ಎಡಿಟೋರಿಯಲ್

ತಂದೆಯ ನೆನಪಿಗೆ ಉಚಿತ ವಸತಿ ಶಾಲೆ ತೆರೆದ ಪೋರ್ಟಿಯಾ

ಜಾರ್ಖಂಡಿನ 32 ವರ್ಷ ಪ್ರಾಯದ ಪೋರ್ಟಿಯಾ ಕೊಲ್ಕತ್ತಾದಲ್ಲಿ ಪತ್ರಿಕೋದ್ಯಮ ದಲ್ಲಿ ಪದವಿ ಪಡೆದು, ದಿ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ಇಂಟರ್ನ್‌ಶಿಪ್ ಮಾಡಿ, ನಂತರ ಹಲವು ಪತ್ರಿಕಾ ಸಂಸ್ಥೆಗಳಲ್ಲಿ ಕೆಲಸ ಮಾಡಿದವರು. ಪ್ರವಾಸ ಮಾಡುವುದು ಅವರ ನೆಚ್ಚಿನ ಹವ್ಯಾಸ. 2013ರಲ್ಲಿ ಅವರು ಮೊದಲ ಬಾರಿಗೆ ಹಿಮಾಚಲ ಪ್ರದೇಶದ ಸ್ಪಿತಿ ಕಣಿವೆಗೆ ಪ್ರವಾಸ ಹೋಗಿದ್ದರು. ಸ್ಪಿತಿ ಕಣಿವೆಯ ಸೌಂದರ್ಯಕ್ಕೆ ಅವರು ಎಷ್ಟು ಮಾರು ಹೋದ ರೆಂದರೆ, ಅಲ್ಲಿಯೇ ಜೀವನ ಪರ್ಯಂತ ಉಳಿಯಬೇಕು ಎಂದು ಅವರಿಗೆ ಅನ್ನಿಸಿತು. ಮುಂದೆ. ಕೆಲವು ವರ್ಷಗಳ ನಂತರ, ಅವರು ಆಶಿಸಿದಂತೆಯೇ ಆಯಿತು! ಆದರೆ, ಹಾಗೆ ಆದದ್ದು ಒಂದು ದುರಂತದ ಮೂಲಕ.

2018ರಲ್ಲಿ, ಪೋರ್ಟಿಯಾ ಬಹುವಾಗಿ ಪ್ರೀತಿಸುತ್ತಿದ್ದ ಮತ್ತು ಅವರ ಬದುಕಿನ ಬಹುದೊಡ್ಡ ಆಧಾರ ಸ್ತಂಭವಾಗಿದ್ದ ಅವರ ತಂದೆ ತೀರಿಕೊಂಡರು. ತಂದೆಯ ಸಾವು ಪೋರ್ಟಿಯಾರನ್ನು ಖಿನ್ನತೆಗೆ ದೂಡಿತು. ಆ ಖಿನ್ನತೆಯಿಂದ ಹೊರಬರುವ ಪ್ರಯತ್ನವಾಗಿ ಅವರು ಇನ್ನೊಮ್ಮೆ ಸ್ಪಿತಿ ಕಣಿವೆಗೆ ಹೋದರು. ಸಮುದ್ರ ಮಟ್ಟದಿಂದ 12,550 ಅಡಿ ಎತ್ತರದಲ್ಲಿರುವ ಸ್ಪಿತಿ ಕಣಿವೆ ಭಾರತದ ಅತ್ಯಂತ ಎತ್ತರದ ಸ್ಥಳ. ಸ್ಪಿತಿ ಎಂಬುದು ಭೋತಿ ಭಾಷೆಯ ಪದ. ಇದರ ಅರ್ಥ ‘ಮಧ್ಯ ಪ್ರದೇಶ’. ಇದು ಭಾರತ ಮತ್ತು ಟಿಬೆಟ್ ಮಧ್ಯೆ ಇದೆ. ಅಷ್ಟು ಎತ್ತರದ ಸ್ಥಳದಲ್ಲಿ ನಿಂತಾಗ ಪೋರ್ಟಿಯಾರಿಗೆ ಸ್ವರ್ಗದಲ್ಲಿ ತನ್ನ ತಂದೆಗೆ ಬಹಳ ಹತ್ತಿರದಲ್ಲಿ ನಿಂತಿದ್ದೇನೆ ಎಂಬ ಭಾವನೆ ಹುಟ್ಟಿ, ಅವರ ಖಿನ್ನತೆ ದೂರವಾದ ಅನುಭವವಾಯಿತು. ಅದರೊಂದಿಗೆ ಅವರ ಆಲೋಚನಾ ಧಾಟಿಯೂ ಬದಲಾಯಿತು- ತಂದೆ ಶಾರೀರಿಕವಾಗಿ ಈಗಿಲ್ಲ ಅನ್ನುವುದು ವಾಸ್ತವ. ಅದನ್ನು ಒಪ್ಪದೆ ಬೇರೆ ದಾರಿಯಿಲ್ಲ. ಆದರೆ, ಅವರ ನೆನಪನ್ನು ಜೀವಂತವಾಗಿರಿಸಲು ಏನಾದರೂ ಮಾಡುತ್ತೇನೆ ಎಂದು ನಿರ್ಧರಿಸುತ್ತಾರೆ. ಆ ನಿರ್ಧಾರ ಅವರಲ್ಲಿ ಹೊಸ ಚೈತನ್ಯವನ್ನು ಹುಟ್ಟು ಹಾಕುತ್ತದೆ.

ಪೋರ್ಟಿಯಾ ತನ್ನ ತಂದೆಯನ್ನು ನೆನೆದಾಗಲೆಲ್ಲ ಯಾವತ್ತೂ ಅವರ ಕಣ್ಣೆದುರು ಬರುತ್ತಿದ್ದುದು ಅವರು ಮಕ್ಕಳನ್ನು ಪ್ರೀತಿಸುತ್ತಿದ್ದ ಬಗೆ. ಅವರು ಹಳ್ಳಿಗಳಿಗೆ ಹೋಗಿ ಅಲ್ಲಿನ ಬಡ ಮಕ್ಕಳನ್ನು ಒಗ್ಗೂಡಿಸಿ, ಅವರೊಂದಿಗೆ ಆಟವಾಡುತ್ತ ಅವರಿಗೆ ಮಗ್ಗಿ ಕಲಿಸುತ್ತಿದ್ದರು, ಪಾಠ ಪುಸ್ತಕದ ಹಾಡುಗಳನ್ನು ಬಾಯಿ ಪಾಠ ಮಾಡಿಸುತ್ತಿದ್ದರು. ಪುಸ್ತಕಗಳನ್ನು ಖರೀದಿಸಿ ತಂದು ಅವರಿಗೆ ಹಂಚುತ್ತಿದ್ದರು. ಇದು ಪೋರ್ಟಿಯಾರ ನೆನಪಲ್ಲಿ ಭದ್ರವಾಗಿ ನೆಲೆಯೂರಿತ್ತು. ತನ್ನ ತಂದೆಯ ನೆನಪನ್ನು ಜೀವಂತವಾಗಿರಿಸುವುದಕ್ಕೆ ಹಳ್ಳಿಗಾಡಿನಲ್ಲಿ ಒಂದು ಶಾಲೆ ತೆರೆದು ಗ್ರಾಮೀಣ ಭಾಗದ ಬಡ ಮಕ್ಕಳಿಗೆ ಉಚಿತ ಶಿಕ್ಷಣ ಕೊಡಿಸುವುದಕ್ಕಿಂತ ಮಿಗಿಲಾದುದು ಮತ್ತೇನಿದೆ ಎಂದು ಆಲೋಚಿಸಿ, ಅದನ್ನು ಕಾರ್ಯರೂಪಕ್ಕಿಳಿಸಲು ಮುಂದಾಗುತ್ತಾರೆ.

ಆಗ ಪೋರ್ಟಿಯಾ ಮುಂಬೈಯ ಒಂದು ಮಾಧ್ಯಮ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದರು. 2020ರಲ್ಲಿ ಅವರು ತನ್ನ ಕೆಲಸಕ್ಕೆ ರಾಜೀನಾಮೆ ಕೊಟ್ಟು, ತನ್ನ ಸಹೋದ್ಯೋಗಿಗಳು, ಸ್ನೇಹಿತರು, ಆತ್ಮೀಯರಿಗೆ ತನ್ನ ತೀರ್ಮಾನವನ್ನು ತಿಳಿಸುತ್ತಾರೆ. ಅವರೆಲ್ಲರೂ ಅದು ಮೂರ್ಖತನದ ಕೆಲಸ ಎಂದು ಅಸಮಾಧಾನ ಸೂಚಿಸಿದರೂ ಪೋರ್ಟಿಯಾ ತನ್ನ ತೀರ್ಮಾನವನ್ನು ಬದಲಾಯಿಸದೆ ಸ್ಪಿತಿ ಕಣಿವೆಗೆ ವಾಪಸ್ಸಾಗುತ್ತಾರೆ. ಅಲ್ಲಿ ಕೊಮಿಕ್ ಎಂಬ ತೀರಾ ಹಿಂದುಳಿದ ಚಿಕ್ಕ ಹಳ್ಳಿಯನ್ನು ತನ್ನ ಕಾರ್ಯಕ್ಷೇತ್ರವನ್ನಾಗಿಸಿಕೊಳ್ಳುತ್ತಾರೆ. ಸುತ್ತಮುತ್ತಲ ಇತರ ಹಳ್ಳಿಗಳಲ್ಲಿ ತಿರುಗಾಡಿ ಅಲ್ಲಿನ ಮಕ್ಕಳ ಶಿಕ್ಷಣದ ಸ್ಥಿತಿಗತಿಯನ್ನು ತಿಳಿದುಕೊಳ್ಳುತ್ತಾರೆ. ಅಲ್ಲಿನ ಜನರ ಬಡತನ ಎಂತಹದೆಂದರೆ ಅವರು ತಮ್ಮ ಮಕ್ಕಳಿಗೆ ಸಾಮಾನ್ಯವಾದ ಒಂದು ಶಿಕ್ಷಣವನ್ನು ಕೊಡಿಸುವುದು ಬಿಡಿ, ಅದರ ಬಗ್ಗೆ ಆಲೋಚಿಸಲೂ ಆಗದಂತಹ ಕಡು ಬಡತನ. 2022ರಲ್ಲಿ ಪೋರ್ಟಿಯಾ ಕೊಮಿಕ್‌ನಲ್ಲಿ ಒಂದು ಮನೆಯನ್ನು ಬಾಡಿಗೆಗೆ ಪಡೆದು, ‘ಪ್ಲಾನೆಟ್ ಸ್ಪಿತಿ ಫೌಂಡೇಷನ್’ ಎಂಬ ಹೆಸರಲ್ಲಿ ಉಚಿತ ಬೋರ್ಡಿಂಗ್ ಸ್ಕೂಲೊಂದನ್ನು ಪ್ರಾರಂಭಿಸುತ್ತಾರೆ. ಆದರೆ, ಅವರು ಮಕ್ಕಳನ್ನು ಶಾಲೆಗೆ ಕಳಿಸಲು ಅವರ ಹೆತ್ತವರನ್ನು ಒಪ್ಪಿಸಲು ಹರಸಾಹಸ ಪಡಬೇಕಾಗುತ್ತದೆ. ‘ನಮ್ಮ ಮಕ್ಕಳು ಶಾಲೆಗೆ ಹೋಗಿ ಏನು ಮಾಡುತ್ತಾರೆ? ಅವರು ರಸ್ತೆಯಲ್ಲಿ ಏನಾದರೂ ಚಿಕ್ಕಪುಟ್ಟದು ಮಾರಿದರೆ ಮನೆಗೆ ಒಂದಷ್ಟು ಪುಡಿಗಾಸಾದರೂ ಬಂದೀತು’ ಎನ್ನುವ ಹೆತ್ತವರೊಂದಿಗೆ ಗಂಟೆಗಟ್ಟಲೆ ಕುಳಿತು, ವಾದಿಸಿ, ಅವರಿಗೆ ಶಿಕ್ಷಣದೊಂದಿಗೆ ಊಟ, ತಿಂಡಿ, ಆಶ್ರಯ ಕೊಡುವ ಮಾತುಗಳನ್ನಾಡಿದ ನಂತರ ಕೇವಲ ಮೂವರು ಹೆತ್ತವರು ತಮ್ಮ ಮಕ್ಕಳನ್ನು ಶಾಲೆಗೆ ಕಳಿಸಲು ಒಪ್ಪಿದರು! ಮುಂದೆ, ಮಕ್ಕಳ ಸಂಖ್ಯೆ ಬೆಳೆಯುತ್ತ ಹೋಗಿ, ಈಗ ಹತ್ತು ಮಕ್ಕಳು ಶಾಲೆಗೆ ಬರುತ್ತಿದ್ದಾರೆ.

‘ಪ್ಲಾನೆಟ್ ಸ್ಪಿತಿ ಫೌಂಡೇಷನ್’ ಶಾಲೆಯಲ್ಲಿ ಎಂಟರಿಂದ ಹತ್ತು ವರ್ಷ ಪ್ರಾಯದ ಮಕ್ಕಳು ಕಲಿಯುತ್ತಿದ್ದಾರೆ. ಬೆಳಿಗ್ಗೆ ಮಕ್ಕಳು ಶಾಲೆಗೆ ಬರುವುದರೊಂದಿಗೆ ಪೋರ್ಟಿಯಾರ ದಿನಚರಿ ಶುರುವಾಗುತ್ತದೆ. ಎದ್ದು, ತಂದೂರ್ ಹೊತ್ತಿಸಿ ಮಕ್ಕಳು ಕಲಿಯಲು ಕುಳಿತುಕೊಳ್ಳುವ ಕೋಣೆಯನ್ನು ಬೆಚ್ಚಗಾಗಿಸುತ್ತಾರೆ. ಒಲೆ ಹೊತ್ತಿಸಿ ಬೆಳಗಿನ ಉಪಾಹಾರ ತಯಾರಿಸಿ ಮಕ್ಕಳಿಗೆ ನೀಡುತ್ತಾರೆ. ಮಕ್ಕಳಿಗೆ ಗಣಿತ, ವಿಜ್ಞಾನ, ಇಂಗ್ಲಿಷ್ ಮತ್ತು ಚಿತ್ರಕಲೆಯನ್ನು ಕಲಿಸುತ್ತಾರೆ. ಜೊತೆಗೆ, ಗಾರ್ಡನಿಂಗ್, ನೃತ್ಯ ಮೊದಲಾದವುಗಳನ್ನೂ ಹೇಳಿ ಕೊಡುತ್ತಾರೆ. ಸಂಜೆ ಐದರ ತನಕ ಶಾಲೆ ನಡೆಯುತ್ತದೆ.

ಪೋರ್ಟಿಯಾ ತನ್ನ ತಂದೆಯ ನೆನಪನ್ನು ಹಸಿರಾಗಿರಿಸಿಕೊಳ್ಳಲು ಈ ಮಕ್ಕಳಿಗೆ ಶಿಕ್ಷಣ ಕೊಡುತ್ತಿದ್ದರೂ ಅವರಿಗೊಂದು ಆತಂಕ ಕಾಡುತ್ತಿದೆ. ಅದೇನೆಂದರೆ, ಪೋರ್ಟಿಯಾ ಶಾಲೆ ನಡೆಸಲು ಬೇಕಾದ ಖರ್ಚು ವೆಚ್ಚವನ್ನು ಈಗ ಸಂಪೂರ್ಣವಾಗಿ ತಮ್ಮ ಉಳಿತಾಯದ ಹಣದಿಂದಲೇ ನಿರ್ವಹಿಸುತ್ತಿದ್ದಾರೆ. ಮುಂದೆ ತನ್ನಲ್ಲಿನ ಹಣವೆಲ್ಲ ಮುಗಿದ ನಂತರ ಏನು ಮಾಡುವುದೆಂದು ಅವರಿನ್ನೂ ಆಲೋಚಿಸಿಲ್ಲ. ಆದರೆ, ಆ ಮುಗ್ಧ ಮಕ್ಕಳ ಮುಖದಲ್ಲಿನ ಸಂತೋಷ, ಅವರ ತುಟಿಯಲ್ಲಿನ ಸ್ನಿಗ್ಧ ನಗುವನ್ನು ನೋಡುತ್ತಲೇ ಪೋರ್ಟಿಯಾರಲ್ಲಿ ಅದೇನೋ ಹುಮ್ಮಸ್ಸು, ಆಶಾವಾದ ಹುಟ್ಟುತ್ತದೆ. ಮುಂದೆ ಏನಾದರೊಂದು ದಾರಿ ತೆರೆದುಕೊಳ್ಳಬಹುದು ಎಂಬುದು ಅವರ ಅಚಲವಾದ ನಂಬಿಕೆ. ತಂದೆಯ ನೆನಪನ್ನು ಜೀವಂತವಾಗಿರಿಸುವುದರ ಜೊತೆಗೆ ಖಿನ್ನತೆಯಲ್ಲಿ ಮುದುಡಿ ಹೋಗಿದ್ದ ತನ್ನ ಬದುಕನ್ನು ಪುನಃ ಹಸಿರಾಗಿಸಿದ ಆ ಮಕ್ಕಳ ಶಿಕ್ಷಣಕ್ಕೆ ತಾನು ಏನು ಮಾಡಲೂ ತಯಾರಿದ್ದೇನೆ ಎಂದು ಪೋರ್ಟಿಯಾ ಆತ್ಮ ವಿಶ್ವಾಸದಿಂದ ಹೇಳುತ್ತಾರೆ.

lokesh

Recent Posts

ಮೂರು ತಿಂಗಳಲ್ಲಿ ಪಿಎಸ್‌ಐ ಖಾಲಿ ಹುದ್ದೆ ಭರ್ತಿ : ಗೃಹ ಸಚಿವ ಪರಮೇಶ್ವರ್‌

ಬೆಳಗಾವಿ : ರಾಜ್ಯದಲ್ಲಿ 545 ಪಿಎಸ್‌ಐ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದು, ಈಗಾಗಲೇ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ. ಮೂರು ತಿಂಗಳ…

2 mins ago

ಋತುಚಕ್ರದ ರಜೆ : ತನ್ನದೆ ತಡೆಯಾಜ್ಞೆ ಹಿಂಪಡೆದ ನ್ಯಾಯಮೂರ್ತಿ…!

ಬೆಂಗಳೂರು : ಮಹಿಳಾ ನೌಕರರಿಗೆ ಅವರ ಋತುಚಕ್ರದ ಸಮಯದಲ್ಲಿ ತಿಂಗಳಲ್ಲಿ ಒಂದು ದಿನದ ವೇತನ ಸಹಿತ ರಜೆ ಸೌಲಭ್ಯ ಒದಗಿಸುವಂತೆ…

6 mins ago

ಜಪಾನ್‌ನಲ್ಲಿ ಪ್ರಬಲ ಭೂಕಂಪ : ಸುನಾಮಿ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ

ಟೋಕಿಯೋ : ಜಪಾನ್‌ನ ಪೂರ್ವ ಮತ್ತು ಉತ್ತರ ಕರಾವಳಿ ತೀರದಲ್ಲಿ ೭.೬ ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಇಡೀ ಪ್ರದೇಶವನ್ನೇ…

9 mins ago

ಪ್ರವಾಸಿತಾಣ ಉತ್ತೇಜಿಸಲು ಪ್ರವಾಸಿ ಗೈಡ್‌, ಮ್ಯಾಪ್‌ ಸಿದ್ದ : ಮಂಡ್ಯದಲ್ಲಿ 106 ಪ್ರವಾಸಿ ತಾಣಗಳ ಪರಿಗಣನೆ

ಮಂಡ್ಯ : ರಾಜ್ಯದಲ್ಲೇ ಅತಿ ಹೆಚ್ಚು ಪ್ರವಾಸಿ ತಾಣಗಳನ್ನು ಗುರುತಿಸಿರುವ ಹೆಗ್ಗಳಿಕೆ ಮಂಡ್ಯ ಜಿಲ್ಲೆಗೆ ಬಂದಿದ್ದು, ಪ್ರವಾಸಿ ತಾಣಗಳನ್ನು ಉತ್ತೇಜಿಸಲು…

16 mins ago

ಕೆ.ಆರ್‌.ಪೇಟೆ | ರೈತನ ಮೇಲೆ ಚಿರತೆ ದಾಳಿ ; ಪ್ರಾಣಾಪಾಯದಿಂದ ಪಾರು

ಕೆ.ಆರ.ಪೇಟೆ : ತಾಲ್ಲೂಕಿನ ಕಸಬಾ ಹೋಬಳಿಯ ಕತ್ತರಘಟ್ಟ ಗ್ರಾಮದಲ್ಲಿ ರೈತನ ಮೇಲೆ ಚಿರತೆ ದಾಳಿಮಾಡಿ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಸೋಮವಾರ…

22 mins ago

ಒಂದೇ ಒಂದು ರೂಪಾಯಿ ಕೂಡ ಮಧ್ಯವರ್ತಿ ಪಾಲಾಗದಂತೆ ಗೃಹಲಕ್ಷ್ಮಿ ಜಾರಿ : ಸಚಿವೆ ಹೆಬ್ಬಾಳಕರ್‌

ಬೆಳಗಾವಿ : ದೇಶದಲ್ಲಿ ಮಾದರಿಯಾದ, ಮಹಿಳೆಯರ ಸಬಲೀಕರಣ ಉದ್ದೇಶ ಹೊಂದಿರುವ ಗೃಹಲಕ್ಷ್ಮಿ ಯೋಜನೆಯನ್ನು ಒಂದೇ ಒಂದು ರೂಪಾಯಿ ಕೂಡ ಮಧ್ಯವರ್ತಿಗಳ…

25 mins ago