ಎಡಿಟೋರಿಯಲ್

ಕೃಷ್ಣನನ್ನು ಬಿಡಿಸುವ ಜಸ್ನಾ ಸಲೀಂ, ಶಿವನನ್ನು ಸ್ತುತಿಸುವ ಫರ್ಮಾನಿ ನಾಝ್

ಪಂಜು ಗಂಗೊಳ್ಳಿ

ಹಿಂದೆಂದೂ ಕಾಣದಂತಹ ತೀವ್ರ ಸ್ವರೂಪದ ಧಾರ್ಮಿಕ ಅಹಿಷ್ಣುತೆ, ಕೋಮುದ್ವೇಷದ ದಳ್ಳುರಿ ಇಡೀ ದೇಶವನ್ನು ಆವರಿಸಿದೆ. ಮತ ಬೇಟೆಯ ಧಾರ್ಮಿಕ ರಾಜಕಾರಣಕ್ಕಾಗಿ ಹಚ್ಚಲಾಗಿರುವ ಈ ದಳ್ಳುರಿಗೆ ಜೀವಗಳು ಬಲಿಯಾಗುತ್ತಿವೆ. ಆದಾಗ್ಯೂ, ಈ ಜ್ವಾಲೆಯನ್ನು ಶಮನಗೊಳಿಸುವ ಪ್ರಯತ್ನಗಳೂ ಅಲ್ಲಲ್ಲಿ ನಡೆಯುತ್ತಿರುವುದು ಆಶಾದಾಯಕ ಸಂಗತಿ. ಈ ಪ್ರಯತ್ನಗಳಲ್ಲಿ ಎಲ್ಲವೂ ಉದ್ದೇಶಪೂರ್ವಕವಾಗಿಲ್ಲದೆ, ದೇಶದ ಪಾರಂಪರಿಕ ಜಾತ್ಯತೀತ ಸಂಸ್ಕೃತಿಯ ಮುಂದುವರಿಕೆಯಾಗಿರುವುದು ಗಮನೀಯ ಅಂಶ.

೨೮ ವರ್ಷ ಪ್ರಾಯದ ಜಸ್ನಾ ಸಲೀಂ ಕೇರಳದ ಕೋಯಿಕ್ಕೋಡ್‌ನ ಕೊಯಿಲಾಂಡಿಯ ನಿವಾಸಿ. ಹತ್ತನೇ ತರಗತಿಯಲ್ಲಿ ಅರ್ಧಕ್ಕೆ ಶಿಕ್ಷಣ ನಿಲ್ಲಿಸಿದ ಜಸ್ನಾ ಇಬ್ಬರು ಮಕ್ಕಳ ತಾಯಿ. ಆಕೆ ಚಿಕ್ಕವಳಾಗಿರುವಾಗ ಆಕೆಯ ಹೆತ್ತವರು ಮತ್ತು ಸಂಬಂಧಿಕರು ಅವರನ್ನು ‘ಕಣ್ಣನ್’ ಎಂದು ಮುದ್ದಿನಿಂದ ಕರೆಯುತ್ತಿದ್ದರು. ಕಣ್ಣನ್ ಎಂದರೆ ಕೃಷ್ಣ. ಆರು ವರ್ಷಗಳ ಹಿಂದೆ, ಆಕೆ ಬಸುರಿಯಾಗಿದ್ದಾಗ ಕಾಲು ಜಾರಿ ಬಿದ್ದ ಪರಿಣಾಮವಾಗಿ ಹಾಸಿಗೆ ಹಿಡಿಯಬೇಕಾಯಿತು. ಹೀಗೆ ಅಸ್ವಸ್ಥಳಾಗಿ ಮಲಗಿರುವಾಗ ಅವರಿಗೆ ಒಂದು ದಿನಪತ್ರಿಕೆಯಲ್ಲಿ ಕೃಷ್ಣನ ಫೋಟೋ ಕಾಣಿಸಿ, ಅದರ ಚಿತ್ರವನ್ನು ಬಿಡಿಸಬೇಕೆಂಬ ಬಯಕೆ ಹುಟ್ಟಿತು. ವಾಸ್ತವದಲ್ಲಿ, ಜಸ್ನಾ ಅದಕ್ಕೂ ಮೊದಲು ಯಾವತ್ತೂ ಚಿತ್ರ ಬರೆದಿದ್ದಿಲ್ಲ. ವಿದ್ಯಾರ್ಥಿಯಾಗಿದ್ದಾಗ ಆಕೆಗೆ ಸರಿಯಾಗಿ ದೇಶದ ನಕ್ಷೆ ಬರೆಯಲೂ ಸಾದ್ಯವಾಗುತ್ತಿರಲಿಲ್ಲ. ಆದರೆ, ಆಕೆಗೇ ಆಶ್ಚರ್ಯವೆಂಬಂತೆ, ಆಕೆ ಬಿಡಿಸಿದ ಪತ್ರಿಕೆಯಲ್ಲಿನ ಆ ಕೃಷ್ಣನ ಚಿತ್ರ ಬಹಳ ಚೆನ್ನಾಗಿ ಮೂಡಿ ಬಂತು. ಇದರಿಂದ ಉತ್ತೇಜನಗೊಂಡ ಜಸ್ನಾ ಈ ಆರು ವರ್ಷಗಳಲ್ಲಿ ನೂರಾರು ಚಿತ್ರಗಳನ್ನು ಬರೆದರು. ಎಲ್ಲವೂ ಕೃಷ್ಣನ ಚಿತ್ರಗಳು !

ಆದರೆ, ಜಸ್ನಾರ ತಾಯಿಯ ಮನೆಯವರಿಗೆ ಆಕೆ ಹೀಗೆ ದೇವರ ಚಿತ್ರ, ಅದೂ ಹಿಂದೂ ದೇವರ ಚಿತ್ರ ಬರೆಯುವುದು ಹಿಡಿಸದೆ, ಅದು ಇಸ್ಲಾಮಿಗೆ ವಿರುದ್ಧವಾದುದು ಎಂದು ಅವರನ್ನು ತಡೆಯಲು ಪ್ರಯತ್ನಿಸಿದರು. ಆದರೆ, ಜಸ್ನಾರ ಪತಿ ಹಾಗೂ ಅವರ ಮಕ್ಕಳು ಅವರನ್ನು ಬೆಂಬಲಿಸಿದ ಕಾರಣ ಅವರು ಕೃಷ್ಣನ ಚಿತ್ರ ಬರೆಯುವ ಕಾಯಕ ಮುಂದುವರಿಯಿತು. ಜಸ್ನಾ ತಾನು ಹೀಗೆ ಬಿಡಿಸಿದ ಕೃಷ್ಣನ ಚಿತ್ರಗಳನ್ನು ತನ್ನ ಹಿಂದೂ ಗೆಳತಿಯರಿಗೆ ಕೊಟ್ಟು ಖುಷಿ ಪಟ್ಟರು. ‘ನಾನು ನನ್ನ ಹಿಂದೂ ಗೆಳತಿಯರ ಮನೆಗಳಿಗೆ ಹೋದಾಗ ಅವರೆಲ್ಲ ಯಾವ ತಕರಾರಿಲ್ಲದೆ ಅವರ ಮನೆಗಳಲ್ಲಿ ನನಗೆ ನಮಾಜ್ ಮಾಡಲು ಅವಕಾಶ ಮಾಡಿಕೊಡುತ್ತಾರೆ. ಹಾಗಿರುವಾಗ ನಾನು ಅವರ ದೇವರ ಚಿತ್ರ ಬರೆದು ಅವರಿಗೆ ಕೊಟ್ಟು ಅದರಿಂದ ಅವರಿಗೆ ಸಂತೋಷವಾಗುವುದಾದರೆ ಅದು ಹೇಗೆ ತಪ್ಪಾಗುತ್ತದೆ?‘ ಎಂದು ಜಸ್ನಾ ಕೇಳುವಾಗ ಅವರನ್ನು ವಿರೋಧಿಸುವ ಯಾರಲ್ಲೂ ಉತ್ತರವಿರುವುದಿಲ್ಲ. ಅವರ ಪಕ್ಕದ ಒಂದು ಮನೆಯವರು ಜಸ್ನಾ ಕೊಟ್ಟ ಕೃಷ್ಣನ ಚಿತ್ರವನ್ನು ತಮ್ಮ ದೇವರ ಕೋಣೆಯಲ್ಲಿಟ್ಟು ಪೂಜೆ ಮಾಡುತ್ತಿದ್ದಾರೆ.

ಜಸ್ನಾ ಕೃಷ್ಣನ ಚಿತ್ರ ಬಿಡಿಸುತ್ತಾರೆ ಎಂದು ತಿಳಿದ ಎಷ್ಟೋ ಜನ ಹಿಂದೂಗಳು ಅವರಿಗೆ ಹೇಳಿ, ಕೃಷ್ಣನ ಚಿತ್ರ ಬಿಡಿಸಿಕೊಂಡು, ಹಣ ಕೊಟ್ಟು ತೆಗೆದುಕೊಂಡು ಹೋಗುತ್ತಾರೆ. ಜಸ್ನಾರಿಗೆ ಪ್ರತಿ ತಿಂಗಳು ಐದಾರು ಚಿತ್ರಗಳಿಗೆ ಆರ್ಡರ್ ಬರುತ್ತದೆ. ಅವರಿಗೆ ಬರುವ ಹೆಚ್ಚಿನ ಆರ್ಡರುಗಳು ಕರ್ನಾಟಕ ಮತ್ತು ತಮಿಳುನಾಡಿನಿಂದ. ಜಸ್ನಾ ತಾನು ಬಿಡಿಸಿದ ಕೃಷ್ಣನ ಚಿತ್ರಗಳಲ್ಲಿ ಒಂದನ್ನು ಪ್ರಸಿದ್ಧ ಗುರುವಾಯೂರು ದೇವಸ್ಥಾನಕ್ಕೂ ಕಾಣಿಕೆ ಕೊಟ್ಟಿದ್ದಾರೆ. ಜಸ್ನಾ ಗುರುವಾಯೂರು ದೇವಸ್ಥಾನಕ್ಕೆ ಕೃಷ್ಣನ ಚಿತ್ರವನ್ನು ಕೊಟ್ಟಿದ್ದು ತಿಳಿಯುತ್ತಲೇ ಕೇರಳದ ಪಾಂಡಾಳಂನ ಉಳನಾಡು ಎಂಬಲ್ಲಿನ ಶ್ರೀಕೃಷ್ಣಸ್ವಾಮಿ ದೇವಸ್ಥಾನದ ಆಡಳಿತ ಮಂಡಳಿ ತಮ್ಮ ದೇವಸ್ಥಾನಕ್ಕೂ ಒಂದು ಕೃಷ್ಣನ ಚಿತ್ರ ಮಾಡಿಕೊಡುವಂತೆ ಅವರನ್ನು ಕೇಳಿಕೊಂಡಿತು. ಅದು, ಜಸ್ನಾರೇ ಹೇಳಿಕೊಳ್ಳುವಂತೆ, ಅವರಿಗೆ ಸಂದ ದೊಡ್ಡ ಗೌರವ. ಏಕೆಂದರೆ, ಅವರು ಕೃಷ್ಣನ ಚಿತ್ರ ಬಿಡಿಸಿ ದೇವಸ್ಥಾನಕ್ಕೆ ನೀಡಿದಾಗ ದೇವಸ್ಥಾನದ ಅರ್ಚಕರು, ಆಕೆ ಒಬ್ಬಳು ಮುಸ್ಲಿಮ್ ಮಹಿಳೆ ಎಂಬುದನ್ನು ಲೆಕ್ಕಿಸದೆ, ಗರ್ಭಗುಡಿಯ ಎದುರೇ ಅವರನ್ನು ನಿಲ್ಲಿಸಿ ಅದನ್ನು ಸ್ವೀಕರಿಸಿದರು. ಅಷ್ಟೇ ಅಲ್ಲದೆ, ಗರ್ಭಗುಡಿಯಲ್ಲಿನ ಕೃಷ್ಣನ ಮೂರ್ತಿಯ ಮೇಲಿನ ತುಳಸಿ ಮಾಲೆಗಳನ್ನು ತುಸು ಸರಿಸಿ, ಜಸ್ನಾರಿಗೆ ಕೃಷ್ಣನ ಮೂರ್ತಿಯ ಕೈಯಲ್ಲಿನ ಕೊಳಲು ಕಾಣಲು ಅನುವು ಮಾಡಿಕೊಟ್ಟರು.

ಮುಝಾಫರ್ ನಗರದ ೩೦ ವರ್ಷ ಪ್ರಾಯದ ಫರ್ಮಾನಿ ನಾಜ್ ಒಬ್ಬ ವೃತ್ತಿಪರ ಮುಸ್ಲಿಮ್ ಗಾಯಕಿ. ಜುಲೈ ೨೩ ರಂದು ಅವರು ಹಾಡಿದ ‘ಹರ್ ಹರ್ ಶಂಭೋ’ ಎಂಬ ಶಿವ ಭಜನೆ ಅಂತರ್ಜಾಲದಲ್ಲಿ ಬಹಳ ಜನಪ್ರಿಯಗೊಂಡು ೯,೨೦,೦೦೦ಕ್ಕೂ ಹೆಚ್ಚು ವಿವ್ಸ್‌ಗಳನ್ನು ಪಡೆದಿದೆ. ಈಗ ಯಾತ್ರೆ ನಡೆಸುತ್ತಿರುವ ಶಿವ ಭಕ್ತರಾದ ಕನ್ವಾರಿಯಗಳಿಗೂ ಅದು ಇಷ್ಟವಾಗಿ, ಅವರು ಅದು ಮುಸ್ಲಿಮಳೊಬ್ಬಳು ಹಾಡಿದ್ದು ಎಂಬುದನ್ನೂ ಪರಿಗಣಿಸದೆ ತಮ್ಮ ಹರಿದ್ವಾರದ ಯಾತ್ರೆಯಲ್ಲಿ ಆ ಭಜನೆಯನ್ನು ಕೇಳಿ, ಕುಣಿದರು. ಆದರೆ, ದಿೋಂಬಂದ್ ಉಲೇಮಾಗಳಿಗೆ ಮಾತ್ರ ಫರ್ಮಾನಿ ನಾಝ್‌ರ ಭಜನೆ ಅಪಥ್ಯವಾಗಿ, ‘ನಮ್ಮ ಧರ್ಮ ಹಾಡುವುದನ್ನು ವಿರೋಧಿಸುತ್ತದೆ. ಅದರಲ್ಲೂ, ಬೇರೆ ಧರ್ಮದ ಹಾಡು, ಭಜನೆಗಳನ್ನು ಹಾಡುವುದನ್ನಂತೂ ಸಹಿಸುವುದೇ ಇಲ್ಲ. ನೀವು ಅಲ್ಲಾನನ್ನು ನಿಂದಿಸಿದ್ದೀರಿ, ನೀವು ಅಲ್ಲಾನ ಕ್ಷಮೆ ಕೇಳಬೇಕು‘ ಎಂದು ಅವರಿಗೆ ತಾಕೀತು ಮಾಡಿದರು. ಆದರೆ, ನಾಝ್ ಮತ್ತು ಅವರ ತಾಯಿ ಆ ಉಲೇಮಾಗಳ ಬೆದರಿಕೆಗೆ ಸೊಪ್ಪು ಹಾಕದೆ, ‘ಹಾಡುವುದು ನನ್ನ ಹೊಟ್ಟೆಪಾಡಿನ ದಾರಿ. ನನ್ನ ನಾಲ್ಕು ವರ್ಷದ ಮಗ ಗಂಟಲು ಕಾಯಿಲೆಯಿಂದ ಬಳಲುತ್ತಿದ್ದಾನೆ. ಅವನ ವೈದ್ಯಕೀಯ ಆರೈಕೆಗೆ ಹಣ ಬೇಕು. ನನ್ನ ಸರ್ವಸ್ವವೇ ಅವನು. ಇಷ್ಟಕ್ಕೂ, ಹಾಡು ಸಂಗೀತಕ್ಕೆ ಧರ್ಮವಿದೆೆುೀಂ? ಮೊಹಮ್ಮದ್ ರಫಿಯಂತಹ ದೊಡ್ಡ ದೊಡ್ಡ ಗಾಯಕರೂ ಭಜನೆ ಹಾಡಿದ್ದಾರೆ. ದಯವಿಟ್ಟು ಸಂಗೀತವನ್ನು ಯಾವುದೇ ಧರ್ಮಕ್ಕೆ ಮಿತಿಗೊಳಿಸಬೇಡಿ‘ ಎಂದು ಉಲೇಮಾಗಳಿಗೆ ಧರ್ಮದ ಪಾಠ ಮಾಡಿ, ಅವರ ಬಾಯಿ ಮುಚ್ಚಿಸಿದರು.

ಇಷ್ಟಕ್ಕೂ ದೇಶದಲ್ಲಿ ಫರ್ಮಾನಿ ನಾಝ್ ಭಜನೆ ಹಾಡುವ ಏಕೈಕ ಮುಸ್ಲಿಂ ಗಾಯಕಿಯಲ್ಲ. ಅನೂಪ್ ಜಲೋಟಾ, ರಮ್ಝಾನ್ ಖಾನ್, ಫರಾಝ್ ಖಾನ್ ಮೊದಲಾಗಿ ಭಜನೆಗಳನ್ನು ಹಾಡುವ ಮುಸ್ಲಿಂ ಗಾಯಕರ ಬಹು ದೊಡ್ಡ ದಂಡೇ ಇದೆ. ಕೋಮುವ್ಯಾಧಿಗಳಿಗೆ ಜಸ್ನಾರ ಮುದ್ದು ಕೃಷ್ಣನನ್ನು ನೋಡುವ, ಫರ್ಮಾನಿಯವರ ಶಿವ ಭಜನೆಯನ್ನು ಕೇಳುವ ಕಣ್ಣುಕಿವಿಗಳು ಆದಷ್ಟು ಬೇಗ ತೆರೆಯಲಿ ಎಂದು ಆಶಿಸೋಣ.

andolana

Recent Posts

ರಾಜ್ಯದಲ್ಲಿ ಚಳಿಯ ತೀವ್ರತೆ ಹೆಚ್ಚು: ಮಕ್ಕಳನ್ನು ಕಾಡುತ್ತಿರುವ ಕಾಲು ಬಾಯಿ ರೋಗ

ಬೆಂಗಳೂರು: ಪ್ರಸಕ್ತ ವರ್ಷದಲ್ಲಿ ಚಳಿ ತುಂಬಾ ಜಾಸ್ತಿಯಿದ್ದು, ಶೀತಗಾಳಿ ಹೆಚ್ಚಾಗಲು ಕರಾವಳಿ ತೀರ ಪ್ರದೇಶದಲ್ಲಾದ ವಾತಾವರಣ ಬದಲಾವಣೆ ಕಾರಣ ಎಂದು…

7 mins ago

ವಿವಾದದ ನಡುವೆಯೂ ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳದನಲ್ಲಿ ಬಾಡೂಟ ವಿತರಣೆ

ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ನಡೆಯುತ್ತಿರುವ 87ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾಂಸಾಹಾರ ವಿತರಣೆ ಮಾಡಿರುವ ವಿಚಾರ ಭಾರೀ ವಿವಾದಕ್ಕೆ…

18 mins ago

ಕುವೈತ್‌ ಪ್ರವಾಸ: ಪ್ರಧಾನಿ ಮೋದಿಗೆ 20ನೇ ಅಂತರಾಷ್ಟ್ರೀಯ ಗೌರವ

ಕುವೈತ್‌/ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಕಾಲ ಕುವೈತ್‌ ಪ್ರವಾಸದಲ್ಲಿದ್ದು, ಇಲ್ಲಿನ ರಾಜ ಶೇಕ್‌ ಮಿಶಾಲ್‌ ಅಲ್‌…

33 mins ago

ಮೈಸೂರಿನಲ್ಲಿ ನಿಮ್ಹಾನ್ಸ್‌ ಘಟಕ ಸ್ಥಾಪನೆಗೆ ಕ್ರಮ ಎಂದ ಸಿಎಂ ಸಿದ್ದರಾಮಯ್ಯ

ಕಲಬುರ್ಗಿ: ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಒತ್ತು ನೀಡುತ್ತಿದ್ದು, 371 ಜೆ ಜಾರಿಯಾದ ದಶಮಾನೋತ್ಸವದ ಪ್ರಯುಕ್ತ 371 ಹಾಸಿಗೆಗಳ…

38 mins ago

ಫೇಕ್‌ ಎನ್‌ಕೌಂಟರ್‌ ಹೇಳಿಕೆ: ಪ್ರಹ್ಲಾದ್‌ ಜೋಶಿ ವಿರುದ್ಧ ಬಿ.ಕೆ.ಹರಿಪ್ರಸಾದ್‌ ಕಿಡಿ

ಬೆಂಗಳೂರು: ವಿಧಾನ ಪರಿಷತ್‌ ಶಾಸಕ ಸಿ.ಟಿ.ರವಿ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ನೀಡಿರುವ ಹೇಳಿಕೆ ಅಮಿತ್‌…

1 hour ago

ಹೆಣ್ಣು ಕಾನೂನನ್ನು ಅರಿತರೆ ಅಷ್ಟೇ, ದೌರ್ಜನ್ಯ ಎದುರಿಸಲು ಸಾಧ್ಯ: ನಾಗಲಕ್ಷ್ಮೀ ಚೌಧರಿ

ಮಂಡ್ಯ: ಹೆಣ್ಣು ಕಾನೂನು ಅರಿತಕೊಂಡಾಗಷ್ಟೇ, ಹೆಣ್ಣಿನ ಮೇಲಾಗುತ್ತಿರುವ ದೌರ್ಜನ್ಯ ಎದುರಿಸಲು ಸಾಧ್ಯ ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ…

2 hours ago