ಎಡಿಟೋರಿಯಲ್

ಭಾರತದ ಏಕಮೇವ ‘ಹಕ್ಕಿ ಆಂಬ್ಯುಲೆನ್ಸ್’ ನಡೆಸುವ ಪ್ರಿನ್ಸ್‌ಮೆಹ್ರಾ

 

     ನಗರಗಳ ರಸ್ತೆ ಬದಿಗಳಲ್ಲಿ ಪಾರಿವಾಳ, ಗುಬ್ಬಿ, ಕಾಗೆ ಮೊದಲಾದ ಪಕ್ಷಿಗಳ ಕಳೇಬರಗಳು ಕಂಡು ಬಂದರೆ ಅವುಗಳನ್ನು ಎತ್ತಿ ಹತ್ತಿರದಲ್ಲಿ ಕಸದ ಬುಟ್ಟಿಗಳಿದ್ದರೆ ಅದರಲ್ಲಿ ಹಾಕುವುದು ತೀರಾ ಸಾಮಾನ್ಯ. ಅವುಗಳ ಸತ್ತ ಶರೀರದಿಂದ ವಾಸನೆ ಬಂದರೆ ಅಷ್ಟನ್ನೂ ಮಾಡದೆ, ಮೂಗು ಮುಚ್ಚಿಕೊಂಡು ಮುಂದಕ್ಕೆ ಹೋಗುತ್ತೇವೆ. ಆದರೆ, ಚಂಡೀಘಡದ ೫೩ ವರ್ಷ ಪ್ರಾಯದ ಮಂಜಿತ್ ಸಿಂಗ್ ಅಲಿಯಾಸ್ ಪ್ರಿನ್ಸ್ ಮೆಹ್ರಾ ಎಂಬವರು ಹಾಗಲ್ಲ. ಎಲ್ಲೇ ಯಾವುದೇ  ಹಕ್ಕಿಗಳ ಕಳೇಬರ ಕಾಣಿಸಲಿ, ಅವರು ಅದನ್ನು ಗೌರವಪೂರ್ವಕವಾಗಿ ಎತ್ತಿ, ಖಾಲಿ ಜಾಗದಲ್ಲಿ ಹೊಂಡ ತೋಡಿ, ಅದರಲ್ಲಿ ಕಳೇಬರವನ್ನಿಟ್ಟು ಮಣ್ಣು ಮುಚ್ಚುತ್ತಾರೆ. ಬರೇ ಇಷ್ಟೆ ಆಗಿದ್ದರೆ ವಿಶೇಷವೇನೂ ಇರುತ್ತಿರಲಿಲ್ಲವೋ ಏನೋ. ಹೀಗೆ ಸತ್ತ ಹಕ್ಕಿಗಳ ಅಂತ್ಯಸಂಸ್ಕಾರ ನಡೆಸಲು, ಗಾಯಗೊಂಡ ಹಕ್ಕಿಗಳ ಉಪಚಾರ ಮಾಡಲು ಉದ್ಯೋಗ ತೊರೆದು ತನ್ನ ಇಡೀ ಬದುಕನ್ನು ಮೀಸಲಾಗಿರಿಸಿದ್ದಾರೆ!

2011ರಲ್ಲಿ ಚಂಡೀಘಡದ ಒಂದು ಶಾಲೆಯಲ್ಲಿ ಡ್ರಾಯಿಂಗ್ ಟೀಚರ್ ಆಗಿದ್ದ ಮಂಜಿತ್ ಸಿಂಗ್ ತಮ್ಮ ವಿದ್ಯಾರ್ಥಿಗಳನ್ನು ಕರೆದುಕೊಂಡು ಪಂಜಾಬಿನ ಫಿರೋಜ್‌ಪುರ್ ನಗರದಲ್ಲಿದ್ದ ಆರ್ಮಿ ಕ್ಯಾಂಪನ್ನು ತೋರಿಸಲು ಹೋಗಿದ್ದರು. ಒಂದು ದಿನ ಅಲ್ಲಿನ ಒಂದು ರಸ್ತೆಯಲ್ಲಿ ಹಾದು ಹೋಗುತ್ತಿದ್ದಾಗ ಮುನಿಸಿಪಾಲಿಟಿ ಸ್ವಚ್ಛತಾ ಕರ್ಮಚಾರಿಣಿಯೊಬ್ಬರು ವಿದ್ಯುತ್ ಶಾಕ್ ತಗಲಿ ಸತ್ತ ಒಂದು ಪಾರಿವಾಳವನ್ನು ಎತ್ತಿ, ಬೇರೆ ಕಸದೊಂದಿಗೆ ಸೇರಿಸಿ ಹತ್ತಿರದಲ್ಲಿದ್ದ ಕಸದ ಡಬ್ಬಿಗೆ ಹಾಕುತ್ತಿದ್ದುದನ್ನು ನೋಡಿದರು. ಅವರು ಆಕೆಯ ಬಳಿ ಹೋಗಿ, ಒಂದು ಹಕ್ಕಿಯ ಕಳೇಬರವನ್ನು ಮಾಮೂಲಿ ಕಸದಂತೆ ಕಸದ ಡಬ್ಬಿಗೆ ಹಾಕುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಅದಕ್ಕೆ ಆಕೆ ಎಲ್ಲ ಕಡೆಯೂ ಸಾಮಾನ್ಯವಾಗಿ   ಹಾಗೆಯೇ ಮಾಡುತ್ತಾರೆ ಎಂದು ಹೇಳಿ, ಪಕ್ಕದಲ್ಲಿ ಇನ್ನೊಂದು ಪಾರಿವಾಳ ಅದೇ ರೀತಿ ಸತ್ತು ಬಿದ್ದಿದ್ದನ್ನು ತೋರಿಸಿದರು.

ಮಂಜಿತ್ ಸಿಂಗ್‌ರಿಗೆ ಸತ್ತ ಪಕ್ಷಿಗಳ ಕಳೇಬರ ಆ ರೀತಿಯಲ್ಲಿ ಕಸದ ಡಬ್ಬಿ ಸೇರುವ ದೃಶ್ಯವನ್ನು ಮರೆಯಲಾಗಲಿಲ್ಲ. ಮನೆಗೆ ಹಿಂತಿರುಗಿದವರೇ ಸತ್ತು ಹೀಗೆ ಕಸದಂತೆ ಕಸದ ಬುಟ್ಟಿ ಸೇರುವ ಹಕ್ಕಿಗಳಿಗೆ ಗೌರವಯುತವಾದ ಅಂತ್ಯ ಸಂಸ್ಕಾರ ನಡೆಸುವುದು ಮತ್ತು ಗಾಯಗೊಂಡ ಹಕ್ಕಿಗಳಿಗೆ ವೈದ್ಯಕೀಯ ನೆರವು ಕೊಡುವುದರ ಬಗ್ಗೆ ನಾಲ್ಕಾರು ದಿನ ಆಲೋಚಿಸಿ, ಒಂದು ಕಾರ್ಯಯೋಜನೆಯನ್ನು ತಯಾರಿಸಿದರು. ಗಾಯಗೊಂಡ ಅಥವಾ ಸತ್ತ ಪಕ್ಷಿಗಳು ಕಾಣಿಸಿದರೆ ತನಗೆ ತಿಳಿಸಬೇಕು ಎಂದು ಪಾಂಪ್ಲೆಟ್‌ಗಳನ್ನು ಮುದ್ರಿಸಿ ಹಂಚಿದರು. ಮತ್ತು   ತನ್ನ ಸೈಕಲ್ಲನ್ನು ಒಂದು ‘ಬರ್ಡ್ ಆಂಬ್ಯುಲೆನ್ಸ್’ ರೀತಿಯಲ್ಲಿ ಮಾರ್ಪಡಿಸಿದರು. ಆ ಮೂಲಕ ಭಾರತದ ಏಕಮೇವ ‘ಪಕ್ಷಿ ಆಂಬ್ಯುಲೆನ್ಸ್’ನ್ನು ಹುಟ್ಟು ಹಾಕಿದರು.

ಮಂಜಿತ್ ಸಿಂಗ್ ತನ್ನ ಸೈಕಲ್ ಆಂಬ್ಯುಲೆನ್ಸಲ್ಲಿ ಗಾಯಗೊಂಡ ಹಕ್ಕಿಗಳ ವೈದ್ಯಕೀಯ ಶುಶ್ರೂಷೆಗೆ ಬೇಕಾಗುವ ನೆಗಸುಂಟ್ ಪುಡಿ, ಬರ್ಡ್ ಪ್ಲಸ್ ಸಿರಪ್ ಮೊದಲಾದ ಔಷಧಿ, ಕತ್ತರಿ ಮೊದಲಾದ ಉಪಕರಣಗಳನ್ನು ಇಟ್ಟು ಕೊಂಡಿರುತ್ತಾರೆ. ಹಕ್ಕಿಗಳ ಬಗ್ಗೆ ಚಂಡೀಘಡದ ಯಾವುದೇ ಮೂಲೆಯಿಂದ ಕರೆ ಬಂದರೂ ಸೈಕಲ್ ಏರಿ ಹೊರಡುತ್ತಾರೆ. ಹಕ್ಕಿಗಳಿಗೆ ಸಣ್ಣ ಪುಟ್ಟ ಗಾಯ ಗಳಾಗಿದ್ದರೆ ಸ್ಥಳದಲ್ಲೇ ಉಪಚರಿಸುತ್ತಾರೆ. ಗಂಭೀರ ರೂಪದಲ್ಲಿ ಗಾಯ ಗೊಂಡಿದ್ದರೆ ಅಥವಾ ಅಸ್ವಸ್ಥವಾಗಿದ್ದರೆ ಆಸ್ಪತ್ರೆಗೆ ಒಯ್ಯುತ್ತಾರೆ. ಒಂದು ವೇಳೆ ಸತ್ತ ಹಕ್ಕಿಗಳಾಗಿದ್ದರೆ ಖಾಲಿ ಜಾಗವನ್ನು ಹುಡುಕಿ, ಹೊಂಡ ತೋಡಿ ಹೂಳು ತ್ತಾರೆ. 2012ರಲ್ಲಿ ಮಂಜಿತ್ ಸಿಂಗ್‌ರ ಸೇವೆಯನ್ನು ಗಮನಿಸಿ ಒಂದು ಸ್ಥಳೀಯ ಬ್ಯಾಂಕು ಅವರಿಗೆ ಉಚಿತವಾಗಿ ಒಂದು ಸ್ಕೂಟರ್ ನೀಡಲು ಮುಂದೆ  ಬಂದಿತು. ಆದರೆ ಸ್ಕೂಟರ್‌ನಂತಹ ವಾಹನಗಳು ಪರಿಸರ ಮಾಲಿನ್ಯಕ್ಕೆ ಕಾರಣವೆಂದು ಮಂಜಿತ್ ಸಿಂಗ್ ಅದನ್ನು ನಿರಾಕರಿಸಿದರು. ಆಗ ಆ ಬ್ಯಾಂಕು ಅವರಿಗೊಂದು ಬ್ಯಾಟರಿ ಅಳವಡಿಸಿದ ಸೈಕಲ್ಲನ್ನು ನೀಡಿತು.

ಮಂಜಿತ್ ಸಿಂಗ್ ಬಿಎ ಪದವಿ ಶಿಕ್ಷಣವನ್ನು ಅರ್ಧಕ್ಕೇ ನಿಲ್ಲಿಸಿ ಒಂದು ಖಾಸಗಿ ಶಾಲೆಯಲ್ಲಿ ಡ್ರಾಯಿಂಗ್ ಟೀಚರ್ ಆಗಿ ಕೆಲಸ ಮಾಡುತ್ತಿದ್ದರು. ಚಂಡೀಘಡದ ‘ಯುವಸತ್ತ’ ಎಂಬ ಒಂದು ಸರ್ಕಾರೇತರ ಸಂಸ್ಥೆಯ ಸಂಪರ್ಕಕ್ಕೆ ಬಂದ ಅವರು, ವಾಯು ಮಾಲಿನ್ಯದ ಬಗ್ಗೆ ಕೆಲಸ ಮಾಡತೊಡಗಿದರು. ಇದೇ ಕಾರಣಕ್ಕೆ ಅವರು 1990ರಿಂದ ತಮ್ಮ ದಿನ ನಿತ್ಯದ ಓಡಾಟಕ್ಕೆ ವಾಯು ಮಾಲಿನ್ಯಕ್ಕೆ ಕಾರಣವಾಗುವ ಇತರ ಮೋಟಾರ್ ವಾಹನಗಳ ಬದಲಿಗೆ ಸೈಕಲ್ಲನ್ನು ಬಳಸತೊಡಗಿದರು. ಆಗ ಅವರಿಗೆ 21 ವರ್ಷ ಪ್ರಾಯ. 1990ರಲ್ಲಿ ಅವರು ಮದುವೆಯಾದರು. ಮದುವೆ ನಂತರ ತನ್ನನ್ನು ಸಂಪೂರ್ಣವಾಗಿ ಸಾಮಾಜಿಕ ಕಾರ್ಯಗಳಿಗೆ ತೊಡಗಿಸಿಕೊಳ್ಳಲು ನಿಶ್ಚಯಿಸಿ, ಡ್ರಾಯಿಂಗ್ ಟೀಚರ್ ಕೆಲಸಕ್ಕೆ ರಾಜೀನಾಮೆ ಕೊಟ್ಟು, ಪಾರ್ಟ್ ಟೈಮ್ ಪೈಂಟರ್ ಆಗಿ ಕೆಲಸ ಮಾಡತೊಡಗಿದರು. ತಮ್ಮ ಅಳಿಯನ ಆ ವರ್ತನೆಯಿಂದ ಕಳವಳಗೊಂಡ ಅವರ ಹೆಂಡತಿಯ ಹೆತ್ತವರು ಮಂಜಿತ್ ಸಿಂಗ್‌ಗೆ ಒಂದು ಬ್ಯಾಂಕಲ್ಲಿ ಕ್ಲರ್ಕ್ ಕೆಲಸವನ್ನು ಕೊಡಿಸಿದರು. ಆದರೆ, ಮಂಜಿತ್ ಸಿಂಗ್ ತನ್ನ ಸಾಮಾಜಿಕ ಸೇವೆಗೆ ಎಷ್ಟು ಅರ್ಪಿಸಿಕೊಂಡಿದ್ದರೆಂದರೆ, ಬ್ಯಾಂಕ್ ಕೆಲಸಕ್ಕೆ ಸೇರಿದರೆ ತನ್ನ ಸಾಮಾಜಿಕ ಕೆಲಸಗಳಿಗೆ ಅಡ್ಡಿಯಾಗುತ್ತದೆ ಎಂದು ಬ್ಯಾಂಕ್ ಉದ್ಯೋಗವನ್ನು ನಿರಾಕರಿಸಿ ದರು! ಇದೇ ಕಾರಣಕ್ಕೆ ಮನೆಯಲ್ಲಿ ಗಂಡ ಹೆಂಡತಿ ನಡುವೆ ಪ್ರತಿದಿನ ಜಗಳವಾಗುತ್ತಿದ್ದರೂ ಅವರು ತನ್ನ ಸಾಮಾಜಿಕ ಕಾರ್ಯವನ್ನು ನಿಲ್ಲಿಸಲಿಲ್ಲ.

ಸತ್ತು ಬಿದ್ದ ಅಥವಾ ಗಾಯಗೊಂಡ ಹಕ್ಕಿಗಳ ಬಗ್ಗೆ ಜನರು ಕಾಳಜಿ ವಹಿಸಿ ಅವರಿಗೆ ಸುದ್ದಿ ಮುಟ್ಟಿಸಲು ಪ್ರಾರಂಭಿಸಿದಾಗ ಮಂಜಿತ್ ಸಿಂಗ್‌ರಿಗೆ ಏನೋ ಒಂದು ರೀತಿಯ ಸಮಾಧಾನ. ಈವರೆಗೆ ಸುಮಾರು 1160ಕ್ಕೂ ಹೆಚ್ಚು ಗಾಯಗೊಂಡ ಹಕ್ಕಿಗಳಿಗೆ ವೈದ್ಯಕೀಯ ಆರೈಕೆ ಮಾಡಿದ್ದಾರೆ. ಪಾರಿವಾಳ, ಗುಬ್ಬಚ್ಚಿ, ಗಿಣಿ, ಕಾಗೆ ಮೊದಲಾಗಿ 1280ಕ್ಕೂ ಹೆಚ್ಚು ಸತ್ತ ಹಕ್ಕಿಗಳಿಗೆ ಗೌರವಯುತ ಅಂತ್ಯ ಸಂಸ್ಕಾರ ನೀಡಿದ್ದಾರೆ. ಹೀಗೆ ಸಾವಿರಾರು ಸಂಖ್ಯೆಯಲ್ಲಿ ಹಕ್ಕಿಗಳನ್ನು ಉಳಿಸಿದ ಕಾರಣಕ್ಕೆ 2015ರಲ್ಲಿ ಮಂಜಿತ್ ಸಿಂಗ್‌ರ ಹೆಸರನ್ನು ‘ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್’ ತನ್ನ ದಾಖಲೆಯಲ್ಲಿ ಸೇರಿಸಿತು. ಅದೇ ವರ್ಷ ಗಣರಾಜ್ಯೋತ್ಸವದ ದಿನ ಹರ‍್ಯಾಣ ಸರ್ಕಾರ ಅವರನ್ನು ಸನ್ಮಾನಿಸಿತು. ಚಂಡೀಘಡ ಜನ ಅವರನ್ನು ಪ್ರೀತಿಯಿಂದ ‘ಬರ್ಡ್ ಮ್ಯಾನ್’ ಎಂದು ಕರೆಯಲು ಶುರು ಮಾಡಿದರು. ಸಭೆ ಸಮಾರಂಭಗಳಲ್ಲಿ ಅವರು ಆಹ್ವಾನಿಸಲ್ಪ ಡಲು ಶುರುವಾದರು. ನೂರಾರು ದೇಶ ವಿದೇಶಗಳ ಪ್ರಶಸ್ತಿಗಳು ಅವರನ್ನು ಹುಡುಕಿಕೊಂಡು ಬಂದವು. 2016ರಲ್ಲಿ ಚಂಡೀಘಡ ಪಶುಸಂಗೋಪನೆ ಇಲಾಖೆಯು ಎಚ್‌ಎಸ್‌ಪಿಎ ಆಸ್ಪತ್ರೆಯಲ್ಲಿ ಅವರಿಗೆ ‘ಅನಿಮಲ್ ಎಟೆಂಡೆಂಟ್’ ಉದ್ಯೋಗವನ್ನು ನೀಡಿದಾಗ ಮಂಜಿತ್ ಸಿಂಗ್ ಆ ಉದ್ಯೋಗವನ್ನು ಅತ್ಯಂತ ಸಂತೋಷದಿಂದ ಸ್ವೀಕರಿಸಿದರು. ಅದರಿಂದ ಬರುವ ಸಂಬಳದಲ್ಲಿ  ಶೇ.20ನ್ನು  ತನ್ನ ಹಕ್ಕಿ ಸೇವೆಗೆ ವಿನಿಯೋಗಿಸುತ್ತಾರೆ. ಅವರ ಸೇವೆಗೆ ಯಾರಾದರೂ ಹಣ ಕೊಡಲು ಬಂದರೆ ಅದನ್ನು ನಿರಾಕರಿಸುತ್ತಾರೆ. ಅವರ ಪ್ರಕಾರ ಹಣ ಪಡೆದರೆ ಅದು ಸೇವೆ ಎನಿಸಿಕೊಳ್ಳದು. ‘ಭೂಮಿ ಮೇಲಿರುವ ಎಲ್ಲ ಜೀವಾತ್ಮಗಳೂ ನಮ್ಮವೇ. ಈ ಹಕ್ಕಿಗಳು ನಮ್ಮ ಮಕ್ಕಳಂತೆ. ನಮ್ಮ ಸಣ್ಣದೊಂದು ಪ್ರಯತ್ನದ ಮೂಲಕ ಎಷ್ಟೋ ಹಕ್ಕಿಗಳು ಅಕಾಲಿಕ ಮರಣಕ್ಕೆ ತುತ್ತಾಗುವುದನ್ನು ತಪ್ಪಿಸಬಹುದು’ ಎನ್ನುವುದು ಬರ್ಡ್ ಮ್ಯಾನ್ ಪ್ರಿನ್ಸ್ ಮೆಹ್ರಾರ ಅಚಲ ನಂಬಿಕೆ.

andolanait

Share
Published by
andolanait

Recent Posts

ತಿ.‌ ನರಸೀಪುರ: ಬೈಕ್ ಡಿಕ್ಕಿ ಚಿರತೆ ಸಾವು

ತಿ. ನರಸೀಪುರ: ತಾಲೂಕಿನ ಬನ್ನೂರು ಹೋಬಳಿಯ ಬಸವನಹಳ್ಳಿ ಗ್ರಾಮದ ಸಮೀಪದ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನ ಚಿರತೆಗೆ ಡಿಕ್ಕಿ ಹೊಡೆದ ಪರಿಣಾಮ…

6 hours ago

ತಿರುಪತಿ ಲಡ್ಡು: ತುಪ್ಪದಲ್ಲಿ ಪ್ರಾಣಿ ಕೊಬ್ಬು ಬಳಕೆ

ಅಮರಾವತಿ: ಜಗತ್‌ ಪ್ರಸಿದ್ಧ ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಕಳಪೆ ಗುಣಮಟ್ಟದ ಪದಾರ್ಥಗಳು ಪತ್ತೆಯಾಗಿದೆ ಎಂದು ತೆಲುಗು…

8 hours ago

ಬುರ್ಖಾಧಾರಿ ಮಹಿಳೆಯಿಂದ ಸಲ್ಮಾನ್‌ ಖಾನ್‌ ತಂದೆಗೆ ಜೀವ ಬೆದರಿಕೆ: ಮಹಿಳೆ ಸೇರಿ ಇಬ್ಬರ ಬಂಧನ

ಮುಂಬೈ:‌ ಬಾಲಿವುಡ್‌ನ ಭಾಯಿಜಾನ್ ಸಲ್ಮಾನ್‌ ಖಾನ್‌ ಅವರ ತಂದೆಗೆ ಬುರ್ಖಾ ಧರಿಸಿದ್ದ ಮಹಿಳೆ ಹಾಗೂ ಇನ್ನೊರ್ವ ವ್ಯಕ್ತಿ ಜೀವ ಬೆದರಿಕೆ…

8 hours ago

ಶಾಸಕ ಮುನಿರತ್ನಗೆ ಜಾಮೀನು: ಅತ್ಯಾಚಾರ ಪ್ರಕರಣದಲ್ಲಿ ಮತ್ತೆ ಬಂಧನ ಸಾಧ್ಯತೆ

ಬೆಂಗಳೂರು: ಗುತ್ತಿಗೆದಾರರೊಬ್ಬರಿಗೆ ಜಾತಿನಿಂದನೆ ಹಾಗೂ ಪ್ರಾಣ ಬೆದರಿಕೆ ಹಾಕಿದ ಪ್ರಕರಣದಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನಗೆ…

9 hours ago

ನುಡಿ ಹಬ್ಬಕ್ಕೆ ಆಹ್ವಾನಿಸಲು ಸಿದ್ಧವಾಗಿದೆ ಕನ್ನಡ ರಥ

ಮಂಡ್ಯ: ಜಿಲ್ಲೆಯಲ್ಲಿ ಡಿಸೆಂಬರ್ 20, 21, 22 ರಂದು ನಡೆಯಲಿರುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ…

10 hours ago

ಬಸ್‌ನಲ್ಲಿ ಪ್ರಯಾಣ: ಮಹಿಳೆಯರಿಂದ ಶಕ್ತಿಯೋಜನೆಯ ಅಭಿಪ್ರಾಯ ಪಡೆದ ಪುಷ್ಪ ಅಮರನಾಥ್‌

ಮೈಸೂರು: ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಶಕ್ತಿಯೋಜನೆ ಫಲಾನುಭವಿಗಳ ಅಭಿಪ್ರಾಯ ಸಂಗ್ರಹಿಸಲು ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆಯಾದ ಡಾ…

10 hours ago