ಎಡಿಟೋರಿಯಲ್

ವಾರೆನೋಟ : ನಾರ್ತ್ ಬ್ಲಾಕಿನಲ್ಲಿ ಸಿರಿತನ- ಬಡತನ ವಾಗ್ವಾದ

ಸಿರಿತನ ನಾರ್ತ್ ಬ್ಲಾಕಿಗೆ ಬಂದಾಗ ಖುದ್ದು ಫೈನಾನ್ಸ್ ಸೆಕ್ರೆಟರಿಯೇ ಹೂಗುಚ್ಛ ನೀಡಿ ಸ್ವಾಗತಿಸಿದರು. ಉಳಿದೆಲ್ಲ ಹಂತದ ಅಧಿಕಾರಿಗಳು ಕೈಕಟ್ಟಿ ವಿನಯದಿಂದ ನಿಂತಿದ್ದರು. ಸಿರಿತನ ಬೀಗುತ್ತಾ ಹೆಜ್ಜೆ ಹಾಕಿತು. ಇಡೀ ಜಗತ್ತನ್ನೇ ಗೆದ್ದ ಗತ್ತು ಇತ್ತು. ವಿತ್ತ ಸಚಿವರ ಕಚೇರಿಯೊಳಗೆ ಕಾಲಿಡುವ ಹೊತ್ತಿಗೆ ಬಾಗಿಲ ಬಳಿ ಬಡತನ ಕೈಕಟ್ಟಿಕೊಂಡು ಅತ್ಯಂತ ವಿನಯದಿಂದ ನಿಂತಿದ್ದು ಕಂಡಿತು.

ಸಿರಿತನಕ್ಕೆ ಅಚ್ಚರಿಯೋ ಅಚ್ಚರಿ. ಬಡತನ ನಾರ್ತ್ ಬ್ಲಾಕಿನವರೆಗೂ ಬರೋವಷ್ಟು ಧೈರ್ಯ ತೋರಿಸಿಬಿಟ್ಟಿದೆಯಾ ಅಂತಾ ಒಳಗೊಳಗೆ ಹೊಟ್ಟೆಯಲ್ಲಿ ಉರಿಯೂ ಆಯಿತು.
ಹೊಟ್ಟೆ ಉರಿಯನ್ನು ತೋರಿದೆ ಮುಖದ ತುಂಬ ನಗೆತಂದುಕೊಂಡ ಸಿರಿತನ ಬಡತನದತ್ತ ಒಂದು ಮುಗುಳ್ನಗೆ ಚೆಲ್ಲಿತು. ಬಡತನಕ್ಕೋ ಕಸಿವಿಸಿ. ಈ ಬಡ್ಡಿಮಗಾ ನಗ್ತಾ ಇರೋದು ನೋಡಿದ್ರೆ, ನನ್ನುನ್ನ ಕಿಂಡಲ್ ಮಾಡೋದಿಕ್ಕೆ ಇರಬೇಕು ಅಂತಾ ಅನುಮಾನವೂ ಬಂತು.
ಸಿರಿತನ ಅಧಿಕಾರಿಗಳಿಗೆ ಒಳ ಹೋಗುವಂತೆ ತಿಳಿಸಿ, ಬಡತನದ ಸಮೀಪಕ್ಕೆ ಬಂತು. ಬಡತನಕ್ಕೆ ಮತ್ತೆ ಅಚ್ಚರಿ. ಎಲಾ ಇವತ್ತುಂದಿನಾ ಸಿರಿತನಾನೇ ನನ್ನ ಹತ್ರಾ ಬರ್ತಾ ಇದೆ ಅಂದರೆ ಸುನಾಮಿ ಗಿನಾಮಿ ಬರೋ ಸೂಚನೆಯೇ ಇರಬೇಕು ಎಂದು ಬೆಚ್ಚಿತು.
‘ಯಾಕಲೇ ಬಡತನ.. ಬೆಚ್ತಾ ಇದೀಯಾ? ಭಯಾ ಆಯ್ತಾ? ಆಗಲೇ ಬೇಕು. ಭಯಾ ಆಗ್ಲಿ ಅಂತಾನೇ ಫೈನಾನ್ಸ್ ಮಿನಿಸ್ಟ್ರು ನಿನ್ನುನ್ನಾ ಹೊರಗೆ ನಿಲ್ಲಿಸಿದ್ದಾರೆ. ನೀನು ಗೇಟಿನ ಹೊರಗೆ ಇರೊಕ್ಕೆ ಲಾಯಕ್ಕು. ಆದ್ರೂ ಅದ್ಯಂಗೆ ಗೇಟಿನೊಳಗೆ ಬಂದ್ಯೆ? ಅಂತಾ ಪ್ರಶ್ನಿಸಿತು.
ಬಡ್ಡಿಮಗಂದು ಒಳಗೊಳಗೆ ಎಷ್ಟೆಲ್ಲಾ ಕೋಪ, ದ್ವೇಷ ಇಟ್ಕೊಂಡಿರೋ ಸಿರಿತನ ಅದ್ಯಾಗೆ ಅಷ್ಟು ಸಲೀಸಾಗಿ ನಗೆ ಚೆಲ್ತಾ ಇದ್ದಾನೆ ಅಂತಾ ಬಡತನಕ್ಕೆ ಕೋಪ ಬಂತು. ಆದರೂ ಸಮಾಧಾನ ಮಾಡಿಕೊಂಡಿತು. ನಾವು ಕೋಪ ಹೊರ ಹಾಕಿ ನಮ್ಮ ಬಡತನ ತೋರಿಸಿಕೊಂಡು ಬಿಡ್ತೀವಿ. ಸಿರಿವಂತರು ಕೋಪಾ ತಾಪಾ ನುಂಗಿ ನಗೆ ಚೆಲ್ಲಿ ಶ್ರೀಮಂತಿಕೆ ತೋರಿಸಿಕೊಳ್ತಾರೆ.. ನಾವೂ ಸುಮ್ ಸುಮ್ಮನೇ ನಗೋದು, ಮುಖವಾಡ ಹಾಕೋದು ಕಲೀಬೇಕು ಅಂತಾ ಬಡತನ ಅಂದುಕೊಂಡಿತು.
‘ಏನಪ್ಪಾ ಸಿರಿತನ, ನಾರ್ತ್ ಬ್ಲಾಕಿಗೆ ಬಂದಿದ್ದೀಯಾ? ನೀನು ಇಲ್ಲಿಗೆ ಬಂದು ಹೋದಾಗಲೆಲ್ಲ, ನಮ್ಮ ತಲೆ ಮೇಲೆ ಹೊಸ ಹೊಸಾ ಟ್ಯಾಕ್ಸು ಬೀಳ್ತಾನೆ ಇದೆ. ನಿನ್ನ ಶ್ರೀಮಂತಿಕೆ ಹೆಚ್ಚಾಗ್ತಾನೆ ಇದೆ. ನಮ್ ಬಡತನಾನೂ ಹೆಚ್ಚುತ್ತಾ ಇದೆ. ಹೀಂಗೆ ಆದ್ರೆ ದಂಗೆ ಏಳಬೇಕಾಗುತ್ತೆ’ ಅಂತಾ ಬಡತನ ಮೆಲುವಾಗಿಯೇ ಹೇಳಿತು.
‘ಲೇ ಬಡತನ.. ಒಂದು ವಿಷಯಾ ತಿಳ್ಕೊ ‘ಬಡವಾ ನೀನ್ ಮಡಗಿದಂಗೆ ಇರು’ ಅನ್ನೋ ಗಾದೆ ಇದೆಯಲ್ವಾ.. ಆ ಗಾದೆ ಅರ್ಥಮಾಡ್ಕೊಂಡು ತೆಪ್ಪಗೆ ಇರು. ಹೀಗೆ ದಂಗೆ ಪಂಗೆ ಅಂತೆಲ್ಲಾ ಆವಾಜು ಹಾಕಿದರೆ, ಏನೂ ಆಗೊಲ್ಲ. ಹೀಗೆ ‘ಮನಿ’ಯಿಲ್ಲದೇ ಪುಕ್ಕಟ್ಟೆ ಆವಾಜು ಹಾಕಿದವರ ದನಿಯೇ ಇಲ್ಲದಂತಾಗಿ ಹೋಗಿದೆ.. ನಿನ್ನ ದನಿನ ದಮನ ಮಾಡೋದು ನಂಗೇನು ಕಷ್ಟ ಇಲ್ಲ. ಸಿರಿತನಕ್ಕೆ ಒಂದಷ್ಟು ಗೌರವ, ಬೆಲೆ ಕೊಡೋದು ಕಲಿ..’ ಎಂದು ನಗುತ್ತಲೇ ಹೇಳಿತು.
‘ನಿನ್ನ ನಗೆಯ ಹಿಂದಿನ ಕ್ರೌರ್ಯ ನಂಗೆ ಅರ್ಥ ಆಗುತ್ತೆ ನಂಗೂ ಒಂದ್ ಕಾಲ ಬರುತ್ತೆ. ನನ್ನತ್ರ ‘ಮನಿ’ ಇಲ್ಲ ಅಂದರೆ ನನ್ನ ದನಿಗೆ ಗೌರವ ಇಲ್ಲ ಅಂತಾ ಅಲ್ಲ.. ಸಿರಿವಂತನಾಗಿ ನಿಂಗೆ ಬೆಲೆ ಇರಬಹುದು. ಆದರೆ ಗೌರವ ಇಲ್ಲ. ಬೆಲೆಗೂ ಗೌರವಕ್ಕೂ ಇರೋ ವ್ಯತ್ಯಾಸ ತಿಳ್ಕೊಂಡು ಮಾತನಾಡು’ ಎಂದು ಬಡತನ ಮೆಲುವಾಗಿಯೇ ಆವಾಜು ಹಾಕಿತು.
‘ನೋಡು ಬೆಲೆ ಇರೋದ್ರಿಂದಾನೆ ಇವತ್ತುಂದಿನಾ ನಾನು ನನ್ನ ದೇಶಾನಾ ವಿಶ್ವದಲ್ಲೇ ಐದನೇ ಅತಿದೊಡ್ಡ ಆರ್ಥಿಕತೆ ರಾಷ್ಟ್ರಗಳ ಪಟ್ಟಿಗೆ ತಗೊಂಡು ಹೋಗಿದ್ದೀನಿ.. ಯುನೈಟೆಡ್ ಕಿಂಗ್‌ಡಮ್ ಅನ್ನೇ ಹಿಂದಿಕ್ಕಿ ಮುನ್ನಡೆದಿದ್ದೀನಿ. ಇದೆಲ್ಲಾ ನನ್ನಿಂದಾನೇ ಆಗಿರೋದು.. ಅರ್ಥ ಮಾಡ್ಕೊ’ ಅಂದಿತು.
‘ನಂಗೆ ಅರ್ಥ ಆಗಿದೆಯಪ್ಪಾ.. ನಂಗೆ ಅರ್ಥ ಆಗೋದು ಆಳುವವರಿಗೆ ಬೇಕಾಗಿಲ್ಲ. ನೀನು ದೇಶಾನಾ ಐದನೇ ದೊಡ್ಡ ಆರ್ಥಿಕ ರಾಷ್ಟ್ರದ ಮಟ್ಟಕ್ಕೆ ತಗೊಂಡೊಗಿದ್ದೀಯಾ ನಿಜಾ. ಆದ್ರೆ, ನೀನು ಪಕ್ಷಪಾತಿ, ವ್ಯಾಪಾರಿಗಳು, ರಾಜಕಾರಣಿಗಳು, ಉದ್ಯಮಿಗಳ ಜತೆಗೇ ಇರ್ತೀಯಾ.. ಇವತ್ತುಂದಿನಾ ತಲಾದಾಯದ ಲೆಕ್ಕದಲ್ಲಿ ೧೪೨ನೇ ಸ್ಥಾನದಲ್ಲಿ ದೇಶಾ ಇದೆ. ಅಂದರೆ, ನಿನ್ನ ಸಿರಿತನ, ಸಂಪತ್ತು ಬರೀ ಬೊಗಳೆ. ಕೆಲವೇ ಮಂದಿ ಶ್ರೀಮಂತರ ಅಂಗಳದಲ್ಲಿ ಬಿದ್ದ ಮತಿಹೀನ ನೀನು. ೧೪೦ ಕೋಟಿ ಜನರಿರುವ ದೇಶ ಇದು. ನೀನು ಬರೀ ನೂರಿನ್ನೂರು ಜನರ ಮನೆಯಲ್ಲಿ, ಬ್ಯಾಂಕಿನಲ್ಲಿ ಸಿಕ್ಕಿಬಿದ್ದು ಪುಕ್ಕಟ್ಟೆ ಪ್ರತಿಷ್ಠೆ ತೋರಿಸ್ತಾ ಇದ್ದೀಯಾ.. ತಾಕತ್ತಿದ್ದರೆ, ೧೪೦ ಕೋಟಿ ಜನರ ಬಳಿಗೂ ಬಂದು ನೋಡು.. ನಿನ್ನ ಸಾಮರ್ಥ್ಯ ಏನು ಅಂತಾ ಗೊತ್ತಾಗುತ್ತೆ. ಸುಮ್ಮನೆ ಬ್ರಿಟಿಷ್‌ರನ್ನು ಮುಂದಿಟ್ಟುಕೊಂಡು ನಿನ್ನ ಪ್ರತಿಷ್ಠೆ ಹೆಚ್ಚಿಸಿಕೊಳ್ಳಬೇಡ. ಬ್ರಿಟಿಷರ ತಲಾದಾಯ ೩೮ ಲಕ್ಷ ರೂಪಾಯಿ. ನಮ್ಮ ದೇಶದ್ದು ಇನ್ನೂ ೨ ಲಕ್ಷ ರೂಪಾಯಿ ಕೂಡ ಮುಟ್ಟಿಲ್ಲ ಗೊತ್ತಾ’ ಎಂದು ಬಡತನ ಲೆಕ್ಕಾಚಾರದ ಮೂಲಕ ಆವಾಜು ಹಾಕಿತು. ಬಡತನಕ್ಕೆ ಎಲ್ಲಾ ಗೊತ್ತಾಗಿ ಹೋಗಿದೆ. ಅವನ ಮುಂದೆ ಇದ್ರೆ
ನಾರ್ತ್‌ಬ್ಲಾಕಿನಲ್ಲಿ ನನ್ನ ಮಾನ ಹರಾಜು ಹಾಕಬಹುದು ಎಂದು ಹೆದರಿದ ಸಿರಿತನ ಸೀದಾ ವಿತ್ತ ಸಚಿವರ ಕಚೇರಿ ಒಳಕ್ಕೆ ನುಗ್ಗಿತು.
ಕೆಲವೇ ಹೊತ್ತಿನಲ್ಲಿ ನ್ಯೂಸ್ ಚಾನಲ್ಲುಗಳಲ್ಲಿ, ವಿತ್ತ ಸಚಿವರು ಹೊಸ ತೆರಿಗೆ ಹೇರುವ ಪ್ರಸ್ತಾಪ ಇದೆ ಎಂಬ ಬ್ರೇಕಿಂಗ್ ನ್ಯೂಸ್ ಬಂತು!
-‘ಅಷ್ಟಾವಕ್ರಾ’

andolanait

Share
Published by
andolanait

Recent Posts

ಮುಡಾ ಕಚೇರಿಯ ಮೇಲೆ ಇಡಿ ದಾಳಿ ದುರುದ್ದೇಶಪೂರ್ವಕ: ಮಾಜಿ ಸಂಸದ ಡಿ.ಕೆ.ಸುರೇಶ್‌

ಬೆಂಗಳೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಇಂದು (ಅಕ್ಟೋಬರ್‌.18) ಮೂರು ಕಡೆಗಳಲ್ಲಿ ದಾಳಿ ನಡೆಸಿದ್ದು, ಈ ದಾಳಿಯು ಸಂಪೂರ್ಣವಾಗಿ…

1 min ago

ಮುಡಾ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು: ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು: ಮುಡಾ ಕೇಸ್‌ ಮುಚ್ಚಿ ಹಾಕುವಲ್ಲಿ ಸರ್ಕಾರಕ್ಕೆ ಲೋಕಾಯುಕ್ತ ಸಹಾಯ ಮಾಡುತ್ತದೆ ಎಂಬ ಶಂಕೆ ಇದೆ. ಹೀಗಾಗಿ ಮುಡಾ ಪ್ರಕರಣವನ್ನು…

12 mins ago

ಭವಾನಿ ರೇವಣ್ಣಗೆ ಬಿಗ್‌ ರಿಲೀಫ್:‌ ಹೈಕೋರ್ಟ್‌ ಆದೇಶ ಎತ್ತಿ ಹಿಡಿದ ಸುಪ್ರೀಂ ಕೋರ್ಟ್‌

ಹೊಸದಿಲ್ಲಿ: ಆತ್ಯಾಚಾರ ಸಂತ್ರಸ್ತೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಭವಾನಿ ರೇವಣ್ಣಗೆ ಹೈಕೋರ್ಟ್‌ನಿಂದ ಜಾಮೀನು ಮಂಜೂರು ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಎಸ್‌ಐಟಿ…

30 mins ago

ಮುಡಾ ಪ್ರಕರಣ: ಮುಡಾ ಕಚೇರಿಯ ಮೇಲೆ ಇ.ಡಿ ದಾಳಿ

ಮೈಸೂರು: ಮುಡಾದಲ್ಲಿ ಹಗರಣ ನಡೆದಿದೆ ಎಂದು ಆರ್‌ಐಟಿ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಇ.ಡಿ.ಗೆ ದೂರು ನೀಡಿದ್ದರು. ಈ ದೂರಿನ ಆಧಾರದ…

53 mins ago

ನಟ ದರ್ಶನ್‌ಗೆ ಮತ್ತೊಂದು ಸಂಕಷ್ಟ: ಹಳೆ ಪ್ರಕರಣಕ್ಕೆ ಹೊಸ ಎನ್‌ಸಿಆರ್‌

ಬೆಂಗಳೂರು: ನಟ ದರ್ಶನ್‌ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ಮಧ್ಯೆ ಹಳೆ…

2 hours ago

ಓದುಗರ ಪತ್ರ: ಮಹಿಳಾ ಅಧಿಕಾರಿಗಳಿಗೆ ಅಭಿನಂದನೆಗಳು

ಚಾಮರಾಜನಗರದಲ್ಲಿ ಅಕ್ಟೋಬರ್ ೭ರಿಂದ ಅ. ೯ರವರೆಗೆ ಆಯೋಜಿಸಿದ್ದ ‘ಚೆಲುವ ಚಾಮರಾಜನಗರ ದಸರಾ’ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ ಆಯೋಜಿಸಿದ್ದರಿಂದ…

3 hours ago