ನಾಡ ದೇವಿ ಚಾಮುಂಡೇಶ್ವರಿಯನ್ನು ಹೊತ್ತ ಜಂಬೂಸವಾರಿ ಅರಮನೆಯಿಂದ ಬನ್ನಿಮಂಟಪಕ್ಕೆ ಸಾಗುವುದರೊಂದಿಗೆ ಹತ್ತು ದಿನಗಳ ಸಂಭ್ರಮ ಸಡಗರಗಳ ನಾಡ ಹಬ್ಬ ದಸರಾಕ್ಕೆ ತೆರೆ ಬಿದ್ದಿದೆ. ಕೋವಿಡ್ ಸಂಕಷ್ಟದಿಂದಾಗಿ ಹಿಂದಿನ ಎರಡು ವರ್ಷಗಳು ಸರಳವಾಗಿ ನಡೆದಿದ್ದ ದಸರಾ ಹಬ್ಬ ಈ ಬಾರಿ ಅದ್ಧೂರಿಯಾಗಿ ನಡೆದಿದೆ. ಜನರು ಅಮಿತೋತ್ಸಾಹದಿಂದ ಪಾಲ್ಗೊಂಡಿದ್ದಾರೆ.
ಬನ್ನಿಮರ ಮತ್ತು ನಂದಿಧ್ವಜಕ್ಕೆ ಯದುವೀರ್ ಒಡೆಯರ್ ಅವರು ಸಾಂಪ್ರದಾಯಿಕ ಪೂಜೆ ಸಲ್ಲಿಸಿದ ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜನರ ಹರ್ಷೋದ್ಗಾರಗಳ ನಡುವೆ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂಸವಾರಿಗೆ ಚಾಲನೆ ನೀಡಿದರು. ಮೂರನೇ ಬಾರಿಗೆ ಅಂಬಾರಿ ಹೊತ್ತು ರಾಜಗಾಂಭೀರ್ಯದಿಂದ ಹೆಜ್ಜೆ ಹಾಕಿದ ಅಭಿಮನ್ಯು ವಿಶೇಷ ಆಕರ್ಷಣೆ.
ಹೆಸರೇ ಹೇಳುವಂತೆ ದಸರಾ ನಾಡ ಹಬ್ಬ. ನಾಡಿನ ಸಮಸ್ತ ಜನರೂ ಪಾಲ್ಗೊಂಡು ಸಂಭ್ರಮಿಸುವ ಹಬ್ಬ. ಈ ಬಾರಿ ಜಂಬೂಸವಾರಿ ನೋಡಲು ನೆರೆದಿದ್ದ ಜನಸ್ತೋಮವಂತೂ ಹಿಂದೆಂದಿಗಿಂತಲೂ ನಾಡ ಹಬ್ಬದ ಮೇಲಿನ ಪ್ರೀತಿ ಮತ್ತು ವಿಶ್ವಾಸ ಇಮ್ಮಡಿಯಾಗಿರುವುದಕ್ಕೆ ಸಾಕ್ಷಿಯಾಯಿತು. 31 ಜಿಲ್ಲೆಗಳನ್ನು ಪ್ರತಿನಿಧಿಸುವ 47 ಸ್ತಬ್ಧ ಚಿತ್ರಗಳು, 70ಕ್ಕೂ ಹೆಚ್ಚು ಕಲಾತಂಡಗಳು ಜಂಬೂಸವಾರಿಯೊಂದಿಗೆ ಸಾಗಿ ಕಿಕ್ಕಿರಿದು ನೆರೆದಿದ್ದ ಲಕ್ಷಾಂತರ ಜನರನ್ನು ಮನರಂಜಿಸಿದವು.
ದಸರಾ ಈ ನಾಡಿನ ಕಲೆ, ಸಂಸ್ಕೃತಿಯನ್ನು ಜೀವಂತವಾಗಿಡುವ, ಸರ್ವಧರ್ಮಗಳ ಜನರನ್ನು ಬೆಸೆಯುವ ಹಬ್ಬ. ಬೇರೆ ಬೇರೆ ಸಂದರ್ಭಗಳಲ್ಲಿನ ದ್ವೇಷ- ಅಸೂಯೆ, ಅಸಹನೆ, ಅಶಾಂತಿ, ಅಸಹಿಷ್ಣುತೆ ಏನೇ ಇದ್ದರೂ ದಸರಾ ಹಬ್ಬ ಅವೆಲ್ಲವನ್ನು ಮರೆಸಿಬಿಡುತ್ತದೆ. ಪ್ರೀತಿ, ವಿಶ್ವಾಸ, ಸಹನೆ, ಶಾಂತಿ, ಸಹಿಷ್ಣುತೆಯನ್ನು ಸಂಭ್ರಮದಿಂದ ಹೊತ್ತು ತರುತ್ತದೆ. ಆ ಕಾರಣದಿಂದಲೇ ಲಕ್ಷಾಂತರ ಜನರು ಪಾಲ್ಗೊಳ್ಳುವ ದಸರಾ ಸಂಭ್ರಮ ಸಡಗರಗಳೊಂದಿಗೆ ಮುಕ್ತಾಯವಾಗುತ್ತದೆ. ಅದು ದಸರಾ ಹಬ್ಬದ ಹೆಗ್ಗಳಿಕೆಯಷ್ಟೇ ಅಲ್ಲ ವಿಶ್ವಾಸದಿಂದ ದಸರಾ ಆಚರಣೆಯನ್ನು ನಂಬುವ, ಪ್ರೀತಿಸುವ, ಪಾಲ್ಗೊಳ್ಳುವ ಸಮಸ್ತ ಜನರ ಹೆಗ್ಗಳಿಕೆಯೂ ಹೌದು.
ಸ್ತಬ್ಧ ಚಿತ್ರಗಳು ನಾಡಿನ ಬಹುಸಂಸ್ಕೃತಿಯ ಕತೆಯನ್ನು ಹೇಳುತ್ತವೆ. ಆ ಮೂಲಕ ಸಂಸ್ಕೃತಿಯನ್ನು ಸದಾ ಜೀವಂತವಾಗಿಸುತ್ತವೆ. ಕಲಾ ತಂಡಗಳು ಕಲೆಗಳ ಶ್ರೀಮಂತಿಕೆಯನ್ನು, ಜೀವಂತಿಕೆಯನ್ನು ಮತ್ತೊಂದು ತಲೆಮಾರಿಗೆ ಒಯ್ಯುತ್ತವೆ. ಅಷ್ಟರಮಟ್ಟಿಗೆ ದಸರಾ ನಮ್ಮ ಕಲೆ ಮತ್ತು ಸಂಸ್ಕೃತಿಯನ್ನು ಸದಾ ಜೀವಂತವಾಗಿಡುವ ಹಬ್ಬ. ಯಾವೊಂದು ಕಲೆಯೂ ಅವನತಿಯತ್ತ ಸಾಗಬಾರದು ಎಂಬ ಸದುದ್ದೇಶದಿಂದ ನಾಡಿನ ಎಲ್ಲಾ ಜನಪದ ಕಲೆಗಳ ಪ್ರದರ್ಶನಕ್ಕೆ ಅವಕಾಶ ಮತ್ತು ಪ್ರೋತ್ಸಾಹ ನೀಡಲಾಗುತ್ತದೆ. ದಸರಾ ಹಬ್ಬವೇ ಇಲ್ಲದಿದ್ದರೆ ಸಾಕಷ್ಟು ಜಾನಪದ ಕಲೆಗಳು ನಶಿಸಿ ಹೋಗಿಬಿಡು ತ್ತಿದ್ದವು. ವೀರಗಾಸೆ ಕುಣಿತ, ಪಟಕುಣಿತ, ಪುರವಂತಿಗೆ, ಕಂಸಾಳೆ ನೃತ್ಯ, ಕೀಲುಕುದುರೆ, ಕೋಲಾಟ, ಚಿಟ್ ಮೇಳ, ಕಣಿವಾದನ, ಹೂವಿನ ನೃತ್ಯ, ಹೆಜ್ಜೆಯ ಮೇಳ, ತಮಟೆ ನಗಾರಿ, ಪೂಜಾ ಕುಣಿತ, ಲಂಬಾಣಿ ನೃತ್ಯ, ಹಗಲುವೇಷ , ತಮಟೆವಾದನ ವೈಭವ, ಉಡುಪಿ ದಟ್ಟಿ ಕುಣಿತ ,ಕುಡುಬಿ ನೃತ್ಯ, ಉತ್ತರ ಕನ್ನಡದ ಗೊಂಡರ ಡಕ್ಕೆ, ತಲಕಾಡಿನ ಚಿಲಿಪಿಲಿ ಗೊಂಬೆ, ಪಾಂಡವಪುರದ ಮರಗಾಲು ಕುಣಿತ ಇತ್ಯಾದಿ ಕಲಾಪ್ರಕಾರಗಳು ಜೀವಂತಿಕೆಯಿಂದಿರುವುದಕ್ಕೆ ದಸರಾ ಹಬ್ಬ ಪ್ರಮುಖ ಕಾರಣ.
ದಸರಾ ಹಬ್ಬ ನಮ್ಮ ಬದುಕು ವಿಕಸಿತವಾಗುತ್ತಿರುವುದರ ಮತ್ತು ಆಧುನಿಕತೆಗೆ ತೆರೆದುಕೊಳ್ಳುವ ನಿರಂತರ ಪ್ರಕ್ರಿಯೆಯ ಸಂಕೇತ. ಆ ಕಾರಣಕ್ಕಾಗಿಯೇ ದಸರಾ ಹೊಸ ಹೊಸ ಆವಿಷ್ಕಾರಗಳನ್ನು ಒಳಗೊಳ್ಳುತ್ತದೆ. ಬನ್ನಿಮಂಟಪದಲ್ಲಿ ಸಾಂಪ್ರದಾಯಿಕ ಪಂಜಿನ ಕವಾಯತಿನ ಜತೆಗೆ ನಡೆದ ಡ್ರೋನ್ ಗಳ ಪ್ರದರ್ಶನ ಇದಕ್ಕೆ ಸಾಕ್ಷಿ. ಹೊಸ ತಲೆಮಾರಿನ ಅಭಿರುಚಿಗಳಿಗೆ ಸ್ಪಂದಿಸುವ ಯುವ ದಸರಾ ವರ್ಷದಿಂದ ವರ್ಷಕ್ಕೆ ಹೆಚ್ಚೆಚ್ಚು ಜನಪ್ರಿಯಗೊಳ್ಳುತ್ತಿದೆ.
ಲಕ್ಷಾಂತರ ಜನರು ಪಾಲ್ಗೊಳ್ಳುವ ದಸರಾ ಸಂಭ್ರಮ ಸಡಗರಗಳೊಂದಿಗೆ ಮುಕ್ತಾಯಗೊಳ್ಳುತ್ತದೆ ಎಂದರೆ, ಅದಕ್ಕೆ ನಮ್ಮ ಆಡಳಿತ ವ್ಯವಸ್ಥೆ, ಬಂದೋಬಸ್ತ್ ವ್ಯವಸ್ಥೆ ಮಾಡಿದ ಸಾವಿರಾರು ಪೊಲೀಸರ ಶ್ರಮ ಮತ್ತು ಸಂಯಮ ಕಾರಣ. ದಸರಾ ಯಶಸ್ಸಿನಲ್ಲಿ ಅವರದ್ದು ಸಿಂಹಪಾಲು. ದಸರಾ ಜಂಬೂಸವಾರಿಯನ್ನು ಹೊತ್ತೊಯ್ಯುವ ಆನೆ, ಆ ಆನೆಯ ಸಂಗಾತಿಗಳು ಮತ್ತು ಅವುಗಳನ್ನು ಮುನ್ನಡೆಸುವ ಮಾವುತರ ಶ್ರಮ ಮತ್ತು ಸಹನೆ ಅಪಾರವಾದದ್ದು.
ಎಲ್ಲಾ ಸಂಭ್ರಮ ಸಡಗರಗಳ ನಡುವೆ ಕೆಲ ಲೋಪಗಳ ಬಗ್ಗೆ ಪ್ರಸ್ತಾಪಿಸಬೇಕು. ದಸರಾ ಸಿದ್ಧತೆ ಪರಿಪೂರ್ಣವಾಗಿರಲಿಲ್ಲ, ರಾಜಬೀದಿ ಯನ್ನು ಸಂಪರ್ಕಿಸುವ ರಸ್ತೆಗಳಿಗೂ ಡಾಂಬರು ಭಾಗ್ಯ ಇರಲಿಲ್ಲ ಎಂದು ದೂರುಗಳು ಕೇಳಿಬಂದವು. ದಸರಾ ಪಾಸ್ ಹಂಚಿಕೆಯಲ್ಲಿ ಸ್ವಜನ ಪಕ್ಷಪಾತದ ಆರೋಪಗಳನ್ನು ಜನಸಾಮಾನ್ಯರಲ್ಲದೇ ಜನಪ್ರತಿನಿಧಿಗಳೂ ಮಾಡಿದ್ದರು. ಈ ಎಲ್ಲವೂ ನಿರೀಕ್ಷಿತ ಲೋಪಗಳೇ, ತಿದ್ದಿಕೊಳ್ಳಲಾರದಂತಹವೇನಲ್ಲ. ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ಒಂದಷು ಕಾಳಜಿ ವಹಿಸಿದರೆ ಮುಂದಿನ ವರ್ಷ ಇಂತಹ ಲೋಪಗಳಾಗುವುದನ್ನು ತಡೆಯಬಹುದು.
ಮಡಿಕೇರಿ : ದುಬಾರೆ ಶಿಬಿರದ ಸಾಕಾನೆ ತಕ್ಷ ಅನಾರೋಗ್ಯದಿಂದ ಸೋಮವಾರ ರಾತ್ರಿ ಮೃತಪಟ್ಟಿದೆ. ಡಿ.೮ರಂದು ರಾತ್ರಿ ೯.೩೦ರ ಸಮಯದಲ್ಲಿ ತಕ್ಷ…
ಮೈಸೂರು : ಕೇಳಿದ ತಕ್ಷಣ ಹಣ ಕೊಡಲಿಲ್ಲ ಎಂಬ ಕಾರಣಕ್ಕಾಗಿ ಸ್ನೇಹಿತನ ಮೇಲೆ ಯುವಕನೊಬ್ಬ ಚಾಕುವಿನಿಂದ ಇರಿದಿರುವ ಘಟನೆ ನಗರದಲ್ಲಿ…
ಮೈಸೂರು : ಲೈಂಗಿಕವಾಗಿ ಸಹಕರಿಸಿದಲ್ಲಿ ಚೆನ್ನಾಗಿ ನೋಡಿಕೊಳ್ಳುತ್ತೀನಿ ಎಂದು ಮಹಿಳಾ ಉದ್ಯೋಗಿಗೆ ಕಿರುಕುಳ ನೀಡಿದ ಖಾಸಗಿ ಕಾರ್ಖಾನೆ ಮಾಲೀಕನ ವಿರುದ್ದ…
ಮೈಸೂರು : ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ದೇವಿಯ ದರ್ಶನ ಹಾಗೂ ಸಮೂಹ ದೇವಾಲಯಗಳ ಸೇವೆಗಳ ಶುಲ್ಕಗಳನ್ನು ಏರಿಸಿರುವ ರಾಜ್ಯ…
ಬೆಳಗಾವಿ : ರಾಜ್ಯದಲ್ಲಿ 545 ಪಿಎಸ್‌ಐ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದು, ಈಗಾಗಲೇ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ. ಮೂರು ತಿಂಗಳ…
ಬೆಂಗಳೂರು : ಮಹಿಳಾ ನೌಕರರಿಗೆ ಅವರ ಋತುಚಕ್ರದ ಸಮಯದಲ್ಲಿ ತಿಂಗಳಲ್ಲಿ ಒಂದು ದಿನದ ವೇತನ ಸಹಿತ ರಜೆ ಸೌಲಭ್ಯ ಒದಗಿಸುವಂತೆ…