ಪ್ರೊ.ಆರ್.ಎಂ.ಚಿಂತಾಮಣಿ
ನಾವು ಭಾರತೀಯರು ಅನೇಕ ಸಂದರ್ಭಗಳಲ್ಲಿ ಅನೇಕ ವಿಷಯಗಳಲ್ಲಿ ಗುರಿಯನ್ನು ಬಿಟ್ಟು ಬರಿ ಮಾರ್ಗವನ್ನೇ ಹಿಡಿದುಕೊಂಡು ಎಳೆದಾಡುತ್ತಿರುತ್ತೇವೆ. ಮುಖ್ಯ ಉದ್ದೇಶಗಳನ್ನೇ ಮರೆತು ಸಾಧನೆಗಳಿಗೆ ಜೋತುಬಿದ್ದಿರುತ್ತೇವೆ. ಮೂಲ ದೇವರನ್ನೇ ಗಮನಿಸದೆ ಪೂಜಾರಿ ಮಾಡಿದ ಅಲಂಕಾರಗಳನ್ನೇ ಹೊಗಳುತ್ತಾ ದೇವಸ್ಥಾನಗಳಲ್ಲಿ ಅಡ್ಡಬಿದ್ದು ‘ದರ್ಶನವಾಯಿತು’ ಎಂದು ಬೀಗುತ್ತೇವೆ.
2016ರ ನ.8ರಂದು ಸಂಜೆ ಎಂಟರಿಂದ ಜಾರಿಯಾದ ಅಂದು ಚಲಾವಣೆಯಲ್ಲಿದ್ದ ರೂ. 500 ಮತ್ತು ರೂ. 1000 ನೋಟುಗಳನ್ನು ಅನಾಣ್ಯೀಕರಣ ನಿರ್ಧಾರವನ್ನು ‘ಸಿಂಧು’ ಎಂದು ಕಳೆದ ವಾರ ಸರ್ವೋಚ್ಚ ನ್ಯಾಯಾಲಯದ ಐದು ಸದಸ್ಯರ ಪೀಠ 4:1 ಬಹುಮತದ ತೀರ್ಪನ್ನಿತ್ತಿದೆ. ಘಟನೋತ್ತರ ಆರು ವರ್ಷಗಳ ನಂತರ ಬಂದ ತೀರ್ಪಿನ ಉಪಯುಕ್ತತೆ ಏನು? ಫಿರ್ಯಾದುದಾರರ ಉದ್ದೇಶಗಳೇನು? ಕೇವಲ ನೋಟ್ ಬ್ಯಾನ್ ವಿಧಾನದ ಬಗ್ಗೆ ಪ್ರಶ್ನಿಸುವುದಷ್ಟೇ ಉದ್ದೇಶವಾಗಿತ್ತೇ? ಅಥವಾ ಅದರಿಂದ ನಿರ್ದಿಷ್ಟವಾಗಿ ಇಂತಹವರಿಗೆ ಇಂತಿಷ್ಟು ಮೌಲ್ಯದ ನಷ್ಟವಾಗಿದೆ, ಅದನ್ನು ಭರಿಸಬೇಕು ಎಂದೇನಾದರೂ ಕೇಳಲಾಗಿತ್ತೇ? ಮೊದಲನೇ ಮತ್ತು ಮೂರನೇ ಪ್ರಶ್ನೆಗಳಿಗೆ ಉತ್ತರ ನಕಾರಾತ್ಮಕವಾಗಿದೆ. ಎರಡನೇ ಪ್ರಶ್ನೆಗೆ ಉತ್ತರ ತೀರ್ಪಿನಲ್ಲಿಯೇ ಇದೆ. ರಿಸರ್ವ್ ಬ್ಯಾಂಕಿನ ಕೇಂದ್ರ ನಿರ್ದೇಶಕರ ಮಂಡಳಿಯ ಒಪ್ಪಿಗೆ ಪಡೆಯದೇ ರಿಸರ್ವ್ ಬ್ಯಾಂಕ್ ಕಾಯ್ದೆಯ 26ನೇ ಕಲಮಿನ ಉಲ್ಲಂಘನೆಯಾಗಿದೆ ಎನ್ನುವ ವಾದವನ್ನು ತಳ್ಳಿಹಾಕಲಾಗಿದೆ. ತೀರ್ಪಿನಲ್ಲಿ ಸ್ಪಷ್ಟವಾದ ಸರ್ಕಾರ ಮತ್ತು ರಿಸರ್ವ್ ಬ್ಯಾಂಕಿನ ನಡುವೆ ಆರು ತಿಂಗಳುಗಳಿಂದ ಚರ್ಚೆ ನಡೆಯುತ್ತಿತ್ತೆಂದು ಆಧಾರಗಳಿವೆ ಎಂದು ಹೇಳಲಾಗಿದೆ.
ಸರ್ಕಾರದ ನಿರ್ಧಾರದ ಹಕ್ಕು ಮತ್ತು ವಿಧಾನಗಳನ್ನೇ ಪ್ರಶ್ನಿಸಿದ ಈ ಪ್ರಕರಣದಿಂದ ನ್ಯಾಯಾಲಯದ ಅಮೂಲ್ಯವಾದ ಸಮಯವನ್ನೇ ಅಪವ್ಯಯ ಮಾಡಿದಂತಾಗಿದೆ. ಇದರಿಂದ ಯಾರಿಗೂ ಪ್ರಯೋಜನವಿಲ್ಲ. ಸರ್ಕಾರದ ನಿರ್ಧಾರಕ್ಕೆ ನ್ಯಾಯಾಲಯದ ಒಪ್ಪಿಗೆ ಮುದ್ರೆ ಒತ್ತಿದ್ದು ಮಾತ್ರ ಸತ್ಯ. ವಾದ ಪ್ರತಿವಾದಗಳಲ್ಲಿ ಹಣ ಮತ್ತು ಸಮಯ ಹಾಳಾದಂತಾಯಿತು.
ಪ್ರಶ್ನಿಸುವಾಗ ಯಾರಿಗಾದರೂ ಈ ನಿರ್ಧಾರದಿಂದ ನಿರ್ದಿಷ್ಟವಾಗಿ ನಷ್ಟವಾಗಿದ್ದನ್ನು ತಿಳಿಸಿ ಸರಿಪಡಿಸಬೇಕೆಂಬ ಉದ್ದೇಶವಿರಬೇಕು. ಪೂರ್ವ ನಿದರ್ಶನವಾಗಿ 1969ರ ಜುಲೈ 19ರಂದು ದೇಶದ 14 ದೊಡ್ಡ ಖಾಸಗಿ ಬ್ಯಾಂಕುಗಳನ್ನು ರಾಷ್ಟ್ರೀಕರಣ ಮಾಡಿದ್ದಾಗ ಆಗ ಇದ್ದ ಷೇರುದಾರರಿಗೆ ಸರಿಯಾದ ಪರಿಹಾರ ನೀಡಿಲ್ಲದೇ ಇರುವುದರಿಂದ ರಾಷ್ಟ್ರೀಕರಣವನ್ನು ರದ್ದು ಮಾಡಬೇಕೆಂದು ಸರ್ವೋಚ್ಚ ನ್ಯಾಯಾಲಯದಲ್ಲಿ ವ್ಯಾಜ್ಯ ಹೂಡಲಾಗಿತ್ತು. ಆಗ 1970ರಲ್ಲಿ ಸಂವಿಧಾನ ಪೀಠ ಪರಿಹಾರ ಯೋಗ್ಯವಾಗಿಲ್ಲವೆಂದು ಕಾರಣ ಕೊಟ್ಟು ರಾಷ್ಟ್ರೀಕರಣವನ್ನೇ ರದ್ದು ಮಾಡಿ ತೀರ್ಪು ಕೊಟ್ಟಿತ್ತು. ಸರ್ಕಾರ ಕೂಡಲೇ ನಿರೀಕ್ಷಿತ ಸೂಕ್ತ ಪರಿಹಾರವನ್ನು ಘೋಷಿಸಿ ಮರುದಿನವೇ ಮರು-ರಾಷ್ಟ್ರೀಕರಣದ ಸುಗ್ರೀವಾಜ್ಞೆ ಹೊರಡಿಸಿತು. ಆ ವ್ಯಾಜ್ಯಕ್ಕೆ ಅರ್ಥವಿದೆ. ಸರ್ಕಾರದ ಉದ್ದೇಶವೂ ಈಡೇರಿತು. ಈಗಿನ ತೀರ್ಪಿನಿಂದ ಯಾರೂ ಗೆದ್ದೂ ಇಲ್ಲ ಯಾರೂ ಸೋತೂ ಇಲ್ಲ. ಅನಾಣ್ಯೀಕರಣ ಮಾಡಿದ ರೀತಿ ಸರಿ ಇದೆ ಎಂದು ನ್ಯಾಯಾಲಯ ಹೇಳಿದೆ. ಹಾಗಂದ ಮಾತ್ರಕ್ಕೆ ಆಡಳಿತ ನಡೆಸುತ್ತಿರುವವರು ತಮ್ಮ ನಿರ್ಧಾರವನ್ನು ಸರಿ ಎಂದು ಸರ್ವೋಚ್ಚ ನ್ಯಾಯಾಲಯವೇ ಹೇಳಿದೆ ಎಂದು ಬೀಗುವುದಕ್ಕೆ ಕಾರಣಗಳಿಲ್ಲ. ಅಂದು ಅನಾಣ್ಯೀಕರಣದ ಆ ದಿನಗಳಲ್ಲಿ ಸಾರ್ವಜನಿಕರು ಅನುಭವಿಸಿದ ತೊಂದರೆಗಳು ಮತ್ತು ಸಾವು ನೋವುಗಳ ಬಗ್ಗೆ ಈಗ ಚರ್ಚಿಸುವುದು ಅರ್ಥವಿಲ್ಲದ್ದು, ಸಮಯದ ಅಪವ್ಯಯ.
ನೋಟ್‌ಬ್ಯಾನ್ ಉದ್ದೇಶಗಳು ಈಡೇರಿವೆಯೇ?
ಅಂದು ಚಲಾವಣೆಯಲ್ಲಿದ್ದ ನಾಣ್ಯ ಮತ್ತು ನೋಟುಗಳ ಮೌಲ್ಯದ ಶೇ.86ರಷ್ಟಿದ್ದ ರೂ. 500 ಮತ್ತು ರೂ. 1000 ನೋಟುಗಳನ್ನು ಹಿಂಪಡೆದಾಗ ಘೋಷಿಸಿದ ಪ್ರಮುಖ ಉದ್ದೇಗಳೆಂದರೆ 1. ಕಪ್ಪು ಹಣವನ್ನು ಹೊರತೆಗೆಯುವುದು ಮತ್ತು ಅದು ಬೆಳೆಯದಂತೆ ನಿಗ್ರಹಿಸುವುದು. 2. ಭಯೋತ್ಪಾದಕ ಕೃತ್ಯಗಳಿಗೆ ಹಣ ಪೂರೈಕೆಯಾಗುವುದನ್ನು ತಡೆಯುವುದು ಮತ್ತು 3. ಖೋಟಾನೋಟು ಚಲಾವಣೆಯನ್ನು ನಿಯಂತ್ರಿಸುವುದು. ಇವುಗಳೊಡನೆ ವ್ಯವಹಾರದಲ್ಲಿ ನಗದು ಹಣದ ಉಪಯೋಗವನ್ನು ಕಡಿಮೆ ಮಾಡುವುದೂ ಒಂದು ಉದ್ದೇಶವೆಂದು ಹೇಳಲಾಗಿತ್ತು. ಭ್ರಷ್ಟಾಚಾರ ತಡೆಯೂ ಒಂದು ಉದ್ದೇಶ.
ಆದರೆ ನಿಗದಿತ ಅವಽ ಮುಗಿದ ನಂತರ ರಿಸರ್ವ್ ಬ್ಯಾಂಕಿನ ಪ್ರಕಟಣೆಯಂತೆ ಬಹುತೇಕ ಎಲ್ಲ ರದ್ದಾದ ನೋಟುಗಳೂ ಅಽಕೃತವಾಗಿ ರಿಸರ್ವ್ ಬ್ಯಾಂಕಿಗೆ ತಿರುಗಿ ಬಂದಿವೆ. ಶೇ.99.7ರಷ್ಟು ಎಂದು ಹೇಳುತ್ತದೆ. ಅಂದರೆ ದೊಡ್ಡ ಪ್ರಮಾಣದಲ್ಲಿ ಈ ನೋಟುಗಳಲ್ಲಿಯೇ ಭ್ರಷ್ಟರು ಮತ್ತು ಕಾಳಧನಿಕರು ಕಪ್ಪು ಹಣವನ್ನು ಇಟ್ಟಿರುತ್ತಾರೆ ಎಂಬ ನಂಬಿಕೆ ಸುಳ್ಳಾಗಿದೆ ಅಥವಾ ಯಾವುದೋ ಮಾರ್ಗಗಳಿಂದ ಅಂಥವರು ತಮ್ಮ ಕಪ್ಪು ಹಣವನ್ನು ಹೊಸ ನೋಟುಗಳಿಗೆ ಬದಲಾಯಿಸಿ ಅಽಕೃತಗೊಳಿಸಿಕೊಂಡಿದ್ದಾರೆ. ಈ ಕ್ರಮದಿಂದ ಎಷ್ಟು ಕಪ್ಪು ಹಣ ಹೊರಬಂದಿತು ಮತ್ತು ಅದರಿಂದ ತೆರಿಗೆ ಹಾಗೂ ದಂಡ ಎಷ್ಟು ವಸೂಲಾಯಿತು ಎನ್ನುವ ಬಗ್ಗೆ ಅಽಕೃತ ವರದಿಗಳು ಇಲ್ಲದೇ ಇರುವುದರಿಂದ ಈ ಬಗ್ಗೆ ಹೆಚ್ಚು ಏನನ್ನೂ ಹೇಳಲಿಕ್ಕಾಗುವುದಿಲ್ಲ.
ಇತರ ಉದ್ದೇಶಗಳ ಸಾಧನೆಯ ಬಗ್ಗೆಯೂ ಸ್ಪಷ್ಟ ವರದಿಗಳು ಇಲ್ಲದೇ ಇರುವುದರಿಂದ ಆ ಬಗ್ಗೆ ಹೆಚ್ಚಿಗೆ ಏನನ್ನೂ ಹೇಳಲಿಕ್ಕಾಗದು. ಆದರೂ ತಪ್ಪು ದಾರಿಯಲ್ಲಿದ್ದವರಿಗೆ ಭಯ ಹುಟ್ಟಿದ್ದಂತು ನಿಜ.
‘ಫೋನ್ ಪೇ’ಗಂತೂ ನೋಟ್‌ಬ್ಯಾನ್ ಕಾರಣವಲ್ಲ
ಇಂದು ಎಲ್ಲಿ ನೋಡಿದಲ್ಲಿ ‘ಫೋನ್ ಪೇ’ ಬೋರ್ಡ್ ಕಾಣುತ್ತದೆ. ಅಂದರೆ ‘ನಿಮ್ಮ ಖರೀದಿಯ ಬೆಲೆಯನ್ನು ಅಲ್ಲೇ ನಿಂತಲ್ಲೇ -ನ್ ಪೇ(ಮೊಬೈಲ್) ಮೂಲಕ ನಿಮ್ಮ ಬ್ಯಾಂಕ್ ಖಾತೆಯಿಂದ ಮಾರಾಟಗಾರರ ಖಾತೆಗೆ ವರ್ಗಾವಣೆ ಮಾಡಬಹುದು’ ಎಂದರ್ಥ. ಎಲ್ಲ ಅಂಗಡಿ ಮತ್ತು ಮಾಲುಗಳಷ್ಟೇ ಅಲ್ಲ, ರಸ್ತೆ ಬದಿಯ ಹಣ್ಣು, ತರಕಾರಿ ಅಂಗಡಿಗಳಲ್ಲಿ ಮತ್ತು ತಳ್ಳುವ ಗಾಡಿಗಳಲ್ಲಿಯೂ ‘ಫೋನ್ ಪೇ’ ಲಭ್ಯವಿದೆ. ಇದನ್ನೇ ನಾವು ‘ಆನ್‌ಲೈನ್ ಪೇಮೆಂಟ್’ ಅಥವಾ ‘ಡಿಜಿಟಲೈಜೇಷನ್’ ಎಂದು ಕರೆಯುವುದು. ಅದು ನಮ್ಮ ಪ್ರಧಾನಿಯವರಿಗೆ ಇಷ್ಟವಾದ ಬೆಳವಣಿಗೆ. ಎಲ್ಲ ರಂಗಗಳಲ್ಲಿಯೂ ಡಿಜಿಟಲೈಜೇಷನ್ ಆಗಬೇಕು ಎನ್ನುವುದು ಅವರ ಆಶಯ. ತಂತ್ರಜ್ಞಾನ ಬಳಕೆ ಹೆಚ್ಚುಬೇಕೆನ್ನುವ ಉದ್ದೇಶ.
ಫೋನ್ ಪೇ ಉಪಯೋಗ ಎಷ್ಟು ಹೆಚ್ಚಾಗುತ್ತಿದೆ ಎಂದರೆ, ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಕ್ಯಾಂಟೀನಿನಲ್ಲಿ ರೂ. 15ರ ಒಂದು ಜ್ಯೂಸ್ ಕುಡಿದರೂ, ರೂ. 5ರ ಒಂದು ಚಾಕಲೇಟ್ ಕೊಂಡರೂ ಮೊಬೈಲ್‌ನಿಂದಲೇ ಪಾವತಿ ಮಾಡುತ್ತಾರೆ. ಇದು ಅಂಗಡಿಯವರಿಗೂ ಅನುಕೂಲ. ಅದಕ್ಕಿಂತ ಹೆಚ್ಚಾಗಿ ಸಣ್ಣ ಮತ್ತು ಅತಿಸಣ್ಣ ವ್ಯಾಪಾರಿಗಳಿಗೆ ಸಾಲ ಕೊಡುವ ಬ್ಯಾಂಕುಗಳು ಮತ್ತು ಬ್ಯಾಂಕೇತರ ಹಣಕಾಸು ಕಂಪೆನಿಗಳಿಗೆ ಹೆಚ್ಚು ಅನುಕೂಲ. ವಸೂಲಿ ಸಮಸ್ಯೆಯೇ ಇಲ್ಲ. ಹಣ ತಾನಾಗಿ ಅವರ ಖಾತೆಗೆ ಬಂದು ಬೀಳುತ್ತದೆ. ಸಮಯಕ್ಕೆ ಸರಿಯಾಗಿ ಕಂತು ಮತ್ತು ಬಡ್ಡಿ ವರ್ಗಾಯಿಸಿಕೊಳ್ಳಬಹುದು. ಗ್ರಾಹಕ ಸಂಬಂಧವೂ ಸೌಹಾರ್ದಯುತವಾಗಿರುತ್ತದೆ.
ಆದರೆ, ಅಧಿಕೃತ ತಾಣ ವರದಿಗಳ ಪ್ರಕಾರ ಡಿಜಿಟಲ್ ಪೇಮೆಂಟ್ ವ್ಯವಹಾರಗಳ ಸಂಖ್ಯೆ ದೊಡ್ಡ ಪ್ರಮಾಣದಲ್ಲಿ ಬೆಳೆದಿರುವುದು ನಿಜವಾದರೂ ಒಟ್ಟು ಹಣಕಾಸು ಮೊತ್ತ ತೀರಾ ಕಡಿಮೆ ಎಂದು ಹೇಳಲಾಗುತ್ತಿದೆ. ಇದರ ಅರ್ಥ ದೊಡ್ಡ ಮೊತ್ತಗಳ ವ್ಯವಹಾರಗಳು ಹಣ ಇಲ್ಲವೆ ಚೆಕ್ಕು(ಡ್ರಾಫ್ಟ್) ಮೂಲಕವೇ ನಡೆಯುತ್ತವೆ. ಆಸ್ತಿ ವರ್ಗಾವಣೆಯಲ್ಲಿಯೂ ಅಷ್ಟೇ. ಇವೆಲ್ಲವೂ ಡಿಜಿಟಲ್ ಆಗಬೇಕು. ತಂತ್ರಜ್ಞಾನದಲ್ಲಿಯ ಸುರಕ್ಷತೆ ಹೆಚ್ಚಬೇಕು.
ಈ ಬೆಳವಣಿಗೆ ನೋಟು ಬ್ಯಾನಿನಿಂದ ಆಯಿತು ಎಂಬ ಭಾವನೆ ಕೆಲವರಲ್ಲಿದೆ. ಆದರೆ ಅದು ಪೂರ್ಣ ಸತ್ಯವಲ್ಲ. ನೋಟ್ ಬ್ಯಾನ್ ಆದಾಗ ಹಣಕಾಸು ತಂತ್ರಜ್ಞಾನ (Fintech) ಆರಂಭದ ಹಂತದಲ್ಲಿತ್ತು. ಈಗಿನಷ್ಟು ಹೊಸ ‘ಆಪ್’ ಗಳ ಸೃಷ್ಟಿಯಾಗಿರಲಿಲ್ಲ. ನಾಲ್ಕನೇ ಮತ್ತು ಐದನೇ ತಲೆಮಾರಿನ ತರಂಗಾಂತರ ಬಂದ ಮೇಲೆ ಮತ್ತು ಮಿಲೇನಿಯಲ್ಸ್(ತರುಣ ಪೀಳಿಗೆ) ವ್ಯವಹಾರದಲ್ಲಿ ತೊಡಗಿದ ನಂತರ ಡಿಜಿಟಲ್ ಪೇಮೆಂಟ್ ಹೆಚ್ಚಾಗುತ್ತಿದೆ. ಇದು ಬೆಳವಣಿಗೆಯ ಸಂಕೇತವೆಂದರೂ ಎಚ್ಚರದಿಂದಿರುವುದು ಅಗತ್ಯ.
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…
ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…
ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…
ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟ ಪಡೆದಿದೆ. ಈ ಮೂಲಕ ಈಗ…
ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್ ಶಾಕ್ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…