ಎಡಿಟೋರಿಯಲ್

ಪೋಕ್ಸೊ ಸಂತ್ರಸ್ತರ ಮುಂದಿನ ಬದುಕು ಕಟ್ಟಿಕೊಡುವ ಹೊಣೆ ಯಾರದ್ದು?

ಆರೋಪಿಯಾಗಿರುವ ಶರಣರಿಗೆ ಮಠದಿಂದ ಕೃತಾರ್ಥರಾಗಿರುವವರು ಬೆಂಬಲ ಕೊಟ್ಟರೆ ಅದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಿಲ್ಲ!

ಶಿವಪ್ರಸಾದ್ ಜಿ.
ಬಹಳ ದೊಡ್ಡ ಪರಂಪರೆ ಹೊಂದಿರುವ ಚಿತ್ರದುರ್ಗ ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರು ಪೊಲೀಸರ ಬಂಧನದಲ್ಲಿ ದ್ದಾರೆ. ಅವರ ಮೇಲಿರುವ ಆರೋಪ ಸಾಧಾರಣವಾದುದಲ್ಲ. ಮಠದ ವಿದ್ಯಾರ್ಥಿನಿಲಯದಲ್ಲಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಇಬ್ಬರು ಅಪ್ರಾಪ್ತ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ. ಈ ಪ್ರಕರಣದ ಸತ್ಯಾಂಶ ಶರಣರಿಗೆ, ಅವರ ಆಪ್ತ ವಲಯಕ್ಕೆ ಮತ್ತು ಸಂತ್ರಸ್ತ ಬಾಲಕಿಯರಿಗೆ ಮಾತ್ರವೇ ಗೊತ್ತಿರುವುದು. ಮುರುಘಾ ಶರಣರು ಅಪರಾಧಿಯೋ ಅಲ್ಲವೋ ಎಂಬುದು ಪೊಲೀಸರ ತನಿಖೆ, ನ್ಯಾಯಾಲಯದ ವಿಚಾರಣೆ ಬಳಿಕ ನಿರ್ಧಾರವಾಗಲಿದೆ.
ಈ ಪ್ರಕರಣ ಬೆಳಕಿಗೆ ಬಂದ ನಂತರ ಶರಣರ ನಡೆಯ ಬಗ್ಗೆ ಜನಪ್ರತಿನಿಧಿಗಳು, ಸಾಮಾಜಿಕ ಹೋರಾಟಗಾರರು, ಪ್ರಗತಿಪರರು ತಕ್ಷಣಕ್ಕೆ ಪ್ರತಿಕ್ರಿಯಿಸಲಿಲ್ಲ. ಎಲ್ಲರಿಗೂ ಶರಣರ ಮೇಲೆ ಇಂತಹ ಗುರುತರ ಆರೋಪ ಬಂದಿದ್ದು, ನಂಬಲಾಗದ ಆಘಾತಕಾರಿ ವಿಷಯವಾಗಿತ್ತು. ಏಕೆಂದರೆ ಮುರುಘಾ ಮಠವು ವೈಚಾರಿಕತೆ, ವೈಜ್ಞಾನಿಕತೆಯ ದೃಷ್ಟಿಕೋನವನ್ನು ಹೊಂದಿತ್ತು. ಅಲ್ಲದೆ, ಬಸವಾದಿ ಶರಣರ ತತ್ವಪಾಲನೆಯ ಬೋಧನೆ ನಿರಂತರವಾಗಿ ನಡೆಯುತ್ತಿತ್ತು. ರಾಜ್ಯ ಮಟ್ಟದ ಪ್ರಮುಖ ಪ್ರಶಸ್ತಿಗಳಲ್ಲೊಂದಾದ ಬಸವಶ್ರೀ ಪ್ರಶಸ್ತಿ ಇದೇ ಮಠದಿಂದ ಕೊಡಮಾಡಲಾಗುತ್ತಿದೆ. ಅದರಲ್ಲಿಯೂ ಬಹುತೇಕ ಪ್ರಗತಿಪರ ಚಿಂತಕರು, ಹೋರಾಟಗಾರರು, ಬರಹಗಾರರಿಗೆ ಈ ಪ್ರಶಸ್ತಿ ಕೊಡಲಾಗುತ್ತದೆ. ಇಂತಹ ಸಾಮಾಜಿಕ ಸ್ಪಂದನೆಯ ಶರಣರು ಅತ್ಯಂತ ಹೇಯವಾದ ಅಸಹ್ಯವಾದ ಅಪರಾಧ ಎಸಗಿದ್ದಾರೆ ಎಂಬ ಆರೋಪವೇ ಮಠದ ಬಗ್ಗೆ ಅಪಾರವಾದ ನಂಬಿಕೆ ಹೊಂದಿದ್ದವರ ಮೇಲೆ ಗದಾಪ್ರಹಾರ ನಡೆಸಿದಂತೆ ಆಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಕಾನೂನು ಪ್ರಕ್ರಿಯೆ ನಡೆಯಲಿದೆ. ತನಿಖೆ ನಂತರ ವಾಸ್ತವ ಬಯಲಾಗಲಿದೆ ಎಂದು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದರು. ಆದರೆ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ಈ ಪ್ರಕರಣದಲ್ಲಿ ಷಡ್ಯಂತ್ರ ಇದೆ ಎನ್ನುವ ಮೂಲಕ ನೇರವಾಗಿ ಶರಣರ ಬೆಂಬಲಕ್ಕೆ ನಿಂತರು. ವಿರೋಧ ಪಕ್ಷಗಳವರು ಕೂಡ ನೇರವಾಗಿ ಶರಣರ ವಿರುದ್ಧ ಹರಿಹಾಯಲಿಲ್ಲ.
ಪ್ರಸ್ತುತ ರಾಜಕೀಯ ಪರಿಸ್ಥಿತಿಯಲ್ಲಿ ಯಾವುದೇ ಮಾತನಾಡಿದರೂ ಮತಬ್ಯಾಂಕ್‌ಗೆ ಧಕ್ಕೆಯಾಗುವ ಅಪಾಯ ಬಹುತೇಕ ಎಲ್ಲ ಜನಪ್ರತಿನಿಧಿಗಳನ್ನು ನಿಯಂತ್ರಿಸಿದೆ. ಆದರೆ, ವಿಧಾನಪರಿಷತ್ ಸದಸ್ಯ ಎ.ಎಚ್.ವಿಶ್ವನಾಥ್ ಅವರು, ಶರಣರನ್ನು ಬಂಧಿಸಬೇಕು ಎಂದು ನೇರವಾಗಿ ಹೇಳುವ ಮೂಲಕ ಸಂತ್ರಸ್ತ ಮಕ್ಕಳಿಗೆ ನೈತಿಕ ಬೆಂಬಲ ನೀಡಿದರು. ಉಳಿದಂತೆ ಹೋರಾಟಗಾರರು, ಸಂಘಟನೆಗಳು ನಿಧಾನವಾಗಿ ಶರಣರ ವಿರುದ್ಧ ಪ್ರತಿಭಟನೆಗಳನ್ನು ಆರಂಭಿಸಿದವು.
ಇದೆಲ್ಲಕ್ಕೂ ಮಿಗಿಲಾಗಿ ಶರಣರು, ಅನೇಕ ಪರಿಶಿಷ್ಟರಿಗೆ ದೀಕ್ಷೆ ನೀಡಿ, ಮಠಗಳನ್ನೂ ಸ್ಥಾಪಿಸಲು ಅನುವು ಮಾಡಿಕೊಟ್ಟಿದ್ದರು ಎಂಬುದು ಗಮನಾರ್ಹ. ಆದರೆ, ಈಗ ಅವರ ಮೇಲೆ ಬಂದಿರುವ ಆರೋಪದಿಂದ ಆ ಮಠಗಳ ಬಗ್ಗೆಯೂ ಸಾರ್ವಜನಿಕ ವಲಯದಲ್ಲಿ ಮೂಡಬಹುದಾದ ಅಭಿಪ್ರಾಯ ಏನಾಗಿರಬಹುದು ಎಂಬುದು ಪ್ರಾಮಾಣಿಕ, ಮಾನವೀಯ ಹೃದಯಗಳಿಗೆ ಅರಿವಾಗಿರುತ್ತದೆ. ಈ ಪ್ರಕರಣದಲ್ಲಿ ಸಂತ್ರಸ್ತರಾಗಿರುವ ಇಬ್ಬರು ಹೆಣ್ಣುಮಕ್ಕಳ ಪೈಕಿ ಒಬ್ಬಾಕೆ ದಲಿತ ಸಮುದಾಯದವರು. ಆದರೆ, ಇಲ್ಲಿ ಜಾತಿಯನ್ನು ಪರಿಗಣಿಸುವುದಕ್ಕಿಂತ ಇಬ್ಬರು ಮಕ್ಕಳೂ ಸಮಾನ ಸಂತ್ರಸ್ತರು ಎಂಬುದನ್ನು ಎಲ್ಲ ಸಮುದಾಯಗಳೂ ಮನಗಾಣಬೇಕಾಗುತ್ತದೆ.
ಆದರೆ, ಇಲ್ಲಿ ನಿಜವಾಗಿ ಹೃದಯವಂತ ಮನಸ್ಸುಗಳು ಮಮ್ಮಲ ಮರುಗಬೇಕಾಗಿರುವುದು ಸಂತ್ರಸ್ತ ಬಾಲಕಿಯರ ದುರಂತದ ಬಗ್ಗೆ. ಇಬ್ಬರು ಬಾಲಕಿಯರ ಪೈಕಿ ಒಬ್ಬರು ಮೂರೂವರೆ ವರ್ಷಗಳಿಂದ, ಇನ್ನೊಬ್ಬರು ಒಂದು ವರ್ಷದಿಂದ ಮಠದಲ್ಲಿ ಶರಣರಿಂದ ಲೈಂಗಿಕ ಕ್ರೌರ್ಯಕ್ಕೆ ತುತ್ತಾಗಿದ್ದಾರೆ ಎನ್ನಲಾಗಿದೆ. ಇಂತಹ ಪ್ರಕರಣದಲ್ಲಿ ಆರೋಪಿ ವಿರುದ್ಧ ಪೋಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಾಗುತ್ತದೆ. ಹಾಗಾಗಿ ಇದೇ ಕಾಯ್ದೆಯಡಿ ಮುರುಘಾ ಶರಣರನ್ನು ಪೊಲೀಸರು ಬಂಧಿಸಿದ್ದಾರೆ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾಗಿರುವುದು ಶರಣರ ಮೇಲಿನ ಅಪರಾಧ ಸಾಬೀತಾಗುತ್ತದೆಯೋ ಇಲ್ಲವೋ ಎಂಬುದನ್ನಲ್ಲ. ಈ ಪ್ರಕರಣ ಬಯಲಿಗೆ ಬಂದಾಗಿನಿಂದ, ಆರಂಭವಾಗಿರುವ ಸಂತ್ರಸ್ತ ಬಾಲಕಿಯರ ಬದುಕಿನ ಕರಾಳ ಅಧ್ಯಾಯದ ಸಂಕಷ್ಟ, ಅತಂತ್ರ ಸ್ಥಿತಿ, ಸಮಾಜದ ಅನುಮಾನಾಸ್ಪದ ನೋಟ ಇತ್ಯಾದಿ ನೋವುಗಳು ನಿರಂತರವಾಗಿಬಿಡುವ ಆತಂಕ ಇದೆ. ಅಂದರೆ ಪ್ರಕರಣ ಮುಗಿದ ಬಳಿಕವೂ ಆ ಮಕ್ಕಳ ಬದುಕಿನ ನೌಕೆಗೆ ಸರಿಯಾದ ದಿಕ್ಕು ಸಿಗುವುದೇ ಎಂಬುದೇ ಸಂಶಯ. ಅದಕ್ಕೆ ಕಾರಣ ಪ್ರಕರಣದ ಸಂಬಂಧ ನಡೆದಿರುವ ಬೆಳವಣಿಗೆಗಳು.
ಈ ಪೋಕ್ಸೊ ಪ್ರಕರಣದಲ್ಲಿ ಶರಣರನ್ನು ಗುರಿಯಾಗಿಸುವುದರಲ್ಲಿ ಮಠದ ಮಾಜಿ ಆಡಳಿತಾಧಿಕಾರಿ ಬಸವರಾಜನ್ ಅವರ ಚಿತಾವಣೆಯೂ ಇದೆ ಎಂಬ ಆರೋಪವೂ ಇದೆ. ಅದು ನಿಜವೇ ಆದರೂ ಮಠದಲ್ಲಿ ನಡೆದಿರುವ ಮುಸುಕಿನ ಗುದ್ದಾಟಕ್ಕೆ ಅಮಾಯಕ ಹೆಣ್ಣುಮಕ್ಕಳ ಬದುಕು ಹಾಳಾಗಬೇಕೇ? ಪ್ರಕರಣದಲ್ಲಿ ತಮ್ಮ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ಶರಣರು, ಬಸವಣ್ಣ, ಗಾಂಧೀಜಿ ಅವರ ಮೇಲೆ ಕೂಡ ಇಂತಹ ಆರೋಪಗಳು ಇದ್ದವು. ನಾನು ಸಮರಕ್ಕೂ ಸೈ, ಸಂಧಾನಕ್ಕೂ ಸೈ ಎಂದರು. ಇದು ಜವಾಬ್ದಾರಿಯುತ ಸ್ಥಾನದಲ್ಲಿರುವವರಿಗೆ ತಕ್ಕ ಮಾತಲ್ಲ ಎಂಬ ವಿರೋಧ ಕೂಡ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿತ್ತು. ತಮ್ಮ ಮೇಲೆ ಇಂತಹ ಆರೋಪ ಕೇಳಿಬಂದ ಕೂಡಲೇ ಶರಣರು ಪೀಠ ತ್ಯಾಗ ಮಾಡಬೇಕಿತ್ತು. ಆ ನಂತರ ಅವರು ಯಾವುದೇ ಮಾತುಗಳನ್ನಾಡಿದ್ದರೂ ಅದಕ್ಕೆ ಘನತೆ, ತೂಕ ಇರುತ್ತಿತ್ತು ಎಂಬುದರಲ್ಲಿ ಎರಡು ಮಾತಿಲ್ಲ.
ಆರೋಪಿಯಾಗಿರುವ ಶರಣರಿಗೆ ಮಠದಿಂದ ಕೃತಾರ್ಥರಾಗಿರುವ ಜನಸಾಮಾನ್ಯರು ಬೆಂಬಲ ಕೊಟ್ಟರೆ ಅದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಿಲ್ಲ. ಆದರೆ, ಕೆಲ ಮಠಾಧೀಶರು ಮುರುಘಾ ಮಠಕ್ಕೇ ತೆರಳಿ ಅವರ ಬೆನ್ನಿಗೆ ಇರುವುದಾಗಿ ಹೇಳಿಕೆ ನೀಡಿರುವುದು ಸಮಾಜದ ವ್ಯಂಗ್ಯ ಎನ್ನಬಹುದು. ಆದರೆ, ಈ ಮಠದಿಂದ ನೀಡಲಾಗುವ ಪ್ರತಿಷ್ಠಿತ ಬಸವಶ್ರೀ ಪ್ರಶಸ್ತಿ ಪುರಸ್ಕೃತರಾದ ಹಿರಿಯ ಪತ್ರಕರ್ತ ಪಿ. ಸಾಯಿನಾಥ್ ಪ್ರಕರಣದ ಬಗ್ಗೆ ಬಹುವಾಗಿ ನೊಂದುಕೊಂಡಿದ್ದಾರೆ. ಹಾಗೆಯೇ ಶರಣರ ಬಗ್ಗೆ ಅಸಹನೆಯನ್ನೂ ತೋರಿಸಿದ್ದಾರೆ. ಹಾಗಾಗಿ ಬಸವಶ್ರೀ ಪ್ರಶಸ್ತಿ ಮತ್ತು ಅದರ ಮೊತ್ತ ೫ ಲಕ್ಷ ರೂ.ಗಳನ್ನು ಮಠಕ್ಕೆ ಹಿಂದಿರುಗಿಸುವುದಾಗಿ ತಿಳಿಸಿದ್ದಾರೆೆ.
ಮುರುಘಾ ಶರಣರು ಆರೋಪದಿಂದ ಮುಕ್ತರಾಗಬಹುದು. ಆದರೆ, ಸಂತ್ರಸ್ತ ವಿದ್ಯಾರ್ಥಿನಿಯರ ಬದುಕನ್ನು ಹಸನು ಮಾಡುವುದು ಯಾರ ಹೊಣೆ? ಹೆತ್ತವರು ಅಸಹಾಯಕರಾಗಿ ನಿಂತಿದ್ದಾರೆ. ಈ ಪ್ರಕರಣ ಬಿದ್ದುಹೋದರೂ, ಈ ಬಾಲಕಿಯರನ್ನು ಬಳಸಿಕೊಂಡು ಶರಣರ ವಿರುದ್ಧ ಹುನ್ನಾರ ನಡೆಸಿದವರಿಗಾದರೂ ಶಿಕ್ಷೆಯಾಗಲೇಬೇಕು. ಅದಕ್ಕಿಂತಲೂ ಬಹುಮುಖ್ಯವಾಗಿ ಈ ಸಂತ್ರಸ್ತೆಯರ ಜೀವನವೂ ಸರಿದಾರಿಗೆ ಮರಳಬೇಕು.
ಸಂತ್ರಸ್ತ ಬಾಲಕಿಯರ ಪೈಕಿ ಒಬ್ಬರು ಐಎಎಸ್ ಅಧಿಕಾರಿಯಾಗುವ ಕನಸು ಕಾಣುತ್ತಿದ್ದರೆ, ಇನ್ನೊಬ್ಬರು ಸಮಾಜಕ್ಕೆ ಸತ್ಪ್ರಜೆಗಳನ್ನು ಕೊಡುಗೆಯಾಗಿ ನೀಡಬಲ್ಲ ಶಿಕ್ಷಕಿಯಾಗುವ ಹಂಬಲ ಹೊಂದಿದ್ದಾರೆ. ಇಂತಹ ಗುರಿಯೊಂದಿಗೆ ವ್ಯಾಸಂಗ ಮಾಡಲು ಬಂದ ಮಕ್ಕಳನ್ನು ಬೀದಿಗೆ ತಂದು ನಿಲ್ಲಿಸಿರುವುದು ಕ್ರೌರ್ಯದ ಪರಮಾವಧಿಯಾಗಿದೆ. ಹಾಗೆಯೇ ದೊಡ್ಡಮಟ್ಟದಲ್ಲಿ ವೈಚಾರಿಕತೆ, ಹೊಸವಿಚಾರಗಳನ್ನು ಮೈಗೂಡಿಸಿಕೊಂಡಿರುವ ಹೆಗ್ಗಳಿಕೆ ಹೊಂದಿದ್ದ ಮಠದ ನೆರಳು ಕಂಡರೆ ಜನರು ಬೆಚ್ಚಿಬೀಳುವಂತಹ ಸ್ಥಿತಿ ನಿರ್ಮಾಣವಾಗಿದೆ.
ಆದರೆ, ಮಠದ ಹಿತ ಕಾಯಲು ಲಕ್ಷ ಲಕ್ಷ ಕೈಗಳು ಇರಬಹುದು. ಸಂತ್ರಸ್ತ ಹೆಣ್ಣುಮಕ್ಕಳ ಪಾಲಿಗೆ ಯಾರಿದ್ದಾರೆ?

ಈ ಪ್ರಕರಣದಲ್ಲಿ ಮಠದ ವಿದ್ಯಾರ್ಥಿನಿಲಯದ ಮಹಿಳಾ ವಾರ್ಡನ್ ಸಹಾಯ ಮಾಡಿದ್ದಾರೆ ಎನ್ನುವುದು ಅತ್ಯಂತ ಹೀನಾಯ. ಸಂತ್ರಸ್ತೆಯರನ್ನು ಶರಣರ ಬಳಿಗೆ ‘ರಾತ್ರಿ ಸೇವೆ’ಗಾಗಿ ಕಳುಹಿಸುವುದೂ ಇವರ ಕೆಲಸಗಳಲ್ಲೊಂದಾಗಿತ್ತು ಎನ್ನಲಾಗಿದೆ. ಆ ತಾಯಿ’ಗೆ ಹೆಣ್ಣುಮಕ್ಕಳಿಲ್ಲವೇ? ಎಂಬ ಪ್ರಶ್ನೆ ಕಾಡುತ್ತದೆ.
ಈ ಪ್ರಕರಣದ ಬಗ್ಗೆ ಸುಖಾಸುಮ್ಮನೆ ಮಾತನಾಡುವುದಕ್ಕಿಂತ ಆ ಸಂತ್ರಸ್ತೆಯರಿಗೆ ಬದುಕು ಕಟ್ಟಿಕೊಡಲು ಮಾನವೀಯ ಹೃದಯವಂತ ಜನರು, ಸಂಘಟನೆಗಳು ಒಗ್ಗೂಡಬೇಕು. ಆ ಇಬ್ಬರು ಹೆಣ್ಣುಮಕ್ಕಳ ಬಾಳು ಬೀದಿಪಾಲಾಗದಂತೆ ಈಗಿನಿಂದಲೂ ಎಚ್ಚರವಹಿಸಬೇಕಾಗಿದೆ. ಏಕೆಂದರೆ ಈ ಇಬ್ಬರು ಹೆಣ್ಣುಮಕ್ಕಳ ಜಾಗದಲ್ಲಿ ನಮ್ಮದೇ ಮಕ್ಕಳಿದ್ದರೆ ನಾವೇನು ಮಾಡುತ್ತಿದ್ದೆವು? ಇಂತಹ ಮಾತುಗಳು ನಾಡಿನ ಬಹುತೇಕ ಬಡವರು, ಮಧ್ಯಮ ವರ್ಗದ ಜನರ ಒಡಲಿನಲ್ಲಿ ಪದೇ ಪದೇ ಹೊರಳಾಡುತ್ತಿದೆ ಎಂಬುದು ಸುಳ್ಳಲ್ಲ.

 

andolanait

Recent Posts

ಕನ್ನಡಿಗರಿಗೆ ಉದ್ಯೋಗ ನೀಡದ ಸಾಹಿತ್ಯ ಸಮ್ಮೇಳನ: ವಾಟಲ್‌ ನಾಗರಾಜ್‌ ಆಕ್ರೋಶ

ಮೈಸೂರು: ಸಕ್ಕರೆ ನಾಡು ಮಂಡ್ಯದಲ್ಲಿ ಇಂದಿನಿಂದ (ಡಿ.20) 87ನೇ ಕನ್ನಡ ಸಾಹಿತ್ಯ ಸಮ್ಮೇಳನ ಶುರುವಾಗಿದೆ. ಆದರೆ ಈ ಸಮ್ಮೇಳನವನ್ನು ಯಾವ…

5 hours ago

ಹಾಸ್ಯ ಸಾಹಿತ್ಯ ಆಧುನಿಕ ಬದುಕಿಗೆ ಔಷಧಿ: ಪ್ರೊ.ಕರಿಯಪ್ಪ

ಮಂಡ್ಯ: ಹಾಸ್ಯ ಸಾಹಿತ್ಯ ಆಧುನಿಕ ಬದುಕಿನಗೆ ಔಷಧಿಯಾಗಿದೆ ಎಂದು ಪ್ರಾಧ್ಯಾಪಕ ಡಾ.ಜೆ.ಕರಿಯಪ್ಪ ಮಾಳಿಗೆ ಹೇಳಿದರು. 87ಅಖಿಲ ಭಾರತ ಕನ್ನಡ ಸಾಹಿತ್ಯ…

5 hours ago

ಸಿ & ಡಿ ಲ್ಯಾಂಡ್ ಸಮಸ್ಯೆ ಪರಿಹಾರಕ್ಕೆ ಉನ್ನತ ಮಟ್ಟದ ಸಮಿತಿ: ಯು.ಟಿ. ಖಾದರ್

ಮಡಿಕೇರಿ: ಸಿ ಮತ್ತು ಡಿ ಭೂಮಿಗೆ ಸಂಬಂಧಿಸಿದಂತೆ ಕಂದಾಯ ಸಚಿವರು ಉನ್ನತ ಮಟ್ಟದ ಸಮಿತಿ ರಚನೆಗೆ ಮುಂದಾಗಿದ್ದು, ಸಮಸ್ಯೆ ಪರಿಹಾರವಾಗಲಿ…

6 hours ago

ಸಿ.ಟಿ ರವಿ ಕೊಲೆಗೆ ಪೊಲೀಸರ ಸಂಚು: ಅಶೋಕ್‌ ಆರೋಪ

ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಕ್ಷೇಪಾರ್ಹ ಪದ ಬಳಸಿದ್ದಾರೆ ಎಂಬ ಆರೋಪದ ಮೇಲೆ ಎಂಎಲ್‌ಸಿ ಸಿ.ಟಿ.ರವಿಯವರನ್ನು ಪೊಲೀಸರೇ ಕೊಲೆ…

6 hours ago

ವಿರಾಜಪೇಟೆ | ಬಿಟ್ಟಂಗಾಲದಲ್ಲಿ ಚಿರತೆ ಬೆಕ್ಕು ಸಾವು

ವಿರಾಜಪೇಟೆ: ಗೋಣಿಕೊಪ್ಪ-ಕೇರಳ ಹೆದ್ದಾರಿಯ ಬಿಟ್ಟಂಗಾಲ ಆಟೋ ನಿಲ್ದಾಣದ ಬಳಿ ಚಿರತೆ ಬೆಕ್ಕೊಂದು ಅಪಘಾತಕೀಡಾಗಿ ಸಾವನಪ್ಪಿದ ಘಟನೆ ಶುಕ್ರವಾರ ರಾತ್ರಿ 9…

6 hours ago

ಮೈಸೂರಿನ ಫಾರ್ಮ್‌ಹೌಸ್‌ನಲ್ಲಿ ನಟ ದರ್ಶನ್‌ ವಾಸ್ತವ್ಯ

ಮೈಸೂರು: ನಟ ದರ್ಶನ್‌ ಅವರು ಮೈಸೂರಿನ ತಿ.ನರಸೀಪುರ ಮುಖ್ಯರಸ್ತೆಯಲ್ಲಿರುವ ಕೆಂಪಯ್ಯನಹುಂಡಿ ಬಳಿಯ ತಮ್ಮ ಫಾರ್ಮ್‌ಹೌಸ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಶುಕ್ರವಾರ ಇಲ್ಲಿಗ…

6 hours ago