೨೦೨೨ರ ಮಾರ್ಚ್ ೧೩ ಹೊಸದಿಲ್ಲಿಯ ಶಹಧಾರ ವಠಾರದ ಪೂಜಾ ಶರ್ಮಾರ ಬದುಕಿನ ಅತ್ಯಂತ ಕರಾಳ ದಿನ. ಅಂದು ಯಾವುದೋ ಒಂದು ಕ್ಷುಲ್ಲಕ ಸಂಗತಿಯ ಕಾರಣ ಪೂಜಾರ ೩೦ ವರ್ಷ ಪ್ರಾಯದ ಅಣ್ಣ ರಾಮೇಶ್ವರನಿಗೂ ಕೆಲವು ಗೂಂಡಾಗಳಿಗೂ ಬೀದಿ ಜಗಳವಾಗಿ, ಗೂಂಡಾಗಳು ಪೂಜಾರ ಕಣ್ಣೆದುರೇ ಅವನಿಗೆ ಗುಂಡು ಹೊಡೆದರು. ಯಾರೂ ಸಹಾಯ ಮಾಡಲು ಮುಂದೆ ಬಾರದ ಕಾರಣ ಪೂಜಾ ಸ್ವತಃ ರಾಮೇಶ್ವರನನ್ನು ಜಿಟಿಬಿ ಆಸ್ಪತ್ರೆಗೆ ಸಾಗಿಸಿದರು. ಆದರೆ, ಆತ ಉಳಿಯಲಿಲ್ಲ. ಮಗನ ಕೊಲೆ ಸುದ್ದಿ ಕೇಳಿ ಅವರ ತಂದೆ ತೀವ್ರ ಆಘಾತಕ್ಕೊಳಪಟ್ಟು ಕೋಮಾಕ್ಕೆ ಜಾರಿದರು. ಆಗ ೨೬ ವರ್ಷ ಪ್ರಾಯವಾಗಿದ್ದ ಪೂಜಾ ಸಂಪೂರ್ಣವಾಗಿ ಒಬ್ಬಂಟಿಯಾದರು. ಮೂರು ವರ್ಷಗಳ ಹಿಂದೆ ಅವರ ತಾಯಿ ಬ್ರೈನ್ ಹೆಮೊರೇಜ್ (ಮಿದುಳು ಸ್ರಾವ) ಆಗಿ ತೀರಿಕೊಂಡಿದ್ದರು. ಆಸ್ಪತ್ರೆಯಿಂದ ಹೆಣ ಮನೆಗೆ ಬಂದಾಗ ಸ್ಮಶಾನಕ್ಕೆ ಒಯ್ದು ಅಂತ್ಯ ಸಂಸ್ಕಾರ ನಡೆಸಲು ಪೂಜಾರ ಕುಟುಂಬದಲ್ಲಿ ಬೇರಾವ ಪುರುಷ ಸದಸ್ಯರರಿಲ್ಲ. ಆಗ ಪೂಜಾ ತಾನೇ ತಲೆಗೆ ಮುಂಡಾಸು ಸುತ್ತಿಕೊಂಡು, ಮುಂದೆ ನಿಂತು ತನ್ನ ಅಣ್ಣನ ಅಂತ್ಯ ಸಂಸ್ಕಾರವನ್ನು ಮಾಡಬೇಕಾಯಿತು. ಅದಕ್ಕೂ ಮೊದಲು, ಒಂದು ಜಿರಳೆ ಕಂಡರೂ ಹೆದರಿ ಓಡುತ್ತಿದ್ದ ಪೂಜಾ ಅಣ್ಣನ ಅಂತ್ಯಕ್ರಿಯೆ ನಡೆಸಿದ ನಂತರ ಎಷ್ಟೊಂದು ಭಾವುಕರಾದರೆಂದರೆ, ಅಣ್ಣನ ಚಿತಾ ಭಸ್ಮವನ್ನು ಸಂಗ್ರಹಿಸಿ ಅದನ್ನು ತನ್ನ ಮುಖ, ತಲೆಗೆ ಸವರಿಕೊಂಡರು!
ಕೆಲವೇ ಕೆಲವು ತಿಂಗಳ ಹಿಂದೆ ಪೂಜಾ ಶರ್ಮಾರ ಕುಟುಂಬ ಎಷ್ಟು ಸಂತೋಷದಿಂದಿತ್ತೆಂದರೆ, ಆ ದುರಂತ ನಡೆಯದೇ ಇರುತ್ತಿದ್ದರೆ ಈ ಹೊತ್ತಲ್ಲಿ ಪೂಜಾ ಒಬ್ಬಳು ಮದುವಣಿಗಿತ್ತಿಯಾಗಿ ತನ್ನ ಗಂಡನ ಮನೆಯಲ್ಲಿರುತ್ತಿದ್ದರು. ಪೂಜಾರದ್ದು ಒಂದು ಸಾಧಾರಣ ಮಧ್ಯಮ ವರ್ಗದ ಕುಟುಂಬ. ‘ಮಾಸ್ಟರ್ ಆಫ್ ಸೋಶಿಯಲ್ ವರ್ಕ್’ ಪದವಿ ಪಡೆದಿರುವ ಪೂಜಾ ಹೊಸದಿಲ್ಲಿಯ ಸಫ್ದರ್‌ಜಂಗ್ ಸರ್ಕಾರಿ ಆಸ್ಪತ್ರೆಯಲ್ಲಿ ಎಚ್‌ಐವಿ ಕೌನ್ಸಿಲರ್ ಆಗಿ ಕೆಲಸ ಮಾಡುತ್ತಿದ್ದರು. ಪೂಜಾರ ತಾಯಿ ಅವರಿಗೆ ಒಬ್ಬ ಸೂಕ್ತ ಗಂಡನ್ನು ಗೊತ್ತು ಮಾಡಿದ್ದು, ಇನ್ನು ಕೆಲವೇ ತಿಂಗಳಲ್ಲಿ ಅವರ ಮದುವೆಯಾಗಬೇಕಿತ್ತು. ತಾಯಿ ಮಗಳ ಮದುವೆಗಾಗಿ ಆಭರಣಗಳನ್ನು ಮಾಡಿಸಿಟ್ಟು, ಅವಳನ್ನು ಮದುಮಗಳನ್ನಾಗಿ ಕಳಿಸಿಕೊಡುವ ದಿನವನ್ನು ಎದುರು ನೋಡುತ್ತಿದ್ದರು. ಆದರೆ, ೨೦೧೯ರಲ್ಲಿ ಅವರಿಗೆ ಬ್ರೈನ್ ಹೆಮೊರ‍್ಹೇಜ್ ಆಗಿ ತೀರಿಕೊಂಡರು. ತಾಯಿಯ ಸಾವಿನ ಕಾರಣ ಮದುವೆ ಮುಂದೂಡಲ್ಪಟ್ಟಿತು. ನಂತರ, ಕೋವಿಡ್‌ನಿಂದಾಗಿ ಮದುವೆ ಇನ್ನಷ್ಟು ಕಾಲ ಮುಂದೂಡಲ್ಪಟ್ಟಿತು. ಕೋವಿಡ್ ಮುಗಿದು, ಇನ್ನೇನು ಮದುವೆ ತಯಾರಿಗಳನ್ನು ಮಾಡಿಕೊಳ್ಳಬೇಕೆನ್ನುವಾಗ ಅಣ್ಣನ ಕೊಲೆಯಾಯಿತು. ಅಣ್ಣನ ಕೊಲೆಯ ಸುದ್ದಿ ತಂದೆಯನ್ನು ಕೋಮಾಕ್ಕೆ ತಳ್ಳಿತು. ಆ ದುರಂತಗಳ ಸರಮಾಲೆ ಮದುವೆ ಮನೆಗೆ ಹೋಗಬೇಕಿದ್ದ ಪೂಜಾರನ್ನು ಸ್ಮಶಾನಕ್ಕೆ ಕರೆ ತಂದಿತು.
ಪೂಜಾ ಗಂಡಿನಂತೆ ಮುಂದೆ ನಿಂತು ಅಣ್ಣನ ಅಂತ್ಯಕ್ರಿಯೆಯನ್ನು ನಡೆಸುವ ಆ ದುರಂತದ ಸಮಯದಲ್ಲೂ ಅವರ ಮನಸ್ಸಿನಲ್ಲಿ ಒಂದು ಆಲೋಚನೆ ಹಾದು ಹೋಯಿತು-ನಾನಿದ್ದುದ್ದರಿಂದ ನನ್ನ ಅಣ್ಣನ ಅಂತ್ಯಕ್ರಿಯೆಯನ್ನು ನಾನು ನೆರವೇರಿಸಿದೆ. ಒಂದು ವೇಳೆ ನಾನಿಲ್ಲದಿರುತ್ತಿದ್ದರೆ ಅವನ ಅಂತ್ಯಕ್ರಿಯೆಯನ್ನು ಯಾರು ಮಾಡುತ್ತಿದ್ದರು? ಯಾರೋ ಅಪರಿಚಿತರು ಯಾವುದೇ ಭಾವನೆಗಳಿಲ್ಲದೆ ಏನೋ ಒಂದು ಕಾಟಾಚಾರದ ಅಂತ್ಯ ಸಂಸ್ಕಾರ ಮಾಡಿ ಬೀಳ್ಕೊಡುತ್ತಿದ್ದರು. ಯಾರೂ ದಿಕ್ಕು ದಿಸೆಯಿಲ್ಲದ ನಿರ್ಗತಿಕರು, ಅನಾಥರು ತನ್ನ ಸುತ್ತಮುತ್ತ ಎಷ್ಟು ಜನರಿಲ್ಲ? ಅವರೆಲ್ಲ ಸತ್ತಾಗ ಅವರ ಅಂತ್ಯಕ್ರಿಯೆ ಯಾರು ಮಾಡುತ್ತಾರೆ? ನನ್ನ ಅಣ್ಣನ ಅಂತ್ಯಕ್ರಿಯೆ ಮಾಡಿದ ನಾನೇ ಏಕೆ ಅಂತಹ ನಿರ್ಗತಿಕರು, ಅನಾಥರಿಗೆ ಅವರ ಒಬ್ಬ ಕುಟುಂಬ ಸದಸ್ಯೆಯಾಗಿ ಅವರು ತಮ್ಮ ಜೀವನ ಯಾತ್ರೆಯನ್ನು ಕೊನೆಗೊಳಿಸಿದಾಗ ಗೌರವದಿಂದ ಬೀಳ್ಕೊಡುವ ಕೆಲಸ ಮಾಡಬಾರದು? ಆ ಆಲೋಚನೆ ಬಂದದ್ದೇ ಪೂಜಾ ಮತ್ತೇನೂ ಆಲೋಚಿಸದೆ ಅಂದಿನಿಂದ ಅನಾಥ ಶವಗಳ ಅಂತ್ಯ ಸಂಸ್ಕಾರ ಮಾಡುವುದಕ್ಕಾಗಿ ತನ್ನ ಬದುಕನ್ನು ಮುಡುಪಾಗಿಡಲು ನಿಶ್ಚಯಿಸಿದರು.
ಆದರೆ, ಪೂಜಾರ ಆ ತೀರ್ಮಾನ ತಿಳಿಯುತ್ತಲೇ ಅವರೊಂದಿಗೆ ಮದುವೆ ತೀರ್ಮಾನವಾದ ಗಂಡಿನ ಮನೆಯವರು, ‘ಅನಾಥ ಶವಗಳೊಂದಿಗೆ ಸ್ಮಶಾನಗಳಲ್ಲಿ ಓಡಾಡುವ ಹುಡುಗಿ ತಮ್ಮ ಮನೆಯ ಸೊಸೆಯಾಗಿ ಬಂದರೆ ತಮ್ಮ ಸಂಬಂಧಿಕರು ಏನೆಂದುಕೊಂಡಾರು’ ಎಂದು ಮದುವೆಯನ್ನು ರದ್ದು ಮಾಡಿದರು. ಪೂಜಾರ ಹಲವು ಬಾಲ್ಯ ಸ್ನೇಹಿತರು ಮತ್ತು ಸಂಬಂಧಿಕರು ಪೂಜಾರೊಂದಿಗೆ ಮಾತಾಡುವುದೂ ಮೈಲಿಗೆ ಎಂದು ಬಗೆದು ಅವರ ಮನೆಗೆ ಬರುವುದನ್ನು ನಿಲ್ಲಿಸಿ, ಪೂಜಾರನ್ನು ಪ್ರೇತಾತ್ಮಗಳ ಒಡನಾಡಿ ಎಂದು ಕರೆದು ಹಂಗಿಸತೊಡಗಿದರು. ಒಬ್ಬಳು ಹೆಣ್ಣು, ಅದರಲ್ಲೂ ಒಬ್ಬಳು ಯುವತಿ, ಹೀಗೆ ಶವಗಳ ಸಂಸ್ಕಾರ ಮಾಡುವಂತಹ ನಿಷೇಧಾತ್ಮಕ ಕೆಲಸವನ್ನು ಮಾಡುವುದು ಒಂದು ಸಾಂಪ್ರದಾಯಿಕ ಸಮಾಜ ಅಷ್ಟು ಸುಲಭದಲ್ಲಿ ಜೀರ್ಣ ಮಾಡಿಕೊಳ್ಳಬಲ್ಲುದೆ? ಆದರೆ, ಪೂಜಾ ಅದಾವುದರಿಂದಲೂ ಧೃತಿಗೆಡಲಿಲ್ಲ.
ಪೂಜಾ ಶರ್ಮಾ ತನ್ನ ತಂದೆ ಮತ್ತು ಅಜ್ಜಿಯೊಂದಿಗೆ ವಾಸಿಸುತ್ತಾರೆ. ಅವರು ತಮ್ಮ ತೀರ್ಮಾನವನ್ನು ಮನೆಯಲ್ಲಿ ಹೇಳಿದಾಗ ಅವರಿಗೆ ಬೆಂಬಲವಾಗಿ ನಿಂತ ಪ್ರಥಮ ವ್ಯಕ್ತಿ ಅವರ ಅಜ್ಜಿ. ಅವರು ತಮಗೆ ಬರುವ ತಮ್ಮ ಮೃತ ಮಿಲಿಟರಿ ಗಂಡನ ನಿವೃತ್ತಿ ವೇತನದ ಹಣವನ್ನು ಪೂಜಾರಿಗೆ ನೀಡಲು ಪ್ರಾರಂಭಿಸಿದರು. ಪೂಜಾರ ತಂದೆ ದೆಹಲಿ ಮೆಟ್ರೋದಲ್ಲಿ ಗುತ್ತಿಗೆ ಚಾಲಕರಾಗಿದ್ದಾರೆ. ಅವರೂ ಪೂಜಾರಿಗೆ ಆರ್ಥಿಕವಾಗಿ ಸಹಾಯ ಮಾಡುತ್ತಾರೆ. ಪೂಜಾ ತನ್ನ ತಾಯಿ ತನ್ನ ಮದುವೆಗಾಗಿ ಖರೀದಿಸಿದ್ದ ಆಭರಣಗಳನ್ನು ಮಾರಿದರು. ಮುಂದೆ ತನ್ನನ್ನು ಮದುವೆಯಾಗಲು ಯಾರಾದರೂ ಮುಂದೆ ಬರುತ್ತಾರೆ ಎಂದು ತನಗೆ ಅನ್ನಿಸುವುದಿಲ್ಲ ಎಂದು ಸ್ವತಃ ಪೂಜಾರೇ ಹೇಳುತ್ತಾರೆ. ಆದರೆ, ಆ ಬಗ್ಗೆ ಅವರಿಗೆ ಯಾವುದೇ ದುಃಖವಿಲ್ಲ. ಬದಲಿಗೆ, ತನ್ನ ಈ ಕೆಲಸ ತನಗೆ ಅಪಾರ ಮನಃ ಶಾಂತಿಯನ್ನು ಕೊಡುತ್ತದೆ ಎಂದು ಹೇಳುತ್ತಾರೆ.
ಪೂಜಾ ದಿನವೊಂದಕ್ಕೆ ಎರಡರಿಂದ ಹತ್ತು ಅನಾಥ ಶವಗಳಿಗೆ ಅಂತ್ಯ ಸಂಸ್ಕಾರ ಮಾಡುತ್ತಾರೆ. ಅನಾಥ ಶವಗಳು ಹೆಚ್ಚಾಗಿ ಭಿಕ್ಷುಕರು, ನಿರ್ಗತಿಕರು, ಮನೆಯಿಂದ ಹೊರ ಹಾಕಲ್ಪಟ್ಟ ಎಚ್‌ಐವಿ/ಏಡ್ಸ್ ರೋಗಿಗಳು, ತಮ್ಮ ಮನೆಗಳ ಸಂಪರ್ಕ ಕಳೆದುಕೊಂಡ ಬಡ ವಲಸೆ ಕಾರ್ಮಿಕರು ಮೊದಲಾದವರದಾಗಿರುತ್ತವೆ. ಪ್ರಾರಂಭದಲ್ಲಿ ಪೂಜಾ ಶರ್ಮಾ ಎಲ್ಲೆಲ್ಲಿ ಅನಾಥ ಶವಗಳಿವೆಯೆಂದು ವಿಚಾರಿಸಿಕೊಂಡು ಪೊಲೀಸ್ ಸ್ಟೇಷನ್, ಆಸ್ಪತ್ರೆ, ಶವಾಗಾರಗಳಿಗೆ ಹೋಗುತ್ತಿದ್ದರು. ಈಗ ಪೊಲೀಸರು, ಆಸ್ಪತ್ರೆಗಳು, ರೈಲ್ವೇ ಅಽಕಾರಿಗಳು ಅನಾಥ ಶವಗಳಿರುವುದು ಗೊತ್ತಾಗುತ್ತಲೇ ಪೂಜಾರಿಗೆ ತಿಳಿಸುತ್ತಾರೆ. ಪೂಜಾ ಪೊಲೀಸರು ವಿಽ ವಿಧಾನಗಳು ಮುಗಿಸಿದ ನಂತರ ಆ ಶವವನ್ನು ಶವ ಸಾಗಿಸುವ ವಾಹನದಲ್ಲಿ ಹತ್ತಿರದ ಸ್ಮಶಾನಕ್ಕೆ ಸಾಗಿಸುತ್ತಾರೆ. ಪ್ರತಿಯೊಂದು ಶವ ಸಾಗಣೆಗೂ ೧,೦೦೦-೧೨೦೦ ರೂಪಾಯಿ ತಗಲುತ್ತದೆ. ನಂತರ, ಸಂಸ್ಕಾರ ವಿಽಗಳಿಗೆ ೧,೦೦೦-೧,೨೦೦ ರೂಪಾಯಿ ಖರ್ಚಾಗುತ್ತದೆ. ಪ್ರತಿಯೊಂದು ಶವ ಸಂಸ್ಕಾರಕ್ಕೂ ಒಟ್ಟು ಸುಮಾರು ೨೨೦೦ ರೂಪಾಯಿಗಳು ತಗಲುತ್ತವೆ. ಆ ಖರ್ಚನ್ನು ಪೂಜಾ ತನ್ನ ಅಜ್ಜಿ ಕೊಡುವ ನಿವೃತ್ತಿ ವೇತನ, ತಂದೆ ಕೊಡುವ ಸಂಬಳದ ಹಣ, ತನ್ನ ಚಿನ್ನ ಮಾರಿದ ಹಣದಿಂದ ಭರಿಸುತ್ತಾರೆ.
ಪೂಜಾ ಹೆಣಗಳ ಧರ್ಮ ಗೊತ್ತಾದರೆ ಆ ಧರ್ಮದ ಅನುಸಾರ ಅವುಗಳ ಅಂತ್ಯ ಸಂಸ್ಕಾರ ನಡೆಸುತ್ತಾರೆ. ಪೂಜಾ ತಿಂಗಳಿಗೊಮ್ಮೆ ತಾನು ಅಂತ್ಯ ಸಂಸ್ಕಾರ ನಡೆಸಿದ ಶವಗಳ ಚಿತಾಭಸ್ಮವನ್ನು ಸಂಗ್ರಹಿಸಿ, ಒಂದು ಟ್ಯಾಕ್ಸಿ ಬಾಡಿಗೆ ಮಾಡಿ, ಅಮಾವಾಸ್ಯೆಯ ದಿನ ೧೨೦ ಕಿ. ಮೀ. ದೂರದಲ್ಲಿರುವ ಹರಿದ್ವಾರಕ್ಕೆ ಹೋಗಿ ಗಂಗಾ ನದಿಯಲ್ಲಿ ವಿಸರ್ಜನೆ ಮಾಡಿ ಬರುತ್ತಾರೆ. ಒಮ್ಮೆ ಪೂಜಾ ಒಂದು ಅನಾಥ ಹೆಣದ ಅಂತ್ಯ ಸಂಸ್ಕಾರ ನಡೆಸಿದ ಕೆಲವು ತಿಂಗಳ ನಂತರ ಆ ವ್ಯಕ್ತಿಯ ಸಂಬಂಧಿಕರು ಪೂಜಾರನ್ನು ಭೇಟಿಯಾಗಿ, ‘ಅವನು ನಮ್ಮ ಮಗ. ಅವನು ಮನೆ ಬಿಟ್ಟು ಹೋದ ನಂತರ ವಾಪಸ್ ಬಂದಿರಲಿಲ್ಲ. ಕೊನೇ ಪಕ್ಷ ಅವನಿಗೊಂದು ಸೂಕ್ತ ಅಂತ್ಯಸಂಸ್ಕಾರ ಕೊಟ್ಟೀರಲ್ಲ’ ಎಂದು ಧನ್ಯವಾದ ಹೇಳಿದಾಗ, ಪೂಜಾರಿಗೆ ತನ್ನ ಬದುಕಿನ ತೀರ್ಮಾನ ಸರಿಯಾಗಿದೆ ಎಂದು ಇನ್ನಷ್ಟು ದೃಢವಾಯಿತು.
ಹೊಸದಿಲ್ಲಿಯ ಪೊಲೀಸ್ ಅಂಕಿ-ಅಂಶಗಳ ಪ್ರಕಾರ ೨೦೧೮ರಿಂದ ೨೦೨೨ರ ಅವಽಯಲ್ಲಿ ದೆಹಲಿಯಲ್ಲಿ ೧೧,೦೦೦ ಅನಾಥ, ನಿರ್ಗತಿಕ ಶವಗಳು ಪತ್ತೆಯಾಗಿದ್ದು, ಅವುಗಳಲ್ಲಿ ಕೇವಲ ೧,೫೦೦ ಶವಗಳ ಗುರುತು ಪತ್ತೆ ಹಚ್ಚಲಾಗಿತ್ತು. ಪೂಜಾ ೨೦೨೨ರಿಂದ ಈವರೆಗೆ ೪,೦೦೦ಕ್ಕೂ ಹೆಚ್ಚು ಅನಾಥ ಶವಗಳ ಅಂತ್ಯ ಸಂಸ್ಕಾರ ನಡೆಸಿದ್ದಾರೆ. ಪೂಜಾ ಶರ್ಮಾ ಶವ ಸಂಸ್ಕಾರದ ಕೆಲಸದಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಳ್ಳುವ ಸಲುವಾಗಿ ತನ್ನ ಉದ್ಯೋಗವನ್ನು ಬಿಟ್ಟರು. ‘ಬ್ರೈಟ್ ದಿ ಸೋಲ್ ಫೌಂಡೇಶನ್’ ಎಂಬ ಒಂದು ಸರ್ಕಾರೇತರ ಸಂಸ್ಥೆಯನ್ನು ಹುಟ್ಟು ಹಾಕಿದ್ದಾರೆ. ಪೂಜಾರ ಕೆಲಸವನ್ನು ನೋಡಿದ ಹಲವು ಸಹೃದಯಿಗಳು ಅವರಿಗೆ ದೇಣಿಗೆ ನೀಡುತ್ತಾರೆ. ೨೦೨೪ರಲ್ಲಿ ಬಿಬಿಸಿ ಪ್ರಕಟಿಸಿದ ವಿಶ್ವದ ೧೦೦ ಸ್ಛೂರ್ತಿದಾಯಕ ಹಾಗೂ ಪ್ರಭಾವಶಾಲಿ ಮಹಿಳೆಯರ ಪಟ್ಟಿಯಲ್ಲಿ ಪೂಜಾ ಶರ್ಮಾ ಕೂಡ ಒಬ್ಬರಾಗಿದ್ದರು.
ಮೈಸೂರು : ನಟ ದರ್ಶನ್ ಕುಟುಂಬ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಮಕರ ಸಂಕ್ರಾಂತಿಯನ್ನು ತಮ್ಮ ಫಾರ್ಮ್ ಹೌಸ್‌ನಲ್ಲಿ…
ಮಳವಳ್ಳಿ : ತಾಲೂಕಿನ ಕಿರುಗಾವಲು ಸಮೀಪ ಅಕ್ಕಿ ತುಂಬಿದ ಲಾರಿ ಒಂದು ಪಲ್ಟಿ ಹೊಡೆದು ಇಬ್ಬರು ಸಾವನ್ನಪ್ಪಿರುವ ಘಟನೆ ಗುರುವಾರ…
ಬೆಂಗಳೂರು : ನಾಡಿನೆಲ್ಲೆಡೆ ಮಕರ ಸಂಕ್ರಾಂತಿ ಹಬ್ಬದ ಸಡಗರ ಮನೆ ಮಾಡಿದೆ. ಹೊಸ ವರ್ಷದ ಮೊದಲ ಹಬ್ಬಕ್ಕೆ ಪ್ರಧಾನಿ ನರೇಂದ್ರ…
ರಾಯಚೂರು : ದೇವದುರ್ಗ ತಿಂಥಣಿ ಬ್ರಿಜ್ಡ್ ಕಾಗಿನೆಲೆ ಕನಕಗುರುಪೀಠದ ಸಿದ್ದರಾಮನಂದ ಸ್ವಾಮೀಜಿ (50) ವಿಧಿವಶರಾಗಿದ್ದಾರೆ. ಇಂದು ಬೆಳಗಿನ ಜಾವ 3:30ರ…
ಮನೆ ಮಂದಿ ಮಕ್ಕಳು ಕೂಡಿ ಕಣ ಹೊಕ್ಕಿ, ಹೊಲ ಗದ್ದೆಯೆಲ್ಲಾ ಬೆಳೆದ ಬೆಳೆ ಕೈಗೆ ಬಂದೈತಿ ನಗುವಿಂದ ಮಿಂದು ಸುಗ್ಗಿಯ…
ಮೈಸೂರಿನ ಕರ್ನಾಟಕ ಕಲಾಮಂದಿರದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಬಹುರೂಪಿ ನಾಟಕೋತ್ಸವ ನಡೆಯುತ್ತಿದೆ. ಸಿನಿಮಾ ವೀಕ್ಷಿಸಲು ಸಾರ್ವಜನಿಕರಿಗೆ ಉಚಿತ ಹಾಗೂ…