ಎಡಿಟೋರಿಯಲ್

ಗೌರವಧನ ಏರಿಕೆಯಿಂದ ಪಂಚಾಯತ್ ರಾಜ್ ವ್ಯವಸ್ಥೆಗೆ ಬಲ

ಎಂ.ಕೆ.ಕೆಂಪೇಗೌಡ

ನಿವೃತ್ತ ನಿರ್ದೇಶಕ, ಪಂಚಾಯತ್ ರಾಜ್ ಇಲಾಖೆ, ಹಾಗೂ ಸಲಹೆಗಾರರು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ

ಸರ್ಕಾರವು ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳ ಗೌರವಧನ ಏರಿಕೆ ಮಾಡಿರುವುದು ದೊಡ್ಡ ಪ್ರಮಾಣದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಗೆ ಬಲತುಂಬುವ ದಿಶೆಯಲ್ಲಿ ಪ್ರಮುಖ ನಿರ್ಧಾರವಾಗಿದೆ.

ಗ್ರಾಮ ಪಂಚಾಯಿತಿಯ ಚುನಾಯಿತ ಪ್ರತಿನಿಧಿಗಳಿಗೆ ಆರ್ಥಿಕ ಬೆಂಬಲ ನೀಡಿದರೆ ಸದಸ್ಯರೂ ಹೆಚ್ಚಿನ ಪ್ರಮಾಣದಲ್ಲಿ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಲು ಉತ್ತೇಜನ ಮತ್ತು ಪ್ರೋತ್ಸಾಹ ನೀಡಿದಂತಾಗಿ ಅವರು ಹೆಚ್ಚು ಗ್ರಾಮ ಪಂಚಾಯಿತಿ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಸಹಕಾರಿಯಾಗಲಿದೆ.

ದೇಶದ ಎಲ್ಲಾ ರಾಜ್ಯಗಳಿಗಿಂತ ಕರ್ನಾಟಕವು ಪಂಚಾಯತ್ ರಾಜ್ ಮತ್ತು ವಿಕೇಂದ್ರಿಕರಣ ವ್ಯವಸ್ಥೆಯಲ್ಲಿ ಮುಂಚೂಣಿಯಲ್ಲಿದೆ. ಸಂವಿಧಾನದ ೭೩ನೇ ತಿದ್ದುಪಡಿಗೆ ಅನುಗುಣವಾಗಿ ವಿಕೇಂದ್ರಿಕರಣವನ್ನು ಜಾರಿಗೆ ತಂದಿರುವುದರಲ್ಲಿ ಕರ್ನಾಟಕ ಅಗ್ರಸ್ಥಾನದಲ್ಲಿದೆ.

ಸಂವಿಧಾನದ ಪ್ರಕಾರ ೩ ಹಂತದ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜಾರಿಗೆ ತರುವುದು ಕಡ್ಡಾಯವಾಗಿರುತ್ತದೆ. ಆದರೆ ಕರ್ನಾಟಕದಲ್ಲಿ ರಾಮಕೃಷ್ಣ ಹೆಗಡೆಯವರ ಕಾಲದಲ್ಲಿ ಹಾಗೂ ಅಬ್ದುಲ್ ನಜೀರ್ ಸಾಬ್ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿದ್ದಾಗ ಜಿಲ್ಲಾ ಪರಿಷತ್, ಮಂಡಲ ಪಂಚಾಯತ್, ತಾಲ್ಲೂಕು ಪಂಚಾಯಿತಿ ಎಂಬ ೩ ಹಂತದ ವಿಕೇಂದ್ರಿಕರಣ ವ್ಯವಸ್ಥೆಯನ್ನು ಜಾರಿಗೊಳಿಸಿದ್ದರು.

ಪ್ರಸ್ತುತ ರಾಜ್ಯದಲ್ಲಿ ಪ್ರತಿ ೬೦೦೦ದಿಂದ ೮೦೦೦ದ ಜನಸಂಖ್ಯೆಗೆ ಅನುಗುಣವಾಗಿ ಸುಮಾರು ೬೦೦೦ದಷ್ಟು ಗ್ರಾಮ ಪಂಚಾಯಿತಿಗಳಿವೆ. ಅದರಲ್ಲಿ ೯೨೦೦೦ರಷ್ಟು ಚುನಾಯಿತ ಪ್ರತಿನಿಧಿಗಳಿದ್ದು, ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಆಯ್ಕೆಯೂ ಅವರಿಂದಲೇ ನಡೆಯುತ್ತದೆ. ಜನಸಂಖ್ಯೆಯ ಅನುಪಾತಕ್ಕೆ ಅನುಗುಣವಾಗಿ ಪ.ಜಾತಿ ಮತ್ತು ಪ.ಪಂಗಡಗಳಿಗೆ ಮೀಸಲಾತಿ ಇದೆ. ಜೊತೆಗೆ ಹಿಂದುಳಿದ ವರ್ಗಕ್ಕೆ ಶೇ.೨೭ ಮತ್ತು ಎಲ್ಲ ವರ್ಗದಲ್ಲೂ ಶೇ.೫೦ರಷ್ಟು ಮೀಸಲಾತಿ ಮಹಿಳೆಯರಿಗಿದೆ. ಹೀಗಾಗಿ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಮಹಿಳೆಯರ ಪಾತ್ರವೂ ದೊಡ್ಡದಿದೆ.

ಪಂಚಾಯತ್ ರಾಜ್ ವ್ಯವಸ್ಥೆಗೆ ಭದ್ರ ಬನಾದಿ ಹಾಕುವಲ್ಲಿ ಸದಸ್ಯರ ಪಾತ್ರ ಹೆಚ್ಚಿದೆ. ಯಾವುದೇ ಯೋಜನೆ ತಯಾರಿಕೆಯಲ್ಲಿ ಅದನ್ನು ಅನುಷ್ಠಾನಕ್ಕೆ ತರುವಲ್ಲಿ, ಗ್ರಾಮಸಭೆಗಳ ಮೂಲಕ ಫಲಾನುಭವಿಗಳ ಆಯ್ಕೆ, ವಾರ್ಡ್‌ಸಭೆಗಳನ್ನು ನಡೆಸುವುದು ಹೀಗೆ ಪ್ರತಿ ಹಂತದಲ್ಲೂ ಚುನಾಯಿತ ಪ್ರತಿನಿಧಿಗಳ ಪಾತ್ರವಿದೆ. ತೆರಿಗೆ, ಸೇವಾ ಶುಲ್ಕ ವಿಽಸುವ ಮೂಲಕ ಪಂಚಾಯಿತಿಗಳಿಗೆ ಸ್ವಂತ ಸಂಪನ್ಮೂಲ ಕ್ರೋಡೀಕರಿಸುವ ಅಧಿಕಾರವಿದೆ. ಈ ಎಲ್ಲಾ ಕೆಲಸಗಳಿಗೆ ಸದಸ್ಯರು ತಮ್ಮ ಮನೆಯ ಕೆಲಸ ಬಿಟ್ಟು ಹೆಚ್ಚಾಗಿ ಪಂಚಾಯಿತಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಅವರಿಗೆ ಆರ್ಥಿಕವಾಗಿ ಭದ್ರತೆ ನೀಡಲು ಸರ್ಕಾರ ಮಾಸಿಕ ಗೌರವಧನ ನೀಡುತ್ತಿರುವುದು ಉಚಿತವಾಗಿದೆ.

೧೯೯೪ರಲ್ಲಿ ಸದಸ್ಯರಿಗೆ ಗೌರವ ಧನವಿರಲಿಲ್ಲ. ಅಧ್ಯಕ್ಷರಿಗೆ ೧೫೦ರೂ. ಮತ್ತು ಉಪಾಧ್ಯಕ್ಷರಿಗೆ ೭೫ರೂ. ಮಾತ್ರ ಇತ್ತು. ನಂತರ ೨೦೦೩ರಲ್ಲಿ ಅಧ್ಯಕ್ಷರಿಗೆ ೩೦೦ರೂ. ಉಪಾಧ್ಯಕ್ಷರಿಗೆ ೧೫೦ರೂ. ನಿಗದಿ ಮಾಡಲಾಯಿತು. ಆದರೆ ಮೊದಲ ಬಾರಿಗೆ ೨೦೦೯ರಲ್ಲಿ ಶೋಭಾ ಕರಂದ್ಲಾಜೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿದ್ದಾಗ ಸದಸ್ಯರಿಗೂ ಗೌರವಧನ ನೀಡಲಾಯಿತು. ಅಧ್ಯಕ್ಷರಿಗೆ ೬೦೦ರೂ. ಉಪಾಧ್ಯಕ್ಷರಿಗೆ ೩೦೦ರೂ. ಮತ್ತು ಸದಸ್ಯರಿಗೆ ೨೫೦ರೂ. ಗೌರವಧನ ನಿಗದಿ ಮಾಡಿದರು. ಬಳಿಕ ೨೦೧೪ರಲ್ಲಿ ಎಚ್.ಕೆ.ಪಾಟೀಲರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಿದ್ದಾಗ ಅಧ್ಯಕ್ಷರಿಗೆ ೧೦೦೦ರೂ. ಉಪಾಧ್ಯಕ್ಷರಿಗೆ ೬೦೦ರೂ. ಮತ್ತು ಸದಸ್ಯರಿಗೆ ೫೦೦ರೂ. ಮಾಡಿದ್ದರು. ಬಳಿಕ ೨೦೧೭ರಲ್ಲಿ ಎಚ್.ಕೆ.ಪಾಟೀಲರ ಅವಽಯಲ್ಲಿಯೇ ಅಧ್ಯಕ್ಷರಿಗೆ ೩೦೦೦ರೂ. ಉಪಾಧ್ಯಕ್ಷರಿಗೆ ೨೦೦೦ರೂ. ಸದಸ್ಯರಿಗೆ ೧೦೦೦ರೂ.ಗೆ ಹೆಚ್ಚಳ ಮಾಡಲಾಯಿತು. ಇದಾದ ಬಳಿಕ ಈಗ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿರುವ ಸದಸ್ಯರು ಹಾಗೂ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟದ ಮೂಲಕವು ಸದಸ್ಯರ ಗೌರವಧನ ಏರಿಕೆಗೆ ಒತ್ತಡವಿತ್ತು. ಸರ್ಕಾರವು ಸಕಾರಾತ್ಮಕವಾಗಿ ಸ್ಪಂದಿಸಿ ಅಧ್ಯಕ್ಷರಿಗೆ ೬೦೦೦ರೂ. ಉಪಾಧ್ಯಕ್ಷರಿಗೆ ೪೦೦೦ರೂ. ಮತ್ತು ಸದಸ್ಯರಿಗೆ ೨೦೦೦ರೂ. ಏರಿಕೆ ಮಾಡಿದೆ. ಆ ಮೂಲಕ ಗೌರವಧನ ದ್ವಿಗುಣಗೊಂಡಂತಾಗಿದೆ.

ಅಧ್ಯಕ್ಷರು ಗ್ರಾ.ಪಂ. ಕಾರ್ಯನಿರ್ವಾಹಕ ಮುಖ್ಯಸ್ಥರಾಗಿದ್ದು, ಪ್ರತಿದಿನ ಪಂಚಾಯಿತಿಗೆ ಬರಬೇಕು ಮತ್ತು ಆಡಳಿತದ ಜವಾಬ್ದಾರಿ ಜೊತೆಗೆ ಹಣ ತೆಗೆಯುವ ಅಽಕಾರವೂ ಇರುವುದರಿಂದ ಪಂಚಾಯಿತಿ ಕಾರ್ಯದಲ್ಲಿ ಹೆಚ್ಚಿನ ಸಮಯ ವಿನಿಯೋಗಿಸಬೇಕಾಗುತ್ತದೆ. ಆದ್ದರಿಂದ ಆರ್ಥಿಕ ಭದ್ರತೆ ನೀಡುವುದು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಹಾಯಕವಾಗಿದೆ. ಇದು ಪಂಚಾಯತ್ ರಾಜ್ ಸಬಲೀಕರಣ ಹಾಗೂ ಶೇ.೫೦ರಷ್ಟು ಮಹಿಳೆಯರಿರುವುದರಿಂದ ಮಹಿಳೆಯರ ಸಬಲೀಕರಣಕ್ಕೂ ಅನುಕೂಲಕರವಾಗಿದೆ. ಸದಸ್ಯರು ಗ್ರಾಮ ಸಭೆಗಳ ಮೂಲಕ ಯೋಜನೆ ತಯಾರಿ, ಫಲಾನುಭವಿಗಳ ಆಯ್ಕೆ, ಕಾಮಗಾರಿಗಳ ಮೇಲುಸ್ತುವಾರಿ, ಗ್ರಾಮ ಪಂಚಾಯಿತಿ ಸ್ವಂತ ಸಂಪನ್ಮೂಲ ಸಂಗ್ರಹಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಭಾಗಿಯಾದಷ್ಟು ಯೋಜನೆಗಳು, ಸೇವೆಗಳು ಜನರಿಗೆ ತಲುಪಲು ಅನುಕೂಲವಾಗುವ ದೃಷ್ಟಿಯಿಂದ ಗೌರವಧನ ಹೆಚ್ಚಳ ನ್ಯಾಯೋಚಿತ ನಿರ್ಧಾರವಾಗಿದೆ.

andolanait

Recent Posts

ಮುಡಾಗೆ ಆರ್ಥಿಕ ಸಂಕಷ್ಟ; 20 ಕೋಟಿ ರೂ ನಷ್ಟ

ಮೈಸೂರು: ಬದಲಿ ನಿವೇಶನ ಹಂಚಿಕೆ, ೫೦:೫೦ ಅನುಪಾತದಲ್ಲಿ ನಿವೇಶನ ಅಕ್ರಮ ಹಂಚಿಕೆ ಹಗರಣದಿಂದಾಗಿ ಇಡೀ ರಾಜ್ಯದ ಗಮನ ಸೆಳೆದಿರುವ ಮೈಸೂರು…

51 mins ago

ಆಂದೋಲನ ಫಲಶ್ರುತಿ: ಕೊನೆಗೂ ತೆರವಾಯ್ತು ಬೃಹತ್‌ ಮರದ ಕಾಂಡ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಜುಂಬೂ ಸವಾರಿ ಸಾಗುವ ಮಾರ್ಗದಲ್ಲಿ ಕಳೆದ ಎರಡೂ ವರ್ಷಗಳಿಂದ ಬಿದ್ದಿದ್ದ ಬೃಹತ್ ಮರದ ಕಾಂಡವನ್ನು…

1 hour ago

ಜಂಬೂ ಸವಾರಿ ಮಾರ್ಗದಲ್ಲಿ ಸಣ್ಣ ಬದಲಾವಣೆ

ಮೈಸೂರು: ಈ ಬಾರಿಯ ದಸರಾ ಮಹೋತ್ಸವದ ಜಂಬೂ ಸವಾರಿಯನ್ನು ವೀಕ್ಷಿಸಲು ಆಗಮಿಸಿದ ಎಲ್ಲರಿಗೂ ಚಿನ್ನದ ಅಂಬಾರಿ ನೋಡುವ ಅವಕಾಶ ಸಿಗಬೇಕು…

1 hour ago

ಪೈಲ್ವಾನರ ಕಸರತ್ತಿಗೆ ಗರಡಿ ಮನೆಗಳು ಸಜ್ಜು

ಮೈಸೂರು: ಸಾಂಸ್ಕೃತಿಕ ರಾಜಧಾನಿ, ಅರಮನೆಗಳ ನಗರಿ ಎಂದು ಕರೆಯುವ ಮೈಸೂರನ್ನು ಗರಡಿ ಮನೆಗಳ ನಗರಿ ಎಂದೂ ಇತ್ತೀಚಿನ ವರ್ಷಗಳಲ್ಲಿ ಕರೆಯುವುದು…

1 hour ago

ತಿ.‌ ನರಸೀಪುರ: ಬೈಕ್ ಡಿಕ್ಕಿ ಚಿರತೆ ಸಾವು

ತಿ. ನರಸೀಪುರ: ತಾಲೂಕಿನ ಬನ್ನೂರು ಹೋಬಳಿಯ ಬಸವನಹಳ್ಳಿ ಗ್ರಾಮದ ಸಮೀಪದ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನ ಚಿರತೆಗೆ ಡಿಕ್ಕಿ ಹೊಡೆದ ಪರಿಣಾಮ…

9 hours ago

ತಿರುಪತಿ ಲಡ್ಡು: ತುಪ್ಪದಲ್ಲಿ ಪ್ರಾಣಿ ಕೊಬ್ಬು ಬಳಕೆ

ಅಮರಾವತಿ: ಜಗತ್‌ ಪ್ರಸಿದ್ಧ ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಕಳಪೆ ಗುಣಮಟ್ಟದ ಪದಾರ್ಥಗಳು ಪತ್ತೆಯಾಗಿದೆ ಎಂದು ತೆಲುಗು…

11 hours ago