ಫೆರೋಜ್ ವರುಣ್ ಗಾಂಧಿ
ಸರ್ಕಾರದ ಯೋಜನೆಗಳನ್ನು ಶಿಥಿಲಗೊಳಿಸಿ, ನಿಧಿ ಅನುದಾನಗಳನ್ನು ಕಡಿತಗೊಳಿಸುವ ಬದಲು, ಸರ್ಕಾರವನ್ನು ಮೊದಲು ಸರಿದಾರಿಗೆ ತರಬೇಕಿದೆ!
ಕಳೆದ ಮೂರು ವರ್ಷಗಳಲ್ಲಿ ಜಾರಿಯಲ್ಲಿರುವ ಶೇ. 50ರಷ್ಟು ಕೇಂದ್ರ ಸರ್ಕಾರದ ಪ್ರಾಯೋಜಿತ ಯೋಜನೆಗಳನ್ನು ಕೈಬಿಡಲಾಗಿದೆ ಅಥವಾ ಮತ್ತೊಂದು ಯೋಜನೆಯೊಳಗೆ ಅಂತರ್ಗತಗೊಳಿಸಲಾಗಿದೆ ಅಥವಾ ಹೊಸ ಯೋಜನೆಗಳ ಸ್ವರೂಪದಲ್ಲಿ ಪರಿಷ್ಕರಣೆಗೊಳಪಡಿಸಲಾಗಿದೆ. ಇದರ ಪರಿಣಾಮ ವಿವಿಧ ಸಚಿವಾಲಯಗಳಲ್ಲಿ ವಿಭಿನ್ನ ರೂಪದಲ್ಲಿ ಕಾಣಿಸಿಕೊಂಡಿವೆ. ಉದಾಹರಣೆಗೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ವ್ಯಾಪ್ತಿಯಲ್ಲಿ 19 ಯೋಜನೆಗಳಿದ್ದುದು ಈಗ ಕೇವಲ ಮೂರು ಯೋಜನೆಗಳು ಉಳಿದಿವೆ. ಮಿಷನ್ ಶಕ್ತಿ, ಮಿಷನ್ ವಾತ್ಸಲ್ಯ ಮತ್ತು ಸಕ್ಷಮ್ ಅಂಗನವಾಡಿ ಮತ್ತು ಪೋಷಣ್ 2.0. ಇವುಗಳ ಪೈಕಿ ಮಿಷನ್ ಶಕ್ತಿ ಒಂದೇ 14 ಇತರ ಯೋಜನೆಗಳ ಸ್ಥಾನವನ್ನು ಆಕ್ರಮಿಸಿದೆ. ಬೇಟಿ ಬಚಾವೋ ಬೇಟಿ ಪಢಾವೋ ಯೋಜನೆಯೂ ಇವುಗಳಲ್ಲೊಂದು.
ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದಲ್ಲಿ 12 ಯೋಜನೆಗಳ ಪೈಕಿ ಕೇವಲ ಎರಡು ಉಳಿದುಕೊಂಡಿವೆ. ಮೇಲಾಗಿ, ಸಚಿವಾಲಯವು ಮೂರು ಯೋಜನೆಗಳನ್ನು ಸಮಾಪ್ತಿಗೊಳಿಸಿದ್ದು, ಇವುಗಳ ಪೈಕಿ ಸಹಕಾರ ಸಂಸ್ಥೆಗಳ ಮೂಲಕ ಹೈನುಗಾರಿಕೆ ಮತ್ತು ರಾಷ್ಟ್ರೀಯ ಹೈನುಗಾರಿಕೆ ಯೋಜನೆ-೨ ಸಹ ಸೇರಿವೆ. ಕೃಷಿ ಮತ್ತು ರೈತರ ಯೋಗಕ್ಷೇಮ ಸಚಿವಾಲಯದಲ್ಲಿ 20 ಯೋಜನೆಗಳ ಪೈಕಿ ಮೂರು ಯೋಜನೆಗಳು ಮಾತ್ರ ಉಳಿದುಕೊಂಡಿವೆ. ಅವುಗಳೆಂದರೆ, ಕೃಷೋನ್ನತಿ ಯೋಜನೆ, ಕೃಷಿ ಸಹಕಾರ ಸಂಘಗಳ ಸಮಗ್ರ ಯೋಜನೆ ಹಾಗೂ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ. ಸಾವಯವ ಬೇಸಾಯದ ರಾಷ್ಟ್ರೀಯ ಯೋಜನೆ ಮತ್ತು ರಾಷ್ಟ್ರೀಯ ಅರಣ್ಯ ಕೃಷಿ ಯೋಜನೆಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ. ಸರ್ಕಾರಿ ಯೋಜನೆಗಳ ಸಂಖ್ಯೆಯನ್ನು ಕಡಿಮೆ ಮಾಡುವುದು ಮಹತ್ತರವಾದ ಸಾಧನೆ ಎನ್ನುವುದು ಹಲವರ ಅಭಿಪ್ರಾಯವಾಗಿರಬಹುದು. ಆದರೆ ಇದರಿಂದ ಉತ್ತಮ ಆಳ್ವಿಕೆ ಸಾಧ್ಯವಾಗುವುದೇ? ಅಥವಾ ನಾವು ಪ್ರಭುತ್ವದ ಪಾತ್ರವನ್ನು ಶಿಥಿಲಗೊಳಿಸುತ್ತಿದ್ದೇವೆಯೇ ?
ಈಗಾಗಲೇ ಜಾರಿಯಲ್ಲಿರುವ ಯೋಜನೆಗಳಿಗೆ ಅನುದಾನದ ಕಡಿತ, ಅನುದಾನ ನಿಧಿಯ ವಿತರಣೆ ಮತ್ತು ಬಳಕೆಯ ಸಮಸ್ಯೆಗಳು ಹೇರಳವಾಗಿವೆ. 2022ರ ಜೂನ್ ವೇಳೆಗೆ ಕೇಂದ್ರ ಸರ್ಕಾರದ ಪ್ರಾಯೋಜಿತ ಯೋಜನೆಗಳಿಗೆ ನಿಗದಿಪಡಿಸಲಾದ 1.2 ಲಕ್ಷ ಕೋಟಿ ರೂ.ಗಳು ಬ್ಯಾಂಕುಗಳಲ್ಲಿ ಠೇವಣಿ ರೂಪದಲ್ಲಿದ್ದು ಅದರಿಂದ ಕೇಂದ್ರಕ್ಕೆ ಬಡ್ಡಿ ಆದಾಯವೂ ಲಭಿಸುತ್ತದೆ.
2013ರ ನಿರ್ಭಯ ನಿಧಿಯು, ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಸುರಕ್ಷತೆಯನ್ನು ಹೆಚ್ಚಿಸುವ ಯೋಜನೆಗಳಿಗೆ ಬಳಕೆಯಾಗುತ್ತಿದ್ದು ಹಾಗೆಯೇ ಮಹಿಳೆಯರು ಆರ್ಥಿಕ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಹೆಚ್ಚು ಹೆಚ್ಚಾಗಿ ಪಾಲ್ಗೊಳ್ಳುವಂತೆ ಮಾಡಲು ನೆರವಾಗುತ್ತಿದೆ. ಈ ಯೋಜನೆಗಾಗಿ 2013-16ರ ಅವಧಿಯಲ್ಲಿ ಪ್ರತಿವರ್ಷ ವಿಂಗಡನೆಯಾದ ನಿಧಿಯ ಮೊತ್ತ 1,000 ಕೋಟಿ ರೂ.ಗಳಷ್ಟಾಗಿದೆ. ಆದರೆ ಇದರಲ್ಲಿ ಹೆಚ್ಚಿನ ಪಾಲು ಖರ್ಚಾಗದೆ ಉಳಿದಿದೆ. ಹಣಕಾಸು ವರ್ಷ 2021-22ರ ವೇಳೆಗೆ ಈ ಯೋಜನೆಗೆ 6,214 ಕೋಟಿ ರೂ.ಗಳ ಅನುದಾನವನ್ನು ನೀಡಲಾಗಿದೆ. ಆದರೆ ಇದರ ಪೈಕಿ 4,138 ಕೋಟಿ ರೂ.ಗಳು ಮಾತ್ರ ವಿತರಣೆಯಾಗಿದೆ. ಇದರ ಪೈಕಿ 2,922 ಕೋಟಿ ರೂ.ಗಳು ಮಾತ್ರ ಬಳಕೆಯಾಗಿದೆ. 660 ಕೋಟಿ ರೂ.ಗಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಯೋಜನೆಗೆ ವಿಂಗಡನೆ ಮಾಡಲಾಗಿದ್ದು 2021ರ ಜುಲೈವರೆಗೂ ಕೇವಲ 181 ಕೋಟಿ ರೂ.ಗಳಷ್ಟು ಖರ್ಚು ಮಾಡಲಾಗಿದೆ. ಆದರೂ ರಾಜ್ಯಗಳಲ್ಲಿ ವಿವಿಧ ಮಹಿಳಾ ಕೇಂದ್ರಿತ ಅಭಿವೃದ್ಧಿ ಯೋಜನೆಗಳನ್ನು ರದ್ದುಪಡಿಸಲಾಗಿದೆ ಅಥವಾ ತಿರಸ್ಕರಿಸಲಾಗಿದೆ. ಏತನ್ಮಧ್ಯೆ ಸಾರ್ವಜನಿಕ ವಲಯದಲ್ಲಿ ಮಹಿಳೆಯರು ಅನೇಕ ರೀತಿಯ ಅಪಾಯಗಳನ್ನು ಎದುರಿಸುತ್ತಿದ್ದಾರೆ.
ರೈತರೂ ಸಹ ಈ ವಾತಾವರಣದಿಂದ ಮುಕ್ತರಾಗಿಲ್ಲ. ರಸಗೊಬ್ಬರ ಸಬ್ಸಿಡಿಯ ಪ್ರಮಾಣವು ಕಳೆದ ಹಲವು ವರ್ಷಗಳಿಂದ ಸತತವಾಗಿ ಕುಸಿಯುತ್ತಿದೆ. ಹಣಕಾಸು ವರ್ಷ 2021-22ರಲ್ಲಿ ರಸಗೊಬ್ಬರಗಳಿಗಾಗಿ ಕೇಂದ್ರ ಸರ್ಕಾರದ ವೆಚ್ಚವು 1,27,921 ಕೋಟಿ ರೂ.ಗಳಷ್ಟಾಗಿದೆ. 2021-22 ಹಣಕಾಸು ವರ್ಷದ ಆಯವ್ಯಯ ಪತ್ರದಲ್ಲಿ 79,529 ಕೋಟಿ ರೂ.ಗಳನ್ನು ವಿಂಗಡನೆ ಮಾಡಲಾಗಿತ್ತು. (ಆನಂತರ ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಇದನ್ನು 1,40,122 ಕೋಟಿ ರೂ.ಗಳಿಗೆ ಪರಿಷ್ಕರಿಸಲಾಗಿತ್ತು). 2022-23ರ ಹಣಕಾಸು ವರ್ಷದ ಆಯವ್ಯಯ ಪತ್ರದಲ್ಲಿ 1,05,222 ಕೋಟಿ ರೂ.ಗಳನ್ನು ವಿಂಗಡನೆ ಮಾಡಲಾಗಿದೆ.
ಎನ್‌ಪಿಕೆ ರಸಗೊಬ್ಬರಗಳಿಗಾಗಿ ( ಸಾರಜನಕ, ರಂಜಕ ಮತ್ತು ಪೊಟಾಸಿಯಂ) ಮಂಜೂರಾಗಿರುವ ಮೊತ್ತವು ಹಣಕಾಸು ವರ್ಷ 2021-22ರ ಪರಿಷ್ಕೃತ ಅಂದಾಜಿಗಿಂತಲೂ ಶೇ 35ರಷ್ಟು ಕಡಿಮೆ ಇದೆ. ಉಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ರಸಗೊಬ್ಬರಗಳ ಬೆಲೆಗಳು ದುಬಾರಿಯಾಗುತ್ತಿರುವಾಗ, ಈ ರೀತಿಯ ಅನುದಾನಗಳ ಕಡಿತ ಮಾಡಿರುವುದು ರಸಗೊಬ್ಬರದ ಕೊರತೆಯನ್ನು ಸೃಷ್ಟಿಸಿದ್ದು ರೈತರ ಆಕ್ರೋಶಕ್ಕೆ ಗುರಿಯಾಗಿದೆ. ಹೀಗಿರುವಾಗ ರೈತರು ತಮ್ಮ ಕೃಷಿ ಚಟುವಟಿಕೆಗಳನ್ನು ಮುಂದುವರೆಸಲು ಉತ್ತೇಜಿಸುವುದಾದರೂ ಹೇಗೆ ?
ಉದ್ಯೋಗ ಯೋಜನೆಗಳು
ಗ್ರಾಮೀಣ ಬಡಜನತೆಯ ಕತೆಯೂ ಇದೇ ಆಗಿದೆ. ನರೇಗಾ (ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ) ಯೋಜನೆಗೆ ವಿಂಗಡನೆಯಾಗಿರುವ ಅನುದಾನದ ಮೊತ್ತ 2022-23ರ ಹಣಕಾಸು ವರ್ಷದಲ್ಲಿ ಶೇ 25ರಷ್ಟು ಕಡಿಮೆಯಾಗಿದೆ. ಈ ವರ್ಷದ ಆರಂಭದಲ್ಲಿ ಮಂಡಿಸಲಾದ ಬಜೆಟ್‌ನಲ್ಲಿ ನರೇಗಾ ಯೋಜನೆಗೆ, 2021-22ರ ಪರಿಷ್ಕೃತ ಅಂದಾಜಿನ 98,000 ಕೋಟಿ ರೂ.ಗಳ ಬದಲು, 73,000 ಕೋಟಿ ರೂ.ಗಳನ್ನು ವಿಂಗಡನೆ ಮಾಡಲಾಗಿದೆ. 2022-23ರ ಆರ್ಥಿಕ ಸಮೀಕ್ಷೆಯಲ್ಲಿ ಈ ಯೋಜನೆಗೆ ಸಾಂಕ್ರಾಮಿಕ ಪೂರ್ವ ಅವಧಿಗಿಂತಲೂ ಹೆಚ್ಚಿನ ಬೇಡಿಕೆ ಇರುವುದನ್ನು ಉಲ್ಲೇಖಿಸಲಾಗಿದ್ದು, ಗ್ರಾಮೀಣ ಸಂಕಷ್ಟಗಳೂ ತೀವ್ರವಾಗಿರುವುದನ್ನು ದಾಖಲಿಸಲಾಗಿದೆ. ಇದೇ ರೀತಿಯ ಪ್ರಕರಣಗಳನ್ನು ಗಮನಿಸಿದಾಗ, ನರೇಗಾ ಯೋಜನೆಗೆ ನಿಗದಿಪಡಿಸಲಾದ ನಿಧಿಯ ವಿತರಣೆಯಲ್ಲೂ ಲೋಪಗಳು ಕಂಡುಬಂದಿದ್ದು, ವಿತರಣೆಯಲ್ಲಿನ ವಿಳಂಬದ ಕಾರಣ ಈ ಯೋಜನೆಯಲ್ಲಿ ವಿಶ್ವಾಸವೇ ಕುಂದುತ್ತಿದೆ. ಜೂನ್ 2020ರಲ್ಲಿ 125 ದಿನಗಳ ಅವಧಿಗೆ ಜಾರಿಯಾದ ಗರೀಬ್ ಕಲ್ಯಾಣ್ ಯೋಜನೆ ಗ್ರಾಮೀಣ ಬಡಜನತೆಗೆ ಉದ್ಯೋಗ ಮತ್ತು ಜೀವನೋಪಾಯದ ಅವಕಾಶಗಳನ್ನು ಕಲ್ಪಿಸುವ ಉದ್ದೇಶವನ್ನು ಹೊಂದಿತ್ತು. ಸುಮಾರು 50.78 ಕೋಟಿ ಮಾನವ ದಿನಗಳ ಉದ್ಯೋಗಗಳನ್ನು ಒದಗಿಸುವ ಮೂಲಕ ಅಂದಾಜು 39,293 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿತ್ತು. ( ಗ್ರಾಮೀಣಾಭಿವೃದ್ಧಿ ಸಚಿವಾಲಯದ ಘೋಷಿತ ಮೊತ್ತ 50,000 ಕೋಟಿ ರೂ.ಗಳಾಗಿತ್ತು). ಈ ಯೋಜನೆಯೊಳಗೆ ಇತರ 15 ಯೋಜನೆಗಳನ್ನು ಅಂತರ್ಗತಗೊಳಿಸಲಾಗಿತ್ತು ಎನ್ನುವ ಅಂಶವನ್ನೂ ಗಮನಿಸಬೇಕಿದೆ. ಅನೌಪಚಾರಿಕ ಉದ್ಯೋಗಗಳನ್ನು ಬಯಸುವ ವಲಸೆ ಕಾರ್ಮಿಕರ ಸಂಖ್ಯೆ ಆರರಿಂದ 10 ಕೋಟಿಗಳಷ್ಟು ಇರುವುದರ ಹಿನ್ನೆಲೆಯಲ್ಲಿ ಈ ಯೋಜನೆಯನ್ನು ಮತ್ತಷ್ಟು ವಿಸ್ತರಿಸಬೇಕಿತ್ತು.
ಆರೋಗ್ಯ ಕಾಳಜಿಯಲ್ಲೂ ಕಡಿತ
ಇನ್ನು ಆರೋಗ್ಯ ಕಾಳಜಿಯ ಕಾರ್ಮಿಕರ ಬಗ್ಗೆ ಹೇಳುವುದಾದರೆ, ಪ್ರಾಥಮಿಕ ಪ್ರತಿಪ್ರೇಷಕರಾಗಿರುವ ಆಶಾ ಕಾರ್ಯಕರ್ತೆಯರಿಗೆ ವೇತನ ಪಾವತಿಯಲ್ಲಿ ಅತಿಯಾದ ವಿಳಂಬವಾಗುತ್ತಿದೆ. ಆರು ತಿಂಗಳವರೆಗೂ ವೇತನ ವಿಳಂಬವಾಗಿರುವ ನಿದರ್ಶನಗಳಿವೆ. ಆಶಾ ಕಾರ್ಯಕರ್ತೆಯರ ನೌಕರಿಯನ್ನು ಖಾಯಂಗೊಳಿಸುವ ನಿಟ್ಟಿನಲ್ಲಿ ನಿರಂತರ ಹೋರಾಟ ನಡೆಯುತ್ತಿದ್ದು , ವೇತನ ಮತ್ತು ಗೌರವಧನದ ಪ್ರಮಾಣ ಕನಿಷ್ಠ ಮಟ್ಟದಲ್ಲೇ ಮುಂದುವರೆದಿದೆ.
ಮತ್ತೊಂದು ಉದಾಹರಣೆಯನ್ನು ನೀಡುವುದಾದರೆ, ಜೀವ ವೈವಿಧ್ಯತೆಯನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ. ಕೇಂದ್ರ ಪರಿಸರ ಸಚಿವಾಲಯದ ವ್ಯಾಪ್ತಿಯಲ್ಲಿ ವನ್ಯಜೀವಿ ತಾಣಗಳ ಅಭಿವೃದ್ಧಿಗಾಗಿ ಒದಗಿಸಲಾಗುವ ನಿಧಿಯ ಪ್ರಮಾಣ ಸತತವಾಗಿ ಕಡಿಮೆಯಾಗುತ್ತಲೇ ಇದೆ. ಹಣಕಾಸು ವರ್ಷ 2018-19ರಲ್ಲಿ 165 ಕೋಟಿ ರೂ.ಗಳು, 2019-20ರಲ್ಲಿ 124.5 ಕೋಟಿ ರೂ.ಗಳು, 2020-21ರಲ್ಲಿ 87.6 ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿದೆ. ಹುಲಿ ಸಂರಕ್ಷಣಾ ಯೋಜನೆಗೆ ವಿಂಗಡನೆ ಮಾಡಲಾದ ನಿಧಿಯ ಮೊತ್ತವನ್ನು ಹಣಕಾಸು ವರ್ಷ 2018-19ರ 323 ಕೋಟಿ ರೂ.ಗಳಿಂದ, 2020-21ರಲ್ಲಿ 194.5 ಕೋಟಿ ರೂ.ಗಳಿಗೆ ಕಡಿತಗೊಳಿಸಲಾಗಿದೆ. ಈ ರೀತಿಯ ಅನುದಾನಗಳ ಕಡಿತದ ನಡುವೆ ಹವಾಮಾನ ಬದಲಾವಣೆಯ ಗುರಿಯನ್ನು ತಲುಪುವ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿಯುತ್ತದೆ.
ಸರ್ಕಾರದ ಯೋಜನೆಗಳನ್ನು ಶಿಥಿಲಗೊಳಿಸಿ, ನಿಧಿ ಅನುದಾನಗಳನ್ನು ಕಡಿತಗೊಳಿಸುವ ಬದಲು, ಸರ್ಕಾರವನ್ನು ಮೊದಲು ಸರಿದಾರಿಗೆ ತರಬೇಕಿದೆ. ಜಿಎಸ್‌ಟಿ ಸುಧಾರಣೆಗಳ ನಂತರ ಕೇಂದ್ರ-ರಾಜ್ಯಗಳ ಸಂಬಂಧಗಳಲ್ಲಿ ಪರಿವರ್ತನೆಯಾಗಿದ್ದು ಹಣಕಾಸು ಅಧಿಕಾರವು ಕೇಂದ್ರದತ್ತ ವಾಲಿದೆ. ನಮ್ಮ ಸಾರ್ವಜನಿಕ ಸೇವೆಗಳಿಗೆ ಹೆಚ್ಚಿನ ಸಂಖ್ಯೆಯ ವೈದ್ಯರು, ಶಿಕ್ಷಕರು, ಇಂಜಿನಿಯರುಗಳು ಮತ್ತು ಅಲ್ಪ ಸಂಖ್ಯೆಯ ದತ್ತಾಂಶ ನಿರ್ವಹಣೆಯ ಗುಮಾಸ್ತರು ಅವಶ್ಯವಾಗಿ ಬೇಕಾಗಿದ್ದಾರೆ.
ವರ್ತಮಾನದ ಸವಾಲುಗಳನ್ನು ಸಮರ್ಪಕವಾಗಿ ಎದುರಿಸಲು ನಾವು ದಕ್ಷ ನಾಗರಿಕ ಸೇವಾ ವಲಯಕ್ಕಾಗಿ ಸಾಮರ್ಥ್ಯವನ್ನು ಹೆಚ್ಚಿಸಬೇಕಿದೆ. ಅಂದರೆ, ಭ್ರಷ್ಟಾಚಾರ ಮುಕ್ತ ಯೋಗಕ್ಷೇಮ ವ್ಯವಸ್ಥೆಯನ್ನು ಕಲ್ಪಿಸಬೇಕಿದೆ. ಆಧುನಿಕ ಆರ್ಥಿಕತೆಯನ್ನು ಮುನ್ನಡೆಸುತ್ತಲೇ ಉತ್ತಮ ಗುಣಮಟ್ಟದ ಸಾರ್ವಜನಿಕ ಸರಕುಗಳನ್ನು ಒದಗಿಸಬೇಕಿದೆ. ಕೆಲವೇ ಸರ್ಕಾರಿ ಯೋಜನೆಗಳನ್ನು ಗುರಿಯಾಗಿ ಹೊಂದಿರುವುದರ ಬದಲು ನಾವು ಉತ್ತಮ ಗುಣಮಟ್ಟದ ಸಾರ್ವಜನಿಕ ಸೇವಾ ವಿತರಣೆಗಾಗಿ ನಮ್ಮ ಆಕಾಂಕ್ಷೆಯನ್ನು ದಾಖಲಿಸಬೇಕಿದೆ.
(ಲೇಖಕರು ಉತ್ತರ ಪ್ರದೇಶದ ಪಿಲ್ಹಿಬಿಟ್ ಲೋಕಸಭಾ ಕ್ಷೇತ್ರದ ಸಂಸದರು)
ಮೂಲ- ದ ಹಿಂದೂ, ಅನುವಾದ- ನಾ ದಿವಾಕರ
ಮಂಡ್ಯ : ಪೌತಿ ಖಾತಾ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಬೇಕು. ಮುಂದಿನ ಆರು ತಿಂಗಳುಗಳೊಳಗೆ ಪೌತಿ ಖಾತಾ ಆಂದೋಲನದಲ್ಲಿ ಯಾವುದೇ…
ಬೆಂಗಳೂರು : ಉದ್ಯೋಗ ಖಾತರಿಯನ್ನು ಇಲ್ಲವಾಗಿಸುವ ಮತ್ತು ಒಕ್ಕೂಟ ವ್ಯವಸ್ಥೆಯ ಆಶಯಗಳಿಗೆ ವ್ಯತಿರಿಕ್ತವಾಗಿರುವ ವಿಕಸಿತ ಭಾರತ ಉದ್ಯೋಗ ಖಾತರಿ ಮತ್ತು…
ಬೆಂಗಳೂರು : ಜಾರಿ ನಿರ್ದೇಶನಾಲಯ(ಇ.ಡಿ) ದಾಖಲಿಸಿದ್ದ ಕ್ರಿಮಿನಲ್ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ ಅವರಿಗೆ ಬಿಗ್ ರಿಲೀಫ್…
ಮೈಸೂರು : ಬೇರೆ ಜಿಲ್ಲೆಗಳಿಗೆ ಹೋಲಿಸಿಕೊಂಡರೆ ಮೈಸೂರಿನ ಪತ್ರಿಕೋದ್ಯಮ ಗುಣಮಟ್ಟದಿಂದ ಕೂಡಿದ್ದು, ಇಲ್ಲಿನ ಪತ್ರಕರ್ತರು ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು…
ಮಂಡ್ಯ : ಕೇಂದ್ರ ಬೃಹತ್ ಉಕ್ಕು ಮತ್ತು ಕೈಗಾರಿಕಾ ಸಚಿವರಾದ ಎಚ್.ಡಿ. ಕುಮಾರಸ್ವಾಮಿ ಅವರು ಯಾವುದಾದರೂ ಕಂಪನಿಗಳಿಂದ ಕೈಗಾರಿಕೆ ಸ್ಥಾಪನೆಗೆ…
ಮೈಸೂರು : ಹೊಸ ವರ್ಷ ಜನವರಿ 1ರಂದು ಚಾಮುಂಡಿ ಬೆಟ್ಟಕ್ಕೆ ಹೆಚ್ವಿನ ಭಕ್ತಾಧಿಗಳು ಆಗಮಿಸುವ ನಿರೀಕ್ಷೆ ಇದ್ದು, ಅಗತ್ಯ ವ್ಯವಸ್ಥೆಗಳನ್ನು…