ದೇಶದ ಚಾಲ್ತಿ ಖಾತೆ ಕೊರತೆ, ವ್ಯಾಪಾರ ಕೊರತೆ ಮತ್ತು ವಿತ್ತೀಯ ಕೊರತೆ ಹಿಗ್ಗುತ್ತಿರುವ ಹೊತ್ತಿಗೆ, ಡಾಲರ್ ವಿರುದ್ಧ ರೂಪಾಯಿ ಅಪಮೌಲ್ಯ ಪ್ರಮಾಣವೂ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದಿರುವುದು ಆರ್ಥಿಕ ಸಂಕಷ್ಟಗಳು ಅಪ್ಪಳಿಸುವ ಮುನ್ಸೂಚನೆಯಾಗಿದೆ. ಈಗಾಗಲೇ ಏರುಹಾದಿಯಲ್ಲಿರುವ ಹಣದುಬ್ಬರ ಮತ್ತಷ್ಟು ಏರಿಕೆಯಾಗಬಹುದು.
ರೂಪಾಯಿ ಡಾಲರ್ ವಿರುದ್ಧ ೮೦ ರೂಪಾಯಿ ಗಡಿ ದಾಟಿದಾಗಲೇ ಅಪಾಯದ ಗಂಟೆ ಬಾರಿಸಿತ್ತು. ಈಗ ಅದು ೮೧ ರೂಪಾಯಿ ಗಡಿದಾಟಿ ೮೧.೨೩ ರೂಪಾಯಿಗಳ ಆಜುಬಾಜಿನಲ್ಲಿ ವಹಿವಾಟಾಗುತ್ತಿದೆ. ಬರುವ ದಿನಗಳಲ್ಲಿ ೮೨ ರೂಪಾಯಿ ಗಡಿದಾಟಲಿದೆ ಎಂಬುದು ಮಾರುಕಟ್ಟೆ ತಜ್ಞರ ಅಂದಾಜು.
ಮೇಲ್ನೋಟಕ್ಕೆ ರೂಪಾಯಿ ಮೌಲ್ಯ ಕುಸಿತದಿಂದ ಜನಸಾಮಾನ್ಯರ ಮೇಲೆ ಪರಿಣಾಮ ಬೀರದು ಎಂಬ ನಂಬಿಕೆ ಇದೆ. ಅದಕ್ಕೆ ಕಾರಣ ರೂಪಾಯಿ ಅಪಮೌಲ್ಯದ ಬಗ್ಗೆ ಯಾರೂ ಹೆಚ್ಚಿನ ಗಮನ ಹರಿಸದೇ ಇರುವುದು, ಮತ್ತು ಬಹಳಷ್ಟು ಜನರಿಗೆ ಆರ್ಥಿಕತೆಯ ಬಗ್ಗೆ ನಿರಾಸಕ್ತಿ ಮತ್ತು ನಿರಕ್ಷರತೆಯೂ ಕಾರಣ.
ರೂಪಾಯಿ ಅಪಮೌಲ್ಯದಿಂದ ಜನರ ನಿತ್ಯ ಜೀವನದ ಮೇಲೆ ಖಂಡಿತ ವ್ಯತಿರಿಕ್ತ ಪರಿಣಾಮವಾಗುತ್ತದೆ. ಭಾರತದ ಆಮದು ಪ್ರಮಾಣ ರಫ್ತು ಪ್ರಮಾಣಕ್ಕಿಂತ ದುಪ್ಪಟ್ಟಿರುವುದರಿಂದಾಗಿ ರೂಪಾಯಿ ಮೌಲ್ಯ ಕುಸಿತ ಒಟ್ಟಾರೆ ಆರ್ಥಿಕತೆಯ ಮೇಲೂ ತೀವ್ರ ಪರಿಣಾಮ ಬೀರುತ್ತದೆ.
ನಿಧಾನಗತಿಯಲ್ಲಿ ನಿತ್ಯೋಪಯೋಗಿ ಸರಕುಗಳ ಬೆಲೆ ಏರುತ್ತಲೇ ಇದೆ. ಏರಿದ ಬೆಲೆ ಇಳಿದ ಉದಾಹರಣೆಗಳು ತೀರಾ ಅತ್ಯಲ್ಪ. ಏರುತ್ತಿರುವ ಬೆಲೆಯಿಂದಾಗಿ ದೈನಂದಿನ ವೆಚ್ಚಗಳೂ ಏರುತ್ತಲೇ ಇರುತ್ತವೆ. ಜನರ ಗಳಿಕೆ ಮಾತ್ರ ಏರುತ್ತಿರುವ ಬೆಲೆಗಳಿಗೆ ಅನುಗುಣವಾಗಿ ಏರಿಕೆಯಾಗುತ್ತಿಲ್ಲ. ಇದರಿಂದಾಗಿ ಜನರ ಖರೀದಿ ಶಕ್ತಿ ನಿಧಾನಗತಿಯಲ್ಲಿ ಕುಸಿಯುತ್ತಿದೆ.
ಕಳೆದ ವರ್ಷ ಪ್ರತಿ ಕೆಜಿಗೆ ೫೦ ರೂಪಾಯಿ ಆಜುಬಾಜಿನಲ್ಲಿದ್ದ ಅಕ್ಕಿ ಬೆಲೆ ಈಗ ೬೦ ರೂಪಾಯಿಗೆ ಏರಿಕೆಯಾಗಿದೆ. ಕಳೆದ ವರ್ಷ ಒಂದು ಸಾವಿರ ರೂಪಾಯಿಗೆ ೨೦ ಕೆಜಿ ಅಕ್ಕಿಯನ್ನು ಖರೀದಿಸಬಹುದಿತ್ತು. ಆದರೀಗ ಒಂದು ಸಾವಿರ ರೂಪಾಯಿ ಮೊತ್ತಕ್ಕೆ ೧೬ ಕೆಜಿಯಷ್ಟು ಮಾತ್ರ ಅಕ್ಕಿಯನ್ನು ಖರೀದಿಸಲು ಸಾಧ್ಯ. ಜನರ ಖರೀದಿ ಶಕ್ತಿ ಶೇ.೨೦ರಷ್ಟು ಕುಗ್ಗಿದಂತಾಗಿದೆ. ಅಕ್ಕಿ ಖರೀದಿಯು ಸಾಂಕೇತಿಕ ಉದಾಹರಣೆಯಷ್ಟೇ. ನಿತ್ಯೋಪಯೋಗಿ ವಸ್ತುಗಳು, ನೀರು, ವಿದ್ಯುತ್, ಡಿಟಿಎಚ್, ಮೊಬೈಲ್ ಶುಲ್ಕಗಳು ಸಹ ವರ್ಷದಿಂದ ವರ್ಷಕ್ಕೆ ಏರುತ್ತಲೇ ಇವೆ. ಆದರೆ, ಬೆಲೆ ಏರಿಕೆಗೆ ಪೂರಕವಾಗಿ ವೇತನವಾಗಲೀ, ಸಂಪಾದನೆಯಾಗಲಿ, ಗಳಿಕೆಯಾಗಲಿ ಹೆಚ್ಚಾಗುತ್ತಿಲ್ಲ. ಹೀಗಾಗಿ ಜನರ ಜೀವನ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದೆ.
ಇದು ವೈಯಕ್ತಿಕ ನೆಲೆಯಲ್ಲಾಗುವ ಆರ್ಥಿಕ ದುಷ್ಪರಿಣಾಮ.
ರೂಪಾಯಿ ಮೌಲ್ಯ ಕುಸಿತ ದೇಶದ ಒಟ್ಟಾರೆ ಆರ್ಥಿಕತೆಯ ಮೇಲೂ ವ್ಯತಿರಿಕ್ತ ಪರಿಣಾಮ ಬೀರಲಿದೆ. ರೂಪಾಯಿ ಮೌಲ್ಯ ಕುಸಿತ ಹೆಚ್ಚಿದಂತೆ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ತಮ್ಮ ಹೂಡಿಕೆಗಳನ್ನು ವಾಪಾಸು ಪಡೆಯುತ್ತಾರೆ. ಇದರ ಪರಿಣಾಮ ನೇರವಾಗಿ ಷೇರು ಮಾರುಕಟ್ಟೆ ಮತ್ತು ಹಣಕಾಸು ಮಾರುಕಟ್ಟೆ ಮೇಲಾಗುತ್ತದೆ. ಸಲೀಸಾಗಿ ಹರಿದು ಬರುತ್ತಿದ್ದ ಡಾಲರ್ ರೂಪದ ಹೂಡಿಕೆಯು ತಗ್ಗಿದರೆ, ವಿದೇಶಿ ವಿನಿಮಯ ಮೀಸಲು ನಿಧಿಯ ಮೇಲೂ ಒತ್ತಡ ಹೆಚ್ಚುತ್ತದೆ.
ರೂಪಾಯಿ ಕುಸಿತವನ್ನು ತಡೆಯುವ ಸಲುವಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಆಗಾಗ್ಗೆ ಮಾರುಕಟ್ಟೆ ಪ್ರವೇಶಿಸಿ ವಿದೇಶಿ ವಿನಿಮಯ ಮೀಸಲು ನಿಧಿಯಿಂದ ಡಾಲರ್‌ಗಳನ್ನು ಮಾರಾಟ ಮಾಡುತ್ತಿದೆ. ಆರ್‌ಬಿಐನ ಈ ಮಧ್ಯಪ್ರವೇಶದಿಂದ ರೂಪಾಯಿ ಕುಸಿತವು ತಾತ್ಕಾಲಿಕವಾಗಿ ನಿಲ್ಲುತ್ತದೆ. ಆದರೆ, ದೀರ್ಘಕಾಲದಲ್ಲಿ ರೂಪಾಯಿ ಮೌಲ್ಯ ಕುಸಿತ ತಡೆಯುವುದು ಸಾಧ್ಯವಾಗುವುದಿಲ್ಲ. ತಾತ್ಕಾಲಿಕವಾಗಿ ರೂಪಾಯಿ ಮೌಲ್ಯ ಕುಸಿತ ತಡೆಯುವ ಆರ್‌ಬಿಐ ಪ್ರಯತ್ನದಿಂದಾಗಿ ಈಗಾಗಲೇ ವಿದೇಶಿ ಮೀಸಲು ನಿಧಿ ದೊಡ್ಡ ಪ್ರಮಾಣದಲ್ಲಿ ಕರಗಿ ಹೋಗಿದೆ. ೨೦೨೨ ರಲ್ಲಿ ರೂಪಾಯಿ ಕುಸಿತ ತಡೆಯುವ ಸಲುವಾಗಿ ಆರ್‌ಬಿಐ ಸುಮಾರು ೮೩ ಬಿಲಿಯನ್ ಡಾಲರ್‌ಗಳನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದೆ. ಸೆಪ್ಟೆಂಬರ್ ತಿಂಗಳೊಂದರಲ್ಲೇ ೧೦ ಬಿಲಿಯನ್ ಡಾಲರ್ ಮಾರಾಟ ಮಾಡಿದೆ. ಸೆಪ್ಟೆಂಬರ್ ೯ ರಂದು ಇದ್ದಂತೆ ಭಾರತದ ವಿದೇಶಿ ವಿನಿಮಯ ಮೀಸಲು ನಿಧಿಯು ೫೫೦.೮ ಬಿಲಿಯನ್ ಡಾಲರ್‌ಗಳಿಗೆ ಕುಸಿದಿದೆ. ಕಳೆದ ವರ್ಷ ೬೪೨.೪ ಬಿಲಿಯನ್ ಡಾಲರ್‌ಗಳಷ್ಟಿತ್ತು.
ವಿದೇಶಿ ವಿನಿಮಯ ಮೀಸಲು ಕುಸಿತವು ನಮ್ಮ ಆರ್ಥಿಕತೆಯ ಕುಸಿತವನ್ನು ಸಂಕೇತಿಸುತ್ತದೆ. ಮೀಸಲು ಪ್ರಮಾಣ ಕುಸಿದಷ್ಟು ನಮ್ಮ ಆಮದು ಬಿಲ್ಲುಗಳನ್ನು ಪಾವತಿಸುವ ಸಾಮರ್ಥ್ಯವು ಕುಸಿಯುತ್ತದೆ. ನೆರೆಯ ಶ್ರೀಲಂಕಾ ಮತ್ತು ಪಾಕಿಸ್ತಾನ ದೇಶಗಳು ದುಸ್ಥಿತಿ ತಲುಪಿರುವುದು ವಿದೇಶಿ ವಿನಿಮಯ ಮೀಸಲು ನಿಧಿ ಶೂನ್ಯ ಮಟ್ಟಕ್ಕೆ ತಲುಪಿರುವುದರಿಂದಲೇ. ಭಾರತದ ಪರಿಸ್ಥಿತಿ ನೆರೆಯ ದೇಶಗಳಷ್ಟು ಹೀನಾಯವಾಗಿಲ್ಲ. ಆದರೆ, ಮೀಸಲು ನಿಧಿಯ ಕುಸಿತದ ವೇಗ ಮಾತ್ರ ಆತಂಕ ತರುವಂತಾದ್ದು.
ರೂಪಾಯಿ ಮೂಲಕವೇ ರಷ್ಯಾದೊಂದಿಗೆ ವ್ಯವಹಾರ ನಡೆಸುವ ನಿಟ್ಟಿನಲ್ಲಿ ನಡೆದಿರುವ ಪ್ರಯತ್ನಗಳು ವಿದೇಶಿ ವಿನಿಮಯ ಮೀಸಲು ನಿಧಿಯ ಮೇಲಿನ ಒತ್ತಡವನ್ನು ತಗ್ಗಿಸುತ್ತವೆ. ರಷ್ಯಾದೊಂದಿಗೆ ವ್ಯಾಪಾರ ನಡೆಸುವುದರಿಂದ ದೀರ್ಘಕಾಲದಲ್ಲಿ ಆಗುವ ವ್ಯತಿರಿಕ್ತ ಪರಿಣಾಮಗಳನ್ನೂ ನಾವು ಗಮನದಲ್ಲಿಟ್ಟುಕೊಂಡು ಮುಂದಡಿ ಇಡಬೇಕಿದೆ.
ಗುಂಡ್ಲುಪೇಟೆ : ತಾಲ್ಲೂಕಿನ ಬೊಮ್ಮನಹಳ್ಳಿ ಗ್ರಾಮದ ರಾಜಶೇಖರ ಮೂರ್ತಿ ಎಂಬುವವರ ಮೇಲೆ ಚಿರತೆ ದಾಳಿ ನಡೆಸಿ ಗಾಯಗೊಳಿಸಿದ್ದು, ಅದೃಷ್ಟವಶಾತ್ ರೈತ…
ಹೊಸದಿಲ್ಲಿ : ರಾಷ್ಟ್ರಪಿತಿ ಮಹಾತ್ಮ ಗಾಂಧಿ ಅವರ 78ನೇ ಪುಣ್ಯತಿಥಿ ಹಿನ್ನೆಲೆಯಲ್ಲಿ ಇಂದು ರಾಷ್ಟ್ರಪತಿ ಮುರ್ಮು, ಪ್ರಧಾನಮಂತ್ರಿ ನರೇಂದ್ರ ಮೋದಿ…
ಮೈಸೂರು : ಮೈಸೂರಿನಲ್ಲಿ ಡ್ರಗ್ಸ್ ತಯಾರು ಮಾಡುವ ಯಾವ ವಸ್ತುಗಳ ಸಹ ಸಿಕ್ಕಿಲ್ಲ. ಎನ್.ಸಿ.ಬಿ ಅಧಿಕಾರಿಗಳು ದಾಳಿ ಮಾಡಿರುವುದು ಫಾಲೋಅಪ್…
ಮೈಸೂರು ವಿಶ್ವವಿದ್ಯಾನಿಲಯದ ಮಾನಸ ಗಂಗೋತ್ರಿಯಲ್ಲಿ ಸಾವಿರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ವಿವಿಯ ಆವರಣದಲ್ಲಿ ವಿದ್ಯಾರ್ಥಿ ನಿಲಯಗಳ ವ್ಯವಸ್ಥೆಯೂ ಇದೆ. ಸ್ಥಳೀಯ…
ಇತ್ತೀಚಿನ ದಿನಗಳಲ್ಲಿ ಅಲ್ಲಲ್ಲಿ ಜಾತಿ ಸಂಘರ್ಷ, ಧರ್ಮ ಸಂಘರ್ಷ, ಜನಾಂಗೀಯ ಸಂಘರ್ಷಗಳು ನಡೆಯುತ್ತಲೇ ಇವೆ. ‘ಸರ್ವ ಜನಾಂಗದ ಶಾಂತಿಯ ತೋಟ’…
ಹಿರಿಯ ಕಾರ್ಮಿಕ ಧುರೀಣ, ಕಮ್ಯುನಿಸ್ಟ್ ಪಕ್ಷದ ಹಿರಿಯ ನಾಯಕ ಅನಂತ ಸುಬ್ಬರಾವ್ ಕಳೆದ ಸುಮಾರು ೪-೫ ದಶಕಗಳಿಂದ ಕಾರ್ಮಿಕ ಚಳವಳಿಗಳಲ್ಲಿ…