ಆರ್.ಟಿ.ವಿಠ್ಠಲಮೂರ್ತಿ
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿಯುವ ಕನಸಿನಲ್ಲಿರುವ ಕಾಂಗ್ರೆಸ್ ಪಾಳೆಯದಲ್ಲಿ ‘ಪ್ಲಾಸಿ’ ಕದನದ ಕಹಿಯನ್ನು ನೆನಪಿಸಿಕೊಳ್ಳುವವರಿದ್ದಾರೆ. ೧೭೫೭ರಲ್ಲಿ ಬಂಗಾಳದ ನವಾಬ ಸಿರಾಜುದ್ದೌಲ ಮತ್ತು ಅವನೊಂದಿಗಿದ್ದ ಫ್ರೆಂಚರು ಸೇರಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ಪ್ಲಾಸಿ ಎಂಬಲ್ಲಿ ಯುದ್ಧಕ್ಕಿಳಿದರು. ಕಲ್ಕತ್ತದಿಂದ ನೂರೈವತ್ತು ಕಿಲೋಮೀಟರುಗಳಷ್ಟು ದೂರದ ಹೂಗ್ಲಿ ನದಿಗೆ ಅಂಟಿಕೊಂಡ ಪ್ಲಾಸಿ ಎಂಬ ಸ್ಥಳದಲ್ಲಿ ನಡೆದ ಈ ಯುದ್ಧಕ್ಕೆ ಒಂದು ಕಾರಣವಿತ್ತು.
ವ್ಯಾಪಾರಕ್ಕೆ ಅಂತ ಭಾರತಕ್ಕೆ ಕಾಲಿಟ್ಟ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ನೋಡ ನೋಡುತ್ತಿದ್ದಂತೆೆಯೇ ತನ್ನ ಬಾಹುಗಳನ್ನು ಎಲ್ಲೆಡೆ ಚಾಚತೊಡಗಿತು. ಹಲವು ಪ್ರದೇಶಗಳನ್ನು ವಶಕ್ಕೆ ಪಡೆಯುತ್ತಾ ತನ್ನ ವಿಸ್ತರಣಾ ದಾಹವನ್ನು ತೋರಿಸುತ್ತಿದ್ದ ಅದರ ಧೋರಣೆ ಬಂಗಾಲದ ನವಾಬ ಸಿರಾಜುದ್ದೌಲನ ಕಣ್ಣು ಕೆಂಪಾಗುವಂತೆ ಮಾಡಿತು. ಹೀಗಾಗಿ ತಕ್ಷಣವೇ ಅವರನ್ನು ನಿಯಂತ್ರಿಸದಿದ್ದರೆ ಕಷ್ಟದ ದಿನಗಳು ಎದುರಾಗಲಿವೆ ಎಂಬುದು ಆತನಿಗೆ ಮನವರಿಕೆಯಾಯಿತು. ಹಾಗಂತಲೇ ಫ್ರೆಂಚರ ಜತೆಗಿನ ತನ್ನ ಮೈತ್ರಿಯನ್ನು ಬಳಸಿಕೊಂಡು ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ಯುದ್ಧಕ್ಕಿಳಿಯಲು ಆತ ನಿರ್ಧರಿಸಿದ.
ಆ ಸಂದರ್ಭದಲ್ಲಿ ಅವನ ಸೈನ್ಯದಲ್ಲಿ ಐವತ್ತು ಸಾವಿರ ಯೋಧರಿದ್ದರು. ಆದರೆ ಈಸ್ಟ್ ಇಂಡಿಯಾ ಕಂಪನಿಯಲ್ಲಿ ಕೇವಲ ಮೂರು ಸಾವಿರ ಮಂದಿ ಸೈನಿಕರಿದ್ದರು.
ಇದು ಸಿರಾಜುದ್ದೌಲನಿಗೂ ಗೊತ್ತಿತ್ತು. ಆದರೆ ಈಸ್ಟ್ ಇಂಡಿಾಂ ಕಂಪನಿಯನ್ನು ಮೊಳಕೆಯಲ್ಲಿಯೇ ಚಿವುಟಿ ಹಾಕದಿದ್ದರೆ ಕಷ್ಟ ಅಂತ ಅವನಿಗೆ ಗೊತ್ತಿತ್ತು. ಲೆಕ್ಕಾಚಾರದ ಪ್ರಕಾರ ನಡೆದಿದ್ದರೆ ಸಿರಾಜುದ್ದೌಲ ನಿರಾಯಾಸವಾಗಿ ಗೆಲ್ಲಬೇಕಿತ್ತು. ಆದರೆ ಯುದ್ಧ ಆರಂಭವಾದ ನಂತರ ಪರಿಸ್ಥಿತಿ ಬದಲಾಯಿತು. ನೋಡ ನೋಡುತ್ತಿದ್ದಂತೆೆಯೇ ಈಸ್ಟ್ ಇಂಡಿಯಾ ಕಂಪನಿಯ ಮೂರು ಸಾವಿರ ಸೈನಿಕರ ಪಡೆ ಸಿರಾಜುದ್ದೌಲನ ಐವತ್ತು ಸಾವಿರ ಸೈನಿಕರ ಪಡೆಯ ಮೇಲೆ ಲಿಟರಲಿ ಸವಾರಿ ಮಾಡತೊಡಗಿತು. ಅದರ ರಣತಂತ್ರದ ಎದುರು ದಿಕ್ಕು ತಪ್ಪಿದಂತೆ ಹೋರಾಡುತ್ತಾ ಸಿರಾಜುದ್ದೌಲನ ಸೈನ್ಯ ನೆಲ ಕಚ್ಚಿತು.
ಹೀಗೆ ಸೋತ ಸಿರಾಜುದ್ದೌಲನ ಸೈನ್ಯದ ಐನೂರಕ್ಕೂ ಹೆಚ್ಚು ಮಂದಿ ಹತರಾದರೆ ಈಸ್ಟ್ ಇಂಡಿಯಾ ಕಂಪನಿಯ ಐವತ್ತು ಸೈನಿಕರು ಹತರಾಗಿದ್ದರು. ಗಮನಿಸಬೇಕಾದ ಸಂಗತಿ ಎಂದರೆ ಅಷ್ಟು ದೊಡ್ಡ ಸೈನ್ಯವನ್ನು ಸೋಲಿಸಿದ ಈಸ್ಟ್ ಇಂಡಿಯಾ ಕಂಪನಿ ಸೆರೆಯಾಳುಗಳನ್ನು ಮೆರವಣಿಗೆ ಮಾಡಿ ಬಂಗಾಳದ ಜನರಲ್ಲಿ ಒಂದು ಭೀತಿ ಸೃಷ್ಟಿಸಿತು.
ಸಿರಾಜುದ್ದೌಲನ ಅಷ್ಟು ದೊಡ್ಡ ಸೈನ್ಯವನ್ನು ಬಗ್ಗು ಬಡಿದ ಈಸ್ಟ್ ಇಂಡಿಯಾ ಕಂಪನಿಯ ತಾಕತ್ತು ಅವರನ್ನು ನಡುಗಿಸಿತು. ಅಷ್ಟೇ ಅಲ್ಲ, ಅವತ್ತು ಅಸ್ತಿತ್ವದಲ್ಲಿದ್ದ ಭಾರತದ ಬಹುತೇಕ ಸಂಸ್ಥಾನಗಳ, ಪಾಳೇಪಟ್ಟುಗಳ ತೊಳ್ಳೆ ನಡುಗುವಂತೆ ಮಾಡಿತು. ಮುಂದಿನದು ಇತಿಹಾಸ. ಅಲ್ಪ ಸಂಖ್ಯೆಯಲ್ಲಿದ್ದ ಬ್ರಿಟಿಷರು ಇಡೀ ಭಾರತವನ್ನು ಆಕ್ರಮಿಸಿಕೊಳ್ಳಲು ಪ್ಲಾಸಿ ಕದನದ ಯಶಸ್ಸು ಮೂಲವಾಯಿತು.
ಅಂದ ಹಾಗೆ ಪ್ಲಾಸಿ ಕದನದಲ್ಲಿ ಸಿರಾಜುದ್ದೌಲನ ದೊಡ್ಡ ಸೈನ್ಯವನ್ನು ಈಸ್ಟ್ ಇಂಡಿಯಾ ಕಂಪನಿಯ ಯೋಧರು ರಣಾಕ್ರೋಶದಿಂದ ಗೆಲ್ಲಲಿಲ್ಲ. ಬದಲಿಗೆ ಅವರು ಗೆಲ್ಲಲು ಸಿರಾಜುದ್ದೌಲನ ದಂಡ ನಾಯಕ ದೊಡ್ಡ ಮಟ್ಟದಲ್ಲಿ ನೆರವು ನೀಡಿದ. ಆತನ ಹೆಸರು- ಮೀರ್ ಜಾಫರ್. ಯಾವಾಗ ಸಿರಾಜುದ್ದೌಲನ ಸೈನ್ಯ ಯುದ್ಧಕ್ಕೆ ಅಣಿಯಾಯಿತೋ ಆಗ ಸಹಜವಾಗಿಯೇ ಈಸ್ಟ್ ಇಂಡಿಯಾ ಕಂಪನಿಯಾ ಮುಂದಾಳಾಗಿದ್ದ ರಾಬರ್ಟ್ ಕ್ಲೈವ್ ಆತಂಕದಲ್ಲಿದ್ದ. ಸಿರಾಜುದ್ದೌಲನ ಐವತ್ತು ಸಾವಿರ ಸೈನಿಕರು ರಣಾವೇಶದಿಂದ ನುಗ್ಗಿದರೆ ತನ್ನ ಸೈನ್ಯ ನಾವಾವಶೇಷ ಆಗುತ್ತದೆ ಅಂತ ಆತನಿಗೆ ಗೊತ್ತಿತ್ತು. ಹೀಗಾಗಿ ಆತ ಬೇರೆ ದಾರಿ ಹುಡುಕಿದ. ಸಿರಾಜುದ್ದೌಲನ ಸೈನ್ಯದ ವಿರುದ್ಧ ನುಗ್ಗಿ ನಿರ್ನಾಮವಾಗುವ ಬದಲು ಆತನ ಪಡೆಯ ಬಲಹೀನತೆಗಳ ಕಡೆ ಗಮನ ಹರಿಸಿದ.
ಈ ಸಂದರ್ಭದಲ್ಲಿ ಆತನಿಗೆ ಒಂದು ರಹಸ್ಯ ವಿವರ ಸಿಕ್ಕಿತು. ಅದೆಂದರೆ ಬಂಗಾಲದ ನವಾಬ ಸಿರಾಜುದ್ದೌಲನ ಜಾಗಕ್ಕೆ ಬಂದು ಕೂರಲು ಆತನ ದಂಡನಾಯಕ ಮೀರ್ ಜಾಫರ್ ಚಡಪಡಿಸುತ್ತಿದ್ದ. ಆತನ ಚಡಪಡಿಕೆಯ ಬೆಂಕಿಗೆ ಬಂಗಾಲದ ಕೆಲ ಬಂಡವಾಳ ಶಾಹಿ ಶಕ್ತಿಗಳು ತುಪ್ಪ ಸುರಿದಿದ್ದವು. ಸಿರಾಜುದ್ದೌಲನ ಆಳ್ವಿಕೆುಂಲ್ಲಿ ತಮ್ಮ ಸಂಪತ್ತಿಗೆ ಅಪಾಯವಿದೆ ಎಂಬ ಆತಂಕ ಈ ಶಕ್ತಿಗಳಿಗಿತ್ತು ಮತ್ತು ಇದೇ ಕಾರಣಕ್ಕಾಗಿ ಅವು ಸಿರಾಜುದ್ದೌಲನ ವಿರುದ್ಧ ಮೀರ್ ಜಾಫರ್‌ನನ್ನು ಎತ್ತಿ ಕಟ್ಟಿದ್ದವು.
ಯಾವಾಗ ಇದು ತಿಳಿಯಿತೋ? ಆಗ ರಾಬರ್ಟ್ ಕ್ಲೈವ್ ರಹಸ್ಯವಾಗಿ ಆತನ ಸಂಪರ್ಕ ಸಾಧಿಸಿದ.
ನೀವು ಬಂಗಾಳದ ನವಾಬರಾಗಬೇಕು ಎಂದರೆ ನಮ್ಮ ಜತೆ ಕೈ ಜೋಡಿಸಿ. ನೀವು ಇದಕ್ಕೆ ಒಪ್ಪದಿದ್ದರೆ ಯಾವತ್ತೂ ಬಂಗಾಳದ ನವಾಬರಾಗಲು ಸಾಧ್ಯವಿಲ್ಲ ಎಂದ.
ರಾಬರ್ಟ್ ಕ್ಲೈವ್‌ನ ತಂತ್ರ ಫಲಿಸಿತು. ಸಿರಾಜುದ್ದೌಲನನ್ನು ಕೆಡವಿದರೆ ತಾನು ಬಂಗಾಳದ ನವಾಬನಾಗುವುದು ಸುಲಭ ಎಂಬ ಕನಸು ಕಾಣತೊಡಗಿದ ಮೀರ್ ಜಾಫರ್ ಒಳಗಿಂದೊಳಗೇ ಖೆಡ್ಡಾ ತಯಾರು ಮಾಡಿದ.
ಈಸ್ಟ್ ಇಂಡಿಯಾ ಕಂಪನಿಯಾ ವಿರುದ್ಧ ಸಿರಾಜುದ್ದೌಲನ ಮುಂಚೂಣಿ ಪಡೆ ವೀರಾವೇಶದಿಂದ ನುಗ್ಗಿದರೆ ಅನುಮಾನವೇ ಬೇಡ. ಅದು ಗೆಲ್ಲುವುದು ಶತ:ಸಿದ್ಧ.
ಯಾಕೆಂದರೆ ಮುಂಚೂಣಿ ಪಡೆ ಒಂದು ಸಲ ಈಸ್ಟ್ ಇಂಡಿಯಾ ಕಂಪನಿಯ ಸೈನ್ಯದ ಮೇಲೆ ಲಗ್ಗೆ ಹಾಕಿತು ಎಂದರೆ ಹಿಂದಿರುವ ಸೈನ್ಯ ಇನ್ನಷ್ಟು ರಣಾಕ್ರೋಶದಿಂದ ನುಗ್ಗಿ ಯುದ್ಧದಲ್ಲಿ ಸಿರಾಜುದ್ದೌಲ ಗೆಲ್ಲುವಂತೆ ಮಾಡುತ್ತದೆ ಎಂಬುದು ಅವನಿಗೆ ಗೊತ್ತಿತ್ತು. ಹೀಗಾಗಿ ಅವನು ಯುದ್ಧದ ಪ್ರಾಥಮಿಕ ನಿಯಮಗಳನ್ನು ಬದಲಿಸಿದ. ಮುಂಚೂಣಿ ಪಡೆಯುವಲ್ಲಿ ತನಗೆ ನಿಷ್ಠರಾದವರನ್ನು ತಂದು ನಿಲ್ಲಿಸಿಕೊಳ್ಳಲು ಮತ್ತು ಯುದ್ಧ ಶುರುವಾಗುತ್ತಿದ್ದಂತೆೆಯೇ ಅವರು ಹೆದರಿ ಶಸ್ತ್ರಾಸ್ತ್ರ ಚೆಲ್ಲುವಂತೆ ನೋಡಿಕೊಳ್ಳಲು ತೀರ್ಮಾನಿಸಿದ.
ಮುಂಚೂಣಿ ಪಡೆಯ ಯೋಧರು ಹೀಗೆ ಹೆದರಿ ಶಸ್ತ್ರಾಸ್ತ್ರ ಚೆಲ್ಲಿದರೆ ಒಂದು ಹಾಹಾಕಾರ ಏಳುತ್ತದೆ. ಎದುರಾಳಿಯ ತಾಕತ್ತಿನ ಎದುರು ಹೋರಾಡಲು ಮುಂಚೂಣಿಯಲ್ಲಿರುವವರು ನಡುಗುತ್ತಿದ್ದಾರೆ ಎಂದರೆ ನಾವೇನು ಮಾಡಬಹುದು? ಎಂಬ ಹೆದರಿಕೆ ಶುರುವಾಗುತ್ತದೆ. ಅಷ್ಟಾದರೆ ಸಾಕು, ಕಥೆ ಕ್ಲೋಸ್.
ರಾಬರ್ಟ್ ಕ್ಲೈವ್ ಮತ್ತು ಮೀರ್ ಜಾಫರ್ ಮಧ್ಯೆ ನಡೆದ ಒಪ್ಪಂದದ ಫಲವಾಗಿ ರೂಪುಗೊಂಡ ಈ ತಂತ್ರ ಫಲ ನೀಡಿತು. ಆದರೆ ಈ ಒಳಸಂಚಿನ ವಿವರವೇ ಗೊತ್ತಿಲ್ಲದೆ ಸಿರಾಜುದ್ದೌಲ ತನ್ನ ದಂಡನಾಯಕನನ್ನು ನಂಬಿ ಕಂಪೆನಿ ಸೈನ್ಯದ ವಿರುದ್ಧ ತಮ್ಮ ಸೈನ್ಯದ ವ್ಯೆಹ ಹೇಗಿರಬೇಕು, ತಮ್ಮ ಮಿತ್ರರಾದ ಫ್ರೆಂಚರ ಪಡೆ ಇಂತಹ ವ್ಯೆಹಕ್ಕೆ ಹೇಗೆ ಒತ್ತಾಸೆ ನೀಡುತ್ತದೆ ಎಂಬೆಲ್ಲ ವಿವರಗಳನ್ನು ಚರ್ಚಿಸುತ್ತಿದ್ದ.
ಈ ಚರ್ಚೆಯ ವಿವರಗಳು ರಾಬರ್ಟ್ ಕ್ಲೈವ್‌ಗೆ ಬಹುಬೇಗ ತಲುಪುತ್ತಿದ್ದವು ಮತ್ತು ಇದರ ಆಧಾರದ ಮೇಲೆ ತಮ್ಮ ಸೈನ್ಯ ಹೇಗೆ ರಕ್ಷಣಾತ್ಮಕವಾಗಿ, ಅಂದರೆ ಎದುರಾಳಿಗಳ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡಬಹುದು ಎಂಬ ತೀರ್ಮಾನಕ್ಕೆ ಕ್ಲೈವ್ ಬಂದ.
ಯುದ್ಧ ಆರಂಭವಾದ ಕೆಲವೇ ಕ್ಷಣಗಳಲ್ಲಿ ಮೀರ್ ಜಾಫರ್ ನಿಂದ ನಿರ್ದೇಶಿತವಾದ ಮುಂಚೂಣಿ ಪಡೆ ರಣರಂಗದಿಂದ ಹಿಮ್ಮೆಟ್ಟಿತು. ಅದರ ಹೆದರಿಕೆಯನ್ನು ನೋಡಿ ಮತ್ತಷ್ಟು ಹೆದರಿಕೊಂಡ ಹಿಂಬದಿಯ ಪಡೆ ದಿಕ್ಕಾಪಾಲಾಯಿತು.
ಪರಿಣಾಮ ಈಸ್ಟ್ ಇಂಡಿಯಾ ಕಂಪನಿಯಯ ಸೈನ್ಯ ಅಳಿದುಳಿದ ಸಿರಾಜುದ್ದೌಲನ ಪಡೆಯನ್ನು ಹೆಡೆಮುರಿ ಕಟ್ಟಿ, ತನ್ನ ಬಾವುಟ ಪಟಪಟಿಸುವಂತೆ ಮಾಡಿತು.
ಇತಿಹಾಸದ ಈ ಘಟನೆುಂನ್ನು ಇವತ್ತು ರಾಜ್ಯ ಕಾಂಗ್ರೆಸ್ಸಿನ ಹಲವು ನಾುಂಕರು ನೆನಪಿಸಿಕೊಳ್ಳುತ್ತಿದ್ದಾರೆ. ಪಕ್ಷದ ಯಾವ ಬಣದಲ್ಲೂ ಗುರುತಿಸಿಕೊಳ್ಳದ ಇಂತವರಿಗೆ 2023ರ ವಿಧಾನಸಭಾ ಚುನಾವಣೆುಂನ್ನು ಎದುರಿಸಲು ಸಜ್ಜಾಗುತ್ತಿರುವ ಪಕ್ಷದ ಬಲವೇನು? ಎಂಬುದು ಗೊತ್ತಿದೆ. ಯಾರೇನೇ ಹೇಳಲಿ, ಇವತ್ತು ಅಧಿಕಾರದಲ್ಲಿರುವ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ಜನಾಕ್ರೋಶವಿದೆ. ಅದು ಕಟ್ಟಿಕೊಂಡ ವಿವಾದಗಳು, ಹಗರಣಗಳು, ನಲವತ್ತು ಪರ್ಸೆಂಟ್ ಕಮೀಷನ್ನಿನ ಆರೋಪ, ಅದರ ಸುತ್ತ ಕರಿನೆರಳಿನಂತೆ ಆವರಿಸಿದೆ. ಇಂತಹ ಬಿಜೆಪಿಯನ್ನು ಎದುರಿಸಲು ಕಾಂಗ್ರೆಸ್ ಸಮರ್ಥ ಸೈನ್ಯವನ್ನು ಹೊಂದಿದೆ. ಭಿನ್ನಾಭಿಪ್ರಾಯವಿಲ್ಲದೆ ಅದು ಮುನ್ನುಗ್ಗಿದರೆ ಸ್ವಯಂಬಲದ ಮೇಲೆ ಅಧಿಕಾರಕ್ಕೆ ಬರುವ ಶಕ್ತಿಯೂ ಅದಕ್ಕಿರುವಂತೆ ಭಾಸವಾಗುತ್ತಿದೆ.
ಆದರೆ ಅಂತಹ ಸೈನ್ಯದಲ್ಲಿ ಬಿಜೆಪಿಗೆ ಮೀರ್ ಜಾಫರ್‌ಗಳು ಸಿಕ್ಕರೆ? ಎಂಬುದು ಈ ನಾಯಕರ ಅನುಮಾನ. ಭವಿಷ್ಯದ ಮುಖ್ಯಮಂತ್ರಿ ಹುದ್ದೆಗಾಗಿ ಸಿದ್ಧರಾಮಯ್ಯ, ಡಿ.ಕೆ.ಶಿವಕುಮಾರ್ ನಡುವೆ ಕಚ್ಚಾಟ ನಡೆಯುತ್ತಿದ್ದರೆ ಈ ಆಟದಲ್ಲಿಗಾ ಮಲ್ಲಿಕಾರ್ಜುನ ಖರ್ಗೆಯವರ ಹೆಸರೂ ಸೇರಿಕೊಂಡಿದೆ.
ಟಿಕೆಟ್ ಹಂಚಿಕೆಯ ಸಂದರ್ಭದಲ್ಲಿ ಈ ಮೂವರೂ ತಮಗೆ ನಿಷ್ಟರಾದವರನ್ನು ದೊಡ್ಡ ಮಟ್ಟದಲ್ಲಿ ಎತ್ತಲು ಬಯಸುತ್ತಾರೆ. ಇಂತಲ್ಲಿ ಯಾರದೋ ಕೈ ಮೇಲಾಗಿ, ಇನ್ಯಾರದೋ ಕೈ ಕುಸಿಯಿತು ಎಂದರೆ ತಕ್ಷಣವೇ ಪಕ್ಷದಲ್ಲಿ ಹಲವು ಮಂದಿ ಮೀರ್ ಜಾಫರ್‌ಗಳು ಹುಟ್ಟಿಕೊಳ್ಳಬಹುದು. ಕೇಂದ್ರದಿಂದ ಬರುವ ಮೋದಿ ಪಡೆ ಇಂತವರನ್ನು ಗುರುತಿಸಿದರೂ ಸಾಕು, ಕಾಂಗ್ರೆಸ್ ಪಕ್ಷ ಯುದ್ಧದಲ್ಲಿ ಅರ್ಧ ಸೋತಂತೆ ಎಂಬುದು ಈ ಕಾಂಗ್ರೆಸ್ ನಾಯಕರ ಅನುಮಾನ.
ಮುಂದೇನೋ?
ಮೈಸೂರು : ಪ್ರಾಚೀನ ಕಾಲದಲ್ಲಿ ವ್ಯಾಸ, ವಾಲ್ಮೀಕಿ, ಕಾಳಿದಾಸರಂತಹ ಮಹಾನ್ ಕವಿಗಳು ರಚಿಸಿದ ಮಹಾನ್ ಗ್ರಂಥಗಳ ಫಲವಾಗಿ ಭಾರತೀಯ ಸಾಹಿತ್ಯ…
ಹೊಸದಿಲ್ಲಿ : ಒಲಿಂಪಿಕ್ ಕನಸನ್ನು ಬೆನ್ನಟ್ಟಲು 18 ತಿಂಗಳ ವಿರಾಮದ ನಂತರ ಮತ್ತೆ ವಾಪಸ್ಸಾಗುವುದಾಗಿ ಕುಸ್ತಿಪಟು ವಿನೇಶ್ ಫೋಗಟ್ ಘೋಷಿಸಿದ್ದಾರೆ.…
ಬೆಳಗಾವಿ : ಡಿನ್ನರ್ ಮೀಟಿಂಗ್ ಗಳ ಮೂಲಕ ತಾವು ಶಕ್ತಿ ಪ್ರದರ್ಶನ ಮಾಡುತ್ತಿಲ್ಲ ಎಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ…
ಬೆಳಗಾವಿ : ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಿಟ್ಟ 50 ಸಾವಿರ ಕೋಟಿ ಅನುದಾನ ದುರುಪಯೋಗವಾಗಿದೆ ಎಂದು…
ಬೆಳಗಾವಿ: ಸಿಎಂ ಆಯ್ಕೆ ಮಾಡುವ ವೇಳೆ ಯಾವುದೇ ಗಡುವು ಕೊಟ್ಟಿಲ್ಲ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ. ಸಿಎಂ ಬದಲಾವಣೆ…
ಬೆಂಗಳೂರು: ಸುಪ್ರೀಂಕೋರ್ಟ್ ತೀರ್ಪು ಬೆನ್ನಲ್ಲೇ ಮೇಕೆದಾಟು ಸಮತೋಲಿತ ಜಲಾನಯನ ಯೋಜನೆ ತ್ವರಿತ ಅನುಷ್ಠಾನಕ್ಕೆ ಕರ್ನಾಟಕ ಇಂಜಿನಿಯರಿಂಗ್ ಸಂಶೋಧನಾ ಕೇಂದ್ರ ನಿರ್ದೇಶಕರ…