ಎಡಿಟೋರಿಯಲ್

ಬ್ಯಾಂಕಿಂಗ್ ಕ್ಷೇತ್ರದ ಸಂಶೋಧನೆಗೆ ಸಂದ ನೋಬೆಲ್

ಡಾ ಬೆನ್ ಶಾಲೋಮ್ ಬರ್ನಾಂಕೆ, ಪ್ರೊ. ಡಗ್ಲಸ್ ವಾರೆನ್ ಡೈಮಂಡ್, ಫಿಲಿಪ್ ಎಚ್ ಡಿವಿಗ್- ಈ ತ್ರಿಮೂರ್ತಿಗಳಿಗೆ ಅತ್ಯುನ್ನತ ಪ್ರಶಸ್ತಿ 

ಟಿ.ಎಸ್. ವೇಣುಗೋಪಾಲ್

೨೦೦೮ರಲ್ಲಿ ಜಾಗತಿಕ ಹಣಕಾಸು ಬಿಕ್ಕಟ್ಟು ಕಾಣಿಸಿಕೊಂಡಾಗ, ಅರ್ಥಶಾಸ್ತ್ರಜ್ಞರು ಬ್ಯಾಂಕಿಂಗ್ ವ್ಯವಸ್ಥೆಯನ್ನು ಕಡೆಗಣಿಸಿದ್ದಾರೆ ಅನ್ನುವ ಟೀಕೆ ಇತ್ತು. ಈ ವರ್ಷ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸಂಶೋಧನೆ ನಡೆಸಿದ ವಾಷಿಂಗ್ಟನ್ ಬ್ರೂಕಿಂಗ್ಸ್ ಸಂಸ್ಥೆಯಲ್ಲಿ ಕೆಲಸಮಾಡುತ್ತಿರುವ ಡಾ ಬೆನ್ ಶಾಲೋಮ್ ಬರ್ನಾಂಕೆ, ಶಿಕಾಗೊ ವಿಶ್ವವಿದ್ಯಾನಿಲಯದ ಪ್ರೊ. ಡಗ್ಲಸ್ ವಾರೆನ್ ಡೈಮಂಡ್, ಸೆಂಟ್ ಲೂಯಿಸ್ನ ವಾಷಿಂಗ್ಟನ್ ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರದ ಪ್ರಾಧ್ಯಾಪಕರಾದ ಫಿಲಿಪ್ ಎಚ್ ಡಿವಿಗ್ ಇವರಿಗೆ ನೋಬೆಲ್ ಪ್ರಶಸ್ತಿಯನ್ನು ಕೊಡಲಾಗಿದೆ.

ಸಾಮಾನ್ಯವಾಗಿ ಬ್ಯಾಂಕುಗಳನ್ನು ಠೇವಣಿದಾರರು ಹಾಗೂ ಸಾಲ ಪಡೆಯುವವರ ನಡುವಿನ ತಟಸ್ಥ ಮಧ್ಯವರ್ತಿಗಳಾಗಿ ನೋಡುವುದು ವಾಡಿಕೆ. ಅದಕ್ಕೆ ವ್ಯತಿರಿಕ್ತವಾಗಿ ಈ ಮೂವರು ಸಂಶೋಧಕರು ಬ್ಯಾಂಕುಗಳನ್ನು ಆರ್ಥಿಕತೆಗೆ ಪ್ರಮುಖ ಸೇವೆಯನ್ನು ಒದಗಿಸುತ್ತಿರುವ ಸಂಸ್ಥೆಗಳಾಗಿ ನೋಡುತ್ತಾರೆ. ಬೆನ್ ಬರ್ನಾಂಕೆ ೧೯೮೩ರಲ್ಲಿ ಬರೆದ ಲೇಖನಕ್ಕೆ ಈಗ ಪ್ರಶಸ್ತಿ ಸಿಕ್ಕಿದೆ. ಅಲ್ಲಿ ಅವರು ೧೯೩೦ರ ಮಹಾನ್ ಆರ್ಥಿಕ ಬಿಕ್ಕಟ್ಟನ್ನು ವಿಶ್ಲೇಷಿಸಿದ್ದಾರೆ. ಬರ್ನಾಂಕೆ ಆಗಿನ ಬ್ಯಾಂಕುಗಳ ವೈಫಲ್ಯವನ್ನು ಪರಿಶೀಲಿಸುತ್ತಾ ೧೯೩೦ರ ಬಿಕ್ಕಟ್ಟಿಗೆ ಬ್ಯಾಂಕುಗಳ ವೈಫಲ್ಯವೇ ಮುಖ್ಯ ಕಾರಣ ಎನ್ನುತ್ತಾರೆ. ಅವರ ಸಂಶೋಧನೆ ಪ್ರಕಟವಾಗುವವರೆಗೆ ಆರ್ಥಿಕ ಬಿಕ್ಕಟ್ಟಿನಿಂದಾಗಿ ಬ್ಯಾಂಕಿನ ವ್ಯವಸ್ಥೆಯಲ್ಲಿ ಬಿಕ್ಕಟ್ಟು ಸೃಷ್ಟಿಯಾಗಿತ್ತು ಎಂದು ಭಾವಿಸಲಾಗಿತ್ತು. ಆದರೆ ಬರ್ನಾಂಕೆಯವರು ತಮ್ಮ ಅಧ್ಯಯನದ ಮೂಲಕ ಬ್ಯಾಂಕ್ ಬಿಕ್ಕಟ್ಟೇ ಆರ್ಥಿಕ ಕುಸಿತಕ್ಕೆ ಕಾರಣ ಎಂದು ಸಾಧಾರವಾಗಿ ತೋರಿಸಿದರು. ಅಲ್ಲಿಯವರೆಗೆ ಜನ ಭೀಕರ ಬಿಕ್ಕಟ್ಟಿನಲ್ಲಿ ಬ್ಯಾಂಕಿನ ಪಾತ್ರ ಅಷ್ಟು ಮುಖ್ಯವಾಗಿತ್ತು ಎಂದು ಯೋಚಿಸಿರಲಿಲ್ಲ.

೧೯೨೯ರಲ್ಲಿ ಒಂದು ಸಾಧಾರಣ ಆರ್ಥಿಕ ಹಿಂಜರಿತವಾಗಿ ಪ್ರಾರಂಭವಾದದ್ದು ೧೯೩೦ರಲ್ಲಿ ಒಂದು ದೊಡ್ಡ ಬಿಕ್ಕಟ್ಟಾಗಿ ರೂಪಪಡೆಯಿತು. ಬ್ಯಾಂಕುಗಳಿಗೆ ಜನರ ಉಳಿತಾಯವನ್ನು ಉತ್ಪಾದನಾ ಹೂಡಿಕೆಯಾಗಿ ಪರಿವರ್ತಿಸುವುದಕ್ಕೆ ಸಾಧ್ಯವಾಗಿರಲಿಲ್ಲ. ಉದ್ದಿಮೆದಾರರಿಗೆ ಬಂಡವಾಳ ಹೂಡುವುದಕ್ಕೆ ಹಣ ಇರಲಿಲ್ಲ. ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ವಿಶ್ವಾಸ ಕಳೆದುಕೊಂಡ ಜನ ಹಣ ಹಿಂತೆಗೆದುಕೊಳ್ಳಲು ಬ್ಯಾಂಕುಗಳಿಗೆ ಮುಗಿಬಿದ್ದರು. ಬ್ಯಾಂಕುಗಳು ಇಕ್ಕಟ್ಟಿಗೆ ಸಿಲುಕಿದವು. ಸಾಲ ಕೊಡಲು ಹಿಂದೇಟು ಹಾಕಿದವು. ಎಷ್ಟೋ ಬ್ಯಾಂಕುಗಳು ದಿವಾಳಿಯಾದವು. ಜಗತ್ತು ಕಂಡರಿಯದಿದ್ದ ಭೀಕರ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಯಿತು. ಸಾಮಾನ್ಯವಾಗಿ ಬ್ಯಾಂಕಿಂಗ್ ವ್ಯವಸ್ಥೆಯ ಬಿಕ್ಕಟ್ಟಿನ ಪರಿಣಾಮ ಭೀಕರವಾಗಿರುತ್ತದೆ. ಅಷ್ಟೇ ಅಲ್ಲ ದೀರ್ಘಕಾಲೀನವೂ ಆಗಿರುತ್ತದೆ. ಈ ಬಗ್ಗೆ ಬರ್ನಾಂಕೆ ಸಂಶೋಧನೆ ನಮಗೆ ಎಚ್ಚರಿಕೆ ನೀಡುತ್ತದೆ.

ಬರ್ನಾಂಕೆ ೨೦೦೮-೨೦೦೯ರಲ್ಲಿ ಅಮೇರಿಕೆಯ ಫೆಡರಲ್ ಬ್ಯಾಂಕಿನ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು. ಆಗ ಅವರಿಗೆ ತಮ್ಮ ಈ ಸಂಶೋಧನೆಯನ್ನು ನೀತಿಯನ್ನಾಗಿ ರೂಪಿಸುವ ಅವಕಾಶ ಸಿಕ್ಕಿತು. ಅದರಿಂದಾಗಿ ಆಗಿನ ಬಿಕ್ಕಟ್ಟು ತೀವ್ರವಾಗಲಿಲ್ಲ, ಇದು ಅವರ ಸಂಶೋಧನೆಯ ಯಶಸ್ಸಿಗೆ ಸಮರ್ಥನೆ ಎನ್ನಲಾಗಿದೆ. ಹಾಗೆಯೇ ೨೦೨೦ರ ಕೋವಿಡ್ ಪಿಡುಗಿನ ಸಂದರ್ಭದಲ್ಲೂ ಜಾಗತಿಕ ಹಣಕಾಸು ಬಿಕ್ಕಟ್ಟನ್ನು ತಪ್ಪಿಸುವಲ್ಲಿ ಅವರ ಸಂಶೋಧನೆ ನೆರವಾಯಿತು ಎನ್ನಲಾಗಿದೆ. ಈ ಎಲ್ಲಾ ಕಾರಣಗಳಿಂದ ಅವರ ಸಂಶೋಧನೆಗೆ ಈ ಬಾರಿಯ ನೋಬೆಲ್ ಬಹುಮಾನ ಲಭಿಸಿದೆ.

ಇನ್ನು ಉಳಿದ ಇಬ್ಬರು ಪ್ರಶಸ್ತಿ ವಿಜೇತರ ಕೊಡುಗೆಯನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಬ್ಯಾಂಕು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಗಮನಿಸಬೇಕು. ಬ್ಯಾಂಕಿನೊಂದಿಗೆ ನಾವು ಒಂದಲ್ಲ ಒಂದು ರೀತಿ ಸಂಬಂಧ ಇಟ್ಟುಕೊಂಡಿದ್ದೇವೆ. ನಮ್ಮ ಹಣವನ್ನು ಬ್ಯಾಂಕಿನಲ್ಲಿ ಇಡುತ್ತೇವೆ. ಬೇಕಾದಾಗ ಅದನ್ನು ಹಿಂತೆಗೆದುಕೊಳ್ಳುತ್ತಿರುತ್ತೇವೆ. ಕಾರ್ಡುಗಳನ್ನೋ ಅಥವಾ ಇನ್ಯಾವುದೋ ಮಾಧ್ಯಮದ ಮೂಲಕ ಹಣ ಪಾವತಿ ಮಾಡುತ್ತಿರುತ್ತೇವೆ. ಕೆಲವೊಮ್ಮೆ ಮನೆಯನ್ನೋ, ಇನ್ನೇನನ್ನೋ ಕೊಳ್ಳುವುದಕ್ಕೆ ದೊಡ್ಡ ಪ್ರಮಾಣದ ಸಾಲವನ್ನೂ ಮಾಡುತ್ತಿರುತ್ತೇವೆ. ಹಾಗೆಯೇ ಉದ್ದಿಮೆಗಳೂ ಬ್ಯಾಂಕಿನ ನೆರವು ಪಡೆದುಕೊಳ್ಳುತ್ತಿರುತ್ತವೆ. ಅವುಗಳಿಗೆ ಹೂಡಿಕೆಗೆ ಹಣಬೇಕಾಗುತ್ತದೆ. ಈ ಎಲ್ಲಾ ವ್ಯವಹಾರಗಳು ಬ್ಯಾಂಕಿನ ಮೂಲಕ ನಡೆಯುತ್ತಿರುತ್ತವೆ. ಎಲ್ಲಾ ಸರಿಯಾಗಿ ನಡೆದರೆ ಒಳ್ಳೆಯದು. ಎಲ್ಲಾದರು ಎಡವಟ್ಟಾದರೆ ಇಡೀ ಬ್ಯಾಂಕಿಂಗ್ ವ್ಯವಸ್ಥೆಯೇ ಕುಸಿಯಬಹುದು. ಹಣಕಾಸು ಬಿಕ್ಕಟ್ಟು ಸೃಷ್ಟಿಯಾಗಬಹುದು. ಇದನ್ನು ೧೯೩೦ರ ಬಿಕ್ಕಟ್ಟಿನ ಅಧ್ಯಯನದ ಮೂಲಕ ಬರ್ನಾಂಕಿ ತೋರಿಸಿದ್ದಾರೆ.

ಇಷ್ಟೊಂದು ಸಮಸ್ಯೆ ಇದೆಯೆಂದಾದರೆ ಬ್ಯಾಂಕುಗಳಿಲ್ಲದೆ ವ್ಯವಹಾರ ನಡೆಸಬಹುದಲ್ಲವೆ? ಬ್ಯಾಂಕುಗಳು ಏಕೆ ಬೇಕು? ಡೈಮಂಡ್ ಹಾಗೂ ಡಿವಿಗ್ ಅವರು ಸರಳ ಮಾಡೆಲ್ ಮೂಲಕ ಬ್ಯಾಂಕಿನ ಪ್ರಾಮುಖ್ಯತೆ ಹಾಗು ಅವುಗಳ ಆಂತರಿಕ ಸಮಸ್ಯೆಗಳನ್ನು, ಅದಕ್ಕೆ ಪರಿಹಾರವನ್ನು ವಿವರಿಸಲು ಪ್ರಯತ್ನಿಸಿದ್ದಾರೆ. ನಾವು ನಮ್ಮ ಉಳಿತಾಯವನ್ನು ಬ್ಯಾಂಕಿನಲ್ಲಿ ಠೇವಣಿಯಾಗಿ ಇಡುತ್ತೇವೆ. ಅದು ಬ್ಯಾಂಕಿನ ಅಲ್ಪ ಕಾಲೀನ ಸ್ವತ್ತಾಗಿರುತ್ತದೆ. ಅಂದರೆ ನಮಗೆ ಬೇಕೆಂದಾಗ ಹಿಂತೆಗೆದುಕೊಳ್ಳುವುದಕ್ಕೆ ಅವಕಾಶವಿರುತ್ತದೆ. ಹಾಗೆ ನಮ್ಮಂತಹವರ ಉಳಿತಾಯವನ್ನು ಕಲೆಹಾಕಿ ಉದ್ದಿಮೆಗಳಿಗೆ, ಹಾಗೂ ವ್ಯಕ್ತಿಗಳಿಗೆ ಸಾಲ ನೀಡುತ್ತವೆ. ಅವು ಬ್ಯಾಂಕುಗಳ ಧೀರ್ಘಕಾಲೀನ ಸ್ವತ್ತಾಗುತ್ತದೆ. ಅಂದರೆ ಹಾಗೆ ಸಾಲ ತೆಗೆದುಕೊಂಡವರಿಗೆ ತಕ್ಷಣ ಹಿಂತಿರುಗಿಸಬೇಕಾದ ಅವಶ್ಯಕತೆ ಇರುವುದಿಲ್ಲ. ಸಾಕಾಷ್ಟು ಕಾಲಾವಕಾಶ ಇರುತ್ತದೆ. ಬ್ಯಾಂಕ್ ಹಾಗೂ ಅಂತಹ ಸಂಸ್ಥೆಗಳು ಠೇವಣಿಯಂತಹ ಅಲ್ಪಕಾಲೀನ ಸ್ವತ್ತುಗಳನ್ನು ಸಾಲಗಳಂತಹ ದೀರ್ಘಕಾಲಿನ ಸ್ವತ್ತುಗಳನ್ನಾಗಿ ಪರಿವರ್ತಿಸುತ್ತವೆ. ಈ ಪ್ರಕ್ರಿಯೆಯನ್ನು ಡೈಮಂಡ್ ಹಾಗೂ ಡಿವಿಗ್ ಅವರು ವಿವರಿಸಿದ್ದಾರೆ. ಹೀಗೆ ಅಲ್ಪಕಾಲೀನ ಠೇವಣಿಗಳನ್ನು ದೀರ್ಘಕಾಲೀನ ಸಾಲಗಳನ್ನಾಗಿ ಪರಿವರ್ತಿಸುವುದನ್ನು ಮೆಚುರಿಟಿ ಪರಿವರ್ತನೆ ಅಂತ ಕರೆಯುತ್ತಾರೆ. ಇದು ಬ್ಯಾಂಕಿನ ತುಂಬಾ ದೊಡ್ಡ ಲಾಭ.

ಬ್ಯಾಂಕ್ ಇಲ್ಲದೇ ಹೋದರೆ ಆರ್ಥಿಕತೆ ನಡೆಯುವುದಿಲ್ಲ. ಅವು ಸಂಕಷ್ಟದಲ್ಲಿದ್ದಾಗಲೂ ಆರ್ಥಿಕತೆ ನಡೆಯುವುದಿಲ್ಲ. ಉದಾಹರಣೆಗೆ ಬ್ಯಾಂಕಿನಲ್ಲಿ ಸಮಸ್ಯೆಯಿದೆ ಅಂತ ಸುದ್ದಿ ಹರಡಿದರೆ, ಜನ ತಮ್ಮ ಹಣವನ್ನು ಹಿಂತೆಗೆದುಕೊಳ್ಳಲು ಬ್ಯಾಂಕಿಗೆ ಧಾವಿಸುತ್ತಾರೆ. ಇದೇ ೧೯೩೦ರಲ್ಲಿ ಮುಖ್ಯ ಸಮಸ್ಯೆಯಾಗಿದ್ದು. ಇದಕ್ಕೆ ಪರಿಹಾರವೇನು? ಡೈಮಂಡ್ ಹಾಗೂ ಡಿವಿಗ್ ಅವರು ಠೇವಣಿ ವಿಮೆಯನ್ನು ಒಂದು ಪರಿಹಾರವಾಗಿ ಸೂಚಿಸಿದರು. ಸರ್ಕಾರ ಎಲ್ಲಾ ಠೇವಣಿಗೂ ವಿಮೆಯನ್ನು ಘೋಷಿಸಿದರೆ, ಅಂದರೆ ಜನರ ಠೇವಣಿಗೆ ಗ್ಯಾರಂಟಿ ನೀಡಿದರೆ ಜನ ಬ್ಯಾಂಕಿಗೆ ನುಗ್ಗುವ ಅವಶ್ಯಕತೆ ಬರುವುದಿಲ್ಲ. ಬಿಕ್ಕಟ್ಟೂ ತಪ್ಪುತ್ತದೆ. ಅವರ ಇಂತಹ ಹಲವು ಒಳನೋಟಗಳು ಆಧುನಿಕ ಬ್ಯಾಂಕ್ ನೀತಿಗಳ ಬುನಾದಿಯಾಗಿದೆ. ಅದನ್ನು ಒಂದು ಸ್ಥಿರವಾದ ಹಣಕಾಸು ವ್ಯವಸ್ಥೆಯನ್ನಾಗಿ ರೂಪಿಸುವಲ್ಲಿ ನೆರವಾಗಿದೆ.

ಡೈಮಂಡ್ ಹಾಗೂ ಡಿವಿಗ್ ಅವರ ಸೈಧ್ದಾಂತಿಕ ಒಳನೋಟ, ಹಾಗೂ ವಾಸ್ತವದಲ್ಲಿ ಏನಾಗಿತ್ತು ಅನ್ನುವ ಬರ್ನಾಂಕೆಯವರ ಅಧ್ಯಯನದಿಂದ ಬ್ಯಾಂಕು, ಬ್ಯಾಂಕಿನ ನಿಯಮಗಳು, ಬ್ಯಾಂಕಿನ ಹಾಗೂ ಹಣಕಾಸಿನ ಬಿಕ್ಕಟ್ಟುಗಳನ್ನು ಹೇಗೆ ನಿರ್ವಹಿಸಬಹುದು ಎಂಬುದನ್ನು ಕುರಿತಂತೆ ನಮ್ಮ ತಿಳುವಳಿಕೆ ಹೆಚ್ಚುತ್ತದೆ.

ಸಮಸ್ಯೆಯೆಂದರೆ ಬ್ಯಾಂಕಿಂಗ್ ವ್ಯವಸ್ಥೆಯೂ ವಿಕಾಸಗೊಳ್ಳುತ್ತಲೇ ಹೋಗುತ್ತಿದೆ. ಹೊಸ ಹೊಸ ಹಣಕಾಸು ಸಂಸ್ಥೆಗಳು ತಲೆ ಎತ್ತುತ್ತಿವೆ. ಬ್ಯಾಂಕುಗಳೂ ಮೂಲ ಉದ್ದೇಶಕ್ಕಿಂತ ಭಿನ್ನವಾದ ಕರ್ತವ್ಯಗಳನ್ನು ನಿರ್ವಹಿಸತೊಡಗಿವೆ. ಉದಾಹರಣೆಗೆ ಭಾರತದಲ್ಲಿ ಈಗ ಬ್ಯಾಂಕುಗಳು ಮೂಲಸೌಕರ್ಯಗಳನ್ನು ನಿರ್ಮಿಸುವುದಕ್ಕೆ ಖಾಸಗಿ ಕಾರ್ಪೋರೇಟುಗಳಿಗೆ ದೊಡ್ಡ ಪ್ರಮಾಣದ ದೀರ್ಘಕಾಲೀನ ಸಾಲಗಳನ್ನು ನೀಡುತ್ತಿವೆ. ಮೊದಲು ಕೇವಲ ಅಲ್ಪಕಾಲೀನ ಸಾಲಗಳನ್ನು ಮಾತ್ರ ನೀಡುತ್ತಿದ್ದವು. ಈಗ ಹಾಗೆ ನೀಡಿದ ಎಷ್ಟೊ ಸಾಲಗಳು ಅನುತ್ಪಾದಕ ಸಾಲಗಳಾಗಿ ಹಣಕಾಸು ಕ್ಷೇತ್ರಕ್ಕೆ ಸಮಸ್ಯೆಯನ್ನು ಸೃಷ್ಟಿಸಿವೆ. ೨೦೦೮ರಲ್ಲಿ ಆಗಿದ್ದೂ ಹೀಗೆಯೇ. ಬ್ಯಾಂಕಿನ ನಿಯಂತ್ರಣಕ್ಕೆ ಬಾರದ ಶ್ಯಾಡೋ ಬ್ಯಾಂಕುಗಳಂತಹ ಎಷ್ಟೋ ಹಣಕಾಸು ಸಂಸ್ಥೆಗಳು ಹುಟ್ಟಿಕೊಂಡವು. ಅವು ೨೦೦೮-೨೦೦೯ ರ ಸಮಯದ ಬಿಕ್ಕಟ್ಟಿಗೆ ಕಾರಣವೆಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ. ಆಗ ಫೆಡರಲ್ ಬ್ಯಾಂಕಿನ ಮುಖ್ಯಸ್ಥರಾಗಿದ್ದ ಬರ್ನಾಂಕೆ ಇದನ್ನು ಗಮನಿಸಿ ಸಕಾಲದಲ್ಲಿ ಬ್ಯಾಂಕುಗಳಿಗೆ ನೆರವಾಗುವ ಮೂಲಕ ಬಿಕ್ಕಟ್ಟು ತೀವ್ರವಾಗುವುದನ್ನು ತಪ್ಪಿಸಿದರು ಎನ್ನಲಾಗಿದೆ.

ಇಂದಿಗೂ ಅಂತಹ ಹಣಕಾಸು ಸಂಸ್ಥೆಗಳು ಆರ್ಥಿಕತೆಗೆ ದೊಡ್ಡ ತಲೆನೋವೆ.
ಹಣಕಾಸು ಮಾರುಕಟ್ಟೆಗಳು ಜನರ ಉಳಿತಾಯವನ್ನು ಉತ್ಪಾದಕ ಹೂಡಿಕೆಯಾಗಿ ಪರಿವರ್ತಿಸಬೇಕು. ಆದರೆ ಬಿಕ್ಕಟ್ಟಿಗೆ ಸಿಲುಕದಂತೆ ಎಚ್ಚರಿಕೆಯಿಂದ ಇದನ್ನು ನಿಭಾಯಿಸಬೇಕು. ಬ್ಯಾಂಕುಗಳು ಕುಸಿಯದಂತೆ ನೋಡಿಕೊಳ್ಳಬೇಕು. ಅದು ತುಂಬಾ ಮುಖ್ಯ. ಇಲ್ಲದೇ ಹೋದರೆ ಅದು ಹಣಕಾಸು ಬಿಕ್ಕಟ್ಟು ಸೃಷ್ಟಿಯಾಗಬಹುದು. ಈ ಬಗ್ಗೆ ಸದಾ ಎಚ್ಚರದಿಂದ ಇರಬೇಕು.

ಹಣಕಾಸು ಬಿಕ್ಕಟ್ಟು ಹಾಗೂ ಆರ್ಥಿಕ ಮುಗ್ಗಟ್ಟು ಯಾವುದೇ ಆರ್ಥಿಕತೆಯಲ್ಲಿ ಘಟಿಸಬಹುದಾದ ಅತಿದೊಡ್ಡ ದುರಂತ. ೧೯೩೦ರ ಬಿಕ್ಕಟ್ಟಿನಲ್ಲಿ ಶ್ರೀಮಂತ ರಾಷ್ಟ್ರಗಳಲ್ಲೂ ಜನ ಹಸಿವಿನಿಂದ ಸತ್ತರು. ಅಂತಹ ಅಪಾಯ ಈಗಲೂ ಇದೆ. ಬಿಕ್ಕಟ್ಟುಗಳು ಯಾಕೆ ಸಂಭವಿಸುತ್ತವೆ ಅನ್ನುವುದರ ಅರಿವು ಅಥವಾ ಬಿಕ್ಕಟ್ಟು ಆಗದಂತೆ ಮಾಡುವುದು ಹೇಗೆ ಅನ್ನುವುದರ ತಿಳಿವು ನಮಗಿರಬೇಕು. ಇದು ಸಂಶೋಧಕರು ಹಾಗೂ ರಾಜಕಾರಣಿಗಳು ನಿರಂತರವಾಗಿ ಎದುರಿಸಬೇಕಾದ ಸವಾಲು.
ಈ ವರ್ಷ ಪ್ರಶಸ್ತಿ ಪಡೆದ ಈ ಸಂಶೋಧನೆ ಹಾಗೂ ಇದರ ಮುಂದುವರಿಕೆಯಾಗಿ ನಡೆಯುತ್ತಿರುವ ಇತರ ಸಂಶೋಧನೆಗಳು ಈ ಸವಾಲನ್ನು ಎದುರಿಸಲು ಸಮಾಜವನ್ನು ಇನ್ನಷ್ಟು ಸಜ್ಜುಗೊಳಿಸುತ್ತವೆ. ಈ ಅರಿವಿನಿಂದ ರೂಪುಗೊಳ್ಳುವ ನೀತಿಗಳಿಂದಾಗಿ ಹಣಕಾಸು ಬಿಕ್ಕಟ್ಟು ದೀರ್ಘಕಾಲೀನ ಬಿಕ್ಕಟ್ಟಾಗಿ ಪರಿವರ್ತನೆಗೊಂಡು ಸಮಾಜವನ್ನು ತೀವ್ರವಾಗಿ ಕಾಡುವ ಸಾಧ್ಯತೆಗಳು ಕಡಿಮೆಯಾಗುತ್ತದೆ. ಇದು ಸಾಧ್ಯವಾದರೆ ನಮ್ಮೆಲ್ಲರಿಗೂ ಅತ್ಯಂತ ಒಳ್ಳೆಯದು. ಆದರೆ ಜಗತ್ತು ಇಂದು ಆತುಕೊಂಡಿರುವ ಆರ್ಥಿಕ ನೀತಿಯ ಒಡಲಲ್ಲೇ ಬಿಕ್ಕಟ್ಟನ್ನು ಹುಟ್ಟುಹಾಕುವ ಬೀಜವೂ ಇದೆಯೇ ಎಂಬ ಅನುಮಾನವೂ ಇದ್ದರೆ ಒಳ್ಳೆಯದು.

andolana

Recent Posts

10 ವರ್ಷದ ಪ್ರೀತಿಗೆ ಮೋಸ,ಹಣವೂ ದೋಖಾ : ಬೇರೆ ಮದುವೆಗೆ ಮುಂದಾದ ಯುವಕನ ಮನೆಮುಂದೆ ಪ್ರಿಯತಮೆ ಗಲಾಟೆ

ಚಿಕ್ಕಮಗಳೂರು : ಅದೊಂದು ಬಹುಕಾಲದ ಪ್ರೀತಿ, ಪ್ರೀತಿ ಮಾಡಿ, ಪ್ರೇಯಸಿಯಿಂದ ಹಣ ಪಡೆದು, ಇದೀಗ ಬೇರೊಂದು ಮದುವೆಗೆ ಸಿದ್ಧವಾಗಿದ್ದ ಹುಡಗ…

47 mins ago

ವರ್ಷಾಂತ್ಯಕ್ಕೂ ಸಫಾರಿ ಪುನಾರಂಭ ಸಾಧ್ಯತೆ ಕ್ಷೀಣ

ಬಂಡೀಪುರ, ನಾಗರಹೊಳೆಯಲ್ಲಿ ಹೊಸ ವರ್ಷ ಆಚರಿಸಲು ಬಯಸಿದವರಿಗೆ ನಿರಾಸೆ ರೆಸಾರ್ಟ್, ಹೋಟೆಲ್ ಮಾಲೀಕರಿಂದ ಸಫಾರಿ ಪುನಾರಂಭಕ್ಕೆ ಒತ್ತಡ? ಮೈಸೂರು :…

58 mins ago

ಪ್ರತಿಭಟನೆ ಮಾಹಿತಿ ತಿಳಿದು ಕೆರೆಗೆ ನೀರು ತುಂಬಿಸಿದ ಅಧಿಕಾರಿಗಳು!

ಎಚ್.ಡಿ.ಕೋಟೆ : ತಾಲ್ಲೂಕಿನ ಕ್ಯಾತನಹಳ್ಳಿ, ಆಲನಹಳ್ಳಿ, ಜಿ. ಬಿ. ಸರಗೂರು ವ್ಯಾಪ್ತಿಯ ಐದು ಕೆರೆಗಳಿಗೆ ನೀರು ತುಂಬಿಸಲು ಅಧಿಕಾರಿಗಳು ನಿರ್ಲಕ್ಷಿ…

4 hours ago

ಓದುಗರ ಪತ್ರ | ರಸ್ತೆ ದುರಸ್ತಿ ಮಾಡಿ

ಮೈಸೂರಿನ ರಾಮಕೃಷ್ಣನಗರದಲ್ಲಿರುವ ಸುಯೋಗ್ ಆಸ್ಪತ್ರೆ ಎದುರಿನ ರಸ್ತೆಯು ಸಂಪೂರ್ಣ ಹದಗೆಟ್ಟಿದೆ. ಈ ರಸ್ತೆಯಲ್ಲಿ ಎಲ್ಲೆಡೆ ದೊಡ್ಡ ದೊಡ್ಡ ಗುಂಡಿಗಳು ನಿರ್ಮಾಣವಾಗಿದ್ದು,…

4 hours ago

ಓದುಗರ ಪತ್ರ | ತಂಬಾಕುಯುಕ್ತ ದಂತ ಉತ್ಪನ್ನಗಳನ್ನು ನಿಷೇಧಿಸಿ

ಇತ್ತೀಚಿನ ದಿನಗಳಲ್ಲಿ, ಟೂತ್ ಪೇಸ್ಟ್‌ಗಳಲ್ಲಿ ತಂಬಾಕು ಮತ್ತು ನಿಕೋಟಿನ್ ಅಂಶ ಪತ್ತೆಯಾಗಿದ್ದು, ಇದರ ಸೇವನೆಯಿಂದ ಹಲವು ಮಕ್ಕಳು ತೊಂದರೆಗೊಳಗಾಗಿರುವ ಘಟನೆಗಳು…

4 hours ago

ಓದುಗರ ಪತ್ರ | ರಸ್ತೆಯಲ್ಲಿ ವಾಯುವಿಹಾರ ಅಪಾಯಕಾರಿ

ಮೈಸೂರಿನ ಕುವೆಂಪುನಗರದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಸೆಸ್ಕ್) ರಸ್ತೆ, ಗದ್ದಿಗೆ ರಸ್ತೆ, ವಿಶ್ವಮಾನವ ಜೋಡಿ ರಸ್ತೆ, ವಿದ್ಯಾರಣ್ಯಪುರಂ -…

4 hours ago