ಎಡಿಟೋರಿಯಲ್

ಹೊಸಮಾಳದ ನ್ಯಾಚುರಲಿಸ್ಟ್ ಪ್ರಕಾಶ್

ಅನಿಲ್ ಅಂತರಸಂತೆ

ಕಲಿಕೆಗೆ ವಯಸ್ಸಿನ ಅಂತರವಿಲ್ಲ. ಯಾವ ವಯಸ್ಸಿನಲ್ಲಾದರೂ ಯಾವ ವಿದ್ಯೆಯನ್ನು ಬೇಕಿದ್ದರೂ ಕಲಿಯಬಹುದು. ಹೀಗೆ ಕಿರಿಯ ವಯಸ್ಸಿನಲ್ಲಿ ಉನ್ನತ ವ್ಯಾಸಂಗ ಮಾಡಿದ, ವಯಸ್ಸಾದ ಮೇಲೆ ಇತರೆ ವಿದ್ಯೆಗಳನ್ನು ಕಲಿತರುವ ಅನೇಕ ಮಂದಿಯನ್ನು ಕಾಣಬಹುದು. ಅಂತಹವರಲ್ಲಿ ಎಚ್.ಡಿ.ಕೋಟೆ ತಾಲ್ಲೂಕಿನ ಹೊಸಮಾಳ ಗ್ರಾಮದ ಎನ್.ಪ್ರಕಾಶ್ ಕೂಡ ಒಬ್ಬರು. ನಿಸರ್ಗತಜ್ಞರಾಗಿ (ನ್ಯಾಚುರಲಿಸ್ಟ್) ಕಳೆದ ೧೨-೧೩ ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಪ್ರಾಣಿ-ಪಕ್ಷಿಗಳ ಅಧ್ಯಯನದಲ್ಲಿ ತೊಡಗಿಕೊಂಡಿದ್ದಾರೆ.

ಎಚ್.ಡಿ.ಕೋಟೆ ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಹುಟ್ಟಿ ಬೆಳೆದ ಪ್ರಕಾಶ್ ಓದಿದ್ದು ಕೇವಲ ೧೦ನೇ ತರಗತಿವರೆಗೆ ಮಾತ್ರ. ತಂದೆ ನಾಗಪ್ಪಚಾರ್ ನಾಟಕದ ಮಾಸ್ಟರ್ ಆಗಿದ್ದರು. ಇದರಿಂದಲೇ ಏನೋ ಪ್ರಕಾಶ್ ರಿಗೂ ಇತರೆ ನಟರ ಧ್ವನಿ ಅನುಕರಣೆ ಮಾಡುವುದು, ಪ್ರಾಣಿ-ಪಕ್ಷಿಗಳ ಶಬ್ದವನ್ನು ಅನುಕರಣೆ ಮಾಡುವ ವಿದ್ಯೆ ಕರಗತವಾಗಿತ್ತು. ೧೦ನೇ ತರಗತಿಗೇ ವಿದ್ಯಾಭ್ಯಾಸ ಮೊಟಕುಗೊಳಿಸಿದ ಪ್ರಕಾಶ್, ಟೈಲರಿಂಗ್ ಮಾಡುತ್ತಾ, ಕೆಲ ಕಾರ್ಯಕ್ರಮಗಳಲ್ಲಿ ಮಿಮಿಕ್ರಿ ಮಾಡುತ್ತಾ ಜೀವನ ಸಾಗಿಸುತ್ತಿದ್ದರು. ಕ್ರಮೇಣ ಖಾಸಗಿ ರೆಸಾರ್ಟ್ ಒಂದಕ್ಕೆ ಸೆಕ್ಯೂರಿಟಿಯಾಗಿ ಸೇರಿಕೊಂಡ ಇವರು ಅಲ್ಲಿಯೇ ನ್ಯಾಚುರಲಿಸ್ಟ್ ತರಬೇತಿ ಪಡೆದು, ಪ್ರಸ್ತುತ ಎಚ್.ಡಿ.ಕೋಟೆ ತಾಲ್ಲೂಕಿನ ರೆಡ್ ಅರ್ಥ್ ರೆಸಾರ್ಟ್‌ನಲ್ಲಿ ಪ್ರವಾಸಿಗರ ನೆಚ್ಚಿನ ಹಿರಿಯ ನ್ಯಾಚುರಲಿಸ್ಟ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ಪ್ರಕಾಶ್ ಓದಿದ್ದು ೧೦ನೇ ತರಗತಿಯಾಗಿದ್ದರೂ ಈಗ ವಿದೇಶಿ ಪ್ರವಾಸಿಗರೊಂದಿಗೆ ಸುಲಲಿತವಾಗಿ ಇಂಗ್ಲಿಷ್ ಮಾತನಾಡುತ್ತಾ, ಕಬಿನಿ ಹಿನ್ನೀರಿಗೆ ಬರುವ ವಿವಿಧ ಜಾತಿಯ ಪಕ್ಷಿಗಳು, ಸಫಾರಿಯ ವೇಳೆ ಕಾಣಸಿಗುವ ಕಾಡುಪ್ರಾಣಿಗಳ ಹಾವ-ಭಾವ, ಜೀವನ ಶೈಲಿ ಬಗ್ಗೆ ಮಾಹಿತಿ ನೀಡುತ್ತಾರೆ. ಪಕ್ಷಿಗಳ ಮೇಲಿನ ಅಪಾರ ಜ್ಞಾನ ಹಾಗೂ ಪ್ರವಾಸಿಗರೊಂದಿಗೆ ಇವರು ವರ್ತಿಸುವ ಶೈಲಿಯಿಂದಾಗಿ ಇಂದು ಪ್ರವಾಸಿಗರ ನೆಚ್ಚಿನ ನ್ಯಾಚುರಲಿಸ್ಟ್ ಆಗಿದ್ದಾರೆ.

ನಾನು ಚಿಕ್ಕವನಿದ್ದಾಗ, ನಮ್ಮ ಮನೆಯಲ್ಲಿ ಶೌಚಾಲಯವಿರಲಿಲ್ಲ. ಆದ್ದರಿಂದ ನಮ್ಮ ಸ್ನೇಹಿತ ರೊಂದಿಗೆ ಬಯಲು ಶೌಚಕ್ಕೆ ಹೋಗುತ್ತಿದ್ದಾಗ ಅಲ್ಲಿ ಬಣ್ಣ ಬಣ್ಣದ ಹಕ್ಕಿಗಳನ್ನು ಕಂಡು ಪುಳಕಿತನಾಗುತ್ತಿದ್ದೆ. ಕಬಿನಿ ಹಿನ್ನೀರಿನಲ್ಲಿ ಆಗ ರಣಹದ್ದುಗಳ ಸಂಖ್ಯೆ ಹೆಚ್ಚಾಗಿತ್ತು. ಅವುಗಳನ್ನು ನೋಡುತ್ತಿದ್ದ ನಾನು ಪಕ್ಷಿಗಳ ಧ್ವನಿ ಅನುಕರಣೆ ಮಾಡುತ್ತಿದ್ದೆ. ಇದೇ ಹವ್ಯಾಸವನ್ನು ರೂಢಿಸಿಕೊಂಡು ಸಾಧನೆ ಮಾಡಬೇಕೆಂಬ ಹಂಬಲವಿತ್ತು. ಆದರೆ ಮನೆಯ ಪರಿಸ್ಥಿತಿ ಹಾಗೂ ಆ ಸಂದರ್ಭದಲ್ಲಿ ಎಚ್.ಡಿ.ಕೋಟೆಯಲ್ಲಿ ಅಂತಹ ಅವಕಾಶಗಳಿಲ್ಲದಿರುವುದರಿಂದ ಬೇರೆ ಬೇರೆ ವೃತ್ತಿಯಲ್ಲಿ ತೊಡಗಿಕೊಳ್ಳಬೇಕಾಯಿತು ಎನ್ನುತ್ತಾರೆ ಪ್ರಕಾಶ್.

ಗಿಡಮರ, ಪ್ರಾಣಿ ಪಕ್ಷಿಗಳೊಂದಿಗೆ ಬೆಳೆದ ಅವರಿಗೆಅವುಗಳೊಂದಿಗೆ ಒಡನಾಟ ಇಟ್ಟುಕೊಳ್ಳಬೇಕು, ಅವುಗಳ ನಡುವೆಯೇ ಬೆಳೆಯಬೇಕು ಎಂಬುದು ಕನಸ್ಸಾಗಿತ್ತು. ಆಗಿನ ಕಾಲಕ್ಕೆ ಎಚ್.ಡಿ.ಕೋಟೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯಾಗಲಿ, ರೆಸಾಟ್ ಗಳಾಗಲಿ ತಲೆ ಎತ್ತದ ಪರಿಣಾಮ ಪ್ರಕಾಶ್ ತಮ್ಮ ಜೀವನದ ಅರ್ಧ ಭಾಗವನ್ನು ಈ ಆಸೆಯಲ್ಲಿಯೇ ಕಳೆಯಬೇಕಾಯಿತು.

ಪ್ರಕಾಶ್‌ರವರ ಬಯಕೆ ಈಡೇರಿದ್ದು, ೨೦೧೨ರಲ್ಲಿ. ಅದಾಗಲೇ ಅರ್ಧ ಜೀವನ ಸಾಗಿಸಿದ್ದ ಪ್ರಕಾಶ್ ತಮ್ಮ ಊರಿನಲ್ಲೇ ಆರಂಭವಾದ ರೆಡ್ ಅರ್ಥ್ ರೆಸಾಟ್ ನಲ್ಲಿ ಸೆಕ್ಯೂರಿಟಿಯಾಗಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ನಂತರ ಅದೇ ರೆಸಾರ್ಟ್‌ನಲ್ಲಿ ತರಬೇತಿ ಪಡೆದು, ಜತೆಗೆ ಕಬಿನಿಯ ಜಂಗಲ್ ಲಾಡ್ಜ್, ಮಹಾರಾಷ್ಟ್ರ, ಗೋಕರ್ಣ, ದಾಂಡೇಲಿ, ಶೃಂಗೇರಿಗಳಲ್ಲಿ ವಿವಿಧ ರೀತಿಯ ತರಬೇತಿಗಳನ್ನು ಪಡೆದು ಈಗ ಅದೇ ರೆಡ್ ಅರ್ಥ್ ರೆಸಾರ್ಟ್‌ನಲ್ಲಿ ಹಿರಿಯ ಪ್ರಕೃತಿ ತಜ್ಞ ರಾಗಿ (ನ್ಯಾಚುರಲಿಸ್ಟ್) ಕೆಲಸ ಮಾಡುತ್ತಿದ್ದಾರೆ. ಪ್ರಕಾಶ್ ೨೦೦೪ರಲ್ಲಿ ಅಂತರಸಂತೆ ಗ್ರಾಮ ಪಂಚಾಯಿತಿಯ ಸದಸ್ಯರಾಗಿಯೂ ಚುನಾಯಿತರಾಗಿ ಸೇವೆ ಸಲ್ಲಿಸಿದ್ದೂ ಉಂಟು.

ಅಂದುಕೊಂಡಂತೆ ಪ್ರಕೃತಿಯೊಂದಿಗೆ ಕೆಲಸ ಮಾಡುವ, ಪ್ರಾಣಿ-ಪಕ್ಷಿಗಳೊಂದಿಗೆ ಒಡನಾಟವಿಟ್ಟು ಕೊಳ್ಳುವ ಕೆಲಸ ಸಿಗುತ್ತಿದ್ದಂತೆಯೇ ಪ್ರಕಾಶ್ ಉತ್ಸಾಹಿ ಯುವಕರಂತಾಗಿದ್ದಾರೆ. ಸದಾ ಲವಲವಿಕೆಯಿಂದ ರೆಸಾರ್ಟ್‌ನ ಚಟುವಟಿಕೆಗಳಲ್ಲಿ ಭಾಗಿಯಾಗುವ ಇವರು, ಪ್ರವಾಸಿಗರಿಗೆ ನೆಚ್ಚಿನ ವ್ಯಕ್ತಿಯಾಗಿದ್ದಾರೆ. ಓದಿದ್ದು ೧೦ನೇ ತರಗತಿಯಾದರೂ ವಿದೇಶಿ ಪ್ರವಾಸಿಗರೊಂದಿಗೆ ಇಂಗ್ಲಿಷ್‌ನಲ್ಲಿ ಮಾತನಾಡುತ್ತಾ, ಅವರಿಗೆ ಸ್ಥಳೀಯ ಪ್ರಾಣಿ-ಪಕ್ಷಿಗಳ ವಿವರಣೆಗಳ ಜತೆಗೆ ಗಿಡಮರಗಳ ವಿವರಣೆಯನ್ನೂ ನೀಡುತ್ತಾ, ಹಿರಿಯ ಸೂಪರ್ ನ್ಯಾಚುರಲಿಸ್ಟ್ ಅನಿಸಿಕೊಂಡಿರುವುದು ಹೆಮ್ಮೆಯ ವಿಚಾರ.

” ಪ್ರಕೃತಿಯೊಂದಿಗೆ ಕೆಲಸ ಮಾಡಬೇಕು ಎಂಬುದು ನನ್ನ ದೊಡ್ಡ ಬಯಕೆಯಾಗಿತ್ತು. ನನ್ನ ಬಯಕೆಗೆ ನೀರೆರುದು ಪೋಷಿಸಿದ, ಬೆಳೆಸಿದ ಕೀತಿ ರೆಡ್ ಅರ್ಥ್ ರೆಸಾರ್ಟ್ ನವರಿಗೆ ಸಲ್ಲಬೇಕು. ನಾನು ಕಳೆದ ೧೨ ವರ್ಷಗಳಿಂದಲೂ ಪ್ರಕೃತಿತಜ್ಞನಾಗಿ ಇಲ್ಲಿ ಕೆಲಸ ಮಾಡುತ್ತಿರುವುದಕ್ಕೆ ಹೆಮ್ಮೆ ಪಡುತ್ತೇನೆ. ತೃಪ್ತಿಯೂ ಇದೆ.”

-ಎನ್.ಪ್ರಕಾಶ್ ಹಿರಿಯ ನ್ಯಾಚುರಲಿಸ್ಟ್, ಹೊಸಮಾಳ, ಎಚ್.ಡಿ.ಕೋಟೆ ತಾ

ಆಂದೋಲನ ಡೆಸ್ಕ್

Share
Published by
ಆಂದೋಲನ ಡೆಸ್ಕ್

Recent Posts

ಉಡುತೊರೆ ಹಳ್ಳ ಜಲಾಶಯದ 490 ಕೋಟಿ ವೆಚ್ಚದ ಕಾಮಗಾರಿಗೆ ಅನುಮೋದನೆ: ಸಿಎಂ ಸಿದ್ದರಾಮಯ್ಯಗೆ ಅಭಿನಂದನೆ ಸಲ್ಲಿಸಿದ ಪುಟಾಣಿಗಳು

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲೂಕಿನ ಉಡುತೊರೆ ಹಳ್ಳ ಜಲಾಶಯ ಸೇರಿದಂತೆ ಪ್ರಮುಖ ಕೆರೆಕಟ್ಟೆಗಳಿಗೆ ಕಾವೇರಿ…

19 mins ago

ಹನೂರು| ಕುಡಿಯುವ ನೀರಿನ ಸಮಸ್ಯೆ ಉದ್ಭವ: ಅಧಿಕಾರಿಗಳ ವಿರುದ್ಧವೇ ದೂರು ನೀಡಿದ ಗ್ರಾಮಸ್ಥರು

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿದ್ದು, ಸಂಬಂಧಪಟ್ಟವರು ಸರಿಯಾಗಿ ಸ್ಪಂದಿಸುತ್ತಿಲ್ಲ.…

28 mins ago

ಯಾವುದೇ ಕಾರಣಕ್ಕೂ ಟಿ.ನರಸೀಪುರ ರೇಷ್ಮೆ ಕಾರ್ಖಾನೆ ಮುಚ್ಚಲ್ಲ: ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ

ಮೈಸೂರು: ಕ್ರೀಡಾಂಗಣಕ್ಕಾಗಿ ಯಾವುದೇ ಕಾರಣಕ್ಕೂ ರೇಷ್ಮೆ ಕಾರ್ಖಾನೆಯನ್ನು ಮುಚ್ಚುವುದಿಲ್ಲ ಎಂದು ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. ಈ ಕುರಿತು ಮಾತನಾಡಿದ…

1 hour ago

ಹಾಸನ: ಕೆರೆಗೆ ಈಜಲು ಹೋಗಿದ್ದ ಇಬ್ಬರು ವಿದ್ಯಾರ್ಥಿಗಳು ನೀರುಪಾಲು

ಹಾಸನ: ಕೆರೆಯಲ್ಲಿ ಈಜಲು ಹೋಗಿದ್ದ ಇಬ್ಬರು ಕಾಲೇಜು ವಿದ್ಯಾರ್ಥಿಗಳು ನೀರಿನಲ್ಲಿ ಸಿಲುಕಿ ಸಾವನ್ನಪ್ಪಿರುವ ಘಟನೆ ಹಾಸನದಲ್ಲಿ ನಡೆದಿದೆ. ಜಿಲ್ಲೆಯ ಆಲೂರು…

2 hours ago

ನೀರು ಕುಡಿಯಲು ಹೋಗಿ ಕೆಸರಿನಲ್ಲಿ ಸಿಲುಕಿದ ಸಾರಂಗ: ಅರಣ್ಯ ಇಲಾಖೆಯಿಂದ ರಕ್ಷಣೆ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಬಿಸಿಲ ಬೇಗೆ ತಾಳಲಾರದೆ ನೀರು ಕುಡಿಯಲು ಹೋದ ಸಾರಂಗ ಕೆಸರು…

2 hours ago

ಮಂಡ್ಯ ವಿಧಾನಸಭಾ ಕ್ಷೇತ್ರ ಅಭಿವೃದ್ಧಿಯ ಮುಂಚೂಣಿಯಲ್ಲಿದೆ: ಸಚಿವ ಚಲುವರಾಯಸ್ವಾಮಿ

ಮಂಡ್ಯ: ಮುಂದಿನ ಎರಡು ವರ್ಷಗಳಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರ ಜಿಲ್ಲೆಯ ಇತರೆ ಕ್ಷೇತ್ರಗಳ ಅಭಿವೃದ್ಧಿಗಿಂತ ಮುಂಚೂಣಿಯಲ್ಲಿರಲಿದ್ದು, ಇದಕ್ಕೆ ಶ್ರಮಿಸುತ್ತಿರುವ ಸ್ಥಳೀಯ…

2 hours ago