ಎಡಿಟೋರಿಯಲ್

ಎಸ್ ಎಲ್ ಭೈರಪ್ಪ ಶತಕಕ್ಕಿನ್ನು ಒಂಭತ್ತೇ ಬಾಕಿ!

೧೯೮೧ fitness freak ಆಗಿದ್ದ ಕಾಲ. ಬೆಳಿಗ್ಗೆ ನಾಲ್ಕೂವರೆಗೇ ಎದ್ದು ಟೌನ್ ಹಾಲ್ ನಲ್ಲಿ ಒಂದು ಗಂಟೆ ಜಿಮ್ ಮಾಡಿ ಆರುಗಂಟೆಗೆ ಈಜುಕೊಳಕ್ಕೆ ಬರುತ್ತಿದ್ದೆ. ಮಳೆ ಛಳಿ ಲೆಕ್ಕವಿಲ್ಲ. ಅಲ್ಲೊಬ್ಬ ಹಿರಿಯರು ಆರು ಗಂಟೆ ಅಂದರೆ ಆರುಗಂಟೆಗೆ ಕರೆಕ್ಟಾಗಿ ಈಜುಗೊಳಕ್ಕೆ ಇಳಿದಿರುತ್ತಿದ್ದರು. ಅವರ ಪಾಡಿಗೆ ಹತ್ತು ಲೆಂಗ್ತ್ length ಈಜಿ ಸ್ನಾನಕ್ಕೆ ಬರೋರು. ಸರಸ್ವತಿಪುರಂನಲ್ಲಿದ್ದ ವಿವಿನಿಲಯದ ಈಜುಕೊಳ ಅದು. ಪ್ರತ್ಯೇಕ ಸ್ನಾನದ ಮನೆ ಇರಲಿಲ್ಲ. ಈಜು ಮುಗಿಸಿದವರಿಗಾಗಿ ಮೂರ್ನಾಲ್ಕು ಷವರ್ ಇತ್ತು. ಗಂಟೆಗಳ ಕಾಲ ಬರೀ ಕಾಚಾದಲ್ಲಿ ಈಜಿದವರಿಗೇಕೆ ಪ್ರತ್ಯೇಕ ಸ್ನಾನದ ಮನೆ ಎಂದಿರಬೇಕು.

ಒಟ್ಟಿಗೆ ಸ್ನಾನ ಎಲ್ಲರಿಗೂ .

ನನ್ನದೂ ಹೆಚ್ಚುಕಡಿಮೆ ಅದೇ ಟೈಮು. ಜೊತೆಯಲ್ಲಿ ಈಜಿ ಜೊತೆಯಲ್ಲೇ ಸ್ನಾನ ಮಾಡಿದರೂ ಮಾತಿಲ್ಲ ಕತೆಯಿಲ್ಲ. ಮುಗುಳ್ನಗೆಯೂ ಇಲ್ಲ. ಹೆಸರಾಂತ ಕಾದಂಬರಿಕಾರ ಎಸ್.ಎಲ್. ಭೈರಪ್ಪ ಅವರೆಂದು ಎಲ್ಲರಿಗೂ ಗೊತ್ತು. ಬಿಮ್ಮನೆ ಬಿಗಿದುಕೊಂಡ ಮುಖವೇಕೋ? ತಿಳಿನಗೆ ಬೇಡವೇ ಅಂದುಕೊಂಡದ್ದೂ ಉಂಟು. ಆದರೆ ಮುಖ ಇದ್ದದ್ದೇ ಹಾಗೆ. ತಾವಾಯ್ತು ತಮ್ಮ ಪಾಡಾಯ್ತು ಎಂಬಂತೆ. ಸುತ್ತಲಿನವರನ್ನು ಅವರು ಮುಖಕೊಟ್ಟು ನೋಡುತ್ತಲೂ ಇರಲಿಲ್ಲ.

೨೭ರ ನಾನು ಯಾರೋ ಸ್ಟೂಡೆಂಟ್ ಅಂದುಕೊಂಡಿರಬೇಕು. ಅವರಾಗಲೇ ಐವತ್ತರ ಗಡಿ ದಾಟಿದ್ದರು. ನಿತ್ಯ ವ್ಯಾಯಾಮವಿದ್ದುದರಿಂದ ಧೃಡಕಾಯರಾಗಿದ್ದರು! (ನಾನಾ ದುರಭ್ಯಾಸಗಳಲ್ಲಿ ಲಡಾಸಾಗಿದ್ದ ನಾನಾ ಸಾಹಿತಿಗಳಿಗೂ ಅವರಿಗೂ ಅಜಗಜಾಂತರ.) ಎರಡು ಕಿಮೀ ದೂರದ ಮನೆಯಿಂದ ವಾಕ್ ಮಾಡಿಕೊಂಡು ಬಂದು ಈಜುತ್ತಿದ್ದ ವ್ಯಕ್ತಿ. ಭೈರವನಂತೆ ಎದೆ ಸೆಟೆಸಿ ನಡೆಯೋರು.
ದಿನಾ ಕಂಡಾಗ ನಮಸ್ಕಾರ ಪ್ರತಿ ನಮಸ್ಕಾರ ಅಷ್ಟೇ. ಮಾತಾಡಿಸಲು ಇಷ್ಟ. ಆದರೆ ಏನೆಂದು ಮಾತಾಡಿಸಲಿ? ಬಿಮ್ಮನೆಯ ಮುಖಕ್ಕೇ ಮೆಚ್ಚುಗೆಯ ನೋಟ ಬೀರುತ್ತಿದ್ದೆ.
ಏಳೆಂಟು ತಿಂಗಳು ಕಳೆದಿತ್ತು. ನಾನು ಎಂಟ್ಹತ್ತು ದಿನ ಹೋಗಲಾಗಲಿಲ್ಲ. ಸ್ನಾನಕ್ಕೆ ಬಂದಾಗ ಅವರೇ ಮಾತಾಡಿಸಿದರು.

‘ಏನು ರಜಾ ಹೋಗಿದ್ರಾ ? ವಾರದಿಂದ ಕಾಣ್ಲಿಲ್ಲಾ?’
‘ಇಲ್ಲ ಸರ್. ಕೋಮುಗಲಭೆ ಬಂದೋಬಸ್ತ್ . ಬರೋದಿಕ್ಕೇ ಆಗ್ಲಿಲ್ಲ ’.
ಮಾತು ಗಲಭೆ, ಪೊಲೀಸ್ ಡ್ಯೂಟಿ, ಪೆರೇಡ್ ಇತ್ಯಾದಿಗಳತ್ತ ತಿರುಗಿತು. ಅದು ಮೌನದ ಮಂಜುಗಡ್ಡೆ ಕರಗಿಸಿತು. ಅದೆಂದೂ ಹರಟೆಯಾಗಲಿಲ್ಲ. ಹತ್ತಾರು ನಿಮಿಷಗಳ ಪ್ರಾಸಂಗಿಕ.

೧೯೮೨ ರಲ್ಲಿ ಅವರು ಮತ್ತು ಹಾ.ಮಾ.ನಾಯಕರು ಗೋಕಾಕ್ ಚಳುವಳಿಯಲ್ಲಿ ಮುಖ್ಯ ಪಾತ್ರ ವಹಿಸಿದ್ದಾಗ (ಡಾ.ರಾಜ್ ಬರುವ ಮುನ್ನ) ಶಾಂತಿ ಸಭೆಗಳಿಗೆ ಅವರನ್ನು ಕರೆತರಲು ನಾಲ್ಕೈದು ಬಾರಿ ಓಡಾಡಿದ್ದೆ.
ಬಹಳ ವರ್ಷಗಳಿಂದ ನಿಂತು ಹೋಗಿದ್ದ ಕುಸ್ತಿ ಚಟುವಟಿಕೆ ೧೯೮೪ ರಲ್ಲಿ ಪುನಃ ಶುರುವಾಯಿತು. ಎಸ್‌ಪಿ ಡಿ.ಎನ್. ಮುನಿಕೃಷ್ಣ ನೇತೃತ್ವದಲ್ಲಿ ರಚನೆಯಾದ ತಾತ್ಪೂರ್ತಿಕ ಸಮಿತಿ. ಮೈಸೂರಿನ ಎಲ್ಲ ಗರಡಿಮನೆಯವರನ್ನೂ, ಪೈಲ್ವಾನರನ್ನೂ ಒಗ್ಗೂಡಿಸಿದ್ದೆವು. ಕೋರ್ಟು ಕಛೇರಿ ಪೈಪೋಟಿಯ ಆವರೆಗಿನ ಭಿನ್ನಾಭಿಪ್ರಾಯ ಬಾಡಿಸಬೇಕಿತ್ತು. ಹಿಂದೂ ಮುಸ್ಲಿಂ ಜಿದ್ದಾಜಿದ್ದಿ ಅಳಿಸಬೇಕಿತ್ತು.
ನಾಲ್ಕಾರು ಸಭೆಗಳು ನಡೆದ ನಂತರ ದೊಡ್ಡ ಸಭೆಯನ್ನು ಸರ್ಕಾರಿ ಭವನದಲ್ಲಿ ಆಯೋಜಿಸಿದರು.
ಆ ಸಭೆಗೆ ಎಸ್.ಎಲ್.ಭೈರಪ್ಪ ನವರನ್ನು ಕರೆಯೋಣವೆಂದೆ. ‘
ಸಾಹಿತಿಗೂ ಕುಸ್ತಿಗೂ ಏನು ಸಂಬಂಧಾರೀ? ಬೇಡ’ ಎಂದರು ಗುಪ್ತಚರ ದಳದ ಅಧಿಕಾರಿ.
ಅವರು ಭೀಮಕಾಯ ಎಂಬ ಕಾದಂಬರಿ ಬರೆದಿರುವುದಲ್ಲದೆ, ಸ್ವತಃ ಗರಡಿಪಟುವೆಂದು ಬಿಡಿಸಿ ವಿವರಿಸಿದೆ. ‘
ಸಾಹಿತಿಗಳು, ಬುದ್ಧಿಜೀವಿಗಳು ಇದಕ್ಕೆಲ್ಲಾ ಬೇಡಪ್ಪಾ. ಓವರ್ ಸೆನ್ಸಿಟೀವ್ ಇರ್ತಾರೆ. ಯಾವುದೋ ವಿಷಯಕ್ಕೆ ಮತ್ಯಾವುದನ್ನೋ ಗಂಟುಹಾಕಿ ಕ್ಯಾತೆ ತೆಗೀತಾರೆ. ಸೈದ್ಧಾಂತಿಕವಾಗಿ ಸರಿ ಹೋಗ್ತಿಲ್ಲ ಅಂತ ಸ್ಟೇಟ್ ಮೆಂಟ್ ಕೊಡ್ತಾರೆ. ಸಾಮರಸ್ಯ (ಕೋಮು) ಮೂಡಿಸುವ ಸಮಯದಲ್ಲಿ ಸುಮ್ಮನೇ ಯಾಕೆ ರಣ? ಬೇಡ’ ಎಂದರು.


ಎಸ್ಪಿ ಮುನಿಕೃಷ್ಣ ಅವರಿಗೆ ಪ್ರತ್ಯೇಕವಾಗಿ ವಿವರಿಸಿದೆ. ‘ಭೀಮಕಾಯ’ವನ್ನೂ ಕೊಟ್ಟೆ. ಆಯ್ತು. ಐ್ಞಜಿಠಿಛಿ ಮಾಡಿ ಎಂದರು.
ಎಸ್‌ಎಲ್‌ಬಿ ಯವರನ್ನು ಕಂಡು, ‘ತಾವು ಬರಬೇಕು ಸರ್. ಮೈಸೂರಿನ ಗರಡಿ ಇತಿಹಾಸದ ಮಹತ್ವವನ್ನು ಸಭೆಗೆ ಹೇಳಬೇಕು’ ಎಂದು ಕೇಳಿಕೊಂಡೆ.
ಸಭೆ ಶುರುವಾಯಿತು. ಮೈಸೂರಿನ ಎಲ್ಲಾ ಪ್ರಮುಖ ಪೈಲ್ವಾನರು, ಉಸ್ತಾದಿಗಳು, ಯಜಮಾನರುಗಳೂ ಬಂದಿದ್ದರು. ಕ್ಯಾಪ್ಟನ್ ಕೃಷ್ಣ ಅವರದೇ ಅಧ್ಯಕ್ಷತೆ.
ಮೈಸೂರಿನ ಗರಡಿ ಮನೆಗಳ ಪೈಲ್ವಾನರುಗಳ ಸಾಧನೆ, ತಾಲೀಮುಗಳ ಬಗ್ಗೆ ಭೈರಪ್ಪನವರು ಬರೆದಿರುವ ಭೀಮಕಾಯ ಎಂಬ ಅಪರೂಪದ ಕಾದಂಬರಿಯ ಬಗ್ಗೆ ವಿವರಿಸುತ್ತಾ, ಎಸ್.ಎಲ್.ಭೈರಪ್ಪನವರನ್ನು ಸಭೆಗೆ ಪರಿಚಯಿಸಿದೆ. ಗರಡಿಮನೆಯಲ್ಲಿ ಸಾಮು ಮಾಡಿದವರು. ಈಗಲೂ ಈಜು ಇತ್ಯಾದಿಗಳಲ್ಲಿ ಚಟುವಟಿಕೆಯಾಗಿರುವವರು ಎಂದೆಲ್ಲಾ ಹೇಳಿದೆ.
ಸ್ವತಃ ಭೈರಪ್ಪನವರಿಗೇ ಸಂತೋಷವಾದಂತಿತ್ತು.

ಮೈಸೂರಿನ ಕುಸ್ತಿ ಕುರಿತು ಅದ್ಭುತವಾದ ಭಾಷಣ ಮಾಡಿದರು. ವಾಪಸ್ ಹೋಗುವಾಗ, ‘ಭೀಮಕಾಯ ಕಾದಂಬರಿಯನ್ನು ನಾನೇ ಮರೆತು ಬಿಟ್ಟಿದ್ದೆ. ಅದು ಹೇಗೆ ನಿಮಗೆ ನೆನಪಿತ್ತು?’ ಕೇಳಿದರು. ‘
ಹಾಸನದ ಜನಮಿತ್ರ ಪತ್ರಿಕೆ ಆಫೀಸಿನಲ್ಲಿ ಸಿಕ್ಕಿತ್ತು ಸರ್’ ಎಂದೆ. ‘
ನಾನು ವಿದ್ಯಾರ್ಥಿಯಾಗಿದ್ದಾಗ ಬರೆದ ಮೊದಲ ಕಾದಂಬರಿ. ಅವರೇ ಪಬ್ಲಿಷ್ ಮಾಡಿದ್ದು. ತುಂಬ ಬಾಲಿಶ ಎಂದು ನಾನು ನನ್ನ ಪುಸ್ತಕಗಳ ಪಟ್ಟಿಯಿಂದಲೂ ಕೈ ಬಿಟ್ಟಿದ್ದೇನೆ’ ಎಂದರು ಭೈರಪ್ಪ. ‘
ತಮಗೆ ಹಾಗನ್ನಿಸಬಹುದು. ತುಂಬ ಆಥೆಂಟಿಕ್ ಆಗಿ ಬರೆದಿದ್ದೀರಿ ಅಂತ ನಮ್ಮ ಎಸ್ಪಿಯವರೂ ಕೊಂಡಾಡಿದರು. ಈವತ್ತು ಭಾಷಣದಲ್ಲಿ ಅವರೂ ಹೇಳಿದರಲ್ಲಾ?’

‘ನೀವುಗಳು ಮಾತಾಡಿದ ಮೇಲೆಯೇ ನನಗೂ ಅದು ಚೆನ್ನಾಗಿದೆ ಅನ್ನಿಸಿತು’ ಎಂದರು.
ಆಮೇಲೆ ನಡೆದ ಅನೇಕ ಜಿದ್ದಾಜಿದ್ದಿನ, ಖಡಾಖಡಿ ಕುಸ್ತಿಪಂದ್ಯಗಳಿಗೆ ಭೈರಪ್ಪನವರು ಬಂದಿದ್ದರು.
ಇದಾಗಿ ಎರಡು ಮೂರು ವರ್ಷ ಕಳೆದಿತ್ತು. ‘ತರಂಗ’ ವಾರಪತ್ರಿಕೆಯ ಸಂಪಾದಕ ಸಂತೋಷ ಕುಮಾರ್ ಗುಲ್ವಾಡಿಯವರನ್ನು ಮನೆಗೆ ಔತಣಕ್ಕೆ ಕರೆದಿದ್ದೆ. ಕುಟುಂಬ ಸಮೇತವಾಗಿ ಬಂದಿದ್ದ ಗುಲ್ವಾಡಿಯವರಿಗೆ ಭೀಮಕಾಯ ಕಾದಂಬರಿ ಪ್ರಸಂಗ ಹೇಳಿದೆ. ನನ್ನಲ್ಲಿದ್ದ ಕನ್ನಡ ‘ವಿಷಯ ವಿಶ್ವಕೋಶ’ ತೋರಿಸಿದೆ.
ಅಂತಹುದೊಂದು ಮಹತ್ವದ ಗ್ರಂಥವೊಂದಿದೆ ಎಂಬುದೇ ಗುಲ್ವಾಡಿ ಯವರಿಗೆ ಗೊತ್ತಿರಲಿಲ್ಲ.
ಬೀಳ್ಕೊಡುವಾಗ ಅವರೆಂದರು. ‘ಈಗ ಸೀದ ಮಣಿಪಾಲಕ್ಕೆ ಹೊರಟೆ. ಅದಕ್ಕಿಂತ ಮೊದಲು ಎರಡು ಕಡೆಗೆ ಹೋಗಬೇಕಿದೆ’ ಅಂದರು. ‘
ಯಾವ ಕಡೆಗೆ ಸರ್’? ‘
ಮೊದಲು ಪ್ರಸಾರಾಂಗಕ್ಕೆ ಹೋಗಿ ವಿಷಯ ವಿಶ್ವಕೋಶ ತೆಗೆದುಕೊಳ್ತೀನಿ .ಆಮೇಲೆ ಭೈರಪ್ಪನವರನ್ನು ಭೆಟ್ಟಿಯಾಗಿ ಹೋಗ್ತೀನಿ’ ಎಂದು ಹೊರಟರು. ಆರೇಳು ತಿಂಗಳಿನಲ್ಲೇ ಭೈರಪ್ಪನವರ ‘ಭೀಮಕಾಯ’ ತರಂಗದಲ್ಲಿ ಧಾರಾವಾಹಿಯಾಗಿ ಹರಿಯಿತು.

ಏನನ್ನೇ ಬರೆಯಲಿ ಆಳದ ಅಧ್ಯಯನ ವಿಲ್ಲದೆ, ವಸ್ತು ವಿಷಯವನ್ನು ಖಚಿತಪಡಿಸಿಕೊಳ್ಳದೆ ಭೈರಪ್ಪನವರು ಬರೆಯರು. ಬೇಜವಾಬ್ದಾರಿ ಬರವಣಿಗೆಗೆ ಎಂದೂ ಕೈ ಹಾಕರು. ಪೊಲೀಸು ಕಾನೂನು ಇತ್ಯಾದಿಗಳ ಬಗ್ಗೆ ತಿಳಿಯಲು ಅನೇಕ ಬಾರಿ ಕರೆದಿದ್ದಾರೆ. ಧೀರ್ಘ ಚರ್ಚಿಸಿದ್ದಾರೆ. ಆದರೆ ಕೃತಿಯಲ್ಲಿ ಮಾತ್ರ ಅರ್ಧಪುಟವೂ ಇರುವುದಿಲ್ಲ. ಅದೇ ಅವರ ವೈಶಿಷ್ಟ್ಯ.
ಅವರೆಂದೂ ಯಾರ ತಕರಾರಿಗೂ ಹೋದವರಲ್ಲ. ಅನ್ಯರ ಬಗ್ಗೆ ಮಾತಾಡಿದವರಲ್ಲ. ಆದರೆ ಅವರ ಕೃತಿಗಳ ಬಗ್ಗೆ ಸದಾ ಕುಹಕದ ಮಾತು ಇದ್ದದ್ದೇ. ಅವರ ಯಾವುದೇ ಹೇಳಿಕೆ ಬರಲಿ. ಟೀಕೆಗಳ ಮಹಾಪೂರ ತಪ್ಪಿದ್ದಲ್ಲ. ಪ್ರತಿಕ್ರಿಯೆ ಕೊಟ್ಟರೆ ತಾನೆ ಚರ್ಚೆ ಜಗಳ?! ಎಸ್‌ಎಲ್‌ಬಿ ಹರಾ ಅನ್ನರು. ಹರಿ ಎಂದೂ ಎನ್ನರು. ಟೀಕಿಸಿದವರೇ ತಮ್ಮ ಮಾತು ತಾವೇ ತಿಂದುಕೋಬೇಕು.

ಎಸ್‌ಎಲ್‌ಬಿ ಸದಾ ಒಂಟಿ. ಎಂದೂ ‘ಗುಂಪುಗುಳಿ’ತನವಿಲ್ಲ. ಆದರೆ ‘ಗೂಳಿತನ’ವಿರುವ ಏಕಾಂಗಿ. ಅವರ ಕೃತಿಗಳೇ ಅವರಿಗೆ ಗುರಾಣಿ. ‘ಆವರಣ‘ ಬಂದಾಗ ಅದು ಕಾದಂಬರಿಯೇ ಅಲ್ಲ. ಬರೀ ಮಾಹಿತಿ ತುಂಬಿಸಿದ ಡೇಟಾ ಎಂದರು. ಆದರೆ ಅದರಲ್ಲಿರುವ ಅಂಶಗಳು ಸುಳ್ಳು ಎಂದು ಯಾರೊಬ್ಬನೂ ಸಾಧಿಸಲಿಲ್ಲ. ಕೃತಿಯೇ ಎಲ್ಲವನ್ನೂ ಹೇಳಿತು.

ಭೈರಪ್ಪನವರು ಅಂತರ್ಮುಖಿ, ಸಿಡುಕ . ಯಾರ ಜೊತೆಗೂ ಸೇರುವುದಿಲ್ಲ ಇತ್ಯಾದಿ ಮಾತುಗಳಿದ್ದವು. ಕ್ರಮೇಣ ಅದಕ್ಕೆ ವ್ಯತಿರಿಕ್ತರಾಗಿದ್ದ ಭೈರಪ್ಪನವರು ಕಾಣತೊಡಗಿದರು. ಅವರ ಸಹೋದ್ಯೋಗಿಗಳ ವಿರುದ್ಧ ಕೇಸಾದಾಗ ತಾವಾಗಿ ಠಾಣೆಗೆ ಬಂದು ನೆರವಿಗೆ ನಿಂತ ಭೈರಪ್ಪನವರನ್ನು ನೋಡಿದೆ. ಮತ್ತೋರ್ವ ಸಹೋದ್ಯೋಗಿಯ ಮನೆಗೆ ಬೆದರಿಕೆ ಕರೆ ಬರುತ್ತಿತ್ತು. ಭಯವೇ ಬೇಡವೆಂದು ಬಂಡೆಯಂತೆ ನಿಂತರು. ಅದಕ್ಕಾಗಿ ನಮ್ಮ ಠಾಣೆಗೆ ಬಂದದ್ದು ಎಷ್ಟು ಬಾರಿಯೋ?. ಸ್ನೇಹಕ್ಕೆ ತಕ್ಕ ಘನತೆಯ ನಡವಳಿಕೆ ಅವರದು. ಹಾ.ಮಾ.ನಾಯಕರು ಮೊದಲ್ಗೊಂಡು ಅನೇಕ ಹಿರಿಯ ಸಾಹಿತಿಗಳು ತೊಂದರೆಗೆ ಸಿಲುಕಿದಾಗಲೂ ಅವರ ಜೊತೆಗೆ ನಿಂತವರು ಭೈರಪ್ಪನವರು.

ತಮ್ಮ ಮಗನ ಮದುವೆ ಸಂತೋಷಕೂಟಕ್ಕೆ ಕರೆದಿದ್ದರು. ಅಲ್ಲಿಗೆ ಬಂದಿದ್ದ ಜನಗಳನ್ನು ನೋಡಿ ಬೆರಗಾಗಿ ಹೋದೆ. ನಾನಾ ಸ್ತರದ ಮುಖ್ಯ ವ್ಯಕ್ತಿಗಳೆಲ್ಲಾ ಅಲ್ಲಿದ್ದರು.
ಯಾರ ಜೊತೆಗೂ ಸೇರೋದೇ ಇಲ್ವಂತೆ ಅಂತಿದ್ರಲ್ಲ? ಪರ್ವಾಗಿಲ್ಲ ಜನ ಮಡಗವ್ರೆ! ಅಂದುಕೊಂಡೆ .

ಅವರ ಪುಸ್ತಕಗಳಿಂದ ಬರುವ ಆದಾಯಲ್ಲಿ ಬಹುಪಾಲನ್ನು ನಾನಾ ಸಹಾಯಾರ್ಥ ಕೆಲಸಗಳಿಗೆ ವಿನಿಯೋಗಿಸುತ್ತಾರೆಂದು ಕೇಳಿಬಲ್ಲೆ. ಯಾವುದಕ್ಕೂ ಪ್ರಚಾರವಿಲ್ಲ. ಬಲಗೈಲಿ ನೀಡಿದ್ದು ಮತ್ತೊಂದು ಕೈಗೂ ಗೊತ್ತಾಗದು.
ಹೋಲಿಕೆ ಬೇಡ. ಆದರೂ ವಸ್ತುಸ್ಥಿತಿಯನ್ನು ವಿವರಿಸಲು ಹೋಲಿಕೆ ಅಗತ್ಯ. ಸಾಹಿತ್ಯ ಸಮ್ಮೇಳನಾಧ್ಯಕ್ಷರಿಗೆ ಲಕ್ಷಾಂತರ ಹಣದ ಹಮ್ಮಿಣಿ ಅರ್ಪಿಸುವುದು ವಾಡಿಕೆ. ಸಮಾಜದ ಅನ್ಯಾಯ ಶೋಷಣೆ ದಬ್ಬಾಳಿಕೆ ಕುರಿತು ಉದ್ದುದ್ದ ಮಾತಾಡಿದವರೆಲ್ಲರೂ ಅಧ್ಯಕ್ಷ ಸ್ಥಾನ ಅಲಂಕರಿಸಿ ಹಮ್ಮಿಣಿಯನ್ನು ಸೈಲೆಂಟಾಗಿ ಜೇಬಿಗಿಳಿಸಿಕೊಂಡರು. ಆ ಬಳಿಕ ಉಸಿರೇ ಎತ್ತಲಿಲ್ಲ.

ಕನಕಪುರ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದಾಗ ಬಂದಿದ್ದ ಐದು ಲಕ್ಷ ರೂಪಾಯಿ ಹಮ್ಮಿಣಿ ಹಣಕ್ಕೆ ತಮ್ಮದೊಂದು ದೊಡ್ಡ ಮೊತ್ತ ಸೇರಿಸಿ ಕನ್ನಡ ಶಾಲೆಗಳ ಅಭಿವೃದ್ಧಿ ಕೆಲಸಗಳಿಗೆ ನೀಡಿದರು. ಉತ್ತಮ ಸಾಹಿತಿಯೋರ್ವ ಸಜ್ಜನನೂ, ಸಹೃದಯನೂ, ಉದಾರಿಯೂ ಆಗಿದ್ದಾರೆಂಬುದಲ್ಲಿದೆಯಲ್ಲವೇ ನಿಜವಾದ ಸಾರ್ಥಕತೆ?

ವಿಸೂ : ಸ್ವಪ್ರಶಂಸೆ ಎಂದು ಭಾವಿಸದಿದ್ದರೆ ಧನ್ಯ!

 

 

andolana

Recent Posts

ನದಿಯಲ್ಲಿ ಮುಳುಗಿ ವ್ಯಕ್ತಿ ಸಾವು

ಕುಶಾಲನಗರ: ಸ್ನಾನಕ್ಕೆಂದು ನದಿಗೆ ಇಳಿದಿದ್ದ ವ್ಯಕ್ತಿಯೊಬ್ಬರು ಜಲ ಸಮಾಧಿಯಾಗಿರುವ ಘಟನೆ ಕುಶಾಲನಗರದಲ್ಲಿ ನಡೆದಿದೆ. ಕುಶಾಲನಗರ ಅಯ್ಯಪ್ಪ ಸ್ವಾಮಿ ದೇವಾಲಯ ಸಮೀಪದಲ್ಲಿ…

1 min ago

ಇನ್ಮುಂದೆ ಕಬ್ಬನ್‌ ಪಾರ್ಕ್‌ನಲ್ಲಿ ಗುಂಪು ಚಟುವಟಿಕೆಗೆ ಅನುಮತಿ ಪಡೆಯುವುದು ಕಡ್ಡಾಯ

ಬೆಂಗಳೂರು: ಸಿಲಿಕಾನ್‌ ಸಿಟಿ ಬೆಂಗಳೂರಿನ ಪ್ರಸಿದ್ಧ ಪಾರ್ಕ್‌ ಆದ ಕಬ್ಬನ್‌ ಪಾರ್ಕ್‌ನಲ್ಲಿ ಇನ್ನು ಮುಂದೆ ಯಾವುದೇ ಸಂಘಟನೆಗಳು ತಮ್ಮ ಚಟುವಟಿಕೆ…

25 mins ago

ಮತ್ತೊಮ್ಮೆ ಇತಿಹಾಸ ಸೃಷ್ಟಿಸಿದ ವೈಭವ್‌ ಸೂರ್ಯವಂಶಿ

13 ವರ್ಷದ ವೈಭವ್‌ ಸೂರ್ಯವಂಶಿ ಐಪಿಎಲ್‌ ಹರಾಜಿನಲ್ಲಿ 1.10 ಕೋಟಿಗೆ ರಾಜಸ್ಥಾನ ತಂಡಕ್ಕೆ ಹರಾಜಾಗುವ ಮೂಲಕ ಕಿರಿಯ ವಯಸ್ಸಿಗೆ ಐಪಿಎಲ್‌ಗೆ…

30 mins ago

ಕುವೈತ್‌ ಪ್ರವಾಸದಲ್ಲಿ ಪ್ರಧಾನಿ ಮೋದಿ: ನಾಯಕರೊಂದಿಗೆ ದ್ವಿಪಕ್ಷೀಯ ಮಾತುಕತೆ

ಕುವೈತ್‌: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಕುವೈತ್‌ ಪ್ರವಾಸ ಕೈಗೊಂಡಿದ್ದು, ಅಲ್ಲಿನ ರಾಜ ಶೇಕ್‌ ಮಿಶಾಲ್‌…

36 mins ago

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಗೆ ಸಮನ್ಸ್‌ ನೀಡಿದ ರಾಯ್‌ ಬರೇಲಿ ನ್ಯಾಯಾಲಯ

ಉತ್ತರ ಪ್ರದೇಶ: ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಶ್ರೀಮಂತರು ಹಾಗೂ ಬಡವರ ನಡುವಿನ ಆರ್ಥಿಕತೆ, ಅಸಮಾನ ಆಸ್ತಿಗೆ ಸಂಬಂಧಿಸಿದಂತೆ ಹೇಳಿಕೆ ನೀಡಿದ್ದ…

56 mins ago

ರಾಜ್ಯದಲ್ಲಿ ಚಳಿಯ ತೀವ್ರತೆ ಹೆಚ್ಚು: ಮಕ್ಕಳನ್ನು ಕಾಡುತ್ತಿರುವ ಕಾಲು ಬಾಯಿ ರೋಗ

ಬೆಂಗಳೂರು: ಪ್ರಸಕ್ತ ವರ್ಷದಲ್ಲಿ ಚಳಿ ತುಂಬಾ ಜಾಸ್ತಿಯಿದ್ದು, ಶೀತಗಾಳಿ ಹೆಚ್ಚಾಗಲು ಕರಾವಳಿ ತೀರ ಪ್ರದೇಶದಲ್ಲಾದ ವಾತಾವರಣ ಬದಲಾವಣೆ ಕಾರಣ ಎಂದು…

1 hour ago