ಎಡಿಟೋರಿಯಲ್

ಹೊಸ ಜವಾಬ್ದಾರಿಗಳನ್ನು ಪರಿಷತ್ತು ಹೊರುವುದೇ?

ಪುರುಷೋತ್ತಮ ಬಿಳಿಮಲೆ

ನಾಲ್ವಡಿ ಕೃಷ್ಣರಾಜ ಒಡೆಯರ್ ಬಹಳ ಮುನ್ನೋಟವುಳ್ಳ ನಾಯಕರಾಗಿದ್ದರು. ತಮ್ಮ ಆಡಳಿತದಲ್ಲಿ ೧೯೧೫ರಲ್ಲಿ ಬೆಂಗಳೂರಿನಲ್ಲಿ ಕರ್ನಾಟಕ ಸಾಹಿತ್ಯ ಪರಿಷತ್ತನ್ನು (ಆ ಮೇಲೆ ಕನ್ನಡ ಸಾಹಿತ್ಯ ಪರಿಷತ್ತಾಯಿತು) ಪ್ರಾರಂಭಿಸಿದರು.

ಕೇವಲ ನಾಲ್ಕು ಮಂದಿ ಆಜೀವ ಸದಸ್ಯರು ಮತ್ತು ೪೨ ಮಂದಿ ದ್ವಿತೀಯ ವರ್ಗದ ಸದಸ್ಯರಿಂದ ಹುಟ್ಟಿದ ಪರಿಷತ್ತು, ಕರ್ನಾಟಕ ಏಕೀಕರಣದ ಸಂದರ್ಭದಲ್ಲಿ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಜೊತೆಗೂಡಿ, ಮಹತ್ವದ ಕೆಲಸಗಳನ್ನು ಮಾಡಿತು. ಮುಂದೆ ಪರಿಷತ್ತು ಕನ್ನಡ ಪುಸ್ತಕಗಳು ಮತ್ತು ಪತ್ರಿಕೆಗಳ ಪ್ರಕಟಣೆ, ವಾಚನಾಲಯಗಳ ಸ್ಥಾಪನೆ, ಉಪನ್ಯಾಸಗಳ ಆಯೋಜನೆ, ದತ್ತಿ ನಿಧಿಗಳ ಸ್ಥಾಪನೆ, ಪುಸ್ತಕ ಬಹುಮಾನ ಮೊದಲಾದ ಕೆಲಸಗಳ ಮೂಲಕ ಹೆಮ್ಮೆಯ ಸಂಸ್ಥೆಯಾಗಿ ಬೆಳೆಯಿತು. ಕಾಲಾಂತರದಲ್ಲಿ ಮೈಸೂರಿನ ದಿವಾನರಾಗಿದ್ದ ಮಿರ್ಜಾ ಇಸ್ಮಾಯಿಲ್ ಅವರ ಆಸಕ್ತಿಯ ಫಲವಾಗಿ ಪ್ರಸ್ತುತ ಪ್ರಧಾನ ಕಚೇರಿ ಇರುವ ಸ್ಥಳದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿಗೆ ಉಚಿತವಾಗಿ ನಿವೇಶನ ಮಂಜೂರಾಯಿತು. ಈ ನಿವೇಶನದಲ್ಲಿ ಶ್ರೀಕೃಷ್ಣರಾಜ ಪರಿಷನ್ಮಂದಿರವು ೧೯೩೩ರಲ್ಲಿ ತಲೆ ಎತ್ತಿತು. ಪರಿಷತ್ತು ಮುಂದೆ, ಕನ್ನಡದ ಸಬಲೀಕರಣಕ್ಕೆ ಮಹತ್ವದ ಕೊಡುಗೆ ನೀಡಿತು. ಕನ್ನಡದ ಧೀಮಂತ ವಿದ್ವಾಂಸರು ಪರಿಷತ್ತಿಗೆ ಕೆಲಸ ಮಾಡುತ್ತಿದ್ದಾಗ ಅದಕ್ಕೊಂದು ಘನತೆ ಇತ್ತು. ಆದರೆ, ಮುಂದೆ ಪರಿಷತ್ತು ಪತನಮುಖಿಯಾಗುತ್ತಾ ಸಾಗಿತು. ಲಕ್ಷಾಂತರ ಮತದಾರರಿರುವ ಪರಿಷತ್ತಿಗೆ ಲೇಖಕರು ಸ್ಪರ್ಧಿಸಿ ಗೆಲ್ಲುವ ಸಾಧ್ಯತೆಗಳೇ ಕಡಿಮೆಯಾದವು.

ಸರ್ಕಾರಿ ಅನುದಾನದಿಂದ ವರುಷಕ್ಕೊಂದು ಸಮ್ಮೇಳನವನ್ನು ನಡೆಸುವ ಈವೆಂಟ್ ಮೆನೇಜ್‌ಮೆಂಟ್ ಸಂಸ್ಥೆಯಾಗಿ ಪರಿಷತ್ತು ಪರಿವರ್ತನೆಗೊಂಡಿದೆ. ಇದೀಗ ಸಾಹಿತಿಗಳೇ ಇಲ್ಲದ ಸಾಹಿತ್ಯ ಪರಿಷತ್ತನ್ನು ನೋಡಬಹುದು. ಅದು ನಡೆಸುವ ವಾರ್ಷಿಕ ಸಮ್ಮೇಳನಗಳಲ್ಲೂ ರಾಜಕೀಯ ಧುರೀಣರಿಗೇ ಮನ್ನಣೆ.

ಕರ್ನಾಟಕ ಏಕೀಕರಣ ಚಳವಳಿಯೂ ಸೇರಿದಂತೆ ಅನೇಕ ಉಪಯುಕ್ತ ಕೆಲಸಗಳನ್ನು ಮಾಡಿದ ಪರಿಷತ್ತಿಗೆ ಇಂದು ಏನೂ ಮಾಡಲಾಗುತ್ತಿಲ್ಲ. ಅನೇಕ ವರ್ಷಗಳಿಂದ ಸಮ್ಮೇಳನಗಳಲ್ಲಿ ಮಂಡಿಸಲಾಗುತ್ತಿರುವ ನಿರ್ಣಯ ಗಳ್ಯಾವುವೂ ಜಾರಿಗೆ ಬರುತ್ತಿಲ್ಲ. ಆ ಶಕ್ತಿಯೂ ಪರಿಷತ್ತಿಗಿಲ್ಲ.

ಹೊಸ ಜವಾಬ್ದಾರಿಗಳನ್ನು ಪರಿಷತ್ತು ಹೊರುವುದೇ?

೨೧ನೇ ಶತಮಾನದ ಕನ್ನಡ, ಕರ್ನಾಟಕವು ಬಗೆಬಗೆಯ ಸಮಸ್ಯೆಗಳನ್ನು ಇದಿರಿಸುತ್ತಿದೆ. ಭಾಷಾ ಅಧ್ಯಯನವನ್ನು ಇವತ್ತು ‘ಅನುತ್ಪಾದಕ’ ಎಂದು ಭಾವಿಸಲಾಗುತ್ತಿದೆ. ಸ್ಪರ್ಧಾತ್ಮಕ ಆರ್ಥಿಕತೆಯ ಹಿಂದೆ ಬಿದ್ದಿರುವ ಜನರಿಗೆ ಭಾಷೆ ಮತ್ತು ಸಾಹಿತ್ಯ ಬೇಡವಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಭಾಷಾಧ್ಯಯನ ಕಳೆಗುಂದುತ್ತಿದೆ. ೨೦೧೧ರ ಜನಗಣತಿಯಲ್ಲಿ ಸಂಸ್ಕ ತವನ್ನು ತಾಯ್ನುಡಿಯಾಗಿ ಅಂಗೀಕರಿಸಿದವರು ಕೇವಲ ೨೫ ಸಾವಿರ ಜನ. ಆದರೆ ಈ ಭಾಷೆಯ ಅಭಿವೃದ್ಧಿಗೆ ಈಗಾಗಲೇ ೫೦೦ ಕೋಟಿ ರೂ.ಗಳ ಅನುದಾನ ನೀಡಲಾಗಿದೆ. ಆರೂವರೆ ಕೋಟಿ ಜನರಿರುವ ಕನ್ನಡ ಭಾಷೆಗೆ ಕೇವಲ ೮ ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರ ನೀಡಿದೆ. ಈ ತಾರತಮ್ಯದ ವಿರುದ್ಧ ಯಾರು ಹೋರಾಡಬೇಕು?

೨೦೧೪ರ ಅನಂತರ ಹಿಂದಿ ಭಾಷೆಯ ಬಳಕೆ ತೀವ್ರವಾಗಿದೆ. ಹಿಂದಿ ಭಾಷೆಯನ್ನು ಬಳಸಬೇಕೆಂದು ಆದೇಶಿಸುವ ಅನೇಕ ಸುತ್ತೋಲೆಗಳು, ಕಚೇರಿ ಟಿಪ್ಪಣಿಗಳು ಓಡಾಡುತ್ತಿರುವ ಪರಿಣಾಮ ಅನೇಕ ಕಡೆಗಳಲ್ಲಿ ಹಿಂದಿ ಬಳಕೆಗೆ ಬಂದಿದೆ. ಕೇಂದ್ರೀಯ ಮತ್ತು ಸಿಬಿಎಸ್‌ಸಿ ಶಾಲೆಗಳಲ್ಲಿ ೧೦ನೇ ತರಗತಿಯವರೆಗೆ ಹಿಂದಿಯನ್ನು ಕಡ್ಡಾಯವಾಗಿ ಕಲಿಸುವ ಪ್ರಯತ್ನಕ್ಕೆ ೨೦೧೧ರಲ್ಲಿ ರಾಷ್ಟ್ರಪತಿಯವರು ಸಮ್ಮತಿ ಸೂಚಿಸಿದ್ದಾರೆ. ಬ್ಯಾಂಕ್, ಅಂಚೆ ಕಚೇರಿ, ರೈಲ್ವೆ ನಿಲ್ದಾಣ, ವಿಮಾನ ನಿಲ್ಲಾಣ, ರಕ್ಷಣಾ ಇಲಾಖೆ-ಹೀಗೆ ಕೇಂದ್ರ ಸರ್ಕಾರದ ಅಡಿಯಲ್ಲಿರುವ ಕಡೆಗಳಲ್ಲಿಯೂ ಹಿಂದಿಯು ವ್ಯಾಪಕವಾಗಿ ಬೇರು ಬಿಟ್ಟಿದೆ.

೨೦೧೫ರಿಂದ ಕೇಂದ್ರ ಜಾರಿಗೆ ತಂದ ಯೋಜನೆಗಳ ಹೆಸರುಗಳೂ ಹಿಂದಿಯಲ್ಲಿ ಇವೆ. ಹಿಂದಿ ಅನುಷ್ಠಾನದ ವಿಷಯದಲ್ಲಿ ಉದಾರವಾಗಿಯೇ ಹಣ ಖರ್ಚು ಮಾಡಿದೆ. ವಿದೇಶಗಳಲ್ಲಿ ಹಿಂದಿ ಭಾಷೆಯನ್ನು ಅಭಿವೃದ್ಧಿಗೊಳಿಸಲು ೨೦೧೭-೧೮ರಲ್ಲಿ ೪೩.೪೮ ಕೋಟಿ ರೂ. ವ್ಯಯಿಸಲಾಗಿದೆ. ೨೦೧೮-೧೯ ಹಿಂದಿಯೇತರ ರಾಜ್ಯಗಳಲ್ಲಿ ಹಿಂದಿ ಅಧ್ಯಾಪಕರಿಗಾಗಿ ೫೦ ಕೋಟಿ ರೂ. ತೆಗೆದಿರಿಸಲಾಗಿದೆ. ಈ ಒಟ್ಟು ಬೆಳವಣಿಗೆಯು ಜನರಿಗೆ ಹಿಂದಿ ಹೇರಿಕೆಯಂತೆ ಕಂಡರೆ ಅಚ್ಚರಿಯಲ್ಲ. ಕೇಂದ್ರದ ಮಂತ್ರಿಗಳನ್ನು, ಅಽಕಾರಿಗಳನ್ನು ಓಲೈಸಲು ಹಿಂದಿ ಕಲಿಯಲಾರಂಭಿಸಿದ್ದಾರೆ. ಹಿಂದಿಯನ್ನು ರಾಷ್ಟ್ರೀಯ ಭಾಷೆಯನ್ನಾಗಿ ಮಾಡಬೇಕೆಂಬ ಒತ್ತಡ ಬಲವಾಗುತ್ತಿದೆ.

ಆಶ್ಚರ್ಯವೆಂದರೆ ಇಷ್ಟೊಂದು ಸಮಸ್ಯೆಗಳಿದ್ದರೂ ಸರ್ಕಾರ ಅದರ ಕಡೆ ಗಮನ ನೀಡದೆ, ಕೋಮುವಾದ, ಧರ್ಮ, ಜಾತಿ, ಚುನಾವಣೆಗೆ ತಲೆಕೆಡಿಸಿಕೊಂಡಷ್ಟು ಭಾಷೆಗಳ ಸಾವಿಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಜಗತ್ತಿನ ಅರ್ಧದಷ್ಟು ಭಾಷೆಗಳನ್ನು ಹೊಂದಿರುವ ಭಾರತಕ್ಕೆ ಒಂದು ಸಮರ್ಪಕವಾದ ಭಾಷಾ ನೀತಿಯೇ ಇಲ್ಲ. ಹಿಂದಿಯನ್ನು ಹೊರತುಪಡಿಸಿ ಉಳಿದ ಭಾಷೆಗಳ ಬಗ್ಗೆ ನಿರ್ಲಕ್ಷ್ಯ ತೋರುತ್ತಾ, ಅವುಗಳ ಅಭಿವೃದ್ಧಿಯ ಹೊಣೆ ರಾಜ್ಯ ಸರ್ಕಾರದ್ದು ಎಂದು ಕೇಂದ್ರ ನುಣುಚಿಕೊಳ್ಳುತ್ತಿದೆ. ಕರ್ನಾಟಕ ರಾಜ್ಯವು ಕನ್ನಡವನ್ನು ಶಿಕ್ಷಣ ಮಾಧ್ಯಮವನ್ನಾಗಿ ಮಾಡಬೇಕೆಂದು ಹೊರಟಾಗ ಅದರ ಹಕ್ಕನ್ನು ಸುಪ್ರೀಂ ಕೋರ್ಟು ಪೋಷಕರಿಗೂ, ಮಕ್ಕಳಿಗೂ ನೀಡಿದೆ. ಇದರಿಂದ ಸಮಸ್ಯೆ ಇನ್ನಷ್ಟು ಜಟಿಲವಾಗಿದೆ. ಹಾಗಾಗಿ ಸಂವಿಧಾನದಲ್ಲಿಯೇ ಸೂಕ್ತ ತಿದ್ದುಪಡಿ ಮಾಡದ ಹೊರತು ಕನ್ನಡದಲ್ಲಿ ಬೋಧನೆ ಸಾಧ್ಯವೇ ಇಲ್ಲ. ಇಂಥ ಗೊಂದಲಗಳಿಂದಾಗಿ ಭಾರತದಲ್ಲಿ ಸುಮಾರು ೩,೬೦,೦೦,೦೦೦ ಜನಗಳ ಮಾತೃಭಾಷೆಗಳು ಪತನಮುಖಿಯಾಗಿವೆ. ಭಾಷಾವಾರು ಪ್ರಾಂತ್ಯಗಳ ರಚನೆಯಾದಾಗ ಪ್ರಭಾವೀ ಪ್ರಾದೇಶಿಕ ಭಾಷೆಗಳಿಗೇನೋ ಮಹತ್ವ ಬಂದುವು. ಆದರೆ, ಅಽಕೃತ ಭಾಷೆಗಳಲ್ಲದ ಸಣ್ಣ ಭಾಷೆಗಳು ತೀವ್ರ ಉಪೇಕ್ಷೆಗೆ ಒಳಗಾಗಿವೆ. ಬೇರೆ ರಾಜ್ಯಗಳಲ್ಲಿ ಅಲ್ಲಿನ ಸ್ಥಳೀಯ ಕೆಲ ಭಾಷೆಗಳನ್ನು ಅಧಿಕೃತ ಭಾಷೆಗಳೆಂದು ಘೋಷಿಸಿವೆ. ಇದು ಹೌದಾದರೆ, ಕರ್ನಾಟಕವು ಕೊಡವ-ತುಳು ಭಾಷೆಗಳನ್ನು ಕರ್ನಾಟಕದ ಅಧಿಕೃತ ಭಾಷೆಗಳೆಂದು ಏಕೆ ಮಾನ್ಯ ಮಾಡಬಾರದು?

ಈ ಗೊಂದಲದಲ್ಲಿರುವಾಗಲೇ ಇನ್ನೊಂದು ಕಡೆಯಲ್ಲಿ ಉನ್ನತ ಶಿಕ್ಷಣದ ಅಂತಾರಾಷ್ಟ್ರೀಕರಣವೂ ಜೋರಾಗಿ ನಡೆಯುತ್ತಿದೆ. ತೊಂಬತ್ತರ ದಶಕದಲ್ಲಿ ನಡೆದ ಜಾಗತೀಕರಣ ಪ್ರಕ್ರಿಯೆಯು ಜಗತ್ತಿನ ಭಾಷೆಗಳ ವ್ಯಾಕರಣವನ್ನು ಏಕರೂಪಿಯಾಗಿ ಮಾರ್ಪಡಿಸಿದೆ. ಖಾಸಗೀಕರಣ, ವ್ಯಾಪಾರೀಕರಣ ಹಾಗೂ ಮಾರುಕಟ್ಟೆಯ ನೀತಿಗಳು ಶಿಕ್ಷಣದ ಪರಿಕಲ್ಪನೆಯನ್ನು ಆಮೂಲಾಗ್ರವಾಗಿ ಬದಲಾಯಿಸಿವೆ. ಶಿಕ್ಷಣ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ಹಾಜರಾತಿ, ದೇಶೀಯ ಮತ್ತು ವಿದೇಶೀಯ ವಿದ್ಯಾಲಯಗಳು ಒಟ್ಟಿಗೆ ಕೆಲಸ ಮಾಡುವ ಅವಳಿ ಕಾರ್ಯಕ್ರಮಗಳು ಹಾಗೂ ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮಗಳು ಮತ್ತು ಅತ್ಯುತ್ತಮ ಶಿಕ್ಷಣದ ರಫ್ತಿಗಾಗಿ ವಿಶೇಷ ವಲಯಗಳ ಸ್ಥಾಪನೆ ಮುಂದಿನ ದಿನಗಳಲ್ಲಿ ಜಾರಿಗೆ ಬರಲಿವೆ. ಇಂಥ ಸಂದರ್ಭದಲ್ಲಿ ಕನ್ನಡ ಏನು ಮಾಡಬೇಕು? ಇವತ್ತಿನ ಅಗತ್ಯಗಳಿಗೆ ಅದನ್ನು ಸಜ್ಜುಗೊಳಿಸುವುದು ಹೇಗೆ? ಪರಿಷತ್ತಿಗೆ ಈ ಶಕ್ತಿ ಇದೆಯಾ?

ಕುವೆಂಪುರವರು ಹೇಳಿದ ಸರ್ವ ಜನಾಂಗದ ಶಾಂತಿಯ ತೋಟವಾಗಿದ್ದ ಕರ್ನಾಟಕವು ಇಂದು ಕೋಮುವಾದದ ಪ್ರಯೋಗ ಶಾಲೆಯಾಗುತ್ತಿದೆ. ಇಂಥ ಬಿಕ್ಕಟ್ಟುಗಳಲ್ಲಿ ಪರಿಷತ್ತು ಕರ್ನಾಟಕವನ್ನು ಹೇಗೆ ರಕ್ಷಿಸುತ್ತದೆ? ಇಂಥ ತುರ್ತು ಪ್ರಶ್ನೆಗಳಿಗೆ ಪರಿಷತ್ತಿನಲ್ಲಿ ಯಾವುದೇ ಉತ್ತರಗಳಿದ್ದಂತಿಲ್ಲ. ಮೇಲಾಗಿ, ಹಾವೇರಿ ಸಮ್ಮೇಳನದಲ್ಲಿ ಮುಸ್ಲಿಮರಿಗೆ, ಮಹಿಳೆಯರಿಗೆ ಮತ್ತು ದಲಿತರಿಗೆ ಕೊಡಬೇಕಾದಷ್ಟು ಅವಕಾಶಗಳನ್ನು ಅದು ಕೊಟ್ಟೇ ಇಲ್ಲ. ಇಂಥ ನಡೆಗಳಿಂದಾಗಿ ಪರಿಷತ್ತು ಸಮಸ್ತ ಕನ್ನಡಿಗರ ಪರವಾಗಿ ಧ್ವನಿ ಎತ್ತಿ, ನಾಯಕತ್ವ ನೀಡುವ ಅರ್ಹತೆಯನ್ನು ತಾನಾಗಿಯೇ ಕಳೆದುಕೊಂಡಿದೆ. ಸರ್ಕಾರಿ ಅಂಗ ಸಂಸ್ಥೆಯಾಗಿ ಬೆಳೆದಿರುವ ಅದು ಇವತ್ತು ಭಾಷೆ, ಸಾಹಿತ್ಯ ಮತ್ತು ಸಂಸ್ಕ ತಿಗೆ ಸಂಬಂಽಸಿದಂತೆ ಯಾವುದೇ ನಿಲುವನ್ನು ತಳೆಯುವ ಶಕ್ತಿಯಿಲ್ಲದೆ ಸೊರಗಿದೆ. ಸಾಹಿತ್ಯದ ಮೂಲಭೂತ ಗುಣಗಳಿಗೆ ವ್ಯತಿರಿಕ್ತವಾದ ಕೆಲಸಗಳನ್ನು ಮಾಡುವ ಅದರ ಬಗ್ಗೆ ಸಾಹಿತಿಗಳಲ್ಲಿ ಅಂಥ ಉತ್ಸಾಹವೂ ಉಳಿದಿಲ್ಲ.

ಈ ಎಲ್ಲಾ ಕಾರಣಗಳಿಂದಾಗಿ ನಾವೆಲ್ಲ ಒಂದು ಕ್ಷಣ ನಿಂತು, ಯೋಚಿಸಿ, ನಮಗೆ ಉಪಯುಕ್ತವಾದ ಒಂದು ಸಾಹಿತ್ಯಿಕ ಸಂಘಟನೆಯನ್ನು ಕಟ್ಟಿಕೊಳ್ಳುವುದು ಇವತ್ತಿನ ಅಗತ್ಯ ಎಂದು ತೋರುತ್ತದೆ. ಈ ಕುರಿತು ೧೯೭೪ರಲ್ಲಿ ಕುವೆಂಪು ಅವರು ಮೈಸೂರಿನಲ್ಲಿ ನಡೆದ ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಸಮ್ಮೇಳನದಲ್ಲಿ ಆಡಿದ ಮಾತುಗಳು ನಮಗೆ ಪ್ರೇರಣೆ ನೀಡಬೇಕು. ಲಂಕೇಶ್, ಸುಬ್ಬಣ್ಣ, ತೇಜಸ್ವಿ, ರಾಮದಾಸ್ ಮೊದಲಾದವರ ಮಾರ್ಗ ನಮ್ಮ ಮುಂದಿದೆ.

ಈ ತಿಳಿವಳಿಕೆಯ ಹಿನ್ನೆಲೆಯಲ್ಲಿ ೨೦೨೩ರ ಜನವರಿ ತಿಂಗಳ ಎಂಟನೇ ತಾರೀಕಿನಂದು ಬೆಂಗಳೂರಿನ ಕೆ.ಆರ್.ಸರ್ಕಲ್ ಬಳಿಯಲ್ಲಿರುವ ಅಲ್ಯುಮ್ನಿ ಸಭಾಂಗಣದಲ್ಲಿ ಜನ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲಾಗಿದೆ. ಕನ್ನಡಕ್ಕೆ ಹೊಸ ಶಕ್ತಿ ತುಂಬುತ್ತಿರುವ ಹೊಸ ತಲೆಮಾರಿನ ಬರೆಹಗಾರರು ಈ ಸಮಾವೇಶದ ಮುಂಚೂಣಿಯಲ್ಲಿರುತ್ತಾರೆ.

andolanait

Recent Posts

ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…

2 hours ago

ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ – ಡಾ. ಪಿ ಶಿವರಾಜ್

ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…

3 hours ago

ನಗರದ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ: ಜಿ ಟಿ ದೇವೇಗೌಡ

ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…

4 hours ago

ಹನೂರು: ಗುಂಡಿಮಯವಾದ ರಸ್ತೆ, ಸಾಮಾಜಿಕ ಜಾಲತಾಣ ಮೂಲಕ ಯುವಕ ವ್ಯಂಗ್ಯ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…

4 hours ago

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

5 hours ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

6 hours ago