ನಾನು ಕನ್ನಡ ವಿಶ್ವವಿದ್ಯಾನಿಲಯದ ನೌಕರಿಗೆಂದು ಹೊಸಪೇಟೆಗೆ ಬಂದಿಳಿದಾಗ ಬಸ್ ನಿಲ್ದಾಣದಲ್ಲಿ ಗೋಡೆಯ ಮೇಲೆ ಯಾರೊ ಅವಸರದಲ್ಲಿ ಬರೆದುಹೋದ ‘ಸಂಘಟನೆ ಸೇರಿರಿ, ಹೂಸನಾಡ ಕಟ್ಟಿರಿ’ ಘೋಷಣೆ ಕಣ್ಣಿಗೆ ಬಿತ್ತು. ಬಸ್ ನಿಲ್ದಾಣದ ಎದುರು ಸಾಲಾಗಿ ನಿಂತ ಸೈಕಲ್ ರಿಕ್ಷಾಗಳು; ಊರ ನರನಾಡಿಗಳಂತೆ ಹರಿಯುತ್ತಿದ್ದ ಕೆನಾಲುಗಳಲ್ಲಿ ತೇಲುವ ಬಾಳೆಕಂಬ, ಮಾವಿನಸೊಪ್ಪು, ಹಳೆಯಬಟ್ಟೆ, ಪ್ಲಾಸ್ಟಿಕ್ಬಾಟಲಿ; ದಡದಲ್ಲಿ ಬೆತ್ತಲೆ ಈಜಾಡುವ ಹುಡುಗರು, ಬಟ್ಟೆ ಸೆಣೆವ ಜನ; ರಸ್ತೆಯಲ್ಲಿ ಬೀಡುಬಿಟ್ಟ ದನ, ಇವುಗಳ ಪಟ ತೆಗೆವ ವಿದೇಶಿಯರು; ಗೊದ್ದಗಳಂತೆ ಹರಿವ ಟಿಪ್ಪರುಗಳು. ಐದು ನಿಮಿಷದಲ್ಲಿ ಉಟ್ಟ ಬಟ್ಟೆಯನ್ನು ಕೆಂಪಿಸುವ ದೂಳು. ಗುಬ್ಬಿ, ಕಾಗೆ, ಕೋತಿ, ನಾಯಿಗಳೂ ಬಣ್ಣಗೆಟ್ಟಿದ್ದವು.
ವಿಜಯನಗರ ಕಾಲದ ಹಳ್ಳಿಯಾಗಿದ್ದು ಸದ್ಯ ಹೊಸಪೇಟೆಯ ಬಡಾವಣೆಯಾಗಿರುವ ಚಿತ್ತವಾಡಿಗಿಯಲ್ಲಿ ಮನೆ ಹಿಡಿದೆವು. ಮನೆ ಮುಂದೆ ಯೂನಿಯನ್ ಜಾಕ್ ಗುರುತಿನ ಗವಾಕ್ಷಗಳಿರುವ ಬ್ರಿಟಿಷರ ಕಾಲದ ಹೈಸ್ಕೂಲು. ಮದರಾಸು ಸರ್ಕಾರದ ಗವರ್ನರ್ ಸರ್ ಜಾರ್ಜ್ ಸ್ಟಾ ನ್ಲಿ ಅದನ್ನು ಉದ್ಘಾಟಿಸಿದ್ದನು. ಮನೆಯ ಹೊಸಲಿಗೆ ಹತ್ತಿಕೊಂಡಂತಿದ್ದ ಸ್ಟೇಷನ್ ರಸ್ತೆಯಲ್ಲಿ ಅದಿರಿನ ಲಾರಿಗಳು ಎದೆಯ ಮೇಲೆ ಏರಿಬಂದಂತೆ ಹರಿಯುತ್ತಿದ್ದವು. ಲೋಬಾನದ ಹೊಗೆಯಂತೆ ದೂಳು ಮನೆಯೊಳಗೆ ನುಗ್ಗುತ್ತಿತ್ತು. ಪಕ್ಕದಲ್ಲಿದ್ದ ಸಕ್ಕರೆ ಕಾರ್ಖಾನೆ ಕಾಕಂಬಿಯ ವಾಸನೆ ಮತ್ತು ಹಾರುಬೂದಿಯನ್ನು ಉಚಿತವಾಗಿ ಹಂಚುತ್ತಿತ್ತು. ಕನ್ನಡಕ್ಕಿಂತ ಹೆಚ್ಚು ಕೇಳಿಬರುವ ತೆಲುಗು. ನೀರಿಲ್ಲದೆ ಒಣಗಿದ ಗಿಡಮರಗಳಿಂದ ಪಾಳುಸುರಿವ ಪಾರ್ಕು. ಪತ್ರಿಕೆಗಳಲ್ಲಿ ಮನೆಗಳ್ಳತನದ ನಿತ್ಯವಾರ್ತೆ. ನಿರಂಕುಶ ಮತಿಗಳಾಗಿ ಎಲ್ಲಿಬೇಕಲ್ಲಿ ಮಲಮೂತ್ರ ವಿಸರ್ಜಿಸುವ ಮಂದಿ. ಬಾನು ‘ಇದೇನೊ ಈ ಊರು ಹಿಂಗೆ’ ಎಂದು ಕಂಗಾಲಾದಳು.
ಸ್ವಲ್ಪ ತಾಳ್ಮೆಯಿಂದ ನಿಧಾನಕ್ಕೆ ಗಮನಿಸಿದೆವು. ಇನ್ನೊಂದು ಮುಖ ಕಂಡಿತು. ಉತ್ತರಕ್ಕೆ ತುಂಗಾಭದ್ರಾ ನದಿ, ಹಂಪಿ ಬೆಟ್ಟಸಾಲು ಹಾಗೂ ದಕ್ಷಿಣಕ್ಕೆ ಸೊಂಡೂರು ಬೆಟ್ಟಗಳ ನಡುವಿನ ಸುಂದರ ಕಣಿವೆಯಲ್ಲಿ ಊರಿತ್ತು. ಸುತ್ತಮುತ್ತವಿದ್ದ ಭತ್ತ–ಕಬ್ಬು–ಬಾಳೆ ಬೆಳೆವ ಗದ್ದೆ, ಹಸಿರು ತುಂಬಿದ ಗುಡ್ಡಬೆಟ್ಟ, ಬಂಡೆಗಳ ಸಂದಿನಲ್ಲಿ ಹರಿವ ತುಂಗಭದ್ರೆ, ಸಾಗರದಂತೆ ಮಲೆತುನಿಂತ ಡ್ಯಾಮು ಅಕ್ಕರೆ ಹುಟ್ಟಿಸಿದ್ದವು. ಜನ ಮಾತುಮಾತಿಗೂ ‘ಮಿಂಡ್ರಿಗೆ ಹುಟ್ಟಿದೋನೆ’ ಎಂದರೂ ಹೃದಯವಂತರು. ಊರ ಹೆಬ್ಬಾಗಿಲಲ್ಲೇ ಕಾವಲು ಗೋಪುರದಂತೆ ಜೋಳದರಾಶಿಯ ಆಕರ್ಷಕ ಬೆಟ್ಟ. ನೀರಾವರಿ ದಿಸೆಯಿಂದ ಜೋಳದ ಬೆಳೆ ಕಳೆದುಕೊಂಡು ಅನ್ನ–ಬ್ಯಾಳಿ ಪ್ರಮುಖ ಆಹಾರವಾಗಿತ್ತು. ಒಗ್ಗಾಣಿ ಮಿರ್ಚಿ ಆಕರ್ಷಕ ತಿಂಡಿಯಾಗಿತ್ತು. ಪ್ರಶಾಂತ್ ಖಾನಾವಳಿ ಎಂಬ ಪರ್ಣಕುಟಿಯಲ್ಲಿ ಶ್ರೇಷ್ಠ ರೊಟ್ಟಿಯೂಟ ಸಿಗುತ್ತಿತ್ತು. ಮಲ್ಲಿಗೆ ಬಿಟ್ಟರೆ ದೊಡ್ಡ ಹೋಟೆಲುಗಳಿರಲಿಲ್ಲ.
ಪಟ್ಟಣದ ಮಧ್ಯೆ ಬಾಣದಕೇರಿ, ಚಿತ್ರಗೇರಿ, ಮ್ಯಾಸಗೇರಿ, ಉಕ್ಕಡಗೇರಿ ಎಂಬ ಏಳು ಕೇರಿಗಳಿದ್ದು, ವಿಜಯನಗರ ಕಾಲದ ಹಳ್ಳಿಯನ್ನು ನೆನಪಿಸುತ್ತಿದ್ದವು. ಅಲ್ಲಿ ಮಾನವಮಿ ಆಚರಣೆಗಳು ವಿಶಿಷ್ಟವಾಗಿದ್ದವು. ದಸರಾದ ಪಲ್ಲಕ್ಕಿಗಳಲ್ಲಿ ಕೇರಿಯ ದೇವಿಯರನ್ನು ಹೊತ್ತು ಧರ್ಮದಗುಡ್ಡದ ಚೆನ್ನಬಸವಣ್ಣನ ಗವಿಗೆ ತರುಣರು ಓಡುತ್ತಿದ್ದರು. ಮೊಹರಮ್ಮಿನಲ್ಲಿ ಮಕ್ಕಳಿಗೆ ಹರಕೆಯ ಹುಲಿವೇಷ ಹಾಕಿಸುತ್ತಿದ್ದರು. ಮೊಹರಂ ದೇವರೂ ಭರಮಪ್ಪನೂ ಒಂದೇ ಗುಡಿಯಲ್ಲಿ ವಾಸ. ಇಲ್ಲಿನ ಮೊಹರಂ ದೇವರಿಗೆ ರಾಮನಮಲಿ ಸ್ವಾಮಿ ಎಂಬ ಹೆಸರಿತ್ತು. ಈ ಹೆಸರಿನ ಮುಸ್ಲಿಮರೂ ಇದ್ದರು. ಕೂಗಳತೆ ದೂರದಲ್ಲಿದ್ದ ಹೊಸೂರು ಬಸವನದುರ್ಗ ಸಂಕಲಾಪುರ ಹುಲಿಗಿ ಕೊಂಡನಾಯಕನಹಳ್ಳಿ, ಮಲಪನಗುಡಿ, ಗಾಳೆಮ್ಮನಗುಡಿಗಳು ವರ್ಷವಿಡೀ ಒಂದಲ್ಲಾ ಒಂದು ಉತ್ಸವದಲ್ಲಿ ತೊಡಗಿದ್ದವು. ‘ರಕ್ತರಾತ್ರಿ’ ನಾಟಕ ಹಳ್ಳಿಗಳಲ್ಲಿ ಸಾಮಾನ್ಯವಾಗಿತ್ತು. ಮರಿಯಮ್ಮನಹಳ್ಳಿ ರಂಗಭೂಮಿಯ ತವರಾಗಿತ್ತು. ರಂಗಭೂಮಿಯ ಜೋಳದರಾಶಿ ದೊಡ್ಡನಗೌಡ, ಸುಭದ್ರಮ್ಮ ಮನ್ಸೂರ, ನಾಗರತ್ನಮ್ಮ, ತೊಗಲುಬೊಂಬೆಯ ಬೆಳಗಲ್ ವೀರಣ್ಣ, ದೊಡ್ಡಭರಮಪ್ಪ, ಗೊಂದಲಿಗ ದೇವೇಂದ್ರಪ್ಪ ಮೊದಲಾದ ಕಲಾವಿದರಿದ್ದರು. ಮುದೇನೂರ ಸಂಗಣ್ಣ, ಚಂದ್ರಶೇಖರ ಶಾಸ್ತ್ರಿ, ಕುಂವೀ, ಎಸ್.ಎಸ್.ಹಿರೇಮಠ, ಬಸವರಾಜ ಮಲಶೆಟ್ಟಿ ಮೊದಲಾದ ಲೇಖಕರಿದ್ದರು. ಬ್ರಿಟಿಷರ ಕಾಲದಲ್ಲಿ ಮದರಾಸು ಪ್ರಾಂತ್ಯಕ್ಕೆ ಸೇರಿದ್ದ ಹೊಸಪೇಟೆಯಲ್ಲಿ ಸ್ವಾತಂತ್ರ್ಯ ಚಳವಳಿಯ ನೆನಪಿನಂತೆ ಗಾಂಧಿಪಾರ್ಕು, ನೆಹರೂ ಕಾಲೋನಿ, ಪಟೇಲ್ ನಗರಗಳಿದ್ದವು. ಮದರಾಸು ಸರ್ಕಾರದಲ್ಲಿ ಮಂತ್ರಿಯಾಗಿದ್ದ, ಆ ಕಾಲದಲ್ಲೇ ಅಮೆರಿಕಕ್ಕೆ ಹೋಗಿ ಪಿಎಚ್. ಡಿ. ಮಾಡಿದ್ದ ನಾಗನಗೌಡರ ನೆನಪುಗಳಿದ್ದವು. ಹಂಪಿಗೆ ಶ್ರವಣದಲ್ಲಿ ಎಲ್ಲೆಡೆಯಿಂದ ಭಜನಾ ಮಂಡಳಿಗಳು ಬರುತ್ತಿದ್ದವು. ಬಹುತೇಕ ಮುಸ್ಲಿಮರು ಸೂಫಿ–ಮೊಹರಂ ಪರಂಪರೆಗೆ ನಡೆದುಕೊಳ್ಳುವರು. ಮೊಹರಂ ಹಾಡಿಕೆಯಿತ್ತು. ಸೂಫಿಸಂತ ಮೀರಾಲಂ ಹೆಸರಿನಲ್ಲಿ ಬಸ್ಸು ಥಿಯೇಟರು ಇದ್ದವು. ಸಂತನ ಉರುಸಿಗೆ ಹಾಡಿಕೆ ಮಾಡಲು ಅಕ್ಕಲಕೋಟೆಯಿಂದ ಗಾಯಕರು ಬರುತ್ತಿದ್ದರು. ಕೆಂಪಾವಧೂತ, ಕೆಂಚಾವಧೂತ ಆಶ್ರಮಗಳಲ್ಲಿ ಅಮಾವಾಸ್ಯೆ–ಹುಣ್ಣಿಮೆಗೆ ಭಜನೆ ನಡೆಯುತ್ತಿತ್ತು. ಬಳ್ಳಾರಿ ಮೈಲಾರ ಹುಲಿಗೆ ಹಂಪಿಯಲ್ಲಿ ಈ ಸೀಮೆಯ ದೊಡ್ಡ ಜಾತ್ರೆಗಳಾಗಿದ್ದವು. ಹಂಪಿಸೀಮೆ ಸಾಂಸ್ಕೃ ತಿಕವಾಗಿ ಸಮೃದ್ಧವಾಗಿತ್ತು. ಭೌಗೋಳಿಕವಾಗಿ ಕರ್ನಾಟಕಕ್ಕೆ ಹೊಸಪೇಟೆ ಕೇಂದ್ರವಾಗಿತ್ತು. ನಿಧಾನಕ್ಕೆ ಅಳುಕಿನಿಂದಲೇ ಬೇರುಬಿಟ್ಟೆವು.
ಮುಂದೆ ನಾವು ಅನಂತಶಯನ ಗುಡಿ ಸಮೀಪ ಮನೆ ಹಿಡಿದೆವು. ಕದ ತೆಗೆದರೆ ಜಂಬುನಾಥನ ಬೆಟ್ಟ. ಆದರೆ ಮಧ್ಯಾಹ್ನ ಜ್ವಾಲಾಮುಖಿ ಆಸ್ಛೋಟಿಸಿದಂತೆ ಬ್ಲಾಸ್ಟ್ ಆಗುತ್ತಿತ್ತು. ಕಿಟಕಿಯ ಗಾಜುಗಳು ಸಶಬ್ದವಾಗಿ ಕಂಪಿಸುತ್ತಿದ್ದವು. ಕೆಂದೂಳು ಆಗಸಕ್ಕೆ ಅಡರುತ್ತಿತ್ತು. ಮನೆಯಿಂದ ನೂರು ಮಾರು ದೂರದಲ್ಲಿ ಹೊಳೆಯೋಪಾದಿಯಲ್ಲಿ ಬಲದಂಡೆ ಕಾಲುವೆ. ಅದಕ್ಕೆ ತಗುಲಿದಂತೆ ಭತ್ತ, ತೆಂಗು, ಬಾಳೆಯ ತೋಟಗದ್ದೆ. ನೀರಾವರಿ ಪ್ರದೇಶವಾದ್ದರಿಂದ ಕಾಯಿಪಲ್ಲೆ ಸೋವಿ. ಮುನೀರಾಬಾದಿನ ತೋಟಗಳಿಂದ ಸೀಬೆ, ಹಗರಿ ದಡದಿಂದ ಬರುತ್ತಿದ್ದ ಜಾಮ್, ಕೊಪ್ಪಳದ ಕಡೆಯಿಂದ ಬರುತ್ತಿದ್ದ ಸೌತೆ, ಕೂಡ್ಲಿಗಿ ಜರಿಮಲೆ ಕಾಡಿನಿಂದ ಬರುತ್ತಿದ್ದ ಸೀತಾಫಲ ಮಾರುಕಟ್ಟೆಯಲ್ಲಿ ಇಟ್ಟಾಡುತ್ತಿದ್ದವು. ಇಲ್ಲಿಗೆ ಬಂದ ಬಳಿಕವೇ ನಾವು ಅಕ್ಕರಿಕೆಪಲ್ಲೆ ಕರ್ಚಿಕಾಯಿ ತಿಂದಿದ್ದು. ಬಾನುಗೆ ಮಿರಿಮಿರಿ ಮಿಂಚುವ ಕರಿಹಸಿರು ವರ್ಣದ ರಾಯದುರ್ಗದ ಬದನೆ ಬಹಳ ಇಷ್ಟವಾಯಿತು. ಎಳೆಯ ಕುರಿಮಾಂಸ, ಕಮಲಾಪುರ ಕೆರೆಯ ತಾಜಾಮೀನು ಸಿಗುತ್ತಿತ್ತು. ಊರ ಸುತ್ತಮುತ್ತ ಆಲೆಮನೆಗಳಿಂದ ಪಾಕದ ಸುವಾಸನೆ. ಮೂರು ಮೈಲಿಯ ಕಾಳಘಟ್ಟಕ್ಕೆ ಹೋದರೆ ಹೊಳೆ. ಮೊಸಳೆಗಳಾಡುವ ಗಂಗಮ್ಮನ ಮಡು. ಹಂಪಿಗೆ ಹೋಗಿ ಮತಂಗ ಪರ್ವತ. ಅದನ್ನು ಹತ್ತಿದರೆ ಕಾಣುವ ಚಕ್ರತೀರ್ಥ, ಅಂಜನಾದ್ರಿ, ಋಷ್ಯಮೂಕ, ಸೂಳೆಬಜಾರು. ದೂಳುಬಿಸಿಲು ಜತೆ ನಂಟು ಬೆಳೆಯಿತು. ಹಂಪಿ ಉತ್ಸವವು ಪರ್ಯಾಯ ದಸರೆಯಂತಾಯಿತು. ನಿಧಾನವಾಗಿ ಬೇರುತಳೆದವು. ಆಪ್ತತೆ ಅಮಲಿನಂತೆ ಆವರಿಸತೊಡಗಿತು.
ಇದಕ್ಕೆ ಪೂರಕವಾಗಿ ಹೊಸಪೇಟೆ ಚಹರೆ ಬದಲಾಯಿತು. ಹಂಪಿ ಉತ್ಸವ, ಜಿಂದಾಲ್ ಕಾರ್ಖಾನೆ, ಕನ್ನಡ ವಿಶ್ವವಿದ್ಯಾನಿಲಯಗಳಿಗೆ ಜನ ವಲಸೆ ಬಂದರು. ವಿಲಾಸಿ ಹೋಟೆಲು ಹೆಚ್ಚಿದವು. ಪಾಳುಬಿದ್ದ ರಾಮುಲು ಪಾರ್ಕು ನಂದನವನವಾಯಿತು. ಕಾಲುವೆಗಳು ಚಂದಗೊಂಡವು. ರಸ್ತೆಗಳು ಅಗಲವಾದವು. ರೈಲ್ವೆ ಸ್ಟೇಷನ್ನಿನಲ್ಲಿ ಮೈನಿಂಗ್ ಲೋಡಿಂಗ್ ನಿಲ್ಲಿಸಿದ್ದರಿಂದ ಟಿಪ್ಪರುಗಳು ನುಗ್ಗುವುದು ನಿಂತಿತು. ದೂಳಡಗಿತು. ಬಿಡಾಡಿ ನಾಯಿ ದನಗಳ ಕಾಟ ಮುಂದುವರಿಯಿತು. ಸಕ್ಕರೆ ಕಾರ್ಖಾನೆ ನಿಂತು, ಮಸಿ–ದುರ್ವಾಸನೆಗಳಿಂದ ವಿಮೋಚನೆ ಸಿಕ್ಕಿತು. ಆದರೆ ಕಬ್ಬುಬೆಳೆವ ರೈತರಿಗೆ ಕಷ್ಟವಾಯಿತು. ಆರಂಭದಲ್ಲಿದ್ದ ಕಮ್ಯುನಿಸ್ಟ್ ಚಳವಳಿ ಕ್ಷೀಣವಾಯಿತು. ಹನುಮಮಾಲೆಯವರು ಹೆಚ್ಚಿದರು. ಊರನಡುವಿನ ಸುಂದರ ಗದ್ದೆಗಳೆಲ್ಲ ಪ್ಲಾಟುಗಳಾದವು. ನಡುವೆ ಶಾಸಕರ ಅರಮನೆ ಎದ್ದುನಿಂತಿತು. ಸಂಜೆಯಾದರೆ ಓಡಾಡಲು ಭಯವಾಗುತ್ತಿದ್ದ ಕಾಲೇಜು ರಸ್ತೆ, ಪಾಶಾದ ಶಾಪಿಂಗ್ ಮಾಲುಗಳಿಂದ ಝಗಮಗಿಸತೊಡಗಿತು. ಬಿರಿಯಾನಿ ಡೋನರ್‌ಕಬಾಬ್ ಹೋಟೆಲು ಆಗಮಿಸಿದವು. ಪಾಶ್ ಹೋಟೆಲುಗಳು ತಲೆಯೆತ್ತಿದವು. ಹೊಸಪೇಟೆ ಬಳ್ಳಾರಿಯಿಂದ ಬಿಡಿಸಿಕೊಂಡು ವಿಜಯನಗರ ಜಿಲ್ಲೆಯ ಕೇಂದ್ರವಾಯಿತು. ಬದುಕು ತುಸು ತುಟ್ಟಿಯಾಯಿತು.
ಮೂರು ದಶಕಗಳಲ್ಲಿ ಹೊಸಪೇಟೆ ಎಷ್ಟೊಂದು ಬದಲಾಯಿತು! ಆತಂಕ–ಸಂಭ್ರಮ ಹುಟ್ಟಿಸಿದ್ದ ಅಪರಿಚಿತವೆನಿಸಿದ್ದ ಹೊಸಪೇಟೆ ಈಗ ನಮ್ಮ ಪಾಲಿಗೆ ಹಳೆಪೇಟೆ. ನಿವೃತ್ತಿಯ ಬಳಿಕ ಸಾಹಿತ್ಯ ಸಂಗೀತ ರಂಗಭೂಮಿ ಚಳವಳಿ ಚಟುವಟಿಕೆಗಳಿರುವ ಧಾರವಾಡಕ್ಕೊ ಶಿವಮೊಗ್ಗಕ್ಕೊ ಮೈಸೂರಿಗೊ ಹೋಗಬೇಕೆಂದು ಮನ ತುಡಿಯುತ್ತದೆ.
ಇದರ ವಾಸನೆ ಹತ್ತಿದ ಗೆಳೆಯರು ತಮ್ಮೂರುಗಳಲ್ಲಿ ಸೈಟು ಮನೆ ಹುಡುಕಿ ಸ್ವಾಗತಿಸಿದ್ದುಂಟು. ಬಾನು ಮಾತ್ರ ‘ನಾನಿಲ್ಲೇ ಇರ್ತೀನಿ. ನೀನು ಬೇಕಾದರೆ ಹೋಗು. ವಾರಕ್ಕೊಮ್ಮೆ ಬಂದು ಹೋಗಬಹುದು. ಆಕಾಶ ಕಳಚಿ ಬೀಳುವುದಿಲ್ಲ’ ಎಂದಳು. ಶಿವಮೊಗ್ಗ ಬಿಟ್ಟು ಬರುವಾಗ ಅತ್ತವಳು, ಇದೇನೊ ಈ ಊರು ಹಿಂಗೆ ಎಂದು ಅಣಕಿಸಿದವಳು, ಇವಳೆಯೇ? ಆಕೆಗೆ ಗೊತ್ತು ಸಾಕಿದ ದನ ಹೊರಗಟ್ಟಿದರೂ ಸಂಜೆ ಮನೆಗೆ ಬರುತ್ತದೆಂದು. ಜೀವನದ ಹೆಚ್ಚು ಭಾಗ ಕಳೆವ ಊರು ನಮ್ಮದೇ ಆಗಿಬಿಡುತ್ತದೆ. ಬೆಳೆದ ಮರ ಹೊಸನೆಲದಲ್ಲಿ ನಾಟಿ ಹಾಕಿದರೆ ಚಿಗುರುವುದೂ ಕಷ್ಟ. ಬಾನುಗೆ ಹೇಳಿದೆ. ‘ಇಲ್ಲಿನ ಖಬರಸ್ಥಾನದಲ್ಲಿ ಗಿಡಮರಗಳು ಇವೆ. ಒಳ್ಳೇ ನೆರಳಿದೆ. ಮಲಗಬಹುದು. ಎಂಥ ಮಾತಾಡ್ತೀಯ?’ ಎಂದು ಎಚ್ಚರಿಸಿದಳು.
ಬೆಂಗಳೂರು: ಸಮುದಾಯವೊಂದರ ಮೀಸಲಾತಿಗಾಗಿ ರಾಜ್ಯಾದ್ಯಂತ ಹೋರಾಟ ನಡೆಸಿ ಸರ್ಕಾರಕ್ಕೆ ಸೆಡ್ಡು ಹೊಡೆದಿದ್ದ ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಬಸವ ಜಯಮೃತ್ಯುಂಜಯ…
ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ -1 ಫಲಿತಾಂಶದ ದಿನಾಂಕ ಪ್ರಕಟಣೆ ಗೊಂದಲಕ್ಕೆ ತೆರೆ ಬಿದ್ದಿದ್ದು, ಕರ್ನಾಟಕ ಪರೀಕ್ಷಾ ಮಂಡಳಿಯು ಇದೇ…
ಮೈಸೂರು: ವರುಣ ಕ್ಷೇತ್ರದ ಕೃಷಿ ಭೂಮಿಯಲ್ಲಿ ನಿಮ್ಹಾನ್ಸ್ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ರೈತರಿಂದ ಪ್ರತಿಭಟನೆ ಜೋರಾದ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಗುಡುಮಾದನಹಳ್ಳಿಯಲ್ಲಿ…
ಬೆಂಗಳೂರು: ರಾಜ್ಯ ಸಾರಿಗೆ ನೌಕರರು ಸರ್ಕಾರದ ವಿರುದ್ಧ ಸೆಡ್ಡು ಹೊಡೆದಿದ್ದು, ಮತ್ತೆ ಪ್ರತಿಭಟನೆ, ಹೋರಾಟಕ್ಕೆ ಮುಂದಾಗಿದ್ದಾರೆ. 38 ತಿಂಗಳ ವೇತನ…
ಮೈಸೂರು: ಪಿಡಬ್ಲ್ಯೂಡಿ ಅಧಿಕಾರಿ ಜಿ.ಕೆ.ರೇವನ್ ಕುಮಾರ್ ಮನೆ ಹಾಗೂ ಕಚೇರಿಗೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಬಂದರು ಮತ್ತು ಒಳನಾಡಿನ…
ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯದ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.…