಿ ಬರ್ತಾ ಇದೆಯಲ್ಲಾ? ನೋಡ್ತಿದ್ದೀನಿ. ತುಂಬಾ ಚೆನ್ನಾಗಿದೆ. ಆ ಒಂದೊಂದು ಎಪಿಸೋಡ್ ನೋಡಿ ಲೇಖಕರು ಬೇರೆ ಥರಾ ಇರ್ತಾರೆ ಅಂದುಕೊಂಡಿದ್ದೆ. ಈ ಥರಾ ಇರಬಹುದು ಅಂತ ಗೊತ್ತಿರಲಿಲ್ಲ’ ಅಂದರು.
‘ತುಂಬಾ ಜನ ಸಾಹಿತಿಗಳು ಹೀಗೇ. ಬರೆದಷ್ಟು ಘನವಾಗಿ ಇರೋದಿಲ್ಲ. ನೀವು ಇವರು ಬರೆದ ಗೈಡ್ ಕಾದಂಬರಿ ಓದಿದ್ದೀರಾ ಸಾರ್?
‘ಇಲ್ಲಾ, ಸಿನಿಮಾ ನೋಡಿದ್ದೇನೆ. ದೇವಾನಂದ್, ವಹೀದಾ ಮಾಡಿದ್ದಾರೆ. ಅದರ ಮ್ಯೂಸಿಕ್ ಅಂತೂ ವಂಡರ್ ಫುಲ್’ ಎಂದರು.
ಹೌದು ಸಾರ್, ಹಾಗೆ ನೋಡಿದರೆ ಕಾದಂಬರಿಗಿಂತ ಗೈಡ್ ಸಿನಿಮಾನೇ ಅದ್ಭುತವಾಗಿದೆ. ಬೆಸ್ಟ್ ಆಕ್ಟಿಂಗ್, ಡೈರೆಕ್ಷನ್, ಮ್ಯೂಸಿಕ್ ಹೀಗೆ ಆರೇಳು ಫಿಲಂ ಫೇರ್ ಪ್ರಶಸ್ತಿ ಬಂದಿದೆ. ಆ ಸಿನಿಮಾದ ಮೇಲೆ ಈ ಮನುಷ್ಯ ಏನೇನೋ ತಕರಾರು ತೆಗೆದರು. ತನ್ನ ಕಾದಂಬರಿಯನ್ನು ಕುಲಗೆಡಿಸಿದ್ದಾರೆ ಅಂತ. ಕಾದಂಬರಿಯನ್ನು ಸಿನಿಮಾದ ದೃಶ್ಯ ಮಾಡಿ ಹೇಳೋದೂ ಅಂದ್ರೆ, ಅದು ಸಂಪೂರ್ಣ ಬದಲಾದ ವ್ಯಾಕರಣ. ಎರಡೂ ಮಾಧ್ಯಮಗಳೂ ಬೇರೆ ಬೇರೆ. ಕಾದಂಬರಿ ಇರೋ ರೀತಿಯಲ್ಲೇ ಸಿನಿಮಾ ತೆಗೆಯೋದಿಕ್ಕೆ ಆಗೋದಿಲ್ಲ. ಸಿನಿಮಾ ರೀತಿ ಕಾದಂಬರಿ ಇರೋದಿಲ್ಲ. ನಿರ್ದೇಶಕ ವಿಜಯಾನಂದ್, ತನ್ನ ಕಾದಂಬರಿಯನ್ನು ವಿಕೃತಿಗೊಳಿಸಿದ ಅಂತ ಕೇಸೂ ಹಾಕಿದ್ದರಂತೆ’ ಎಂದೆ.
‘ಏನೋ ದೊಡ್ಡವರ ಸಮಾಚಾರ ನಮಗೇಕೆ? ಈಗ ನಡೆದಿರೋದನ್ನು ಹೇಗೆ ಯಾವ ರೀತಿ ವಿವಿಐಪಿ ಯವರಿಗೆ ತಿಳಿಸಬೇಕು ಅನ್ನೋದನ್ನು ಹೇಳು. ದೊಡ್ಡವರು ಯಾವ ಮೂಡಿನಲ್ಲಿರುತ್ತಾರೋ? ಅವರು ಹೇಳಿದ ಶೈಲಿಯಲ್ಲೇ ವಕ್ರತೆಗಳೊಂದಿಗೆ ಹೇಳಬಾರದು’
‘ಅವರ ಕೊಂಕುಗಳನ್ನು ನಾವ್ಯಾಕೆ ರಿಪೇರಿ ಮಾಡ್ಬೇಕು ಸಾರ್? ಹೀಗೀಗೇ ಅಂದ್ರು ಅಂತ ಹೇಳಿದರೆ ತಪ್ಪೇನು? ಅವರು ಮಾತಾಡಿರೋದೇ ಹಾಗಲ್ಲವೇ? ಎಂದೆ.
‘ಮಾತು ಹೇಗೇ ಇರಲಿ ನಾವು ಸಂಬಂಧಗಳು ಬಿಗಡಾಯಿಸುವಂತೆ ನಾವು ಹೇಳಬಾರದು. ತಾಳ್ಮೆ ತಪ್ಪಿ ಏನೋ ಮಾತಾಡಿರ್ತಾರೆ. ನಾವು ಫಿಲ್ಟರ್ ಮಾಡಿಕೊಂಡು ಅವರಿಗೆ ಬೇಸರವಾಗದಂತೆ ಹೇಳಬೇಕು. ಇಲ್ಲದಿದ್ರೆ ನಮಗೂ ಚಪ್ರಾಸಿಗೂ ವ್ಯತ್ಯಾಸವೇ ಇರೋದಿಲ್ಲ’ ಎಂದರು. ಈ ಮಾತು ಮುಂದೆ ನನಗೆ ದೊಡ್ಡ ಪಾಠವಾಯಿತು.
ಮಾತಾಡುತ್ತಿದ್ದಂತೆ ಸರ್ಕಾರಿ ಭವನ ಬಂದಿತು. ಒಂದೆಡೆ ಜೀಪು ನಿಲ್ಲಿಸಿ, ‘ಈಗ ನಾವೇನನ್ನು ಎಷ್ಟು ಹೇಳಬೇಕು ಅನ್ನೋದನ್ನು ಕರೆಕ್ಟಾಗಿ ತೀರ್ಮಾನ ಮಾಡಿಕೊಳ್ಳೋಣ ವಿವಿಐಪಿಯವರು ಭೇಟಿ ಮಾಡಬೇಕಿದೆ. ಅದಕ್ಕೆ ಆರ್.ಕೆ ಯವರು ಬರಬೇಡಿ ಅಂತೇನೂ ಹೇಳಿಲ್ಲ. ಎಷ್ಟೋತ್ತಿಗಾದರು ಮನೆಗೆ ಬರಲಿ ಅಂತ ಹೇಳಿದ್ದಾರೆ. ಅದನ್ನು ನಾವು ಸರಿಯಾಗಿ ಪ್ರೆಸೆಂಟ್ ಮಾಡಬೇಕು ಅಷ್ಟೇ. ‘ಎಂದ ರಂಗಪ್ಪನವರು ಏನೇನು ಮಾತಾಡಬೇಕೆಂದನ್ನು ಮನದಟ್ಟು ಮಾಡಿಸಿದರು.
‘ಇದನ್ನು ತಾವೇ ಹೇಳಿದರೆ ಸರಿ ಇರುತ್ತೆ ಸಾರ್’ ಎಂದೆ.
‘ನೀನೇ ಮಾತಾಡು, ಏನಾದರೂ ಸವರಣೆ ಇದ್ದರೆ ನಾನು ಕವರಪ್ ಮಾಡುತ್ತೇನೆ. ಅದರ ಮೇಲೆ ಹೋಗೋದು ಬಿಡೋದು ಅವರಿಗೆ ಸೇರಿದ್ದು’
ವಿವಿಐಪಿಯವರ ಕೋಣೆಗೆ ಹೋಗಿ ಸೆಲ್ಯೂಟ್ ಹೊಡೆದೆವು. ‘ಆರ್.ಕೆ.ನಾರಾಯಣ್ ಅವರಿಗೆ ಆಹ್ವಾನ ತಿಳಿಸಿದೆವು. ಅವರು ತುಂಬಾ ಸಂತೋಷಪಟ್ಟರು. ವಯಸ್ಸಾದ ಕಾರಣ ಎಲ್ಲೂ ಹೊರಗಡೆ ಹೋಗುತ್ತಿಲ್ಲವಂತೆ. ತಾವೇ ಎಷ್ಟು ಹೊತ್ತಿಗಾದರೂ ಬರಬಹುದು ಎಂದು ಫೋನ್ ನಂಬರನ್ನೂ ಅವರೇ ಕೊಟ್ಟಿದ್ದಾರೆ’. ಎಂದು ಹೇಳಿದೆ.
ಆರ್.ವೆಂಕಟರಾಮನ್ ಅವರ ಮುಖದಲ್ಲಿ ಪ್ರಸನ್ನತೆ ಕಾಣಿಸಿತು. ಲಗುಬಗೆಯಿಂದ ಪಿಎಯನ್ನು ಕರೆದು, ‘ಮಧ್ಯಾಹ್ನ ಎಷ್ಟು ಹೊತ್ತಿಗೆ ಬಂದರೆ ಅವರಿಗೆ ಅನುಕೂಲ ಎಂಬುದನ್ನು ತಿಳಿದು ಕಾರ್ಯಕ್ರಮ ಫಿಕ್ಸ್ ವಾಡಿ’ ಎಂದರು.
ಅವರ ಸಂತಸ ಕಂಡು ಬದುಕಿದೆಯಾ ಬಡಜೀವವೇ ಎಂದು ನಾವಿಬ್ಬರೂ ಹೊರಬಂದೆವು.
ಚಿತ್ರದುರ್ಗದ ಪೇಟೆ ಬೀದಿಯ ಉಡುಗೊರೆ (ಗಿಫ್ಟ್) ಮಾರಾಟ ಮಳಿಗೆ ಮಕ್ಕಳು ಮತ್ತು ಪೋಷಕರಿಂದ ತುಂಬಿ ಹೋಗಿತ್ತು. ಅಲ್ಲಿದ್ದ ಹುಡುಗರನ್ನು ಏಕೆ…
- ಡಾ.ಐ.ಸೇಸುನಾಥನ್ ‘ಒಬ್ಬ ನಿನ್ನ ಬಲಗೆನ್ನೆಗೆ ಹೊಡೆದರೆ ಅವನಿಗೆ ನಿನ್ನ ಇನ್ನೊಂದು ಕೆನ್ನೆಗೂ ಹೊಡೆಯಲು ಅನುವು ಮಾಡಿಕೊಡು; ನಿನ್ನ ಮೇಲಂಗಿಯನ್ನು…
‘ಸ್ಯಾಂಡಲ್ ವುಡ್’ ಎಂದೇ ಹೆಸರಾಗಿರುವ ಕನ್ನಡ ಚಿತ್ರರಂಗ ಇಂದು ಭಾರತದ ಒಂದು ಪ್ರಮುಖ ಚಿತ್ರೋದ್ಯಮವಾಗಿ ಬೆಳೆದಿದೆ. ಈ ಮೊದಲು ಪ್ರತಿ…
ಲಕ್ಷ್ಮಿಕಾಂತ್ ಕೊಮಾರಪ್ಪ ೨೦೨೩ರ ಡಿ.೪ರಂದು ಕಾಡಾನೆ ಕಾರ್ಯಾಚರಣೆ ವೇಳೆ ಮೃತಪಟ್ಟಿದ್ದ ಅರ್ಜುನ; ೨ ವರ್ಷ ಕಳೆದರೂ ಅರ್ಜುನನ ಸ್ಮಾರಕ, ಪ್ರತಿಮೆಗಿಲ್ಲ…
ಮೈಸೂರು: ಸಂಭ್ರಮ, ಸಡಗರ, ವಿಶೇಷ ಪ್ರಾರ್ಥನೆಯೊಂದಿಗೆ ಕ್ರೈಸ್ತ ಧರ್ಮದ ದೈವ ಬಾಲಏಸುವಿನ ಜಯಂತಿಯ ಸ್ಮರಣೆಯು ಅದ್ಧೂರಿಯಾಗಿ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ…
ಪ್ರಶಾಂತ್ ಎಸ್. ಗ್ರಾಮೀಣ ಭಾಗದ ರಸ್ತೆಗಳಲ್ಲಿ ಸಮಸ್ಯೆ ಕಣ್ಣಿಗೆ ದೂಳು ಬಿದ್ದರೆ ಅನಾಹುತ ಸಾಧ್ಯತೆ ವಾಹನ ಸವಾರರಿಗೆ ಸವಾಲು; ಎಚ್ಚರ…