ಇತ್ತೀಚೆಗೆ ಗೃಹ ಸಚಿವ ಜಿ.ಪರಮೇಶ್ವರ್ ಅವರಾಡಿದ ಮಾತು ರಾಜಕೀಯ ವಲಯಗಳ ಕುತೂಹಲಕ್ಕೆ ಕಾರಣವಾಯಿತು. ಸಮಾವೇಶವೊಂದರಲ್ಲಿ ಮಾತನಾಡಿದ ಅವರು, ಇವತ್ತು ನನ್ನ ಅಧ್ಯಕ್ಷತೆಯಲ್ಲಿ ಪಕ್ಷ ಅಧಿಕಾರಕ್ಕೆ ಬಂತು ಅಂತ ಕೆಲವರು ಹೇಳುತ್ತಿದ್ದಾರೆ. ಆದರೆ 2013ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ನಾನು ಪಕ್ಷದ ಅಧ್ಯಕ್ಷನಾಗಿದ್ದೆ ಎಂದರು.
ಅಷ್ಟೇ ಅಲ್ಲ, ನಾನು ಯಾವತ್ತೋ ಮುಖ್ಯಮಂತ್ರಿ ಆಗಬೇಕಿತ್ತು. ಆದರೆ ಆಗಲಿಲ್ಲ. ಎಲ್ಲಿಯವರೆಗೆ ದಲಿತರು ಎಡ, ಬಲ ಎಂದು ಹೋರಾಡುತ್ತಿ ರುತ್ತಾರೋ ಅಲ್ಲಿಯವರೆಗೂ ಅವರಲ್ಲಿ ಒಗ್ಗಟ್ಟು ಸಾಧ್ಯವಾಗುವುದಿಲ್ಲ. ದಲಿತರು ಮುಖ್ಯಮಂತ್ರಿಯಾಗಲು ಇದೇ ಅಡ್ಡಿ ಎಂದರು.
ಅಂದ ಹಾಗೆ ಇದ್ದಕ್ಕಿದ್ದಂತೆ ಪರಮೇಶ್ವರ್ ಅವರೇಕೆ ಇಂತಹ ಮಾತುಗಳ ನ್ನಾಡಿದರು? ಹತ್ತು ವರ್ಷಗಳ ಹಿಂದೆ ಕರ್ನಾಟಕದಲ್ಲಿ ಪಕ್ಷ ಅಧಿಕಾರಕ್ಕೆ ಬಂದ ಕಾಲದಲ್ಲಿ ಪರಮೇಶ್ವರ್ ಕೆಪಿಸಿಸಿ ಅಧ್ಯಕ್ಷರಾಗಿದ್ದರು. ಅವತ್ತು ಕಾಂಗ್ರೆಸ್ ಅಧಿಕಾರಕ್ಕೆ ಬಂದರೂ ಅವರು ಚುನಾವಣೆಯಲ್ಲಿ ಸೋತಿದ್ದರು.
ಈ ಸಂದರ್ಭದಲ್ಲಿ ದಿಲ್ಲಿಗೆ ಹೋದ ಅವರು ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಎದುರು ತಮ್ಮ ನೋವು ತೋಡಿಕೊಂಡಾಗ, ತಮ್ಮ ಸೋಲಿಗೆ ಪಕ್ಷದವರೇ ಕಾರಣ ಎಂದು ದೂರಿದಾಗ: ನಾನು ನಿಮ್ಮ ಹಿತ ಕಾಯುತ್ತೇನೆ ಎಂದು ಅವರು ಹೇಳಿದ್ದರಂತೆ.
ಅರ್ಥಾತ್, ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದ ಸರ್ಕಾರದಲ್ಲಿ ನೀವು ಉಪಮುಖ್ಯಮಂತ್ರಿಯಾಗುತ್ತೀರಿ ಎಂಬ ಇಂಗಿತವನ್ನು ಅವರು ವ್ಯಕ್ತಪಡಿ ಸಿದ್ದರಂತೆ. ಅವತ್ತು ಮೇಡಂ ಸೋನಿಯಾ ಗಾಂಧಿ ಅವರ ಭರವಸೆಯಿಂದ ಸಮಾಧಾನಗೊಂಡು ವಾಪಸ್ಸಾಗಿದ್ದ ಪರಮೇಶ್ವರ್ ಬಹುಕಾಲ ಅದನ್ನು ನಂಬಿ ಮೌನವಾಗಿದ್ದರು. ಆದರೆ ತುಂಬ ಕಾಲದ ನಂತರ ಗೃಹ ಸಚಿವರಾಗಿದ್ದನ್ನು ಬಿಟ್ಟರೆ ಪರಮೇಶ್ವರ್ ಅವರು ಆ ಅವಧಿಯಲ್ಲಿ ಉಪಮುಖ್ಯಮಂತ್ರಿ ಆಗಲೇ ಇಲ್ಲ. ಹಾಗವರು ಉಪಮುಖ್ಯಮಂತ್ರಿಯಾಗಲು 2018ರವರೆಗೆ ಕಾಯಬೇಕಾಯಿತು.
2018ರ ವಿಧಾನಸಭಾ ಚುನಾವಣೆಯಲ್ಲಿ ಮೂರೂ ರಾಜಕೀಯ ಪಕ್ಷಗಳು ಬಹುಮತ ಪಡೆಯಲು ವಿಫಲವಾದಾಗ ಮೈತ್ರಿಕೂಟ ಸರ್ಕಾರ ರಚನೆ ಅನಿವಾರ್ಯವಾಯಿತು. ಜಾ.ದಳದ ಜತೆ ಕೈ ಜೋಡಿಸಿದ ಕಾರಣಕ್ಕಾಗಿ ಕಾಂಗ್ರೆಸ್ ಪಕ್ಷ ಉಪಮುಖ್ಯಮಂತ್ರಿ ಹುದ್ದೆಯನ್ನು ಪಡೆಯಿತು. ಈ ಸಂದರ್ಭದಲ್ಲಿ ಯಾರು ಉಪಮುಖ್ಯಮಂತ್ರಿಯಾಗಬೇಕು ಎಂಬ ಪ್ರಶ್ನೆ ಬಂದಾಗ ಸೋನಿಯಾ ಗಾಂಽ ಅವರು ಪರಮೇಶ್ವರ್ ಅವರ ಹೆಸರನ್ನು ಸೂಚಿಸಿದರಂತೆ.
ಮುಂದೆ ಕರ್ನಾಟಕದಲ್ಲಿ ಏನೇನಾಯಿತು ಎಂಬುದು ಇತಿಹಾಸ. ಅವತ್ತು ಅಸ್ತಿತ್ವಕ್ಕೆ ಬಂದ ಜಾ.ದಳ–ಕಾಂಗ್ರೆಸ್ ಮೈತ್ರಿಕೂಟ ಸರ್ಕಾರ ಹದಿನಾಲ್ಕೇ ತಿಂಗಳಲ್ಲಿ ಕೆಳಗುರುಳಿತು. ಹೀಗೆ ಉರುಳಿದ ಮೈತ್ರಿಕೂಟ ಸರ್ಕಾರದ ಜಾಗದಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂತು.
ಕುತೂಹಲದ ಸಂಗತಿ ಎಂದರೆ, ತಮಗೆ ಅನ್ಯಾಯವಾದ ಆ ಕಾಲಘಟ್ಟದಲ್ಲೂ ಜಿ.ಪರಮೇಶ್ವರ್ ಅವರು ಈ ಬಗ್ಗೆ ತುಂಬ ಮಾತನಾಡಿರಲಿಲ್ಲ. ಆದರೆ ಈಗ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಮರಳಿ ಅಧಿಕಾರಕ್ಕೆ ಬಂದ ನಂತರ ಇದ್ದಕ್ಕಿದ್ದಂತೆ ತಮ್ಮ ನೋವನ್ನು ಅವರು ಹೊರಹಾಕಿದ್ದಾರೆ.
ಆದರೆ ಈ ರೀತಿ ತಮ್ಮ ನೋವನ್ನು ಹೊರಹಾಕಲು ಅವರು ಇದೇ ಸಂದರ್ಭವನ್ನು ಏಕೆ ಆಯ್ಕೆ ಮಾಡಿಕೊಂಡರು? ಈ ಪ್ರಶ್ನೆಗೆ ಉತ್ತರ ಹುಡುಕಲು ಹೊರಟರೆ ಹಲವು ಕುತೂಹಲಕಾರಿ ಅಂಶಗಳು ಹೊರಬರುತ್ತವೆ.
ಮೊದಲನೆಯದಾಗಿ, ಈ ಸಲ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಆಯ್ಕೆ ಮಾಡುವಾಗ ತುಂಬ ದಿನ ಪರದಾಡಬೇಕಾಯಿತು. ಮುಖ್ಯಮಂತ್ರಿ ಹುದ್ದೆಗೆ ಸಿದ್ದರಾಮಯ್ಯ ಬಂದು ಕೂರುತ್ತಾರೆ ಎಂಬುದು ಬಹುತೇಕ ನಿಶ್ಚಿತವಾಗಿತ್ತಾದರೂ, ಈ ವಿಷಯದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಮ್ಮ ಹಕ್ಕನ್ನು ಮಂಡಿಸಿದಾಗ ಕಾಂಗ್ರೆಸ್ ವರಿಷ್ಠರು ತಡಬಡಾಯಿಸಿದರು. ಐದು ದಿನಗಳ ನಂತರ ಈ ವಿಷಯ ಇತ್ಯರ್ಥವಾಗುವ ಕಾಲಕ್ಕೆ ಒಂದು ವಿಷಯ ಎಲ್ಲರ ಗಮನ ಸೆಳೆಯಿತು. ಅದೆಂದರೆ, ಕರ್ನಾಟಕದಲ್ಲಿ ಮೊದಲ ಅವಧಿಗೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿರುತ್ತಾರೆ, ಎರಡನೇ ಅವಧಿಯಲ್ಲಿ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿರುತ್ತಾರೆ ಎಂಬುದು.
ಮುಂದೆ ಈ ವಿಷಯ ಪ್ರಸ್ತಾಪವಾದಾಗ ಹಾಲಿ ಸರ್ಕಾರದಲ್ಲಿ ಸಚಿವರಾಗಿರುವ ಎಂ.ಬಿ.ಪಾಟೀಲ್ ಅವರು: ಯಾವ ಕಾರಣಕ್ಕೂ ನಾಯಕತ್ವ ಬದಲಾವಣೆಯಾಗುವುದಿಲ್ಲ. ಸಿದ್ದರಾಮಯ್ಯ ಅವರೇ ಐದು ವರ್ಷಗಳ ಕಾಲ ಮುಖ್ಯ ಮಂತ್ರಿಯಾಗಿರುತ್ತಾರೆ ಎಂದರು. ಅವರಾಡಿದ ಈ ಮಾತಿನಿಂದ ಉಪಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಅವರೇನೂ ಕೆರಳಲಿಲ್ಲ. ಆದರೆ ಅವರ ಸಹೋದರ, ಸಂಸದ ಡಿ.ಕೆ.ಸುರೇಶ್ ಮಾತ್ರ ಕೆರಳಿ ಕೆಂಡವಾದರು. ಒಂದು ಹಂತದಲ್ಲಿ ಎಂ.ಬಿ.ಪಾಟೀಲ್ ಅವರ ಮೇಲೆ ಅವರು ಗುರುಗಟ್ಟಿದರೆ, ಇದಕ್ಕೆ ಪ್ರತಿಯಾಗಿ ಎಂ.ಬಿ.ಪಾಟೀಲ್ ಕೂಡ ಗುರುಗುಟ್ಟಿದರು.
ಆದರೆ ಅಷ್ಟರಲ್ಲೇ ರಾಜ್ಯ ಕಾಂಗ್ರೆಸ್ ಉಸ್ತುವಾರಿ ನೋಡಿಕೊಳ್ಳುತ್ತಿರುವ ರಣದೀಪ್ ಸಿಂಗ್ ಸುರ್ಜೇವಾಲ ಮಧ್ಯೆ ಪ್ರವೇಶಿಸಿ, ಈ ವಿಷಯದಲ್ಲಿ ಯಾರೂ ಮಾತನಾಡಬಾರದು. ಏಕೆಂದರೆ, ಈ ವಿಷಯಕ್ಕೆ ಸಂಬಂಧಪಟ್ಟಂತೆ ದಿಲ್ಲಿಯಲ್ಲಿ ಏನೇನು ಚರ್ಚೆಯಾಗಿದೆ ಎಂಬುದು ಯಾರಿಗೂ ಗೊತ್ತಿಲ್ಲ. ಹೀಗಾಗಿ ಎಲ್ಲರೂ ಮೌನವಹಿಸಬೇಕು ಎಂದರು.
ಅರ್ಥಾತ್, ಮುಖ್ಯಮಂತ್ರಿ ಹುದ್ದೆಯ ಆಯ್ಕೆ ವಿಷಯದಲ್ಲಿ ದಿಲ್ಲಿ ವರಿಷ್ಠರು ನಡೆಸಿದ ಚರ್ಚೆಯ ಸಂದರ್ಭದಲ್ಲಿ ಒಂದು ಮುಖ್ಯವಾದ ನಿರ್ಣಯವಾಗಿದೆ ಎಂದು ತಾನೇ ಅರ್ಥ? ಆದೇ ರೀತಿ ಈ ವಿಷಯದ ಬಗ್ಗೆ ಬಹಿರಂಗ ಚರ್ಚೆ ನಡೆದರೆ ಅದು ಹಾಲಿ ಸರ್ಕಾರದ ಮೇಲೆ ಪರಿಣಾಮ ಬೀರುತ್ತದೆ ಅಂತ ತಾನೇ ಸುರ್ಜೇವಾಲರ ಆತಂಕ.
ಅಂದರೆ ನಾಯಕತ್ವದ ವಿಷಯದಲ್ಲಿ ಈಗಾಗಲೇ ವರಿಷ್ಠರು ಒಂದು ತೀರ್ಮಾನಕ್ಕೆ ಬಂದಿದ್ದಾರೆ. ಅದರ ಪ್ರಕಾರ, ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರ ನಡುವೆ ಅಧಿಕಾರ ಹಂಚಿಕೆಯ ಸೂತ್ರ ಜಾರಿಯಾಗಿದೆ ಎಂದರೆ ಅದು ಸರ್ಕಾರದ ಮೇಲೆ ದುಷ್ಪರಿಣಾಮ ಬೀರುತ್ತದೆ. ಈಗಿರುವ ಮುಖ್ಯಮಂತ್ರಿ ಮುಂದೆ ಕೆಲ ಕಾಲದಲ್ಲಿ ಬದಲಾಗುತ್ತಾರೆ ಎಂಬ ಸಂದೇಶ ಹೋದರೆ ಅದು ಒಳ್ಳೆಯ ಪರಿಣಾಮವನ್ನಂತೂ ಬೀರುವುದಿಲ್ಲ.
ಹೀಗಾಗಿಯೆ ಈ ವಿಷಯದಲ್ಲಿ ಎಲ್ಲರೂ ಮೌನವಹಿಸುವಂತೆ ರಣದೀಪ್ ಸಿಂಗ್ ಸುರ್ಜೆವಾಲ ಹೇಳಿದ್ದು. ಅವರು ಈ ಮಾತುಗಳನ್ನಾಡಿದ ನಂತರವೇ ಪರಮೇಶ್ವರ್ ಅವರು, ಪಕ್ಷ ಈ ಹಿಂದೆ ನನ್ನ ಅಧ್ಯಕ್ಷತೆಯಲ್ಲಿ ಅಧಿಕಾರಕ್ಕೆ ಬಂದಿತ್ತು ಎಂದು ಹೇಳಿದ್ದು. ಅರ್ಥಾತ್, ಇವತ್ತು ಡಿ.ಕೆ.ಶಿವಕುಮಾರ್ ಅವರು ತಾವು ಮುಖ್ಯಮಂತ್ರಿ ಹುದ್ದೆಗೆ ಸಹಜ ಆಯ್ಕೆ ಎಂದು ಹೇಳಿಕೊಳ್ಳಲು ಏನು ಹೇಳುತ್ತಿದ್ದಾರೋ ಅದನ್ನೇ ಪರಮೇಶ್ವರ್ ಅವರು ಹೇಳಿದ್ದಾರೆ. ನಾನು ಕೆಪಿಸಿಸಿ ಅಧ್ಯಕ್ಷನಾದ ಕಾಲದಲ್ಲಿ ಪಕ್ಷ ಅಧಿಕಾರಕ್ಕೆ ಬಂದಿದೆ ಅಂತ ಹೇಳಿ ಡಿಕೆಶಿ ಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿಡಬಹುದಾದರೆ, ಹತ್ತು ವರ್ಷಗಳ ಹಿಂದೆ ತಮಗೂ ಅವಕಾಶ ಸಿಗಬೇಕಿತ್ತು ಅಂತ ತಾನೇ ಪರಮೇಶ್ವರ್ ಅವರ ಮಾತಿನ ಅರ್ಥ?
ಅಂದ ಹಾಗೆ ಅವರಾಡಿದ ಮಾತಿನಲ್ಲಿ ತಪ್ಪೇನೂ ಇಲ್ಲ. ಆದರೆ ಈ ಸಂದರ್ಭದಲ್ಲಿ ಅವರು ಈ ಮಾತನಾಡಿದ್ದಾರೆ ಎಂದರೆ ಮುಂದಿನ ದಿನಗಳಲ್ಲಿ ನಾಯಕತ್ವ ಬದಲಾವಣೆಯಂತಹ ವಿಷಯ ಎದುರಾದಾಗ, ಪರಮೇಶ್ವರ್ ಅವರು ಕೂಡ ಮುಖ್ಯಮಂತ್ರಿ ಹುದ್ದೆಯ ರೇಸಿಗೆ ಬರುತ್ತಾರೆ.
ಹೀಗೆ ಅವರು ಮುಖ್ಯಮಂತ್ರಿ ಹುದ್ದೆಯ ರೇಸಿಗೆ ಬಂದಾಗ, ಇವತ್ತು ಸಿದ್ದರಾಮಯ್ಯ ಜತೆಗಿರುವವರು ಸಹಜವಾಗಿಯೇ ಅವರನ್ನು ಬೆಂಬಲಿಸಬಹುದು. ಏಕೆಂದರೆ ಇವತ್ತು ಸಿದ್ದರಾಮಯ್ಯ ಅವರ ಗುಂಪಿನಲ್ಲಿ ಇರುವವರ ಪೈಕಿ ಬಹುತೇಕರು ಡಿಕೆಶಿ ಬದಲು ಪರಮೇಶ್ವರ್ ಕಡೆ ವಾಲುವ ಸಾಧ್ಯತೆ ಜಾಸ್ತಿ.
ಎಷ್ಟೇ ಆದರೂ ಪರಮೇಶ್ವರ್ ಹಿರಿಯರು. ಈ ಹಿಂದೆ ಕೆಪಿಸಿಸಿ ಅಧ್ಯಕ್ಷರಾಗಿ, ಉಪಮುಖ್ಯಮಂತ್ರಿಯಾಗಿದ್ದವರು. ಹೀಗಾಗಿ ಅವರ ನಾಯಕತ್ವದಡಿ ಕೆಲಸ ಮಾಡಲು ಸಿದ್ದರಾಮಯ್ಯ ಅವರ ಬಣದಲ್ಲಿರುವ ಬಹುತೇಕರು ಬಯಸುತ್ತಾರೆ.
ಅರ್ಥಾತ್, ನಾಯಕತ್ವ ಬದಲಾವಣೆ ಅನಿವಾರ್ಯವಾದರೆ, ಸಹಜವಾಗಿಯೇ ಈ ಗುಂಪು ಪರಮೇಶ್ವರ್ ಅವರ ಜತೆ ನಿಲ್ಲಬಹುದು. ಅವತ್ತಿನ ಸಂದರ್ಭದಲ್ಲಿ ನಾಯಕತ್ವದ ಪ್ರಶ್ನೆ ಶಾಸಕಾಂಗ ಪಕ್ಷದಲ್ಲೇ ಇತ್ಯರ್ಥವಾಗಲಿ ಎಂದು ಈ ಗುಂಪು ಕೂಗೆಬ್ಬಿಸಿದರೆ, ಅದನ್ನು ನಿರ್ಲಕ್ಷಿಸುವುದು ಪಕ್ಷದ ವರಿಷ್ಠರಿಗೂ ಕಷ್ಟವಾಗಬಹುದು. ಹೀಗಾಗಿ ನಾಯಕತ್ವ ಬದಲಾವಣೆ ಎಂಬುದು ಅನಿವಾರ್ಯವೇ ಆದರೂ ಅದರ ಹಸ್ತಾಂತರ ಪ್ರಕ್ರಿಯೆ ಸರಳವಂತೂ ಆಗಿರುವುದಿಲ್ಲ. ಶಾಸಕಾಂಗ ಪಕ್ಷದಲ್ಲಿ ಇಂತಹ ಕೂಗೆದ್ದರೆ ಈ ಕೂಗನ್ನು ಪರಿಗಣಿಸಿಯೇ ಮುಂದುವರಿಯುವ ಅನಿವಾರ್ಯತೆ ವರಿಷ್ಠರ ಎದುರು ಸೃಷ್ಟಿಯಾಗುತ್ತದೆ.
ಇವತ್ತು ಪರಮೇಶ್ವರ್ ಅವರ ಮಾತಿನ ಹಿಂದೆ ಕಾಣುತ್ತಿರುವ ಚಿತ್ರ ಇದು. ಹಾಗಂತ ಈ ಚಿತ್ರ ಸ್ಪಷ್ಟವಾಗಿದೆ ಅಂತಲೂ ಅಲ್ಲ. ಏಕೆಂದರೆ, ಭವಿಷ್ಯದ ಈ ಚಿತ್ರದಲ್ಲಿ ಇವತ್ತು ಪರಮೇಶ್ವರ್ ಮಾತ್ರ ಕಾಣುತ್ತಿರಬಹುದು. ಆದರೆ ಮುಂದೆ ಈ ಚಿತ್ರದಲ್ಲಿ ಲಿಂಗಾಯತ ನಾಯಕ ಎಂ.ಬಿ.ಪಾಟೀಲ್, ದಲಿತ ನಾಯಕ ಹೆಚ್.ಸಿ.ಮಹದೇವಪ್ಪ ಸೇರಿದಂತೆ ಯಾರು ಬೇಕಾದರೂ ಬಂದು ನಿಲ್ಲಬಹುದು.
ಹಾಗೇನಾದರೂ ಆದರೆ ಕರ್ನಾಟಕದ ರಾಜಕಾರಣದಲ್ಲಿ ಮೂವತ್ತೈದು ವರ್ಷಗಳ ಹಿಂದೆ ರೂಪುಗೊಂಡ ಒಂದು ಚಿತ್ರ ಮರುಸೃಷ್ಟಿಯಾಗಬಹುದು. ಅಂದ ಹಾಗೆ ಮೂವತ್ತೆ ದು ವರ್ಷಗಳ ಹಿಂದೆ ಕರ್ನಾಟಕದಲ್ಲಿ ಜನತಾದಳ ಸರ್ಕಾರ ಅಸ್ತಿತ್ವದಲ್ಲಿತ್ತು. ಆ ಸಂದರ್ಭದಲ್ಲಿ ಟೆಲಿಫೋನ್ ಕದ್ದಾಲಿಕೆಯ ಆರೋಪಕ್ಕೆ ಸಿಲುಕಿಕೊಂಡ ಮುಖ್ಯಮಂತ್ರಿ ರಾಮಕೃಷ್ಟ ಹೆಗಡೆ ರಾಜೀನಾಮೆ ನೀಡಬೇಕಾಯಿತಲ್ಲ ಆಗ ಅವರ ಜಾಗಕ್ಕೆ ಯಾರು ಬರಬೇಕು ಎಂಬ ಪ್ರಶ್ನೆ ಎದ್ದಾಗ ಲಿಂಗಾಯತ ಸಮುದಾಯದ ಎಸ್.ಆರ್.ಬೊಮ್ಮಾಯಿ, ಒಕ್ಕಲಿಗ ನಾಯಕ ಹೆಚ್.ಡಿ.ದೇವೇಗೌಡ ಮತ್ತು ದಲಿತ ನಾಯಕ ಬಿ.ರಾಚಯ್ಯ ಅವರ ನಡುವೆ ಸ್ಪರ್ಧೆ ಏರ್ಪಟ್ಟಿತು.
ಈ ಸ್ಪರ್ಧೆಯಲ್ಲಿ ರಾಮಕೃಷ್ಣ ಹೆಗಡೆ ಅವರ ಹಿಂದಿದ್ದ ಬಹುತೇಕ ಶಾಸಕರ ಬೆಂಬಲ ಪಡೆದ ಎಸ್.ಆರ್.ಬೊಮ್ಮಾಯಿ ಮುಖ್ಯಮಂತ್ರಿಯಾದರು. ಗಮನಿಸಬೇಕಾದ ಸಂಗತಿ ಎಂದರೆ ಒಂದು ಕಾಲದಲ್ಲಿ ರಾಷ್ಟ್ರ ರಾಜಕಾರಣದ ಕನಸು ಕಾಣುತ್ತಿದ್ದ ಹೆಗಡೆ, ತಾವು ದಿಲ್ಲಿಗೆ ಹೋಗುವ ಸನ್ನಿವೇಶ ಸೃಷ್ಟಿಯಾಯಿತೆಂದರೆ ಇಲ್ಲಿ ದಲಿತ ಸಮುದಾಯದ ಬಿ.ರಾಚಯ್ಯ ಇಲ್ಲವೇ ಅಲ್ಪಸಂಖ್ಯಾತ ಸಮುದಾಯದ ನಜೀರ್ ಸಾಬ್ ಅವರನ್ನು ಮುಖ್ಯಮಂತ್ರಿ ಹುದ್ದೆಗೇರಿಸುವ ಕನಸು ಕಂಡಿದ್ದರು.
ಕಾರಣ ದೇಶದ ಎಲ್ಲ ಕ್ಷೇತ್ರಗಳಲ್ಲಿಯೂ ಸರಿ ಸಮನಾಗಿ ಹಂಚಿಹೋಗಿರುವ ಸಮುದಾಯಗಳೆಂದರೆ ದಲಿತರು ಮತ್ತು ಮುಸ್ಲಿಮರು. ಹೀಗಾಗಿ ಈ ಸಮುದಾಯದ ಒಬ್ಬರನ್ನು ಮುಖ್ಯಮಂತ್ರಿ ಹುದ್ದೆಗೇರಿಸಿದರೆ ರಾಷ್ಟ್ರ ಮಟ್ಟದಲ್ಲಿ ತಮ್ಮ ವರ್ಚಸ್ಸು ಹೆಚ್ಚುತ್ತದೆ ಎಂದು ಹೆಗಡೆ ಭಾವಿಸಿದ್ದರು.
ಆದರೆ ಯಾವಾಗ ಆರೋಪ ಹೊತ್ತು ಅವರು ಸಿಎಂ ಹುದ್ದೆಯಿಂದ ಕೆಳಗಿಳಿಯಬೇಕಾಯಿತೋ ಆಗ ತಮ್ಮ ಬಹುತೇಕ ಬೆಂಬಲಿಗರು ಲಿಂಗಾ ಯತ ಸಮುದಾಯದ ಎಸ್.ಆರ್.ಬೊಮ್ಮಾಯಿ ಅವರ ಜತೆ ನಿಂತಾಗ ಅವರು ವಿರೋಽಸುವ ಸ್ಥಿತಿಯಲ್ಲಿ ಇರಲಿಲ್ಲ. ಏಕೆಂದರೆ ಅಷ್ಟು ಹೊತ್ತಿಗಾಗಲೇ ಕರ್ನಾಟಕದ ರಾಜಕಾರಣದಲ್ಲಿ ಅವರು ಲಿಂಗಾಯತ ಸಮುದಾಯದ ಪಾಲಿಗೆ ಐಕಾನ್ ಆಗಿದ್ದರು. ಹೀಗಾಗಿ ತಮ್ಮ ಮನದಿಚ್ಛೆ ಏನೇ ಇದ್ದರೂ, ಅದೇ ಸಮುದಾಯದ ಎಸ್.ಆರ್.ಬೊಮ್ಮಾಯಿ ಮುಖ್ಯಮಂತ್ರಿ ಹುದ್ದೆಗೇರುವುದನ್ನು ಅವರು ತಡೆಯಲು ಸಾಧ್ಯವಾಗಲಿಲ್ಲ.
ಹೀಗೆ ಮೂವತ್ತೆ ದು ವರ್ಷಗಳ ಹಿಂದೆ ನಡೆದ ಈ ಬೆಳವಣಿಗೆಯನ್ನು ಗಮನಿಸಿದರೆ, ಅಂಥದ್ದೇ ಒಂದು ಚಿತ್ರ ಪುನಾ ಕರ್ನಾಟಕದ ರಾಜಕಾರಣದಲ್ಲಿ ಮರು ಸೃಷ್ಟಿಯಾದರೆ ಅಚ್ಚರಿಯೇನಲ್ಲ.
ಪರಮೇಶ್ವರ್ ಅವರ ಮಾತು ನಿಶ್ಚಿತವಾಗಿ ಇದಕ್ಕೆ ಇಂಬು ನೀಡಿದೆ.
ಸಾಲಿಗ್ರಾಮ: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಜಿಲ್ಲಾ ಸಂಚಾಲಕ ಚಂದ್ರು ಆರೋಪ ಸಾಲಿಗ್ರಾಮ: ದಲಿತ ಮತ್ತು ಹಿಂದುಳಿದ…
ಕೃಷ್ಣ ಸಿದ್ದಾಪುರ ಸಂತೆಮಾಳದಲ್ಲಿ ತರಕಾರಿ ಜೊತೆ ಸಾಂಕ್ರಾಮಿಕ ರೋಗವೂ ಉಚಿತ ಕ್ರಮಕೈಗೊಳ್ಳದ ಗ್ರಾ.ಪಂ. ವಿರುದ್ಧ ಸಾರ್ವಜನಿಕರ ಅಸಮಾಧಾನ ಸಿದ್ದಾಪುರ: ಸಾರ್ವಜನಿಕ…
ಬೆಂಗಳೂರು ಡೈರಿ ಆರ್.ಟಿ.ವಿಠ್ಠಲಮೂರ್ತಿ ಘನತೆಯ ಬದುಕು ಬಯಸುವ ಮನುಷ್ಯನ ಹಕ್ಕನ್ನು ಎತ್ತಿ ಹಿಡಿದಿರುವ ಸಿಎಂ ಸಿದ್ದರಾಮಯ್ಯ ಬ್ರಿಟಿಷರ ಗುಲಾಮಗಿರಿಯಲ್ಲಿದ್ದ ಭಾರತಕ್ಕೆ…
ಬಳ್ಳಾರಿಯಲ್ಲಿ ಮಹರ್ಷಿ ವಾಲ್ಮೀಕಿ ಪುತ್ತಳಿ ಅನಾವರಣ ಕಾರ್ಯಕ್ರಮದ ಬ್ಯಾನರ್ ಕಟ್ಟುವ ವಿಚಾರದಲ್ಲಿ ನಡೆದ ಘರ್ಷಣೆ ಸಂದರ್ಭದಲ್ಲಿ ಗುಂಡೇಟಿನಿಂದ ಕಾಂಗ್ರೆಸ್ ಕಾರ್ಯಕರ್ತ…
ವರಹಳ್ಳಿ ಆನಂದ, ಸಂಶೋಧನಾ ವಿದ್ಯಾರ್ಥಿ, ಮೈಸೂರು ವಿವಿ ಅಶೋಕಪುರಂ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಸ್ಥಿತಿ ೨,೦೦೦ ಇದ್ದ…